|
| ಥಾಮಸ್ ಫ್ರೀಡ್ಮನ್
|
ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ,
'ನ್ಯೂಯಾರ್ಕ್ ಟೈಮ್ಸ್' ಮಾಜಿ ಪತ್ರಕರ್ತ |
ಎರಡು ವರ್ಷಗಳ ಹಿಂದೆ ಅಮೆರಿಕ ತೈಲ ವ್ಯಸನಿ
ರಾಷ್ಟ್ರವಾಗಿದೆ ಎಂದು ಅಧ್ಯಕ್ಷ ಬುಷ್ ನುಡಿದಿದ್ದರು.
ಈ ಕುರಿತು ತಾನೇನಾದರೂ ಕ್ರಮ ಕೈಗೊಳ್ಳುವುದಾಗಿಯೂ
ಅವರು ಹೇಳಿದ್ದರು.
ಈಗ ಬುಷ್ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.
ಈಗ ನಮ್ಮ ಬಳಿ ಬುಷ್ ಅವರ ಹೊಚ್ಚ ಹೊಸ ಇಂಧನ ನೀತಿ
ಇದೆ.
ಹೌದು,
'ತೈಲವನ್ನು
ಮತ್ತಷ್ಟು ಅವಲಂಬಿಸಿ'
ಎನ್ನುವ ಇಂಧನ ನೀತಿ!
ಇದು ಮೇಲ್ನೋಟಕ್ಕೆ ಕಂಡಷ್ಟು ಸುಲಭವಲ್ಲ.
ನಮ್ಮ ಪ್ರಮುಖ ತೈಲ ಪೂರೈಕೆ ರಾಷ್ಟ್ರವಾದ ಸೌದಿ
ಅರೇಬಿಯಾದ ಸಹಕಾರದಿಂದ ಇಂಧನ ಪೂರೈಕೆಯನ್ನು ಸ್ವಲ್ಪ ದಿನಗಳವರೆಗೆ
ಹೆಚ್ಚಿಸಿಕೊಂಡು,
ಆ ಮೂಲಕ ಬದಲಿ ಇಂಧನ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ
ಮಾಡುವುದು.
ಇದೇ ಸಮಯದಲ್ಲಿ ವಿದೇಶಿ ಹಾಗೂ ಆರ್ಕಟಿಕ್ ರಾಷ್ಟ್ರೀಯ
ವನ್ಯಜೀವಿ ಆಶ್ರಯತಾಣದಲ್ಲಿ ತೈಲ ಉತ್ಖನನಕ್ಕೆ ಅವಕಾಶ ನೀಡುವಂತೆ ಕಾಂಗ್ರೆಸ್
ಮೇಲೆ ಒತ್ತಡ ಹೇರಲು ಪ್ರಯತ್ನಿಸಬಹುದು.
'ನಮಗೆಲ್ಲರಿಗೂ ಇನ್ನಷ್ಟು ತೈಲದ ಅವಶ್ಯಕತೆ ಇದೆ ಎಂಬುದು ನಿಮಗೆ ತಿಳಿದಿದೆ.
ಮುಂದಿನ ವರ್ಷದಿಂದ ನಾವೆಲ್ಲರೂ ಇಂಧನ ದಕ್ಷತೆಯ
ಹಾದಿಯಲ್ಲಿ ದಿಟ್ಟ ಹೆಜ್ಜೆ ಹಾಕುತ್ತೇವೆ ಎಂದು ನಾನು ಮಾತು ಕೊಡುತ್ತೇನೆ.
ಅಲ್ಲದೆ ನನ್ನ ಅಧ್ಯಕ್ಷೀಯ ಗ್ರಂಥಾಲಯದಲ್ಲೂ ಒಂದು
ಗಾಳಿಯಂತ್ರವನ್ನು ಅಳವಡಿಸುತ್ತೇನೆ.
ಆದರೆ ಈಗ ದಯವಿಟ್ಟು ತೈಲ ನಿಕ್ಷೇಪದಲ್ಲಿ ನನಗೆ
ಇನ್ನೊಂದಿಷ್ಟು ಪಾಲು ಕೊಡಿ.
ವಿದೇಶದಲ್ಲಿ ದೊರೆಯುವ ರಸದ್ರವ್ಯದಲ್ಲಿ
ಮತ್ತೊಂದಿಷ್ಟನ್ನು ನನಗೆ ನೀಡಿ'
ಎಂದು ತೈಲ ಅವಲಂಬಿತರ ಮಹಾನ್ ಗುರುವಿನಂತಿರುವ ಬುಷ್ ಗೋಗರೆಯುತ್ತಾರೆ.
ಇಂಧನ ಯೋಜನೆಗಾಗಿ ನೀಡುತ್ತಿರುವ ಈ ಕಪಟ ಹಾಗೂ
ಅತ್ಯಂತ ಹೀನಾಯ ಕ್ಷಮಾಪಣೆಯನ್ನು ಮಾತುಗಳಲ್ಲಿ ವಿವರಿಸಲು ನನಗೆ ಪದಗಳೇ
ಸಿಗುತ್ತಿಲ್ಲ.
ಆದರೂ ಎಲ್ಲವೂ ಸರಿಯಾಗುತ್ತದೆ ಎನ್ನುತ್ತಾ ಈ ತೈಲ ವ್ಯಸನ
ಒಪ್ಪಂದಕ್ಕೆ ಸಹಿ ಹಾಕುವ ದಿನ ನಿಗದಿ ಮಾಡುವ ಧಾರ್ಷ್ಟ್ಯವೂ ಅಧ್ಯಕ್ಷರಿಗಿದೆ.
'ಹಿಂದೆ ಈ
ನೀತಿಗಳನ್ನು ಕೆಲವು ಡೆಮಾಕ್ರಟ್ ನಾಯಕರು ವಿರೋಧಿಸಿದ್ದರು ಎಂಬುದನ್ನು ನಾನು
ಬಲ್ಲೆ.
ಆದರೆ ಈಗ ಅವರ ವಿರೋಧ ಗ್ಯಾಸ್ ಬೆಲೆಯನ್ನು ದಾಖಲೆಯ
ಮಟ್ಟಕ್ಕೆ ಏರಿಸಿದೆ.
ಈ ಕಾರಣಕ್ಕಾಗಿ ಅವರ ನಿರ್ಧಾರಗಳನ್ನು ಮರುಪರಿಶೀಲಿಸಲು
ನಾನು ಕೇಳಿಕೊಳ್ಳುತ್ತೇನೆ.
ಒಂದು ವೇಳೆ ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೆ
ಜುಲೈ ನಾಲ್ಕರ ಸಂಸತ್ ವಿರಾಮ ಕಾಲಾವಧಿಯಲ್ಲಿ ಕಾಂಗ್ರೆಸ್ ನಾಯಕರೆಲ್ಲರೂ
ವಿಶ್ರಾಂತಿಗೆ ಹೊರಟು ನಿಂತರೆ,
'ಗ್ಯಾಲನ್‌ಗೆ
ನಾಲ್ಕು ಡಾಲರ್ ತಲುಪಿರುವ ಗ್ಯಾಸೋಲಿನ್‌ನ ಬೆಲೆ ನೋಡಿಯೂ ತಮ್ಮ ಧೋರಣೆ
ಬದಲಾಯಿಸಲು ಕಾಂಗ್ರೆಸ್ ನಾಯಕರಿಗೆ ಉತ್ತೇಜನ ಸಿಗಲಿಲ್ಲವೇಕೆ'
ಎಂದು ಅವರು ವಿವರಣೆ ನೀಡಬೇಕಾಗುತ್ತದೆ'
ಎಂದು ಅಧ್ಯಕ್ಷರು ಕಿಡಿ ಕಾರಿದ್ದಾರೆ.
ಆರು ವರ್ಷಗಳ ಕಾಲ ಗ್ಯಾಸ್ ಅನ್ನು ಮನಬಂದಂತೆ
ಪೋಲು ಮಾಡಿ ಮೈಲೇಜ್ ಗುಣಮಟ್ಟದ ಬಗ್ಗೆ ಗಮನ ಹರಿಸದವರ ವಿರುದ್ಧ ಯಾವುದೇ
ಗಂಭೀರ ಕ್ರಮ ಕೈಗೊಳ್ಳದ ಅಧ್ಯಕ್ಷರು ಉದುರಿಸುವ ನುಡಿಮುತ್ತು ಇದು.
ಆದರೆ ಇವೆಲ್ಲಕ್ಕಿಂತ ಹೆಚ್ಚಾಗಿ ಈ ಅಂತಿಮ ಗಡುವು
ನೀಡುತ್ತಿರುವ ಅಧ್ಯಕ್ಷರು,
ಕಾಂಗ್ರೆಸ್‌ನ ಕಾಲಬುಡದಲ್ಲಿ ಸುಮಾರು ಒಂದು
ವರ್ಷಗಳ ಕಾಲ ಸುಮ್ಮನೆ ಬಿದ್ದುಕೊಂಡಿದ್ದ ಇಂಧನ ದಕ್ಷತೆಯ ಶಾಸನವನ್ನು ಜಾರಿಗೆ
ತರಲು ಒಂದು ಸಣ್ಣ ಪ್ರಯತ್ನವನ್ನೂ ಮಾಡಿರಲಿಲ್ಲ.
ಒಂದು ವೇಳೆ ಅಂದು ಆ ಶಾಸನ ಜಾರಿಗೆ ಬಂದಿದ್ದರೆ
ಅದು ಇಂದು ಅಮೆರಿಕದ ಇಂಧನ ಬೇಡಿಕೆಯ ಮೇಲೆ ಸಕಾರಾತ್ಮಕ ಪರಿಣಾಮ
ಬೀರುತ್ತಿತ್ತು.
ಅಷ್ಟೇ ಅಲ್ಲ,
ವರುಷಗಳ ನಂತರ ಬರಬೇಕಾಗಿರುವ ವಿದೇಶಿ ಇಂಧನಕ್ಕಾಗಿ
ಕಾಯುವ ಅಗತ್ಯವಿರಲಿಲ್ಲ.
ಆ ಶಾಸನದ ಹೆಸರು ಹೆಚ್‌ಆರ್
6049-'ನವೀಕರಿಸಬಹುದಾದ
ಇಂಧನ ಹಾಗೂ ಉದ್ಯೋಗ ಸೃಷ್ಟಿ ಕಾಯ್ದೆ
2008'.
ಈ ಶಾಸನ ಸೌರ ಶಕ್ತಿಯನ್ನು ಅಳವಡಿಸಿಕೊಂಡ
ಉದ್ಯಮಗಳ ಮೇಲಿನ ಹೂಡಿಕೆ ತೆರಿಗೆ ವಿನಾಯಿತಿಯನ್ನು ಎಂಟು ವರ್ಷಗಳಿಗೆ
ವಿಸ್ತರಿಸುತ್ತದೆ.
ಹಾಗೆಯೇ ಗಾಳಿ ಯಂತ್ರಗಳನ್ನು ಉಪಯೋಗಿಸಿಕೊಂಡು
ಕಾರ್ಯನಿರ್ವಹಿಸುವ ಉದ್ಯಮಗಳ ಉತ್ಪನ್ನ ತೆರಿಗೆ ವಿನಾಯಿತಿಯನ್ನು ಒಂದು
ವರ್ಷಕ್ಕೆ ವಿಸ್ತರಿಸಲಿದೆ.
ಜಿಯೋಥರ್ಮಲ್,
ಅಲೆಗಳ ಶಕ್ತಿ ಮತ್ತು ಇತರ ನವೀಕರಿಸಬಹುದಾದ ಶಕ್ತಿ
ಮೂಲಗಳನ್ನು ಬಳಸಿಕೊಳ್ಳುವ ಉದ್ಯಮಗಳು ಮೂರು ವರ್ಷಗಳ ಉತ್ಪಾದನಾ ತೆರಿಗೆ
ವಿನಾಯಿತಿ ಪಡೆಯುತ್ತವೆ.
ನವೀಕರಿಸಬಹುದಾದ ಇಂಧನ ಮೂಲಗಳ ಮೇಲಿನ
ನಿರ್ಣಾಯಕ ತೆರಿಗೆ ವಿನಾಯಿತಿ ಈ ವಿತ್ತ ವರ್ಷದ ಅಂತ್ಯಕ್ಕೆ ಸಮಾಪ್ತಿಯಾಗಲಿದೆ.
ಹಾಗಾದಲ್ಲಿ ಬಿಲಿಯನ್‌ಗಳಷ್ಟು ಡಾಲರ್‌ಗಳು
ಹೂಡಿಕೆಯಾಗದೆ ವ್ಯರ್ಥವಾಗಬಹುದು.
ಈಗ ಜನರಿಗೆ ಬೇಕಾಗಿರುವುದೇನೆಂದರೆ,
ಸೌರ ಫಲಕ ಹಾಗೂ ಗಾಳಿ ಯಂತ್ರಗಳನ್ನು
ಅಳವಡಿಸಿಕೊಳ್ಳುವ ಹಲವಾರು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುವಂತಹ ದೊಡ್ಡ
ಅಮೆರಿಕನ್ ಮಾರುಕಟ್ಟೆ.
ಉತ್ಪಾದಕರ ಈ ಮಾದರಿಯ ಪ್ರವೃತ್ತಿ ಹೆಚ್ಚಾದಂತೆ ಈ
ತಂತ್ರಜ್ಞಾನದಲ್ಲಿರುವ ಲೋಪದೋಷಗಳು ನಿವಾರಣೆಯಾಗುತ್ತವೆ.
ತಂತ್ರಜ್ಞಾನ ಇನ್ನಷ್ಟು ಅಗ್ಗವಾಗುತ್ತದೆ.
ಮಾತ್ರವಲ್ಲ,
ಯಾವುದೇ ಸಹಾಯಧನವಿಲ್ಲದೆ,
ಬದಲಿ ಇಂಧನ ಮೂಲಗಳಿಗೆ,
ಕಲ್ಲಿದ್ದಲು,
ತೈಲ ಹಾಗೂ ಅಣುಶಕ್ತಿಗಳೊಂದಿಗೆ ನೇರವಾಗಿ
ಸ್ಪರ್ಧಿಸಲು ಸಾಧ್ಯವಾಗುತ್ತದೆ.
ಪ್ರಾಯಶಃ ಇದನ್ನು ತಡೆಗಟ್ಟಬೇಕೆಂದೇ ರಿಪಬ್ಲಿಕನ್
ಪಕ್ಷ ಪ್ರಯತ್ನಿಸುತ್ತಿರುವಂತಿದೆ.
ಅದಕ್ಕಾಗಿಯೇ ಸೆನೆಟ್ ರಿಪಬ್ಲಿಕನ್ನರು ಜಾನ್
ಮೆಕೇನ್ ಜೊತೆಗೂಡಿ ಆರು ಬಾರಿ ಈ ತೆರಿಗೆ ವಿನಾಯಿತಿಯನ್ನು ಪರಿಷ್ಕರಿಸಿ
ಮತ್ತೆ ಜಾರಿಗೆ ತರುವುದನ್ನು ತಪ್ಪಿಸಿದರು ಎಂಬುದನ್ನು ಹೇಳಲು ನಾನು
ವಿಷಾದಿಸುತ್ತೇನೆ.
ನಮ್ಮ ಭವಿಷ್ಯ ಇರುವುದು ತೈಲದಲ್ಲಲ್ಲ.
ಒಬ್ಬ ದಕ್ಷ ಅಧ್ಯಕ್ಷ ವಿದೇಶಿ ತೈಲ ಶೋಧನೆಗೆ
ಅನುಮತಿ ನೀಡುವಂತೆ ಕಾಂಗ್ರೆಸ್‌ನ್ನು ಒತ್ತಾಯಿಸುವುದಿಲ್ಲ.
ಬದಲಿಗೆ ದೇಶದ ಜನತೆಗೆ ಇದಕ್ಕಿಂತಲೂ ಮಹಾನ್
ಸತ್ಯವೊಂದನ್ನು ಹೇಳುತ್ತಾರೆ;
'ತೈಲ
ನಮ್ಮ ಪರಿಸರ ಮತ್ತು ಭೌಗೋಳಿಕ-
ರಾಜಕೀಯ ಗತಿ ಸ್ಥಿತಿಯನ್ನು ಕಲುಷಿತಗೊಳಿಸುತ್ತಿದೆ.
ಹಾಗಾಗಿ ನಾವು ತೈಲ ವ್ಯಸನವನ್ನು ತೊರೆಯಲಿದ್ದೇವೆ:
ನಾವು ಒಂದು ಗ್ಯಾಲನ್ ಗ್ಯಾಸೋಲಿನ್‌ಗೆ
4.50
ಡಾಲರ್ ಮತ್ತು ತೈಲಕ್ಕೆ ಬ್ಯಾರಲ್‌ಗೆ
100 ಡಾಲರ್
ಮೂಲ ಬೆಲೆಯನ್ನು ನಿಗದಿ ಮಾಡಲಿದ್ದೇವೆ.
ಈ ಮೂಲ ಬೆಲೆ ನವೀಕರಿಸಬಹುದಾದ ಇಂಧನ ಮೂಲಗಳ ಮೇಲೆ
ಅಗಾಧ ಪ್ರಮಾಣದ ಹೂಡಿಕೆಯನ್ನು ಹುಟ್ಟು ಹಾಕಲಿದೆ.
ವಿಶೇಷವಾಗಿ ಗಾಳಿ,
ಸೌರಫಲಕ ಹಾಗೂ ಸೌರ ಶಾಖದ ಮೇಲೆ ಹೂಡಿಕೆ ಹರಿದು
ಬರಲಿದೆ.
ಇಂಧನ ಸಶಕ್ತತೆಯನ್ನು ಗಣನೀಯವಾಗಿ ಹೆಚ್ಚಿಸಲು,
ಸಂರಕ್ಷಣೆಯನ್ನು ಹೊಸ ಮಜಲಿಗೆ ತಲಪಿಸಲು ಹಾಗೂ ಅಣು
ಶಕ್ತಿಯ ವೃದ್ಧಿಗೆ ಹಲವಾರು ಕ್ಷಿಪ್ರ ಯೋಜನೆಗಳನ್ನು ಹಾಕಿ ಕೊಳ್ಳಲಿದ್ದೇವೆ.
ಈ ಸಾಹಸದಲ್ಲಿ ಪ್ರತಿಯೊಬ್ಬ ಡೆಮಾಕ್ರಟ್ ಹಾಗೂ
ರಿಪಬ್ಲಿಕನ್‌ಗಳು ಕೂಡಾ ನನ್ನೊಡನೆ ಕೈಜೋಡಿಸಬೇಕೆಂದು ನಾನು ಬಯಸುತ್ತೇನೆ.'
ಇದು ಒಬ್ಬ ನಿಜವಾದ ಅಧ್ಯಕ್ಷ ಮಾಡಬಹುದಾದ
ಅದ್ಭುತ ಕೆಲಸ.
ನಮ್ಮ ತೈಲ ವ್ಯಸನವನ್ನು ಬಿಡಿಸುವುದಕ್ಕಾಗಿ ಆತ
ಅತ್ಯುತ್ತಮ ಕಾರ್ಯತಂತ್ರಗಳನ್ನು ನೀಡುತ್ತಾನೆ ಹಾಗೂ ಇಂಧನ ದಕ್ಷತೆಯನ್ನು
ಸಾಧಿಸಲು ದ್ವಿಪಕ್ಷೀಯ ಸಹಯೋಗವನ್ನು ರಚಿಸುತ್ತಾನೆ.
ಅದು ಬಿಟ್ಟು,
ತನ್ನ ಅಧಿಕಾರಾವಧಿಯ ಕಡೆಯ ದಿನಗಳಲ್ಲಿ ಆತ
ಖಂಡಿತವಾಗಿಯೂ 'ಜುಲೈ
ನಾಲ್ಕರ ಸಂಸತ್ ವಿರಾಮಕ್ಕೆ ಮೊದಲು ವಿದೇಶಿ ತೈಲ ಶೋಧಕ್ಕೆ ಅನುಮತಿ ನೀಡದ
ಡೆಮಾಕ್ರಟ್‌ಗಳೇ ಗ್ಯಾಸ್ ಬೆಲೆ ಗ್ಯಾಲನ್‌ಗೆ ನಾಲ್ಕು ಡಾಲರ್ ತಲುಪಲು ಕಾರಣ'
ಎಂದು ಬೆದರಿಕೆ ಹಾಕುತ್ತಿರಲಿಲ್ಲ.
ಅದು ನಿಜಕ್ಕೂ ಕುಂಟು ನೆಪ.
ನಮ್ಮ ಸ್ವಾತಂತ್ರ್ಯ ದಿನದ ಸಂಭ್ರಮ ಸವಿಯುವ
ಕಾಲಕ್ಕೆ ಇದನ್ನು ಅತ್ಯಂತ ನಿಕೃಷ್ಟ ಇಂಧನ ನೀತಿ ಎಂದು ಹಳಿಯಬೇಕಾದ್ದು ನಮ್ಮ
ದುರದೃಷ್ಟ.
ಟಿಎಸ್‌ಐ
|