|

ಸರ್ಕಾರ
ಸ್ಪಂದಿಸಲಿ
'ಅರುಣ್ ಜೇಟ್ಲಿ-ಕೇಸರಿ
ಪಡೆಯ ಚತುರ ಚಾಣಕ್ಯ'
(ಪ್ರಿಯಾಂಕ ರಾಯ್ ಮತ್ತು ಸತೀಶ್ ಚಪ್ಪರಿಕೆ)
ಮುಖಪುಟ ಲೇಖನ ಸಂಬಂಧಪಟ್ಟವರ ಆತ್ಮಾವಲೋಕನಕ್ಕೂ
ಎಡೆಮಾಡಿಕೊಟ್ಟಿದೆ.
ನಾಯಕ ಶಿಖಾಮಣಿಗಳ ಕಿತ್ತಾಟ,
ಭಿನ್ನಮತ,
ಮಸಲತ್ತುಗಳು ಜನರಲ್ಲಿ ಹೇವರಿಕೆ ಹುಟ್ಟಿಸಿದ್ದಷ್ಟೇ
ಅಲ್ಲ,
ಸಮರ್ಪಕ ಪ್ರಣಾಳಿಕೆ ರೂಪಿಸಲೂ ಅಸಾಧ್ಯವಾಗುವಂತಾಯಿತು.
ರಾಜ್ಯವನ್ನು ಬಹಳ ಕಾಲ ಆಳಿದ ಪಕ್ಷ ಜೆಡಿ(ಎಸ್)ಗೆ
ಕುಟುಂಬವಾದಿ ರಾಜಕಾರಣವೇ ಮುಳ್ಳಾಯಿತು.
ರಾಹುಲ್ ಗಾಂಧಿ ಅವರ ರೋಡ್ ಶೋದಿಂದಲೂ ಕಾಂಗ್ರೆಸ್‌ಗೆ
ಅದೃಷ್ಟ ಒಲಿಯಲಿಲ್ಲ.
ಇವೆಲ್ಲವನ್ನು ದೂರದ ದಿಲ್ಲಿಯಿಂದಲೇ ಹದ್ದಿನ ಕಣ್ಣಿನಿಂದ
ಗಮನಿಸುತ್ತಿದ್ದ ಅರುಣ್ ಜೇಟ್ಲಿ ಸರಿಯಾದ ತಂತ್ರವನ್ನೇ ಹೆಣೆದು ಈ ಎರಡೂ ಮದಗಜಗಳನ್ನು
'ಖೆಡ್ಡಾ'ಕ್ಕೆ
ಕೆಡವಿದರು.
ಇಲ್ಲಿ ಬಿಜೆಪಿಗೆ ಮತದಾರ ಮಣೆ ಹಾಕಿದ್ದಾನೆ ಎಂಬುದಕ್ಕಿಂತಲೂ,
ಕಾಂಗ್ರೆಸ್-ಜೆಡಿ(ಎಸ್)
ಪಕ್ಷಗಳನ್ನು ತಿರಸ್ಕರಿಸಿದ್ದಾನೆ ಎನ್ನುವುದು ಸೂಕ್ತ.
ಏಕೆಂದರೆ ಬಿಜೆಪಿ ಬಳಿ ಹೇಳಿಕೊಳ್ಳಲು ಒಂದು
ಪ್ರಣಾಳಿಕೆಯಾದರೂ ಇತ್ತು,
ಯುಪಿಎ ಸರ್ಕಾರದ ಅವಧಿಯಲ್ಲಿನ ಬೆಲೆ ಏರಿಕೆಯ ರಾಮಬಾಣವಿತ್ತು.
ಆದರೆ ಕಾಂಗ್ರೆಸ್ ಬಳಿ ಇದ್ದುದು ಕಡು ಬಡವರಿಗೆ ಕಡಿಮೆ
ಬೆಲೆಯಲ್ಲಿ ಅಕ್ಕಿ ವಿತರಿಸುವ,
ಕಲರ್ ಟಿವಿ ನೀಡುವ 'ಕಿತ್ತುಹೋದ'
ಭರವಸೆಗಳು.
ಕಾಂಗ್ರೆಸ್ ಎಂಬ ಪಕ್ಷವೇ ಸೂತ್ರ ಕಿತ್ತುಹೋದ ಗಾಳಿಪಟವಾಗಿರುವಾಗ ಈ ಭರವಸೆಗಳಿಗೆ
ಎಲ್ಲಿಂದ ಬರಬೇಕು ಸೂತ್ರ,
ಸೂತ್ರಧಾರ?!!
ಪ್ರಜಾಪ್ರಭುತ್ವ,
ಸಂವಿಧಾನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜನತೆಯನ್ನು
ಹಗುರವಾಗಿ ಪರಿಗಣಿಸಿದರೆ ಪರಿಣಾಮ ಏನಾಗುತ್ತದೆ ಎಂಬುದಕ್ಕೆ ಒಂದು ಉದಾಹರಣೆ
ಸಿಕ್ಕಂತಾಗಿದೆ.
ಹೊಸ ಸರ್ಕಾರ ಮತದಾರನ ನಿರೀಕ್ಷೆಗಳಿಗೆ ಸ್ಪಂದಿಸಲಿ.
ವೈ.ಸಿ. ರಘುನಾಥ್ ನಾಡಿಗ್.
ಬೆಂಗಳೂರು
ನವತಾರೆಗಳಿವರು!
'ಅರುಣ್ ಜೇಟ್ಲಿ:
ಕೇಸರಿ ಪಡೆಯ ಚತುರ ಚಾಣಕ್ಯ'
ಮುಖಪುಟ ಲೇಖನ ನೈಜತೆಗೆ ಹಿಡಿದ ಕೈಗನ್ನಡಿ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುವಲ್ಲಿ
ಜೇಟ್ಲಿಯ ತಂತ್ರಗಳೇ ಕಾರಣ ಎನ್ನುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ.
ಇದೇ ರೀತಿ ಗುಜರಾತ್ ಚುನಾವಣೆಯಲ್ಲಿ ಮೋದಿ ಪರ ಚುನಾವಣಾ
ತಂತ್ರಗಳನ್ನು ರೂಪಿಸಿರುವ ಜೇಟ್ಲಿ ಕರ್ನಾಟಕದಲ್ಲಿಯೂ ಸಫಲರಾಗಿದ್ದು ವಿಶೇಷ.
ಒಟ್ಟಿನಲ್ಲಿ ಈ ಬಾರಿಯ ರಾಜ್ಯ ಚುನಾವಣೆಯಲ್ಲಿ ಮೋದಿ-ಜೇಟ್ಲಿ
ಇಬ್ಬರೂ ನವತಾರೆಗಳೇ.
ಮತದಾರರೂ ಈ ಬಾರಿ ಯೋಚಿಸಿ ಮತ ನೀಡಿದ್ದಾರೆನ್ನುವುದರಲ್ಲಿ
ಅನುಮಾನವೇ ಇಲ್ಲ.
ಆಂತರಿಕವಾಗಿ ಪಿತೂರಿ ನಡೆಸುತ್ತಿದ್ದ ಕಾಂಗ್ರೆಸ್ ಮತ್ತು
ತಾನಿಲ್ಲದೆ ರಾಜ್ಯವಿಲ್ಲವೆಂದು ಮೆರೆಯುತ್ತಿದ್ದ ಜೆಡಿ(ಎಸ್)ಗೆ
ಜನರು ತಕ್ಕ ಪಾಠ ಕಲಿಸಿದ್ದಾರೆ.
ಬಿಜೆಪಿ ಅನೇಕ ಸವಾಲುಗಳನ್ನು ಎದುರಿಸಿ ಅಧಿಕಾರಕ್ಕೆ ಬಂದಿದೆ.
ಈ ನಡುವೆ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು
ಪ್ರಯತ್ನ ಮಾಡಬೇಕಿದೆ.
ಎನ್. ಪ್ರೇಮಾನಂದ,
ಮಂಗಳೂರು
ಅಭಿವೃದ್ಧಿ ಗುರಿಯಿರಲಿ
ಮುಖಪುಟ ಲೇಖನ ತರ್ಕಬದ್ಧವಾಗಿ ಮೂಡಿಬಂದಿದೆ.
ಕರ್ನಾಟಕದಲ್ಲಿ ವಿಜಯ ಸಾಧಿಸಿ ಸರ್ಕಾರ ರಚಿಸಿರುವ ಬಿಜೆಪಿ
ಮುಂದಿದೆ ಬಹುದೊಡ್ಡ ಸವಾಲು.
ಕರ್ನಾಟಕದ ಸಮಗ್ರ ಅಭಿವೃದ್ಧಿಯನ್ನೇ ಮಹತ್ವದ ಗುರಿಯಾಗಿಸಿಕೊಂಡು,
ಮುಖ್ಯವಾಗಿ ಉತ್ತರ ಕರ್ನಾಟಕದ ಜನರ ಏಳಿಗೆಗೆ ಹೆಜ್ಜೆ
ಇಡಬೇಕಿದೆ.
ಅರುಣ್ ಜೇಟ್ಲಿ ಅವರು ತಮ್ಮ ರಣತಂತ್ರಗಳ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿ ವಿಜಯದ
ಕಹಳೆ ಊದಲು ಯಶಸ್ವಿಯಾಗಿದ್ದರೂ,
ಕರ್ನಾಟಕದ ಅಭಿವೃದ್ಧಿಗೆ ಕೇಂದ್ರದಿಂದ ಸೂಕ್ತ ಅನುದಾನ ದೊರಕಿಸಿ
ಕೊಡುವತ್ತಲೂ ಗಮನಹರಿಸಬೇಕು.
ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಸಮಿತಿ ನೇತೃತ್ವ ವಹಿಸಿದ್ದ
ಪೃಥ್ವಿರಾಜ್ ಚೌಹಾಣ್ ಪಕ್ಷವನ್ನು ಗೆಲುವಿನ ದಡ ಸೇರಿಸುವಲ್ಲಿ ಸೋಲು ಕಂಡದ್ದು
ಏಕೆಂದು ಇಡೀ ಕರ್ನಾಟಕಕ್ಕೇ ಮನದಟ್ಟಾಗಿದೆ.
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ
ಗೆಲುವು ಮುಳ್ಳಿನ ಹಾದಿಯೇ ಹೌದು.
ಒಟ್ಟಾರೆ ಬಿಜೆಪಿ ರಾಷ್ಟ್ರಾದ್ಯಂತ ತನ್ನ ಬಾಹುಗಳನ್ನು
ಚಾಚುತ್ತಿದೆ.
ಕೆ. ಶಿವಕುಮಾರ್
ಮೈಸೂರು
| ಬಹುಮಾನಿತ ಪತ್ರಗಳು |
|
ಜನತೆಗೆ ಬೇಕು ನೂತನ!
ಅಭಿವೃದ್ಧಿ-
ಉತ್ತಮ ಆಡಳಿತ ನಿರ್ವಹಣೆಯ ಆಶ್ವಾಸನೆ ಮತ್ತು
ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸುವ ಮೂಲಕ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ
ಪಡೆದುಕೊಂಡಿದೆ.
ಇದರಿಂದಾಗಿ ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಗೆದ್ದು
ಪ್ರಧಾನಿಯಾಗುವ ಎಲ್.ಕೆ.
ಅಡ್ವಾಣಿ ಅವರ ಕನಸು ಚಿಗಿತುಕೊಂಡಿದೆ.
ಹೌದು!
ಇದು ಇತರ ರಾಜ್ಯಗಳಲ್ಲೂ ಪಕ್ಷದ ಕಾರ್ಯತಂತ್ರ ಮತ್ತು
ಚುನಾವಣಾ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರಲಿದೆ.
ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಜನಸಾಮಾನ್ಯನ
ಒಲವು ಬಿಜೆಪಿಗಿದೆ ಎಂಬುದು ಸಾಬೀತಾಗಿದೆ.
ಈಗಾಗಲೇ ದೇಶದ ಈಶಾನ್ಯ ಭಾಗದ ರಾಜ್ಯಗಳಲ್ಲಿ ತನ್ನ
ಅಸ್ವಿತ್ವ ಸ್ಥಾಪಿಸಿರುವ ಬಿಜೆಪಿ ಪಕ್ಷ ಇದೀಗ ದಕ್ಷಿಣ ಭಾರತಕ್ಕೂ ಅಡಿ ಇಟ್ಟಿದೆ.
ಬಿಜೆಪಿಯ ಈ ಪ್ರಾಬಲ್ಯ ಕಾಂಗ್ರೆಸ್ ಪಕ್ಷದ ನೈತಿಕ
ಸ್ಥೈರ್ಯದ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಈಗಾಗಲೇ ಸೋಲಿನ ಕಹಿ ಉಣಿಸಿದ ಕರ್ನಾಟಕ ಕಾಂಗ್ರೆಸ್‌ಗೆ
ಸುಭದ್ರ ನೆಲೆಯಾಗಿತ್ತು.
೧೯೭೭ರ ಬಳಿಕ ಈ ರಾಷ್ಟ್ರೀಯ ಪಕ್ಷ ರಾಜ್ಯದಲ್ಲಿ ತನ್ನ ಶಕ್ತಿ
ಕಳೆದುಕೊಳ್ಳುತ್ತಿದೆ.
ಚುನಾವಣೆಗೆ ಮೊದಲು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ
ಜಾಯಮಾನ ಕಾಂಗ್ರೆಸ್‌ಗಿಲ್ಲ.
ಮಾತ್ರವಲ್ಲ,
ಸಮರ್ಥ ನಾಯಕತ್ವವೂ ಪಕ್ಷಕ್ಕಿಲ್ಲ.
ದಲಿತರು,
ಒಬಿಸಿ,
ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ನಾಯಕತ್ವ
ಜವಾಬ್ದಾರಿಯನ್ನು ನೀಡಬೇಕಿದೆ.
ಕರ್ನಾಟಕದ ಜನತೆ ಬದಲಾವಣೆ ಬಯಸಿದ್ದಾರೆಂಬುದನ್ನು
ದೃಢಪಡಿಸಿದ್ದಾರೆ.
ಶ್ವೇತಾ ಸೋಲಂಕಿ
(ಇ-ಮೇಲ್ ಮೂಲಕ)
ರಾಜಕೀಯ ಹಿಂಸಾಚಾರ!
ತೆರೆಬೀಳುವ ಮುನ್ನ ಅಂಕಣದಲ್ಲಿ
ಮೂಡಿಬಂದ 'ನೈಜ ಪ್ರಜಾಪ್ರಭುತ್ವದೆಡೆಗೆ ದಿಟ್ಟ ಹೆಜ್ಜೆ' (ಸುನಂದೊ ಸನ್ಯಾಲ್)
ಲೇಖನಕ್ಕೆ ಈ ಪ್ರತಿಕ್ರಿಯೆ. ಇತ್ತೀಚೆಗೆ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಗೆ
ಅಮಾಯಕರ ಬದುಕು ಬಲಿಯಾಗಿದೆ. ಇದು ಭಾರತ ರಾಜಕೀಯ ಅಧೋಗತಿಯತ್ತ
ಸಾಗುತ್ತಿರುವುದರ ಸೂಚನೆ. ಸಿಪಿಎಂ ಪಕ್ಷ ಸ್ಟಾಲಿನ್ ಧೋರಣೆಯಲ್ಲಿ ಆರ್‌ಎಸ್‌ಪಿಯಂತಹ
ಪಕ್ಷವನ್ನು ಬೇರು ಸಮೇತ ಕಿತ್ತುಹಾಕಲು ಪ್ರಯತ್ನಿಸುತ್ತಿದೆ. ಇದೇ ಅಮಾಯಕರ
ಹತ್ಯಾಕಾಂಡಕ್ಕೂ ಕಾರಣ. ಸಿಪಿಎಂ ಹೋರಾಟಗಾರರು ಮತ್ತು ನಾಯಕರು ಮತದಾನ
ಕೇಂದ್ರದಲ್ಲಿ ದೊಂಬಿಯೆಬ್ಬಿಸುವುದನ್ನು ಪತ್ರಿಕೆ ಮತ್ತು ಟಿ.ವಿ. ಚಾನೆಲ್
ಛಾಯಾಚಿತ್ರಕಾರರು ಸೆರೆಹಿಡಿದಿರುವುದನ್ನು ವರದಿ ಮಾಡಲಾಗಿತ್ತು. ಪ್ರಸ್ತುತ
ಪಶ್ಚಿಮ ಬಂಗಾಳ ಹಿಂಸೆ, ಕೊಲೆ, ಎದುರಾಳಿಗಳನ್ನು ಸದೆಬಡಿಯುವುದರಲ್ಲಿ
ಬಿಹಾರಕ್ಕಿಂತ ಹಿಂದೆ ಬಿದ್ದಿಲ್ಲ ಎಂಬುದು ಸಾಬೀತಾಗಿದೆ.
ಪುರುಷೋತ್ತನ್ ದಾಸ್ ಗುಪ್ತ
ಕೋಲ್ಕತ್ತಾ
ಗೆಲುವಿನ ಸರದಾರ
'ಐಪಿಎಲ್
ಸಾದರಪಡಿಸಿದ ಕಟು ವಾಸ್ತವ: ಕ್ರಿಕೆಟ್ ಲೋಕದ ಸಾಮ್ರಾಟ ಭಾರತ' (ಅರಿಂದಮ್
ಚೌಧುರಿ) ಸಂಪಾದಕೀಯ ಅದ್ಭುತವಾಗಿತ್ತು. ಹೌದು! ಐಪಿಎಲ್ ಟೂರ್ನಿ
ಮುಕ್ತಾಯದೊಂದಿಗೆ ಭಾರತ ಕ್ರಿಕಟ್ ಲೋಕದ ಸಾಮ್ರಾಟ ಎಂಬುದು ದೃಢವಾಗಿದೆ. ಈ
ಮೂಲಕ ಪಠಾಣ್, ಅಸ್ನೋಡ್ಕರ್‌ರಂತಹ ಹೊಸ ಪ್ರತಿಭೆಗಳು ಕ್ರಿಕೆಟ್ ಲೋಕಕ್ಕೆ
ಪರಿಚಯವಾಗಿದ್ದಾರೆ. ತಡೆರಹಿತ ಕ್ರಿಕೆಟ್ ಚಟುವಟಿಕೆಗಳು ಅಭಿಮಾನಿಗಳ
ಕ್ರೀಡಾಸಕ್ತಿಯನ್ನು ಕುಗ್ಗಿಸುತ್ತದೆ ಎಂಬ ಮಾತು ಇದೀಗ ಸುಳ್ಳಾಯಿತು. ಐಪಿಎಲ್
ಪ್ರಸಾರವಾಗುತ್ತಿದ್ದ ಸಮಯದಲ್ಲಿ ಟಿ.ವಿ. ಜಾಹೀರಾತುಗಳಲ್ಲಿ ಮತ್ತು ಇತರ ಎಲ್ಲಾ
ಧಾರಾವಾಹಿಗಳ ಟಿಆರ್‌ಪಿಯನ್ನು ಕಸಿದುಕೊಂಡಿತ್ತು. ಭಾರತೀಯ ಅಭಿಮಾನಿಗಳು ತಮ್ಮ
ಮೆಚ್ಚಿನ ಆಟಗಾರನ ಆಟವನ್ನು ವೀಕ್ಷಿಸಲು ಗುಂಪಾಗಿ ಆಗಮಿಸುತ್ತಿದ್ದಾರೆ.
ಇನ್ನೊಂದು ಪ್ರಮುಖ ವಿಚಾರವೆಂದರೆ ಕ್ರೀಡಾ ಉದ್ಯಮ ಐಪಿಎಲ್‌ನ ಯಶಸ್ಸಿನಲ್ಲಿ
ಪ್ರಮುಖ ಭಾಗವಾಗಿತ್ತು. ವರದಿಗಳ ಪ್ರಕಾರ ಕೆಲ ತಂಡಗಳ ಮಾಲೀಕರು ಮೊದಲ
ವರ್ಷದಲ್ಲೇ ಭಾರೀ ಲಾಭ ಪಡೆದುಕೊಂಡಿದ್ದಾರೆ. ಖಂಡಿತವಾಗಿಯೂ ಐಪಿಎಲ್ ಕ್ರಿಕೆಟ್‌ನ
ಸಾಮರ್ಥ್ಯವನ್ನು ಮನದಟ್ಟು ಮಾಡಿದೆ. ಕ್ರಿಕೆಟ್ ಖಂಡಿತವಾಗಿಯೂ ಗೆಲುವಿನ ಸರದಾರ!
ಪಂಕಜ್ ಸಚ್‌ದೇವ್
(ಇ-ಮೇಲ್ ಮೂಲಕ) |
ಪಕ್ಷ ಒಗ್ಗೂಡಿಸಿ
'ಕಾಂಗ್ರೆಸ್‌ಗೆ ತುರ್ತಾಗಿ
ಬೇಕಿದೆ ನೆರವಿನ ಹಸ್ತ'
ಲೇಖನ ಅರ್ಥಪೂರ್ಣವಾಗಿತ್ತು.
ಹೌದು!
ರಾಷ್ಟ್ರೀಯ ಮತ್ತು ಹಿರಿಯ ಪಕ್ಷವಾಗಿರುವ ಕಾಂಗ್ರೆಸ್
ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಸನ್ನಿಹಿತವಾಗಿದೆ.
ಹಣದುಬ್ಬರ,
ಬೆಲೆಯೇರಿಕೆ ಎಲ್ಲವೂ ಯುಪಿಎ ಪಾಲಿಗೆ ದುಸ್ವಪ್ನಗಳು.
ಹಣದುಬ್ಬರ ಎದುರಾಗಿ ಜನಸಾಮಾನ್ಯ ಪರದಾಡುವಾಗ ನಾನಾ
ಕಾರಣಗಳನ್ನು ನೀಡುವ ಯುಪಿಎ ಸರ್ಕಾರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ
ವಿಫಲವಾಗಿದೆ ಎನ್ನುವುದು ಜನರಿಗೂ ಅರ್ಥವಾಗಿದೆ.
ಕಾಂಗ್ರೆಸ್‌ನಂಥ ಹಿರಿಯ ಪಕ್ಷಕ್ಕೆ ಬೇಕಾಗಿರುವುದು
ಸ್ಥಳೀಯ ಮಟ್ಟದಲ್ಲಿ ಸಮರ್ಥ ನಾಯಕ.
ಕಾಂಗ್ರೆಸ್‌ನಲ್ಲಿ ವೈಯಕ್ತಿಕವಾಗಿ ಅಸಮಾಧಾನದ
ಹೊಗೆಯೇಳುತ್ತಲೇ ಇದೆ.
ಅದನ್ನು ಬೀದಿಗೆ ತರುವಲ್ಲಿಯೂ ನಾಯಕರು ತಾಮುಂದೆ-ನಾಮುಂದೆ
ಎನ್ನುತ್ತಿದ್ದಾರೆ.
ಇದೆಲ್ಲಾ ಗೊತ್ತಿದ್ದರೂ,
ಕಾಂಗ್ರೆಸ್ ಸ್ಪಷ್ಟ ನಿರ್ಧಾರಕ್ಕೆ ಬರುವಲ್ಲಿ ಎಡವಿದೆ.
ಪಕ್ಷವನ್ನು ಒಗ್ಗೂಡಿಸಿ,
ಬಲಪಡಿಸುವುದು ಅಧಃಪತನದತ್ತ ಸಾಗುತ್ತಿರುವ ಕಾಂಗ್ರೆಸ್‌ನ
ತುರ್ತು ಅಗತ್ಯ.
ಬಿ. ಸುರೇಶ್ ಕುಮಾರ್
ಮಡಿಕೇರಿ
ಕಾಲವೇ ಉತ್ತರಿಸಬೇಕು
ಪ್ರಾಮಾಣಿಕ ಮತ್ತು ಸಜ್ಜನ ಜನಪ್ರತಿನಿಧಿಗಳನ್ನು
ಆರಿಸಿ ಕಳಿಸುವ ಮಹತ್ವದ ಜವಾಬ್ದಾರಿ ಮತದಾರನ ಮೇಲಿದೆ.
ಆದರೆ ಈ ಬಾರಿ ಆರೋಪಿಗಳೇ ಭರ್ಜರಿ ಜಯಭೇರಿ ಬಾರಿಸಿದ್ದು
ಮಾತ್ರ ಅಚ್ಚರಿಯ ಸಂಗತಿ.
ಈಗ 39
ಮಂದಿ ಅಪರಾಧ ಹಿನ್ನೆಲೆಯುಳ್ಳ ಜನಪ್ರತಿನಿಧಿಗಳು ವಿಧಾನಸೌಧದ ವಾರಸುದಾರರು!
ಇದಕ್ಕೆ ಕಾರಣ ಮತದಾರನೇ ಬಿಡಿ.
ಮುಂದಿನ ದಿನಗಳಲ್ಲಿ ಅಪರಾಧಿಗಳು ಜನರ ಬದುಕಿಗೆ
ಸ್ಪಂದಿಸುತ್ತಾರೋ ಕಾಲವೇ ಉತ್ತರ ನೀಡಬೇಕು.
'ವಿಧಾನಸೌಧಕ್ಕೆ
ಆರೋಪಿಗಳ ಲಗ್ಗೆ'
(ಕೆ.
ದಿವ್ಯದರ್ಶಿನಿ ಮತ್ತು ಚಿತ್ರಾ ಕರ್ಕೇರಾ)
ಲೇಖನ ಸಕಾಲಿಕವಾಗಿದೆ.
ಬಸಪ್ಪ ನಾಡೇಗೌಡ
ತುಮಕೂರು
ಸಂಸ್ಕೃತಿ ಮಣ್ಣಾಗಿಲ್ಲ!

'ನಾದ ಕಾಶಿಯೊಳಗೊಂದು
ಸುತ್ತು'
(ಡಿ.ಎಸ್.
ಶ್ರೀಕಲಾ)
ಲೇಖನ ಮನಸೂರೆಗೊಂಡಿತ್ತು.
ಸಂಗೀತಗ್ರಾಮ ರುದ್ರಪಟ್ಟಣದ ಬಗ್ಗೆ ಕೇಳಿದಾಗ ನಿಜಕ್ಕೂ
ಹೆಮ್ಮೆ ಎನಿಸುತ್ತದೆ.
ಕರ್ನಾಟಕದ ಪುಟ್ಟ ಜಿಲ್ಲೆ ಹಾಸನದಲ್ಲಿ ಇಂಥ ಸಂಗೀತ ಗ್ರಾಮವಿದೆ
ಎಂದಾಗ ನನ್ನ ಮನಸ್ಸು ಅರಳಿತು.
ಪ್ರಸ್ತುತ ಸಂಗೀತ ಆಲಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ.
ಆದರೆ ಸಂಗೀತ ಆಸ್ವಾದಿಸುವ ಜನರ ಪಂಗಡವೊಂದು ಇದ್ದೇ
ಇರುತ್ತದೆ.
ಕಲೆ,
ಸಂಸ್ಕೃತಿಗಳು ಕನ್ನಡದ ಮಣ್ಣಿನಿಂದ ಮರೆಯಾಗಿಲ್ಲ.
ಹಳ್ಳಿಯ ಮಣ್ಣಲ್ಲೂ ಸಂಗೀತದ ಸ್ಪರ್ಶವಿದೆ ಎಂಬುದಕ್ಕೆ
ರುದ್ರಪಟ್ಟಣ ಸಾಕ್ಷಿ.
ಸಂಗೀತವನ್ನೇ ವೃತ್ತಿಯಾಗಿ ಅವಲಂಬಿಸುವವರೂ ಸಾಕಷ್ಟು ಮಂದಿ
ಇದ್ದಾರೆ.
ಇಂಥ ಸಂದರ್ಭದಲ್ಲಿ ಪುಟ್ಟಹಳ್ಳಿಯಲ್ಲಿ ಪ್ರಚಾರಗಳ ಅಬ್ಬರವಿಲ್ಲದೆ ಸಂಗೀತೋತ್ಸವ
ನಡೆಯುತ್ತಿರುವುದು ಹೆಮ್ಮೆಯ ವಿಚಾರ.
ಕಾವ್ಯಶ್ರೀ ರಾವ್
ಶಿವಮೊಗ್ಗ
ಮೋದಿ ಕಣ್ತೆರೆಯಲಿ
'ಗುಜರಾತ್:
ಕರಾಳ ಅಧ್ಯಾಯ'
(ಮಯಾಂಕ್ ವ್ಯಾಸ)
ಲೇಖನ ಶಿಕ್ಷಣ ಸಂಸ್ಥೆಗಳ ಕರಾಳ ಮುಖವನ್ನು
ಅನಾವರಣಗೊಳಿಸಿದೆ.
ಸಮಗ್ರ ರಾಷ್ಟ್ರದ ಭವಿಷ್ಯ ರೂಪಿಸುತ್ತಿರುವ ಜ್ಞಾನದೇಗುಲಗಳಲ್ಲಿ
ಇಂಥ ಅನಾಚಾರ ನಡೆಯುತ್ತಿರುವುದು ಕೇವಲ ಗುಜರಾತ್ ಅಲ್ಲ,
ಇಡೀ ದೇಶವೇ ತಲೆತಗ್ಗಿಸುವ ವಿಚಾರ.
ಶಿಕ್ಷಣ ಕ್ಷೇತ್ರದಲ್ಲಿ ಇಂಥ ಕುಕೃತ್ಯಗಳು ನಡೆದರೆ,
ರಾಷ್ಟ್ರ ನಿಶ್ಚಿತವಾಗಿ ಪ್ರಪಾತಕ್ಕೆ ಬೀಳುವುದರಲ್ಲಿ
ಸಂದೇಹವಿಲ್ಲ.
ಇನ್ನೊಂದು ವಿಚಾರವೆಂದರೆ,
ಅಧ್ಯಾಪಕರೇ ಆಂತರಿಕ ಅಂಕಗಳನ್ನು ನೀಡುವ ವ್ಯವಸ್ಥೆಯನ್ನು
ರದ್ದುಗೊಳಿಸಬೇಕು.
ಗುಜರಾತ್‌ನ ಸಮಗ್ರ ಅಭಿವೃದ್ಧಿ ಹರಿಕಾರನೆಂದು ಬೀಗುತ್ತಿರುವ
ಮುಖ್ಯಮಂತ್ರಿ ನರೇಂದ್ರ ಮೋದಿ ಇಂಥ ಅನಾಚಾರಗಳು ರಾಜ್ಯದಲ್ಲಿ ನಡೆಯುತ್ತಿರುವಾಗ ಮೌನ
ತಾಳಿರುವುದೇಕೆ?
ರೇ.ಚ. ರೇವಡಿಗಾರ
ಸಿಂಧಗಿ
ಸೂಕ್ತ ಕ್ರಮ ಅಗತ್ಯ
'ಗುಜರಾತ್:
ಕರಾಳ ಅಧ್ಯಾಯ'
ಲೇಖನ ಓದಿದೆ.
ದೇಶದಲ್ಲಿ ಮಹಿಳಾ ದೌರ್ಜನ್ಯ ಅವ್ಯಾಹತವಾಗಿ ನಡೆಯುತ್ತಿದೆ.
ಈ ನಡುವೆ ಇದೀಗ ಗುರುವಿನಿಂದಲೇ ಲೈಂಗಿಕ ದೌರ್ಜನ್ಯ
ಆರಂಭವಾದರೆ,
ಇದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ.
ಗುಜರಾತ್ ರಾಜ್ಯದಲ್ಲಿ ಲೈಂಗಿಕ ಶೋಷಣೆ ಕುರಿತು ಬಂದ
ಸುಮಾರು ಶೇ.
೬೫ ದೂರುಗಳಲ್ಲಿ ಶೇ.
33ರಷ್ಟು ಶಿಕ್ಷಣ
ಸಂಸ್ಥೆಗಳಿಗೇ ಸಂಬಂಧಪಟ್ಟಿದ್ದು.
ಸಮಾಜದಲ್ಲಿ ಉಚ್ಚ ಸ್ಥಾನಗಳನ್ನು ಪಡೆದ ಗುರುಗಳೇ ಇಂಥ
ಹೇಯ, ಅಮಾನುಷ
ಕೃತ್ಯವೆಸಗಿದರೆ?
ಆಂತರಿಕ ಅಂಕಗಳನ್ನು ಬಂಡವಾಳವಾಗಿಸಿಕೊಂಡ ಆ ಶಿಕ್ಷಕರು
ವಿದ್ಯಾರ್ಥಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವುದು ಎಷ್ಟು ಸಮರ್ಥನೀಯ?
ಗುಜರಾತ್ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿ.
ದೀಪಾ ಹಿರೇಮಠ
ಗೋಕಾಕ
ಹಾಲಾಹಲ
'ರಾಜಧಾನಿ ಮಗ್ಗುಲಲ್ಲೇ
ಮಾರಕ ಸರೋವರ'
(ರಾಜನ್ ಪ್ರಕಾಶ್)
ಲೇಖನ ಲಟ್‌ಫುಲ್ಲಾಪುರ್ ಗ್ರಾಮದ ಜನರ ಬವಣೆಯನ್ನು
ತೆರೆದಿಟ್ಟಿತು.
ಅಧಿಕಾರಿಗಳ ಹಾಗೂ ರಾಜಕಾರಣಿಗಳ ಮಧ್ಯೆ ನೂರಾರು ಜನರ ಜೀವನ
ವಿಷಮಯವಾಗಿರುವುದು ನಿಜಕ್ಕೂ ದಾರುಣ.
ಮೂಲ ಸೌಕರ್ಯಕ್ಕೇ ಆದ್ಯತೆ ಎಂದು ಆಶ್ವಾಸನೆ ನೀಡುವ
ಪುಢಾರಿಗಳು ನಂತರ ಜನರ ಪಾಲಿಗೆ ಉಳಿಸುವುದು ಹಾಲಾಹಲವನ್ನು ಮಾತ್ರ.
ಕಾರ್ಖಾನೆ ಮಾಲೀಕರ ಲಾಬಿಗೆ ಮಣಿದು ಜನರನ್ನು ಸಾವಿನ
ದವಡೆಗೆ ನೂಕಿರುವ ನಮ್ಮ ಆಡಳಿತ ವ್ಯವಸ್ಥೆಗೆ ಜೈ ಎನ್ನೋಣವೇ?
ಮಧುಸೂದನ್
ಶಿವಮೊಗ್ಗ
ಅಬಕಾರಿ ಇಲಾಖೆಯೇ ಹೊಣೆ
'ಕಳ್ಳಭಟ್ದುರಂತ:
ಕೊಲೆಗಾರರು ಯಾರು'
(ಸತೀಶ್ ಚಪ್ಪರಿಕೆ)
ಲೇಖನ ಸಕಾಲಿಕ.
ಯಾರೋ ಮಾಡಿದ ತಪ್ಪಿಗೆ ಬಡಜೀವಗಳು ಜೀವ ತೆರಬೇಕಾಯಿತು.
ವಿಧಾನಸೌಧದಿಂದ ಕೇವಲ ಎರಡೂವರೆ ಕಿ.ಮೀ.
ದೂರವಿರುವ ದೇವರಜೀವನಹಳ್ಳಿಯಲ್ಲಿ ಕಳ್ಳಭಟ್ದುರಂತದಲ್ಲಿ
ಮಡಿದವರನ್ನು ಮಾಧ್ಯಮಗಳು ನೂರಕ್ಕೇರಿತು,
ನೂರೈವತ್ತಕ್ಕೇರಿತು ಎಂದು ಲೆಕ್ಕಹಾಕುತ್ತಿದ್ದುದು
ಹೇಸಿಗೆಯ ವಿಚಾರ.
ದುರ್ಘಟನೆಯ ಬಗ್ಗೆ ಗಮನಹರಿಸುವುದನ್ನು ಬಿಟ್ಟು ನಮ್ಮ
'ಜನಸೇವಕರು'
ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದರು.
ಏಕೆಂದರೆ ಮಡಿದವರಾರು ಅವರ ಕುಟುಂಬದವರಲ್ಲ!
ನಿರ್ಗತಿಕರು.
ಈ ದುರಂತಕ್ಕೆ ಅಬಕಾರಿ ಇಲಾಖೆಯನ್ನು ಹೊಣೆ ಮಾಡಿದರೆ
ತಪ್ಪಾಗಲಾರದು.
ರಾಜಾರೋಷವಾಗಿ ಅಲ್ಲಲ್ಲಿ ಅಡ್ಡೆಗಳಲ್ಲಿ
ಕಳ್ಳಭಟ್ತಯಾರಿಸುತ್ತಿರುವುದು ಗೊತ್ತಿದ್ದರೂ,
ಬರುವ 'ಗಂಟು'
ಪಡೆದು ಸುಮ್ಮನಿರುವ ಜಾಯಾಮಾನ ಅವರದು.
ಕರ್ನಾಟಕದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
ಪ್ರಣಾಳಿಕೆಯಲ್ಲಿ ಸಂಪೂರ್ಣ ಪಾನ ನಿಷೇಧ ಮಾಡುವುದಾಗಿ
ಹೇಳಿರುವುದರಿಂದ ಇನ್ನಾದರೂ ಇಂಥ ದುರ್ಘಟನೆಗಳು ನಡೆಯದಂತೆ ಅಬಕಾರಿ ಇಲಾಖೆ ಎಚ್ಚರ
ವಹಿಸಲಿ.
ಎಂ. ಇರ್ಷಾದ್ ವೇಣೂರು
(ಇ-ಮೇಲ್ ಮೂಲಕ)
| ಸುಶಿಕ್ಷಿತ ಸ್ತ್ರೀಗೆ ರಕ್ಷಣೆಯೆಲ್ಲಿ?
|

'ಗುಜರಾತ್: ಕರಾಳ ಅಧ್ಯಾಯ' (ಮಾಯಾಂಕ್ ವ್ಯಾಸ) ಲೇಖನ ಗುಜರಾತ್ ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸ್ಪಷ್ಟವಾಗಿ ನಿರೂಪಿಸಿದೆ. ಗುಜರಾತ್‌ನ್ನು ಮಾದರಿ ರಾಜ್ಯವನ್ನಾಗಿ ಬಿಂಬಿಸಿದ ಚುನಾವಣಾ ತಂತ್ರ ಮತ್ತು ಫಲಿತಗಳು ನಮ್ಮೆದುರಿವೆ. ಅಭಿವೃದ್ಧಿ ಹೆಸರಿನಲ್ಲಿ ವರ್ಗ, ವರ್ಣ, ಲಿಂಗ ತಾರತಮ್ಯಗಳು ಹೆಚ್ಚೆಚ್ಚು ಹರಿತವಾಗುತ್ತವೆ. ಮಹಿಳೆಯರ ಸ್ವರ್ಗ ಎಂಬ ಭ್ರಮೆ ಹುಟ್ಟಿಸುವ ಗುಜರಾತ್‌ನಲ್ಲಿ ಕೋಮು ದಳ್ಳುರಿಗೆ ಬಲಿಯಾದವರೂ ಸ್ತ್ರೀಯರೇ! ಅಲ್ಲಿ ಸ್ತ್ರೀಗೆ ಸಿಕ್ಕಿದ ಸ್ವಾತಂತ್ರ್ಯ ನಿಜವಾಗಿಯೂ ಸ್ತ್ರೀ ಆಯ್ಕೆಯೇ? ಅಥವಾ ಮೂಲಭೂತವಾದಿ ವ್ಯವಸ್ಥೆ ರೂಪಿಸಿದ್ದೇ? ಏಕೆಂದರೆ ಮಹಿಳಾವಾದಿ ಮುಖವಾಡದ ಹಲವು ಮಾದರಿಗಳು ವ್ಯವಸ್ಥೆಯ ಹಿತಕಾರಿಯೇ ವಿನಃ ಮಹಿಳೆಗಲ್ಲ!
ಮಾರಾಟ ಸಂಸ್ಕೃತಿಯ ಆರ್ಥಿಕ ಅಭಿವೃದ್ಧಿ ಸಹನಶೀಲತೆ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಶಿಕ್ಷಣ ಮತ್ತು ಉದ್ಯೋಗ ಮಹಿಳೆಗೆ ಸುರಕ್ಷೆ ನೀಡುತ್ತದೆ ಎಂಬುದನ್ನು ಗುಜರಾತ್‌ನ ಅಂಕಿ-ಅಂಶಗಳು ಅಲ್ಲಾಡಿಸುತ್ತವೆ. ಹಾಗೆಯೇ ಕೇರಳವನ್ನು ಗಮನಸಿದರೆ, ಅಲ್ಲಿ ವರದಕ್ಷಿಣೆ ಸಾವು, ಭ್ರೂಣ ಹತ್ಯೆ, ಅತ್ಯಾಚಾರ ಪ್ರಕರಣಗಳು ಕಡಿಮೆ. ಅದಕ್ಕೆ ಕಾರಣ ಅಲ್ಲಿನ ಸಾಕ್ಷರತಾ ಪ್ರಮಾಣ. ಆದರೆ ಮಹಿಳಾ ಶಿಕ್ಷಣದಲ್ಲಿ ಉಳಿದ ರಾಜ್ಯಗಳಿಗಿಂತ ಪ್ರಗತಿಯಲ್ಲಿರುವ ಗುಜರಾತ್‌ನಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿರಲು ಮುಖ್ಯ ಕಾರಣ ಅಲ್ಲಿ ವ್ಯಾಪಿಸಿಕೊಂಡಿರುವ ಬಲಪಂಥೀಯ ಚಿಂತನೆಗಳು. ಮಹಿಳಾ ದೌರ್ಜನ್ಯಗಳ ಬಗ್ಗೆ ಗುಜರಾತ್ ಸರ್ಕಾರ ತೋರುವ ಮೌನವೂ ಇದನ್ನೇ ಸೂಚಿಸುತ್ತದೆ. ಡಾ. ವಿನಯಾ
ಧಾರವಾಡ |
|