ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಪತ್ರ ಚರಿತ್ರೆ
ಹ್ಯಾರಿ ಟ್ರೂಮನ್ ಬರೆದ ಪತ್ರ
 

1884ರಲ್ಲಿ ಮಿಸ್ಸೋರಿಯ ಲಾಮರ್‌ನಲ್ಲಿ ಜನಿಸಿದ ಟ್ರೂಮನ್ ಪ್ರಥಮ ಮಹಾಯುದ್ಧದ ಸಂದರ್ಭದಲ್ಲಿ 'ಫೀಲ್ಡ್ ಆರ್ಟಿಲರಿ'ಯ ಸೇನಾ ನಾಯಕರಾಗಿ ಫ್ರಾನ್ಸ್ ದೇಶಕ್ಕೆ ತೆರಳಿದರು. ಡೆಮಾಕ್ರಟಿಕ್ ಪಕ್ಷದಲ್ಲಿ ಸಕ್ರಿಯವಾಗಿದ್ದ ಟ್ರೂಮನ್ 1934ರಲ್ಲಿ ಸೆನೆಟರ್ ಆದರು. ಅಮೆರಿಕ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಇತಿಹಾಸದಲ್ಲೇ ಅತ್ಯಂತ ಕಠಿಣ ನಿರ್ಣಯವಾದ ಹಿರೋಶಿಮಾ ಮತ್ತು ನಾಗಸಾಕಿ ಮೇಲೆ ಅಣುಬಾಂಬ್ ದಾಳಿ ಮಾಡುವ ನಿರ್ಧಾರ ಕೈಗೊಂಡಿದ್ದರು. ಈ ಪತ್ರದಲ್ಲಿ ಟ್ರೂಮನ್ ತಮ್ಮ ಪತ್ನಿ ಬೆಸ್ ಟ್ರೂಮನ್ ಬಳಿ ಸೆಪ್ಟೆಂಬರ್ ೨6ರಂದು ಭೀಕರ ಬಾಂಬ್ ದಾಳಿಯಿಂದ ಆರಂಭಗೊಂಡ 'ಮ್ಯೂಸ್-ಆರ್ಗನ್' ಯುದ್ಧದ ಕುರಿತಾಗಿ ತಿಳಿಸಿದ್ದಾರೆ. ಯುದ್ಧದ ಆರಂಭಿಕ ದಿನಗಳು ಅಮೆರಿಕದ ಪಾಲಿಗೆ ಸುಲಭವಾಗಿತ್ತಾದರೂ ಜರ್ಮನಿ ಎದುರಾದಾಗ ಕಠಿಣ ಹೋರಾಟ ನಡೆಸಬೇಕಾಯಿತು.

ಅಕ್ಟೋಬರ್ 6, 1918,
ಫ್ರಾನ್ಸ್ ನಿಗೂಢ ಪ್ರದೇಶದಿಂದ

ಪ್ರೀತಿಯ ಬೆಸ್,

ಮಹಾ ಹೋರಾಟದ ಆರಂಭಕ್ಕೂ ಮೊದಲು ನಾನು ಅರಣ್ಯದ ನಡುವೆಯಿಂದ ಬರೆದ ಪತ್ರದ ನಂತರ ಇದೇ ಪ್ರಥಮ ಬಾರಿಗೆ ಪತ್ರ ಬರೆಯುವ ಅವಕಾಶ ದೊರಕಿದೆ. ಇಷ್ಟು ತಡವಾಗಿ ಪತ್ರ ಬರೆಯುತ್ತಿರುವುದಕ್ಕೆ ಮೊದಲು ನಾನು ಕ್ಷಮೆ ಕೋರಬೇಕು. ಆದರೆ ನನ್ನ ಪರಿಸ್ಥಿತಿ ಹೇಗಿತ್ತೆಂದರೆ ಪತ್ರ ಬರೆಯಲು ಸಾಧ್ಯವಿಲ್ಲದಷ್ಟು ಕರ್ತವ್ಯ ನಿರತನಾಗಿದ್ದೆ. ಒಂದು ವೇಳೆ ಬರೆದಿದ್ದರೂ ಅವುಗಳನ್ನು ಕಳುಹಿಸುವಷ್ಟು ಸಮಯ ನನ್ನ ಬಳಿ ಇರಲಿಲ್ಲ. ಮಹಾ ಸಮರ ಆರಂಭವಾಗಿದ್ದು ನಾನು ಅದರ ಭಾಗವಾಗಿದ್ದೇನೆ. ಬಹಳ ಸಣ್ಣ ಪಾತ್ರವಾದರೂ ಜವಾಬ್ದಾರಿ ಎನ್ನುವುದು ಇದ್ದೇ ಇರುತ್ತದಲ್ಲವೇ? ಈ ಅನುಭವವನ್ನು ಮಾತ್ರ ಮರೆಯಲೇ ಸಾಧ್ಯವಿಲ್ಲ. ಅಷ್ಟು ಮಾತ್ರವಲ್ಲ, ದೇವರು ಬಯಸದೆ ಹೋದಲ್ಲಿ ಈ ಅನುಭವ ಇನ್ನೊಮ್ಮೆ ಆಗುವುದೂ ಬೇಡ. 'ಸೆಂಟ್ರಲ್ ಪವರ್‍ಸ್' ರಾಷ್ಟ್ರಗಳು ಈಗ ಶಾಂತಿ ಬಯಸಿವೆ ಎಂದು ಎಲ್ಲಾ ವೃತ್ತ ಪತ್ರಿಕೆಗಳಲ್ಲಿದೆ. ಅದಕ್ಕೆ ಕಾರಣವೂ ನಾನೇ! ಜರ್ಮನ್ ಫಿರಂಗಿ ದಳವನ್ನು ನಾನು ನುಚ್ಚುನೂರು ಮಾಡಿದೆ. ನನ್ನ ಜೊತೆಯಲ್ಲಿ ಆ ಸಂದರ್ಭದಲ್ಲಿದ್ದದ್ದು ಸಮರ್ಥ ದ್ವಿತೀಯ ಲೆಫ್ಟಿನೆಂಟ್ ಝೀಮರ್. ನಾವಿಬ್ಬರೂ ಪದಾತಿ ಸೈನ್ಯದ ಮುಂಭಾಗದಲ್ಲಿದ್ದೆವು. ನಾನು ನನ್ನ ಫಿರಂಗಿದಳವನ್ನು ಮುಂದಕ್ಕೆ ಒಯ್ದು ವಿರೋಧಿ ಸೈನ್ಯದ ಹುಟ್ಟಡಗಿಸಿದೆ. ಒಂದೇ ಒಂದು ಕುದುರೆ ಅಥವಾ ಸೈನಿಕ ಉಳಿಯಲಿಲ್ಲ. ಫಿರಂಗಿಯ ಸಿಡಿಗುಂಡು ಎಲ್ಲೆಡೆ ಹಾರಿತು. ದೇವರು ನನ್ನ ಜೊತೆಯಲ್ಲಿ ಆಗಲೂ ಇದ್ದ, ಈಗಲೂ ಇದ್ದಾನೆ ಎಂದು ಅನಿಸುತ್ತದೆ. ನಮ್ಮ ಪಡೆಯಲ್ಲಿ ಇತರರಿಗಾದಂತೆ ನನಗೆ ತಲೆಸುತ್ತು ಬಂದಿಲ್ಲ.

ನಾವೀಗ ಬಿಡಾರವೊಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇವೆ. ಬಹುಶಃ ಅವರಿಗೆ ಅವಶ್ಯಕತೆ ಇದ್ದಾಗ ನಾವು ಹಿಂದಿರುಗಬೇಕಾಗುತ್ತದೆ. ನಾನು ಹಿಂದಿನಂತೆಯೇ ದಪ್ಪಗೆ, ಆರೋಗ್ಯವಾಗಿರುವ ಕಾರಣ ನನ್ನ ಕುರಿತು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಜರ್ಮನ್ ಗುಂಡಿನ ಮೇಲೆ ನನ್ನ ಹೆಸರು ಬರೆದಿಲ್ಲ! ಫ್ರೆಡ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ನಿರತನಾಗಿದ್ದಾನೆ ಎಂಬ ವಿಚಾರ ತಿಳಿದು ಖುಷಿಯಾಯಿತು. ಪ್ರಸ್ತುತ ಪ್ರತಿ ವ್ಯಕ್ತಿಗೂ ಅದರ ಅವಶ್ಯಕತೆ ಇದೆ. ನಾನೂ ವಿಶ್ವವಿದ್ಯಾನಿಲಯದಲ್ಲೇ ಅಧ್ಯಯನ ಪೂರೈಸಿದ್ದು. ಫಿರಂಗಿದಳದ ಕಮಾಂಡರ್ ಆಗಿರುವುದೇ ಸ್ವತಃ ಒಂದು ಶಿಕ್ಷಣ ಎಂಬುದು ನನ್ನ ಭಾವ. ನಾನು ಇಲ್ಲಿ ಎಷ್ಟರ ಮಟ್ಟಿಗೆ ಸಾಧನೆ ಮಾಡಿದ್ದೇನೆ ಎಂಬುದು ತಿಳಿದಿಲ್ಲ. ಆದರೆ ನಾವು ಹಲವು ಬಾರಿ ಒಳಹೋಗಿ ಹೊರಬಂದಿದ್ದೇವೆ. ಆದರೂ ನನ್ನ ಫಿರಂಗಿದಳ ಇನ್ನೂ ಉಳಿದುಕೊಂಡಿದೆ. ಕಳೆದ ಬಾರಿ ಒಂದಷ್ಟು ಮಂದಿ ಗಾಯಗೊಂಡಿದ್ದರೂ, ಅವರೀಗ ನನ್ನ ಜೊತೆಗಿಲ್ಲ.

ಶಾಂತಿ ಮಾತುಕತೆ ಫಲಕಾರಿಯಾದಲ್ಲಿ ನಾನು ಆದಷ್ಟು ಶೀಘ್ರವೇ ಮನೆಗೆ ಬಂದು ಇಲ್ಲಿ ಬರೆಯಲಾಗದ ಸಂಗತಿಗಳನ್ನು ತಿಳಿಸುತ್ತೇನೆ. ನೀನು ಬಯಸಿದ್ದಕ್ಕಿಂತ ಹೆಚ್ಚಿನ ವಿವರಣೆಗಳನ್ನು ಆಗ ಆಲಿಸಬಹುದು.

ನಾನು ಮನೆಗೆ ಬಂದಾಗ ನ್ಯೂಯಾರ್ಕ್‌ನಲ್ಲಿ ಭೇಟಿಯಾಗುತ್ತೀಯಲ್ಲವೆ? ನಂತರ 'ಲಿಟಲ್ ಚರ್ಚ್'ನಿಂದ 'ಕಾರ್ನರ್' ವರೆಗೆ ಜೊತೆಯಾಗಿ ಹೋಗೋಣ. ನೀನು ಪ್ರವಾಸ ಹೋಗಲು ಬಯಸಿದಲ್ಲಿ ಪೂರ್ವವೋ, ಪಶ್ಚಿಮವೋ... ಯಾವುದೇ ದಿಕ್ಕಿನಲ್ಲಾದರೂ ಹೋಗೋಣ. ಶಾಂತಿ ಮಾತುಕತೆ ಫಲಿಸಿದಲ್ಲಿ ಆರು ತಿಂಗಳೊಳಗೇ ನಾವು ಭೇಟಿಯಾಗಬಹುದು. ಇವತ್ತು ನಿನ್ನಿಂದ ಮೂರು ಪತ್ರಗಳು ಬಂದಿದ್ದು, ಅವುಗಳನ್ನು ನಾನು ಬಹಳ ಮೆಚ್ಚಿಕೊಂಡೆ. ಜರ್ಮನರ ಗುಂಡಿನ ದಾಳಿ ಆಗುತ್ತಿರುವ ಸಂದರ್ಭವೂ ನೀನು ಬರೆದ ಮೂರು ಪತ್ರ ನನ್ನ ಕೈಯಲ್ಲಿದ್ದವು. ಹ್ಞಾಂ, ಆ ಪತ್ರಗಳು ನನ್ನ ಧೈರ್ಯವನ್ನು ಹೆಚ್ಚಿಸಿದ್ದವು. ನಾವು ಅತ್ಯಂತ ಪ್ರಸಿದ್ಧ ಯುದ್ಧಭೂಮಿಯಲ್ಲಿದ್ದೇವೆ. ಜರ್ಮನರಿಗೆ ನಮ್ಮ ಎದುರು ನಿಲ್ಲಲೂ ಸಾಧ್ಯವಿಲ್ಲ. ಸೆನ್ಸಾರ್ ಈ ಪತ್ರವನ್ನು ನೋಡುವುದಿಲ್ಲ ಎಂಬ ಭರವಸೆಯಲ್ಲಿದ್ದೇನೆ. ಪತ್ರ ಬರೆಯುತ್ತಲೇ ಇರು. ನನಗೆ ಬರೆಯಲು ಸಾಧ್ಯವಾದಾಗಲೆಲ್ಲ ಬರೆಯುತ್ತಿರುತ್ತೇನೆ.

ಸದಾ ನಿನ್ನವನೇ,
ಹ್ಯಾರಿ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .