ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಪ್ರತಿಧ್ವನಿ
ಓದುಗರ ಪತ್ರ
 

ಅಭಿವೃದ್ಧಿ ಶಾಸನಗಳು

'ಹದಿಹರೆಯದ ಹೃದಯದಾಳದಲ್ಲಿ' ಟಿಎಸ್‌ಐ ವಿಶೇಷ ಸಂಚಿಕೆ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ. ಹೌದು! 2020ರ ವೇಳೆಗೆ ಭಾರತ ವಿಶ್ವದ ಮುಂಚೂಣಿ ರಾಷ್ಟ್ರವಾಗಿರುತ್ತದೆ. ಇದೇ ಕನಸನ್ನು ಕಂಡ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಐಸಿಎಂಆರ್-ಟಿಎಸ್‌ಐನ ಯುವಜನಾಂಗದ ಸಮೀಕ್ಷೆಯ ಫಲಿತಾಂಶದಿಂದ ಪುಳಕಿತರಾಗಿರುತ್ತಾರೆ. ಯುವಶಕ್ತಿಯಿಂದ ಮಾತ್ರ ಶಕ್ತಿಶಾಲಿ ರಾಷ್ಟ್ರ ನಿರ್ಮಾಣ ಸಾಧ್ಯ ಎಂಬ ಸ್ವಾಮಿ ವಿವೇಕಾನಂದರ ವಾಣಿ ನಿಜವಾಗಲಿದೆ. ಟಿಎಸ್‌ಐನಲ್ಲಿ ಮೂಡಿಬಂದ 18ರಿಂದ 20ರ ಆಸುಪಾಸಿನಲ್ಲಿರುವ ಯುವಹೃದಯಗಳ ಆ ಲೇಖನಗಳು ಬರೀ ಲೇಖನಗಳಲ್ಲ, ಸುವರ್ಣಾಕ್ಷರಗಳಲ್ಲಿ ಬರದಿಡಬಹುದಾದ ಭಾರತದ ಅಭಿವೃದ್ಧಿಯ ಶಾಸನಗಳು ಎಂದರೆ ಖಂಡಿತಾ ಉತ್ಪ್ರೇಕ್ಷೆಯಾಗಲಾರದು. ಇಂದಿನ ಯುವ ಜನಾಂಗ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿಯೂ ಸದೃಢ ವ್ಯಕ್ತಿತ್ವ ಪಡೆದು ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿ ಸಾಧಿಸುವ ಮೂಲಕ ದೇಶದ ಕನಸು ಕೈಗೂಡಲಿ.

ಸಂತೋಷ ಕೃ ಪಾಟೀಲ
ಗೋಕಾಕ

ಚಲನಶೀಲ ನಾಯಕರು ಬೇಕು

ಕಳೆದ ಬಾರಿಯ ಟಿಎಸ್‌ಐ-ಯುವಜನರ ವಿಶೇಷ ಸಂಚಿಕೆ ಅದ್ಭುತವಾಗಿ ಮೂಡಿಬಂದಿದೆ. 'ಹದಿಹರೆಯದ ಹೃದಯದಾಳದಲ್ಲಿ' ವಿಶೇಷ ಸಂಚಿಕೆ ಓದಿದಾಗ ಇಪ್ಪತ್ತೆರಡು ವರ್ಷಗಳ ಕಾಲ ಪ್ರಧಾನಿ ಕಾರ್ಯಾಲಯದಲ್ಲಿ ಮಾಧ್ಯಮ ಸಲಹೆಗಾರರಾಗಿದ್ದ ಎಚ್.ವೈ. ಶಾರದಾಪ್ರಸಾದ್ ಅವರು ಆಡಳಿತ ಚುಕ್ಕಾಣಿ ಹಿಡಿಯುವವರು ಏಕೆ ಯುವಕರಾಗಿರಬೇಕು ಎಂಬ ಲೇಖನವೊಂದರಲ್ಲಿ ಉಲ್ಲೇಖಿಸಿದ ಮಾತುಗಳು ನೆನಪಿನ ಪರದೆಯಲ್ಲಿ ಹಾದುಹೋದವು. ಭಾರತದಂಥ ರಾಷ್ಟ್ರದಲ್ಲಿ ಉನ್ನತ ಸ್ಥಾನಗಳಲ್ಲಿರುವ ನಾಯಕರು, ಅದರಲ್ಲೂ ವಿಶೇಷವಾಗಿ ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿ ಸಾಧ್ಯವಾದಷ್ಟು ದೇಶಗಳನ್ನು ಸುತ್ತಬೇಕು. ಜನರೊಂದಿಗೆ ಬೆರೆಯಬೇಕು. ಇದು ದೇಶ, ಸಂಸ್ಕೃತಿ, ಇತಿಹಾಸ, ಸಮಸ್ಯೆಗಳನ್ನು ಅರಿಯಲು ಸಹಾಯಕವಾಗುತ್ತದೆ. ಅದರ ಜೊತೆಗೆ ದೇಶ ಕಟ್ಟಿ ಬೆಳೆಸುವುದನ್ನೂ ಸಹ. ಹೌದು, ನಾಯಕನಾದವನು ಚಲನಶೀಲನಾಗಿರಬೇಕು. ಹೊಸದಿಲ್ಲಿಯ ಪ್ರಧಾನಿ ಕಾರ್ಯಾಲಯದಲ್ಲಿ ಕುಳಿತು ಭಾರತವನ್ನು ಆಳಲು ಸಾಧ್ಯವಿಲ್ಲ. ಅದಕ್ಕಾಗಿ ನಾಯಕರಾಗುವವರು ಯುವಕರಾಗಿದ್ದರೆ ಒಳ್ಳೆಯದು. ಈ ನಿಟ್ಟಿನಲ್ಲಿ ಹೆಚ್ಚು ಯುವಜನರು ರಾಜಕೀಯ ಪ್ರವೇಶಿಸಬೇಕು.

ಜಿ.ಸಿ. ನವ್ಯ
ಚಿತ್ರದುರ್ಗ

ಭಾವನೆಗಳಿಗೆ ಸ್ಪಂದಿಸಿ

'ಹದಿಹರೆಯದ ಹೃದಯದಾಳದಲ್ಲಿ' ಸಂಚಿಕೆ ಅದ್ಭುತವಾಗಿತ್ತು. ಅದರಲ್ಲೂ 23 ವಿದ್ಯಾರ್ಥಿ ಅತಿಥಿ ಸಂಪಾದಕರ ವಿಶ್ಲೇಷಣೆ ಅತ್ಯುತ್ತಮ! ಈ ಲೇಖನಗಳಲ್ಲಿ ಹದಿಹರೆಯದ ಯೋಚನಾಲಹರಿಗಳನ್ನು ಓದುತ್ತಾ ಯುವಮನಸ್ಸು ಎಷ್ಟು ಪ್ರಬುದ್ಧವಾಗಿದೆ ಅನಿಸಿತು. ಹಾಗಿದ್ದರೆ, ಪ್ರಸ್ತುತ ಯುವಜನಾಂಗ ಅದೇಕೆ ಕೆಟ್ಟ ದಾರಿಯಲ್ಲಿ ಸಾಗುತ್ತಿದೆ? ಎಂಬ ಪ್ರಶ್ನೆ ನನ್ನೊಳಗೇ ಒಡಮೂಡಿತು. ಹೆತ್ತವರು ತಮ್ಮ ಮಕ್ಕಳಿಗೆ ಸ್ವಾತಂತ್ರ್ಯ ನೀಡಬೇಕು, ಆದರೆ ಸ್ವಾತಂತ್ರ್ಯವೇ ಸ್ವೇಚ್ಛೆಯಾಗಬಾರದು. ಮಕ್ಕಳ ಜೊತೆ ಹೆಚ್ಚಾಗಿ ಬೆರೆತು, ಅವರ ಭಾವನೆಗಳಿಗೆ ಸ್ಪಂದಿಸಬೇಕು. ಆದರ್ಶ, ನಾಯಕತ್ವ, ಉದ್ಯಮ, ರಾಜಕೀಯ, ಭ್ರಷ್ಟಾಚಾರ, ನಿರುದ್ಯೋಗ, ಭಯೋತ್ಪಾದನೆ ಎಲ್ಲದರ ಬಗ್ಗೆ ಸ್ಪಷ್ಟ ಅರಿವು ಇರುವ ಯುವಜನರು ದೇಶಕ್ಕೆ ಉತ್ತಮ ನಾಯಕತ್ವ ನೀಡಬಲ್ಲರು ಎನ್ನುವುದು ಐಸಿಎಂಆರ್-ಟಿಎಸ್‌ಐ ಸಮೀಕ್ಷೆಯಿಂದ ತಿಳಿದುಬಂದಿದೆ.

ಎಚ್.ಎನ್. ರಂಗೇಗೌಡ
ಮಂಡ್ಯ

ಬಹುಮಾನಿತ ಪತ್ರಗಳು

ಶಕ್ತಿ ಇದ್ದವ ಗೆದ್ದ!

'ಐಪಿಎಲ್ ಸಾದರಪಡಿಸಿದ ಕಟು ವಾಸ್ತವ: ಕ್ರಿಕೆಟ್ ಲೋಕದ ಸಾಮ್ರಾಟ ಭಾರತ' (ಅರಿಂದಮ್ ಚೌಧುರಿ) ಸಂಪಾದಕೀಯಕ್ಕೆ ಈ ಪ್ರತಿಕ್ರಿಯೆ. ಹೌದು! ಇದೊಂದು ಮಹಾಸಾಧನೆ. ಐಪಿಎಲ್ ಟೂರ್ನಿ ಭಾರತೀಯ ಕ್ರಿಕೆಟ್ ಸಾಮ್ರಾಜ್ಯದಲ್ಲಿ ಮಾತ್ರವಲ್ಲ, ಜಾಗತಿಕ ಕ್ರಿಕೆಟ್ ಲೋಕದಲ್ಲಿ ಅಚ್ಚಳಿಯದ ದನಿ. ಐಸಿಎಲ್‌ಗೆ ನವನವೀನ ಉಪಾಯಗಳ ಬಗ್ಗೆ ತಿಳಿದಿತ್ತು, ಆದರೆ ಅವುಗಳನ್ನು ಕಾರ್ಯಗತಗೊಳಿಸುವ ತಂತ್ರ ತಿಳಿದಿರಲಿಲ್ಲ. ಆದರೆ ಐಪಿಎಲ್ ವ್ಯವಸ್ಥಿತವಾಗಿ ಪಂದ್ಯಾವಳಿ ಆಯೋಜಿಸಿದೆ. ರಣಜಿ ಮತ್ತು ದುಲೀಪ್ ಟ್ರೋಫಿಯನ್ನು ಸುಧಾರಿಸುವ ಕಾರ್ಯಗಳನ್ನು ಬಿಸಿಸಿಐ ಹಮ್ಮಿಕೊಳ್ಳಬಹುದಾಗಿತ್ತು. ಆದರೆ ಬಿಸಿಸಿಐಯ ಉದ್ದೇಶ ಹಣ ಸಂಪಾದನೆ ಮಾತ್ರ! ಕ್ರಿಕೆಟ್ ಲೋಕದಲ್ಲಿ ಆಮೂಲಾಗ್ರ ಕ್ರಾಂತಿ ಮೂಡಿಸಿದ ಕೀರ್ತಿ ಐಸಿಎಲ್‌ಗೆ ಸಲ್ಲಬೇಕು. ಬಿಸಿಸಿಐ ಐಸಿಎಲ್ ವಿಫಲವಾಗಲು ಸಾಕಷ್ಟು ಅಡೆತಡೆಗಳನ್ನು ಒಡ್ಡಿತ್ತು. ಪಂದ್ಯಾವಳಿಗೆ ಅಗತ್ಯವಾದ ಸೌಲಭ್ಯಗಳನ್ನೂ ಒದಗಿಸದೆ ಐಸಿಎಲ್‌ನ್ನು ಮೂಲೆಗುಂಪು ಮಾಡಲು ಪ್ರಯತ್ನಿಸಿತ್ತು. ಚಾರ್ಲ್ಸ್ ಡಾರ್ವಿನ್ ವಿಕಾಸವಾದ ಸಿದ್ಧಾಂತ ಶಕ್ತಿವಂತನ ಉಳಿವು ಇಲ್ಲಿ ನಿಜವಾಗಿದೆ.

ಸುಭಾಷ್ ಕುಮಾರ್
ರತ್ಲಂ

ಲೈಂಗಿಕ ಅರಿವು ಅಗತ್ಯ

ಡೇಟಿಂಗ್, ಪ್ರೇಮ ವ್ಯವಹಾರಗಳು ಮಾತ್ರವಲ್ಲದೆ ವಿವಾಹಪೂರ್ವ ಲೈಂಗಿಕ ಸಂಬಂಧಗಳು ಕೂಡ ಪ್ರಸ್ತುತ ಯುವಜನರಲ್ಲಿ ಅಪವಿತ್ರ ಎನ್ನುವಂತಿಲ್ಲ. ಹೆತ್ತವರ ಪ್ರೀತಿ, ಆಪ್ತತೆಯ ಕೊರತೆಯೂ ಹದಿಹರೆಯದವರು ಲೈಂಗಿಕ ಸಂಬಂಧದತ್ತ ಆಕರ್ಷಿತರಾಗಲು ಕಾರಣವಾಗುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಪ್ರತ್ಯೇಕ ಕುಟುಂಬಗಳೇ ಹೆಚ್ಚಾಗಿದ್ದು, ಹೆತ್ತವರಿಗೆ ಮಕ್ಕಳ ಜೊತೆ ಹೆಚ್ಚು ಕಾಲ ಕಳೆಯಲು ಸಮಯವಿರುವುದಿಲ್ಲ. ಮಾತ್ರವಲ್ಲ, ಮಾಧ್ಯಮಗಳೂ ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಪ್ರಚಾರ ಮಾಡುತ್ತವೆ. ಈ ಎಲ್ಲಾ ಆಕರ್ಷಣೆಗಳು ಹದಿಹರೆಯದವರ ಮೇಲೆ ಪರಿಣಾಮ ಬೀರುತ್ತವೆ. ಹೀಗಿರುವಾಗ ಹೆತ್ತವರು ಪಾಶ್ಚಾತ್ಯ ಪ್ರಭಾವ ಮಕ್ಕಳ ಮೇಲೆ ದುಷ್ಟರಿಣಾಮ ಬೀರಿದೆ ಎಂದು ಬೊಬ್ಬಿಡಲು ಹೇಗೆ ಸಾಧ್ಯ? ಭಿನ್ನ ಲಿಂಗಿಗಳೊಂದಿಗೆ ವ್ಯವಹರಿಸುವುದು ಮತ್ತು ಪ್ರಣಯ ವಯಸ್ಸಿನ ಸಹಜ ಚಟುವಟಿಕೆ ಮತ್ತು ಭಾರತದಲ್ಲಿ ಇಂಥ ಪ್ರವೃತ್ತಿ ಮೊದಲಿನಿಂದಲೂ ಇತ್ತು ಎನ್ನುವ ಸತ್ಯ ಹೆತ್ತವರು ಮನಗಾಣಬೇಕು. ಇಂತಹ ಸಂದರ್ಭದಲ್ಲಿ ಬಯಸದ ಗರ್ಭಧಾರಣೆ, ಚಿಕ್ಕ ವಯಸ್ಸಲ್ಲೇ ವಿವಾಹ, ಭಾವ ಗೊಂದಲಗಳಂಥ ಸಮಸ್ಯೆಗಳು ಎದುರಾಗುತ್ತವೆ. ಹದಿಹರೆಯದವರು ಪರಿಣಾಮ ಅರಿಯದೆ ಪ್ರಯೋಗಕ್ಕೆ ಮುನ್ನುಗ್ಗುತ್ತಾರೆ, ಇದರಿಂದ ತಪ್ಪು ಹೆಜ್ಜೆಯಿಡುವ ಸಂಭವವೇ ಹೆಚ್ಚು. ಇಂಥ ಸಂದಿಗ್ಧ ಸಮಯದಲ್ಲಿ ಶಾಲಾಮಟ್ಟದಲ್ಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಕುರಿತು ಅರಿವು ಮೂಡಿಸಬೇಕು

ಪ್ರಭಾಕರ್ ಕೌಶಿಕ್
ನಾಸಿಕ್

ವಿನಿಮಯ ತರವಲ್ಲ...

ಷಧ ತಯಾರಿಕಾ ಕ್ಷೇತ್ರದ ದುರವಸ್ಥೆಯನ್ನು ವಿವರಿಸಿದ 'ಅವ್ಯವಸ್ಥೆಗೆ ಯಾವುದು ಮದ್ದು?' (ಪ್ರಸೂನ್ ಮಜುಂದಾರ್) ಲೇಖನ ವಾಸ್ತವ ಚಿತ್ರಣ ನೀಡಿದೆ. ಪ್ರಸ್ತುತ ಆರ್ಥಿಕ ಕಾರಣಗಳಿಂದಲೇ ಪಾರಂಪರಿಕ ಆದರ್ಶ ವೈದ್ಯ ವೃತ್ತಿ ಬಿಕ್ಕಟ್ಟಿಗೆ ಸಿಲುಕಿದೆ. ಔಷಧಿ ತಯಾರಕರು ಮತ್ತು ವೈದ್ಯಕೀಯ ಸಂಸ್ಥೆಗಳು ತೀವ್ರ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ವೈಯಕ್ತಿಕ ಮತ್ತು ಸಮೂಹದ ನಡುವೆ ಪೈಪೋಏರ್ಪಟ್ಟಿದೆ. ವೈದ್ಯರು ಮತ್ತು ಔಷಧಿ ತಯಾರಿಕಾ ಕಂಪನಿಗಳು 'ಪರಸ್ಪರ ವಿನಿಮಯದ ಮಾದರಿ'ಯನ್ನು ಅನುಸರಿಸುತ್ತವೆ. ಔಷಧಿ ಕಂಪನಿಗಳು ತಮ್ಮ ಕಂಪನಿಯ ಔಷಧ ಮಾರಾಟವಾಗಲು ವೈದ್ಯರಿಗೆ ಉಡುಗೊರೆಗಳನ್ನು ನೀಡುತ್ತವೆ. ಈ ರೀತಿಯ ಉಡುಗೊರೆ ಮತ್ತು ಉಪಯೋಗಗಳನ್ನು ಪಡೆವ ಸಂಸ್ಥೆಗಳ ಜೊತೆ ವೈದ್ಯರು ಆಪ್ತ ಸಂಬಂಧ ಬೆಳೆಸಿಕೊಳ್ಳಬೇಕಾಗುತ್ತದೆ. ಇದು ವೈದ್ಯ ವೃತ್ತಿಯ ಜೊತೆ ರಾಜಿ ಮಾಡಿಕೊಂಡಂತೆಯೇ ಸರಿ. ವೈದ್ಯ ವೃತ್ತಿಯಲ್ಲಿ ಈ ರೀತಿಯ 'ಪರಸ್ಪರ ವಿನಿಮಯ ಮಾದರಿ' ನೈತಿಕವಲ್ಲ ಮತ್ತು ರೋಗಿಯೊಬ್ಬನ ಜೀವ 'ಉಡುಗೊರೆ'ಗಿಂತ ಮುಖ್ಯವಲ್ಲ ಎಂಬುದನ್ನು ವೈದ್ಯರು ಅರಿಯಬೇಕು.

ಡಿ. ರುಕ್ಮಣಿ
ಚೆನ್ನೈ

ಅಭಿವೃದ್ಧಿಗೆ ನಾಂದಿ

'ಹದಿಹರೆಯದ ಹೃದಯಾಳದಲ್ಲಿ' ವಿಶೇಷ ಸಂಚಿಕೆ ಚೆನ್ನಾಗಿ ಮೂಡಿಬಂದಿದೆ. ಹದಿಹರೆಯದವ ಮನದಿಂದ ಒಡಮೂಡಿದ ಅಭಿಪ್ರಾಯಗಳೂ ಓದಿಸಿಕೊಂಡುಹೋಗುತ್ತಿದ್ದವು. ಭಯೋತ್ಪಾದನೆ, ಆರ್ಥಿಕತೆ, ಒಟ್ಟಾರೆ ದೇಶದ ಕುರಿತಾದ ಅವರ ಅಭಿಪ್ರಾಯಗಳು ಮೆಚ್ಚುವಂಥದ್ದೆ. ದೇಶದ ವಿವಿಧ ಮೂಲೆಗಳಿಂದ ಆಗಮಿಸಿದ್ದ 23 ವಿದ್ಯಾರ್ಥಿ ಅತಿಥಿ ಸಂಪಾದಕರ ನೇತೃತ್ವದಲ್ಲಿ ಒಡಮೂಡಿದ ಪತ್ರಿಕೆ ನಿಜವಾಗೂ ವಿಶೇಷವಾಗಿತ್ತು. ಹದಿಹರೆಯದವರು ತಮ್ಮ ಸಣ್ಣ ವಯಸ್ಸಿನಲ್ಲೇ ಅಮೋಘ ಸಾಧನೆಗಳೊಂದಿಗೆ ಯಶಸ್ಸಿನ ಶಿಖರಗಳನ್ನೇರಿದ ಕುರಿತಾದ 'ಪರಿಪೂರ್ಣ ಹದಿಹರೆಯ' (ತಾರಿಖ್ ಲಷ್ಕರ್) ಲೇಖನ ಯುವಜನಾಂಗಕ್ಕೆ ಮಾದರಿ. ಸುಹಾಸ್ ಗೋಪಿನಾಥ್, ಅಂಕಿತ್ ಫಾಡಿಯಾ, ಸುನಿಧಿ ಚೌಹಣ್ ಹಾಗೂ ಪ್ರಾಚಿ ದೇಸಾಯಿ ಅವರಂತೆ ಎಲ್ಲಾ ಯುವಜನರೂ ಸಾಧನೆಯ ಬೆನ್ನೇರಿ ರಾಷ್ಟ್ರದ ಅಭಿವೃದ್ಧಿಗೆ ನಾಂದಿ ಹಾಡಲಿ.

ಡಿ. ಸೋಮೇಶ್ವರ ಭಟ್
ಬೆಂಗಳೂರು

ಎಚ್ಚರಿಕೆಯ ಕರೆಗಂಟೆ

'ಯಡಿಯೂರಪ್ಪ ಮುಂದಿರುವ ಪ್ರಮುಖ ಸವಾಲುಗಳು' ವಿಶ್ಲೇಷಣಾ ವರದಿ ಅರ್ಥಪೂರ್ಣವಾಗಿತ್ತು ಮತ್ತು ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರಣೆ ನೀಡಿದೆ. ಹಲವಾರು ಪತ್ರಿಕೆಗಳು, ಚಾನೆಲ್‌ಗಳು ಸರ್ಕಾರದ ಬಗ್ಗೆ, ಯಡಿಯೂರಪ್ಪ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದ್ದವು. ಆದರೆ ಟಿಎಸ್‌ಐನಲ್ಲಿ ಮೂಡಿಬಂದ ರೀತಿಯೇ ಭಿನ್ನ. ಬಿಜೆಪಿ ಭವಿಷ್ಯದ ಹಾದಿಯನ್ನು ಸವಿವರವಾಗಿ ಚಿತ್ರಿಸಲಾಗಿದೆ. ನೆಲ, ಜಲ, ಗಡಿನಾಡು, ನಕ್ಸಲ್, ಭಯೋತ್ಪಾದನೆ, ರಾಜಧಾನಿ ಸಮಸ್ಯೆ, ಸಾಮಾಜಿಕ ಸ್ವಾಸ್ಥ್ಯ ಎಲ್ಲವನ್ನೂ ತೆರೆದಿಡಲಾಗಿದೆ. ಒಂದು ರೀತಿಯಲ್ಲಿ ಇಂಥ ಲೇಖನಗಳು ಸರ್ಕಾರಕ್ಕೆ ಎಚ್ಚರಿಕೆಯ ಕರೆಗಂಟೆ ಹಾಗೂ ಮಾರ್ಗದರ್ಶಿಯೂ ಹೌದು. ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ತನ್ನ ಸವಾಲುಗಳನ್ನು ನೆನಪಲ್ಲಿಟ್ಟುಕೊಂಡು ಜನಸಾಮಾನ್ಯರ ನಾಡಿಮಿಡಿತವನ್ನು ಅರಿತು ಮುನ್ನಡೆಯಬೇಕಿದೆ.

ಕೆ. ಲೋಕೇಶ್
ಮಂಗಳೂರು

ಜವಾಬ್ದಾರಿ ಅರಿಯಲಿ

'ಯಡಿಯೂರಪ್ಪ ಮುಂದಿರುವ 10 ಪ್ರಮುಖ ಸವಾಲುಗಳು' ವಿಶ್ಲೇಷಣಾ ವರದಿ ಅತ್ಯಂತ ಸಮರ್ಪಕ ಚಿಂತನೆಯಿಂದ ಕೂಡಿತ್ತು. ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಭಾವೀ ಹುದ್ದೆಯಲ್ಲಿರುವ ಯಡಿಯೂರಪ್ಪ ಅವರ ಮುಂದಿರುವ ಸವಾಲುಗಳು, ನಡೆಸಬೇಕಾದ ಅಭಿವೃದ್ಧಿ ಕಾರ್ಯಗಳ ಸ್ಪಷ್ಟ ಚಿತ್ರಣವನ್ನು ಲೇಖನ ನೀಡಿದೆ. ಭಾರೀ ವಿವಾದ ಎಬ್ಬಿಸಿದ್ದ ಹೊಗೇನಕಲ್ ವಿವಾದವನ್ನು ಪರಿಹರಿಸುವುದು, ಹಾಗೇ ಇನ್ನೂ ಕನ್ನಡಕ್ಕೆ ಮರೀಚಿಕೆಯಾಗಿರುವ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಡುವ ಮಹತ್ವದ ಜವಾಬ್ದಾರಿ ಕೂಡ ಅವರ ಮೇಲಿದೆ. ಈ ಮಧ್ಯೆ ಆರಂಭದಲ್ಲೇ ಕೆಲವು ಬಿಜೆಪಿ ನಾಯಕರ ಅಸಮಾಧಾನದ ಕೂಗು ಕೇಳಿಬಂದಿದ್ದು, ಜೊತೆಗೆ ರಸಗೊಬ್ಬರ ಹಂಚಿಕೆ ಕುರಿತಾದ ರಾದ್ಧಾಂತಗಳೂ ಬಿಜೆಪಿಗೆ ಮುಳುವಾಗಿವೆ. ಒಟ್ಟಾರೆ ಯಡಿಯೂರಪ್ಪನವರು ಎಲ್ಲಾ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಎಂ.ಆರ್. ರಾಮಕೃಷ್ಣ
ಬೆಂಗಳೂರು

ಶಿಕ್ಷಣವೇ ವ್ಯಾಪಾರ?!

'ಮಾರ್ಕ್ಸ್‌ಕಾರ್ಡ್ ಮೀರಿದ ವಿಕಾಸ' (ಜ್ಯೋತಿ ಗುರುಪ್ರಸಾದ್) ಲೇಖನ ಚೆನ್ನಾಗಿ ಮೂಡಿಬಂದಿದೆ. 'ಜೀವನವನ್ನು ಸ್ವಂತಿಕೆಯಿಂದ ನಿರ್ವಹಿಸುವ ಪ್ರೀತಿ 'ಸಂಸ್ಕೃತಿ'ಯ ಶಿಕ್ಷಣ ನಮ್ಮದಾಗಬೇಕು' ಎನ್ನುವ ಲೇಖಕಿಯ ಈ ಮಾತನ್ನು ನಮ್ಮ ಸಮಾಜ ಅರ್ಥಮಾಡಿಕೊಳ್ಳಬೇಕಿದೆ. ಶಿಕ್ಷಣವೇ ವ್ಯಾಪಾರವಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಮೌಲ್ಯಯುತ ಶಿಕ್ಷಣ ಸಂಸ್ಕೃತಿಯ ಮೂಲಕ ಮಕ್ಕಳ ಬಾಳು ಹಸನಾಗುವ ಮಾತೆಲ್ಲಿ? ಪುಟ್ಟ ವಯಸ್ಸಿನಲ್ಲೇ ಮಕ್ಕಳಲ್ಲಿ ನಾಗರಿಕ ಪ್ರಜ್ಞೆ ಮೂಡಿಸುವ ಪ್ರಯತ್ನವಾಗಬೇಕು. ಮಕ್ಕಳ ಬದುಕಿನಲ್ಲಿ ಹೆತ್ತವರು ಮಾತ್ರವಲ್ಲ ಗುರುಗಳು, ಇಡೀ ಸಮಾಜದ ಪಾತ್ರ ಅತೀ ಮುಖ್ಯ. ಇಂಥ ಸೂಕ್ಷ್ಮ ಸಂಗತಿಗಳನ್ನು ಯಾರೂ ಪ್ರಸ್ತಾಪಿಸುವುದಿಲ್ಲ. ನಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗೋದೇ ಮುಖ್ಯವಲ್ಲ, ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವಂತೆ ಮಾಡಬೇಕು. ಲೇಖಕರು ಒಳ್ಳೆ ವಿಷಯವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಟಿಎಸ್‌ಐಗೆ ಕೃತಜ್ಞತೆಗಳು.

ಪುಷ್ಪಾ ಶ್ರೀನಿವಾಸ್
ಮೈಸೂರು

ದೀಪದಡಿ ಕತ್ತಲೆ

'ಸಮಸ್ಯೆಗಳ ರಾಜಧಾನಿ ಬೆಂಗಳೂರು' ವಾಸ್ತವಕ್ಕೆ ಹಿಡಿದ ಕೈಗನ್ನಡಿ. ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಪತಾಕೆ ಹಾರಿಸಿರುವ ಬೆಂಗಳೂರಿನ ಇನ್ನೊಂದು ಮುಖವನ್ನು ಟಿಎಸ್‌ಐ ಪರಿಚಯಿಸಿದೆ. ಐಟಿ, ಬಿಟಿ, ಜೈವಿಕ ತಂತ್ರಜ್ಞಾನಗಳ ತಾಣವಾಗಿರುವ ಬೆಂಗಳೂರಿನಲ್ಲಿ ನೆಲೆಸಿರುವ 22 ಲಕ್ಷ ಕೊಳೆಗೇರಿಗಳ ಬದುಕು ಬೆಳಗಿಸುವವರಾರು? ಹೌದು! ದೀಪದಡಿ ಯಾವಾಗಲೂ ಕತ್ತಲೆ ಎಂಬಂತಿದೆ ಸಿಲಿಕಾನ್ ಸಿಟಿಯ ಪರಿಸ್ಥಿತಿ. ಒಂದೆಡೆ ಭೂಗಳ್ಳರು ಬೆಳೆಯುತ್ತಿದ್ದರೆ ಇನ್ನೊಂದೆಡೆ ಬಡವರು ಸೂರಿಲ್ಲದೆ, ಹೊಟ್ಟೆಗೆ ತುತ್ತಿಲ್ಲದೆ ಬದುಕು ಸಾಗಿಸಬೇಕಾದ ದಯನೀಯ ಸ್ಥಿತಿ. ಯಾವ ಅಭಿವೃದ್ಧಿ ಚಿಂತಕನಿಗೂ ಇದು ಕಾಣಿಸುತ್ತಿಲ್ಲ. ಮಾಹಿತಿ ತಂತ್ರಜ್ಞಾನದಲ್ಲಿ ಬೆಂಗಳೂರನ್ನು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸಿದ ಯಾವ ಉದ್ಯಮಿಗಳಿಗಾದರೂ ಬಡಜನರ ಬವಣೆ ಅರಿವಾದೀತೇ? ಈ ವಾಸ್ತವವನ್ನು ಬಿಜೆಪಿ ಸರ್ಕಾರ ಅರಿಯಲಿ. ಅಭಿವೃದ್ಧಿ ಎಂದರೆ ಬಡಜನರ ಬವಣೆ ನೀಗಿಸುವುದೇ ಹೊರತು ಶ್ರೀಮಂತರ ಹೊಟ್ಟೆ ತುಂಬುವುದಲ್ಲ ಎಂಬುದನ್ನು ಅರಿತು ಯಡಿಯೂರಪ್ಪ ಜನಸಾಮಾನ್ಯರ ವಿಶ್ವಾಸ ಉಳಿಸಿಕೊಳ್ಳುವತ್ತ ಹೆಜ್ಜೆ ಹಾಕಲಿ.

ಆರ್. ಜಯಪ್ರಕಾಶ್
ಬೆಂಗಳೂರು

ಹಣದ ಹೊಳೆ

'ಐಪಿಎಲ್ ಸಾದರಪಡಿಸಿದ ಕಟು ವಾಸ್ತವ: ಕ್ರಿಕೆಟ್ ಲೋಕದ ಸಾಮ್ರಾಟ ಭಾರತ' (ಅರಿಂದಮ್ ಚೌಧುರಿ) ಸಂಪಾದಕೀಯ ಓದಿದೆ. ಐಪಿಎಲ್ ಟೂರ್ನಿಯಿಂದಾಗಿ ಹೊಸ ಪ್ರತಿಭೆಗಳ ಪರಿಚಯವಾಗಿದೆ. ಆದರೆ ಜನಸಾಮಾನ್ಯರಿಗೆ ಕ್ರಿಕಟ್ ಬಗ್ಗೆ ಎಷ್ಟೇ ಪ್ರೀತಿಯಿರಲಿ ಈ ಟೂರ್ನಿ ಯುರೋಪ್‌ನ ಕ್ಲಬ್ ಸಂಸ್ಕೃತಿಯ ಪಡಿಯಚ್ಚು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಭಾರತ ಕ್ರಿಕೆಟ್ ಲೋಕದ ಸಾಮ್ರಾಟ ಎನ್ನಬಹುದು, ಆದರೆ ನಾವು ಅರಿತುಕೊಳ್ಳಬೇಕಾದ ವಾಸ್ತವ ಇನ್ನೂ ಇದೆ. ಪ್ರತಿಭೆಯನ್ನು ಬಿಟ್ಟು ಹಣಕ್ಕಾಗಿ ಆಟಗಾರರ ಮಾರಾಟವಾಗಿದ್ದನ್ನು ನೆನೆದಾಗ ಮನಸ್ಸು ರೋದಿಸುತ್ತದೆ. ನಮ್ಮ ದೇಶದ ಆಟಗಾರರು ದೇಶಕ್ಕಾಗಿ ಅಲ್ಲ, ಹಣಕ್ಕಾಗಿ ಆಡುತ್ತಿದ್ದಾರೆ ಎಂದೆನಿಸಿದರೆ ತಪ್ಪಾಗಲಾರದು.

ವೈ. ರಾಮಚಂದ್ರ
ಹಾಸನ

ಏಳಿ, ಎದ್ದೇಳಿ!

'ಹದಿಹರೆಯ' ವಿಶೇಷ ಸಂಚಿಕೆ ಸಂಗ್ರಹಯೋಗ್ಯ. ಪ್ರಸ್ತುತ ರಾಜಕೀಯದಲ್ಲಿ ತಮ್ಮ ಪಾತ್ರ ಮುಖ್ಯ ಎಂಬುದನ್ನು ಯುವಜನರು ಮನಗಾಣಬೇಕಿದೆ. 'ಯುವ ಚಾಣಕ್ಯರು ಇಂದಿನ ತುರ್ತು' (ಸುಪ್ರಿಯಾ ಸುಲೆ) ಲೇಖನದಲ್ಲಿ ಈ ಬಗ್ಗೆ ಮನಮುಟ್ಟುವಂತೆ ಹೇಳಿದ್ದಾರೆ. ಯುವಜನತೆ ರಾಜಕೀಯ ಕುರಿತ ಅಸಹ್ಯ ಭಾವನೆ ತೊರೆಯಬೇಕು. ದಿನದ 24 ಗಂಟೆಯೂ ನಿದ್ದೆಯಲ್ಲಿ ತೂಕಡಿಸುವ ರಾಜಕಾರಣಿಗಳಿಂದ ದೇಶ ಕಟ್ಟಲು ಸಾಧ್ಯವೇ?ಸಮರ್ಥ ಮತ್ತು ಪ್ರಾಮಾಣಿಕ ನಾಯಕತ್ವದ ಮೂಲಕ ಭವ್ಯ ಭವಿಷ್ಯ ಕಟ್ಟಲು ಯುವಜನರಿಂದಲೇ ಸಾಧ್ಯ. ಅದಕ್ಕೆ ತಾನೇ ಹೇಳಿದ್ದು ಸ್ವಾಮೀ ವಿವೇಕಾನಂದರು 'ಏಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ' ಎಂದು.

ಎಂ. ಮಲ್ಲಿಕಾರ್ಜುನ
(ಇ-ಮೇಲ್ ಮೂಲಕ)

ಮಾಹಿತಿಯೋಗ್ಯ ಅಂತರ್ಜಾಲ ಸಂಚಿಕೆ

ವೆಬ್‌ಸೈಟ್‌ನಲ್ಲಿ ಟಿಎಸ್‌ಐನ ಹಿಂದಿನ ಸಂಚಿಕೆಗಳೂ ಇದ್ದು ಸಂಗ್ರಹಯೋಗ್ಯ ಎನಿಸಿವೆ. ಉತ್ತಮ ಮಾಹಿತಿಗಳ ಮಹಾಪೂರವೇ ಇಲ್ಲಿದ್ದು, ಸದಾ ಓದಬೇಕೆಂದು ಬಯಸಿದ್ದೇನೆ. ಪತ್ರಿಕೆಯ ದೃಷ್ಟಿಕೋನ, ಬರಹಶೈಲಿಯೂ ಮೆಚ್ಚುವಂತದ್ದು.

ಸುಭಾಷ್ಚಂದ್ರ ರಾವ್
ಬೆಂಗಳೂರು

ಹಿಂದುತ್ವಕ್ಕೆ ಕೊಕ್

'ಯಡಿಯೂರಪ್ಪ ಮುಂದಿರುವ ಪ್ರಮುಖ ಸವಾಲುಗಳು' (ಬಿ.ಎಸ್. ನಾರಾಯಣ ಸ್ವಾಮಿ, ಶಶಿ ಸಂಪಳ್ಳಿ, ಸತೀಶ್ ಚಪ್ಪರಿಕೆ) ವಿಶ್ಲೇಷಣಾ ವರದಿ ವಾಸ್ತವಕ್ಕೆ ಸಮೀಪವಾಗಿತ್ತು. ಅಭಿವೃದ್ಧಿ ಮಂತ್ರಪಠಿಸಿದ ಬಿಜೆಪಿ ಈಗ ನಿರಾಯಾಸವಾಗಿ ಅಧಿಕಾರ ಗದ್ದುಗೆ ಏರಿದೆ. ಯಾವಾಗಲೂ ಸಾಮಾಜಿಕ ಸಮತೋಲನ ಮುಖ್ಯ. 'ಹಿಂದುತ್ವ' ಒಂದು ಮುಖವಾಡವಲ್ಲ, ಅದು ಭಾರತೀಯ ಪರಂಪರೆಯ ಸಂಕೇತ. ಆದರೆ ಹಿಂದುತ್ವದ ನೆಪದಲ್ಲಿ ಇತರ ಜನಾಂಗದವರನ್ನು ತುಳಿದಲ್ಲಿ ಜನಬೆಂಬಲ ಸಿಗದು ಎಂಬುದು ಬಿಜೆಪಿಗೆ ಈಗ ಅರ್ಥವಾಗಿದೆ. ಒಂದು ವೇಳೆ ಅಧಿಕಾರದ ಗದ್ದುಗೆ ಏರಲಷ್ಟೇ ತಾತ್ಕಾಲಿಕವಾಗಿ ಹಿಂದೂವಾದವನ್ನು ತೊರೆದು, ಮತ್ತೆ ಅಧಿಕಾರ ಬಲ ಹೆಚ್ಚಿದಾಗ ಸಂಘರ್ಷದ ಹಾದಿ ತುಳಿದರೆ ಬಿಜೆಪಿಗೆ ಅವನತಿ ಖಂಡಿತಾ ತಪ್ಪಿದ್ದಲ್ಲ. ದಲಿತರು, ಅಲ್ಪಸಂಖ್ಯಾತರು ಭಾರತೀಯ ಪರಂಪರೆಯ ಒಂದು ಭಾಗ. ಅವರ ಏಳಿಗೆಯಾದರೆ ಮಾತ್ರ ಸಮಗ್ರ ಭಾರತದ ಏಳಿಗೆ. ಬಿಜೆಪಿ ಜನಸಾಮಾನ್ಯರ ಮನದಲ್ಲಿ ಚಿರಸ್ಥಾಯಿಯಾಗಬೇಕಾದರೆ ಇದನ್ನೆಲ್ಲ ಅರ್ಥೈಸಿಕೊಳ್ಳಬೇಕು. ಭಾರತೀಯ ಸಮಸ್ತ ಜನಾಂಗದವರಿಗೆ ಸಾಮಾಜಿಕ ನ್ಯಾಯ ನೀಡುವಂತಾಗಬೇಕು.

ರೇ.ಚ. ರೇವಡಿಗಾರ
ಸಿಂಧಗಿ

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .