|
ಅಪಘಾತದಲ್ಲಿ ಕಾಲು ಮುರಿದುಕೊಂಡು ಗಿಡಮೂಲಿಕೆ
ಔಷಧಿಗೆಂದು ಅಂಕೋಲೆ ಸಮೀಪದ ತೋಡೂರು ಎಂಬ ಪುಟ್ಟ ಹಳ್ಳಿಗೆ ಹೋಗಿದ್ದೆ.
೩ ತಿಂಗಳಿಗಾಗುವಷ್ಟು ಕಾಲಿಗೆ ಬಳಿದುಕೊಳ್ಳಲು
ಹಾಗೂ ಹೊಟ್ಟೆಗೆ ಸೇವಿಸಲು ಔಷಧಿ ನೀಡಿದ ತೋಡೂರು ಗೌಡ ಬಿಲ್ ಕೇಳಿದಾಗ
ಬುದ್ಧಿಗೆ ಬೆಲೆ ಕಟ್ಟಬೇಡಿ,
ನಿಮಗೆ ತಿಳಿದಷ್ಟು ಕೊಡಿ ಎಂದುಬಿಟ್ಟ.
ಆ ಕುಟುಂಬದ ಬಡತನ ಕಣ್ಣಿಗೆ ರಾಚುತ್ತಿತ್ತು.
ಸಾವಿರಾರು ರೂಪಾಯಿ ಕೇಳಬಹುದಿತ್ತು.
ಆದರೆ
'ಬುದ್ಧಿಗೆ ಬೆಲೆ ಕಟ್ಟಬೇಡಿ'
ಎಂದ ಆತ ದೇಶೀ ಜ್ಞಾನದ ಒಡಲಲ್ಲಿ ಅಡಗಿರುವ ಮಾನವೀಯ ಅಂತಃಕರಣ ಹಾಗೂ
ಸ್ವಾಭಿಮಾನಗಳನ್ನು ದರ್ಶಿಸಿದ.
ಸೀಬರ್ಡ್ ನೌಕಾನೆಲೆಯ ಹೆಸರಿನಲ್ಲಿ ಉತ್ತರಕನ್ನಡ
ಜಿಲ್ಲೆಯ ಬಹುಪಾಲು ಕಾಡಿಗೆ ಬೇಲಿ ಹಾಕಿದ್ದರಿಂದ ಗಿಡಮೂಲಿಕೆಗಳ ಹುಡುಕಾಟಕ್ಕೆ
ಪಡುತ್ತಿರುವ ಪಡಿಪಾಟಲನ್ನು ವಿವರಿಸಿದ.
ತಲೆಮಾರಿನಿಂದ ತಲೆಮಾರಿಗೆ ಆಸ್ತಿಯಲ್ಲದ
ಆಸ್ತಿಯಾಗಿ ಸಲಹುತ್ತ ಬಂದ ಕಾಡತಾಯ ಮಡಿಲಲ್ಲಿ ಕಳ್ಳರಂತೆ ಬದುಕಬೇಕಾದ ಸಂಕಟ
ನೆನೆಯುವಾಗಲಂತೂ ಅವನ ಕಣ್ಣುಗಳು ಒದ್ದೆಯಾದವು.
ಜ್ಞಾನ ಮಾರಾಟದ ಸರಕಲ್ಲ ಮನುಷ್ಯತ್ವದ ದಾರಿಯೆಂಬ
ಸ್ಥಳೀಯ ಕರುಳಿನ ಆ ಮಹಾತಿಳಿವಳಿಕೆಗೆ ಮನದಲ್ಲೇ ನಮಿಸಿದೆ.
ನನಗೆ ತಕ್ಷಣ ಇನ್ನೊಂದು ಘಟನೆ ನೆನಪಾಯಿತು.
ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರೊಬ್ಬರು
ಗ್ರಾಮೀಣ ವಿದ್ಯಾರ್ಥಿಗಳಿಗೆ ಪುಕ್ಕಟೆಯಾಗಿ ಮಾರ್ಗದರ್ಶನ
ನೀಡುತ್ತಿರುವುದನ್ನು ತಿಳಿಸಿ ಪದವಿ ಕಾಲೇಜೊಂದರಲ್ಲಿ ಅವಕಾಶ ಕೇಳಿದರು.
ಪ್ರಾಂಶುಪಾಲರು ಮತ್ತು ಸಿಬ್ಬಂದಿ ತುಂಬಾ
ಗೌರವದಿಂದ ವೇದಿಕೆ ನೀಡಿದರು.
'ವ್ಯಕ್ತಿತ್ವ
ನಿರ್ಮಾಣ ಮತ್ತು ಸಂವಹನ ಕಲೆ'
ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಪ್ರಾಧ್ಯಾಪಕರು ತಮ್ಮ ಮಾತುಗಾರಿಕೆಯ
ಸಮ್ಮೋಹಿನಿಯಿಂದ ಎಲ್ಲರ ಮನಸ್ಸನ್ನು ಗೆದ್ದರು.
ಭಾಷಣದುದ್ದಕ್ಕೂ ಐ.ಟಿ,
ಬಿ.ಟಿ
ದೊರೆಗಳ ಗುಣಗಾನ ಮಾಡಿದ ಆ ಪ್ರಾಧ್ಯಾಪಕರು ಕುತೂಹಲಕಾರಿ ಸಂಗತಿಯನ್ನು
ತಿಳಿಸಿದರು.
ಇನ್ಫೋಸಿಸ್ ಕಂಪನಿಯಲ್ಲಿ ನೌಕರನೊಬ್ಬ
'ಮಾದಲಿ'
ತಿನ್ನುತ್ತ ವಿದೇಶೀಯನೊಬ್ಬನೊಂದಿಗೆ ಮಾತನಾಡುತಿದ್ದಾಗ ಬಾಯಿಸಪ್ಪಳ ಕೇಳಿದ
ವಿದೇಶೀಯ ಆ ಬಗ್ಗೆ ವಿಚಾರಿಸಿದ.
ಈತ 'ಮಾದಲಿ'
ಎಂಬ ಉತ್ತರ ಕರ್ನಾಟಕದ ರುಚಿಕಟ್ಟಾದ ಸಿಹಿತಿಂಡಿಯ ಮಾಹಿತಿ ನೀಡಿದ.
ವಿದೇಶೀಯ ಪಾರ್ಸಲ್ ತರಿಸಿಕೊಂಡು ಈ ತಿಂಡಿಯನ್ನು
ಮೆಚ್ಚಿಕೊಂಡ.
ನಾರಾಯಣ ಮೂರ್ತಿಯವರು ಅದನ್ನು ಕೋಟ್ಯಾಂತರ ರೂಪಾಯಿಯ
ವ್ಯಾಪಾರದ ವಹಿವಾಟನ್ನಾಗಿಸಿದರಂತೆ.
ಈ ಘಟನೆಯ ಸತ್ಯಾಸತ್ಯತೆ ಏನೇ ಇರಲಿ ಬಂಡವಾಳದ
ಕೈಯಲ್ಲಿ ಪ್ರತಿ ಜ್ಞಾನವೂ ಹಣದ ವಹಿವಾಟಾಗುವ ಪರಿಕ್ರಮವನ್ನು ಅದು
ಧ್ವನಿಸುತ್ತದೆ.
ತೋಡೂರು ಗೌಡ,
ನಿವೃತ್ತ ಪ್ರಾಧ್ಯಾಪಕ ಹಾಗೂ ನಾರಾಯಣಮೂರ್ತಿಗಳು
ಮುಖಾಮುಖಿಯಾಗಿ ನನ್ನನ್ನು ಕಾಡುತ್ತಿರುತ್ತಾರೆ.
ಟ್ವೆಂಟಿ-ಟ್ವೆಂಟಿ
ಐಪಿಎಲ್ ಕ್ರಿಕೆಟ್ ಸಮರ ಮುಗಿದಿದೆ.
ಅಲ್ಲಿ ಆಟ,
ಕೌಶಲ್ಯ,
ತಾಂತ್ರಿಕತೆ ಯಾವುದೂ ಮುಖ್ಯವಾಗಿರಲಿಲ್ಲ.
ದೇಹ ಮತ್ತು ಮನಸ್ಸುಗಳನ್ನು ಕೇಂದ್ರೀಕರಿಸಿ
ಸಾಧ್ಯವಾದಷ್ಟೂ ವೇಗವಾಗಿ ಹೆಚ್ಚು ರನ್‌ಗಳನ್ನು ಚಚ್ಚಬೇಕು.
ಅಂದರೆ ಮಾತ್ರ ಹಣದ ಹೊಳೆ ಹರಿಯತ್ತದೆ.
ಈ ಕ್ರಿಕೆಟ್ ಸಮರ ಹಣವೇ ಪರಮ ಮೌಲ್ಯ,
ಅದನ್ನು ಗಳಿಸುವ ಸಾಮರ್ಥ್ಯವೇ ವ್ಯಕ್ತಿತ್ವವೆಂಬ
ಸಂದೇಶವನ್ನು ನಮ್ಮ ಯುವಜನಾಂಗಕ್ಕೆ ತಲುಪಿಸಿತು.
ಇತ್ತೀಚಿನ ವರ್ಷಗಳಲ್ಲಿ ವ್ಯಕ್ತಿತ್ವ
ನಿರ್ಮಾಣ (ಪರ್ಸನಾಲಿಟಿ
ಡೆವಲಪ್‌ಮೆಂಟ್)
ಎಂಬ ವಿಷಯ ವಿದ್ಯಾರ್ಥಿ ಸಮುದಾಯದಲ್ಲಿ ಹೆಚ್ಚು
ಪ್ರಚುರಗೊಳ್ಳುತ್ತಿದೆ.
೯೦ರ ದಶಕದಲ್ಲಿ ಭಾರತ ಸುಂದರಿಯರು ಸಾಲಾಗಿ
ವಿಶ್ವಸುಂದರಿಯರಾಗಿ ಬಹುರಾಷ್ಟ್ರೀಯ ಕಂಪನಿಗಳ ಉತ್ಪಾದನೆಗಳ ಪ್ರಚಾರಕ್ಕಿಳಿದ
ಬೆನ್ನ ಹಿಂದೆಯೇ ಭಾರತದ ವಿಶ್ವವಿದ್ಯಾಲಯಗಳ ಪದವಿ ಪಠ್ಯಕ್ರಮದಲ್ಲಿ
'ವ್ಯಕ್ತಿತ್ವ
ನಿರ್ಮಾಣ ಮತ್ತು ಸಂವಹನ ಕಲೆ'
ಎಂಬ ವಿಷಯ ಕಡ್ಡಾಯವಾಗಿ ಸೇರಿಕೊಂಡು ವ್ಯಕ್ತಿತ್ವ ನಿರ್ಮಾಣದ ಹೊಸ
ಮಾದರಿಯನ್ನು ಮುಂದಿಡುತ್ತಿದೆ.
'ಸಂವಹನ
ಕಲೆ'ಗೆ
ಅಂಟಿಕೊಂಡು ಸ್ಪೋಕನ್ ಇಂಗ್ಲಿಷ್ ಎಂಬ ಕೋರ್ಸ್ ಆರಂಭವಾಗಿದೆ.
ಈ ವಿಷಯದ ಬೋಧನೆಗೆ ನಾಯಿಕೊಡೆಗಳಂತೆ ಅಸಂಖ್ಯ
ಖಾಸಗೀ ಟ್ಯುಟೋರಿಯಲ್‌ಗಳು ಹುಟ್ಟಿಕೊಂಡಿವೆ.
ಸುಂದರ ರೂಪ,
ಆಕರ್ಷಕ ಉಡುಪು,
ಸಮ್ಮೋಹಕ ಆಂಗಿಕ ಚಲನವಲನ,
ಪರಿಣಾಮಕಾರಿ ಮಾತುಗಾರಿಕೆ,
ಇನ್ನೊಬ್ಬರಿಗೆ ವಿಷಯವನ್ನು ತಿಳಿಯಪಡಿಸುವ
ಸಾಮರ್ಥ್ಯಗಳೇ ವ್ಯಕ್ತಿತ್ವ ನಿರ್ಮಾಣದಲ್ಲಿ ಮುಖ್ಯ ಅಂಶಗಳೆಂದು
ಬೋಧಿಸಲಾಗುತ್ತದೆ.
ಕಂಪ್ಯೂಟರ್ ಮತ್ತು ಸಂವಹನ ಇಂಗ್ಲಿಷ್ ಜ್ಞಾನಗಳು ಮಾತ್ರ
ಅಗ್ರಗಣ್ಯ,
ಉಳಿದವುಗಳೆಲ್ಲ ನಗಣ್ಯವೆಂಬ ಕಲ್ಪನೆಯನ್ನು
ಬೆಳೆಸಲಾಗುತ್ತದೆ.
ಮಾನವೀಯ ಮೌಲ್ಯಗಳ ಅನುಸರಣೆ,
ನಿರಂತರ ಅಧ್ಯಯನಶೀಲತೆ,
ಸೃಜನಶೀಲತೆ,
ಸಂಶೋಧನಾತ್ಮಕ ದೃಷ್ಟಿಕೋನ,
ಜ್ಞಾನದ ಯಾವುದಾದರೂ ಕ್ಷೇತ್ರದಲ್ಲಿ ಮಹತ್ತರ
ಸಾಧನೆಗೆ ತೊಡಗಿಕೊಳ್ಳುವಿಕೆ,
ಸಾಮಾಜಿಕ ಬದ್ಧತೆ...
ಮುಂತಾದವುಗಳ ಮೂಲಕ ಆಂತರಿಕ ಸೌಂದರ್ಯವನ್ನೂ
ಶ್ರೇಷ್ಠ ವ್ಯಕ್ತಿತ್ವವನ್ನೂ ಸಂಪಾದಿಸಬಹುದೆಂಬ ಸರಳ ಕಲ್ಪನೆಯನ್ನೇ
ಬುಡಮೇಲಾಗಿಸಲಾಗುತ್ತದೆ.
ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದುಕೊಂಡು ಬೇಂದ್ರೆ
ಆಗಬಹುದು,
ನರ್ಸ್ ಆಗಿದ್ದುಕೊಂಡು ಮದರ್ ಥೆರೆಸಾ ಆಗಬಹುದೆಂಬಂಥ
ಸಾಧ್ಯತೆಗಳಿಗೆ ಮಹತ್ವವಿಲ್ಲ.
ಕಂಪ್ಯೂಟರ್ ಮತ್ತು ಇಂಗ್ಲಿಷ್ ಭಾಷಾ
ಜ್ಞಾನವಿಲ್ಲದೆಯೂ ಪಡೆಯಬಹುದಾದ ಉದ್ಯೋಗ ಸಾಧ್ಯತೆಗಳನ್ನು ಮುಚ್ಚಿಡಲಾಗುತ್ತದೆ.
ಐ.ಟಿ,
ಬಿ.ಟಿ
ವಲಯದ ಉದ್ಯೋಗ ಪ್ರಮಾಣ ಒಂದು ರಾಷ್ಟ್ರದ ಒಟ್ಟು ಉದ್ಯೋಗ ಪ್ರಮಾಣದಲ್ಲಿ
ಅತ್ಯಂತ ಕಡಿಮೆ ಪ್ರಮಾಣದ್ದು ಎಂಬ ಸತ್ಯವನ್ನು ಮರೆಮಾಚಲಾಗುತ್ತದೆ.
ಹಾಗಾದರೆ ಇದೆಲ್ಲ ಯಾಕೆ ನಡೆಯುತ್ತದೆ?
ಕಾರಣ ಸ್ಪಷ್ಟ.
ನವವಸಾಹಾತುಶಾಹಿ ಹುಟ್ಟುಹಾಕಿರುವ ಹೊಸಮಾರುಕಟ್ಟೆ
ವ್ಯವಸ್ಥೆಯನ್ನು ಪ್ರಚುರಪಡಿಸಲು,
ಅದರ ನಿರ್ವಹಣೆಯ ಬೇರೆ-ಬೇರೆ
ಸ್ತರಗಳಲ್ಲಿ ಕಾರ್ಯನಿರ್ವಹಿಸಲು ಬೇಕಾಗಿರುವ ಯಂತ್ರಮಾನವರನ್ನು
ಸೃಷ್ಟಿಸುವುದೇ 'ವ್ಯಕ್ತಿತ್ವ
ನಿರ್ಮಾಣ'ವೆಂಬ
ಕಲ್ಪನೆಯ ಮೂಲಮಂತ್ರವಾಗಿದೆ.
ಒಂದು ಮಾತನ್ನು ಇಲ್ಲಿ ಸ್ಪಷ್ಟಪಡಿಸಬೇಕು.
ನನ್ನ ಉದ್ದೇಶ ಆಧುನಿಕ ಜ್ಞಾನ ಕ್ರಮದ
ನಿರಾಕರಣೆಯಲ್ಲ.
ಬದಲಾಗಿ ಅದರ ಹುಟ್ಟು ಮತ್ತು ಪ್ರಸಾರದ ವಿಧಾನದಲ್ಲೇ
ಅಡಕವಾಗಿರುವ ಜಾಗತಿಕ ಬಂಡವಾಳವಾದ ಪರವಾದ ನಿಲುವುಗಳನ್ನು ಚರ್ಚಿಸುವುದು.
ಚಾಮ್‌ಸ್ಕಿ ಹೇಳುವಂತೆ ಬಂಡವಾಳಶಾಹಿ ಪ್ರಭುತ್ವಗಳು
ಆಧುನಿಕ ಜ್ಞಾನಮಾರ್ಗಗಳನ್ನು ಸುಳ್ಳು ಹೇಳಲು ಬಳಸಿಕೊಂಡರೆ ನಾವು ಆ
ಮಾರ್ಗಗಳನ್ನು ಸತ್ಯ ಹೇಳಲು ಬಳಸಿಕೊಳ್ಳೋಣ.
ಈ ಬಗೆಯ ಶಿಕ್ಷಣದಿಂದ ಸೃಷ್ಟಿಯಾದ
ಯಂತ್ರಮಾನವರು ಸಹಜವಾಗಿ ಅಮೆರಿಕದ ಭಟ್ಟಂಗಿಗಳಾಗಿರುತ್ತಾರೆ.
ಇಂಥವರ ಮುಂದೆ ನಿಂತು ಜಾಗತೀಕರಣದ ಪರಿಣಾಮವಾಗಿ
ದೇಶದಲ್ಲಿ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ,
ದೇಶಿ ಕಂಪನಿಗಳು ಮುಚ್ಚಿ ಲಕ್ಷಾಂತರ ಬಡ
ಕಾರ್ಮಿಕರು ಬೀದಿ ಪಾಲಾಗಿದ್ದಾರೆ,
ದೇಶದ ಎಲ್ಲ ರೀತಿಯ ಪ್ರಾಕೃತಿಕ ಸಂಪನ್ಮೂಲಗಳ ಲೂಟಿ
ನಡೆದಿದೆ,
ಮಾನವಸಂಪನ್ಮೂಲ ಚಿಲ್ಲರೆಯಾಗಿ ಬಳಸಲ್ಪಡುತ್ತಿದೆ,
ಏಕಪ್ರಕಾರದ ಚಿಂತನೆಗಳ ಹೇರಿಕೆಯಿಂದ ದೇಶದ
ಬಹುಮುಖಿ ಜ್ಞಾನಶಾಖೆಗಳು ನಾಶವಾಗುತ್ತಿವೆ,
ಪ್ರಾದೇಶಿಕ ಭಾಷೆ-
ಸಂಸ್ಕೃತಿಗಳು ಅಳಿವಿನಂಚಿಗೆ ಸರಿಯುತ್ತಿವೆ,
ಸೃಜನಶೀಲತೆ ಸಂಶೋಧನೆಗಳು ಕಡಿಮೆಯಾಗುತ್ತ
ಅನುಕರಣಶೀಲತೆ ವೃದ್ಧಿಸುತ್ತಿದೆ...
ಮುಂತಾಗಿ ಹೇಳತೊಡಗಿದರೆ ಅವರು ನಕ್ಕು
ಸುಮ್ಮನಾಗುತ್ತಾರೆ!
ಪ್ಲೇಟೋ,
ಅರಿಸ್ಟಾಟಲ್,
ಸಾಕ್ರೆಟೀಸ್,
ಬುದ್ಧ,
ಬಸವ,
ಗಾಂಧಿ,
ಐನ್‌ಸ್ಟೈನ್,
ಜಗದೀಶಚಂದ್ರ ಬೋಸ್,
ಪಂಪ,
ಕುವೆಂಪು,
ಬೇಂದ್ರೆ...
ಇವರೆಲ್ಲ ಯಾವ ಹುದ್ದೆಯಲ್ಲಿದ್ದರೆಂಬುದು
ನೆನಪಾಗುವುದಿಲ್ಲ.
ಆದರೆ ಯಾವ ಜ್ಞಾನಕ್ಷೇತ್ರದಲ್ಲಿ ತಮ್ಮ ಸೃಜನಶೀಲತೆ,
ಚಿಂತನೆ,
ಶೋಧಗಳನ್ನು ಬಿಟ್ಟು ಹೋದರೆಂಬ ಸಂಗತಿ
ಮುಖ್ಯವಾಗುತ್ತದೆ.
ಉಪಜೀವನದ ಭದ್ರತೆ-
ಅಭದ್ರತೆಗಳ ಹೋರಾಟದ ನಡುವೆಯೂ ಜ್ಞಾನ
ಮುಖಿಯಾಗುವುದೇ ವ್ಯಕ್ತಿತ್ವ ನಿರ್ಮಾಣದ ಹಾದಿಯೆಂಬ ಸತ್ಯವನ್ನು ಈ ಮೇಲಿನ
ಮಾದರಿಗಳು ತಿಳಿಯಪಡಿಸುತ್ತವೆ.
ಅಂಥ ದಾರಿ ನಮ್ಮ ಹೊಸ ತಲೆಮಾರಿಗೆ ದಕ್ಕೀತೆ?
ಟಿಎಸ್‌ಐ
|