ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಪ್ರಸ್ತುತ
ದೇಶದಲ್ಲಿ ಅಲ್-ಖೈದಾ ಜಾಲ?
 

ಅಸ್ಸಾಂನ ಉಲ್ಫಾ ಉಗ್ರರಿಗೆ ಅಫ್ಘನಿ ತರಬೇತಿ!

ಐಎಸ್‌ಐನ ಅಫ್ಘನ್ ಕಾರ್ಯಕರ್ತ ಯಾರು? ನಮ್ಮ ದೇಶದಲ್ಲಿ ಅಲ್-ಖೈದಾ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಗುಪ್ತಚರ ಸಂಸ್ಥೆಗಳು ನಿಶ್ಚಿತಾಭಿಪ್ರಾಯಗಳನ್ನು ಪ್ರಕಟಿಸಿಲ್ಲ. ಆದರೆ ಇತ್ತೀಚೆಗಿನ ಬೆಳವಣಿಗೆಗಳು ಈ ಅಂತರ್ ರಾಷ್ಟ್ರೀಯ ಭಯೋತ್ಪಾದನಾ ಸಂಘಟನೆ ಭಾರತದ ಪ್ರಕ್ಷುಬ್ಧ ರಾಜ್ಯ ಅಸ್ಸಾಂನಲ್ಲಿ ಬೇರು ಬಿಡುವ ಎಲ್ಲಾ ಯೋಜನೆಗಳನ್ನೂ ಹಾಕಿಕೊಂಡಿದೆ ಎನ್ನುವುದನ್ನು ಸ್ಪಷ್ಟಪಡಿಸಿವೆ.

ಒಬ್ಬ ಅಫ್ಘನ್ ತರಬೇತುದಾರ ಭಾರತದ ಒಳಗೆ ನುಸುಳಿದ್ದಾನೆ ಎಂದು ಇತ್ತೀಚೆಗೆ ಕೇಂದ್ರ ಗೃಹ ಸಚಿವಾಲಯದ ಗುಪ್ತಚರ ಶಾಖೆಯೊಂದು ತನ್ನ ವರದಿಯಲ್ಲಿ ಬಹಿರಂಗಪಡಿಸಿತ್ತು. ಈ ಅಫ್ಘನ್ ಉಗ್ರಗಾಮಿ ಅಸ್ಸಾಂನ ಯುನೈಟೆಡ್ ಲಿಬರೇಷನ್ ಫ್ರಂಟ್ (ಉಲ್ಫಾ) ಉಗ್ರಗಾಮಿಗಳಿಗೆ ತರಬೇತಿ ನೀಡುತ್ತಿದ್ದಾನೆ ಎನ್ನಲಾಗಿದೆ. ಗುಪ್ತಚರ ವರದಿಯಲ್ಲಿ ಉಲ್ಫಾ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ನಡುವೆ ಸಂಪರ್ಕವಿರುವ ಬಗ್ಗೆಯೂ ಸಂಶಯ ವ್ಯಕ್ತಪಡಿಸಿದೆ. ಇವೆರಡೂ ಜೊತೆಯಾಗಿ ಗುವಾಹತಿ ವಿಮಾನ ನಿಲ್ದಾಣದಿಂದ ಡೆಕ್ಕನ್ ಏರ್‌ವೇಸ್ ಸಂಸ್ಥೆಯ ನಾಗರಿಕ ವಿಮಾನವೊಂದನ್ನು ಅಪಹರಿಸುವ ಪಿತೂರಿ ನಡೆಸಿವೆ ಎನ್ನಲಾಗಿದೆ. ಈ ಉದ್ದೇಶದಿಂದಲೇ ಅಫ್ಘನ್ ಉಗ್ರ ಉಲ್ಫಾ ಸದಸ್ಯರಿಗೆ ತರಬೇತಿ ನೀಡಲು ಭಾರತಕ್ಕೆ ಆಗಮಿಸಿದ್ದ. ಈ ಗುಪ್ತಚರ ವರದಿಯ ವಿಶ್ಲೇಷಣೆ ಮತ್ತು ಅಫ್ಘನ್ ಉಗ್ರನ ಕಾರ್ಯ ಚಟುವಟಿಕೆ ಗಮನಿಸಿದಲ್ಲಿ ಅಲ್-ಖೈದಾ ಜೊತೆಗಿನ ನಂಟು ಖಚಿತವಾಗುತ್ತದೆ.

ಈ ವರದಿ ಅಫ್ಘನ್ ಉಗ್ರಗಾಮಿ ಭಾರತಕ್ಕೆ ನುಸುಳಿರುವುದನ್ನು ಖಚಿತ ಪಡಿಸಿದೆ. ಫೆಬ್ರುವರಿ 2007ರಲ್ಲೇ ಉಲ್ಫಾ ಜೊತೆಗೆ ಆತ ಸಂಪರ್ಕ ಸಾಧಿಸಿದ್ದ. ಪೊಲೀಸರು ವಿಮಾನ ಅಪಹರಣ ಸಂಚಿನ ಪ್ರಮುಖ ವ್ಯಕ್ತಿ ಮನೋಜ್ ಟಮುಲೈ ಅಲಿಯಾಸ್ ರಣ್‌ದೀಪ್ ಬರುವಾನನ್ನು ಬಂಧಿಸುವಲ್ಲಿ ಸಫಲವಾದಾಗ ಈ ಪಿತೂರಿ ಬಯಲಾಗಿತ್ತು. ನಿರಂತರ ವಿಚಾರಣೆ ನಂತರ ಟಮುಲೈ ಈ ಸಂಚಿನ ಹಿಂದೆ ಐಎಸ್‌ಐ ಕೈವಾಡವಿರುವುದನ್ನು ಬಹಿರಂಗ ಪಡಿಸಿದ್ದಾನೆ. ಈ ಅಪಹರಣ ಕೃತ್ಯಕ್ಕಾಗಿ 1೬ ಸದಸ್ಯರ ಉಲ್ಫಾ ತಂಡವೊಂದನ್ನು ರಚಿಸಲಾಗಿದೆ ಮತ್ತು ಇವರಿಗೆ ತರಬೇತಿ ನೀಡಲು ಡಿಸೆಂಬರ್ 2007ರಲ್ಲಿ ಒಬ್ಬ ಅಫ್ಘನ್ ತರಬೇತುದಾರನನ್ನು ವಿಶೇಷವಾಗಿ ಕರೆಸಲಾಗಿದೆ ಎಂದು ಟಮುಲೈ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾನೆ.

ಭೂತಾನ್ ಗಡಿಯಂಚಿನ ಬಾಕ್ಸಾ ಜಿಲ್ಲೆಯಲ್ಲಿರುವ ಉಲ್ಫಾದ ತರಬೇತಿ ಶಿಬಿರದಲ್ಲಿ ಇವರಿಗೆ ತರಬೇತಿ ನೀಡಲಾಗಿತ್ತು. ಆದರೆ ಅಫ್ಘನ್ ಉಗ್ರಗಾಮಿಯ ಅಡಗುತಾಣ ಮತ್ತು ಈ ಮಾಹಿತಿಯ ವಿಶ್ವಾಸಾರ್ಹತೆ ಬಗ್ಗೆ ಮಾತ್ರ ವರದಿಯಲ್ಲಿ ಯಾವುದೇ ಖಚಿತ ಸಾಕ್ಷ್ಯಾಧಾರಗಳಿಲ್ಲ. 'ಅಫ್ಘನ್ ಉಗ್ರಗಾಮಿ ತರಬೇತಿ ಶಿಬಿರ ಪ್ರವೇಶಿಸಲು ಹೇಗೆ ಸಾಧ್ಯವಾಯಿತು?' ಎನ್ನುವ ಒಂದು ನಿರ್ಣಾಯಕ ಪ್ರಶ್ನೆಗೆ ಉತ್ತರಿಸುವುದರಲ್ಲೂ ಈ ವರದಿ ವಿಫಲವಾಗಿದೆ.

ಗುಪ್ತಚರ ಸಂಘಟನೆಗಳು ಅಫ್ಘನ್ ಉಗ್ರನಿಗೆ ಅಲ್-ಖೈದಾ ಜೊತೆ ಸಂಬಂಧವಿರುವುದಾಗಿ ಹೇಳಿದ್ದಾರೆ. ಹೆಸರು ಹೇಳಲಿಚ್ಛಿಸದ ಗುಪ್ತಚರ ಸಂಸ್ಥೆಯ ಅಧಿಕಾರಿಯೊಬ್ಬರು ಅಫ್ಘನ್ ಉಗ್ರನ ಅಲ್-ಖೈದಾ ಕೊಂಡಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಪಹರಣದ ಬಗ್ಗೆ ಹೇಳಬೇಕೆಂದರೆ ಇತರ ಉಗ್ರಗಾಮಿ ಸಂಘಟನೆಗಳಿಗೆ ಹೋಲಿಸಿದರೆ ಅಲ್-ಖೈದಾ ಬಲಿಷ್ಠ ವೃತ್ತಿಪರ ಸಂಘಟನೆ. ಹೀಗಾಗಿ ಒಬ್ಬ ಅಫ್ಘನ್ ಉಗ್ರ ಭಾರತಕ್ಕೆ ನುಸುಳಿ ಉಲ್ಫಾ ಉಗ್ರರಿಗೆ ತರಬೇತಿ ನೀಡುತ್ತಿದ್ದಾನೆ ಎಂದರೆ ಈ ಪಿತೂರಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅಲ್-ಖೈದಾ ಕೊಂಡಿ ಇದೆ ಎಂದೇ ಅರ್ಥ. ಅಫ್ಘಾನಿಸ್ತಾನದಲ್ಲಿ ಅಲ್-ಖೈದಾ ಕಾರ್ಯಸ್ಥಾನವಿದೆ ಎನ್ನುವುದನ್ನು ನಾವು ಮರೆಯುವುಂತಿಲ್ಲ ಎನ್ನುತ್ತಾರೆ ಗುಪ್ತಚರ ಅಧಿಕಾರಿ. ಆದರೆ ಈ ಘಟನೆಗೆ ಮುನ್ನ ಭಾರತೀಯ ಗುಪ್ತಚರ ಸಂಸ್ಥೆಗಳು ದೇಶದಲ್ಲಿ ಅಲ್-ಖೈದಾ ಕಾರ್ಯಚಟುವಟಿಕೆಗಳು ಇಲ್ಲವೇ ಇಲ್ಲ ಎಂದು ವಾದಿಸುತ್ತಿದ್ದವು. ಅಲ್-ಖೈದಾ ಮೂಲ ತಂಡದ 15 ಪ್ರಮುಖ ಸದಸ್ಯರಾರೂ ಭಾರತೀಯ ಭಯೋತ್ಪಾದನಾ ಸಂಘಟನೆಗಳ ಜೊತೆ ಸಂಬಂಧ ಸೇರಿಲ್ಲ ಎಂದು ಗುಪ್ತಚರ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಈ ಮೂಲ ತಂಡದ ಸದಸ್ಯರು ಇತರ ದೇಶಗಳಲ್ಲಿ ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿದ್ದಾರೆ. ಆದರೆ ಭಾರತದಲ್ಲಿ ಯಾವುದೇ ಉಗ್ರಗಾಮಿ ಚಟುವಟಿಕೆಗಳನ್ನು ನಡೆಸುವ ಕೆಲಸವನ್ನು ಅಲ್-ಖೈದಾ ಪ್ರಮುಖರಿಗೆ ವಹಿಸಲಾಗಿಲ್ಲ. ಹಾಗೆಯೇ ಅಬು ಇಬ್ರಾಹಿಂ ಆಸಿಂ ಎಂದು ಗುರುತಿಸಿಕೊಂಡ ಭಯೋತ್ಪಾದಕ ವಿಡಿಯೋ ಒಂದರಲ್ಲಿ ಬಹಿರಂಗವಾಗಿ ತಾನು 'ಅಲ್-ಖೈದಾ ಫಿಲ್ ಹಿಂದಿ' ಸಂಘಟನೆಗೆ ಸೇರಿದ ವ್ಯಕ್ತಿ ಎಂದು ಹೇಳಿಕೊಂಡಿದ್ದ. ಆದರೆ ಭಾರತೀಯ ಗುಪ್ತಚರ ಸಂಘಟನೆಗಳು 'ಅಲ್-ಖೈದಾ ಫಿಲ್ ಹಿಂದಿ' ಎಂಬ ಅಲ್-ಖೈದಾದ ಭಾರತೀಯ ಶಾಖೆ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವ ಮಾಹಿತಿಯ ವಿಶ್ವಾಸಾರ್ಹತೆ ಬಗ್ಗೆ ಸಂಶಯ ವ್ಯಕ್ತಪಡಿಸಿವೆ.

ಅಲ್-ಖೈದಾ ಆತ್ಮಾಹುತಿ ದಳವೊಂದು ಚೆನ್ನೈ ವಿಮಾನ ನಿಲ್ದಾಣವನ್ನು ಉಡಾಯಿಸುವ ಪಿತೂರಿ ನಡೆಸಿದೆ ಎಂದು ಕಳೆದ ವರ್ಷ ಅಮೆರಿಕ ಗುಪ್ತಚರ ಸಂಘಟನೆ ಎಫ್‌ಬಿಐ ಭಾರತಕ್ಕೆ ಎಚ್ಚರಿಕೆ ನೀಡಿತ್ತು. ದಕ್ಷಿಣ ಭಾರತದಲ್ಲಿ ಪ್ರತ್ಯೇಕ ಗುಂಪೊಂದು ನಾಗರಿಕ ವಿಮಾನವೊಂದನ್ನು ಅಪಹರಿಸುವ ಯೋಜನೆ ನಡೆಸುತ್ತಿದೆ ಎಂದೂ ಎಫ್‌ಬಿಐ ಭಾರತಕ್ಕೆ ಎಚ್ಚರಿಕೆಯ ಸಂದೇಶ ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ಕೇರಳ ಮತ್ತು ತಮಿಳುನಾಡು ವಿಮಾನ ನಿಲ್ದಾಣಗಳ ಪಹರೆಯನ್ನು ಬಿಗಿಗೊಳಿಸಲಾಗಿತ್ತು. ಅಮೆರಿಕ ಗುಪ್ತಚರ ಸಂಘಟನೆಗಳ ಪ್ರಕಾರ ಭಾರತದಲ್ಲಿ ಅನೇಕ ಉಗ್ರಗಾಮಿ ಸಂಘಟನೆಗಳು ಕಾರ್ಯನಿರತವಾಗಿವೆ. ಜೈಶಿ-ಇ-ಮೊಹಮ್ಮದ್, ಲಷ್ಕರ್-ಇ-ತೊಯ್ಬಾ ಮತ್ತು ಹರ್‌ಕತ್-ಉಲ್-ಜಿಹಾದ್ ಇಸ್ಲಾಮಿ ಮೊದಲಾದ ಭಾರತೀಯ ಭಯೋತ್ಪಾದನಾ ಸಂಘಟನೆಗಳಿಗೆ ಅಲ್-ಖೈದಾ ಜೊತೆ ನೇರ ಸಂಪರ್ಕವಿಲ್ಲ. ಆದರೆ ಇವುಗಳ ಪಾಕಿಸ್ತಾನಿ ಶಾಖೆಗಳು ಅಲ್-ಖೈದಾ ಜೊತೆ ಸಂಪರ್ಕದಲ್ಲಿವೆ.

ಆದರೆ ಇಷ್ಟೆಲ್ಲಾ ಸಾಕ್ಷ್ಯಗಳನ್ನು ಕೈಲಿರಿಸಿಕೊಂಡರೂ ಭಾರತೀಯ ಗುಪ್ತಚರ ಸಂಘಟನೆಗಳು ಮಾತ್ರ ದೇಶಕ್ಕೆ ಅಲ್-ಖೈದಾದಿಂದ ಯಾವುದೇ ಅಪಾಯವಿಲ್ಲ ಎಂದು ನೆಮ್ಮದಿಯಿಂದಿವೆ. ಅವರ ಪ್ರಕಾರ ಅಲ್-ಖೈದಾದ ನೇರ ಶತ್ರು ಅಮೆರಿಕ ಮತ್ತು ಅದರ ಮಿತ್ರ ದೇಶಗಳು. ಈ ದೃಷ್ಟಿಕೋನವೇ ಭಾರತೀಯರನ್ನು ತಪ್ಪುದಾರಿಗೆ ಎಳೆಯುವಂತಹದ್ದು. ನಮ್ಮ ಗುಪ್ತಚರ ಸಂಘಟನೆಗಳು ಭವಿಷ್ಯದಲ್ಲಿ ಎರಗಬಹುದಾದ ಆಪತ್ತಿನ ಬಗ್ಗೆ ಎಚ್ಚೆತ್ತುಕೊಳ್ಳುವ ಕಾಲ ಬಂದಿದೆ. ಇಲ್ಲದೆ ಹೋದಲ್ಲಿ ಕಂದಹಾರ್‌ನಂತಹ ಘಟನೆ ಮರುಕಳಿಸಿದಲ್ಲಿ ಅವಿತುಕೊಳ್ಳಲು ಸ್ಥಳ ಸಿಗಲಾರದು..

 ಟಿಎಸ್‌ಐ

ಅನಿಲ್ ಪಾಂಡೆ

 
ಮುಖಪುಟ ಲೇಖನದಲ್ಲಿ ಇನ್ನೇನಿದೆ

ಅರುಣ್ ಜೇಟ್ಲಿ ಕೇಸರಿ ಪಡೆಯ ಚತುರ ಚಾಣಕ್ಯ

ವಿಧಾನಸೌಧಕ್ಕೆ 'ಆರೋಪಿ'ಗಳ ಲಗ್ಗೆ

"ಬಿಜೆಪಿ ಉತ್ತರ ಭಾರತದ ಪಕ್ಷ ಎಂಬ ಮಿಥ್ಯೆ ಈಗ ಇಲ್ಲವಾಗಿದೆ":  ಅನಂತ ಕುಮಾರ್

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .