|
| ಅರಿಂದಮ್ ಚೌಧುರಿ, |
ಪ್ರಧಾನ ಸಂಪಾದಕರು, ದ ಸಂಡೆ ಇಂಡಿಯನ್
|
ಹಲವಾರು ಕಾರಣಗಳಿಂದಾಗಿ ಚೀನಾ ಮತ್ತು ಅದರ
ನೀತಿಯನ್ನು ಜಗತ್ತು ಅನುಸರಿಸಬೇಕಾದ್ದಿಲ್ಲ;
ಆದರೆ ಚೀನಿಯರ ದೂರದೃಷ್ಟಿಗೆ ಇಡೀ ಜಗತ್ತು
ತಲೆಬಾಗಲೇಬೇಕು.
ಈ ಗೌರವಕ್ಕೆ ತಾನು ಅರ್ಹ ಎಂಬುದನ್ನು ಚೀನಾ ಹಲವಾರು
ಬಾರಿ ದೃಢಪಡಿಸಿದೆ;
ಈಗ ಮತ್ತೊಮ್ಮೆ ದೃಢಪಡಿಸಲು ಸಜ್ಜಾಗಿದೆ.
ಪ್ರಸಕ್ತ ಸನ್ನಿವೇಶವನ್ನು ಗಮನಿಸಿ,
ಕಚ್ಚಾ ತೈಲದ ಬೆಲೆ ನಮಗೆ ವಿರಮಿಸಿಕೊಳ್ಳಲೂ
ಅವಕಾಶ ಕೊಡದೆ ಏರುತ್ತಿದೆ.
ಏರುತ್ತಿರುವ ಇಂಧನ ಬೇಡಿಕೆಯಿಂದ ತನ್ನನ್ನು
ರಕ್ಷಿಸಿಕೊಳ್ಳಲು ಪ್ರತಿ ಸರ್ಕಾರ ಕೂಡಾ ಶಕ್ತಿಮೀರಿ ಯತ್ನಿಸುತ್ತಿದೆ.
ಆದರೆ ಚೀನಾ ಈ ಇಂಧನ ಸಂಕಷ್ಟವನ್ನು ಬಹುಹಿಂದೆಯೇ
ನಿರೀಕ್ಷಿಸಿ ಅದಕ್ಕೆ ತಕ್ಕಂತೆ ಯೋಜನೆ ಹಾಕಿಕೊಂಡಂತಿದೆ.
ಅದನ್ನು ಕಾರ್ಯರೂಪಗೊಳಿಸುತ್ತಿರುವ ವಿಧಾನ ಕೂಡಾ
ಉಲ್ಲೇಖಾರ್ಹ.
ತನ್ನ ನೆರೆಯ ದೇಶದ ಬಗ್ಗೆಯೂ ತಲೆಕೆಡಿಸಿಕೊಳ್ಳದ ಆ ದೇಶ
ಆಫ್ರಿಕಾದ ಬಗ್ಗೆ ಬಹಳಷ್ಟು ಉತ್ಸುಕವಾಗಿರುವುದನ್ನು ಕಳೆದ ಒಂದು ದಶಕದಿಂದ
ಜಗತ್ತು ಗಮನಿಸಿದೆ.
ಜಾಗತಿಕ ಹೂಡಿಕೆದಾರರಿಗೆ ಅಸ್ಪೃಶ್ಯವೆನಿಸಿದ
ರಾಷ್ಟ್ರಗಳಲ್ಲೆಲ್ಲಾ ಚೀನಾ ಬಿಲಿಯನ್ ಡಾಲರ್‌ಗಟ್ಟಲೆ ಹಣ ಹೂಡಿಕೆ ಮಾಡಿದೆ.
2001ರಿಂದೀಚೆಗೆ
ಆಫ್ರಿಕಾದೊಂದಿಗಿನ ಚೀನಾ ವ್ಯವಹಾರ ಶೇ.
40ರಷ್ಟು
ಪ್ರಗತಿ ಕಂಡಿದೆ.
2006ರ
ಹೊತ್ತಿಗೆ ಚೀನಾ ಮತ್ತು ಆಫ್ರಿಕದ ವ್ಯಾಪಾರ
50 ಬಿಲಿಯನ್
ಡಾಲರ್ ಅಂಕಿಯನ್ನು ಮುಟ್ಟಿದೆ.
ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ನಂತರ
ಆಫ್ರಿಕಾದ 3ನೇ
ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವೆಂದರೆ ಅದು ಚೀನಾ.
ಗಮನಾರ್ಹ ಅಂಶವೆಂದರೆ ಚೀನಾದ ಹೂಡಿಕೆ
ಇಲ್ಲದಿದ್ದರೆ ಸೂಡಾನ್‌ನಂತಹ ರಾಷ್ಟ್ರ ಮಾನವ ಸಂಕಷ್ಟ ಮತ್ತು ಆಂತರಿಕ
ಕಲಹಗಳಲ್ಲಿ ನಿರ್ನಾಮವಾಗಿಬಿಡುತ್ತಿತ್ತು.
ಇಷ್ಟೆಲ್ಲಾ ಹೂಡಿಕೆಯನ್ನು ಚೀನಾ ಏಕೆ
ಮಾಡುತ್ತಿದೆ ಗೊತ್ತೆ?
ತನ್ನ ಇಂಧನ ಅಗತ್ಯ ಪೂರೈಸಿಕೊಳ್ಳಲು!
ಇದರಲ್ಲಿ ಅಂತಹ ರಹಸ್ಯವೇನೂ ಇಲ್ಲ.
ಆಫ್ರಿಕಾದಿಂದ ಚೀನಾಕ್ಕೆ ರಫ್ತಾಗುವ
ಸರಕುಗಳನ್ನೊಮ್ಮೆ ವಿಶ್ಲೇಷಿಸಿದರೆ ಇದೆಲ್ಲಾ ಸ್ಪಷ್ಟವಾಗುತ್ತದೆ.
ಐಎಂಎಫ್ ವರದಿಯ ಅನುಸಾರ-
2006ರಲ್ಲಿ
ಆಫ್ರಿಕಾದಿಂದ ಚೀನಾಕ್ಕೆ ರಫ್ತಾದ ಸರಕುಗಳಲ್ಲಿ ಶೇ.
60ರಷ್ಟು
ತೈಲ ಮತ್ತು ಅನಿಲವೇ;
ಉಳಿದಂತೆ ಶೇ.
13ರಷ್ಟು
ಸರಕುಗಳೆಂದರೆ ಖನಿಜಗಳು ಮತ್ತು ಲೋಹಗಳು.
ಬದಲಿಗೆ ಚೀನಾದಿಂದ ಆಫ್ರಿಕಾವು ಆಮದು
ಮಾಡಿಕೊಂಡ ಸರಕುಗಳಲ್ಲಿ ಶೇ.
೭5ರಷ್ಟು
ಯಂತ್ರೋಪಕರಣ,
ವಾಹನಗಳು ಮತ್ತು ಸಿದ್ಧವಸ್ತುಗಳೇ ಇದ್ದವು.
ಪ್ರಾಯಶಃ ಈ ವರದಿಯೇ ಎಲ್ಲವನ್ನೂ ಹೇಳುತ್ತದೆ.
ಸೂಡಾನ್‌ನೊಂದಿಗೆ ಚೀನಾ ಬಾಂಧವ್ಯ
ವೃದ್ಧಿಸಿಕೊಳ್ಳಲೂ ಇದೇ ಕಾರಣ.
ಆಫ್ರಿಕಾದಲ್ಲಿ ನೈಜೀರಿಯಾದ ನಂತರ ಅತಿ ದೊಡ್ಡ
ತೈಲ ನಿಕ್ಷೇಪ ಹೊಂದಿರುವ ರಾಷ್ಟ್ರವೆಂದರೆ ಅದು ಸೂಡಾನ್.
ಆದರೆ ಈ ವ್ಯಾಪಾರ ಸಂಬಂಧದಿಂದ ಆಫ್ರಿಕಾದ
ರಾಷ್ಟ್ರಗಳಿಗೂ ಅನುಕೂಲವಾಗಿದೆ.
ಕೈಗಾರಿಕೆಗಳಿಗಾಗಿ ಹೂಡಿಕೆ ಮಾಡುವುದರ ಜೊತೆಗೆ
ಸಾಮಾಜಿಕ ಮತ್ತು ಭೌತಿಕ ಮೂಲಸೌಕರ್ಯ ಒದಗಿಸಲೂ ಚೀನಾ ಬದ್ಧವಾಗಿದೆ.
ಹೀಗಾಗಿ ಆ ರಾಷ್ಟ್ರಗಳು ರಸ್ತೆ,
ಆಸ್ಪತ್ರೆ,
ಶಾಲೆ,
ದೂರವಾಣಿ ಮುಂತಾದ ಸೌಲಭ್ಯ ಕಾಣುವಂತಾಗಿದೆ.
ಆಂತರಿಕ ಕಲಹಗಳಿಂದ ಕುಂಟುತ್ತಾ ಸಾಗುತ್ತಿರುವ
ಆಫ್ರಿಕಾ ರಾಷ್ಟ್ರಗಳ ಆರ್ಥಿಕತೆಗೆ ಚೀನಾ ವ್ಯಾಪಾರ ಸಂಬಂಧ ಒಂದು
ವರದಾನವಲ್ಲದೆ ಬೇರೇನಲ್ಲ.
ಇಷ್ಟು ಕಡಿಮೆ ಅವಧಿಯಲ್ಲಿ ಎರಡೂ ರಾಷ್ಟ್ರಗಳಿಗೆ
ಲಾಭದಾಯಕವಾದ ಅಂಶ ಮತ್ಯಾವುದೂ ಇರಲಾರದು.
ಒಂದು ದೃಷ್ಟಿಯಲ್ಲಿ ಈ ವ್ಯಾಪಾರ ಸಂಬಂಧದಿಂದ
ಆಫ್ರಿಕಾಕ್ಕೇ ಹೆಚ್ಚು ಲಾಭವಾಗಿದೆ ಎನ್ನಬಹುದು.
ಆಫ್ರಿಕಾದೊಂದಿಗೆ ಹೀಗೆ ಚೀನಾ ವ್ಯಾಪಾರ ಸಂಬಂಧ
ಬೆಳೆಸುವುದು ಎಷ್ಟು ನೈತಿಕವಾದದ್ದು ಎಂದು ಒಂದು ಕಡೆ ಇಡೀ ಜಗತ್ತೇ
ಚರ್ಚೆಯಲ್ಲಿ ಮಗ್ನವಾಗಿದೆ;
ಮತ್ತೊಂದೆಡೆ ಚೀನಾ ನಡೆದ ಹಾದಿಯಲ್ಲೇ ತಾನೂ
ನಡೆಯಬೇಕೇ ಅಥವಾ ತನ್ನ ಹಳೆಯ ಸಂಕೀರ್ಣ ವಿದೇಶೀ ನೀತಿಯೊಂದಿಗೇ
ಮುಂದುವರಿಯಬೇಕೇ ಎಂದು ಭಾರತ ಚಿಂತಿಸುತ್ತಿದೆ.
ಆದರೆ ಇದ್ಯಾವುದರ ಗಮನವಿಲ್ಲದೆ ಚೀನಾ ಮಾತ್ರ
ಆಫ್ರಿಕಾದಲ್ಲಿ ಮತ್ತೊಂದು ಕೈಗಾರಿಕೆ ಸ್ಥಾಪಿಸಲು ರಸ್ತೆ
ನಿರ್ಮಿಸಿಕೊಳ್ಳುತ್ತಿದೆ.
ಸೂಡಾನ್ ಮಾತ್ರವಲ್ಲ;
ಸಿಯೆರಾ ಲಿಯೋನ್,
ಜಾಂಬಿಯಾ,
ಲೈಬಿರಿಯಾ,
ಮೊಜಾಂಬಿಕ್,
ನೈಜೀರಿಯಾ ಮತ್ತು ಅಂಗೋಲಾ ರಾಷ್ಟ್ರಗಳಲ್ಲೂ
ಚೀನಾ ಕೈಗಾರಿಕಾ ವಲಯಗಳನ್ನು ನಿರ್ಮಿಸುತ್ತಿದೆ.
ಚೀನಾದ ಅಗ್ಗದ ಉತ್ಪನ್ನಗಳಿಗೆ ಆಫ್ರಿಕಾ ಯೋಗ್ಯ
ಮಾರುಕಟ್ಟೆ ಒದಗಿಸುವುದರ ಜೊತೆಗೆ ಚೀನಾದ ಕೈಗಾರಿಕೆಗಳಿಗೆ ಕಡಿಮೆ ಕೂಲಿಯ
ಕೆಲಸಗಾರರನ್ನೂ ಒದಗಿಸುತ್ತಿದೆ.
ಇಷ್ಟಾದರೂ ಚೀನಾ ಕೈಹಾಕಿದೆ ಎಂದ ಮೇಲೆ
ಎಲ್ಲವೂ ಸಕಾರಾತ್ಮಕ ವರದಿಗಳೇ ಇದ್ದಿರಲು ಸಾಧ್ಯವಿಲ್ಲ.
ತೈಲದ ಆಸೆಗೆ ಆಫ್ರಿಕಾ ರಾಷ್ಟ್ರಗಳಲ್ಲಿ
ಆಂತರಿಕ ಕಲಹ ಮತ್ತಷ್ಟು ಹೆಚ್ಚಲು ಚೀನಾ ಭಾರಿ ಪ್ರಮಾಣದ
ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದೆ ಎಂಬ ಆರೋಪಗಳೂ ಇವೆ.
ಈ ಆರೋಪಗಳೆಲ್ಲಾ ಏನೇ ಇರಲಿ.
ಚೀನಾದೊಂದಿಗಿನ ಸಂಬಂಧದಿಂದ ಆಫ್ರಿಕಾಕ್ಕೆ ತೀರಾ
ಹಾನಿಯಾಗುತ್ತಿದೆ ಎನ್ನಲು ಸಾಧ್ಯವೇ ಇಲ್ಲ.
ಈಗ ಇದನ್ನು ಭಾರತದೊಂದಿಗೆ ಹೋಲಿಸೋಣ.
ಆಫ್ರಿಕಾದೊಂದಿಗೆ ಭಾರತ ಹೊಂದಿರುವಷ್ಟು
ಐತಿಹಾಸಿಕ ಬಾಂಧವ್ಯವನ್ನು ಪ್ರಾಯಶಃ ಯಾವುದೇ ರಾಷ್ಟ್ರವೂ ಹೊಂದಿಲ್ಲ;
ಹೆಚ್ಚೇನು,
ಭಾರತವನ್ನು ಬಿಟ್ಟರೆ ಇನ್ನಾವ ರಾಷ್ಟ್ರವೂ
ಆಫ್ರಿಕಾದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿಲ್ಲ;
ಆಫ್ರಿಕಾದ ಸಮಸ್ಯೆಗಳ ಬಗ್ಗೆ ಭಾರತದಷ್ಟು
ನಿಸ್ವಾರ್ಥವಾಗಿ ಬೇರ್‍ಯಾವ ರಾಷ್ಟ್ರವೂ ಚಿಂತಿಸುವುದಿಲ್ಲ.
ಇಷ್ಟಾದರೂ ಎರಡೂ ರಾಷ್ಟ್ರಗಳ ದ್ವಿಪಕ್ಷೀಯ
ಅಭಿವೃದ್ಧಿಗಾಗಿ ವ್ಯಾಪಾರ ಸಂಬಂಧ ಕುದುರಿಸಿಕೊಳ್ಳುವಲ್ಲಿ,
ಆ ಮೂಲಕ ಆ ನತದೃಷ್ಟ ರಾಷ್ಟ್ರಗಳಿಗೊಂದು ದಿಕ್ಕು
ತೋರಿಸುವಲ್ಲಿ ಮಾತ್ರ ಭಾರತ ಹಿಂದೆ ಬಿದ್ದಿದೆ.
ಇನ್ನೂ ದುರದೃಷ್ಟದ ವಿಷಯವೆಂದರೆ ಆಫ್ರಿಕಾಕ್ಕೆ
ಸಂಬಂಧಪಟ್ಟಂತೆ ಭಾರತವು ಸಕಾರಾತ್ಮಕ ಪ್ರತಿಕ್ರಿಯೆ ನೀಡುವುದಕ್ಕೆ ಬದಲಾಗಿ
ಹಿಂಜರಿಕೆಯ ಪ್ರತಿಕ್ರಿಯೆ ನೀಡುತ್ತಾ ಬಂದಿದೆ.
ಇತ್ತೀಚಿನ ಇಂಡೋ-ಆಫ್ರಿಕನ್
ಸಮ್ಮೇಳನವನ್ನು ಗಮನಿಸಿದರೆ,
ಆಫ್ರಿಕಾದತ್ತ ಭಾರತ ಸ್ವಇಚ್ಛೆಯಿಂದ ಉತ್ಸಾಹ
ತೋರುತ್ತಿಲ್ಲ,
ಆದರೆ ಚೀನಾದ ಹಾದಿಯಲ್ಲಿ ನಡೆಯಲು ಯತ್ನಿಸುತ್ತಿದೆ ಎಂದೇ
ಗೋಚರವಾಗುತ್ತದೆ.
ಆಫ್ರಿಕಾದ
12ಕ್ಕೂ ಹೆಚ್ಚು ರಾಷ್ಟ್ರಗಳ ನೇತಾರರು
ಭಾರತದೊಂದಿಗೆ ಬಾಂಧವ್ಯ ಹೊಂದಲು ಸದಾ ಸಿದ್ಧ ಎಂಬುದು ಎಷ್ಟು ನಿಜವೋ,
ಭಾರತದ ಬಂಡವಾಳ ಚೀನಾದಂತೆ ಸರಾಗವಾಗಿ
ಹರಿದುಬಾರದೆ ಕೆಂಪುಪಟ್ಟಿಯಲ್ಲಿ ಸಿಕ್ಕಿಬೀಳಲಿದೆ ಎಂಬ ಅಂಶ ಅವರಿಗೆಲ್ಲಾ
ಅರಿವಿದೆ ಎಂಬುದೂ ಅಷ್ಟೇ ನಿಜ.
ಮತ್ತೊಂದು ಅಂಶವೆಂದರೆ ಆಫ್ರಿಕಾದಲ್ಲಿ ಬೇರ್‍ಯಾವ
ರಾಷ್ಟ್ರವೂ ಭಾರತದಷ್ಟು ಪ್ರಭಾವ ಹೊಂದಿಲ್ಲ.
ಆಫ್ರಿಕಾದಲ್ಲಿ ಬಹುಮಂದಿ ಭಾರತೀಯ
ಮೂಲದವರಿದ್ದಾರೆ.
ಮಾರಿಷಸ್,
ದಕ್ಷಿಣ ಆಫ್ರಿಕಾ,
ಕೀನ್ಯಾ ಮತ್ತು ಉಗಾಂಡಗಳಲ್ಲಿ ಭಾರತೀಯ
ಮೂಲದವರದ್ದೇ ಪ್ರಾಬಲ್ಯ;
ಶ್ರೀಮಂತ ಸಮುದಾಯ ಮತ್ತು ಪ್ರಭಾವಿಗಳೆಲ್ಲರೂ
ಭಾರತೀಯ ಮೂಲದವರೇ.
ಆದರೂ ಕೂಡಾ
'ಸಿಕ್ಕ ಅವಕಾಶವನ್ನು ಕಳೆದುಕೊಳ್ಳುವುದಕ್ಕೇ'
ಹೆಸರಾದ ಭಾರತ ಆಫ್ರಿಕಾದೊಂದಿಗೆ ವ್ಯಾಪಾರ ಸಂಬಂಧ ವೃದ್ಧಿಸಿಕೊಳ್ಳುವಲ್ಲಿ
ವಿಫಲವಾಗಿದೆ.
ಪ್ರಸಕ್ತ ಭಾರತ-ಆಫ್ರಿಕಾ
ವ್ಯಾಪಾರ ಸಂಬಂಧ ಚೀನಾ-ಆಫ್ರಿಕಾ
ವ್ಯಾಪಾರ ಸಂಬಂಧದ ಅರ್ಧದಷ್ಟೂ ಇಲ್ಲ.
ಈ ಎಲ್ಲಾ ಆರೋಪಗಳ ನಡುವೆಯೂ ಚೀನಾ ದೇಶವು
ಆಫ್ರಿಕಾದಲ್ಲಿ ಸಮಾಜ ಸೇವಾ,
ದಾನಿ ಸಂಸ್ಥೆಗಳಿಗಿಂತಲೂ ಉತ್ತಮ ಕಾರ್ಯ
ನಿರ್ವಹಿಸುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ.
ಸಾಲದ ನೆರವು ಪಡೆದು ನಂತರ ಆ ಸಾಲದ ಶೂಲದಲ್ಲೇ
ಸಿಕ್ಕಿಬೀಳುವ ಬದಲು ಉದ್ಯೋಗಾವಕಾಶ,
ಮೂಲಸೌಕರ್ಯ,
ಗುಣಮಟ್ಟದ ಉತ್ಪನ್ನಗಳು ಮತ್ತು ಉತ್ತಮ
ಜೀವನಶೈಲಿ ಹೊಂದುವುದೇ ವಾಸಿ ಎಂಬ ನಿರ್ಧಾರಕ್ಕೆ ಆಫ್ರಿಕಾ ರಾಷ್ಟ್ರಗಳು
ಬಂದಿರುವುದು ಜಗತ್ತಿಗೆ ತಿಳಿಯದ ವಿಷಯವೇನೂ ಅಲ್ಲ.
ಹಾಗೇ ಈ ಮಹತ್ವದ ಅವಕಾಶವನ್ನು ಚೀನಾ ಸೊಗಸಾಗಿಯೇ
ಬಳಸಿಕೊಳ್ಳುತ್ತಿದೆ ಎಂಬುದೂ ಸುಳ್ಳಲ್ಲ!!
|