'ಕ್ರಿಯೇಟಿವ್' ಬ್ರ್ಯಾಂಜಲೀನಾ
ಮಾದಕ ಚೆಲುವೆ ಏಂಜಲೀನಾ ಜ್ಯೂಲಿ ಹಾಗೂ ಆಕೆಯನ್ನೂ ಮೀರಿಸುವ ಮಾದಕ ಚೆಲುವ ಬ್ರಾಡ್‌ಪಿಟ್ ಈಗ ಸಿಕ್ಕಾಪಟ್ಟೆ ಕ್ರಿಯೇಟಿವ್ ಆಗಿದ್ದಾರೆ! ಈ ಸೃಜನಶೀಲತೆ ಎಲ್ಲಿ ತೋರಿಸುತ್ತಿದ್ದಾರಪ್ಪಾ? ಕಿವಿಯರಳಿಸಿ ಕೇಳಿ. ಈಗಾಕೆ ಮತ್ತೆ ಅವಳಿಗಳ ತಾಯಿ! ಜ್ಯೂಲಿ-ಪಿಟ್ ಸಂಭ್ರಮದಿಂದ ಅವಳಿಗಳನ್ನು ಸ್ವಾಗತಿಸಲು ತಯಾರಾಗಿದ್ದಾರೆ. ಇದು ಬರೀ ಮಕ್ಕಳನ್ನು ಹೆರುವುದಲ್ಲ, ಲೈಂಗಿಕ ಸೃಜನಶೀಲವಾಗಲು ನಮಗೆ ಅವಕಾಶ ಸಿಕ್ಕಿದೆ ಎನ್ನುತ್ತಾ ಉಳಿದವರ ಹೊಟ್ಟೆ ಉರಿಸುತ್ತಿದ್ದಾರೆ!! ಬ್ರ್ಯಾಂಜಲೀನಾ ಜೋಡಿ ರೆಡ್ ಕಾರ್ಪೆಟ್‌ನಿಂದ ತೊಡಗಿ ಬೆಡ್‌ರೂಂವರೆಗೂ ಹಾಟ್ ದಂಪತಿಗಳೇ...
ಅಮೀರ್ ಅಳಿಯ - ಕಮಲ್ ಮಗಳು

ಇಮ್ರಾನ್ ಖಾನ್ ಹೆಸರು ಕೇಳಿಯೇ ಹುಡುಗಿಯರ ಮೈ ನವಿರೇಳುತ್ತದೆ! ಬಾಲಿವುಡ್ ತುಂಬಾ ಈಗಲೇ ಸುದ್ದಿ ಮಾಡಿದ್ದಾನೆ. ಎಷ್ಟಂದ್ರೂ ನಮ್ಮ ಅಮೀರ್ ಖಾನ್‌ನ ಸೋದರಳಿಯ ಅಲ್ವೇ? ಅಳಿಯನ ವೃತ್ತಿಜೀವನದ ಪ್ರತಿ ಹೆಜ್ಜೆಯಲ್ಲೂ ಈ ಸೋದರಮಾವ ನೆರವಿನ ಹಸ್ತ ನೀಡುತ್ತಿದ್ದಾನೆ ಎಂಬುದು ಸರ್ವವಿಧಿತ! ಈಗ ಸುಜಯ್ ಘೋಷ್ ಅವರ 'ಲಕ್' ಚಿತ್ರದಲ್ಲಿ ಹಳೇ ಸ್ನೇಹಿತ ಕಮಲ್ ಹಾಸನ್ ಮಗಳು ಶ್ರುತಿಯನ್ನು ಇಮ್ರಾನ್‌ಗೆ ಜೋಡಿ ಮಾಡುವ ಯೋಜನೆಯಲ್ಲಿದ್ದಾನೆ, ನೇಹಾ ಒಬೆರಾಯ್ ಎಂಬ ಚೆಲುವೆಯನ್ನು ಎತ್ತಂಗಡಿ ಮಾಡಿಸಿ! ಇತ್ತ ಶುತಿ-ಇಮ್ರಾನ್ ತಮ್ಮ ಲಕ್ ಬಗ್ಗೆ ಖುಷಿಯಿಂದ ಉಬ್ಬುತ್ತಿದ್ದರೆ ಅತ್ತ ನೇಹಾ ಲಕ್ವಾ ಹೊಡೆದ 'ವುಡ್‌ಸ್ಟಾಕ್ ವಿಲ್ಲಾ'ದ ಗುಂಗಿನಲ್ಲೇ ಇದ್ದಾಳೆ!
ಮಾಸ್ ಬಾಯ್?
ಲವರ್‌ಬಾಯ್‌ನಿಂದ ಆಕ್ಷನ್ ಹೀರೋ ಆಗುತ್ತಿರೋ ಗಣೇಶ್ ನಾಯಕರಾಗಿರೋ 'ಬೊಂಬಾಟ್' ಚಿತ್ರ ಇನ್ನೇನು ಬಿಡುಗಡೆಯಾಗಲಿದೆ. 'ಮುಂಗಾರು ಮಳೆ' ನಂತರ ಗಣೇಶ ನಟಿಸಿದ ಎಲ್ಲಾ ಚಿತ್ರಗಳೂ ಶತದಿನೋತ್ಸವ ಆಚರಿಸಿದ್ದೇನೋ ನಿಜ. ಆದರೂ ಲವರ್‌ಬಾಯ್ ಇಮೇಜ್ ಖಾಯಂ ಆಗಿತ್ತು. 'ಬೊಂಬಾಟ್' ಮೂಲಕ ಗಣೇಶ ವಿಭಿನ್ನ ವರ್ಚಸ್ಸು ಬೆಳೆಸಿಕೊಳ್ಳೋ ತರಾತುರಿಯಲ್ಲಿದ್ದಾರೆ. ಎಲ್ಲಾ ಕನ್ನಡ ಆಕ್ಷನ್ ಚಿತ್ರಗಳಂತೆ ಇಲ್ಲೂ ಸೆಂಟಿಮೆಂಟ್ ಇದ್ದೇ ಇದೆ. ಹಾಗೆ ಸಸ್ಪೆನ್ಸ್- ಕಾಮಿಡೀನೂ! ಗಣೇಶ 'ಬೊಂಬಾಟ್'ನಿಂದ ಮಾಸ್ ಬಾಯ್ ಆಗುವನೇ ಅಥವಾ ಇತರರಂತೆ ಮಾಸಿ ಹೋಗುವ ನಟನಾಗುವನೆ?!
ಖಾಕಿ ತೊಟ್ಟ 'ಮಲ್ಲಿಗೆ'

ಮುಗ್ಧತೆಯೇ ಮೈವೆತ್ತಿಕೊಂಡಂತಿದ್ದ 'ಮಲ್ಲಿಗೆ' ಹುಡುಗಿ ಚಾರುಲತಾ ನಯ ನಾಜೂಕಿನವಳು ಎಂದುಕೊಂಡರೆ ಮೋಸ ಹೋದೀರಿ. ಹೊರಗೆ ಹೋದಲ್ಲಿ ಏನಾದರೂ ಆಭಾಸ ಮಾಡಿ ಬರುತ್ತಾಳೇನೋ ಅಂತ ಅಮ್ಮ ಮನೇಲಿ ಚಿಂತೆ ಮಾಡೋವಷ್ಟು ಗಂಡುಬೀರಿ ಈಕೆ. ಐಟಂ ಸಾಂಗ್, ಅತಿಥಿ ಪಾತ್ರ ಎಂದು ಒಂದೆರಡು ಕ್ಷಣ ಬಂದು ಹೋಗೋ ಪಾತ್ರಗಳು ಬೇಡ. ನಟನೆಗೆ ಅವಕಾಶವಿದ್ದರೆ ಮಾತ್ರ ಪಾತ್ರ ಒಪ್ಪಿಕೊಳ್ಳುವೆ ಅನ್ನೋದು ಚಾರುಲತಾ ಖಡಕ್ ಮಾತು. ಒಂದು ಕಾಲದಲ್ಲಿ ಬೇಡಿಕೆಯ ನಟಿಯಾಗಿದ್ದ ಚಾರು ಗಾಸಿಪ್ ಕಾಲಂಗಳಿಗೆ ಎರವಾಗಿ ಸ್ಯಾಂಡಲ್‌ವುಡ್‌ನಿಂದಲೇ ದೂರ ಸರಿದಾಕೆ. ಈಗ ರವಿಚಂದ್ರನ್ ಅವರ 'ಮಂಜಿನ ಹನಿ' ಚಿತ್ರದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಪಾತ್ರದ ಮೂಲಕ ಕನ್ನಡದಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಿದ್ದಾಳೆ.
ಕಮರಿದ ಕನಸು
ಸ್ಯಾಂಡಲ್‌ವುಡ್‌ನಲ್ಲಿ ಬ್ರೇಕ್‌ಗಾಗಿ ಕಾಯುತ್ತಿದ್ದ ಈ ಮಲ್ಲು ಬೆಡಗಿ ತಲೆ ಮೇಲೆ ಕೈ ಹೊತ್ತು ಕೂತಿದ್ದಾಳೆ! 'ಜಿಂದಗಿ' ಚಿತ್ರದ ಮೂಲಕ ಕನ್ನಡದಲ್ಲಿ ಮೆರೆಯುವ ಕನಸು ಹೊತ್ತಿದ್ದ ಮಲೆಯಾಳಿ ಚೆಲುವೆ ಪ್ರಿಯಾಂಕ ಈಗ ಸಪ್ಪಗಾಗಿದ್ದಾಳೆ. ಚಿತ್ರೀಕರಣ ಮುಗಿಸಿ ಕಾಲವಾದರೂ ಚಿತ್ರ ತೆರೆ ಕಾಣುವ ಸೌಭಾಗ್ಯ ಪಡೆದಿಲ್ಲ ಎನ್ನುವುದೇ ಈಕೆಯ ದುಃಖದ ಮೂಲ. ಈಗಾಗಲೇ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾಳೆ ಪ್ರಿಯಾಂಕಾ. ಆದರೆ ಕನ್ನಡದಲ್ಲಿ ಈಕೆಯ ಪ್ರಥಮ ಚಿತ್ರ 'ಜಿಂದಗಿ'. ಈ ಸಿನಿಮಾ ಬಿಡುಗಡೆಯಾದರೆ ಇನ್ನೆರಡು ಅವಕಾಶಗಳಾದರೂ ಸಿಗುತ್ತಿತ್ತು ಎನ್ನುವ ಕಾತರದಲ್ಲಿದ್ದಾಳೆ. ಗುಡ್‌ಲಕ್ ಹುಡುಗಿ...
ಸುಖ-ದುಃಖ, ಕೋಪ-ತಾಪ
'ತೋಡಾ ಪ್ಯಾರ್ ತೋಡಾ ಮ್ಯಾಜಿಕ್' ಇನ್ನೇನು ತೆರೆ ಕಾಣಲಿದೆ ಎಂದು ರಾಣಿ ಮುಖರ್ಜಿ ಭಾಳ ಖುಷಿಯಾಗಿದ್ದಾಳೆ. ಹಾಗೆಯೇ ಕೊಂಚ ದುಃಖವೂ ಇದೆ. ಇತ್ತೀಚಿನ ಕೆಲ ಚಿತ್ರಗಳು ಫ್ಲಾಪ್ ಆಗಿರೋದಕ್ಕೆ ಮಾಧ್ಯಮಗಳು ರಾಣಿ ಮೇಲೆ ಟೀಕೆಗಳ ಮಳೆ ಸುರಿಸಿದ್ದವು. ಜೊತೆಯಲ್ಲೇ ಆದಿತ್ಯ ಚೋಪ್ರಾ ಜೊತೆಗಿನ ಪ್ರೇಮ ಸಲ್ಲಾಪದ ಬಗ್ಗೆ ಮಾಧ್ಯಮಗಳ ತುಂಬಾ ಗಾಸಿಪ್ ಹರಿದಾಡಿದ್ದವು. ಈ ಗಾಸಿಪ್‌ಗಳನ್ನೆಲ್ಲಾ ಸಾರಾ ಸಗಟಾಗಿ ತಿರಸ್ಕರಿಸಿರುವ ರಾಣಿ ಪ್ರೇಮದ ಕರೆ ಇನ್ನೂ ತನ್ನ ಬಾಗಿಲು ತಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದೇ ತಡ, ಚೋಪ್ರಾ ಕ್ಯಾಂಪ್‌ನ ಮುಂದಿನ ಎರಡು ಚಿತ್ರಗಳು 'ತೋಡಾ...'ದ ದ್ವಿತೀಯ ನಾಯಕಿ ಅಮೀಷಾ ಪಟೇಲ್ ಮಡಿಲಿಗೆ ಬಿದ್ದಿರುವ ಸುದ್ದಿ ಸಿಕ್ಕಿದೆ!!

ಖಾನ್‌ದ್ವಯರ ಟಿಆರ್‌ಪಿ ಸರ್ಕಸ್
ಬಾಲಿವುಡ್‌ನ ಖಾನ್ ದಿಗ್ಗಜರು ಈಗ ಕಿರುತೆರೆಯಲ್ಲಿ ಸಮರ ಹೂಡಿದ್ದಾರೆ. ಬಾಲಿವುಡ್‌ಗೆ ಬಾಲಿವುಡ್ಡೇ ಶಾರುಖ್ ಬೆನ್ನ ಹಿಂದಿದ್ದರೆ, ಸಲ್ಮಾನ್ ಬೆನ್ನ ಹಿಂದೆ ಅಭಿಮಾನಿಗಳ ಮಹಾಪೂರವೇ ಇದೆ!! ಸಲ್ಮಾನ್‌ರ ಮಾತಿನ ಮೋಡಿ, ವರ್ಚಸ್ಸು ಹಾಗೂ ಸ್ಟೈಲ್‌ಗೆ ಪ್ರೇಕ್ಷಕರು ಮರುಳಾಗಿದ್ದಾರೆ. ಇಬ್ಬರೂ ಟಿಆರ್‌ಪಿಗಾಗಿ ಕಸರತ್ತುಗಳ ಮೇಲೆ ಕಸರತ್ತು ಮಾಡುತ್ತಿದ್ದಾರೆ. ಕಳೆದ ವಾರವಷ್ಟೇ ಕ್ರಿಕೆಟ್ ತಾರೆಗಳಾದ ಯುವಿ ಮತ್ತು ಬಜ್ಜಿ ಸೇರಿ ಸಲ್ಮಾನ್ ಮನದನ್ನೆ ಕ್ಯಾಟ್ ಬಗ್ಗೆ ಕಾಡಿಸಿದ್ದೇ ಕಾಡಿಸಿದ್ದು. ಇನ್ನೇನು ಅಮೀರ್ ಖಾನ್ ಕೂಡ ಸಲ್ಮಾನ್ ಕಾರ್ಯಕ್ರಮದ ಅತಿಥಿಯಾಗಲಿದ್ದಾರೆ ಎಂಬ ಸುದ್ದಿ ಬಂದಿದೆ... ಅಂದರೆ 'ದಸ್ ಕಾ ದಮ್' ಟಿಆರ್‌ಪಿ ಗಗನಕ್ಕೇರಲಿದೆ ಎಂದು ಮತ್ತೆ ಹೇಳಬೇಕಾಗಿಲ್ಲ ತಾನೆ.
ಎನ್.ಕೆ. ಸುಪ್ರಭಾ, ನೇಹಾ ಸರೀನ್