|

ವಾಸು ಸತ್ತ.
ಹೊರಡು.
ಟೆಲಿಗ್ರಾಂ ಸಿಕ್ಕಿದ್ದೇ ತಡ,
ಊರಿಗೆ ಹೊರಟೆ.
ಸತ್ತವನು ವಾಸುವಾದರೂ ಸುಬ್ಬನ ಮುಖದಲ್ಲಿ
ಪ್ರೇತಕಳೆ ಎದ್ದು ಕಾಣುತ್ತಿತ್ತು.
ಬಗ್ಗಿದವನಿಗೆ ಮೂರುಗುದ್ದು ಅಂದಂತೆ ಊರಿಡೀ
ಸುಬ್ಬನ ಮೇಲೆ ಪುಕಾರು ಹಬ್ಬಿತು.
ವಾಸುಗೆ ನಾಲ್ಕು ತಿಂಗಳಿನಿಂದ ಸರಿಯಾಗಿ ಊಟ
ಹಾಕಿರಲಿಲ್ಲವಂತೆ.
ಅನ್ನದ ಬಟ್ಟಲಲ್ಲಿ ಮಣ್ಣು ತುಂಬಿ ಕೊಡುತ್ತಿದ್ದರಂತೆ.
ಬ್ಬೆಬ್ಬೆಬ್ಬೆsss
ಅಂತ ವಾಸು ಚೀರುತ್ತಿದುದು ಲಕ್ಷ್ಮಿಯ
ಹೊಡೆತದಿಂದಲೇ ಅಂತೆ.
ಚಳಿ-ಗಾಳಿ
ಮಳೆಯೆನ್ನದೆ ವಾಸುವನ್ನು ಹೊರಜಗಲಿಯಲ್ಲಿ ಮಲಗಿಸುತ್ತಿದ್ದರೆಂದು ಸುದ್ದಿ.
ಅಲ್ಲಲ್ಲ ಅವನನ್ನು ಬಯ್ಪಣೆಯಲ್ಲಿ
ಮಲಗಿಸುತ್ತಿದ್ದರೆಂದು ಇನ್ನೊಂದು ಸುದ್ದಿ.
ತಮ್ಮ ಬೇಗ ಸತ್ತರೆ ಆಸ್ತಿಗೊಬ್ಬ ಪಾಲುದಾರ
ಕಡಿಮೆಯಾದ ಅಂತ ಸರಿಯಾಗಿ ನೋಡಿಕೊಳ್ಳಲಿಲ್ಲವಂತೆ.
ಸುಬ್ಬನ ಎಂಟು ವರ್ಷದ ಮಗಳು ನೀತ ಕೂಡ
ಹೊಡೆಯುತ್ತಿದ್ದಳಂತೆ;
ಒದೆಯುತ್ತಿದ್ದಳಂತೆ.
ಸುದ್ದಿ ಸದ್ದಾಗದೆ ಒಡೆಯಿತು.
ಪಿಸಪಿಸನೆ ಹಬ್ಬಿತು.
ಹೊರಗೆ ಮಾತ್ರ ಗಂಗಾಜಲ.
ನಿನ್ನೆಯಿಂದ ವಾಸು ಹೆಣದ ಮುಂದೆ ಕೂತಿದ್ದ ಅಪ್ಪ
ಅಮ್ಮನ ಕಣ್ಣಲ್ಲಿ ಒಂದು ತೊಟ್ಟು ನೀರಿಲ್ಲ.
ಏನು ಮಾಡೋದು.
ಇಂತಹವರೆಲ್ಲ ದೇವರಿಗೆ ಬಹುಪ್ರಿಯವಂತೆ.
ಅದಕ್ಕೆ ವಾಸೂನ ದೇವರು ಬೇಗ ಕರ್‍ಕೊಂಡ.
ಎದ್ದೇಳಿ ಮಾಡಬೇಕಾದ್ದನ್ನು ಮಾಡೋಣ ಅಂದರು
ಶಾಸ್ತ್ರಿಗಳು.
ಸದಾ ಮೌನಿಯಾಗಿದ್ದ ಅಪ್ಪ ಕ್ರಿಯೆ ಮುಗಿಸಿದರು.
ವಾಸು ಹೊಗೆ ಬಾನೇರುತ್ತಲೇ ಅಪ್ಪನ ಬಿಕ್ಕಳಿಕೆ
ಹೊರಬಿತ್ತು.
ನಾವು ಯಾರೂ ಅಪ್ಪನನ್ನು ಸಮಾಧಾನಪಡಿಸುವಂತಿಲ್ಲ.
ಸತ್ತ ವಾಸು ನಮ್ಮೆಲ್ಲರಿಗೂ ತಮ್ಮನಾಗಿದ್ದ.
ಏನು ರಾಯರೇ,
ನೀವೇ ಈ ರೀತಿ ಧೈರ್ಯಗೆಟ್ಟರೆ ಹೇಗೆ?
ನಿಮಗೆ ತಿಳೀದೆ ಇರೋದೇನಿದೆ?
ಬಟ್ಟೆ ಮಲಿನವಾದಾಗ ಕಳಚಿ ಇನ್ನೊಂದನ್ನು ಕಳಚಿ
ತೊಡುವಂತೆ ಆತ್ಮ ಒಂದು ಶರೀರವನ್ನು ಬಿಟ್ಟು ಮತ್ತೊಂದಕ್ಕೆ ಸಾಗುತ್ತದೆ.
ವಾಸು ಅವನ ಪವಿತ್ರವಾದ ಇನ್ನೊಂದು ಜನ್ಮಕ್ಕೆ
ಹೋಗಿದ್ದಾನೆ.
ಸಮಾಧಾನ ಮಾಡಿಕೊಳ್ಳಿ ರಾಯರೇ-ಪುರೋಹಿತರು
ಸಮಾಧಾನ ಮಾಡುವ ಕರ್ತವ್ಯ ಮುಗಿಸಿದರು.
ಅಮ್ಮನಿಗೆ ಏನಾದರೂ ಹೇಳುವ ಶಕ್ತಿ ಪುರೋಹಿತರಿಗೂ
ಇರಲಿಲ್ಲ.
ಸದ್ಯಕ್ಕೆ ಇಲ್ಲಿ ಕೆಲಸ ಮುಗಿಯಿತು.
ಮಾಂತೇರ್‍ಲಾ ಬತ್ತೇರಾ,
ರೈಟ್ ಪೋಯಿ
(ಎಲ್ಲರೂ ಬಂದರಾ?
ರೈಟ್ ಹೋಗೋಣ.)
ಬಸ್ಸು ಧಾರವಾಡದ ಕಡೆ ಓಡಹತ್ತಿತು.
ಮನಸು ಹಿಂದಕ್ಕೋಡತೊಡಗಿತ್ತು.
ನಮ್ಮ ಮುತ್ತಜ್ಜ ಶಿರಸಿ ಕಡೆಯವರಂತೆ.
ಅಮ್ಮನವರ ಗುಡಿ ಅರ್ಚಕರಾಗಿದ್ದರಂತೆ.
ಗುಡಿಯ ಆಭರಣವೆಲ್ಲ ಕಳುವಾದಾಗ ಊರವರು ಮುತ್ತಜ್ಜನ
ಮೇಲೆ ಗುಮಾನಿ ಪಟ್ಟು ಊರು ಬಿಡಿಸಿ ಓಡಿಸಿದರಂತೆ.
ಉಟ್ಟ ಬಟ್ಟೆಯಲ್ಲೇ ಹೆಂಡತಿ ಮಕ್ಕಳನ್ನು
ಕಟ್ಟಿಕೊಂಡು ಹೊರಟ ಮುತ್ತಜ್ಜ ಮಂಗಳೂರು ಕಡೆ ಬಂದು ಸಾಂತಪ್ಪಯ್ಯನವರ
ಒಕ್ಕಲಾಗಿ ಪರಂಬೂರಿನಲ್ಲಿ ನೆಲೆಯೂರಿದರಂತೆ.
ಸಾಂತಪ್ಪನವರ ನಂತರ ಕಾಂತಪ್ಪಯ್ಯ ಬಂದಾಗಲೂ
ಒಕ್ಕಲುತನ ಮುಂದುವರಿದಿತ್ತು.
ಅಜ್ಜ-ಅಜ್ಜಿ
ಕಾಂತಪ್ಪಯ್ಯ ಒಕ್ಕಲಾಗಿ ಗೇಯ್ದೇ ಬಾಳಿದರು.
ಅಪ್ಪನ ಕಾಲಕ್ಕೆ ಡಿಕ್ಲರೇಷನ್ ಅಂತ ಬಂದು ಭೂಮಿ
ಸ್ವಂತದ್ದಾಯಿತು.
ಅಜ್ಜನ ನಿಷ್ಠೆ ಅಪ್ಪನ
'ದುಡಿವ ಜನರಿಗೆ
ದುಡಿವ ಭೂಮಿ:
ಸರ್ವರಿಗೂ ಸಮಬಾಳು'
ತತ್ವದ ಮುಂದೆ ಕರಗಿ ಹೋಗಿತ್ತು.
ಯಜಮಾರಿಗೆ ದ್ರೋಹ ಮಾಡಿದೆ ಎನ್ನುವ ಕೊರಗಿನಲ್ಲಿ
ಅಜ್ಜನೂ ಕರಗಿ ಹೋದರು.
ಆಗ ಹುಟ್ಟಿದ್ದೇ ವಾಸು.
ಬಿಸಿಲು ಕಣ್ಣಿಗೆ ಹೊಡೆಯುತ್ತಿತ್ತು.
ಹೋ,
ಬಸ್ಸು ನಿಂತುಬಿಟ್ಟಿದೆ.
ಹೊನ್ನಾವರ ಬಸ್‌ಸ್ಟ್ಯಾಂಡ್.
ಜನ ಇಳಿಯುತ್ತಿದ್ದಾರೆ.
ಹತ್ತುತ್ತಿದ್ದಾರೆ.
ಕಂಕುಳಲೊಂದು ಜೋಳಿಗೆ.
ಹಣೆಯ ಮೇಲೆ ಭಸ್ಮ.
ಭಸ್ಮದ ನಡುವೆ ಕುಂಕುಮದ ಬೊಟ್ಟು.
ತಂಪು ಕನ್ನಡಕ ಬೇರೆ ಇದೆ.
ಈ ಶ್ವೇತವಸ್ತ್ರಧಾರಿ ಬಳಿಗೆ ಬಂತು.
ನನ್ನ ಮಗ್ಗುಲ ಖಾಲಿ ಸೀಟು ತೋರಿಸಿ,
ನಾನಿಲ್ಲಿ ಕುಳಿತುಕೊಳ್ಳಬಹುದೇ ಸ್ವಾಮೀ?
ಎಂದಿತು.
ಅದಕ್ಕೇನು,
ಕೂತ್ಕೊಳ್ಳಿ ಸರ್‍ಕಾರಿ ಬಸ್ಸಲ್ವೇ ಎಂದು ನಾನು
ಕಿಟಕಿಯಿಂದಾಚೆ ನೋಡತೊಡಗಿದೆ.
ಅದೆಷ್ಟು ಬಸ್ಸುಗಳು!
ಎಷ್ಟೊಂದು ಜನ!
ಇವರೆಲ್ಲ ಎಲ್ಲಿಂದ ಬರುತ್ತಾರೆ?
ಎಲ್ಲಿಗೆ ಹೋಗುತ್ತಾರೆ?
ಅಕೋ,
ಆಚೆ ಕಡೆ ನೂಕುನುಗ್ಗಲು ಶುರುವಾಯಿತು.
ಹಹ್ಹಾ ಈ ಕಿಟಕಿಯಿಂದ ತರುಣನೊಬ್ಬ ನುಗ್ಗಿಯೇ
ಬಿಟ್ಟ.
ಕೆಳಗಿನಿಂದ ತರುಣಿಯೊಬ್ಬಳು ವ್ಯಾನಿಟಿ ಬ್ಯಾಗು
ಕೊಡುತ್ತಿದ್ದಾಳೆ.
ಹುಡುಗಿಗೆ ತನ್ನ ಪಕ್ಕದಲ್ಲಿ ಸೀಟಿರಿಸಿದ.
ಹುಡುಗಿ ನಕ್ಕಳು.
ಆ ಕ್ಷಣಕ್ಕೆ ಹುಡುಗನ ಸಂತೃಪ್ತ ಭಾವ ನೋಡಿದರೆ ಈ
ಜಗತ್ತಿನಲ್ಲಿ ಅವನೇ ಪರಮಸುಖಿ.
ನಾನು ವಾಸುದೇವರಾವ್ ಅಂತ ಮಾತಿಗೆಳೆಯಿತು
ಪಕ್ಕದ ವ್ಯಕ್ತಿ.
ಅರೆ,
ನಾನು ನಮ್ಮ ವಾಸು ಬಗ್ಗೆ ಯೋಚಿಸುತ್ತಿದ್ದರೆ ಇಲ್ಲೊಬ್ಬ
ವಾಸುದೇವರಾವ್!
ವಾಸು ಅನ್ನುವ ಹೆಸರೇ ನನ್ನನ್ನು ಸೆಳೆಯಿತು.
ನಕ್ಕೆ,
ಇದೇಕೆ ಹೀಗೆ?
ನಮ್ಮ ವಾಸುಗೂ ಈ ವಾಸುದೇವರಾಯನಿಗೂ ಯಾವ ಸಂಬಂಧವೂ
ಇಲ್ಲ.
ಹೋಲಿಕೆಯೂ ಇಲ್ಲ.
ವಾಸುದೇವರಾಯನನ್ನು ಇಲ್ಲಿಯವರೆಗೆ ನಾನು ನೋಡಿಲ್ಲ.
ಬಹುಶಃ ಮುಂದೆ ನೋಡುವ ಸಾಧ್ಯತೆ ಸಹ ಇಲ್ಲ.
ನಮ್ಮ ವಾಸುವನ್ನು ಕೂಡ ನೋಡುವಂತಿಲ್ಲ.
ಯಾಕೋ ವಾಸು ಅನ್ನುವ ಹೆಸರೇ ಆಪ್ತವಾಗಿದೆಯಲ್ಲ.
ಅಷ್ಟರಲ್ಲಿ ವಾಸುದೇವರಾಯ,
ನೀವು ನಮ್ಮವರೋ ಅಂದುಬಿಟ್ಟ,
ನಮ್ಮವರೆಂದು ದೃಢಪಡಿಸಿಕೊಂಡವನಂತೆ.
ನಾನು ಯಾರವನೂ ಅಲ್ಲ;
ಮಾಲಿನಿಯವ ಅಂತ ಹೇಳಬೇಕೆನಿಸಿತು.
ಹೇಳಲಿಲ್ಲ.
ನಮ್ಮ ಕಡೆ ನಮ್ಮವರಾ ಅಂದರೆ ಜಾತಿಯನ್ನು
ಕೇಳುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಬೇಕು.
ಅಷ್ಟಕ್ಕೂ ಈ ರಾಯ ಯಾವ ಜಾತಿಯವ
(ಯಾರವನು?)ನೆಂದು
ನನಗೆ ಗೊತ್ತಾಗಬೇಕು.
ನಿಮ್ಮನ್ನು ನೋಡುವಾಗಲೇ ನಮ್ಮವರೆಂದು ಗೊತ್ತಾಯಿತು.
ಏನು ಮಾಡ್ಕೊಂಡಿದ್ದೀರಿ ಸ್ವಾಮಿ,
ಕೆಲ್ಸದಲ್ಲಿದ್ದೀರಿ ಅಂತ ಕಾಣ್ತದೆ.
ಬ್ಯಾಂಕಾ,
ಕಾಲೇಜಾ?
ರಾಯನ ಮಾತಿಗೆ ನಿಲುಗಡೆ ಇಲ್ಲ.
'ನಾನು ಬ್ಯಾಂಕ್‌ನಲ್ಲಿದ್ದೇನೆ'
ಅಂತ ರಾಯ ಹೇಗೆ ತಿಳಿದುಕೊಂಡುಬಿಟ್ಟ ಅಂತ ಆಶ್ಚರ್ಯವಾಯಿತು.
ಹಣೆ ಮೇಲೆ ಬೋರ್ಡೇನೂ ಹಾಕಿಕೊಂಡಿಲ್ಲವಲ್ಲ.
ಹೆಚ್ಚಿನಾಂಶ
'ಫೇಸ್‌ರೀಡಿಂಗ್'
ಅಂದರೆ ಇದೇ ಇರಬಹುದೇನೋ.
ರಾಯ ಹೇಳುತ್ತಾ ಹೋದ.
ಅವರ ಗ್ರಾಮದ ರಾಮ ದೇವಸ್ಥಾನ ಜೀರ್ಣೋದ್ಧಾರ
ಆಗಬೇಕಂತೆ.
ನಾಲ್ಕೈದು ಲಕ್ಷವಾದರೂ ಬೇಕಂತೆ.
ಕಲಿಕಾಲದಲ್ಲಿ ಧರ್ಮ-ದೇವರು
ಎಲ್ಲ ಹಾಳಾಗಿದೆಯಂತೆ (ಧರ್ಮ-ದೇವರೇ
ಹಾಳಾಗಿವೆಯೋ ಇಲ್ಲ,
ಧರ್ಮ-ದೇವರನ್ನು
ನಂಬದ ಮನುಷ್ಯ ಹಾಳಾಗುತ್ತಿದ್ದಾನೆ ಅನ್ನುತ್ತಿದ್ದಾನೋ ಗೊತ್ತಾಗಲಿಲ್ಲ).
ಹಾಗಾಗಿ ಧರ್ಮದ ಪುನರುತ್ಥಾನಕ್ಕಾಗಿ ದೇವಾಲಯ
ಸಂಸ್ಕೃತಿ ದಾಂಗುಡಿ ಇಡಬೇಕಂತೆ.
ಅದಕ್ಕೆ ಹಣ ಬೇಕು.
ವಂತಿಗೆ ವಸೂಲಾತಿಗಾಗಿ ರಾಯ ಹುಬ್ಬಳ್ಳಿ ಕಡೆ
ಹೊರಟಿದ್ದಾನೆ.
ಇಷ್ಟು ಅರ್ಥವಾಯಿತು.
ರಾಯನ ಉದ್ದೇಶ ಸ್ಪಷ್ಟವಾಗತೊಡಗಿತ್ತು.
ನೋಡಿ ಇವರೇ,
ಒಂದು ಒಳ್ಳೆಯ ಕಾರ್ಯಕ್ಕೆ ನಿಮ್ಮ ಶಕ್ತ್ಯಾನುಸಾರ
ಏನಾದರೂ ಕೊಟ್ಟರೆ ಸಂತೋಷ.
ಪ್ರಸಾದ-ಪಂಚಕಜ್ಜಾಯ
ಅಂಚೆಯಲ್ಲಿ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ.
ಒಂದು ಸಾವಿರ ಕೊಟ್ಟರೆ ಪೇಂಟ್‌ನಲ್ಲಿ ನಿಮ್ಮ
ಹೆಸರು ಬರೆಸುತ್ತೇವೆ.
ಐದು ಸಾವಿರ ಕೊಟ್ಟರೆ ಕಲ್ಲಿನಲ್ಲಿ ಕೊರೆಸುತ್ತೇವೆ.
ಹತ್ತು ಸಾವಿರ ಕೊಟ್ಟರೆ ಅಮೃತ ಶಿಲೆಯಲ್ಲಿ
ಬರೆಸುತ್ತೇವೆ.
ಲಕ್ಷಕ್ಕೆ ನಿಮ್ಮ ಶಿಲಾಮೂರ್ತಿ ಕಡೆಸಿ ನಿಲ್ಲಿಸುತ್ತೇವೆ.
ಏನಾಗುತ್ತದೋ ನೋಡಿ,
ನಿಮಗೆ ಸಾಧ್ಯವಾದುದು.
ಏನು ಸ್ವಾಮಿ,
ಈಗಿನ ಜನ ಪ್ರೇಜನ ಇಲ್ಲ,
ಬೇಡದ್ದಕ್ಕೆ ನೀರಿನಂತೆ ದುಡ್ಡು ಸುರಿಯುತ್ತಾರೆ.
ದೇವಸ್ಥಾನಕ್ಕೆಂದರೆ ಇಪ್ಪತ್ತು-ಐವತ್ತು
ರೂಪಾಯಿಯಲ್ಲಿ ಮುಗಿಸಿ ಬಿಡ್ತಾರೆ.
ನಾವೆಲ್ಲ ಚಿಕ್ಕವರಾಗಿದ್ದಾಗ ಒಂದು ರೂಪಾಯಿಗೆ
ಒಂದು ಮುಡಿ ಅಕ್ಕಿ ಸಿಗ್ತಿತ್ತು.
ಈಗೇನು ಸಿಗ್ತದೆ ಮಣ್ಣು ಅಂದ ರಾಯ ನಾನು ಇಪ್ಪತ್ತು
ಐವತ್ತು ಕೊಟ್ಟು ಕೈತೊಳೆದುಕೊಳ್ಳಬಾರದೆಂದು ಪರೋಕ್ಷವಾಗಿ ಸೂಚಿಸಿಬಿಟ್ಟ.
ನೀವು ನಮ್ಮವರಲ್ವೇ ಅಂತ ಪ್ರಾರಂಭಿಸಿದ ರಾಯ
ವಂತಿಗೆಯಲ್ಲಿ ಪೂರ್ಣಗೊಳಿಸಿದ್ದೇಕೆ?
ನಮ್ಮವರೆನ್ನುವುದಕ್ಕೂ ವಂತಿಗೆಗೂ ಏನು ಸಂಬಂಧ?
ಜಾತಿ-ಧರ್ಮ-ದೇವರು-ಹಣಗಳ
ನಡುವಿನ ನಂಟೇನು?
ಅಲ್ಲೂ ಹೀಗೇ ಆಗಿತ್ತಲ್ಲ.
ವಾಸು ಉತ್ತರಕ್ರಿಯೆಗೆ ಸುಬ್ಬ ಧಾರಾಳ ಖರ್ಚು
ಮಾಡಿದ್ದ.
ಬೇಕಾದಷ್ಟು ದಕ್ಷಿಣೆ ಕೊಟ್ಟಿದ್ದ.
ಪುರೋಹಿತರು ಖುಷಿಯಲ್ಲೇ ಹೋಗಿದ್ದರು.
ಇಂತಹ ನಾಲ್ಕು ಮನೆಯಲ್ಲಿ ವರ್ಷಕ್ಕೆ ನಾಲ್ಕು ಜನ
ಸತ್ತರೆ ನಮಗೆ ಸಾಕು ಎನ್ನುತ್ತಾ ಹೋಗಿದ್ದರೆಂದು ಅತ್ತಿಗೆ ಪಿಸುಗುಟ್ಟಿದ್ದರು.
ಹಾಗಾದರೆ ನಮ್ಮವರೆನ್ನುವುದಕ್ಕೂ-ಧರ್ಮಕ್ಕೂ-ಹಣಕ್ಕೂ
ಏನೋ ಸಂಬಂಧವಿದೆ.
ರಾಯ ಹೇಳಿದಂತೆ ಒಂದು ರೂಪಾಯಿಗೆ ಮುಡಿ ಅಕ್ಕಿ
ಸಿಗುತ್ತಿದ್ದ ಕಾಲವಿತ್ತೆಂದು ಅಪ್ಪನೂ ಹೇಳುತ್ತಾರೆ.
ಆದರೆ ಆಗ ಒಂದು ರೂಪಾಯಿ ಸಂಪಾದಿಸಬೇಕಾದರೆ ಒಂದು
ವಾರ ಬೇಕಿತ್ತಲ್ಲ.
ನನ್ನ ಬ್ಯಾಂಕ್ ಬುದ್ಧಿಗೆ ನಗು ಬಂತು.
ನನ್ನ ಮೌನ ಕಂಡ ರಾಯ ಈ ಪ್ರಾಣಿ ಸಾಮಾನ್ಯಕ್ಕೆಲ್ಲ
ಬಿಚ್ಚುವುದಿಲ್ಲ ಅಂದುಕೊಂಡಿರಬೇಕು.
ಮತ್ತೆ ವಟಗುಟ್ಟತೊಡಗಿದ.
ಇನ್ನಿವನಿಗೆ ಹರಕೆ ಸಲ್ಲಿಸದಿದ್ದರೆ
ತಡೆದುಕೊಳ್ಳಲು ಸಾಧ್ಯವಿಲ್ಲವೆನಿಸಿ ಇನ್ನೂರೈವತ್ತು ತೆಗೆದು ರಾಯನ ಕೈಗಿಟ್ಟೆ.
ಆತ ನಾರಾಯಣರಾಯನೋ ಶ್ಯಾಮರಾಯನೋ ಎದುರಾಗಿದ್ದರೆ
ಐವತ್ತಕ್ಕಿಂತ ಹೆಚ್ಚು ಬಿಚ್ಚುತ್ತಿರಲಿಲ್ಲವೇನೋ.
ರಾಯ ಖುಷಿಪಟ್ಟನೋ ಬೇಸರಪಟ್ಟನೋ ಗೊತ್ತಾಗಲಿಲ್ಲ.
ಅವನ ನಿರೀಕ್ಷೆ ಇನ್ನೂ ಹೆಚ್ಚಿದ್ದಿರಬಹುದು.
ಕನ್ಸ್ಯೂಮರ್ ಸರ್ಪ್ಲಸ್ ಅಂದರೆ ಇದೇ.
ತುಟಿಪಿಟಿಕೆನ್ನದೆ ಚಕಚಕನೆ ರಶೀದಿ ಹರಿದುಕೊಟ್ಟ
ರಾಯ,
ಸ್ವಾಮೀ,
ದಯವಿಟ್ಟು ತಪ್ಪು ತಿಳೀಬೇಡಿ.
ನಾನು ಮುಂದಿನ ಆ ಅವರ ಬಳಿ ಸೀಟಿದೆಯಲ್ಲ,
ಅಲ್ಲಿಗೆ ಹೋಗುತ್ತೇನೆ.
ಈ ಹಿಂದಿನ ಸೀಟಿನ ಕುಲುಕಾಟ ತುಂಬಾ ಕಷ್ಟ ಎಂದವನೇ
ಮುಂದಿನ ಸೀಟಿಗೆ ವರ್ಗಾವಣೆಯಾದ.
ವಾಸು ಗುಂಗು ಕಾಡತೊಡಗಿತು.
ತಿರುಮಲೇಶ್ವರ ಅಣ್ಣ,
ನಾನು,
ಸುಬ್ಬಣ್ಣ,
ವಾಸು ಮತ್ತು ಅಕ್ಕ.
ಐವರಲ್ಲಿ ವಾಸುವೇ ಕೊನೆಯವನು ಅಕ್ಕ ಎಲ್ಲರಿಗೂ
ಅಕ್ಕನೇ.
ಕಿರಿಯ ವಾಸು ಮೇಲೆ ಎಲ್ಲರಿಗೂ ಮುದ್ದು.
ರಾಮಚಂದ್ರನಾದ ನನ್ನನ್ನು ರಾಮ ಅಂತ,
ತಿರುಮಲೇಶ್ವರನನ್ನು ತಿಮ್ಮ ಅಂತ,
ಸುಬ್ಬಣ್ಣನನ್ನು ಸುಬ್ಬ ಅಂತ,
ಅಕ್ಕ ಮೂಕಾಂಬಿಕೆಯನ್ನು ಅಕ್ಕ ಮೂಕ ಅಂತ ತುಂಡು
ಹೆಸರಿನಲ್ಲೇ ಕರೆಯುವ ಅಮ್ಮ ವಾಸುವನ್ನು ಮಾತ್ರ ವಾಸುದೇವಕೃಷ್ಣ ಅಂತ ಉದ್ದಕೆ
ರಾಗವಾಗಿ ಕರೆಯುವರು.
ಅಪ್ಪ ವಾಸುವನ್ನು ಐಎಎಸ್ ಮಾಡುವ ಕನಸು ಕಾಣುತ್ತಿದ್ದರು.
ಆದರೆ ಮುದ್ದಿನ ವಾಸು ಬೆಳೆಯುತ್ತಾ ಹೋದ ಹಾಗೆ
ಮೊದ್ದನಾಗುತ್ತಲೂ ಹೋದ.
ವಾಸುಗೆ ಆರೇಳು ವರ್ಷವಾಗುತ್ತಲೇ ಇವನು ಎಲ್ಲರ
ಹಾಗಿಲ್ಲವೆಂದು ಅರ್ಥವಾಗತೊಡಗಿತ್ತು.
ಹೇಳಿದ ಕೆಲಸವನ್ನು ಹೇಳಿದ ಹಾಗೆ ಮಾಡುತ್ತಿದ್ದ.
ಹೇಳುವಾಗ ತಪ್ಪಾಗಿದ್ದರೆ ಅದನ್ನೂ ಮಾಡುತ್ತಿದ್ದ.
ಒಮ್ಮೆ ಅಪ್ಪ ದಿನಾ ಹೂತೋಟಕ್ಕೆ ನೀರು ಹಾಕಬೇಕು
ಅಂದಿದ್ದರು.
ಪಿತೃವಾಕ್ಯವನ್ನು ಪಾಲಿಸಿದ ವಾಸು ಮಳೆ ಬಂದ ದಿನವೂ
ನೀರುಣಿಸಿ ಬೈಸಿಕೊಂಡಿದ್ದ.
ಕಲಿಯುವುದರಲ್ಲಿ ಹಿಂದಿನವನಾಗಿದ್ದ ವಾಸು ಶಾಲೆಗೆ
ಹೋಗುವಾಗಲೂ ಎಲ್ಲ ಹುಡುಗರಿಂದ ಹಿಂದಿರುತ್ತಿದ್ದ.
ಜೊತೆಯ ಹುಡುಗರು ಮರೆಯಾದೊಡನೆ ಪೊದರುಗಳ ಮರೆಯಲ್ಲಿ
ಅಡಗಿ ಕೂತುಕೊಳ್ಳುತ್ತಿದ್ದ.
ಸಂಜೆ ಮಕ್ಕಳೆಲ್ಲ ಶಾಲೆಯಿಂದ ಹಿಂದಿರುಗುವಾಗ ಅವರ
ಹಿಂದಿನಿಂದ ವಾಸು ಕೂಡ ಹೊರಡುತ್ತಿದ್ದ.
ಮೊದಮೊದಲು ವಾಸು ಶಾಲೆಗೆ ಹೋಗುತ್ತಿದ್ದಾನೆಂದೆ
ನಾವೆಲ್ಲ ನಂಬಿದ್ದೆವು.
ಬರುಬರುತ್ತ ಸತ್ಯ ಹೊರಬಿತ್ತು.
ಅಪ್ಪನಿಗೆ ಅದೇನು ಕೋಪ ಬಂದಿತ್ತೋ ಎಂದು ಯಾರಿಗೂ
ಹೊಡೆಯದವರು ಆ ದಿನ ಇಡೀ ಬೆತ್ತ ಹುಡಿಯಾಗುವ ತನಕ ಬಾರಿಸಿದ್ದರು.
ತಡೆಯ ಹೋದ ಅಮ್ಮನಿಗೂ ನಾಲ್ಕೇಟು ಬಿತ್ತು.
ವಾಸು ಕುರ್ರ್ಯೋ ಮುರ್ರ್ಯೋ ಅಂತ ಅರಚುತ್ತಿದ್ದ.
ಅಪ್ಪ ಹೊಡೆದು ಸುಸ್ತಾದರೆಂದು ತೋರುತ್ತದೆ.
ಗೋಳೋ ಅಂತ ಅಳುತ್ತಾ ಕುಸಿದು ಬಿದ್ದರು.
ವಾಸು ಭಯಂಕರ ಹಠವಾದಿ.
ಆ ದಿನದಿಂದ ಶಾಲೆಗೆ ಹೋಗುವುದಿಲ್ಲವೆಂದು ಹಠ
ಹಿಡಿದುಬಿಟ್ಟ.
ಪೆಟ್ಟಾಗಲಿ ಬುದ್ಧಿವಾದವಾಗಲಿ ಠುಸ್ಸೆಂದಿತು.
ಹೆಡ್ಮಾಸ್ಟ್ರೇ ಬಂದು ಹೇಳಿದರೂ ವಾಸು
ಜಪ್ಪೆನ್ನಲಿಲ್ಲ.
ಆಗ ವಾಸು ನಾಲ್ಕನೇ ತರಗತಿಯಲ್ಲಿದ್ದ.
ನಾಲ್ಕು ವರ್ಷದಲ್ಲಿ
'ವಾಸುದೇವಕೃಷ್ಣ'
ಅಂತ ಒರಟೊರಟಾಗಿ ತನ್ನ ಹೆಸರು ಬರೆಯುವುದನ್ನು ಬಿಟ್ಟರೆ ಬೇರೇನೂ
ಕಲಿತಿರಲಿಲ್ಲ.
ಇನ್ನು ಪ್ರಯೋಜನವಿಲ್ಲವೆಂದರಿತ ಅಪ್ಪನೇ ಶಾಲೆ ಬಿಡಲು
ಒಪ್ಪಿಗೆ ಕೊಟ್ಟಿದ್ದರು.
ಒಂದೇ ವರ್ಷ,
ಸುಬ್ಬ ಕೂಡ ವಾಸುಗೆ ಜೊತೆಯಾದ.
ಆಗ ಸುಬ್ಬ ಒಂಬತ್ತನೇ ತರಗತಿಯಲ್ಲಿದ್ದ.
ನಾನು ಮಂಗಳೂರಿನಲ್ಲಿ ಓದುತ್ತಿದ್ದೆ.
ಅಣ್ಣ ಯಾವತ್ತೋ ಬೆಂಗಳೂರು ಸೇರಿ
ಫ್ಯಾಕ್ಟರಿಯೊಂದರಲ್ಲಿ ಬದುಕು ಕಂಡುಕೊಂಡಿದ್ದ.
ಟಿಸಿಎಚ್ ಮುಗಿಸಿ ಟೀಚರ್ ಆಗಿದ್ದ ಅಕ್ಕನ ಮದುವೆ
ಆ ವರ್ಷ ತಾನೇ ಮುಗಿದಿತ್ತು.
ಇಬ್ಬರು ಮಕ್ಕಳು ಶಾಲೆಗೆ ಹೋಗುತ್ತಿಲ್ಲ
ಎನ್ನುವುದು ಅಪ್ಪನಿಗೂ ನುಂಗಲಾರದ ತುತ್ತಾಗಿತ್ತು.
ಅಪ್ಪನ ತಿಳುವಳಿಕೆಯೆಲ್ಲ ಮನೆಯಲ್ಲೇ ಕೂತು
ಶಾಸ್ತ್ರಿಗಳಿಂದ,
ಶಂಕ್ರಯ್ಯನಿಂದ ಕೇಳಿ ಕಲಿತದ್ದು.
ಜಾಣ್ಮೆಯೆಲ್ಲ ವ್ಯವಹಾರಕ್ಕೆ ಸಂಬಂಧಿಸಿದ್ದು.
ಅಪ್ಪನಿಗೆ ಶಾಲೆ ಕಲಿಯುವ ಆಸೆಯಿತ್ತು.
ಆದರೆ ಪಡೆದುಕೊಂಡು ಬಂದಿರಲಿಲ್ಲ.
ಶಾಲೆಗೆ ಸೇರಿ ಒಂದೆರಡು ದಿನದಲ್ಲಿ ಅಜ್ಜ ಶಾಲೆ
ಬಿಡಿಸಿದ್ದರಂತೆ.
ಶಾಲೆಗೆ ಹೊಲೇರ ಮಕ್ಕಳೆಲ್ಲ ಬರುತ್ತಾರೆ.
ಮಡಿಯೆಲ್ಲ ಹಾಳಾಗುತ್ತದೆ ಎನ್ನುವುದಷ್ಟೇ ಶಾಲೆ
ಬಿಡಿಸುವುದಕ್ಕಿದ್ದ ಕಾರಣ.
ಅಪ್ಪನ ಅಳು-ಕೂಗು-ರಂಪಾಟಕ್ಕೆ
ಅಜ್ಜ ಜಗ್ಗಲಿಲ್ಲ.
ಕೈ ಕಾಲು ಬೇಡಿದರೂ,
ಅನ್ನ-ನೀರು
ಸತ್ಯಾಗ್ರಹ ಮಾಡಿದರೂ ಅಜ್ಜ ಕರಗಲಿಲ್ಲ.
ಅಪ್ಪನ ಬೆನ್ನಿಗೆ ನಾಲ್ಕು ಗುದ್ದು,
ಇನ್ನೂ ಸಾಲದೆಂಬಂತೆ ಬಟ್ಟೆ ಬಿಚ್ಚಿ ಬಾರು ಕೋಲಿನ
ಹೊಡೆತ ಇಷ್ಟೇ ಸಿಕ್ಕಿದ್ದು.
ಅದಕ್ಕೇ ಇರಬೇಕು,
ಅಪ್ಪ ನಮಗೆ ಮನುಷ್ಯರೆಲ್ಲ ಒಂದೇ ಅನ್ನುವುದನ್ನು
ಮೊದಲ ಮನೆಪಾಠವಾಗಿ ಕಲಿಸಿದ್ದರು.
ಮಕ್ಕಳು ತುಂಬಾ ಕಲಿಯಬೇಕು ಎನ್ನುವ ಅಪ್ಪನ
ಆಸೆಯನ್ನು ಹೆಚ್ಚು ಸಮರ್ಥವಾಗಿ ಈಡೇರಿಸಿದ್ದು ನಾನೇ.
ಅಣ್ಣ ಪಿಯುಸಿ ಮುಗಿಸಿ ಕೆಲಸಕ್ಕೆ ಸೇರಿದ್ದ.
ಅಕ್ಕನದೂ ಅಷ್ಟೇ.
ನಾನು ಮಾತ್ರ ಎಂಕಾಂ ಮಾಡಿಕೊಂಡು ಡಬಲ್ ಡಿಗ್ರಿ
ಹೋಲ್ಡರ್ ಆಗಿದ್ದೆ.
ಅದಕ್ಕಾಗಿ ಸುಬ್ಬ ಮಾಡಿದ ಸಹಾಯ ಕಡಿಮೆಯೇನಲ್ಲ.
ಕೇಳಿದ ಹಾಗೆಲ್ಲ ಹಣ ಕಳಿಸುವುದಲ್ಲ,
ತಿಂಗಳೊಂದಾವರ್ತಿ ಬಂದು ಕಷ್ಟ ಸುಖ
ವಿಚಾರಿಸುತ್ತಿದ್ದ.
ಪಾಪ ಸುಬ್ಬ ಹದಿನಾರು ಹದಿನೇಳು ವರ್ಷಕ್ಕೆಲ್ಲ ಮನೆ
ಜವಾಬ್ದಾರಿ ಹೊತ್ತಿದ್ದ.
ಅಪ್ಪನಿಗೆ ಆಗುತ್ತಿರಲಿಲ್ಲವೆಂದಲ್ಲ.
ಆದರೆ ಮಕ್ಕಳು ಶಾಲೆ ಬಿಟ್ಟ ಮೇಲೆ ಮನೆ
ನೋಡಿಕೊಳ್ಳುವುದಕ್ಕಿಂತ ವಾಸು ಹೆರಿಗೆಯೊಂದಿಗೆ ಶುರುವಾದ ಅಮ್ಮನ ಬೆನ್ನುನೋವು
ನೋಡಿಕೊಳ್ಳುವುದೇ ಮುಖ್ಯವೆನಿಸಿರಬೇಕು.
ಸದಾ ಅಮ್ಮನ ಜೊತೆಯಾಗೇ ಇರುತ್ತಿದ್ದರು.
ಹೀಗೆ ಮನೆ ಜವಾಬ್ದಾರಿಯೆಲ್ಲ ಸುಬ್ಬನ
ಹೆಗಲೇರಿತ್ತು.
ಅಪ್ಪನ ವ್ಯವಹಾರ ಜ್ಞಾನವೆಲ್ಲ ಪಡಕೊಂಡು
ಬಂದಿದ್ದ ಸುಬ್ಬ.
ಅಪ್ಪನ ಕಾಲಕ್ಕೆ ಊಟ ಬಟ್ಟೆಗೆ ಕೊರತೆ ಇರಲಿಲ್ಲ
ಎನ್ನುವುದನ್ನು ಬಿಟ್ಟರೆ ಮಕ್ಕಳಿಗೆ ಬೇಕೆನಿಸಿದ್ದನ್ನು ಕೊಡಿಸುವ ಸ್ಥಿತಿ
ಇರಲಿಲ್ಲ.
ವ್ಯವಹಾರ ಸುಬ್ಬನ ಕೈಗೆ ಬಂದ ಮೇಲೆ ನಿಧಾನಕ್ಕೇ ನಮ್ಮದೂ
ಊರೊಳಗಿನ ಸ್ಥಿತಿವಂತರ ಕುಟುಂಬದಲ್ಲಿ ಒಂದಾಯಿತು.
ಸುಬ್ಬನ ದುಡಿಮೆಗೆ ಟೊಂಕಕಟ್ಟಿ ನಿಂತವ ವಾಸು.
ತನ್ನ ದುಡಿಮೆಯಿಂದ ಪ್ರಯೋಜನವೇನು ಅಂತ ವಾಸು
ಯೋಚಿಸುತ್ತಿರಲಿಲ್ಲ.
ಅಣ್ಣ ಹೇಳಿದ್ದನ್ನು ಮಾಡಬೇಕಷ್ಟೇ.
ಅದೆಂತಹ ದೈತ್ಯಶಕ್ತಿ ವಾಸುಗಿತ್ತೆನ್ನುವುದು
ನನಗಿಂತ ಚೆನ್ನಾಗಿ ಅಣ್ಣನಿಗೆ ಗೊತ್ತು.
ಮದುವೆಯಾದ ಹೊಸದರಲ್ಲಿ ಅಣ್ಣ-ಅತ್ತಿಗೆ
ಊರಿಗೆ ಬಂದಿದ್ದರಂತೆ.
ಗಾಳಿ ತಿನ್ನುವುದಕ್ಕೇಂತ ಗದ್ದೆಬದುವಿನಲ್ಲಿ
ತಿರುಗಾಡುತ್ತಿದ್ದರಂತೆ.
ಅತ್ತಿಗೆ ಕೆಂಪು ಸೀರೆ ಉಟ್ಟುಕೊಂಡಿದ್ದು,
ಕೆಂಪನ್ನು ಕಂಡರಾಗದ ಬೀಜದ ಹೋರಿ ಹಟ್ಟಿಯಿಂದ
ತಪ್ಪಿಸಿಕೊಂಡದ್ದು ಸರಿಹೋಗಿತ್ತು.
ಹೋರಿ ಅಡ್ಡಾಡುತ್ತಿದ್ದುದನ್ನು ಕಂಡ ಅಣ್ಣ
ತಮಾಷೆಗೆಂಬಂತೆ ಕಲ್ಲೆಸೆದನಂತೆ.
ಹೋರಿ ಕೆರಳಿತು.
ಪಕ್ಕದಲ್ಲಿ ಕೆಂಪು ಸೀರೆ ಉಟ್ಟಿದ್ದ ಅತ್ತಿಗೆ
ಬೇರೆ.
ಹೋರಿ ನೆಗೆಯಿತು.
'ಅಮ್ಮಾ'
ಎಂಬ ಚೀರಾಟ.
ಅತ್ತಿಗೆ ಪ್ರಜ್ಞೆ ತಪ್ಪಿ ಬಿದ್ದರು.
ಚೀರಿದ್ದನ್ನು ಕೇಳಿದ್ದೇ ತಡ;
ಬೇಲಿ ರಿಪೇರಿ ಮಾಡುತ್ತಿದ್ದ ವಾಸು ಅದಾವ
ವೇಗದಲ್ಲಿ ಹಾರಿ ಬಂದಿದ್ದ!
ಹೋರಿ ಕೊಂಬುಗಳನ್ನು ಹಿಡಿದು ಮದವೇರಿದ
ಹೋರಿಯೊಂದಿಗೆ ಕಾದಾಡಿದ್ದ!
ಹೋರಿಯನ್ನು ಕಟ್ಟಿ ಎಳೆದೊಯ್ಯುವ ಹೊತ್ತಿಗೆ ವಾಸು
ಮೈ ತುಂಬಾ ಗಾಯ.
ಇಂತಹ ಬಲಾಢ್ಯ ವಾಸು ಅಷ್ಟೇ ಗಡದ್ದಾಗಿ
ತಿನ್ನುತ್ತಿದ್ದ.
ಎಷ್ಟು ತಿಂದರೂ ಇನ್ನೂ ಸ್ವಲ್ಪ ತಿನ್ನುವಷ್ಟು ಜಾಗ ವಾಸು
ಹೊಟ್ಟೆಗಿತ್ತೆಂದು ಎಲ್ಲರೂ ಹೇಳಿಕೊಳ್ಳುತ್ತಿದ್ದರು.
ಶಾಸ್ತ್ರಿಗಳ ಪ್ರಕಾರ ವಾಸುಗೆ ಹಿಂದಿನ ಜನ್ಮದಲ್ಲಿ
ಕೃಷ್ಣನ ಶಾಪವಿದ್ದಿರಬೇಕಂತೆ.
ಅದಕ್ಕೊಂದು ಕತೆಯಿದೆ.
ಗೀತಾಚಾರ್ಯಕೃಷ್ಣ ಒಂದು ಬಾರಿ ನಂದಗೋಕುಲದಲ್ಲಿ
ದನ ಮೇಯಿಸುತ್ತಿದ್ದನಂತೆ.
ಸಂಜೆ ಕೃಷ್ಣ ಹೊರಟಾಗ ದನಗಳು ಹೊಟ್ಟೆ ತುಂಬಿಲ್ಲ;
ಇನ್ನೂ ಸ್ವಲ್ಪ ಮೇಯ್ದುಕೊಳ್ಳುತ್ತೇವೆ ಎಂದವಂತೆ.
ಐದಾರು ಬಾರಿ ಇದೇ ಪುನರಾವರ್ತನೆಯಾದಾಗ ಕೃಷ್ಣನಿಗೆ
ರೇಗಿ ಹೋಯಿತು.
ನಿಮ್ಮ ಹೊಟ್ಟೆ ಎಂದೂ ಪೂರ್ತಿ ತುಂಬದೆ ಹೋಗಲಿ ಅಂತ
ಶಪಿಸಿದನಂತೆ.
ವಾಸು ಆ ಜಾತಿಗೆ ಸೇರಿದವನೆಂದು ಶಾಸ್ತ್ರಿಗಳ ವ್ಯಾಖ್ಯಾನ.
ವಾಸು ತಿನ್ನುವುದರಲ್ಲಿ ಹೇಗೋ
ದುಡಿಯುವುದರಲ್ಲೂ ಹಾಗೇ.
ಅಂತಹ ಶ್ರಮ ಭೂಮಿಗೆ ಸಿಕ್ಕಿದ್ದು ಭೂಮಿಯ ಪುಣ್ಯವೆಂದೇ
ಹೇಳಬೇಕು.
ಆಗಿನ್ನೂ ತೋಟಕ್ಕೆ ಪಂಪು ಸ್ಪ್ರಿಂಕ್ಲರ್ ಬಂದಿರಲಿಲ್ಲ.
ವಾಸೊವೊಬ್ಬನೆ ಚುಮುಚುಮು ನಸುಕಿಗೆದ್ದು ತೋಟಕ್ಕೆ
ಹೋದರೆ ಸೂರ್ಯ ನೆತ್ತಿಗೇರುವ ತನಕ ನೀರು ಮೊಗೆಮೊಗೆದು ಸುರಿಯುತ್ತಿದ್ದ.
ತೋಟವಿಡೀ ನೀರುಣ್ಣುತ್ತಿತ್ತು.
ಚಕಚಕನೆ ಮರವೇರಿ ತೆಂಗು ತೆಗೆಯುವುದು,
ಮರ ಸವರಿ ಸೊಪ್ಪು ತಂದು ಹಾಕುವುದು,
ಗೊಬ್ಬರ ಮೂಟೆ ಮೂಟೆ ಹೊತ್ತೊಯ್ದು ಹೊಲಕ್ಕೆ
ಹರಡುವುದು,
ತೆಂಗಿನ ಹೊಂಡ-ಅಡಿಕೆ
ಹೊಂಡ ತೆಗೆಯುವುದೆಲ್ಲ ವಾಸುಗೆ ಸಲೀಸು.
ಆದರೆ ಅಡಿಕೆ ಹೊಂಡವೆಂದು ತೆಗೆದದ್ದು ತೆಂಗಿನ
ಹೊಂಡವಾದರೂ ಆಯಿತೇ.
ಅದಕ್ಕಾಗಿ ಬೈಸಿಕೊಳ್ಳುತ್ತಿದ್ದ.
ಹಾಗಂತ ಬೈದರೆ ಅವನಿಗೆ ಚಿಂತೆಯಿಲ್ಲ.
ಬೈದರೂ ಹೊಗಳಿದರೂ ನಗುತ್ತಿರುತ್ತಿದ್ದ.
ಮುಂದೆಂದೂ ವಾಸು ಬೈಗುಳ ಕೇಳಿಸಿಕೊಳ್ಳದಂತಹ
ಕಾಲವೂ ಬಂತು.
ಢಭೋ ಅನ್ನುವ ಕಿವಿಗಡಚಿಕ್ಕುವ ಶಬ್ಧ.
ಮಾಂತೇರ್‍ಲಾ,
ಜಪ್ಪುಲೆ,
ಟಯರ್ ಬರ್ಸ್ಟ್ ಆತ್ಂಡ್
(ಎಲ್ಲರೂ
ಇಳಿಯಿರಿ ಟಯರ್ ಬರ್ಸ್ಟ್ ಆಗಿದೆ)
ಎಂದ ಕಂಡಕ್ಟರ್.
ಯೋಚನೆಗೆ ಬ್ರೇಕ್ ಬಿತ್ತು.
ಎಲ್ಲರೂ ಇಳಿದೆವು.
ಬಹಳ ಹೊತ್ತಿನಿಂದ ಬಸ್ಸಲ್ಲಿ ಕೂತಿದ್ದವರು
ಅತ್ತಿತ್ತ ಅಡ್ಡಾಡತೊಡಗಿದರು.
ನನಗೆ ಅಡ್ಡಾಡುವ ಮನಸ್ಸಾಗಲಿಲ್ಲ.
ಸಿಗರೇಟು ತುಟಿಗೇರಿತು.
ಉಂಗುರುಂಗುರವಾಗಿ ಹೊಗೆ ವ್ಯಾಪಿಸತೊಡಗಿತು.
ವಾಸು ಐದಾರು ತಿಂಗಳಿಂದ ಕೆಮ್ಮುತ್ತಿದ್ದ.
ಗೊರೆಗೊರೆ ಉಸಿರೆಳೆದುಕೊಳ್ಳುತ್ತಿದ್ದ.
ಕಫ ವಾಂತಿ ಮಾಡುತ್ತಿದ್ದ.
ಆ ಹೊತ್ತಿಗೆ ಕೆಲಸದ ಆರ್ಡರ್ ಬಂದು ನಾನು ಧಾರವಾಡ
ಸೇರಿದ್ದೆ.
ಮೊದಮೊದಲು ಎಲ್ಲಾ ಸರಿಹೋಗುತ್ತದೆ;
ಕಾಳುಮೆಣಸು ಪುಡಿ ಮಾಡಿ ಜೇನುತುಪ್ಪ ಬೆರೆಸಿ
ತಿನ್ನು ಎಂದದ್ದಾಯಿತು.
ಸರಿಹೋಗಲಿಲ್ಲ.
ಅಮ್ಮನ ನಾಟಿಮದ್ದು ಫಲಕಾರಿಯಾಗಲಿಲ್ಲ.
ಅಸ್ತಮಾ ಬೇರೆ ಶುರುವಾಯಿತು.
ಕಿವಿಯಿಂದ ರೇಸಿ ಬರತೊಡಗಿತು.
ಪಕ್ಕದೂರಿನ ಡಾಕ್ಟರ್ ಬಂದು ನೋಡಿದರು.
ಇದನ್ನು ಯಾವುದಾದರೂ ದೊಡ್ಡ ಡಾಕ್ಟ್ರ ಹತ್ತಿರ
ತೋರಿಸುವುದೇ ಒಳ್ಳೆಯದೆಂದರು.
ಒಂದು ವಾರ ಮಂಗಳೂರು ಡಾಕ್ಟ್ರು,
ಇನ್ನೆರಡು ವಾರ ಮಡಿಕೇರಿ ಡಾಕ್ಟ್ರು,
ಕೊನೆಗೆ ಬೆಂಗಳೂರು ಡಾಕ್ಟ್ರೂ ನೋಡಿದ್ದಾಯಿತು.
ಕಾಯಿಲೆ ಇನ್ನೇನು ಕಡಿಮೆಯಾಯಿತು ಅಂದುಕೊಂಡರೆ
ಮರುದಿನ ನಾನಿದ್ದೇನೆ ಅಂತ ಹೆಡೆ ಎತ್ತುತ್ತಿತ್ತು.
ವಾಸುನ ದುಡಿಯುವ ಕೈಕೊಟ್ಟು ಸುಬ್ಬ ಕಂಗಾಲಾಗಿದ್ದ.
ಅಪ್ಪ-ಅಮ್ಮ
ಇಳಿಯುತ್ತಾ ಹೋದರು.
ಆ ದಿನ ವಾಸು ರಕ್ತ ವಾಂತಿ ಮಾಡಿಕೊಂಡ.
ಸುಬ್ಬ ಪಕ್ಕದೂರಿನ ಡಾಕ್ಟರನ್ನು ಕರೆಸಿದ.
ಕಫವನ್ನು ಲ್ಯಾಬಿಗೆ ಕಳುಹಿಸಿದ ಡಾಕ್ಟರು ಮರುದಿನ
ಸುಬ್ಬನನ್ನು ಕರೆದು 'ಇದು
ಟಿಬಿ'
ಅಂದರು.
ವಾಸುಗೆ ಕ್ಷಯರೋಗ ಬರುವಂಥದ್ದೇನಾಗಿತ್ತು?
ಪರಿಸರ,
ಆಹಾರ ಎಲ್ಲ ಚೆನ್ನಾಗಿತ್ತಲ್ಲ.
ಯಾವತ್ತೋ ಒಮ್ಮೆ ಬೀಡಿ ಸೇದುತ್ತಿದ್ದ ನಿಜ.
ಹಾಗಂದರೆ ಒಂದು ಚಟವಾಗಿ ಹೊಗೆಬಿಡುತ್ತಿದ್ದವ
ನಮ್ಮಲ್ಲಿ ನಾನೊಬ್ಬನೇ.
ಹಟ್ಟಿ ಹಿಂದೆ ಬೀಡಿ ಸೇದಿ ಅಪ್ಪನಿಂದ ಹೊಡೆಸಿಕೊಂಡಿದ್ದೆ.
ಆದರೆ ಹೊಗೆ ಬಿಡುವುದನ್ನು ಬಿಡಲಾಗಲಿಲ್ಲ.
ಯಾವಾಗಲಾದರೊಮ್ಮೆ ಒಂದು ಬೀಡಿ ಕೊಡಣ್ಣ ಅಂತ ವಾಸು
ಕೇಳಿ ಪಡೆಯುತ್ತಿದ್ದ.
ಹಾಗಂತ ಅವನಿಗದು ಚಟವೇನಲ್ಲ.
ಹಾಗೇ ಕೇಳಿದರೆ ಅವನಿಗೆ ಬರುವ ಟಿಬಿ ನನಗೆ
ಯಾವತ್ತೋ ಬರಬೇಕಾಗಿತ್ತು.
ಅಮ್ಮ ಹೇಳುವ ಹಾಗೆ ಇದೆಲ್ಲ ನಮ್ಮ ನಮ್ಮ
ಪ್ರಾರಬ್ಧ.
ವಾಸುಗೆ ಟಿಬಿ ಅಂತ ತಿಳಿದೊಡನೆ ಸುಬ್ಬ
ಅವನನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಿದ.
ಟೆಲಿಗ್ರಾಂ ಬಂತು.
ನಾನು,
ಅಣ್ಣ,
ಅಕ್ಕ ಹೋದೆವು.
ಅಮ್ಮ ಕಣ್ಣೀರಿಡುತ್ತಿದ್ದರು.
ಅಪ್ಪ ದಿಕ್ಕೇ ತೋಚದಂತೆ ಕುಳಿತಿದ್ದರು ನಾನು-ಅಣ್ಣ
ಹತ್ತತ್ತು ಸಾವಿರ ಸುಬ್ಬನ ಕೈಗಿರಿಸಿದೆವು.
ಮೂರು ತಿಂಗಳು ಇಲ್ಲಿ ನಿಲ್ಲಬೇಕಂತೆ.
ಮನೆಯಲ್ಲಿ ಯಾರೂ ಇಲ್ಲ.
ತೋಟ ಒಣಗಿದೆ.
ದನಕರುಗಳ ಚಾಕರಿಗೆ ಜನ ಇಲ್ಲ.
ನಾನಲ್ಲಿ ಇರಲೇಬೇಕು.
ಅಮ್ಮನ ಬೆನ್ನು ನೋವು ನೋಡಿಕೊಳ್ಳೋದಕ್ಕೆ ಜನಬೇಕು
ಅವರು ನಿಲ್ಲುವ ಹಾಗಿಲ್ಲ.
ನೀವೇ ಯಾರಾದರೂ ನಿಂತು ವಾಸೂನ ನೋಡ್ಕೊಳ್ಳಿ.
ಹಣ ನನಗೆ ಬೇಕಾಗಿಲ್ಲ ಸುಬ್ಬ ಇಷ್ಟು ಗಡುಸಾಗಿ
ಮಾತಾಡಿದ್ದನ್ನು ಇಲ್ಲಿಯವರೆಗೆ ನಾವ್ಯಾರು ನೋಡಿಲ್ಲ.
ಮನೆಕಡೆ ತಿರುಗಿ ನೋಡದಿದ್ದರೂ ಅಣ್ಣ ಸೈಟು
ಕೊಳ್ಳುವಾಗ ಅರ್ಧ ಹಣ ಕೊಟ್ಟಿದ್ದ ಸುಬ್ಬನಿಗೆ ಹಣ ಬೇಕಿರಲಿಲ್ಲ.
ನಾವು ಹಿಡಿಯಷ್ಟು ದುಡಿಯದಿದ್ದರೂ ಸುಬ್ಬ,
ವಾಸು ದುಡಿಮೆಯ ಫಲ ಬೇಕಾದಾಗೆಲ್ಲ ಪಡಕೊಂಡಿದ್ದೇವೆ.
ಈಗ ವಾಸುವನ್ನು ನೋಡಿಕೊಳ್ಳುವವರು ಯಾರು ಇಲ್ಲ.
ನಾನಂತೂ ಒಂಟಿ.
ಅಣ್ಣ ಫ್ಯಾಕ್ಟರಿಗೆ ಹೋಗದಿರುವಂತಿಲ್ಲ.
ಅತ್ತಿಗೆ ಅಥವಾ ಅಕ್ಕ ನೋಡಿಕೊಳ್ಳಬೇಕು.
ಅವಳನ್ನು ಕಳುಹಿಸಿದರೆ ಬೇಯಿಸಿ ಹಾಕುವವರು ಯಾರು
ಅಣ್ಣನ ತಕರಾರು.
ಕಡೆಗೆ ಈಗ ಶಾಲೆಗೆ ರಜೆಯಾಗಿದ್ದರಿಂದ ಒಂದು ತಿಂಗಳ
ಮಟ್ಟಿಗೆ ಅಕ್ಕ ನಿಲ್ಲುವುದೆಂದಾಯಿತು.
ವಾಸು ಆಸ್ಪತ್ರೆಯಲ್ಲಿರುವಾಗ ಮತ್ತೊಂದು ಬಾರಿ
ಹೋಗಿದ್ದೆ.
ಬ್ರೆಡ್ಡು,
ಬಿಸ್ಕೇಟು,
ಹಣ್ಣು ತೆಗೆದಿಟ್ಟು
'ವಾಸೂ'
ಅಂದರೆ ಆಚೆ ತಲೆ ಹಾಕಿ ಮಲಗಿದವನು ಈಚೆ ತಲೆ ಎತ್ತಲಿಲ್ಲ.
ನಿದ್ದೆ ಮಾಡಿರಬೇಕು ಎಂದುಕೊಂಡೆ.
ಆದರೆ ಅಕ್ಕ ಹೇಳಿದ್ದೆ ಬೇರೆ.
ಇತ್ತಿತ್ತಲಾಗಿ ವಾಸುಗೆ ಸರಿಯಾಗಿ ಕಿವಿ
ಕೇಳುತ್ತಿರಲಿಲ್ಲವಂತೆ.
'ವಾಸು,
ವಾಸು'
ಅಂತ ಹತ್ತಾರು ಬಾರಿ ಕರೆದರೆ ಒಮ್ಮೆ
'ಕರ್‍ದಿಯಾ?'
ಅನ್ನುತ್ತಿದ್ದನಂತೆ.
ವಾಸುವನ್ನು ಮೆಲ್ಲನೆ ತಟ್ಟಿ ಎಬ್ಬಿಸಿದೆ.
ನೋಡಿದೆ.
ಹಣ್ಣು ತಂದಿದ್ದೀಯಾ ಅಣ್ಣ,
ತುಂಬಾ ಹಣ್ಣು ಬೇಕು ಕೊಡು,
ಕೊಡು ಎಂದ.
ನನ್ನನ್ನು ಕರ್‍ಕೊಂಡು ಹೋಗು ಎಂದ.
ಪೆದ್ದು ಪೆದ್ದಾಗಿದ್ದ ವಾಸು ಒಂದು ರೀತಿ ಪೆಚ್ಚು
ಪೆಚ್ಚಾಗಿ ಹುಚ್ಚು ಹುಚ್ಚಾಗಿ ಆಡುವುದನ್ನು ಕಂಡು ದಿಗಿಲಾಯಿತು.
ಡಾಕ್ಟರನ್ನು ಭೇಟಿ ಮಾಡಿ ವಿಚಾರಿಸಿದರೆ ಕಾಯಿಲೆಯ
ಇಫೆಕ್ಟ್ ಎಂದರು.
ಹುಚ್ಚಾಸ್ಪತ್ರೆಗೆ ಕರೆದುಕೊಂಡು ಹೋದರೆ ಆ
ಟೆಸ್ಟು ಎಲ್ಲ ಆಗಿ ಇವನು ಹುಚ್ಚನೇನಲ್ಲ ಎಂಬ ರಿಸಲ್ಟ್ ಬಂತು.
ಆಮೇಲೆ ನಾನು ಹಿಂದಿರುಗಿದೆ.
ಒಂದೂವರೆ ತಿಂಗಳ ನಂತರ ಸುಬ್ಬನ ಪತ್ರ ಬಂತು.
ಅಕ್ಕ ಜೂನ್ ಆರಂಭವಾಗುತ್ತಲೇ ಹೊರಟು ನಿಂತಳಂತೆ.
ನನಗೆ ಹೇಳಿದರೆ ಏನೂ ಉಪಯೋಗವಿಲ್ಲವೆಂದು ಅಣ್ಣನಿಗೆ
ಪತ್ರ ಬರೆದನಂತೆ.
ಪತ್ರ ಸಿಗುವ ಹೊತ್ತಿಗೆ ಅಣ್ಣ ಟ್ರೈನಿಂಗಿನಲ್ಲಿದ್ದನಂತೆ.
ಅತ್ತಿಗೆ ಇಪ್ಪತ್ತು ಸಾವಿರದ ಚೆಕ್ ಬರೆದು
ಯಾರಾದರೂ ಕೆಲಸದವರನ್ನು ಆಸ್ಪತ್ರೆಯಲ್ಲಿ ನಿಲ್ಲಿಸುವಂತೆ ಸೂಚಿಸಿ ಮರು
ಟಪಾಲಿಗೆ ಉತ್ತರ ಬರೆದರಂತೆ.
ಸುಬ್ಬ ಕೆಲಸದವರನ್ನು ನಿಲ್ಲಿಸಿದರೆ ಮನೆಗೆ
ಹೋಗಬೇಕೆಂದು ಗದ್ದಲವೆಬ್ಬಿಸಿದನಂತೆ.
ಡಾಕ್ಟರು ಮೂರು ತಿಂಗಳು ಪೂರ್ತಿಯಾಗದೆ
ಕರೆದೊಯ್ದರೆ ತಾನು ಜವಾಬ್ದಾರನಲ್ಲವೆಂದು ಹೇಳಿದರೂ ಬೇರೆ ದಾರಿಯಿಲ್ಲದೆ
ವಾಸುವನ್ನು ಮನೆಗೆ ಒಯ್ದನಂತೆ.
ಈಗ ಮನೆಯಲ್ಲೇ ಟ್ರೀಟ್‌ಮೆಂಟ್ ಅಂತೆ!
ಎರಡು ತಿಂಗಳ ಬಳಿಕ ಮತ್ತೊಂದು ಪತ್ರ ಬಂತು.
ಸಂತೋಷ ಮತ್ತು ಬೇಸರವೆರಡನ್ನೂ ಹೊತ್ತು ತಂದಿತ್ತು
ಪತ್ರ.
ಟಿಎಸ್‌ಐ
ಮುಂದಿನ ಸಂಚಿಕೆಗೆ... |