ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಸಂಪಾದಕೀಯ
ಅಸ್ತಿತ್ವ ರಾಜಕಾರಣದಲ್ಲಿ ನಲುಗಿರುವ ಭಾರತಕ್ಕೆ ಬೇಕಿದೆ ಮತ್ತೊಬ್ಬ 'ಸರ್ದಾರ್'
    
Arindam Choudhuri
ಅರಿಂದಮ್ ಚೌಧುರಿ,
ಪ್ರಧಾನ ಸಂಪಾದಕರು, ದ ಸಂಡೆ ಇಂಡಿಯನ್

ನಲವತ್ತ್ತಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡು, ಉತ್ತರ ಭಾರತದ ರೈಲು ಮಾರ್ಗವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದ್ದ ಗುಜ್ಜರ್ ಪ್ರತಿಭಟನೆಯ ಕಾವು ಆರುವ ಮುನ್ನವೇ ಭಾರತದ ಪೂರ್ವ ಭಾಗದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿವೆ. ಗೂರ್ಖಾ ಜನಮುಕ್ತಿ ಮೋರ್ಚಾ ಹಿಂಸಾತ್ಮಕ ಹಾದಿ ಹಿಡಿದಿರುವುದು, ಜೂನ್ 16ರಿಂದ ಅನಿರ್ದಿಷ್ಟ ಅವಧಿಯ ಪ್ರತಿಭಟನೆಗೆ ಕರೆ ನೀಡಿರುವುದು, ಜೊತೆಗೆ ಗುಡ್ಡಗಾಡು ಪ್ರದೇಶದಲ್ಲಿ ಇಡೀ ಪ್ರತಿಭಟನೆ ತೀವ್ರ ಹಿಂಸಾ ಸ್ವರೂಪ ಪಡೆದಿರುವುದು ಭಾರತ ಸರ್ಕಾರಕ್ಕೆ 80ರ ದಶಕದಲ್ಲಿ ಪಂಜಾಬಿನಲ್ಲಿ ತಲೆದೋರಿದ್ದ ಭೀಕರ ಹಿಂಸೆಯ ದಿನಗಳ ಭೀತಿ ಹುಟ್ಟಿಸಿದೆ. ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ಸರಣಿ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ದೇಶದ ಉಜ್ವಲ ಭವಿಷ್ಯದ ಸೂಚನೆ ಖಂಡಿತವಾಗಿಯೂ ಸಿಗುವುದಿಲ್ಲ. ಶತಮಾನಗಳಿಂದಲೂ ವಿವಿಧತೆಯಲ್ಲಿ ಏಕತೆಯ ನಾಡು ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದ್ದ ದೇಶಕ್ಕೆ ಈ ಬೆಳವಣಿಗೆ ನಿಜಕ್ಕೂ ಆಘಾತಕಾರಿಯೇ.

ಮರಾಠಿ ಮಾತನಾಡುವವರಿಗೇ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಹೋರಾಟವಾಗಲಿ, ಕಾವೇರಿ ನೀರು ಹಂಚಿಕೆಯ ವಿಷಯದಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ದಶಕಗಳಿಂದ ನಡೆಯುತ್ತಿರುವ ಜಿದ್ದಾಜಿದ್ದಿಯಾಗಲೀ, ಈ ಎಲ್ಲದರಲ್ಲೂ ರಾಷ್ಟ್ರೀಯ ಹಿತಾಸಕ್ತಿ ಮತ್ತು ಆರ್ಥಿಕ ಪ್ರಗತಿಗಿಂತ ಅಸ್ತಿತ್ವದ ರಾಜಕೀಯ ಮೆರೆಯುತ್ತಿದೆ. ಅದಕ್ಕಿಂತ ದುರಂತದ ಸಂಗತಿಯೆಂದರೆ ಬಹುತೇಕ ವೇಳೆ ಪ್ರಾದೇಶಿಕ ಪಕ್ಷಗಳಿಗೆ ತಮ್ಮ ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು ಇಂತಹ ಸಂದರ್ಭಗಳು ವೇದಿಕೆಯಾಗುತ್ತವೆ. ಆದರೆ, ಅಂತಹ ಪ್ರಾದೇಶಿಕವಾದದ ಹಿಂದಿನ ಕ್ಷುಲ್ಲಕತನವನ್ನು ಅರ್ಥಮಾಡಿಕೊಳ್ಳದ ಅಮಾಯಕ ಸಾಮಾನ್ಯರು ಪ್ರತಿಭಟನೆಗಳ ಭಾಗವಾಗುತ್ತಾರೆ. ಪ್ರಾದೇಶಿಕವಾದ ಮತ್ತು ಅಸ್ತಿತ್ವದ ರಾಜಕಾರಣ ಹೇಗೆ ಇಡೀ ದೇಶದ ಮೇಲೆ ಎಲ್ಲಾ ಕಡೆಯಿಂದಲೂ ಸವಾರಿ ಮಾಡುತ್ತಿದೆ ಎಂಬುದಕ್ಕೆ ಹಲವು ಬಂಡುಕೋರ ಸಂಘಟನೆಗಳು ಕೂಡ ನಿದರ್ಶನಗಳಾಗಿವೆ. ಉಲ್ಫಾ (ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ) ಈ ಮಾತಿಗೆ ಅತ್ಯುತ್ತಮ ನಿದರ್ಶನ. ಈ ನಿಷೇಧಿತ ಬಂಡುಕೋರರ ಪಡೆ ಪ್ರತ್ಯೇಕ ಅಸ್ಸಾಂ ರಾಷ್ಟ್ರಕ್ಕಾಗಿ ಹೋರಾಡುತ್ತಿರುವುದಷ್ಟೇ ಅಲ್ಲ, ಅಲ್ಲಿಗೆ ದುಡಿಮೆ ಅರಸಿ ಬರುವ ವಲಸೆ ಕಾರ್ಮಿಕರನ್ನೂ ನಿರ್ದಯವಾಗಿ ಹತ್ಯೆಗೈಯುತ್ತಿದೆ. ಅವರಿಂದ ಹತರಾಗುವ ಬಹುತೇಕ ನಿರ್ಗತಿಕ ಕಾರ್ಮಿಕರು ಉತ್ತರಪ್ರದೇಶ ಮತ್ತು ಬಿಹಾರ ಮೂಲದವರೇ ಎಂಬುದು ಗಮನಾರ್ಹ. ಒಂದು ರಾಜ್ಯದಲ್ಲಿ ಮತ್ತೊಂದು ರಾಜ್ಯಕ್ಕೆ ಸೇರಿದವರನ್ನು ಹೀಗೆ ಕೊಲ್ಲುವುದರಿಂದ ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿಕಟ್ಟುವುದನ್ನು ಮಾತ್ರ ಸಾಧಿಸಬಹುದಷ್ಟೇ. ಹಾಗಾಗೇ ಯಾವಾಗಲೇ ಆಗಲಿ ಸೇಡಿನ ಹತ್ಯೆಗಳು ಸಂಭವಿಸಿದರೆ ಅದಕ್ಕೆ ಯಾವ ರೀತಿಯಲ್ಲೂ ಸಂಬಂಧವೇ ಪಡದ ಅಮಾಯಕರು ಕೂಡ ಜೀವ ತೆರಬೇಕಾಗುತ್ತದೆ. ಮಣಿಪುರ, ತ್ರಿಪುರಾ ಅಥವಾ ನಾಗಾಲ್ಯಾಂಡ್‌ಗಳು ಅದೇ ದಾರಿಯಲ್ಲೇ ಸಾಗುತ್ತಿವೆ.

ಮಣಿಪುರದಲ್ಲಿ ಏಳು ಸಶಸ್ತ್ರ ಬಂಡುಕೋರ ಗುಂಪುಗಳು ಭಾರತದಿಂದ ಪ್ರತ್ಯೇಕತೆ ಬಯಸಿ ಹೋರಾಟಕ್ಕಿಳಿದಿವೆ. ಇನ್ನು ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಅದೇ ರೀತಿಯ ಪ್ರಾದೇಶಿಕವಾದವನ್ನು ಮುಂದಿಟ್ಟುಕೊಂಡು ತಲಾ ಎರಡೆರಡು ಗುಂಪುಗಳು ಹೋರಾಡುತ್ತಿವೆ. ಹಾಗೇ ಗೂರ್ಖಾಲ್ಯಾಂಡ್‌ಗಾಗಿ ಪ್ರತಿಭಟನೆ ಭುಗಿಲೆದ್ದಿರುವ ಪ್ರದೇಶದ ಸಮೀಪವೇ ಕಾಮಟಾಪುರದ ಜನತೆ ಪ್ರತ್ಯೇಕ ರಾಜ್ಯ ಬೇಡಿಕೆ ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಿರತರಾಗಿದ್ದಾರೆ. ಜೊತೆಗೆ ಅವರು ಇದೀಗ ಉಲ್ಫಾ ಮತ್ತು ಐಎಸ್‌ಐ ಜೊತೆ ಕೂಡ ಕೈಜೋಡಿಸಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಸ್ವಾತಂತ್ರ್ಯಪೂರ್ವದಲ್ಲಿ ರಾಜ ಪ್ರಭುತ್ವಕ್ಕೆ ಒಳಪಟ್ಟಿದ್ದ ಉತ್ತರ ಬಂಗಾಳದ ಕೂಚ್ ಬಿಹಾರ್‌ನಲ್ಲಿ ಕೂಡ ಕೆಲವು ವರ್ಷಗಳ ಹಿಂದೆ ಇಂತಹದ್ದೇ ಬೇಡಿಕೆ ಮುಂದಿಟ್ಟುಕೊಂಡು ಹೋರಾಟಗಳು ನಡೆದಿದ್ದವು. ಒಂದು ವೇಳೆ ಗೂರ್ಖಾಲ್ಯಾಂಡ್‌ಗೆ ಸರ್ಕಾರ ಸಮ್ಮತಿಸಿದರೆ ಕಾಮಟಾಪುರ ಮತ್ತು ಕೂಚ್ ಬಿಹಾರ್ ಪರವಾಗಿ ಹೋರಾಡುವವರು ಕೂಡ ತಮಗೂ ಆ ಸಮ್ಮತಿ ಕೊಡಿ ಎಂದು ಪಟ್ಟು ಹಿಡಿಯದೇ ಇರಲಾರರು. ಹಾಗಾದಲ್ಲಿ ಪಶ್ಚಿಮ ಬಂಗಾಳ ಎಂಬುದು ಏನೂ ಉಳಿಯಲಾರದು.

ಮೇಲ್ನೋಟಕ್ಕೆ ವಿವಿಧ ಬಂಡುಕೋರ ಗುಂಪುಗಳು ನಿಷ್ಕರುಣವಾಗಿ ಅಮಾಯಕರನ್ನು ಹತ್ಯೆ ಮಾಡುತ್ತಿವೆ ಎಂದು ಖಂಡಿಸುವುದು ಸುಲಭ. ಆದರೆ, ಅಂತಹ ಸಂಘರ್ಷಗಳ ಹಿಂದೆ ರಾಜಕೀಯ ಕುಮ್ಮಕ್ಕು ಕೆಲಸ ಮಾಡುತ್ತಿದೆ ಎಂಬುದು ಜಾಗತಿಕ ವಿದ್ಯಮಾನ. 'ಭಾರತೀಯತೆ' ಎಂಬ ಪ್ರತಿಷ್ಠೆ, ಅಸ್ತಿತ್ವವನ್ನು ನಿರಂತರವಾಗಿ ಕರಗಿಸುತ್ತಿರುವ ಪ್ರಾದೇಶಿಕ ಮತ್ತು ಜನಪ್ರಿಯ ರಾಜಕಾರಣಕ್ಕೆ ದೊಡ್ಡ ಸಲಾಮು ಹೊಡೆಯಬೇಕಿದೆ.

ಇನ್ನು ರಾಜಸ್ತಾನದ ವಿಷಯಕ್ಕೆ ಬಂದರೆ, ಭಾರತೀಯತೆಯ ಮಾತು ಬಿಡಿ, ದುರಂತವೆಂದರೆ ಅಲ್ಲಿ ಇಂದು ರಾಜಸ್ತಾನಿ ಎಂದು ಹೆಮ್ಮೆಯಿಂದ ಹೇಳುಕೊಳ್ಳುವವರೇ ಇಲ್ಲವಾಗಿದೆ. ಏಕೆಂದರೆ, ಅಲ್ಲಿ ಈಗ ನಮಗೆ ಕಾಣುವವರೆಲ್ಲಾ ರಜಪೂತರು, ಬ್ರಾಹ್ಮಣರು, ಗುಜ್ಜರರು, ಮೀನಾ ಅಥವಾ ಜಾಟರು ಮಾತ್ರ. ಹಾಗೆ ನೋಡಿದರೆ ಅಲ್ಲಿ ಈ ಅಸ್ತಿತ್ವದ ರಾಜಕಾರಣ ಎಂಬುದು ಎಂತಹ ಅತಿಗೆ ಹೋಗಿದೆ ಎಂದರೆ, ಧರ್ಮ, ಮೇಲ್ಜಾತಿ ಅಥವಾ ಕೆಳಜಾತಿ ಎಂಬ ವ್ಯವಸ್ಥೆಗಳನ್ನೂ ಕೂಡ ಮೀರಿ ಸಮಾಜ ಸಂಕುಚಿತಗೊಂಡಿದೆ. ಜಾತಿಗಳ ನಡುವೆ ಜನ ಈಗ ಪ್ರತ್ಯೇಕ ಗುಂಪುಗಳಲ್ಲಿ ಗುರುತಿಸಿಕೊಳ್ಳತೊಡಗಿದ್ದಾರೆ. ಹಾಗಾಗಿ ರಾಜಸ್ತಾನದಲ್ಲಿ ಜಾಟರು ಮತ್ತು ಗುಜ್ಜರ ಸಮುದಾಯಗಳೆರಡೂ ಒಬಿಸಿ ಸ್ಥಾನಮಾನ ಹೊಂದಿದ್ದರೂ ಅವು ಒಂದಾಗಿ ಇರುವ ಬದಲು ಹಿಂದುಳಿದ ವರ್ಗ ಎಂಬ ಹಣೆಪಟ್ಟಿಗಾಗಿನ ಪೈಪೋಟಿಯಿಂದಾಗಿ ಪರಸ್ಪರ ಕಾದಾಟಕ್ಕೆ ಇಳಿದಿವೆ. ಹಾಗೇ ಗುಜ್ಜರ್ ಪ್ರತಿಭಟನೆ ಕೇವಲ ರಾಜಸ್ತಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಉತ್ತರ ಭಾರತದಲ್ಲಂತೂ ಎಲ್ಲಾ ಕಡೆ ಗುಜ್ಜರರು ಸಿಡಿದೆದ್ದಿದ್ದಾರೆ. ಅಷ್ಟೇ ಅಲ್ಲ ತಾವು ಯಾವ ಕಾರಣಕ್ಕಾಗಿ ಹೋರಾಟಕ್ಕಿಳಿದಿದ್ದೇವೆ ಎಂಬುದರ ಅರಿವಿಲ್ಲದಿದ್ದರೂ ಹಿಂಸಾಕೃತ್ಯಕ್ಕೂ ಸೈ ಎನ್ನುವ ಮಟ್ಟಿಗೆ ಉಗ್ರ ಸ್ವರೂಪ ತಳೆದಿದ್ದಾರೆ. ಇನ್ನು ಕಾಶ್ಮೀರ ಮತ್ತು ಪಂಜಾಬಿನಲ್ಲಿ ಕೂಡ ಪ್ರಾದೇಶಿಕವಾದದ ಹೇಯ ರೂಪ ಹೇಗೆ ಪ್ರತ್ಯೇಕ ರಾಷ್ಟ್ರ ಹೋರಾಟವಾಗಿ ಬದಲಾಯಿತು ಎಂಬುದನ್ನು ಮರೆಯಲಾಗುವುದಿಲ್ಲ. ಹಾಗೇ ದಕ್ಷಿಣ ಭಾರತದಲ್ಲಿ ಕೂಡ ಪ್ರಾದೇಶಿಕವಾದ ವಿಸ್ತರಿಸುತ್ತಲೇ ಇದೆ. ಹಲವಾರು ತಮಿಳು ನಾಗರಿಕ ಹಕ್ಕು ಸಂಘಟನೆಗಳು ಎಲ್‌ಟಿಟಿಇ ಬಗ್ಗೆ ಮೃದು ಧೋರಣೆ ಹೊಂದಿವೆ ಎಂಬುದು ಎಲ್ಲರಿಗೂ ತಿಳಿದಿರುವುದೇ. ಗೂರ್ಖಾಲ್ಯಾಂಡ್ ಹೋರಾಟದಂತೆಯೇ ತೆಲಂಗಾಣ ರಾಷ್ಟ್ರ ಸಮಿತಿ ಕೂಡ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡುತ್ತಿದೆ.

ಒಟ್ಟಾರೆ, ಇದೆಲ್ಲವನ್ನು ಗಮನಿಸಿದರೆ ಇಂದಿನ ಭಾರತ, 1947ರ ಸಂದರ್ಭಕ್ಕಿಂತ ಭಿನ್ನವಾಗೇನೂ ತೋರುತ್ತಿಲ್ಲ. ಸ್ವಾತಂತ್ರ್ಯಾನಂತರ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಸುಮಾರು 600 ರಾಜಾಡಳಿತ ಪ್ರದೇಶಗಳನ್ನು ಒಗ್ಗೂಡಿಸಲು ಪಟ್ಟಿರಬಹುದಾದ ಶ್ರಮವನ್ನು ಯಾರಾದರೂ ಊಹಿಸಬಹುದು. ದುರಂತವೆಂದರೆ ಅವರ ನಂತರ ಬಂದ ಎಲ್ಲಾ ರಾಜಕಾರಣಿಗಳು ಅವರ ಆ ಶ್ರಮವನ್ನು ಹಾಳುಗೆಡವಲು ಸರ್ವ ಪ್ರಯತ್ನವನ್ನೂ ಮಾಡುತ್ತಲೇ ಬಂದಿದ್ದಾರೆ. ಭಾರತ ಒಂದು ದೇಶವಾಗಿ ಅತ್ಯುತ್ತಮವಾದುದನ್ನು ಸಾಧಿಸಬಲ್ಲುದು ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಹಿಂಸಾತ್ಮಕ ಪ್ರಾದೇಶಿಕವಾದದಿಂದ ಜನರನ್ನು ಆದರ್ಶ ಭಾರತದ ಕಡೆಗೆ ಸೆಳೆದು ಸಮಗ್ರತೆಯನ್ನು ಕಾಯ್ದುಕೊಳ್ಳಲು ಇಂದು ಅಂತಹ ನೂರಾರು ಸರ್ದಾರ್ ಪಟೇಲರು ಬೇಕಾಗಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.

 

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .