|

ಅತ್ಯುತ್ತಮ ಅಭಿನೇತ್ರಿ ಎಂಬ ಹೊಗಳಿಕೆಗಳ ನಡುವೆ
ನೀವು ಚಿತ್ರರಂಗ ಪ್ರವೇಶಿಸಿದಿರಿ.
ಆದರೆ ಈಗ
'ಆಕಾಶಗಂಗೆ'
ತೆರೆ ಕಂಡ ನಂತರ ಕನ್ನಡದಲ್ಲಿ ಅವಕಾಶಗಳಿಲ್ಲ.
ಏಕೆ ಹೀಗಾಯ್ತು?
ಅವಕಾಶ ಸಿಕ್ತಿಲ್ಲ ಅಂತ ಯಾರು ಹೇಳಿದ್ದು?
ಕನ್ನಡದಲ್ಲಿ ನಾನು ಓದುವ ಚಿತ್ರಕಥೆಗಳನ್ನೆಲ್ಲ
ಒಪ್ಪಿಕೊಂಡರೆ ಪ್ರತಿ ಶುಕ್ರವಾರ ನನ್ನ ಒಂದು ಚಿತ್ರ ತೆರೆ ಕಾಣುತ್ತಿತ್ತು.
ಆದರೆ ನಾನು ಕೊಂಚ ಚ್ಯೂಸಿ.
ಒಂದೇ ತೆರನಾದ ಪಾತ್ರಗಳು ನನಗಿಷ್ಟವಿಲ್ಲ.
ಅಭಿನಯಕ್ಕೆ ಅವಕಾಶವಿರಬೇಕು.
ಹಾಗೆಯೇ ನಾನು ಭಾಷೆಯ ಮಿತಿ ಹೇರಿಕೊಂಡಿಲ್ಲ.
ಯಾವುದೋ ಒಂದು ಚಿತ್ರರಂಗದಲ್ಲಿ ನಿಂತು ಅಲ್ಲೇ
ನಟಿಯಾಗಿ ಬೆಳೆಯಬೇಕು,
ಎನ್ನುವ ತುಡಿತ ನನಗಿಲ್ಲ.
ಕನ್ನಡದಲ್ಲಿ ನನ್ನನ್ನು
'ಚೂಟಿ ಹುಡುಗಿ'
ಎಂದೇ ಗುರುತಿಸುತ್ತಾರೆ.
ಇಂತಹುದೇ ಪಾತ್ರಗಳನ್ನು ಕೊಡುತ್ತಾರೆ.
ಆದರೆ ನನಗೆ ಏಕತಾನತೆ ಬಿಂಬಿಸುವ ಪಾತ್ರಗಳು
ಇಷ್ಟವಿಲ್ಲ.
'ಆಕಾಶ ಗಂಗೆ'ಯಲ್ಲಿ
ಮೆದು ವ್ಯಕ್ತಿತ್ವದ 'ಸಾಧು
ಹುಡುಗಿ'ಯ
ವಿಭಿನ್ನ ಪಾತ್ರವಿತ್ತು.
ಅದಕ್ಕೇ ಒಪ್ಪಿಕೊಂಡೆ.
ಹಾಗಿದ್ದ ಮೇಲೆ ಕಿರುತೆರೆಯಲ್ಲಿ
'ಕುಣಿಯೋಣು
ಬಾರಾ'ದಲ್ಲಿ
ಭಾಗವಹಿಸಿದ್ದು...
'ಕುಣಿಯೋಣು ಬಾರಾ'
ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಅವಕಾಶಗಳಿಲ್ಲ ಎಂದಲ್ಲ.
ಅದಕ್ಕೆ ಹಲವು ಕಾರಣಗಳಿವೆ;
ಈಗ ನೋಡಿ,
ಕೆಲವು ಊರುಗಳಲ್ಲಿ ಚಿತ್ರಮಂದಿರಗಳೇ ಇಲ್ಲ.
ಹಾಗಿರುವಾಗ ಅವರು ನನ್ನ ಚಿತ್ರಗಳನ್ನು
ನೋಡುವುದಾದರೂ ಹೇಗೆ?
ಕಿರುತೆರೆಯ ವ್ಯಾಪ್ತಿ ವಿಶಾಲ.
ಹಾಗಿರುವಾಗ ಕರ್ನಾಟಕದುದ್ದಕ್ಕೂ ಪ್ರಸಾರವಾಗುವ
ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವನ್ನು ತಪ್ಪಿಸಿಕೊಳ್ಳುವುದೇಕೆ?
ಮೊದಲೇ ನೃತ್ಯವೆಂದರೆ ನನಗೆ ಇಷ್ಟ.
'ಆಕಾಶ
ಗಂಗೆ'
ತೆರೆ ಕಂಡ ಸಂದರ್ಭದಲ್ಲಿ ನಾನು ಹಲವಾರು ಸಂದರ್ಶನಗಳನ್ನು ನೀಡಿರುವೆ.
ನನ್ನಲ್ಲಿ ಮಾತನಾಡಿದ ಅಭಿಮಾನಿಗಳೆಲ್ಲಾ ನನ್ನ
ಚಿತ್ರಗಳನ್ನೇ ನೋಡಿರಲಿಲ್ಲ.
ಆದರೆ
'ಕುಣಿಯೋಣು ಬಾರಾ'ದಲ್ಲಿ
ನೋಡಿದ್ದೇವೆಂದು ಹೇಳಿಕೊಂಡಿದ್ದಾರೆ.
ನನ್ನ ಈ ನಿರ್ಧಾರದ ಬಗ್ಗೆ ನನಗೆ ಸಂತೃಪ್ತಿ ಇದೆ.
ಛಾಯಾ ಸಿಂಗ್ ಬೇಡಪ್ಪಾ...
ಅಂತ ಕನ್ನಡ ನಿರ್ದೇಶಕರು ದೂರ ಸರಿಯುತ್ತಿದ್ದಾರೆ
ಎನ್ನುವ ಗುಲ್ಲಿದೆಯಲ್ಲ?
ನನಗಂತೂ ಈ ವಿಷಯ ಗೊತ್ತಿಲ್ಲಪ್ಪಾ.
ಈವರೆಗೆ ಯಾವೊಂದು ನಿರ್ದೇಶಕರೂ ನನ್ನಲ್ಲಿ ಈ
ಬಗ್ಗೆ ಹೇಳಿಕೊಂಡಿಲ್ಲ.
ಹೀಗಾಗಿ ಆ ಬಗ್ಗೆ ಸಮರ್ಥನೆ ಕೊಡುವುದರಲ್ಲಿ ಅರ್ಥವಿಲ್ಲ.
ಆದರೂ ನಾನು ಸಿನಿಮಾವನ್ನು ಒಪ್ಪಿಕೊಳ್ಳುವ ಮುನ್ನ
ಕೆಲವೊಂದು ವಿಷಯಗಳ ಬಗ್ಗೆ ಖಡಾಖಂಡಿತವಾದ ನಿರ್ಣಯ ಹೇಳುತ್ತೇನೆ.
ನನಗೆ ಅಂಗಪ್ರದರ್ಶನ ಇಷ್ಟವಿಲ್ಲ.
ನನಗೆ ನನ್ನ ಗೌರವ ಮುಖ್ಯ.
ಇಂತಹ ಪಾತ್ರಗಳನ್ನು ನಿರ್ವಹಿಸುವವರೇ ಬೇಕೆಂದರೆ
ಬೇರೆ ನಟಿಯರನ್ನು ಆರಿಸುತ್ತಾರೆ.
ಅದು ಅವರಿಷ್ಟ.
ನಾನು ನನ್ನ ಮನಸ್ಸು ಒಪ್ಪದ ವಿಚಾರಗಳಲ್ಲಿ ರಾಜಿ
ಮಾಡಿಕೊಳ್ಳುವುದಿಲ್ಲ.
ಹಾಗಿದ್ದಲ್ಲಿ ಐಟಂ ಸಾಂಗ್‌ಗಳಲ್ಲಿ ನಟಿಸಿದ್ದೀರಲ್ಲ?
ಅದು ಐಟಂ ಸಾಂಗ್ ಎಂದು ನೀವು ಕರೆಯುತ್ತೀರಿ.
ನನ್ನ ಪ್ರಕಾರ ಅದು
'ಸಿಚುವೇಶನ್
ಸಾಂಗ್'.
ನಾನು ಮನೋರಂಜನೆಗಾಗಿ ತುಂಡು ಲಂಗ ಹಾಕಿ
ಕುಣಿಯಲಿಲ್ಲ.
ಅಲ್ಲಿ ನೃತ್ಯಕ್ಕೆ ಹೆಚ್ಚು ಪ್ರಾಶಸ್ತ್ಯವಿತ್ತು.
ನಾನು ಯಾರ ಜೊತೆ ಕೆಲಸ ಮಾಡುತ್ತಿದ್ದೇನೆ
ಎನ್ನುವುದೂ ಮುಖ್ಯವಾಗಿತ್ತು.
ನಿಮಗೆ ಎಂತಹ ಪಾತ್ರಗಳು ಇಷ್ಟ...
ಚಿತ್ರೀಕರಣ ಹಂತದಲ್ಲಿರುವ ನಿಮ್ಮ ಚಿತ್ರಗಳು
ಯಾವುವು?
ಎಲ್ಲಾ ರೀತಿಯ ಪಾತ್ರಗಳೂ ಓಕೆ.
ಆದರೆ ಏಕತಾನತೆ ಇರಬಾರದು.
ವಿಭಿನ್ನ ಪಾತ್ರಗಳಿದ್ದರೆ ಯಾವ ಭಾಷೆಯಾದರೂ ಸರಿ.
ನಾನು ನಟನೆಗೆ ಸಿದ್ಧ.
ಈಗ ಭೋಜಪುರಿ ಭಾಷೆಯಲ್ಲಿ ಒಂದು,
ತಮಿಳಿನಲ್ಲಿ ಎರಡು,
ತೆಲುಗಿನಲ್ಲಿ ಒಂದು ಚಿತ್ರದಲ್ಲಿ
ನಟಿಸುತ್ತಿದ್ದೇನೆ.
ತಮಿಳು-
ತೆಲುಗಿನಲ್ಲಿ ಒಳ್ಳೇ ಆರಂಭ ಸಿಕ್ಕಿತ್ತು ಅಲ್ವೆ?
ಆಮೇಲೇನಾಯಿತು?
'ತಿರುಡಾ
ತಿರುಡಿ'
ಯಶಸ್ಸನ್ನು ಪುನರಾವರ್ತಿಸಲು ಸೋತಿದ್ದೇಕೆ?
ಯಶಸ್ಸು ಮತ್ತೆ ಮತ್ತೆ ಸಿಗಲ್ಲ.
ಹಾಗೆ ನೋಡಿದರೆ ಜೀವನದಲ್ಲಿ ನಾವು ಏನನ್ನು
ಸಾಧಿಸುತ್ತೇವೆಯೋ ಅದನ್ನು ಮತ್ತೆ ಪಡೆಯಲು ಸಾಧ್ಯವೇ ಇಲ್ಲ.
ಒಂದು ನಾವು ಆ ಸಾಧನೆಯನ್ನು ಮೀರಿ ಬೆಳೆಯಬಹುದು;
ಇಲ್ಲ,
ಅದರಿಂದ ಕೆಳಗಿಳಿಯಬಹುದು.
ನಿಜ ಹೇಳಬೇಕೆಂದರೆ ಯಶಸ್ಸು ಮುಖ್ಯವಲ್ಲ.
ಎಲ್ಲ ವಿಧದ ಕೆಲಸಗಳಲ್ಲೂ ತೊಡಗಿಸಿಕೊಳ್ಳುವುದು
ಮುಖ್ಯ.
ಛಾಯಾ ಸಿಂಗ್ ನಿರ್ದೇಶನದ ಚಿತ್ರ ಬರುತ್ತಿದೆ ಎಂದು
ಒಂದು ಸಲ ಸುದ್ದಿಯಾಯಿತು.
ಛಾಯಾ ಸಹಾಯಕ ನಿರ್ದೇಶಕಿ,
ಶ್ರೇಯಸ್ ಈ ಚಿತ್ರದ ನಿರ್ದೇಶಕ ಎನ್ನುವ ಸುದ್ದಿಯೂ
ಕೇಳಿ ಬಂತು?
ಯಾವುದು ನಿಜ?
ಹೌದು,
ನಿರ್ದೇಶನಕ್ಕೆ ಇಳಿದಿದ್ದೇನೆ.
ಆದರೆ ಮಾಧ್ಯಮಗಳು ನಮ್ಮ ಮಾತುಗಳನ್ನು ತಪ್ಪಾಗಿ
ಅರ್ಥೈಸಿಕೊಂಡಿದ್ದಾರೆ.
ನಾನೊಬ್ಬಳೇ ಚಿತ್ರ ನಿರ್ದೇಶಿಸುತ್ತಿದ್ದೇನೆ ಎನ್ನುವುದು
ಸುಳ್ಳು.
ನಾನು ಮತ್ತು ಶ್ರೇಯಸ್ ಜಂಟಿಯಾಗಿ ನಿರ್ದೇಶನದ ಹೊಣೆ
ಹೊತ್ತುಕೊಂಡಿದ್ದೇವೆ.
'ಗಾಂಧಿ ಬಜಾರ್'
ಅಂತ ಚಿತ್ರಕ್ಕೆ ಹೆಸರಿಟ್ಟಿದ್ದೇವೆ.
ಚಿತ್ರಕಥೆ ಸಿದ್ಧವಾಗಿದೆ.
ನಮ್ಮದು ಎರವಲು ಕಥೆಯಲ್ಲ,
ಮೂಲ ಕಥೆ.
ಬಸವನ ಗುಡಿ ಬಳಿಯ
'ಗಾಂಧಿ ಬಜಾರ್'ನಿಂದ
ಪ್ರೇರಣೆ ಪಡೆದುಕೊಂಡು ಚಿತ್ರಕಥೆ ನಿರ್ದೇಶಿಸಿದ್ದೇವೆ.
ಅಲ್ಲೇ ಹುಟ್ಟಿ,
ಬೆಳೆದ ಹುಡುಗರ ಕಥೆ.
ಯುವಜನರನ್ನು ಸೆಳೆಯುವ ಚಿತ್ರ.
ಜೀವಂತಿಕೆಯಿಂದ ಕೂಡಿದೆ.
ನಾಯಕಿ ಪಾತ್ರವನ್ನು ನಾನೇ ನಿರ್ವಹಿಸಬೇಕು
ಎಂದುಕೊಂಡಿದ್ದೇನೆ.
ನಾಯಕನ ಪಾತ್ರಕ್ಕೆ ಹಿಂದಿಯಿಂದ ಶ್ರೇಯಸ್ ತಲ್ಪಡೆ ಅವರನ್ನು
ಕರೆಸಬೇಕೆಂದುಕೊಂಡಿದ್ದೇವೆ.
ಈ ಬಗ್ಗೆ ಮಾತುಕತೆ ನಡೆಸಿದ್ದೇವೆ.
ನವೆಂಬರ್-
ಡಿಸೆಂಬರ್‌ನಲ್ಲಿ ಚಿತ್ರೀಕರಣ ಆರಂಭಿಸುವುದರಿಂದ
ಆ ಸಮಯಕ್ಕೆ ಅವರು ಬಿಡುವಾಗಿದ್ದು,
ಡೇಟ್ಸ್ ಕೊಟ್ಟಲ್ಲಿ ಎಲ್ಲ ನಿರೀಕ್ಷೆಯಂತೆ
ನಡೆಯಲಿದೆ.
ಇತರ ದಕ್ಷಿಣ ಭಾರತೀಯ ಚಲನಚಿತ್ರಗಳಿಗೆ ಹೋಲಿಸಿದರೆ
ಕನ್ನಡ ಚಿತ್ರರಂಗ ಹೇಗಿದೆ?
ತುಂಬಾ ಚೆನ್ನಾಗಿದೆ.
ನಾನು ಒಂದು ವರ್ಷ ಚಿತ್ರರಂಗದಿಂದ ದೂರವಿದ್ದೆ.
ಈ ಅವಧಿಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು
ಗುರುತಿಸಿದ್ದೇನೆ.
ಕನ್ನಡ ಚಿತ್ರರಂಗಕ್ಕೆ ಉಜ್ವಲ ಭವಿಷ್ಯವಿದೆ.
ನಮ್ಮ ಚಿತ್ರಗಳು ಹೊರಗೂ ಸುದ್ದಿ ಮಾಡುತ್ತಿವೆ.
ಬೇರೆ ಭಾಷೆಗಳಿಗೆ ಡಬ್ ಆಗುತ್ತಿವೆ,
ಕರ್ನಾಟಕದಿಂದ ಹೊರಗೆ ಪ್ರದರ್ಶನ ಕಾಣುತ್ತಿವೆ.
ಕನ್ನಡ ಚಿತ್ರರಂಗದಲ್ಲಿ ಕನ್ನಡ ನಟಿಯರಿಗೆ
ಅವಕಾಶಗಳಿಲ್ಲವೆ?
ಒಂದೊದ್ಸಲ ನನಗೂ ಹಾಗನ್ನಿಸಿದ್ದಿದೆ.
ಕನ್ನಡದಲ್ಲಿ ಇಷ್ಟೊಂದು ಪ್ರತಿಭಾವಂತ
ನಟಿಯರಿದ್ದಾರೆ.
ಹಾಗಿದ್ದೂ ನಿರ್ಮಾಪಕರು ಪರಭಾಷಾ ನಟಿಯರನ್ನು ಕರೆಸುವುದೇಕೆ?
ಆದರೆ ತಮ್ಮ ಚಿತ್ರಗಳಿಗೆ ತಕ್ಕ ನಟಿಯರನ್ನು
ಆರಿಸುವಾಗ ಅವರ ನಿರ್ಧಾರವೇ ಅಂತಿಮ.
ನಾವು ಏನೂ ಮಾಡಲು ಸಾಧ್ಯವಿಲ್ಲ.
ಆದರೆ ನಮಗೂ ಇತರ ಭಾಷೆಗಳಲ್ಲಿ ಅಭಿನಯಿಸುವ ಅವಕಾಶ
ಸಿಗುತ್ತದೆಯಲ್ಲ ಎಂಬ ಸಂತೃಪ್ತಿ ಇದೆ.
ನಟನೆ ಮುಖ್ಯ,
ಭಾಷೆಯಲ್ಲ.
ಆಕಾಶ ಗಂಗೆಯಲ್ಲಿ ಅಂತರ್ ಜಾತಿ ಪ್ರೇಮ,
ಮದುವೆಗೆ ಮುಂಚೆ ಪ್ರೀತಿಸಿದಾತನ ಮಗುವಿನ
ತಾಯಾಗುವ ಕಥೆ ಇದೆ...
ನಿಜ ಜೀವನದಲ್ಲಿ
'ಅಂತರ್‌ಜಾತಿ'
ಮದುವೆ ಮತ್ತು ಮದುವೆಗೆ ಮುನ್ನ ಲೈಂಗಿಕ ಸಂಪರ್ಕ ತಪ್ಪು ಹೆಜ್ಜೆಯೆ ಅಥವಾ
ಪ್ರೀತಿಯ ಮೇರುಘಟ್ಟದಲ್ಲಿ ಇಂತಹ ಸಂಬಂಧಗಳನ್ನು ಒಪ್ಪಿಕೊಳ್ಳಬಹುದೆ?
ನಿಮ್ಮ ಅಭಿಪ್ರಾಯ?

ಜಗತ್ತಿನಲ್ಲಿ ಒಂದೇ ಭಾಷೆ ಇರುವುದು ಅದು
ಪ್ರೇಮ.
ಹಾಗೆಯೇ ಒಂದು ಧರ್ಮವಿರುವುದು ಅದೇ ಮಾನವೀಯತೆ.
ಈಗ ಪ್ರೇಮಿಗಳು ಮದುವೆಗೆ ಮುಂಚೆ ಲೈಂಗಿಕ ಸಂಪರ್ಕ
ಇಟ್ಟುಕೊಳ್ಳುವುದು ಸಾಮಾನ್ಯವೆನಿಸಿದೆ.
ಇದು ಇಂದಿನ ತಲೆಮಾರಿನ ಬದಲಾದ ಮನಸ್ಥಿತಿ.
ಹಾಗೆಂದು ಎಲ್ಲಾ ಹುಡುಗ-
ಹುಡುಗಿಯರೂ ಇಂತಹ ಜೀವನಶೈಲಿಯಲ್ಲಿ ನಂಬಿಕೆ
ಇಟ್ಟಿದ್ದಾರೆ ಎಂದೇನಿಲ್ಲ.
ಒಟ್ಟಾರೆ ಹೇಳಬೇಕೆಂದರೆ ಇವೆಲ್ಲಾ ಅವರವರ ಮನಸ್ಸು
ಮತ್ತು ಭಾವಗಳನ್ನು ಅನುಸರಿಸಿದೆ.
ನನ್ನ ಅಭಿಪ್ರಾಯ ಕೇಳಿದರೆ ನಾನು ಎರಡೂ ಕಡೆಗೂ
ಇದ್ದೇನೆ.
ಫಿಫ್ಟಿ-
ಫಿಫ್ಟಿ!!
ನಿಮಗೆ ಯಾರೂ ಬಾಯ್‌ಫ್ರೆಂಡ್‌ಗಳಿಲ್ಲವೆ?
ಅಯ್ಯೋ...
ಬೆಳ್ಳಂಬೆಳಗ್ಗೆ ಇಂತಹ ಪ್ರಶ್ನೆ ಕೇಳಿ ಹೊಟ್ಟೆ
ಉರಿಸ್ತೀರಲ್ರೀ...
ಇನ್ನೂ ಯಾರು ಇಲ್ಲ.
ಅಂದರೆ ಮದುವೆ...
ಮಕ್ಕಳು?
ಸದ್ಯಕ್ಕೆ ಆ ಯೋಚ್ನೆ ಮಾಡಿಲ್ಲ.
ವೃತ್ತಿ ಜೀವನಕ್ಕೆ ಮೊದಲ ಆದ್ಯತೆ.
ಡಯಟ್,
ವ್ಯಾಯಾಮ?
ದಿನಚರಿ...
ಮನಸೋ ಇಚ್ಛೆ ಊಟ ಮಾಡುತ್ತೇನೆ.
ಸಾಕಷ್ಟು ಐಸ್‌ಕ್ರೀಂ ತಿನ್ನುತ್ತೇನೆ.
ಚಾಕೊಲೇಟ್‌ಗಳೆಂದರೆ ನನಗೆ ಪಂಚಪ್ರಾಣ...
ಹಾಗೆ ಮನ ಬಂದಷ್ಟು ಹೊತ್ತು ನಿದ್ದೆ
ಹೊಡೆಯುತ್ತೇನೆ.
ಸಂಜೆ ನಮ್ಮ ಮನೆಯಲ್ಲಿರುವ ಮೂರು ನಾಯಿಗಳ ಜೊತೆ
ಆಟವಾಡುತ್ತಿರುತ್ತೇನೆ.
ನಂತರ ರಾತ್ರಿಯೂಟ.
ಟಿವಿ ನೋಡುವುದು..
ಮಲಗುವುದು.
ಒಟ್ಟಾರೆಯಾಗಿ ರಜಾ ಅಂದ್ರೆ ಆರಾಮ ಜೀವನ...
ಒಬ್ಬ ತಾರೆಯ ಮುಂದಿರುವ ಅತೀ ದೊಡ್ಡ ಸವಾಲು?
ಏನಿರಬಹುದು?
ಸವಾಲುಗಳಿಲ್ಲದೆ ಇರುವುದೇ ದೊಡ್ಡ ಸವಾಲು.
ನನ್ನ ಜೀವನದಲ್ಲಿ ಸವಾಲುಗಳೇ ಇಲ್ಲ.
ದೊಡ್ಡ ಸವಾಲೊಂದನ್ನು ಜೀವನದಲ್ಲಿ ಎದುರಿಸಬೇಕಿದೆ
ಎಂಬ ತುರ್ತನ್ನು ನೀವು ನೆನಪಿಸಿದ್ದೀರಿ
(ನಗು).
ಟಿಎಸ್‌ಐ
|