ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಪುಟ ಲೇಖನ
~: ಭಾರತದ ಕುಖ್ಯಾತ ಜೈಲುಹಕ್ಕಿಗಳು:~
ಸಮೂಹ ಸನ್ನಿಗೆ ಬೇಕಿದೆ ಮದ್ದು
 

ಹಣ ಬಲ ಮತ್ತು ದೇಹ ಬಲ ಇರುವವರು ಜೈಲುಗಳನ್ನು ಅವರದ್ದೇ ಸಾಮ್ರಾಜ್ಯದಂತೆ ಆಳುತ್ತಾರೆ

ಡಾ.ಸಿ.ಆರ್. ಚಂದ್ರಶೇಖರ್

ಮನಃಶಾಸ್ತ್ರಜ್ಞರು, ನಿಮ್ಹಾನ್ಸ್

ಆತ್ಮಹತ್ಯೆ- ಅದು ಯಾರದೇ ಆಗಿರಲಿ ಅಲ್ಲಿ ಖಿನ್ನತೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಆತ್ಮಹತ್ಯೆಗೆ ಪ್ರೇರೇಪಿಸುವ ಇನ್ನೊಂದು ಅಂಶವೆಂದರೆ ಜೀವನವನ್ನು ಎದುರಿಸುವ ಕೌಶಲ್ಯದ ಕೊರತೆ. ನಿರ್ವಹಣಾ ಕೌಶಲ್ಯದ ಕೊರತೆ ಸರಳ ಸಮಸ್ಯೆಗಳಿಗೂ ಪರಿಹಾರ ಹುಡುಕುವುದನ್ನು ಕಷ್ಟಸಾಧ್ಯವಾಗಿಸುತ್ತದೆ. ಆ ಪರಿಹಾರವಿಲ್ಲದ ಸಮಸ್ಯೆಗಳು ಬೆಂಬಿಡದೇ ಕಾಡಿ ಕೊನೆಗೆ ಖಿನ್ನತೆಯ ಆಗಮನಕ್ಕೆ ನಾಂದಿ ಹಾಡುತ್ತದೆ. ಇವೆರಡೂ ಸೇರಿ ವ್ಯಕ್ತಿಯೊಬ್ಬನ ಜೀವನದಲ್ಲಿ ಚೆಲ್ಲಾಟವನ್ನೇ ಆಡಬಲ್ಲವು. ಎದುರಾದ ಸಮಸ್ಯೆಗಳಿಗೆ ಪರಿಹಾರ ಕಾಣದಾಗ ಯಾರೇ ಆಗಿರಲಿ ಆತ ಹುಡುಕುವುದು ಸುಲಭ ಪರಿಹಾರ ಮಾರ್ಗವನ್ನು. ಹೆಚ್ಚಿನ ಸಂದರ್ಭಗಳಲ್ಲಿ ಆ ಸುಲಭ ಪರಿಹಾರ ಆತ್ಮಹತ್ಯೆಯ ರೂಪು ತಾಳುವುದು ವಿಪರ್ಯಾಸ.

ಒಂದು ಗುಟುಕು ವಿಷದಲ್ಲೋ, ಒಂದು ಹಿಡಿ ನಿದ್ದೆ ಮಾತ್ರೆಯಲ್ಲೋ ಅಥವಾ ಒಂದು ಮಾರು ಹಗ್ಗದ ತುದಿಯಲ್ಲೋ ಜೀವನದ ಜಂಜಡಗಳಿಗೆ ಕೊನೆ ಹಾಡುವುದು ಇಂದು ನಿನ್ನೆಯ ಪರಿಪಾಠವಲ್ಲ. ಅದು ಈ ಹಿಂದೆಯೂ ಇತ್ತು. ಆದರೆ ಆ ಭಾವನೆ ಇತ್ತೀಚೆಗೆ ರೈತರಲ್ಲೂ ಕಂಡುಬರುತ್ತಿವೆ ಎಂಬುದು ಖೇದಕರ.

ಅನ್ನದಾತನನ್ನು ವಿಷವುಣ್ಣುವಂತೆ ಮಾಡಿದ್ದೂ ಸುಲಭ ಪರಿಹಾರದ ಸೋಗಿನ ಆತ್ಮಹತ್ಯೆಯೇ. ವಿಪರೀತ ಆರ್ಥಿಕ ಮುಗ್ಗಟ್ಟು, ಸಾಲ ಭಾದೆ, ಸಂಸಾರದ ಖರ್ಚು ವೆಚ್ಚಗಳು, ಕೈ ಕೊಟ್ಟ ಕೃಷಿ, ರಸಗೊಬ್ಬರದ ಅಭಾವ, ಅಕಾಲಿಕ ಮಳೆ, ಬೆಳೆದ ಫಸಲಿಗೆ ಸೂಕ್ತ ಬೆಲೆ ಸಿಗದೇ ಇರುವುದು... ಒಂದಾದ ಮೇಲೆ ಒಂದರಂತೆ ಅಪ್ಪಳಿಸುವ ಸಮಸ್ಯೆಗಳು ಎಂಥಾ ಒತ್ತಡ ಬೀರುತ್ತದೆ ಎಂಬುದನ್ನು ಮತ್ತೊಮ್ಮೆ ಸವಿವರವಾಗಿ ಹೇಳಬೇಕಾದ ಅವಶ್ಯಕತೆ ಇಲ್ಲ. ದೇಶದ ಬೆನ್ನೆಲುಬಾಗಿರುವ ರೈತನೇ ಈ ರೀತಿಯ 'ಸುಲಭ ಪರಿಹಾರ'ದ ಮೊರೆ ಹೋದರೆ!? ಆತ್ಮಹತ್ಯೆ ಎಂಬುದು ಎಲ್ಲಾ ಸಮಸ್ಯೆಗಳಿಗೂ ಪರಿಹಾರವಲ್ಲವಲ್ಲಾ? ವರ್ತಮಾನವನ್ನು ಎದುರಿಸಲು ಸಾಧ್ಯವಿಲ್ಲದೆ ಓಡಿಹೋಗುವ ಹೇಡಿತನ ಅದು.

ಹಿಂದೆ ಯಾವಾಗಲಾದರೂ ಒಮ್ಮೆ ಕಿವಿಗೆ ಬೀಳುತ್ತಿದ್ದ ರೈತ ಆತ್ಮಹತ್ಯೆ ಈಗ ಪ್ರತಿ ದಿನದ ಸುದ್ದಿ. ಸಂಖ್ಯೆಯಲ್ಲೂ ಭಾರಿ ಹೆಚ್ಚಳ! ಇಂದು ರೈತರ ಆತ್ಮಹತ್ಯೆ ಕೇವಲ ಆತ್ಮಹತ್ಯೆಯಾಗಿ ಉಳಿದಿಲ್ಲ. ಅದಕ್ಕೊಂದು ಸಮೂಹ ಸನ್ನಿಯ ರೂಪು ಬಂದಿದೆ. ಯಾವುದೋ ಹಳ್ಳಿಯ ಮೂಲೆಯಲ್ಲಿ ಒಬ್ಬ ರೈತ ನೇಣಿಗೆ ಶರಣಾದರೆ ಮಾರನೇ ದಿನ ಮತ್ತಿನ್ಯಾವುದೋ ಹಳ್ಳಿಯ ರೈತನೊಬ್ಬ ವಿಷ ಸೇವಿಸಬಹುದು. ಈ ಎರಡು ಆತ್ಮಹತ್ಯೆಯ ಸುದ್ದಿ ಮತ್ಯಾವುದೋ ಊರಿನ ರೈತನ ಸಾವಿಗೆ ಪ್ರೇರಣೆಯಾಗಬಹುದು. ಮಾಧ್ಯಮಗಳಿಂದ ಮೂಲೆ ಮೂಲೆಗೂ ಸುದ್ದಿ ಕ್ಷಣ ಮಾತ್ರದಲ್ಲಿ ತಲುಪುವ ಹಿನ್ನೆಲೆಯಲ್ಲಿ ರೈತರ ಆತ್ಮಹತ್ಯೆ ಎಂಬುದು ಈಗಿನ 'ಟ್ರೆಂಡ್' ಆಗಿ ಬದಲಾಗಿದೆ ಎಂದರೆ ತಪ್ಪಿಲ್ಲ. ಈ ಟ್ರೆಂಡ್ ಅದೆಷ್ಟು ಅಪಾಯಕಾರಿ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಆತ್ಮಹತ್ಯೆ ಮಾಡಿಕೊಳ್ಳುವ ರೈತ ತನ್ನ ಸ್ವಂತ ಸಮಸ್ಯೆಗಳಿಗೆ ಇತಿಶ್ರೀ ಹಾಡಬಹುದು. ಆದರೆ ಉಳಿದವರ ಪಾಡು? ಕುಟುಂಬದ ಆಧಾರ ಸ್ತಂಭವಾಗಿದ್ದವನಿಗೇ ಪರಿಹರಿಸಲು ಸಾಧ್ಯವಾಗದ ಸಮಸ್ಯೆಗಳನ್ನು ಹೆಂಡತಿ ಮಕ್ಕಳು ನಿಭಾಯಿಸಬಲ್ಲರೇ? ಆತ್ಮಹತ್ಯೆಯ ನಂತರದ ಸಮಸ್ಯೆಗಳಿಗೆ ಪರಿಹಾರ ಹೇಳುವವರು ಯಾರು? ಒಂದು ಸಮಸ್ಯೆಯ ಪರಿಹಾರಕ್ಕಾಗಿ ಮಾಡಿಕೊಂಡ ಆತ್ಮಹತ್ಯೆ ಹಲವು ಸಮಸ್ಯೆಗಳಿಗೆ ನಾಂದಿ ಹಾಡಬಹುದು.

ಸೂಕ್ಷ್ಮವಾಗಿ ಗಮನಿಸಿದಾಗ ಮತ್ತೊಂದು ವಿಷಯ ಸ್ಪಷ್ಟವಾಗುತ್ತದೆ. ಅದೇನೆಂದರೆ ಮೃತ ರೈತನ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಪರಿಹಾರಧನ ಎಲ್ಲೋ ಒಂದೆಡೆ ಆತನ ಆತ್ಮಹತ್ಯೆಗೆ ಕಾರಣವಾಗುತ್ತಿದೆ! ಹೌದು ಈ ವಿಚಿತ್ರ ಸತ್ಯವನ್ನು ಅರಗಿಸಿಕೊಳ್ಳುವುದು ಕೊಂಚ ಕಷ್ಟವೇ. ಹಾಗಿದ್ದರೂ ತನ್ನ ಮರಣಾನಂತರ ದೊರೆಯುವ ಒಂದಿಷ್ಟು ಪರಿಹಾರಧನದಿಂದಾದರೂ ಬಳಲುತ್ತಿರುವ ಕುಟುಂಬಕ್ಕೆ ಕೊಂಚ ಆಶ್ವಾಸನೆ ಸಿಗಲಿ ಎಂಬ ಭಾವನೆ ರೈತನನ್ನು ಒಂದು ಹಂತದವರೆಗೆ ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ ಎಂಬುದು ಸುಳ್ಳಲ್ಲ. ಜೊತೆಗೆ ರಾಜಕೀಯ ಪ್ರೇರಣೆಗಳೂ ರೈತನ ಮೇಲೆ ಒತ್ತಡ ಬೀರುತ್ತವೆ. ಈ ಪ್ರೇರಣೆ ಆತ್ಮಹತ್ಯೆಗೆ ಕಾರಣವಾಗಲೂಬಹುದು.

ಆತ್ಮಹತ್ಯೆಯ ವೈಭವೀಕರಣದ ಬದಲು ರೈತರಲ್ಲಿ ಜಾಗೃತಿ ಮೂಡಿಸಬೇಕಾಗಿದ್ದು ಈ ಕ್ಷಣದ ಅಗತ್ಯ. ಆತ್ಮಹತ್ಯೆಯೊಂದೇ ಸಮಸ್ಯೆಗಳಿಗೆ ಪರಿಹಾರವಲ್ಲ, ಪರಿಹಾರವಿಲ್ಲದ ಸಮಸ್ಯೆಗಳೇ ಇಲ್ಲ ಎಂದು ರೈತರಿಗೆ ಧೈರ್ಯ ನೀಡುವ ಕಾರ್ಯಗಳೂ ಆಗಬೇಕಿವೆ. ಸಮಸ್ಯೆಗಳೇನು ಎಂಬುದನ್ನು ತಿಳಿದು ಆ ಸಮಸ್ಯೆಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂದು ಸೂಕ್ತ ಕಾಲಕ್ಕೆ ಸಲಹೆ ನೀಡುವವರ ಅವಶ್ಯಕತೆ ರೈತನಿಗಿದೆ. ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಇಲ್ಲವೇ ಸಾಮಾಜಿಕ ಕಳಕಳಿಯಿರುವ ಯಾವೊಬ್ಬನೂ ಈ ಕಾರ್ಯವನ್ನು ಮಾಡಬಹುದು. ಇಲ್ಲಿ ತನ್ನ ಕೆಲಸ- ನಿನ್ನ ಕೆಲಸ ಎಂದು ಮತ್ತೊಬ್ಬನೆಡೆ ಬೆರಳು ಮಾಡುವ ಅವಶ್ಯಕತೆ ಇಲ್ಲ, ಏಕೆಂದರೆ ವ್ಯಕ್ತಿಯೊಬ್ಬನನ್ನು ಸಾವಿನ ಮಡುವಿನಿಂದ ಕಾಪಾಡುವುದು ಇಲ್ಲಿನ ಗುರಿ. ರೈತರ ಆತ್ಮಹತ್ಯೆಗೆ ಪೂರ್ಣವಿರಾಮ ಹಾಕುವುದೇ ಈ ನಿಟ್ಟಿನಲ್ಲಿ ದುಡಿಯುವವರ ಗಮ್ಯವಾಗಬೇಕು.

ತಮ್ಮ ಬೆನ್ನಿಗೂ ಯಾರೋ ಒಬ್ಬರಿದ್ದಾರೆ, ಇಂದಲ್ಲ ನಾಳೆ ಸಮಸ್ಯೆಗಳೆಲ್ಲಾ ಬಗೆಹರಿದು ಹೊಸ ಬೆಳಕು ಮೂಡಲಿದೆ ಎಂಬ ಭರವಸೆ ಬಂದರೆ ಯಾರೂ ಆತ್ಮಹತ್ಯೆಗೆ ಪ್ರಯತ್ನಿಸಲಾರರು. ಆದ್ದರಿಂದ ಮೃತ ರೈತನ ಕುಟುಂಬಕ್ಕೆ ಪರಿಹಾರ ನೀಡುವುದಕ್ಕಿಂತ ಸಾವಿನ ಹೊಸ್ತಿಲಲ್ಲಿರುವ ಆತನಿಗೆ ಧೈರ್ಯ ತುಂಬುವವರು ಬೇಕಾಗಿದ್ದಾರೆ. ಪರಿಹಾರಧನದಿಂದ ನಿಜವಾದ ಸಮಸ್ಯೆಯ ಪರಿಹಾರ ಸಾಧ್ಯವಿಲ್ಲ. ಸಮಸ್ಯೆಯೊಂದು ಸಂಪೂರ್ಣವಾಗಿ ಬಗೆಹರಿಯಬೇಕೆಂದರೆ ಬೇರುಮಟ್ಟದಿಂದಲೇ ಪರಿಹಾರಕಾರ್ಯ ಶುರುವಾಗಬೇಕು.

ವ್ಯಕ್ತಿಯೊಬ್ಬನ ಆತ್ಮಹತ್ಯೆಗೆ ಕಾರಣವಾಗುವ ಮತ್ತೊಂದು ಪ್ರಮುಖ ಅಂಶ ಹಣ. ರೈತರ ಆತ್ಮಹತ್ಯೆಯ ವಿಷಯದಲ್ಲಂತೂ ಹಣ ಖಳ ನಾಯಕನ ಪಾತ್ರವನ್ನೇ ವಹಿಸುತ್ತದೆ. ಆದ್ದರಿಂದ ಮೊದಲನೆಯದಾಗಿ ನಮ್ಮ ರೈತರಿಗೆ ಹಣಕಾಸು ನಿರ್ವಹಣೆ ಕುರಿತ ಮಾಹಿತಿಗಳನ್ನು ನೀಡಬೇಕು. ಈಗಂತೂ ಪ್ರತಿಯೊಂದು ಕೃಷಿ ಉಪಕರಣದ ಮೇಲೂ ಸಾಲ ಸಿಗುತ್ತದೆ. ಯಾವೆಲ್ಲ ಮೂಲಗಳಿಂದ ಸಾಲ ಸಿಗುತ್ತದೋ ಎಲ್ಲಾ ಕಡೆಯಿಂದಲೂ ಸಾಲ ತೆಗೆದುಕೊಳ್ಳುವ ನಮ್ಮ ರೈತರು ನಂತರದ ಪರಿಣಾಮಗಳನ್ನು ಊಹಿಸುವ ಗೋಜಿಗೇ ಹೋಗುವುದಿಲ್ಲ. ನಿಜವಾಗಿಯೂ ಸಾಲದ ಅವಶ್ಯಕತೆ ಇದೆಯೇ? ಅಥವಾ ಈ ಬಾರಿ ಸಾಲ ತೆಗೆದುಕೊಳ್ಳದಿದ್ದರೂ ಪರಿಸ್ಥಿತಿಯನ್ನು ನಿಭಾಯಿಸಬಹುದೇ? ಎಂಬುದನ್ನು ಯಾರೂ ತಲೆಗೆ ಹಚ್ಚಿಕೊಳ್ಳುವುದೇ ಇಲ್ಲ.

ಒಂದು ಬೆಳೆಯ ಕೃಷಿಯಲ್ಲಿ ಸಮಸ್ಯೆ ತಲೆದೋರಿದೆ ಎಂದರೆ ಬೇರೊಂದು ಬೆಳೆ ಅಥವಾ ಉಪಕಸುಬು ಮಾಡುವ ಚಾಕಚಕ್ಯತೆ ನಮ್ಮ ರೈತರಿಗೆ ಬರಬೇಕು. ರಸ ಗೊಬ್ಬರ ದೊರಕಲಿಲ್ಲ ಎಂದು ತಲೆ ಮೇಲೆ ಕೈಹೊತ್ತು ಕೂರುವ ಬದಲು ಸಾವಯವ ಮಾರ್ಗದಿಂದ ಹೇಗೆ ಹೆಚ್ಚಿನ ಫಸಲನ್ನು ಪಡೆಯಬಹುದು ಎಂಬುದರ ಬಗ್ಗೆ ಗಮನಹರಿಸಬಹುದು. ಈ ಬಾರಿ ಅಲ್ಲದಿದ್ದರೂ ಮುಂದಿನ ಬಾರಿಯಾದರೂ ಒಳ್ಳೆ ಫಸಲು ಬರಬೇಕೆಂದರೆ ಈಗಿನಿಂದಲೇ ಪ್ರಯತ್ನ ಆರಂಭವಾಗಬೇಕು. ಒಂದು ಕ್ಷೇತ್ರದಲ್ಲಿ ಸಮಸ್ಯೆಯೆದುರಾದರೆ ಪರ್ಯಾಯ ಮಾರ್ಗ ಅನುಸರಿಸುವ ಹೊಸ ಬದಲಾವಣೆ ನಮ್ಮ ರೈತರಲ್ಲಿ ಬರಬೇಕಿದೆ.

ಸಮಸ್ಯೆ ರೈತರ ಜೀವನದಲ್ಲಿ ಮಾತ್ರವಲ್ಲ ಎಲ್ಲರ ಜೀವನದಲ್ಲೂ ಬರುವಂಥದ್ದೇ, ಆದರೆ ಆತ್ಮಹತ್ಯೆ ಮಾಡಿಕೊಂಡರೆ ಪರಿಸ್ಥಿತಿಯಿಂದ ನುಣುಚಿಕೊಂಡಂತಾಗುತ್ತದೆಯೇ ವಿನಃ ಸಮಸ್ಯೆಗೆ ಪರಿಹಾರ ಎಂದೂ ದೊರಕಲಾರದು.

ಸರ್ಕಾರ ನೀಡುತ್ತಿರುವ ಅನುದಾನಗಳು, ರೈತರಿಗಾಗಿಯೇ ಜಾರಿಗೆ ಬಂದಿರುವ ಯೋಜನೆಗಳು, ಕಡಿಮೆ ಬಡ್ಡಿದರದ ಸಾಲ ವ್ಯವಸ್ಥೆ, ಸಾಲ ಮನ್ನಾ ಇವೆಲ್ಲವನ್ನೂ ಒಬ್ಬ ತಿಳಿದಿರಬೇಕಾಗಿದ್ದು ಅಗತ್ಯ. ತನ್ನ ಸುತ್ತಮುತ್ತ ಏನು ನಡೆಯುತ್ತಿದೆ, ಎಲ್ಲಿ ಯಾವ ಸಮಸ್ಯೆಗೆ ಪರಿಹಾರ ಸಿಗಬಹುದು, ಯಾರ ಬಳಿ ಸಮಾಲೋಚಿಸಬೇಕು ಎಂಬುದು ಪ್ರತಿಯೊಬ್ಬ ರೈತನೂ ತಿಳಿದಿರಬೇಕಾದಂಥ ಅತಿ ಪ್ರಮುಖ ಮಾಹಿತಿ. ಸರ್ಕಾರ ನೀಡುತ್ತಿರುವ ಕಡಿಮೆ ಬಡ್ಡಿಯ ಸಾಲ ತೆಗೆದುಕೊಂಡು ಭಾರಿ ಬಡ್ಡಿಗೆ ಊರಿನ ಯಾವುದೋ ಶ್ರೀಮಂತನಿಂದ ಪಡೆದ ಸಾಲವನ್ನು ಹಿಂತಿರುಗಿಸುವಂತ ಉಪಾಯಗಳನ್ನು ಯೋಚಿಸಬಹುದು.

ಕೊನೆಯದಾಗಿ ನಾಡಿನ ರೈತ ಬಾಂಧವರಿಗೆ ಒಂದು ಮಾತು ಹೇಳಲು ಇಚ್ಛಿಸುತ್ತೇನೆ. ದೇಶದ ಅಸ್ತಿತ್ವಕ್ಕೆ ಕಾರಣವಾಗಿರುವ ರೈತ ಎಂದಿಗೂ ಧೃತಿಗೆಡಬಾರದು. ಬದಲಿಗೆ ಸಮಸ್ಯೆಗಳನ್ನು ಎದುರಿಸಿ- ಸಮಸ್ಯೆಗಳ ನಡುವೆಯೇ ನಿಂತು ಪರಿಹಾರ ಕಂಡುಕೊಳ್ಳಬೇಕು. ಆತ್ಮಹತ್ಯೆ ಎಂದಿಗೂ ಸಮಸ್ಯೆಯೊಂದರ ಪರಿಹಾರವಾಗಬಾರದು.

ಟಿಎಸ್‌ಐ

 

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .