ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಗುಣದೋಷ
 

ಹೊಸ ಕಾವ್ಯ ಹುಡುಕಾಟ 'ಸಂಭ್ರಮ'

 
ವಾಚ್ಯಾರ್ಥಕ್ಕೆ ಗಂಟುಬೀಳದೆ, ಪ್ರತಿ ಓದಿಗೆ ಹೊಸ ಅರ್ಥ ಸ್ಫುರಿಸುವ 'ಕಾವ್ಯ ಸಂಭ್ರಮ'

ಕನ್ನಡ ಕಾವ್ಯದಲ್ಲಿ ಹೊಸ ದನಿಗಳು ಇಂಚರಿಸಿದಾಗಲೆಲ್ಲ- ನವೋದಯ, ನವ್ಯ, ಬಂಡಾಯ ಎಲ್ಲ ಸಂದರ್ಭಗಳಲ್ಲೂ- ಕಾವ್ಯ ಸಂಚಯಗಳು (ಆಂಥಾಲಜಿ) ಪ್ರಾತಿನಿಧಿಕ ಸ್ವರೂಪದಲ್ಲಿ ಪ್ರಕಟಗೊಳ್ಳುತ್ತಿರುವುದು ನಮ್ಮ ಸಾಹಿತ್ಯ ಚರಿತ್ರೆಯ ಒಂದು ಭಾಗವೇ ಆಗಿದೆ. ಪ್ರಸ್ತುತ, ಡಿ.ವಿ. ಪ್ರಹ್ಲಾದ್ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುವ ಸಂಚಯ ವಿಶೇಷ 'ಕಾವ್ಯ ಸಂಭ್ರಮ' ಇತ್ತೀಚಿನ ಹೊಸಕಾವ್ಯದ ಧ್ವನಿಲಯಗಳ ಅನನ್ಯತೆಯನ್ನು ಗುರುತಿಸುವ ಒಂದು ಸ್ವಾಗತಾರ್ಹ ಪ್ರಯತ್ನ.

'ಕಾವ್ಯ ಸಂಭ್ರಮ'ದಲ್ಲಿ ಎಪ್ಪತ್ತೈದು ಕವಿಗಳ ರಚನೆಗಳನ್ನು ನಾವು ಕಾಣಬಹುದು. ಇವರೆಲ್ಲ ಹೊಸಬರು. ಕೆಲವರು ಒಂದೆರಡು ಸಂಕಲನಗಳನ್ನು ಪ್ರಕಟಿಸಿ ಕಾವ್ಯರಸಿಕರ ಗಮನ ಸೆಳೆದವರು. ಸಂಪಾದಕರು ಇದನ್ನು ಹೊಸಕಾವ್ಯದ ಪ್ರಾತಿನಿಧಿಕ ಸಂಕಲನ ಎಂದು ಕರೆದಿಲ್ಲವಾದರೂ ಹಾಗೆ ಭಾವಿಸಲು ಅಡ್ಡಿ ಇಲ್ಲ. ಏಕೆಂದರೆ ಇಲ್ಲಿ ಹೊಚ್ಚ ಹೊಸ ಕಾವ್ಯದ ಅಸಲಿ ದನಿಗಳು, ಹೊಸ ತುಡಿತಗಳು, ಹೊಸ ಮಾರ್ಗ-ದಿಕ್ಕು ದಿಶೆಗಳ ಅನ್ವೇಷಣೆ ಸ್ಪಷ್ಟವಾಗಿ ನಮ್ಮ ಅನುಭವಕ್ಕೆ ಬರುತ್ತದೆ.

ಈ ಕವಿಗಳು ಕನ್ನಡ ಕಾವ್ಯ ಪರಂಪರೆಯನ್ನು ತಕ್ಕ ಮಟ್ಟಿಗೆ ಅರಿತವರೇ. ನವೋದಯ, ನವ್ಯ, ಬಂಡಾಯದಂಥ ಪ್ರಮುಖ ಧಾರೆಗಳನ್ನು ಅರಗಿಸಿಕೊಳ್ಳುತ್ತಲೇ ತಮ್ಮ ಅಸ್ಮಿತೆ-ಅನನ್ಯತೆಗಳನ್ನು ಪ್ರಕಾಶಿಸುವ ಕಾವ್ಯ ತವಕ-ತಲ್ಲಣಗಳು, ತುಡಿತಗಳು ಇಲ್ಲಿನ ಕವನಗಳಲ್ಲಿ ಖಚಿತವಾಗಿ ಕಾಣಿಸಿಕೊಳ್ಳುತ್ತವೆ. ಸಂಪಾದಕರು ಸರಿಯಾಗಿ ಗ್ರಹಿಸಿರುವಂತೆ, ಪರಂಪರೆಯಿಂದ ಪಡೆದುಕೊಂಡದ್ದು ಹಾಗೂ

ಗ್ರಹಿಕೆ, ಅಭಿವ್ಯಕ್ತಿ ವಿಧಾನಗಳಲ್ಲಿ ಭಿನ್ನವಾದದ್ದು ಇಲ್ಲಿರುವುದನ್ನು ಕಾಣಬಹುದು. ಭಾವೋದ್ವೇಗ- ಆವೇಶಗಳನ್ನು ನಿಗ್ರಹಿಸಿ ಸಂಯಮದಿಂದ ಕಾವ್ಯಕಲೆಯನ್ನು ಸಾಧಿಸುವ, ತಮ್ಮದೇ ಮಾರ್ಗ ಕಂಡುಕೊಳ್ಳುವ ಮಹತ್ವಾಕಾಂಕ್ಷೆ ಈ ಪ್ರಯತ್ನಗಳ ಹಿಂದಿರುವುದನ್ನು ಗುರುತಿಸಬಹುದು.

'ಕಾವ್ಯ ಸಂಭ್ರಮ'ದ ಕವಿತೆಗಳಲ್ಲಿ ಕಾವ್ಯದ ಸಾಧನ ಸಂಪತ್ತುಗಳೂ ಪರಿಕರಗಳೂ ಆದ ಪ್ರತಿಮೆ, ಸಂಕೇತ, ರೂಪಕಗಳು, ಜೀವಪರವಾದ ಧ್ವನಿ ವಿಶೇಷಗಳು ಹೇರಳವಾಗಿ ನಮಗೆ ಎದುರಾಗುತ್ತವೆ. ಚರಿತ್ರೆ, ಸೂರ್ಯ, ಭೂಮಿ, ಆಕಾಶಸತ್ವಗಳು, ಮನುಷ್ಯ ಸಂಬಂಧಗಳು, ಸಾಮಾಜಿಕ ಕಾಳಜಿ-ಕಳಕಳಿಗಳು ಪ್ರತಿಮೆ-ಪ್ರತೀಕಗಳಾಗಿ ಮೆರವಣಿಗೆಯೋಪಾದಿಯಲ್ಲಿ ಬರುತ್ತವೆ. ಇದರಲ್ಲಿ ಹೊಸತನ ನಮಗೆ ಎದ್ದು ಕಾಣುವುದು ಲಯವಿನ್ಯಾಸದಲ್ಲಿ ಹಾಗೂ ಭಾಷೆಯನ್ನು ಸೃಜನಾತ್ಮಕವಾಗಿ ದುಡಿಸಿಕೊಳ್ಳುವ ಪರಿಯಲ್ಲಿ. ಭಾಷೆ, ವಿವರ-ವರ್ಣನೆಗಳಲ್ಲಿ ಸೊಕ್ಕದೆ ಅಥವಾ ಪಂಡಿತರ ನಿತ್ರಾಣದಲ್ಲಿ ಸೊರಗದೆ ಮಾತು ಸ್ಫಟಿಕವಾಗುವ ಈ ಪರಿ ಕಾವ್ಯದ ಮುಖ್ಯ ಲಕ್ಷಣವಾಗಿದೆ. ಮಾದರಿಯಾಗಿ ಕೆಲವನ್ನು ನೋಡಬಹುದು.

ಬರಹವಾಗದ ಪದ್ಯದ ಹಾಗೆ

ಅರೆಯುಳಿದ ಮಾತು.

ತಹತಹ ವಿರಹವೆನ್ನಲು ಸ್ಪಷ್ಟ ಎಡೆಯೆಲ್ಲಿ?

('ಏನಾದರೂ ಆಗಬಹುದು'- ಕವಿ: ನಾಗರಾಜ ವಸ್ತಾರೆ)

ಮೆಟ್ಟಿ ಬಾವುಟ ನೆಟ್ಟ

ಪ್ರತಿ ಎತ್ತರದ ತುದಿಗೂ

ಒಂದೊಂದು ಬಟಾ ಬಯಲು

ಮೆಟ್ಟಲಾರದ ಮುಗಿಲು

('ಮೆಟ್ಟಲಾರದ ಮುಗಿಲು'- ಕವಿ: ಪ್ರಹ್ಲಾದ್ ಡಿ.ವಿ.)

ಇವಳ ಕತ್ತಲ ಅಹಂಕಾರಕ್ಕೆ

ಸೊಕ್ಕಿ ಉಕ್ಕುತ್ತದೆ ಕಡಲು

ಹರಳ ಬಿರಿಬಿಟ್ಟರೆ ಅಲ್ಲಿ.

ಸಿಕ್ಕಲ್ಲಿ ಹೊಕ್ಕು ನಲುಗುವ

ಒಂಟಿ ಮಲ್ಲಿಗೆ ಹೂವು

ಕೆಳಗೆ ಜುಳು ಜುಳು ಧಾರಾಕಾರ

ಹರಿವ ಹುಣ್ಣಿಮೆ ಬೆಳಕು.

ಇವಳು ಕತ್ತಲ ಕನ್ಯೆ!

ಅಡಗಿದ್ದ ಸೂರ್ಯನ್ನ

ಆಕಾಶಕ್ಕೆ ಕೊಡವಿ,

ಮತ್ತೆ ಮುಡಿಕಟ್ಟುತ್ತಾಳೆ

('ಮಗ್ಗುಲಾದರೆ ರಾತ್ರಿ'- ಕವಿ: ಮಮತಾ ಜಿ. ಸಾಗರ)

ಹಾಡಿ ತೂಗಿ ಬೆಳೆಯಲಿ

ನನ್ನ ಕೇರಿಯ ಮಕ್ಕಳೆಲ್ಲ ಇನ್ನು ಮುಂದೆ

ಅಗ್ನಿಪಂಜರದ ತೊಟ್ಟಿಲಲ್ಲಿ.

ಕತ್ತಲೆಯ ತಾಯಿಯಾಗು, ಬೆಳಕೆನ್ನುವ ದೇವರೆ.

ಪ್ರಾರ್ಥಿಸುತ್ತೇನೆ

ಮಕ್ಕಳಾಗುತ್ತೇವೆ ಬೆಳದಿಂಗಳ ಹನಿಯಾಗಿ

ತಣ್ಣಗಾಗಲು ನನ್ನೆದೆ ಕಂಬಾಲ ಬೆಂಕಿಯಿಂದ...

('ಕತ್ತಲೆಯ ತಾಯಿಯಾಗು ಬೆಳಕೆನ್ನುವ ದೇವರೆ'- ಕವಿ: ಸುಬ್ಬು ಹೊಲೆಯಾರ್)

ಮಾತು, ಹೀಗೆ ಸ್ಫಟಿಕವಾಗಿ ನಮ್ಮ ಬುದ್ಧಿ ಭಾವಗಳನ್ನು ತಟ್ಟುವ, ಮೀಟುವ ಈ ರೀತಿ ಹೊಸಕಾವ್ಯದ ಗರೆ-ಗಮ್ಯತೆಗಳ ಹುಡುಕಾಟವೂ ಆಗಿ ತೋರುತ್ತದೆ.

ಹೊಸಲಯ ವಿನ್ಯಾಸದ ಇನ್ನೊಂದು ಮಾದರಿ ನೋಡಿ:

ಮರದೊಳಗೆ ರಸವಾಗಿ, ಹಸಿರನ್ನ ದೂರಿ

ನೆಲದೊಳಗೆ ಜಲಕನ್ನೆ ಕಣ್ಣಾಗಿ ದೂರಿ

ಸುಡುಸುಡು ಸೂಡಾಗಿ ಸೂರ್‍ಯನ್ನ ದೂರಿ

ಬಿರುಗಾಳಿ ಉಸಿರಾಗಿ ಪ್ರಾಣವನೆ ದೂರಿ

ದೂರಮ್ಮ ದೂರಿ ದೂರಿ, ದೂರಮ್ಮ ದೂರಿ

('ದೂರಿ ಪದ'- ಕವಿ: ಕೆ.ವೈ. ನಾರಾಯಣಸ್ವಾಮಿ)

-ದೂರಿದೂರಿ ದುಗ್ಗಲಮ್ಮ ಎಂದು ಮಕ್ಕಳನ್ನು ರಮಿಸುವ ಜೋಗುಳದ ಮಾದರಿಯ ಜಾನಪದ ಸಂವೇದನೆಯೊಂದನ್ನು ಕವಿ ಹೊಸ ಅರ್ಥದ ಸಾಧನವಾಗಿ ಬಳಸಿಕೊಂಡಿರುವ ರೀತಿ, ಲಯವಿನ್ಯಾಸ ಮೆಚ್ಚುಗೆಯಾಗುತ್ತದೆ. ಜಾನಪದ ಅರ್ಥದೊಂದಿಗೆ 'ದೂರಿ'ಗೆ ಇರುವ ಸಂಪರ್ಕ ಸಾಧನದ ಅರ್ಥವೂ ಸೇರಿ ಕವನ ಶ್ಲೇಷೆಯಲ್ಲಿ, ಪ್ರಕೃತಿ ಮತ್ತು ನೆಲದ ಬದುಕನ್ನು ಕೂಡಿಸುವ ಲಯದಲ್ಲಿ ಒಂದು ವಿಶಿಷ್ಟ ಅನುಭವವಾಗುತ್ತದೆ.

ಚರಿತ್ರೆ ಈ ಸಂಕಲನದ ಐದಾರು ಕವಿಗಳಿಗೆ ವಸ್ತುವಾಗಿದೆ. ಶಶಿ ಸಂಪಳ್ಳಿಯವರ 'ಚರಿತ್ರೆಯ ಜಾಡ ಆಚೆಗೆ' ಚರಿತ್ರೆಯನ್ನು ಅವಲೋಕಿಸುತ್ತಲೇ ವರ್ತಮಾನದ ಆತಂಕಕ್ಕೆ ದನಿಯಾಗುವ ಉತ್ತಮ ಕವನ. ಎಲಿಯಟ್ಟನ ಶಾಪಗ್ರಸ್ತ 'ವೇಸ್ಟ್‌ಲ್ಯಾಂಡ್' ನೆನಪಿನಲ್ಲಿ ತೆರೆದುಕೊಳ್ಳುವ 'ಒಂದಾನೊಂದೂರು' ಚರಿತ್ರೆ ರೀಲುಗಳಲ್ಲಿ ರಾಮ ಬುದ್ಧ ಗಾಂಧಿಗಳ ಸಂಭವಾಮಿಯಾಗಿ ('ರಾಮರಾಮ'), ಅಡಿಗರ ಭೂಮಿಗೀತದ ಸಾಲುಗಳ ಪುನರ್ ರಚನೆಯಲ್ಲಿ ಹಾದು ಕೊನೆತಾಕುವುದು ಹೀಗೆ:

ಸದಾ ವತ್ಸಲೆ

ನಿಶ್ಚಿಂತೆಯ ನಿದ್ದೆಗೆ ಇನ್ನೂ ಎಷ್ಟು ದಿನ?

ಭೂಮಿತಾಯಿ ಮಲತಾಯಿಯೂ ಹೌದೆಂಬ ಪರಿಕಲ್ಪನೆಯಲ್ಲಿ, ಇಲ್ಲಿ 'ವತ್ಸಲೆ' ವ್ಯಂಜಿಸುವ ಚರಿತ್ರಾರ್ಥ ಕೊನೆಗಾಣದ ಆತಂಕಕ್ಕೆ ತಂದು ನಿಲ್ಲಿಸುತ್ತದೆ.

ವಾಚ್ಯಾರ್ಥಕ್ಕೆ ಗಂಟು ಬೀಳದೆ, ಪ್ರತಿ ಓದಿಗೆ ಹೊಸ ಅರ್ಥ ಸ್ಫುರಿಸುವ ಒಳ್ಳೆ ಕಾವ್ಯದ ಲಕ್ಷಣಗಳನ್ನೊಳಗೊಂಡ 'ಕಾವ್ಯ ಸಂಭ್ರಮ' ಕವನ ಸಂಕಲನ ಬಹುತೇಕ ಕವನಗಳು, ಅವುಗಳ ಶಕ್ತಿ-ದೌರ್ಬಲ್ಯಗಳನ್ನು ಗುರುತಿಸುವ ವಿವರವಾದ ವಿಮರ್ಶೆಯನ್ನು ಬೇಡುತ್ತವೆ.

ಟಿಎಸ್‌ಐ

ಜಿ.ಎನ್. ರಂಗನಾಥ ರಾವ್

 

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .