ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ದೇಸಿ ದನಿ
 
 

ಕೃಷಿ: ಬಿಕ್ಕಟ್ಟು

ರಸಗೊಬ್ಬರ ಅಷ್ಟು ಅನಿವಾರ್ಯವೇ?

ಹಿಡುವಳಿದಾರರಿಗೆ ಪರ್ಯಾಯ ಕೃಷಿಯೇ ಬಿಡುಗಡೆ ಮಾರ್ಗ

ಅಂತೂ ಕರ್ನಾಟಕದಲ್ಲಿ ತಾರಕಕ್ಕೇರಿದ್ದ 'ರಸಗೊಬ್ಬರದ ಅಬ್ಬರ' ಶಾಂತವಾಗಿದೆ. ಕೇಂದ್ರವು 1.4 ಲಕ್ಷ ಟನ್ ಡೈ ಅಮೋನಿಯಂ ಫಾಸ್ಪೇಟ್ (ಡಿಎಪಿ) ಮತ್ತು 1.1 ಲಕ್ಷ ಟನ್ ಕಾಂಪ್ಲೆಕ್ಸ್ ಗೊಬ್ಬರ ಒದಗಿಸುವ ಭರವಸೆ ನೀಡಿದೆ. 'ಅಬ್ಬರ' ಶಮನವಾಗುವ ಮುನ್ನ ಒಬ್ಬ ರೈತನ ಸಾವು, ಹಲವಾರು ಮಂದಿಗೆ ಗಾಯ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ... ಇತ್ಯಾದಿ ಅವಘಡಗಳಿಗೆ ರಾಜ್ಯ ಸಾಕ್ಷಿಯಾಗಬೇಕಾಯಿತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದೊಡನೆಯೇ ರಸಗೊಬ್ಬರದ 'ಲಿಟ್ಮಸ್ ಟೆಸ್ಟ್'ಗೆ ಒಳಗಾಗಬೇಕಾಯಿತು.

ರಸಗೊಬ್ಬರ ಕೊರತೆ ಏಕಾಯಿತು? ಪ್ರತಿ ಜನವರಿಯಲ್ಲಿ ರಾಜ್ಯ ಸರ್ಕಾರ ಅಗತ್ಯ ಗೊಬ್ಬರ ಪ್ರಮಾಣ ಒದಗಿಸುವಂತೆ ಗೊಬ್ಬರ ಕಂಪನಿಗಳಿಗೆ ಸೂಚನೆ ನೀಡುವುದು ವಾಡಿಕೆ. ಆಗ ಮಾರ್ಚ್ ಅಥವಾ ಏಪ್ರಿಲ್ ಹೊತ್ತಿಗೆ ಗೊಬ್ಬರ ಸರಬರಾಜಾಗುತ್ತದೆ. ಆದರೆ ಕಳೆದ ಜನವರಿ ವೇಳೆ ರಾಷ್ಟ್ರಪತಿ ಆಡಳಿತ ಇದ್ದುದರಿಂದ ಗೊಬ್ಬರ ಪ್ರಮಾಣ ಸೂಚಿಸುವ 'ಕಷ್ಟ'ವನ್ನು ಯಾವ ಅಧಿಕಾರಿಗಳೂ ತೆಗೆದುಕೊಳ್ಳಲು ಹೋಗಲಿಲ್ಲ. ಇದನ್ನೇ ಕಾಯುತ್ತಿದ್ದೋ ಏನೋ ಗೊಬ್ಬರ ಕಂಪನಿಗಳೂ ಕೂಡಾ ಅಗತ್ಯ ಪ್ರಮಾಣದ ಗೊಬ್ಬರ ಉತ್ಪಾದಿಸಲು ಹೋಗಲಿಲ್ಲ. ಅಲ್ಲದೆ ಗೊಬ್ಬರಕ್ಕೆ ಸರ್ಕಾರದ ಸಬ್ಸಿಡಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದರಿಂದ ಗೊಬ್ಬರ ಬೆಲೆ ಹೆಚ್ಚಾಗುತ್ತಲೇ ಇದೆ. ಮತ್ತೊಂದು ಕಡೆ ಗೊಬ್ಬರ ಕಂಪನಿಗಳಿಗೆ ಸರ್ಕಾರದಿಂದ ಕಾಲಕಾಲಕ್ಕೆ ಸಬ್ಸಿಡಿ ಬಿಲ್ ಪಾವತಿಯಾಗುತ್ತಿಲ್ಲ. ಕಳೆದ ವರ್ಷದ ಹೊತ್ತಿಗೇ ಕೇಂದ್ರ ಸರ್ಕಾರದಿಂದ ಒಟ್ಟು 95,000 ಕೋಟಿ ರೂ. ಸಬ್ಸಿಡಿ ಬಿಲ್ ಬಾಕಿ ಇದೆ. ಈ ಕಾರಣದಿಂದ ಗೊಬ್ಬರ ಕಂಪನಿಗಳು ಸರ್ಕಾರಕ್ಕೆ ಗೊಬ್ಬರ ಒದಗಿಸುವ ಬದಲಿಗೆ ಖಾಸಗಿ ವಿತರಕರಿಗೇ ಸರಬರಾಜು ನೀಡಲು ಉತ್ಸುಕವಾಗಿವೆ.

ಈ ಹಿನ್ನೆಲೆಯಲ್ಲಿ ಉದ್ಭವಿಸುವ ಪ್ರಶ್ನೆ ಎಂದರೆ: ನಮ್ಮ ಕೃಷಿ ಪದ್ಧತಿಗೆ ರಸಗೊಬ್ಬರ ಅಷ್ಟೊಂದು ಅನಿವಾರ್ಯವೇ? ಹೌದು ಎನ್ನುತ್ತಾರೆ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್. ರಸಗೊಬ್ಬರಕ್ಕೆ ಬದಲಾಗಿ ಸಾವಯವ, ಜೈವಿಕ, ಕಾಂಪೋಸ್ಟ್ ಗೊಬ್ಬರಗಳು, ಶೂನ್ಯ ಬಂಡವಾಳದ ಕೃಷಿ ಪದ್ಧತಿ... ಮುಂತಾದ ಹಲವು ಪರ್ಯಾಯಗಳಿವೆ. ಆದರೆ ಇವೆಲ್ಲಾ ನಮ್ಮ ಸಣ್ಣ ರೈತರಿಗೆ ಪೂರಕವಾಗಿಲ್ಲ. ದೇಶದ ಒಟ್ಟು ರೈತರಲ್ಲಿ ಶೇ. 80ಕ್ಕಿಂತಲೂ ಹೆಚ್ಚು ರೈತರು ಸಣ್ಣ ಹಿಡುವಳಿದಾರರು. ಹೀಗಾಗಿ ರಸಗೊಬ್ಬರ ಸದ್ಯಕ್ಕೆ ಅತಿ ಅನಿವಾರ್ಯ ಎನ್ನುತ್ತಾರೆ.

ಆದರೆ ಕೃಷಿ ತಜ್ಞರಾದ ಸುಭಾಷ್ ಪಾಳೇಕರ್, ಕಡಿದಾಳ್ ಶಾಮಣ್ಣ ಮುಂತಾದವರು ಇದನ್ನು ಒಪ್ಪುವುದಿಲ್ಲ. ಎಲ್ಲಿಯವರೆಗೆ ಹೈಬ್ರಿಡ್ ಬೀಜಗಳ ಬಳಕೆಯಾಗುತ್ತದೋ ಅಲ್ಲಿಯವರೆಗೆ ರಾಸಾಯನಿಕ ಗೊಬ್ಬರದ ಬಳಕೆ ತಪ್ಪುವುದಿಲ್ಲ. ಪರ್ಯಾಯ ಕೃಷಿ ಪದ್ಧತಿಗಳತ್ತ ಸಣ್ಣ ಹಿಡುವಳಿದಾರರೂ ಮುಂದಾದರೆ ಅವರಿಗೆ ನಷ್ಟವೇನಿಲ್ಲ ಎನ್ನುತ್ತಾರೆ ಅವರು.

ಹಸಿರು ಕ್ರಾಂತಿಯ ಸಂದರ್ಭದಲ್ಲಿ ಎರಡು ಪಟ್ಟು, ಮೂರು ಪಟ್ಟು ಹೆಚ್ಚಿನ ಫಸಲು ಬರಲು ಕಾರಣವಾದ ರಸಗೊಬ್ಬರ ಇಂದು ಕೃಷಿಕರ ತಲೆಯ ಮೇಲಿನ ಕಾರ್ಮೋಡವಾಗಿ ಪರಿಣಮಿಸಿರುವುದು ವಿಪರ್ಯಾಸ. ಸರ್ಕಾರ ಈಗಲೇ ಎಚ್ಚತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಕೃಷಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲ.

ಟಿಎಸ್‌ಐ

ಬಿ.ಎಸ್. ನಾರಾಯಣಸ್ವಾಮಿ

ಪಂಜಾಬ್: ಕೃಷಿ

'ಭಯ್ಯಾ'ಗಳಿಗೆ ಭರ್ಜರಿ ಬೇಡಿಕೆ

ಕೃಷಿ ಕೆಲಸಕ್ಕೆ ಕೂಲಿಕಾರ್ಮಿಕರ ಕೊರತೆ, ರೈತರ ಪರದಾಟ

'ಭಯ್ಯಾ ಎಕ್ಸ್‌ಪ್ರೆಸ್'! ಬಿಹಾರ ಮತ್ತು ಉತ್ತರಪ್ರದೇಶದ ಕೂಲಿಕಾರ್ಮಿಕರು ಸಂಪದ್ಭರಿತ ಪಂಜಾಬ್ ರಾಜ್ಯಕ್ಕೆ ಕೃಷಿ ಕೆಲಸ ಅರಸಿ ಬರುವ ರೈಲಿನ ಅಡ್ಡ ಹೆಸರಿದು.

ಆದರೆ ಈ ವರ್ಷ ಈ 'ಭಯ್ಯಾ ಎಕ್ಸ್‌ಪ್ರೆಸ್' ರೈಲಿನ ಬೋಗಿಗಳೆಲ್ಲಾ ಖಾಲಿಯೇ! ಹೀಗಾಗಿ ಗೋಧಿ ಸುಗ್ಗಿ ಮಾಡಲು ಕೂಲಿಕಾರ್ಮಿಕರಿಗಾಗಿ ಪರದಾಟ ಆರಂಭವಾಗಿದೆ. ಅತ್ತ ಪಂಜಾಬಿ ರೈತರು ಹಿಂಡು-ಹಿಂಡಾಗಿ ರೈಲ್ವೆ ನಿಲ್ದಾಣದಲ್ಲಿ ಪ್ರತಿವರ್ಷದ ವಾಡಿಕೆಯಂತೆ ಕೃಷಿ ಕೂಲಿಕಾರ್ಮಿಕರಿಗಾಗಿ ಕಾಯುತ್ತಾ ನಿಂತದ್ದೇ ನಿಂತಿದ್ದು. ಆದರೆ ಕೂಲಿಕಾರ್ಮಿಕರು ಮಾತ್ರ ನಾಪತ್ತೆ! ಕಾರಣ? ಬಿಹಾರ್- ಉತ್ತರಪ್ರದೇಶಗಳಿಂದ ಬರುತ್ತಿದ್ದ ಕೂಲಿಕಾರ್ಮಿಕರು ಬೇರೆ ರಾಜ್ಯಗಳಲ್ಲಿ ಸಿಗುವಷ್ಟೇ ಕೂಲಿಗೆ ತಮ್ಮ ರಾಜ್ಯಗಳಲ್ಲೇ ಕೆಲಸ ಕಂಡುಕೊಳ್ಳುತ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ಈ ಕೂಲಿಕಾರ್ಮಿಕರು ಪಂಜಾಬ್‌ಗೆ ಪಯಣಿಸಿ, ಅಲ್ಲಿ ಕೆಲಸ ಮಾಡಿ ತಮ್ಮ ರಾಜ್ಯದಲ್ಲಿ ದೊರೆಯುವಷ್ಟೇ ಕೂಲಿ ಪಡೆದುಕೊಳ್ಳಲು ಬಯಸುತ್ತಿಲ್ಲ.

ಕಾರ್ಮಿಕರ ಕೊರತೆ ರೈತರ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ರಾಜ್ಯದ ಕೃಷಿ ಪ್ರದೇಶಗಳಲ್ಲಿ ಭತ್ತ ಬಿತ್ತನೆ ಕಾರ್ಯದಲ್ಲಿ ಹಿನ್ನೆಡೆಯಾಗಬಹುದು. ಹಾಗೆಯೇ ಭತ್ತದ ಫಸಲು ಕಡಿಮೆಯಾಗಲಿದೆ ಎನ್ನುತ್ತಾರೆ ಟಿಎಸ್‌ಐ ಜೊತೆ ಮಾತನಾಡಿದ ಭಾರತೀಯ ಕಿಸಾನ್ ಸಂಘ (ಬಿಕೆಯು)ದ ಅಧ್ಯಕ್ಷ ಅಜ್ಮೀರ್ ಸಿಂಗ್ ಲಾಖೋವಾಲ್. ಕೃಷಿಗೆ ನೀರಿನ ಅಭಾವ ಕಂಡುಬರುವ ಹಿನ್ನೆಲೆಯಲ್ಲಿ ರೈತರು ಜೂನ್‌ಗೆ ಮೊದಲೇ ಭತ್ತ ನಾಟಿ ಮಾಡುವ ಕೆಲಸ ಆರಂಭಿಸಬಾರದು ಎಂದು ರಾಜ್ಯ ಸರ್ಕಾರ ಕೇಳಿಕೊಂಡ ಕಾರಣ ಪಂಜಾಬ್ ರಾಜ್ಯದಲ್ಲಿ ಜೂನ್ 10ರಿಂದ ಭತ್ತದ ನಾಟಿ ಕಾರ್ಯ ಆರಂಭವಾಗಿದೆ.

1960ರಲ್ಲಿ ಹಸಿರು ಕ್ರಾಂತಿಯ ಸಂದರ್ಭದಲ್ಲಿ ಕೂಲಿಕಾರರಿಗೆ ಬೇಡಿಕೆ ಹೆಚ್ಚಾದಾಗ ಬಿಹಾರದಿಂದ ಅಗಾಧ ಸಂಖ್ಯೆಯಲ್ಲಿ ವಲಸೆ ಕೂಲಿಕಾರ್ಮಿಕರು ಕೃಷಿ ಕೆಲಸ ಅರಸುತ್ತಾ ಪಂಜಾಬ್‌ಗೆ ಬರಲಾರಂಭಿಸಿದ್ದರು. ಪಂಜಾಬ್‌ನ ಜಮೀನ್ದಾರರು ಮತ್ತು ಅಲ್ಲಿನ ಕೆಳ ಜಾತಿಯ ಭೂರಹಿತ ಕೂಲಿಕಾರ್ಮಿಕರ ಸಂಬಂಧದಲ್ಲಿ ಬಿರುಕು ತಲೆದೋರಿದಾಗ ಉತ್ತರ ಪ್ರದೇಶ ಮತ್ತು ಬಿಹಾರದ ಕಾರ್ಮಿಕರು ಪಂಜಾಬ್‌ನ ಭೂಮಾಲೀಕರಿಗೆ ವರವಾಗಿ ಪರಿಣಮಿಸಿದ್ದರು ಎಂದರೆ ತಪ್ಪಿಲ್ಲ. ಸುಮಾರು 1970ರ ಆದಿಯಲ್ಲಿ ಕಡಿಮೆ ಕೂಲಿಗೆ ದುಡಿಯುತ್ತಿದ್ದ ಬಿಹಾರ ಮತ್ತು ಉತ್ತರ ಪ್ರದೇಶದ ಕಾರ್ಮಿಕರನ್ನು ಸ್ವಲ್ಪ ಮಟ್ಟಿಗಷ್ಟೇ ಅವಲಂಬಿಸಿದ್ದ ಭೂಮಾಲೀಕರು ನಂತರದ ದಿನಗಳಲ್ಲಿ ಸಂಪೂರ್ಣವಾಗಿ ವಲಸೆ ಕಾರ್ಮಿಕರನ್ನೇ ನೆಚ್ಚಿಕೊಂಡರು. ಹಾಗಾಗಿ ದಶಕಗಳಿಂದ ಪಂಜಾಬಿಗಳು ಭೂಮಾಲೀಕರಾಗಿದ್ದರೆ ಹಿಂದಿ ಮಾತನಾಡುವ 'ಭಯ್ಯಾ'ಗಳು ಹೊಲ ಉಳುತ್ತಿದ್ದರು. ಆನಂತರ ಕೂಲಿಕಾರ್ಮಿಕರು ಹರಿಯಾಣ ರಾಜ್ಯದೆಡೆಗೂ ವಲಸೆ ಹೋಗಲು ಆರಂಭಿಸಿದ್ದರು.

ಈಗ ತಲೆದೋರಿರುವ ವಲಸೆ ಕೂಲಿಕಾರ್ಮಿಕರ ಕೊರತೆಗೆ ಕಾರಣಗಳು ಹಲವು. 1990ರ ದಶಕದಲ್ಲಿ ಪಂಜಾಬ್ ನಿರಂತರವಾಗಿ ಭಯೋತ್ಪಾದಕರ ದಾಳಿಗೆ ತುತ್ತಾಯಿತು. ಆ ಸಂದರ್ಭದಲ್ಲಿ ಹಲವಾರು ವಲಸೆ ಕಾರ್ಮಿಕರು ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದರು. ಈ ಕಾರಣದಿಂದಾಗಿ ಪಂಜಾಬ್‌ಗೆ ಪ್ರತಿವರ್ಷ ವಲಸೆ ಬರುತ್ತಿದ್ದ ಕಾರ್ಮಿಕರ ಸಂಖ್ಯೆ ಸ್ವಲ್ಪ ಇಳಿಮುಖವಾಗಿತ್ತು. ಇನ್ನೊಂದು ಗಮನಾರ್ಹ ಅಂಶವೆಂದರೆ ಗ್ರಾಮೀಣ ಪ್ರದೇಶಗಳನ್ನು ತೊರೆದ ಕೂಲಿಕಾರ್ಮಿಕರು ದೆಹಲಿ, ಮುಂಬೈ, ಸೂರತ್, ಕೋಲ್ಕತ್ತಾ, ಗುವಾಹತಿ ಅಥವಾ ಹೈದರಾಬಾದ್‌ನಂತಹ ಹೈಟೆಕ್ ನಗರಕ್ಕೆ ಕೆಲಸ ಅರಸಿ ಹೋಗಲಾರಂಭಿಸಿದರು. ಅನಿಶ್ಚಿತ ಆದಾಯದ ಕೂಲಿಯ ಬದಲು, ಪ್ರತಿ ತಿಂಗಳು ನಿಶ್ಚಿತ ಆದಾಯ ತರುವ ಉದ್ಯೋಗಗಳತ್ತ ವಾಲಲು ಆರಂಭಿಸಿದರು. ಇಷ್ಟೇ ಅಲ್ಲ, ಎಷ್ಟೋ ವರ್ಷಗಳಿಂದ ಪಂಜಾಬ್‌ನಲ್ಲಿ ಕೂಲಿಕಾರ್ಮಿಕರು ಕಡಿಮೆ ಕೂಲಿಗೇ ಬೆವರು ಹರಿಸಬೇಕಾದ ದಯನೀಯ ಸ್ಥಿತಿಯೂ ಮುಖ್ಯ ಕಾರಣವಾಗಿದೆ.

ಆದರೆ ಈ ವರ್ಷ ರೈತರು ವಾಡಿಕೆಗಿಂತ ಎರಡು ಅಥವಾ ಮೂರು ಪಟ್ಟು ಹೆಚ್ಚು ಕೂಲಿ ನೀಡಲೂ ಸಿದ್ಧರಿದ್ದಾರೆ, ಆದರೆ ಕೂಲಿಗಳೇ ಸಿಗುತ್ತಿಲ್ಲ. ರಾಜ್ಯದಾದ್ಯಂತ ಇದೀಗ ಭತ್ತ ನಾಟಿ ಮಾಡುವ ಸಮಯ. ಹಿಂಡು-ಹಿಂಡಾಗಿ ರೈಲ್ವೆ ನಿಲ್ದಾಣದಲ್ಲಿ ಕೂಲಿ ಕಾರ್ಮಿಕರಿಗಾಗಿ ಕಾಯುವುದನ್ನು ಹೊರತು ರೈತರಿಗೆ ಬೇರೆ ದಾರಿ ಇಲ್ಲ. ಸಣ್ಣ ರೈತರಂತೂ ಪಡಬಾರದ ಕಷ್ಟ ಪಡುತ್ತಿದ್ದಾರೆ. ಪೂರೈಕೆಗಿಂತ ಬೇಡಿಕೆಯೇ ಹೆಚ್ಚಿರುವ ಪರಿಣಾಮವಾಗಿ ಕಾರ್ಮಿಕರು ಕಳೆದ ವರ್ಷಕ್ಕಿಂತ ನೂರು ಪಟ್ಟು ಹೆಚ್ಚು ಕೂಲಿ ಬೇಡುತ್ತಿದ್ದಾರೆ.

ಪ್ರತಿ ವರ್ಷ ಭತ್ತದ ನಾಟಿಯಲ್ಲಿ ವಲಸೆ ಕಾರ್ಮಿಕರ ಪಾಲು ಶೇ. 90ರಷ್ಟು! ಈ ವರ್ಷ ರಾಜ್ಯದಲ್ಲಿ ಕೃಷಿಗಾಗಿ 26 ಹೆಕ್ಟೇರ್‌ಗಳಷ್ಟು ಹೆಚ್ಚುವರಿ ಭೂಮಿಯನ್ನು ಮೀಸಲಿಡಲು ನಿರ್ಧರಿಸಲಾಗಿದೆ. ಆದರೆ ವಲಸೆ ಕಾರ್ಮಿಕರನ್ನೇ ಅವಲಂಬಿಸಿರುವ ಪಂಜಾಬ್ ರಾಜ್ಯದ ಪ್ರಸ್ತುತ ಸ್ಥಿತಿಯನ್ನು ಕಂಡಾಗ ಇದು ಸಾಧ್ಯವೇ ಎಂಬುದು ಮುಂದಿರುವ ಪ್ರಶ್ನೆ.

ಟಿಎಸ್‌ಐ

ನಿರುಪಮಾ ದತ್

ಆಂಧ್ರಪ್ರದೇಶ: ಸೇಂದಿ ಸಮಸ್ಯೆ

ಅಲ್ಲಿ ಮದ್ಯದ ಮಳೆ, ಇಲ್ಲಿ ಕಂಬನಿಯ ಹೊಳೆ

ಸೇಂದಿ ಇಳಿಸುವ 10 ಲಕ್ಷ ಕುಟುಂಬಗಳಿಗೆ ಮುಳುವಾದ ಹೊಸ ನೀತಿ

ಆಂಧ್ರಪ್ರದೇಶದ ವೈ.ಎಸ್. ರಾಜಶೇಖರ ರೆಡ್ಡಿ ನೇತೃತ್ವದಲ್ಲಿನ ಕಾಂಗ್ರೆಸ್ ಸರ್ಕಾರದ ಅಬಕಾರಿ ಇಲಾಖೆ ಖಜಾನೆ ತುಂಬಿತುಳುಕುತ್ತಿದೆ! ಕಾರಣ ಇಷ್ಟೆ. ಆಂಧ್ರದ ಉದ್ದಗಲಕ್ಕೂ ಮದ್ಯದ ಹೊಳೆ ಹರಿಯುತ್ತಿದೆ. ಎಲ್ಲಾ ಪ್ರಸಿದ್ಧ ಮದ್ಯ ಹಾಗೂ ಬಿಯರ್ ಬ್ರ್ಯಾಂಡ್‌ಗಳು ರಾಜ್ಯದ ಈ ಬೃಹತ್ ಸಮುದ್ರದೊಳಗೆ ನೇರವಾಗಿ ಪ್ರವೇಶಿಸಲು ಪ್ರಯತ್ನ ನಡೆಸುತ್ತಿವೆ. ಜುಲೈ ಒಂದರಿಂದ ಜಾರಿಗೆ ಬರುವ ನೂತನ ಅಬಕಾರಿ ನೀತಿ ಮದ್ಯ ಮತ್ತು ಬಿಯರ್‌ನಿಂದ ಈ ವರ್ಷ ಹತ್ತು ಸಾವಿರ ಕೋಟಿ ರೂ. ಗಳಿಸುವ ಉದ್ದೇಶ ಹೊಂದಿದೆ.

ಅಬಕಾರಿ ಇಲಾಖೆ 1200ಕ್ಕೂ ಅಧಿಕ ಬಾರ್ ಮತ್ತು ಕ್ಲಬ್‌ಗಳಿಗೆ ಅನುಮತಿ ನೀಡಿದ್ದು, ಈಗಾಗಲೇ ಅಲ್ಲಿರುವ 7500 ಬಾರ್ ಮತ್ತು 13,000 ಮದ್ಯದಂಗಡಿಗಳ ಜೊತೆಗೆ 3200 ಹೊಸ ಮದ್ಯದಂಗಡಿಗಳನ್ನು ಆರಂಭಿಸುತ್ತಿದೆ. ರಾಜ್ಯದಲ್ಲಿ ವೃದ್ಧಿಯಾಗುತ್ತಿರುವ 70,000 ಸಣ್ಣ ಮದ್ಯದಂಗಡಿಗಳಿಗೆ ಇವು ಮತ್ತಷ್ಟು ಸೇರ್ಪಡೆಯಷ್ಟೆ.

ಅಬಕಾರಿ ಇಲಾಖೆ ಈ ಕ್ರಮವನ್ನು ಅತೀ ಶೀಘ್ರ ಮತ್ತು ಭಾರೀ ಪ್ರಮಾಣದಲ್ಲಿ ಕೈಗೊಳ್ಳಲಿದೆ. ರಾಜ್ಯ ಪ್ರತಿ ವರ್ಷ ಉತ್ಪತ್ತಿ ಮಾಡುವ 1965 ಲಕ್ಷ ಲೀಟರ್ ಬಿಯರ್ ಅಲ್ಲದೆ, 250 ಲಕ್ಷ ಲೀಟರ್ ಹೆಚ್ಚುವರಿ ಬಿಯರ್ ಉತ್ಪಾದಿಸುವ ಉದ್ದೇಶ ಹೊಂದಿದೆ. ಹಾಗಾಗಿ ಸರ್ಕಾರ ಕಳೆದ ಬಾರಿಯ ರೂ. 1200 ಕೋಟಿಗೆ ಹೋಲಿಸಿದಲ್ಲಿ ಈ ಬಾರಿ ರೂ. 2,700 ಕೋಟಿ ಬೆಲೆಯ ಬಿಯರ್ ಮಾರುವ ಉದ್ದೇಶ ಹೊಂದಿದೆ. ಅಷ್ಟೇ ಅಲ್ಲ, ಕಳೆದ ವರ್ಷ ರಾಜ್ಯ ರೂ. 127 ಕೋಟಿ ಲಾಭ ಗಳಿಸಿತ್ತು. ಈ ವರ್ಷದ ಗುರಿ ರೂ. 300 ಕೋಟಿ!

ಅಂದರೆ ತೆಲುಗರು ಧಾರಾಳವಾಗಿ ಮದ್ಯದಲ್ಲಿ ಮುಳುಗೇಳಬಹುದು. ಸಂಪ್ರದಾಯದಂತೆ 'ತೆಲುಗು ದೇಶಂ ಪಕ್ಷ'ದಿಂದ ತೊಡಗಿ 'ಲೋಕ ಸತ್ತಾ ಪಕ್ಷ'ದವರೆಗೆ ಎಲ್ಲರೂ ಇಲಾಖೆಯ ವಿರುದ್ಧ ಚಳವಳಿ ನಡೆಸುವವರೇ. 'ಆಂಧ್ರ ಪ್ರದೇಶ ಮಹಿಳಾ ಸಮಖ್ಯಾ'ದಂತಹ ಹಲವಾರು ಸಂಘಟನೆಗಳೂ ಇದಕ್ಕೆ ಕೈಜೋಡಿಸಿದೆ. ಆದರೆ ಎಂದಿನಂತೆ ಇವು ಕೇವಲ ನೆಪಮಾತ್ರದ ಪ್ರತಿಭಟನೆಗಳು.

ಒಂದೆಡೆ ಮದ್ಯ ಉತ್ಪತ್ತಿ ಹೆಚ್ಚಾಗುತ್ತಿರುವುದರ ವಿರುದ್ಧ ಪ್ರತಿಭಟನೆ ನಡೆದರೆ, ಇನ್ನೊಂದೆಡೆ ಜೀವನಾನುಕೂಲಗಳಿಲ್ಲದ ಮಂದಿಗೆ ಹೊಸ ಬದುಕು ನೀಡುವ ಭರವಸೆ ನೀಡಲಾಗುತ್ತಿದೆ. ಆದರೆ ಸೇಂದಿ ಇಳಿಸುವವರ ಸ್ಥಿತಿ ಮಾತ್ರ ಶೋಚನೀಯವಾಗಿಯೇ ಉಳಿದಿದೆ. ಲಾಭವೇ ಮುಖ್ಯವಾಗಿರುವ ಸರ್ಕಾರಕ್ಕಾಗಲೀ, ಹೊಣೆ ಇಲ್ಲದ ವಿರೋಧ ಪಕ್ಷಗಳಿಗಾಗಲೀ ಅವರ ದುರವಸ್ಥೆಯ ಕುರಿತು ಚಿಂತಿಸಲು ಸಮಯವಾದರೂ ಎಲ್ಲಿದೆ? ರಾಜ್ಯ ಸರ್ಕಾರ ಜನಸಾಮಾನ್ಯರನ್ನು ಮದ್ಯದ ಚಟಕ್ಕೆ ದಾಸನಾಗುವಂತೆ ಮಾಡಿದ್ದರೆ, ಸಾಂಪ್ರದಾಯಿಕ ಪೇಯ ಸೇಂದಿಯ ಸ್ಥಿತಿ ಶೋಚನೀಯವಾಗುತ್ತಿದೆ. ಸೇಂದಿ ಭಾರತದ ಉತ್ತೇಜಕ ಪಾನೀಯವಾಗಿದ್ದು, ತಾಳೆಯ ರಸದಿಂದ ತಯಾರಿಸಲಾಗುತ್ತದೆ.

1400ಕ್ಕೂ ಅಧಿಕ ಸೇಂದಿ ಇಳಿಸುವವರ ಸಂಸ್ಥೆಗಳನ್ನು ಅಬಕಾರಿ ಇಲಾಖೆ ಕಲಬೆರಕೆ ಸಬೂಬು ನೀಡಿ ಮುಚ್ಚಿಸಿದೆ. ಈ ನೂತನ ನೀತಿಯಿಂದಾಗಿ ಸರ್ಕಾರ ಬಹಳಷ್ಟು ಮಂದಿ ಸೇಂದಿ ಇಳಿಸುವವರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ ಎಂದು ಟಿಎಸ್‌ಐಗೆ ಪ್ರತಿಕ್ರಿಯಿಸುತ್ತಾ ಸೇಂದಿ ಇಳಿಸುವವರ ಪ್ರತಿನಿಧಿ ಅಂಬಾಲಿ ನಾರಾಯಣ ಹೇಳುತ್ತಾರೆ. ಸುಮಾರು 10 ಲಕ್ಷ ಸೇಂದಿ ಇಳಿಸುವವರ ಕುಟುಂಬದ ಸ್ಥಿತಿಗತಿಯನ್ನು ಸಾಮಾಜಿಕ ಸಂಘಟನೆಗಳು, ವಿರೋಧ ಪಕ್ಷಗಳು ಮರೆತಂತಿದೆ. ತೋಳ್ಬಲ ಮತ್ತು ಭಾರೀ ಮಟ್ಟದಲ್ಲಿ ನಡೆಯುತ್ತಿರುವ ಮದ್ಯದ ಲಾಬಿ ಸ್ಥಳೀಯ ಮದ್ಯವನ್ನು ಮೂಲೆಗುಂಪಾಗಿಸಿ ದೊಡ್ಡ ಬ್ರ್ಯಾಂಡ್ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ರಹದಾರಿ ಮಾಡಿಕೊಡುತ್ತಿದೆ. ಇಲ್ಲಿ ಅಚ್ಚರಿಯೆಂದರೆ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಸೇಂದಿ ತಯಾರಿಕೆಗೆ ತೆರಿಗೆ ವಿನಾಯಿತಿ ನೀಡಿದ್ದರು. ಆದರೆ ಇವತ್ತಿನ ಸರ್ಕಾರಗಳು ಅಧಿಕ ತೆರಿಗೆ ಆದಾಯ ಗಮನದಲ್ಲಿಟ್ಟುಕೊಂಡು ಸೇಂದಿಯ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ. ಬಡವರ ಕೂಗು ಅರಣ್ಯರೋದನವಾಗುತ್ತಿದೆ.

ಟಿಎಸ್‌ಐ

ನರೇಶ್ ನುನ್ನಾ

 

ತಮಿಳುನಾಡು: ಕೇಬಲ್ ಸಮರ

ರಾಜಕೀಯ ದ್ವೇಷಕ್ಕೆ 'ಕೇಬಲ್' ಅಸ್ತ್ರ

'ಎಸ್‌ಸಿವಿ' ಮತ್ತು 'ಆರ್‌ಸಿವಿ' ಸಮರದಲ್ಲಿ ನಲುಗುತ್ತಿದೆ ಕೇಬಲ್ ಉದ್ಯಮ

ದೂರದರ್ಶನದ ಬರಗೆಟ್ಟ ಕಾರ್ಯಕ್ರಮಗಳ ಬದಲಾಗಿ ವಿವಿಧ ಕೇಬಲ್ ಚಾನೆಲ್‌ಗಳನ್ನು ವೀಕ್ಷಿಸುವ ಕಾಲ ಒಂದಿತ್ತು. ಆದರೆ ಇವೆಲ್ಲಾ 1990ರ ದಶಕದ ಮಾತಾಯಿತು. ಈಗ ಈ ಕೇಬಲ್ ಹಾದಿ ಹೊಸ ದಿಕ್ಕಿನೆಡೆಗೆ ತಿರುಗಿದೆ. ತಮಿಳುನಾಡಿನಲ್ಲಿ ಕೇಬಲ್ ಮಾಲೀಕತ್ವಕ್ಕಾಗಿ ರಾಜಕೀಯ ಸಮರವೇ ನಡೆಯುತ್ತಿದೆ. 'ಟಿವಿ ಯುಗ'ದಲ್ಲಿ ರಾಜಕಾರಣಿಗಳು ಹೂಡಿಕೆ ಮಾಡುವ ಸಲುವಾಗಿಯೋ ಅಥವಾ ಸ್ವಪ್ರಚಾರಕ್ಕಾಗಿಯೋ; ಕೆಲಬಾರಿ ಎರಡಕ್ಕೂ ಕೈ ಹಾಕಿ ಸುವರ್ಣಾವಕಾಶವನ್ನು ಬಾಚಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಕೆ. ಕರುಣಾನಿಧಿ ಅವರ ಹಿರಿಯ ಮಗ ಕೆ. ಅಳಗಿರಿ ಮತ್ತು ಮಾರನ್ ಸಹೋದರರ ನಡುವಿನ ರಾಜಕೀಯ ದ್ವೇಷದ ಕಿಡಿ ಇದೀಗ ಕೇಬಲ್ ರೂಪದಲ್ಲಿ ಹೊತ್ತಿ ಉರಿಯುತ್ತಿದೆ.

ಕರುಣಾನಿಧಿ ಅವರ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿಯೇ 'ಬೆಂಕಿಯ ಕಿಡಿ' ಸ್ಫೋಟಗೊಂಡಿತ್ತು. ಹುಟ್ಟುಹಬ್ಬದ ಪ್ರಯುಕ್ತ ಮುಖ್ಯಮಂತ್ರಿ ಅವರನ್ನು ಅಭಿನಂದಿಸಲು ಮಾರನ್ ಸಹೋದರರು ಮುಂದಾಗಿದ್ದರು. ಆ ನಿಟ್ಟಿನಲ್ಲಿ ಅವರ ಮುಖ್ಯಮಂತ್ರಿ ನಿವಾಸಕ್ಕೆ ಸಹೋದರರು ಆಗಮಿಸಿದಾಗ ಕರುಣಾನಿಧಿ ಅವರ ಹಿರಿಯ ಪುತ್ರ ಕೆ. ಅಳಗಿರಿಯ ಆಣತಿ ಮೇರೆಗೆ ಭೇಟಿಯನ್ನೇ ನಿರಾಕರಿಸಲಾಯಿತು. ಮಾತ್ರವಲ್ಲ, ಉರಿವ ಬೆಂಕಿಗೆ ತುಪ್ಪ ಎರೆಯುವಂತೆ ಮಧುರೈಯಲ್ಲಿ ಎಸ್‌ಸಿವಿ (ಮಾರನ್ ನೇತೃತ್ವದ ಸುಮಂಗಲಿ ಕೇಬಲ್ ವಿಷನ್) ವಿರುದ್ಧ ಅಳಗಿರಿ ನೇತೃತ್ವದ 'ರಾಯಲ್ ಕೇಬಲ್ ವಿಷನ್' (ಆರ್‌ಸಿವಿ) ಆರಂಭಗೊಂಡಿದೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅಳಗಿರಿ, ಕೇವಲ ಒಬ್ಬನ ಹಿತಕ್ಕಾಗಿ 99 ಮಂದಿ ವ್ಯಥೆ ಪಡುವಂಥದ್ದು ಸಮಂಜಸ ಎನಿಸುವುದಿಲ್ಲ. ಮಾತ್ರವಲ್ಲ, ನಾವು ಕೇಬಲ್ ನಿರ್ವಾಹಕರಿಗೆ ಬೆದರಿಕೆ ಒಡ್ಡಿದ್ದೇವೆ ಎಂಬುವುದೂ ಸುಳ್ಳು ಸುದ್ದಿ. ಇದೆಲ್ಲ ಎಸ್‌ಸಿವಿ ನಡೆಸಿರುವ ಪಿತೂರಿ. ನಮ್ಮನ್ನು ಸಿಲುಕಿಸಲು ಅವರು ಹುನ್ನಾರ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಮಧುರೈಯಲ್ಲಿರುವ ಒಟ್ಟು 437 ಕೇಬಲ್ ನಿರ್ವಾಹಕರಲ್ಲಿ ಶೇ. 80ರಷ್ಟು ಮಂದಿ ಆರ್‌ಸಿವಿಯನ್ನು ಬೆಂಬಲಿಸುವುದಾಗಿ ಭರವಸೆ ನೀಡಿದ್ದಾರೆ. ಡಿಟಿಎಚ್‌ನ ಹೊಸ ಉದ್ಯಮದತ್ತ ಸಾರ್ವಜನಿಕರನ್ನು ಸೆಳೆಯಬೇಕೆಂಬ ಎಸ್‌ಸಿವಿ ಯೋಜನೆಯಿಂದಾಗಿ ಕೇಬಲ್ ನಿರ್ವಾಹಕರು ಮತ್ತು ಎಸ್‌ಸಿವಿ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬುದು ರಹಸ್ಯವೇನಲ್ಲ. ಡಿಟಿಎಚ್ ವ್ಯವಸ್ಥೆಯಲ್ಲಿ ಕೇಬಲ್ ಆಪರೇಟರ್‌ಗಳಿಗೆ ಅವಕಾಶವೇ ಇಲ್ಲದಿರುವುದರಿಂದ ತಮ್ಮ ಅಸ್ತಿತ್ವಕ್ಕೆ ಬೆದರಿಕೆ ಇದೆ ಎಂಬ ಅವರ ಆತಂಕ ಸಹಜವೇ ಎನ್ನುತ್ತಾರೆ ಟಿಎಸ್‌ಐ ಜೊತೆ ಮಾತನಾಡಿದ ಆರ್‌ಸಿವಿ ನಿರ್ದೇಶಕ ನಾಗೇಶ್.

ಈಗ ಎಸ್‌ಸಿವಿ ಮತ್ತು ಆರ್‌ಸಿವಿ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದೆ. ಹಂತ-ಹಂತವಾಗಿ ಆರ್‌ಸಿವಿ ದಕ್ಷಿಣ ಭಾಗದಲ್ಲಿ ತನ್ನ ವಿಸ್ತಾರವನ್ನು ಚಾಚಲಿದೆ ಎಂಬುದು ಸ್ಪಷ್ಟ. ಮೊದಲ ಹಂತದಲ್ಲಿ ಏಳು ಜಿಲ್ಲೆಗಳಲ್ಲಿ ಕಾರ್ಯಾರಂಭ ಮಾಡಲಿರುವ ಆರ್‌ಸಿವಿ ಬಳಿಕ ಚೆನ್ನೈಗೆ ಯೋಜನೆಯನ್ನು ವಿಸ್ತರಿಸಲಿದೆ ಎಂದು ನಾಗೇಶ್ ಹೇಳಿದ್ದಾರೆ.

ನಿಜ ಹೇಳಬೇಕೆಂದರೆ ಈ ಸಮರದ ನಡುವೆ ಕೇಬಲ್ ನಿರ್ವಾಹಕರು ಕಂಗಾಲಾಗಿದ್ದಾರೆ. ತಾವೆಲ್ಲಿ ಅಸ್ತಿತ್ವ ಕಳೆದುಕೊಂಡು ಬಿಡುತ್ತೇವೋ ಎಂಬ ಆತಂಕ ಅವರನ್ನು ಕಾಡತೊಡಗಿದೆ. ಹಾಗಾಗಿ ವಿವಿಧ ಕೇಬಲ್ ನಿರ್ವಾಹಕರು ತಮ್ಮ ರಕ್ಷಣೆಗೆ ರಾಜಕೀಯ ಮುಖಂಡರ ಮೊರೆ ಹೋಗಿದ್ದಾರೆ. ಈಗಾಗಲೇ 'ಮಧುರೈ ಕೇಬಲ್ ನಿರ್ವಾಹಕರ ಸಂಘಟನೆ' ವಿರೋಧ ಪಕ್ಷಗಳ ಪ್ರಮುಖ ನಾಯಕರಾದ ಎಐಎಡಿಎಂಕೆ ನಾಯಕಿ ಜಯಲಲಿತಾ ಮತ್ತು ಎಂಡಿಎಂಕೆ ವೈಕೋ ಅವರಿಗೆ ದೂರು ಸಲ್ಲಿಸಿದ್ದಾರೆ. ತಮ್ಮ ಉದ್ಯಮದ ಹಿತಾಸಕ್ತಿ ಮತ್ತು ವೈಯಕ್ತಿಕ ರಕ್ಷಣೆಯನ್ನು ಬೇಡಿದ್ದಾರೆ.

ಈ ವಿಚಾರದಲ್ಲಿ ಆಯಾ ಪ್ರದೇಶಗಳಲ್ಲಿ ಪ್ರಸ್ತುತ ರಾಜಕೀಯ, ಉದ್ಯಮ ಮತ್ತು ವೃತ್ತಿಪರ ಸ್ಥಿತಿಗತಿಗಳ ಆಧಾರದ ಮೇಲೆ ಸ್ವ ನಿರ್ಧಾರ ತೆಗೆದುಕೊಳ್ಳುವಂತೆ ನಮ್ಮ ಸದಸ್ಯರಿಗೆ ಸಲಹೆ ನೀಡಿದ್ದೇವೆ ಎನ್ನುತ್ತಾರೆ ಟಿಎಸ್‌ಐಗೆ ಪ್ರತಿಕ್ರಿಯೆ ನೀಡಿದ 'ತಮಿಳುನಾಡು ಕೇಬಲ್ ಟಿ.ವಿ. ನಿರ್ವಾಹಕರ ಕ್ಷೇಮಾಭಿವೃದ್ಧಿ' ಸಂಘಟನೆಯ ಅಧ್ಯಕ್ಷ ಸಕೇಲನ್.

ಉದ್ಯಮವಲಯಕ್ಕೆ ಆಗಮಿಸುವ ಹೊಸ ಸಂಸ್ಥೆಗಳು ಮತ್ತು ಕೇಬಲ್ ನಿರ್ವಾಹಕರ ಹಂಚಿಕೆಯನ್ನು ನಿಯಂತ್ರಿಸುವುದು ಸಾಧ್ಯವಿಲ್ಲ. ಒಂದು ವೇಳೆ ಸಂಪೂರ್ಣವಾಗಿ ಹೊಸ ಕೇಬಲ್ ವ್ಯವಸ್ಥೆ ಬಂದರೆ ಕಾನೂನು ವ್ಯವಸ್ಥೆಗೆ ಧಕ್ಕೆಯಾಗಬಹುದು. ತಮಿಳುನಾಡಿನ ಕುಲವೈರದ ಇಂತಹ ಘಟನೆಗಳು ಇದೀಗ ಬಿಚ್ಚಿಕೊಳ್ಳುತ್ತಿವೆ. ಆದರೆ ಇದರಿಂದ ಸಮಸ್ಯೆ ಎದುರಿಸಬೇಕಾದವರು ನಮ್ಮವರು ಎಂದು ಸಕೇಲನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕೇಬಲ್ ನಿಗಮಕ್ಕೆ ಪ್ರೋತ್ಸಾಹಿಸಿರುವ ರಾಜ್ಯ ಸರ್ಕಾರ ತಂಜಾವೂರು ಮತ್ತು ಕೊಯಮತ್ತೂರು ಜಿಲ್ಲೆಗಳಲ್ಲಿ ಮುಂಬರುವ ಆಗಸ್ಟ್ 15ರಂದು 'ಅರಸು ಕೇಬಲ್ ಕಾರ್ಪೋರೇಶನ್' ಆರಂಭಿಸಲಿದೆ.

ಪ್ರಸ್ತುತ ಗೊಂದಲ ಸ್ಥಿತಿಯಲ್ಲಿ ಆರಂಭವಾಗುವ 'ಅರಸು ಕೇಬಲ್ ನಿಗಮ'ದ ನಿಲುವು ಹೇಗಿರುತ್ತದೆ ಎಂದು ಸ್ಪಷ್ಟಪಡಿಸಲು ಮುಖ್ಯಮಂತ್ರಿಯವರನ್ನು ಕೇಳಿಕೊಂಡಿದ್ದೇವೆ ಎನ್ನುತ್ತಾರೆ ಟಿಎಸ್‌ಐ ಜೊತೆ ಮಾತನಾಡಿದ 'ತಮಿಳುನಾಡು ಕೇಬಲ್ ಟಿ.ವಿ. ನಿರ್ವಾಹಕರ ಒಕ್ಕೂಟ'ದ ಮುಖ್ಯ ಸಂಯೋಜಕರಾದ ಡಿ.ಜೆ.ವಿ.ಬಿ. ಶೇಖರ್.

ಈ ನಡುವೆ ಮಧುರೈಯ ಜನಸಾಮಾನ್ಯರದು ಮಾತ್ರ ದಿಕ್ಕೆಟ್ಟ ಪರಿಸ್ಥಿತಿ. ಸನ್ ಟಿ.ವಿ. (ಆರ್‌ಸಿವಿ ಸಂಪರ್ಕ ಆಯ್ಕೆ ಮಾಡಿದ್ದರೆ) ಸೇರಿದಂತೆ ಅವರಿಗಿಷ್ಟವಾದ ಚಾನೆಲ್‌ಗಳನ್ನು ವೀಕ್ಷಿಸುವಂತಿಲ್ಲ. ಎಸ್‌ಸಿವಿ ಬೇಕೋ ಅಥವಾ ಆರ್‌ಸಿವಿ ಬೇಕೋ ಎಂಬುದನ್ನು ಜನರೇ ಆರಿಸಬೇಕಾಗುತ್ತದೆ. ಆರ್‌ಸಿವಿ ಸನ್ ಚಾನೆಲ್ ಪ್ರಸಾರ ಮಾಡುತ್ತಿಲ್ಲ ಎಂದು ಅವರು ಹತಾಶರಾಗಿದ್ದಾರೆ. ನಮಗೆ ಕಾರ್ಯಕ್ರಮಗಳನ್ನು ನೀಡುವಂತೆ ಸನ್ ಟಿವಿ ಜೊತೆ ಮಾತುಕತೆ ನಡೆಸಿದ್ದೇವೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ನಾವು ಟ್ರಾಯ್‌ಗೆ ಮೊರೆ ಹೋಗಬೇಕಾಗಿದೆ ಎನ್ನುತ್ತಾರೆ ಆರ್‌ಸಿವಿಯ ವಕ್ತಾರ.

ತಮಿಳುನಾಡಿನಲ್ಲಿ ಈ ದೃಶ್ಯಮಾಧ್ಯಮಗಳ ವ್ಯಾಮೋಹ ವಿಶಿಷ್ಟವೇ ಸರಿ. ಸಿನಿಮಾ ವಾಸ್ತವ ಜಗತ್ತಿನ ಮೇಲೆ ಬೀರುವ ಪರಿಣಾಮ ಅತ್ಯಧಿಕ. ಹಾಗೇ ಹಲವು ತಮಿಳು ಚಿತ್ರಗಳು ಜಾಗತಿಕ ಮಟ್ಟದಲ್ಲೂ ಖ್ಯಾತಿಯಾಗಿರುವುದು ತಿಳಿದೇ ಇದೆ. ಎಂಜಿಆರ್, ಕಮಲ್ ಹಾಸನ್ ಮತ್ತು ರಜನೀಕಾಂತ್ ಮತ್ತು ಈಗಿನ ಮುಖ್ಯಮಂತ್ರಿ ಕರುಣಾನಿಧಿ ಅವರೂ ಚಿತ್ರರಂಗದಲ್ಲಿದ್ದು ನಿಜಜೀವನದ ಮೇಲೆ ಪರಿಣಾಮ ಬೀರಿದವರು. ಈಗ ಕಿರುತೆರೆ ತಮಿಳುನಾಡಿನ ಆಡಳಿತದ ಚುಕ್ಕಾಣಿ ಹಿಡಿದಿರುವ ರಾಜಕಾರಣಿಗಳ ಹೊಸ ರಾಜಕೀಯ ದಾಳವಾಗಿ ಪರಿಣಮಿಸಿದೆ.

ಒಟ್ಟಾರೆ ಈ ಕೇಬಲ್ ಸಮರ ಅಕ್ಷರಶಃ ಜನರ ಕಿರುತೆರೆ ವೀಕ್ಷಣಾ ಆದ್ಯತೆಗಳ ಮೇಲೆ ನೇರ ಪರಿಣಾಮವನ್ನೇ ಬೀರಿದೆ. ಎಂಥ ವಿಪರ್ಯಾಸ ಅಲ್ಲವೇ? ಈ ಸಮಸ್ಯೆಗೆ ಫಲಿತಾಂಶದ ಆಶಯವನ್ನೂ ಇಡುವ ಹಾಗಿಲ್ಲ. ಮಾರುಕಟ್ಟೆಯಲ್ಲಿ

ಅಡೆತಡೆ ಇಲ್ಲದೆ ಸರಕು ಮಾರಾಟವಾಗಬೇಕೆಂದರೆ ರಾಜಕಾರಣಿಗಳು ಖಾಸಗಿ ವಲಯದಲ್ಲಿ ಪರಸ್ಪರ ದ್ವೇಷ ಸಾಧಿಸುವ ಇಂಥ ಕಾರ್ಯಗಳಿಗೆ ಮೊದಲು ಕಡಿವಾಣ ಹಾಕಬೇಕಿದೆ.

ಟಿಎಸ್‌ಐ

ಸುಂದರಬುದ್ಧನ್

 

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .