|
ಫೆಬ್ರುವರಿ 1915
ಪ್ರಿಯ ಸರ್,
ಸೇಂಟ್ ಲೂಯಿಸ್,
ಇಂದು ಯುರೋಪ್ ಒಂದು ವಿಶಾಲವಾದ ಶವಾಗಾರವಾಗಿ ಮಾರ್ಪಟ್ಟಿದೆ.
ಹೆದ್ದಾರಿಗಳು ಕಸಾಯಿಖಾನೆಗಳಾಗಿವೆ.
ಉಳುಮೆ ಮಾಡುವ ಹೊಲ ರುದ್ರಭೂಮಿ!
ಗದ್ದೆಗಳು ಮಾನವ ರಕ್ತದ ಕೆಸರಿನ ಉಸುಬುಗಳಾಗಿವೆ...
ಮನುಷ್ಯರ ಕೊಳೆತ ಮಾಂಸ ಆ ಭೂಮಿಯನ್ನು
ಮಲಿನಗೊಳಿಸಿವೆ.
ಕೆಲಸಗಾರರನ್ನೆಲ್ಲಾ ಹಲವು ತಿಂಗಳುಗಳ ಕಾಲ ಕೆಲಸದಿಂದ
ಅಮಾನತು ಮಾಡಲಾಗಿದೆ.
ಕಾರ್ಖಾನೆ,
ಮಿಲ್ಲು ಹಾಗೂ ಗಣಿ ಪ್ರದೇಶಗಳನ್ನು ಮುಚ್ಚಲಾಗಿದೆ.
ಕಾರ್ಮಿಕರೆಲ್ಲಾ ಯುದ್ಧದಲ್ಲಿ ಹೋರಾಡಿ-
ಮಡಿದು ಕಂದಕಗಳಲ್ಲಿ ಕೊಳೆಯುತ್ತಿದ್ದಾರೆ.
ಯುರೋಪ್‌ನಿಂದ ಆಹಾರ,
ಬಟ್ಟೆ ಹಾಗೂ ಶಸ್ತ್ರಾಸ್ತ್ರಗಳ ಸರಬರಾಜು ಪ್ರಮಾಣ
ಗಣನೀಯವಾಗಿ ಇಳಿದಿರಬಹುದು ಆದರೆ ಯುರೋಪಿನಲ್ಲಿ ಯುದ್ಧ ಮಾತ್ರ ಯಾವುದೇ
ಅಡೆತಡೆಗಳಿಲ್ಲದೆ ಸಾಂಗವಾಗಿ ಮುಂದುವರಿಯುತ್ತಿದೆ.
ಏಕೆಂದರೆ ಯುದ್ಧ ರಾಷ್ಟ್ರಗಳು ಪರಸ್ಪರ ಕಚ್ಚಾಡಿ
ನಿರ್ನಾಮವಾಗಲು ಬೇಕಾದಷ್ಟು ಆಹಾರ,
ವಸ್ತ್ರ,
ಕುದುರೆಗಳು,
ಆಟೊಮೊಬೈಲುಗಳು ಹಾಗೂ ಶಸ್ತ್ರಾಸ್ತ್ರಗಳನ್ನು
ಅಮೆರಿಕ ಯಾವುದೇ ಅಡೆತಡೆಗಳಿಲ್ಲದೆ ಪೂರೈಸುತ್ತಿದೆ.
ಲಕ್ಷಗಟ್ಟಲೆ ಅಮೆರಿಕನ್ನರು ಆಹಾರಕ್ಕಾಗಿ ಹಾಹಾಕಾರವೆಬ್ಬಿಸುತ್ತಿದ್ದರೂ,
ನಾಗರಿಕ ಸಮರ ಕಾಲಕ್ಕಿಂತಲೂ ಗೋಧಿಯ ಬೆಲೆ
ಹೆಚ್ಚುತ್ತಿದ್ದರೂ ಅಮೆರಿಕ ಆಹಾರೋತ್ಪನ್ನಗಳ ರಫ್ತಿನಲ್ಲಿ ನಿರತವಾಗಿದೆ.
ದೇಶವನ್ನು ಬರಿದು ಮಾಡಿ ಯುರೋಪ್‌ಗೆ
ಆಹಾರೋತ್ಪನ್ನಗಳ ಸರಬರಾಜನ್ನು ನಿಲ್ಲಿಸದಿದ್ದರೆ ಸ್ವಲ್ಪದರಲ್ಲೇ ಆಹಾರ
ಕ್ಷಾಮವನ್ನೂ ದಂಗೆಯನ್ನೂ ಎದುರಿಸಬೇಕಾಗುತ್ತದೆ.
ಯುದ್ಧನಿರತ ರಾಷ್ಟ್ರಗಳಲ್ಲಿನ ರೈತರು
ಜೀವನೋಪಾಯಕ್ಕಾಗಿ ತಮ್ಮ ಹೊಲಗಳಲ್ಲಿ ಬಿದ್ದಿರುವ ಕುದುರೆಗಳ ಕೊಳೆತ
ಮಾಂಸಗಳನ್ನು ಅತ್ತ ಸರಿಸಿ ಗೋಧಿ ಮತ್ತು ಹತ್ತಿ ಬೆಳೆಗಳ ಕಡೆಗೆ
ಗಮನಹರಿಸುವಂತಹ ಒತ್ತಡದ ಸ್ಥಿತಿ ನಿರ್ಮಾಣವಾಗಿದೆ.
ಏಕೆಂದರೆ ಮೂರು ವರ್ಷಗಳ ಬರಗಾಲ,
ಜೊತೆಯಲ್ಲೇ ಸಾಲಗಾರನ ದುಬಾರಿ ಬಡ್ಡಿಯ ವಿನಾಶಕಾರೀ
ಸ್ಥಿತಿ ಅವರನ್ನು ಎಚ್ಚರಿಸಿದೆ.
ಇತ್ತ ಲಕ್ಷಾಂತರ ಅಮೆರಿಕನ್ನರು ಉಡಲು ಬಟ್ಟೆ,
ಕಾಲಿಗೆ ಚಪ್ಪಲಿ ಇಲ್ಲದೆ ನಡುಗುತ್ತಿರುವಾಗ ಹತ್ತಿ
ಬೆಳೆಯುವ ಅಸಂಖ್ಯಾತ ಕಾರ್ಮಿಕರು,
ಬಟ್ಟೆ
-ಪಾದರಕ್ಷೆ
ತಯಾರಕರು ಹಂತಕ ಶತ್ರುಪಡೆಗಳಿಗೆ ಬಟ್ಟೆ ಒದಗಿಸಲು ಮುನ್ನುಗ್ಗುತ್ತಿದ್ದಾರೆ.
ಕಬ್ಬಿಣದ ಕಾರ್ಖಾನೆಗಳು ಲೋಹದ ಚೂರುಗಳನ್ನು ಹೊಂದಿರುವ ಬಾಂಬ್‌ಗಳ
ತಯಾರಿಯಲ್ಲಿ ನಿರತವಾಗಿವೆ;
ಕಾರ್ಖಾನೆಗಳು ನೇಗಿಲಿನ ಬದಲಿಗೆ ಬಯನೆಟ್
(ಬಂದೂಕಿನ
ತುದಿಗೆ ಸಿಕ್ಕಿಸುವ ತಿವಿಯುವ ಅಲಗು)ಗಳನ್ನು,
ಕಟಾವು ಯಂತ್ರಗಳ ಬದಲಿಗೆ ಬಂದೂಕುಗಳನ್ನು
ತಯಾರಿಸುತ್ತಿವೆ.
ಯುರೋಪಿಯನ್ನರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿರುವ
ಬಾಂಬ್‌ಗಳು,
ಬುಲೆಟ್‌ಗಳೆಲ್ಲಾ ಅಮೆರಿಕನ್ ಕೆಲಸಗಾರರ ಸೃಷ್ಟಿ!
ಅಮೆರಿಕ ಸೃಜನಶೀಲ ಸಿಬ್ಬಂದಿ ವರ್ಗ ಶಾಂತಿ
ಕಾರ್ಯಗಳಲ್ಲಿ ತೊಡಗುವುದು ಬಿಟ್ಟು ಕೊಲೆಗಾರ ಯಂತ್ರಗಳ ಸೃಷ್ಟಿಯಲ್ಲಿ
ತಲ್ಲೀನರಾಗಿದ್ದಾರೆ.
ಸಾವು-
ಸರ್ವನಾಶ,
ಸಂಕಷ್ಟ-
ಕಷ್ಟ ಕೋಟಲೆಗಳು,
ಹತಾಶೆ-
ಬೇಗುದಿಗಳನ್ನು ತುಂಬಿದ ಯುರೋಪ್‌ನಲ್ಲಿ ಇನ್ನಷ್ಟು
ಭೀಕರತೆ ತುಂಬಲು ಅಮೆರಿಕದ ಹಡಗು
'ಕ್ರಿಸ್ಟಿಯನ್'ಅಲ್ಲಿನ
ಕಡಲ ಕಿನಾರೆಯಲ್ಲಿ ಇಳಿಯುತ್ತಿದೆ.
ಅಮೆರಿಕ ತನ್ನ ಕುಖ್ಯಾತಿಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನೂ
ಮಾಡುತ್ತಿಲ್ಲ.
ಯಾವುದೇ ದೇಶಭಕ್ತಿಯ ಭಾವನೆಗಳು ನಮ್ಮ ಮೇಲೆ ಪ್ರಭಾವ
ಬೀರುವುದಿಲ್ಲ,
ಯಾವ ಅವಿವೇಕವೂ ನಮ್ಮನ್ನು ಕುರುಡರನ್ನಾಗಿಸುತ್ತಿಲ್ಲ.
ನ್ಯಾಯಯುತ ಎಂದು ನಾವು ಭಾವಿಸಿರುವ ದೇಶದ ಈ
ಪ್ರೇರಣೆಯನ್ನು ಎತ್ತಿ ಹಿಡಿಯಲೂ ನಾವು ಅಯೋಗ್ಯರು.
ಜರ್ಮನಿಯಿರಲಿ,
ಇಂಗ್ಲೆಂಡ್ ಅಥವಾ ರಷ್ಯಾ ಇರಲಿ ರಕ್ತದ ಕಲೆ
ಅಂಟಿದ ಚಿನ್ನ ನಮಗೆ ಏನೋ ಒಂದು ಬಗೆಯ ತೃಪ್ತಿ ನೀಡುತ್ತಿದೆ.
ಒಂದು ತುಂಡು ಬೆಳ್ಳಿಗಾಗಿ ಯಾವುದೇ ರಾಷ್ಟ್ರ
ಮತ್ತಾವುದೇ ರಾಷ್ಟ್ರದ ಜನರನ್ನು ಕೊಲ್ಲಲು ಬೇಕಾದರೂ ನಾವು ಕೊಲೆಗಾರ
ಯಂತ್ರಗಳನ್ನೂ-
ಸಲಕರಣೆಗಳನ್ನೂ ತಯಾರಿಸಿ ಕೊಡುತ್ತೇವೆ.
ಅಮೆರಿಕ ಬಂಡವಾಳಶಾಹಿಯ ಮಂತ್ರವೊಂದೇ:
ಮನುಕುಲ-
ಮಾನವೀಯತೆ,
ನಾಗರೀಕತೆ ಎಲ್ಲವೂ ಹಾಳಾಗಿಹೋಗಲಿ-
ನಮಗೆ ಬೇಕಾಗಿರುವುದು ಲಾಭ ಅಷ್ಟೇ.
ಮಾನ್ಯ ಅಧ್ಯಕ್ಷರೇ,
ಅಮೆರಿಕದ ಭವಿಷ್ಯದ ಕುಡಿಗಳು ಉದಾತ್ತ ಅಬ್ರಹಾಂ ಲಿಂಕನ್
ಅವರ ವಿಮೋಚನಾ ಘೋಷಣೆ (ಎಮಾನ್ಸಿಪೇಷನ್
ಪ್ರೊಕ್ಲೆಮೇಷನ್)ಯನ್ನು
ಸ್ಮರಿಸಿ ಬೀಗುವುದರ ಜೊತೆಯಲ್ಲೇ ವುಡ್ರೋ ವಿಲ್ಸನ್ ಪ್ರಾರ್ಥನಾ ಕೂಟಗಳನ್ನು
ಕರೆಯುತ್ತಿದ್ದದ್ದನ್ನು ನೆನೆದು ನಾಚಿಕೆ ಪಡಲಾರರೆ?
ಅಬ್ರಹಾಂ ಲಿಂಕನ್‌ಗೆ ಇದ್ದದ್ದು ಒಂದಷ್ಟು ಕರಿಯ
ಜೀತದಾಳುಗಳನ್ನು ವಿಮೋಚನೆಗೊಳಿಸುವ ಅವಕಾಶ ಮಾತ್ರ.
ಆದರೆ ವುಡ್ರೋ ವಿಲ್ಸನ್‌ಗೆ ಜಗತ್ತಿಗೇ ಸೇವೆ
ಮಾಡುವ ಹಾಗೂ ರಕ್ಷಿಸುವ ಅವಕಾಶವಿತ್ತು.
ಆದರೂ ಲಿಂಕನ್ ಎತ್ತರಕ್ಕೇರಿದರು.
ನೀವು ಏನು ಮಾಡಿದಿರಿ?
ತಮ್ಮ ವಿಶ್ವಾಸಿ,
ಕೇಟ್ ರಿಚರ್ಡ್ಸ್ ಒ ಹೇರ್ |