ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 

ಇತರ ವಿಭಾಗಗಳು
 
ಲಂಗರು
ಪಾಕ ಕಲೆಗೆ ಹೊಸ ಭಾಷ್ಯ ಬರೆದ ಬಾಣಸಿಗ
 

ಹೊಸತಾದ ಜಗತ್ತೊಂದನ್ನು ನಮ್ಮ ಮುಂದೆ ತೆರೆದಿಡುವ ಫೆರಾನ್ ಆಡ್ರಿಯಾ ಅವರ ಪಾಕ ಪ್ರಪಂಚ 'ಎಲ್ ಬುಲಿ'ಗೆ ತೆರಳಿದ ಟಿಎಸ್‌ಐನ ಅನು ಗುಲ್‌ಮೋಹರ್ ಆ ಪಾಕಲೋಕದ ವಿಭಿನ್ನತೆಯನ್ನು ಇಲ್ಲಿ ಪರಿಚಯಿಸಿದ್ದಾರೆ

ಒಬ್ಬ ಫ್ರೆಂಚ್ ಬಾಣಸಿಗ ಅಡುಗೆ ಮಾಡಿದನೆಂದರೆ ಅದು ನಳಪಾಕವೇ ಎನ್ನುವಷ್ಟರ ಮಟ್ಟಿಗಿದೆ ಪ್ರಸಿದ್ಧಿ. ಆದರೆ ನಳಪಾಕದಲ್ಲಿ ಎಲ್ಲರನ್ನೂ ಮೀರಿಸಿ ಜಗದ್ವಿಖ್ಯಾತನಾದವ ಮಾತ್ರ ಫ್ರಾನ್ಸ್ ನಿವಾಸಿಯಲ್ಲ, ನೆರೆ ದೇಶದ ಪ್ರಜೆ- ಫೆರಾನ್ ಆಡ್ರಿಯಾ. ಟೈಮ್ ಮ್ಯಾಗಜಿನ್‌ನ ಮುಖಪುಟದಲ್ಲಿ ಆಡ್ರಿಯಾ ಭಾವಚಿತ್ರ ಪ್ರಕಟವಾಗಿದ್ದಲ್ಲದೆ, ಈ ತಲೆಮಾರಿನ ಅತೀ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಈತನ ಹೆಸರಿತ್ತು. 'ದ ನ್ಯೂಯಾರ್ಕ್ ಟೈಮ್ಸ್' ಮ್ಯಾಗಜಿನ್ ಮುಖಪುಟ ಲೇಖನವಾದ ಕೀರ್ತಿಯೂ ಆಡ್ರಿಯಾ ಬೆನ್ನಿಗಿದೆ. ಪ್ರತಿ ವರ್ಷ ಸುಮಾರು 600 ನುರಿತ ಅಡುಗೆಯವರು, ರೆಸ್ಟೊರೆಂಟ್ ಮೂಲದವರು, ವಿಮರ್ಶಕರು ಮತ್ತು ಭೋಜನ ಪ್ರಿಯರು ಜೊತೆ ಸೇರಿ ಜಾಗತಿಕವಾಗಿ ಅತ್ಯುತ್ತಮವೆನಿಸಿರುವ 50 ರೆಸ್ಟೊರೆಂಟ್‌ಗಳನ್ನು ಗುರುತಿಸುತ್ತಾರೆ. ಆಡ್ರಿಯಾ ಅವರ ಮಾಲೀಕತ್ವದ 'ಮೂರು ಮಿಷಿಲಿನ್ ತಾರೆ'ಗಳನ್ನು ಪಡೆದಿರುವ ರೆಸ್ಟೊರೆಂಟ್ 'ಎಲ್ ಬುಲಿ' 2002ರಲ್ಲಿ ಈ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ಹಾಗೆಯೇ 2006, 2007 ಮತ್ತು 2008ರಲ್ಲೂ ಈ ಸ್ಥಾನ ಕಾಯ್ದುಕೊಂಡಿದೆ. ಸ್ವತಃ ಆಡ್ರಿಯಾ ಜಾಗತಿಕ ಮನ್ನಣೆ ಪಡೆದ ನುರಿತ ಬಾಣಸಿಗ. ಸಾಂಪ್ರದಾಯಿಕ ಅಡುಗೆಗಳಿಂದ ಭಿನ್ನವಾಗಿ ಅವರು ತಯಾರಿಸಿದ ಹುಳಿ ಐಸ್ ಕ್ರೀಂಗಳು, ಮೊಜರೆಲ್ಲಾ (ಇಟಲಿಯ ಒಂದು ಬಗೆಯ ಗಿಣ್ಣು), ಕೇವಿಯಾರ್ ಪಿಜ್ಜಾಗಳು ಮತ್ತು ಫೋಮ್‌ಗಳನ್ನು ಸವಿದು ಜಗತ್ತೇ ನಿಬ್ಬೆರಗಾಗಿತ್ತು.

ಒಂದು ಕಾಲದಲ್ಲಿ 'ಎಲ್‌ಬುಲಿ'ಗೆ ಪಕ್ಕವೇ ಇರುವ ಹಳ್ಳಿಯಲ್ಲಿ ನೆಲೆಸಿದ್ದ ಮಹಾನ್ ಚಿತ್ರಕಾರ ಪಿಕಾಸೊ ಜೊತೆಗೂ ಈ ಸ್ಪೇನ್ ಮೂಲದ ವ್ಯಕ್ತಿಯನ್ನು ಹೋಲಿಸಿ ನೋಡಲಾರಂಭಿಸಿದರು ಜನರು. ಪಿಕಾಸೋ ಕ್ಯೂಬಿಸಮ್‌ನ್ನು ಅನ್ವೇಷಿಸಿ ಕಲೆಗೆ ಹೊಸ ದಿಕ್ಕನ್ನು ಪರಿಚಯಿಸಿದರೆ, ಆಡ್ರಿಯಾ ಪಾಕಕಲೆಗೆ ಹೊಸ ಭಾಷ್ಯವನ್ನೇ ಬರೆದಿದ್ದಾರೆ.

ಫೆರಾನ್ ಆಡ್ರಿಯಾರನ್ನು ಉತ್ಕೃಷ್ಟ ದರ್ಜೆಯ ಪಾಕಪದ್ಧತಿಯ ಅಗ್ರ ದೇವತೆ ಎನ್ನಲಾಗಿದೆ. ಅಲ್ಲದೆ, ಆತನ ಭೋಜನ ದೇಗುಲಕ್ಕೆ ಭೇಟಿ ನೀಡುವ ಪಯಣ ಒಂದು ಪವಿತ್ರ ಯಾತ್ರೆಯಾಗಿದೆ! 'ಎಲ್‌ಬುಲಿ' ಸೇರಲು ದೀರ್ಘ ಪ್ರಯಾಣ ಮಾಡಲೇಬೇಕು. ಈ ರೆಸ್ಟೋರೆಂಟ್ ಇರುವ ನಗರ 'ರೋಸಸ್'ಗೆ ಪಯಣ ಬೆಳೆಸುವುದು ಸುಲಭ ಸಾಧ್ಯವೇನಲ್ಲ. ಕ್ಯಾಬ್ ಒಂದರಲ್ಲಿ ಕುಳಿತು ನನ್ನ ಪಯಣದ ಕೊನೆಯ ಹಂತದಲ್ಲಿದ್ದಂತೆ ನಿಬಿಡ ನಗರ ಜೀವನದಿಂದ ಬಹು ದೂರ ಬಂದ ಅನುಭವವಾಯಿತು. ಮಾನಸಿಕವಾಗಿ ನಾನು ನನ್ನ ನಂಬಿಕೆ ಮತ್ತು ಕಲ್ಪನೆಗಳಿಂದ ದೂರವಾಗಿ ಜೊತೆಯಲ್ಲೆ ಹೊಸ ಜಗತ್ತೊಂದರ ಆನ್ವೇಷಣೆಗೆ ಹೊರಟಿದ್ದೆ. ಜಗತ್ತಿನ ಉತ್ಕೃಷ್ಟ ರೆಸ್ಟೊರೆಂಟ್‌ನಲ್ಲಿ ನಾನು ನಿರೀಕ್ಷಿಸಿದ್ದ ಅತ್ಯಾಧುನಿಕ ಆಷಾಡಭೂತಿತನದ ಗಂಧವೂ ಇರಲಿಲ್ಲ. ಬದಲಾಗಿ ಆಹ್ಲಾದಕರ ಪರಿಸರವಿತ್ತು. ರೆಸ್ಟೋರೆಂಟ್‌ನ ಸುತ್ತ ಕಣ್ಣು ಹಾಯಿಸುತ್ತಲೇ 'ಗಾಲಾ ಮೋನ್‌ಜೋಯ್ ಕೊಲ್ಲಿ'ಯ ರೋಮಾಂಚಕ ದೃಶ್ಯ ನನ್ನನ್ನು ಸ್ವಾಗತಿಸಿತು.

ಹೊಸ ಹಾದಿ, ಹೊಸ ದಿಕ್ಕು ಮತ್ತು ಹೊಸ ವಿಷಯಗಳ ಅನ್ವೇಷಣೆ ಅತಿ ಅವಶ್ಯ. ಕೆಲ ವೃತ್ತಿಗಳಲ್ಲಿ ಮುಂದುವರಿಯಲು ಹಾದಿಯೇ ಇರುವುದಿಲ್ಲ. ಆದರೆ ಪಾಕ ಕಲೆಯಲ್ಲಿ ಹೊಸ ಬಗೆಯ ಅಡುಗೆ ವಿಧಾನಗಳನ್ನು ಕಂಡುಹಿಡಿಯುತ್ತಾ ಹೋಗಬಹುದು ಎನ್ನುತ್ತಾರೆ 46 ವರ್ಷ ಪ್ರಾಯದ 'ಎಲ್‌ಬುಲಿ'ಯ ಮುಖ್ಯ ಬಾಣಸಿಗ. ಆದರೆ ಇದು ಸರಳ ಹಾದಿಯೇನಲ್ಲ. ಸಂಶಯದ ತೂಗುಗತ್ತಿ ಯಾವಾಗಲೂ ಅವರ ಮೇಲೆ ತೂಗುತ್ತಲೇ ಇತ್ತು ಮತ್ತು ಇರುತ್ತದೆ. ಹಾಗೆಯೇ ಪ್ರತಿಸ್ಪರ್ಧಿಗಳು ತುಳಿಯಲು ಪ್ರಯತ್ನಿಸುತ್ತಲೇ ಇರುತ್ತಾರೆ. ಹಾಗಿದ್ದರೂ, ಸೃಜನಶೀಲ ಚಿಂತನೆಗಳ ಮೂಲಕ ತಮ್ಮದೇ ಪಾಕರತ್ನಗಳನ್ನು ಅನ್ವೇಷಿಸಲು ಎದೆಗಾರಿಕೆ ಮುಖ್ಯ ಎನ್ನುವುದನ್ನು ಫೆರಾನ್ ಒಪ್ಪಿಕೊಳ್ಳುವುದಿಲ್ಲ. ಇದು ಧೈರ್ಯದ ಪ್ರಶ್ನೆಯಲ್ಲ, ಬಾಣಸಿಗನ ಬಳಿ ಸಾಕಷ್ಟು ಸಮಯವಿರಬೇಕು. ಹಾಗಿದ್ದಲ್ಲಿ ಮಾತ್ರ ಆತ ಅಡುಗೆಯಲ್ಲಿ ಸೃಜನಶೀಲತೆ ತೋರಿಸಬಹುದು ಎನ್ನುತ್ತಾರೆ ಫೆರಾನ್.

ಅದು 1994. ಪಾಕಶಾಸ್ತ್ರವನ್ನು ಹೊಸ ದಿಕ್ಕಿಗೆ ತಿರುಗಿಸಿದ ವರ್ಷ. ಏಕೆಂದರೆ ಪಾಕಪದ್ಧತಿಗೆ ಹೊಸ ಭಾಷ್ಯವನ್ನು ಬರೆದ ಕಾಲವದು. ಫೆರಾನ್ ಮತ್ತು ಆತನ ಗೆಳೆಯರು ತಾವು ಅಡುಗೆಗೆ ಬಳಸುತ್ತಿರುವ ಕಚ್ಚಾ ವಸ್ತುಗಳ ನಿಜವಾದ ಅರ್ಥ ತಿಳಿದುಕೊಂಡದ್ದು ಇದೇ ವರ್ಷ. ಸಂಪೂರ್ಣವಾದ ಹೊಸ ತಂತ್ರಜ್ಞಾನ ಮತ್ತು ವಿನ್ಯಾಸಗಳಿಗಾಗಿ ಅವರು ತಳಹದಿ ಹಾಕಿದ್ದು ಆಗಲೇ. ಟೊಮೆಟೊಗಳು, ಬಟಾಣಿಗಳು ಮತ್ತು ಬೀಟ್‌ರೂಟ್‌ಗಳಂತಹ ತರಕಾರಿಗಳನ್ನು ಪರಂಪರಾಗತವಾಗಿ ಖಾರ-ಉಪ್ಪು ಬೆರೆಸಿ ತಯಾರಿಸುವ ಸಾಂಬಾರು ತಿನಿಸುಗಳಲ್ಲೇ ನೋಡುತ್ತಿದ್ದೆವು. ನಿಜ ಅರ್ಥದಲ್ಲಿ ಇವು ಸಿಹಿ ತಿನಿಸುಗಳಿಗೇ ಸೂಕ್ತ. ಹಾಗೆಯೇ ರಾಸ್ಬರೀಗಳು ಮತ್ತು ಫ್ಯಾಷನ್ ಫ್ರುಟ್‌ಗಳ ಆಮ್ಲದ ಗುಣಗಳಿಂದಾಗಿ ಅವು ಖಾರ-ಉಪ್ಪು ಬೆರೆಸುವ ಅಡುಗೆಗೆ ತಕ್ಕವು! ತಮ್ಮ ಉತ್ಕೃಷ್ಟ ದರ್ಜೆಯ ಪಾಕಗಳಲ್ಲಿ ಅವರು ಜೋಳಪುರಿಗಳು, ಆರಿವೋ (ಕೆನೆಯುಳ್ಳ ಚಾಕೊಲೇಟ್ ಬನ್ನು) ಕುಕೀಸ್, ಲಾಲಿಪಪ್‌ಗಳನ್ನು ಪರಿಚಯಿಸಿದರು. ಗಾಳಿಯನ್ನೂ ಉತ್ಪನ್ನವಾಗಿ ಬದಲಾಯಿಸಲು ಸಾಧ್ಯವೇ ಎಂಬ ಆಟವನ್ನೂ ಆಡಿದರು! ಈ ಕಲ್ಪನೆಗಳೇ ಅವರು ಫೋಮ್(ನೊರೆ) ಪಾಕಗಳನ್ನು ತಯಾರಿಸಲು ಹಾದಿಯಾಯಿತು. ಬಾದಾಮಿ, ಕೊತ್ತಂಬರಿಯಿಂದ ತೊಡಗಿ ತೆಂಗಿನಕಾಯಿವರೆಗೆ, ಬೀನ್ಸ್‌ಗಳಿಂದ ಆರಂಭಿಸಿ ಆಲೂಗಡ್ಡೆವರೆಗೆ ಅವರು ಸೈಫನ್ ಮತ್ತು ದ್ರವ ನೈಟ್ರೊಜನ್ ನೆರವಿನಿಂದ ಯಾವುದೇ ಖಾದ್ಯಗಳಲ್ಲಿ ಗಾಳಿಯ ಮೂಲಗುಣಗಳನ್ನು ಬಳಸಿಕೊಳ್ಳುವುದನ್ನು ಕಲಿತರು. ಹೀಗೆ ಫೋಮ್‌ಗಳನ್ನು ಸೃಷ್ಟಿಸುವ ಕಲ್ಪನೆಯನ್ನು ಈಗ ಜಗತ್ತಿನಾದ್ಯಂತ ನೂರಾರು ಬಾಣಸಿಗರು ಅಳವಡಿಸಿಕೊಂಡಿದ್ದಾರೆ. ಹೀಗೆ ಫೆರಾನ್ ಆಡ್ರಿಯಾ ದಿನೇ ದಿನೇ ಪ್ರಸಿದ್ಧರಾದರು. ಹಲವರ ಬೆಂಬಲ ಮತ್ತು ಸಹಕಾರಗಳಿಂದ ಆಡ್ರಿಯಾ 'ಮೊಲೆಕ್ಯುಲರ್ ಗ್ಯಾಸ್ಟ್ರೋನಮಿ'ಯ ಮೂಲಪ್ರವರ್ತಕರಾದರು.

ಆಡ್ರಿಯಾ ಅವರ ಪಾಕಶಾಲೆಯಲ್ಲಿ 'ಡೀಕನ್‌ಸ್ಟ್ರಕ್ಷನ್' (ಛಿದ್ರ ವಿಛಿದ್ರ) ಎಂಬ ಹೊಸ ಕಲ್ಪನೆಯೊಂದು ಉದಯವಾಯಿತು. ಇಲ್ಲಿ ಅವರು ಖಾದ್ಯವೊಂದನ್ನು ಅಧ್ಯಯನ ಮಾಡಿ ಅದರಲ್ಲಿ ಬಳಸುವ ಪ್ರತಿ ಕಚ್ಚಾವಸ್ತುಗಳನ್ನು ಪರಿಶೀಲಿಸುತ್ತಾರೆ. ನಂತರ ವೈಜ್ಞಾನಿಕವಾಗಿ ಅದಕ್ಕೆ ಹೊಸ ರೂಪ ಕೊಟ್ಟು ಅದ್ಭುತವಾಗಿ ಮತ್ತು ರುಚಿಕಟ್ಟಾಗಿ ಪುನರ್ ತಯಾರಿಸುತ್ತಾರೆ. ಇದರ ರುಚಿ ಸವಿದ ವ್ಯಕ್ತಿ ಮೂಲ ಕಚ್ಚಾವಸ್ತುಗಳನ್ನೂ ಪಟ್ಟನೆ ಗುರುತಿಸಬಹುದು! ಭಾರತೀಯ ಶಾಸ್ತ್ರೀಯ ಅಡುಗೆಯನ್ನು ಪುನರ್ ತಯಾರಿಸಿದಾಗ ಅವರು 'ಸಾಂಬಾರ್ ಐಸ್‌ಕ್ರೀಂ' ಎಂಬ ಹೊಸ ಖಾದ್ಯವನ್ನು ಅನ್ವೇಷಿಸಿದರು!

ಚಳಿಗಾಲದಲ್ಲಿ ಆರು ತಿಂಗಳವರೆಗೆ 'ಎಲ್‌ಬುಲಿ' ಬಾಗಿಲು ಮುಚ್ಚಿರುತ್ತದೆ. ಈ ಆರು ತಿಂಗಳಲ್ಲಿ ಖಾದ್ಯಗಳ ಅನ್ವೇಷಣೆ ಮತ್ತು ಹೊಸ ಮೆನು ಕಾರ್ಡ್‌ನ ರೂಪುರೇಷೆಗಳನ್ನು ಸಿದ್ಧಪಡಿಸುತ್ತಾರೆ. ಈ ಅವಧಿಯಲ್ಲಿ ವಿಶ್ವದಾದ್ಯಂತ ಪ್ರಯಾಣ ಬೆಳೆಸಿ ವಿವಿಧ ರೆಸ್ಟೋರೆಂಟ್‌ಗಳ ಖಾದ್ಯಗಳ ಸವಿ ಅನುಭವಿಸುತ್ತಾರೆ. ಹೌದು, ಪ್ರೇರಣೆ ಪಡೆಯಲು ಮತ್ತು ಛಿದ್ರ ಛಿದ್ರ ಮಾಡಲು ಹೊಸ ಖಾದ್ಯಗಳ ಅನ್ವೇಷಣೆಯಲ್ಲಿ! ಜಗತ್ತಿನ ಅತ್ಯುತ್ತಮ ರೆಸ್ಟೊರೆಂಟ್‌ಗಳು ಸ್ಪೇನ್‌ನಲ್ಲಿವೆ. ಆದರೆ ನನಗೆ ಜಪಾನಿ ತಿನಿಸುಗಳೆಂದರೂ ಇಷ್ಟವೇ. ಟೋಕಿಯೊದಲ್ಲಿ ಕೆಲ ಉತ್ಕೃಷ್ಟ ದರ್ಜೆಯ ರೆಸ್ಟೊರೆಂಟ್‌ಗಳಿವೆ ಎನ್ನುತ್ತಾರೆ ಫೆರಾನ್. ಇದೇ ಕಾರಣಕ್ಕಾಗಿ ಅವರು ತಯಾರಿಸುವ ಖಾದ್ಯಗಳೆಲ್ಲ ಮೀನು ಮತ್ತು ತರಕಾರಿಗಳಲ್ಲೇ ತಯಾರಾಗುತ್ತದೆ ವಿನಃ ಯುರೋಪಿಯನ್ ಕಚ್ಚಾವಸ್ತುಗಳಾದ ಮಾಂಸಾಹಾರಗಳಲ್ಲಿ ಹೊಸ ಪ್ರಯೋಗಗಳು ಬಂದಿಲ್ಲವೇನೋ ಎಂದು ನನಗೆ ಅಚ್ಚರಿಯಾಯಿತು. ಅಲ್ಲ, ನಾನು ಮಾಂಸಾಹಾರದಲ್ಲಿ ಹೊಸತನ ಕಂಡುಕೊಳ್ಳಲು ವಿಫಲನಾಗಿದ್ದೇನೆ ಎಂದರ್ಥ! ಇದರಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸಬಹುದು. ಆದರೆ ಹೊಸತನ ಕಷ್ಟ ಎನ್ನುತ್ತಾರೆ. ಸಸ್ಯಾಹಾರಿಗಳು ಇಲ್ಲಿಗೆ ಬಂದರೆ, ಒಟ್ಟು 30 ತಿನಿಸುಗಳುಳ್ಳ ಸಸ್ಯಾಹಾರಿ ಮೆನುವನ್ನು ತಯಾರಿಸುವೆ! ಮುಂದಿನ ಸ್ಪೇನ್ ಪ್ರವಾಸದಲ್ಲಿ 'ಎಲ್‌ಬುಲಿ'ಗೆ ಭೇಟಿ ನೀಡಬೇಕು ಎಂದುಕೊಳ್ಳುತ್ತಿರುವವರೆಲ್ಲಾ ಒಂದು ವಿಷಯವನ್ನು ತಿಳಿದುಕೊಳ್ಳಲೇಬೇಕು. ಒಂದು ಋತುವಿನಲ್ಲಿ ಈ ರೆಸ್ಟೊರೆಂಟ್‌ನ ಟೇಬಲ್ ಒಂದಕ್ಕೆ 8,00,000 ರೂ ಬೇಡಿಕೆ ಪಡೆದಿರುತ್ತದೆ. ಆದರೆ ಇಲ್ಲಿ 8,000 ಗ್ರಾಹಕರಿಗಷ್ಟೇ ಅವಕಾಶ.

ಆಡ್ರಿಯಾ ಮಾದರಿ ಖಾದ್ಯಗಳು ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರಲಿವೆ ಎಂದು ಮತ್ತೊಬ್ಬ ಸ್ಪಾನಿಷ್ ಬಾಣಸಿಗ ಸಂತಿ ಸಂತಮಾರಿಯ ಘೋಷಿಸಿದಾಗ ವಿವಾದ ಭುಗಿಲೆದ್ದಿತು. ಪರಂಪರಾಗತ ಪಾಕಕಲೆಗೆ ಅಂಟಿಕೊಂಡಿದ್ದ ಸಂತಮಾರಿಯ ಅವರು ಆಡ್ರಿಯಾ ತಮ್ಮ ಗ್ರಾಹಕರಿಗೆ ವಿಷವುಣಿಸುತ್ತಿದ್ದಾರೆ ಎಂದು ಗುಲ್ಲೆಬ್ಬಿಸಿದ್ದೇ ತಡ, ಆಡ್ರಿಯಾ ಪರ- ವಿರೋಧ ಚರ್ಚೆಗಳು ಕಾವೇರಿದ್ದವು. ಕೆಲವು ದಿನಗಳ ಹಿಂದೆ ಫೆರಾನ್ ಸ್ಪಾನಿಷ್ ಕಿರುತೆರೆಯಲ್ಲಿ ಕಾಣಿಸಿಕೊಂಡು, ಇವು ಆರೋಗ್ಯವಂತ ತಿನಿಸುಗಳು ಮತ್ತು 50 ವರ್ಷಗಳಿಂದ ಬಳಕೆಯಲ್ಲಿವೆ ಎಂದಿದ್ದರು.

ನಾನು ಕಳೆದ 30 ವರ್ಷಗಳಿಂದ ಟೀಕೆಗಳನ್ನು ಕೇಳುತ್ತಲೇ ಬಂದಿರುವೆ. ಆದರೆ ನಮ್ಮ ತಿನಿಸುಗಳ ಬಗ್ಗೆ ಹೆಚ್ಚು ವಿವರಗಳನ್ನು ತಿಳಿದುಕೊಳ್ಳುತ್ತಿದ್ದಂತೆಯೇ ತಪ್ಪು ಕಲ್ಪನೆ ಮರೆಯಾಗುತ್ತದೆ. ಸರಿಯಾಗಿ ತಿಳಿದುಕೊಳ್ಳದೆ ಇದ್ದವರು ನನ್ನನ್ನು ವಕ್ರ ಜಾತಿಯ ವ್ಯಕ್ತಿ ಎಂದುಕೊಳ್ಳಬಹುದು. ಆದರೆ ನಾನು ಒಬ್ಬ ಸಾಮಾನ್ಯ ಪ್ರಜೆ. ವಿಭಿನ್ನ ಕೆಲಸಗಳಿಗೆ ಸದಾ ಕೈ ಹಾಕುತ್ತೇನೆ. ಎನ್ನುತ್ತಾರೆ ಅವರು.

ಭಾರತದ 'ರಸ್ಮ್-ಎ-ರಸೋಯಿ' ಕಾರ್ಯಕ್ರಮ ನಿರೂಪಕ ಹಾಗೂ 'ದ ಪಾರ್ಕ್'ನ ಮುಖ್ಯ ಬಾಣಸಿಗ ನಿಖಿಲ್ ರಸ್ತೋಗಿ ಅವರು ಫೆರಾನ್ ಮತ್ತು ತಂಡದ ಮೇಲೆ ಮೆಚ್ಚುಗೆಯ ಸುರಿಮಳೆಗರೆಯುತ್ತಾರೆ. ಅಧ್ಯಯನ ಮತ್ತು ಸಂಶೋಧನೆ ಮೂಲಕ ಪಾಕಪದ್ಧತಿಗೆ ಸಾಕಷ್ಟು ಸೃಜನಶೀಲ ಕೊಡುಗೆಗಳನ್ನು ನೀಡಿದ್ದಾರೆ. ಅವರ ಅರ್ಧದಷ್ಟನ್ನು ಸಾಧನೆಯನ್ನೂ ಉಳಿದವರು ಮಾಡಿಲ್ಲ. ಅವರಲ್ಲಿ ಬೇಯಿಸಿದ ಕಲ್ಲಂಗಡಿ ಹಣ್ಣುಗಳಿವೆ. ಇನ್ಯಾರೂ ಈ ಬಗ್ಗೆ ಯೋಚಿಸುವುದೂ ಸಾಧ್ಯವಿಲ್ಲ! ಪ್ರಯೋಗ ಅಗತ್ಯ. ನಾವು ದಿನೇ ದಿನೇ ಅದೇ ಮಸಾಲಾಗಳು, ಅದೇ ತಡ್ಕಾಗಳಿಂದ ಬೋರು ಹೊಡೆಸಿಕೊಂಡಿರುತ್ತೇವೆ. ಹೊಸ ಪಾಕ ಪದ್ಧತಿಗಳನ್ನು ಅನ್ವೇಷಿಸಬೇಕಿದೆ ಎನ್ನುತ್ತಾರೆ ನಿಖಿಲ್ ರಸ್ತೋಗಿ. ಖಾದ್ಯಗಳಲ್ಲಿ ಮಹತ್ತರ ಬದಲಾವಣೆ ತರುವಲ್ಲಿ ಆಡ್ರಿಯಾ ಪಾತ್ರ ದೊಡ್ಡದು. ಅದ್ಭುತ ರುಚಿಯನ್ನು ಕೊಡಲು ಕಚ್ಚಾವಸ್ತುಗಳ ಜೊತೆ ಪ್ರಯೋಗ ಮಾಡುತ್ತಿದ್ದಾರೆ. ಜಗತ್ತಿನಾದ್ಯಂತ ಬಾಣಸಿಗರೆಲ್ಲಾ ಕಚ್ಚಾವಸ್ತುಗಳೆಡೆ ಭಿನ್ನ ದೃಷ್ಟಿಕೋನದಿಂದ ನೋಡಿ ಸೃಜನಶೀಲ ಭೋಜನ ತಯಾರಿಸಲು ಉತ್ತೇಜನ ನೀಡಿದ್ದಾರೆ ಎನ್ನುತ್ತಾರೆ ನವದೆಹಲಿಯ 'ದ ಕ್ಲಾರಿಡ್ಜಸ್'ನ ಕಾರ್ಯನಿರ್ವಾಹಕ ಸೌಸ್ ಬಾಣಸಿಗ ಅನುರಾಗ್ ಬಾಲಿ. ದೆಹಲಿ ನಿವಾಸಿಗಳು ಸೆವಿಲ್ಲಾದ ಸ್ಪಾನಿಷ್ ರೆಸ್ಟೊರೆಂಟ್ 'ದ ಕ್ಲಾರಿಡ್ಜಸ್'ನಲ್ಲಿ ಫೆರಾನ್ ಅವರ ಹೊಸ ಅನ್ವೇಷಣೆಗಳ ರುಚಿ ಸವಿಯಬಹುದು.

ಫೆರಾನ್ ಬಳಿ ಮಾತನಾಡುತ್ತಾ ಕುಳಿತಿದ್ದೆ. ಇನ್ನೇನು 20 ನಿಮಿಷಗಳಲ್ಲಿ 'ಎಲ್ ಬುಲಿ' ಸಂಜೆಯ ಗ್ರಾಹಕರಿಗಾಗಿ ಕದ ತೆರೆಯಲಿತ್ತು. ಅದ್ಭುತ ಪಾಕ ಪಯಣದ ಕೊನೆಯ ಹಂತಕ್ಕೆ ತಲುಪಿದ್ದ ನಾನು, ನಿಮ್ಮ ಅನ್ವೇಷಣೆ ಪರಿಪೂರ್ಣವಾಗುವುದು ಯಾವಾಗ ಎಂದು ಪ್ರಶ್ನಿಸಿದ್ದೆ. ಕೊನೆಯೇ ಇಲ್ಲ ಎನ್ನುವುದು ಅವರ ಉತ್ತರ. ನಾವು ತಂಡವಾಗಿ ಕೆಲಸ ಮಾಡುತ್ತೇವೆ. ನಾನೊಬ್ಬನೇ ಅಲ್ಲ, ಎಲ್ಲರೂ ಹೊಸ ಖಾದ್ಯದ ಅನ್ವೇಷಣೆಯಲ್ಲಿರುತ್ತಾರೆ ಎಂದಿದ್ದರು. ಬಿಸಿ ಬಿಸಿ ಐಸ್‌ಕ್ರೀಂಗಳು, ನೊರೆತುಂಬಿದ ಗೆಡ್ಡೆಯಂತಹ ಕ್ಯಾಪಚಿನೊಗಳು, ಚಾಕೊಲೇಟ್‌ನಿಂದ ಆವೃತವಾಗಿರುವ ಟೋಸ್ಟ್ ಮಾಡಿದ ಜೋಳಪುರಿಗಳು, ಹುರಿದ ಸಕ್ಕರೆಯ ಕವಚವಿರುವ ಮೊಟ್ಟೆಯ ಹಳದಿ ಲೋಳೆಗಳು, ತರಕಾರಿಗಳಿಂದ ತಯಾರಿಸಿದ ಲಾಲಿಪಪ್‌ಗಳು... ಇಂತಹ ಅನೇಕ ಚಾತುರ್ಯದಿಂದ ಸೃಷ್ಟಿಸಿದ ಖಾದ್ಯಗಳು 'ಎಲ್‌ಬುಲಿ'ಯ ಅಡುಗೆಮನೆಯಿಂದ ದೀರ್ಘ ಕಾಲದವರೆಗೆ ಬರುತ್ತಲೇ ಇರಬಹುದು ಎಂದುಕೊಂಡೆ.

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .