ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಇರಾನ್-ಇಸ್ರೇಲ್
 
ಸತ್ತ ಡೈನೋಸಾರ್ ಮೇಲೆ ಬಾಜಿ ಕಟ್ಟಬೇಕೆ?
 

ಇರಾನ್‌ನ ಆರ್ಥಿಕ ಶಕ್ತಿ ಭೂಗರ್ಭದ ತೈಲವನ್ನು ಆಧರಿಸಿದ್ದರೆ ಇಸ್ರೇಲ್‌ನ ಶಕ್ತಿ ಪ್ರಜೆಗಳ ಬುದ್ಧಿಮತ್ತೆಯನ್ನು ಅವಲಂಬಿಸಿದೆ

ಥಾಮಸ್ ಫ್ರೀಡ್ಮನ್

ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ, 'ನ್ಯೂಯಾರ್ಕ್ ಟೈಮ್ಸ್' ಮಾಜಿ ಪತ್ರಕರ್ತ

ಪ್ರಶ್ನೆ: ಅಮೆರಿಕದ ಪ್ರಮುಖ ಹೂಡಿಕೆದಾರ ವಾರನ್ ಬಫೆಟ್ ಹಾಗೂ ಇರಾನ್‌ನ ಮಾರಣಾಂತಿಕ ಪ್ರಧಾನಿ ಮಹಮ್ಮದ್ ಅಹ್ಮದಿನೆಜಾದ್ ಇವರಿಬ್ಬರ ನಡುವೆ ಇರುವ ಸಾಮ್ಯತೆ ಏನು?

ಉತ್ತರ: ಇಬ್ಬರೂ ಇಸ್ರೇಲ್‌ನ ಭವಿಷ್ಯದ ಕುರಿತು ಬಾಜಿ ಕಟ್ಟಿದ್ದಾರೆ.

ಈಚೆಗೆ ಅಹ್ಮದಿನೇಜಾದ್, 'ಇಸ್ರೇಲ್ ತನ್ನ ಅಂತಿಮ ದಿನಗಳನ್ನು ಎಣಿಸುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಪ್ರಪಂಚದ ಭೂಪಟದಿಂದ ಅಳಿಸಿಹೋಗಲಿದೆ' ಎಂದಿದ್ದರು. ಲೆಬನಾನ್ ಗಡಿ ಸಮೀಪದ, ವೆಸ್ಟರ್ನ್ ಗಲಿಲೀಯಲ್ಲಿರುವ ಇಸ್ರೇಲ್‌ನ ಪ್ರಖ್ಯಾತ ಕಂಪನಿ ಇಸ್ಕಾರ್‌ನ ಮುಖ್ಯ ಕಚೇರಿಯಿಂದ ಹೊರಬೀಳುತ್ತಿರುವಾಗ ಆಕಸ್ಮಿಕವಾಗಿ ನಾನು ಅಧ್ಯಕ್ಷರ ಈ ಮಾತುಗಳನ್ನು ಇರಾಕಿ ರೇಡಿಯೊ ಮೂಲಕ ಕೇಳಿದೆ. ಇಸ್ಕಾರ್ ಇಸ್ರೇಲ್‌ನ ಪ್ರಖ್ಯಾತ ಉಪಕರಣ ಉತ್ಪಾದಕ ಕಂಪನಿ. ವಾರನ್ ಬಫೆಟ್ ತಮ್ಮ ಬರ್ಕ್‌ಶೈರ್ ಹ್ಯಾತ್‌ವೇ ಕಂಪನಿಗಾಗಿ ಖರೀದಿಸಿದ ಮೊಟ್ಟ ಮೊದಲ ಸಮುದ್ರದಾಚಿನ ಕಂಪನಿ ಇದು.

ಬಫೆಟ್ ಇಸ್ಕಾರ್ ಕಂಪನಿಯ ಶೇ. 80ರಷ್ಟು ಷೇರುಗಳನ್ನು ಖರೀದಿಸಲು ನಾಲ್ಕು ಶತಕೋಟಿ ಡಾಲರ್ ತೆತ್ತಿದ್ದರು. 2006ರ ಜುಲೈನಲ್ಲಿ ಹಿಜ್ಬುಲ್ಲಾ ಇರಾನ್‌ನ ಮೇಲೆ ದಾಳಿ ಮಾಡಿ ಒಂದು ತಿಂಗಳ ಕಾಲ ನಡೆಸಿದ ಯುದ್ಧಕ್ಕೆ ಕೆಲವೇ ದಿನಗಳ ಹಿಂದೆ ಈ ಕರಾರು ಮುಕ್ತಾಯಗೊಂಡಿತ್ತು. ಇಸ್ಕಾರ್‌ನ ಅಧ್ಯಕ್ಷ ಈಥನ್ ವರ್ಥೈಮರ್ ಜೊತೆ, ತಾನು ಖರೀದಿಸಿದ ಇಸ್ರೇಲಿ ಕಂಪನಿಯ ಪಾರ್ಕಿಂಗ್ ಆವರಣಕ್ಕೆ ಹಿಜ್ಬುಲ್ಲಾ ರಾಕೆಟ್‌ಗಳು ಅಪ್ಪಳಿಸಿದಾಗ ವಾರನ್ ಬಫೆಟ್ ಅವರ ಪ್ರತಿಕ್ರಿಯೆ ಹೇಗಿತ್ತು ಎಂದು ಕೇಳಿದೆ. ಬಫೆಟ್ ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ ಎನ್ನುತ್ತಾ ಆ ಸಂದರ್ಭವನ್ನು ನೆನಪಿಸಿಕೊಂಡರು ವರ್ಥೈಮರ್. 'ಬಫೆಟ್, ನನಗೆ ಮುಂದಿನ ಮೂರು ತಿಂಗಳ ಬಗ್ಗೆ ಆಸಕ್ತಿ ಇಲ್ಲ. ಬದಲಿಗೆ ಮುಂದಿನ ಇಪ್ಪತ್ತು ವರ್ಷಗಳ ಬಗ್ಗೆ ತೀವ್ರ ಆಸಕ್ತಿ ಇದೆ ಎಂದಿದ್ದರು ಎನ್ನುತ್ತಾರೆ ವರ್ಥೈಮರ್. ಯುದ್ಧದ ಸಂದರ್ಭದಲ್ಲಿ ಕಂಪನಿಯ ಅರ್ಧದಷ್ಟು ಕಾರ್ಮಿಕರಿಗೆ ಮನೆಯಲ್ಲೇ ಭದ್ರವಾಗಿ ಉಳಿದುಕೊಳ್ಳಲಿಕ್ಕೆ ಹೇಳಿ, ಇನ್ನರ್ಧ ಕಾರ್ಮಿಕರಿಂದ ಕಂಪನಿಯ ಪ್ರತಿದಿನದ ಉತ್ಪಾದನೆಗೆ ಒಂದಿಷ್ಟೂ ಭಂಗ ಬರದಂತೆ, ಆ ತಿಂಗಳ ಒಟ್ಟು ಉತ್ಪಾದನೆ ದಾಖಲೆಯನ್ನು ಸರಿದೂಗಿಸಿದ ವರ್ಥೈಮರ್ ಆ ಮೂಲಕ ಅವರ ಆತ್ಮವಿಶ್ವಾಸವನ್ನು ಕಾಯ್ದುಕೊಂಡರು.

ಈಗ ನೀವು ಯಾರ ಮೇಲೆ ಬಾಜಿ ಕಟ್ಟುತ್ತೀರಿ? ಬಫೆಟ್ ಮೇಲೋ? ಅಥವಾ ಅಹ್ಮದಿನೇಜಾದ್ ಮೇಲೋ? ನಾನು ಅಹ್ಮದಿನೇಜಾದ್‌ರನ್ನು ಬಿಟ್ಟು ಬಫೆಟ್ ಜೊತೆ ಮುಂದುವರೆಯುತ್ತೇನೆ. ಏಕೆಂದರೆ ಹೊರಗಡೆಯಿಂದ ನೋಡಿದರೆ ಇಸ್ರೇಲ್‌ನಲ್ಲಿ ಆಂತರಿಕ ಕ್ಷೆಭೆ ಇರುವಂತೆ ಕಾಣುತ್ತದೆ. ಆದರೆ ಇಸ್ರೇಲ್ ದುರ್ಬಲ ನಾಡಾದರೂ ಸತ್ವಯುತ ನಾಗರಿಕ ಸಮಾಜ ಹೊಂದಿದೆ. ಅಲ್ಲಿನ ಆರ್ಥಿಕತೆ ತಳದಿಂದ ಮೇಲಕ್ಕೆ ಚಿಮ್ಮುತ್ತಿದೆ. ಇಸ್ರೇಲ್‌ನ ಕರೆನ್ಸಿ ಶೇಕೆಲ್, 2007ರ ಆರಂಭದಿಂದಲೂ ಡಾಲರ್‌ನ ವಿರುದ್ಧ ಶೇ. 30ರಷ್ಟು ಸ್ಥಿರತೆ ಸಾಧಿಸಿದೆ.

ಇದಕ್ಕೆಲ್ಲಾ ಏನು ಕಾರಣ? ಇಸ್ರೇಲ್ ನೀರಸ ಜಗತ್ತಿನೊಂದಿಗೆ ಸ್ಪರ್ಧಿಸಲು ಸಿದ್ಧವಾಗಿರುವಂಥ ಸತ್ವಯುತ ನಾಡು. ಅದು 100 ದೇಶಗಳಿಂದ ಸೆಳೆದುಕೊಂಡ ಜನರಿಂದ ತುಂಬಿದ, 100 ವಿವಿಧ ಭಾಷೆಗಳನ್ನು ಮಾತನಾಡುವ ನಾಡು. ವ್ಯಕ್ತಿಗತ ಕಲ್ಪನೆಯನ್ನು ಪ್ರೋತ್ಸಾಹಿಸುವ ಉದ್ಯಮ ಸಂಸ್ಕೃತಿಯನ್ನು ಹೊಂದಿದ ಇಸ್ರೇಲ್ ತನ್ನ ಮೂಲದಲ್ಲಿಯೇ ಅಸಾಂಪ್ರದಾಯಿಕ ನಿಲುವುಗಳನ್ನು ಹೊಂದಿದೆ. ನಾವೆಲ್ಲ ಇನ್ನೂ ನಿದ್ದೆಯಲ್ಲಿದ್ದಾಗಲೇ ಇಸ್ರೇಲ್ ಕಿತ್ತಳೆ ಬೆಳೆಯುವುದನ್ನು ಬಿಟ್ಟು ಕಂಪ್ಯೂಟರ್ ಸಾಫ್ಟ್‌ವೇರ್ ತಯಾರಿಸುವ ಹಂತ ತಲುಪಿತ್ತು.

ನಾನು ಇಸ್ಕಾರ್ ಆವರಣಕ್ಕೆ ಭೇಟಿ ನೀಡಿದ ದಿನ, ಅಲ್ಲಿನ ಥಿಯೇಟರ್‌ಗಳಲ್ಲೊಂದು ಝೆಕ್ ಗಣರಾಜ್ಯದಿಂದ ಬಂದಂತಹ ಉದ್ಯಮಿಗಳಿಂದ ತುಂಬಿತ್ತು. ಆ ಝೆಕ್ ಉದ್ಯಮಿಗಳು ಅಷ್ಟು ದೂರದಿಂದ ಇಸ್ರೇಲ್- ಲೆಬನಾನ್ ಗಡಿ ಪ್ರದೇಶಕ್ಕೆ ನಿರ್ದಿಷ್ಟ ಉಪಕರಣ ಉತ್ಪಾದನೆ ಕ್ಷೇತ್ರದಲ್ಲಾದ ಹೊಸ ಅನ್ವೇಷಣೆಗಳನ್ನು ಅರಿತುಕೊಳ್ಳಲು ಬಂದಿದ್ದರು. ವರ್ಥೈಮರ್ ತಮ್ಮ ಗ್ರಾಹಕರು ಹಾಗೂ ಹೊಸ ತಂತ್ರಜ್ಞಾನಗಳೊಂದಿಗೆ ನಿಕಟ ಸಂಪರ್ಕ ಇರಿಸಿಕೊಳ್ಳುವಲ್ಲಿ ಸಿದ್ಧಹಸ್ತರು. ಅವರು ಹೇಳುವಂತೆ, 'ನೀವು ನೆಲದ ಮೇಲೆ ಮಲಗಿದರೆ ಮಂಚದಿಂದ ಕೆಳಕ್ಕೆ ಬೀಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.'

2008ರ ಆದಿಯಲ್ಲಿ, 'ಡೌ ಜೋನ್ಸ್ ವೆಂಚರ್ ಸೋರ್ಸ್'ನ ದಾಖಲೆಗಳು ಹೇಳುವಂತೆ, ಅಮೆರಿಕದ ವಿಖ್ಯಾತ ನಾಲ್ವರು ಉದ್ಯಮಿಗಳು ಉದ್ಯಮ ಅಭಿವೃದ್ಧಿಗಾಗಿ ಯುರೋಪ್‌ನಲ್ಲಿ 1.53 ಶತಕೋಟಿ ಡಾಲರ್, ಚೀನಾದಲ್ಲಿ 719 ದಶಲಕ್ಷ ಡಾಲರ್, ಇಸ್ರೇಲ್‌ನಲ್ಲಿ 572 ದಶಲಕ್ಷ ಡಾಲರ್ ಹಾಗೂ ಭಾರತದಲ್ಲಿ 99 ದಶಲಕ್ಷ ಡಾಲರ್ ಹೂಡಿಕೆ ಮಾಡಲು ತುದಿಗಾಲಲ್ಲಿ ನಿಂತಿದ್ದು ಏಕೆ ಎಂಬುದಕ್ಕೆ ಇಸ್ರೇಲ್‌ನ ಈ ರೀತಿಯ ಹಸಿವು ಹಾಗೂ ಬದ್ಧತೆಯೇ ಸಾಕ್ಷಿ. 7 ದಶಲಕ್ಷ ಜನಸಂಖ್ಯೆ ಇರುವ ಇಸ್ರೇಲ್, 1.3 ಶತಕೋಟಿ ಜನಸಂಖ್ಯೆ ಇರುವ ಚೀನಾದಷ್ಟೇ ಬಂಡವಾಳ ಸೆಳೆಯುವ ಸಾಮರ್ಥ್ಯ ಹೊಂದಿದೆ. ಇಸ್ರೇಲ್‌ನ ಟೆಕ್ನಿಯನ್ ಎಮ್‌ಐಟಿಯ ಎಂಜಿನಿಯರ್ ವಿಭಾಗದ ಮುಖ್ಯಸ್ಥ ಬೋಜ್ ಗೊಲಾನಿ ಅವರು, 'ಕಳೆದ 8 ತಿಂಗಳಲ್ಲಿ ಐಬಿಎಮ್, ಜನರಲ್ ಮೋಟಾರ್‍ಸ್, ಪ್ರೊಕ್ಟರ್ ಆಂಡ್ ಗ್ಯಾಂಬಲ್ ಮತ್ತು ವಾಲ್ ಮಾರ್ಟ್‌ನ ನಿಯೋಗಗಳು ನಮ್ಮ ಕ್ಯಾಂಪಸ್‌ಗೆ ಭೇಟಿ ನೀಡಿವೆ. ಇಸ್ರೇಲ್‌ನಲ್ಲಿ ಅಧ್ಯಯನ ಹಾಗೂ ಅಭಿವೃದ್ಧಿ (ರಿಸರ್ಚ್ ಆಂಡ್ ಡೆವಲಪ್‌ಮೆಂಟ್) ಕೇಂದ್ರಗಳನ್ನು ತೆರೆಯಲು ಅವರೆಲ್ಲಾ ಉತ್ಸುಕರಾಗಿದ್ದಾರೆ' ಎನ್ನುತ್ತಾರೆ.

ಇಂಥ ವಿಚಾರಗಳಿಗೆ ತಲೆಕೆಡಿಸಿಕೊಳ್ಳದಿರಲು ಅಹ್ಮದಿನೇಜಾದ್ ನಿರ್ಧರಿಸಿದ್ದಾರೆ. ತೈಲ ಬೆಲೆ ಬ್ಯಾರಲ್‌ಗೆ ಸುಮಾರು 140 ಡಾಲರ್ ತಲುಪಿರುವುದರಿಂದ ಅಹ್ಮದಿನೇಜಾದ್ ಅವರು, ಇರಾನ್ ಶೇ. 10 ನಿರುದ್ಯೋಗ ಪ್ರಮಾಣದೊಂದಿಗೆ ಮಾದರಿ ರಾಷ್ಟ್ರವಾಗಲಿದೆ ಹಾಗೂ ಇಸ್ರೇಲ್ ಭೂಪಟದಿಂದಲೇ ಮಾಯವಾಗಲಿದೆ ಎಂದು ಭವಿಷ್ಯ ನುಡಿಯುತ್ತಾ ನಿರಾಳವಾಗಿದ್ದಾರೆ. ಆದರೆ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್ ಅಂಥ ಮಹತ್ವವಾದುದೇನನ್ನೂ ಸಾಧಿಸಿಲ್ಲ ಎಂಬುದು ನಾಚಿಕೆಗೇಡಿನ ವಿಚಾರ. ಐತಿಹಾಸಿಕವಾಗಿ ನೋಡಿದರೆ ಇರಾನಿಗಳು ಮೂಲತಃ ಧೈರ್ಯಶಾಲಿ ಹಾಗೂ ಸಂಶೋಧಕ ಪ್ರವೃತ್ತಿಯವರು. ಇದಕ್ಕೆ ನಿದರ್ಶನ ಬೇಕೆಂದಾದಲ್ಲಿ ಪರ್ಷಿಯನ್ ನಾಗರಿಕತೆಯನ್ನು ಗಮನಿಸಿದರೆ ಸಾಕು. ಆದರೆ ಈಗ ಅಲ್ಲಿರುವ ಇಸ್ಲಾಮಿಕ್ ಆಡಳಿತ ತನ್ನ ಪ್ರಜೆಗಳನ್ನು ನಂಬುವುದಿಲ್ಲ, ಅಲ್ಲದೆ ವ್ಯಕ್ತಿಗತವಾಗಿ ಅವರನ್ನು ಸತ್ವಶಾಲಿಗಳನ್ನಾಗಿಸುವ ಕಾರ್ಯವನ್ನು ಅದು ಎಂದಿಗೂ ಮಾಡುವುದಿಲ್ಲ.

ತೈಲ ಸಂಪತ್ತು ನಿಮಗೆ ಬೇಕಾದ ಅಥವಾ ನಿಮ್ಮಿಂದ ಅಭಿವೃದ್ಧಿಪಡಿಸಲು ಸಾಧ್ಯವಾಗದಂತಹ ಸಾಫ್ಟ್‌ವೇರ್ ಮತ್ತು ಅಣು ತಂತ್ರಜ್ಞಾನವನ್ನು ಕೊಂಡುಕೊಳ್ಳಲು ನೆರವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇರಾನ್‌ನ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂಬುದಕ್ಕೆ ಈ ವಾದ ಪೂರಕವಲ್ಲ. ಇಂದು ಇರಾನ್‌ನ ಬಹುಪಾಲು ಆರ್ಥಿಕ ಹಾಗೂ ಮಿಲಿಟರಿ ಶಕ್ತಿ ಭೂಮಿಯಿಂದ ಹೊರತೆಗೆಯುವ ತೈಲವನ್ನು ಆಧರಿಸಿವೆ. ಆದರೆ ಇಸ್ರೇಲ್‌ನ ಆರ್ಥಿಕ ಹಾಗೂ ಮಿಲಿಟರಿ ಶಕ್ತಿ ಸಂಪೂರ್ಣವಾಗಿ ಅಲ್ಲಿನ ಪ್ರಜೆಗಳ ಬುದ್ಧಿಮತ್ತೆಯನ್ನು ಅವಲಂಬಿಸಿದೆ. ಹೀಗಾಗಿ ಇಸ್ರೇಲ್‌ನ ಆರ್ಥಿಕ ಶಕ್ತಿಯನ್ನು ಮಿತಿಯಿಲ್ಲದೆ ನವೀಕರಿಸಬಹುದಾಗಿದೆ. ಆದರೆ ಇರಾನ್‌ನ ಕ್ಷೀಣಿಸುತ್ತಿರುವ ಆರ್ಥಿಕ ಸಂಪತ್ತು ಎಷ್ಟೋ ವರ್ಷಗಳ ಹಿಂದೆ ಸತ್ತು ಕಾಲಾಂತರದಲ್ಲಿ ಇಂಧನವಾಗಿ ಬದಲಾಗಿರುವ ಡೈನೋಸಾರ್‌ಗಳನ್ನು ನೆಚ್ಚಿಕೊಂಡಿದೆ.

ಈಗ ಹೇಳಿ. ಇನ್ನು ಇಪ್ಪತ್ತು ವರ್ಷಗಳ ನಂತರ ಇಲ್ಲಿ ಯಾರು ಉಳಿದುಕೊಳ್ಳುತ್ತಾರೆ? ನಾನಂತೂ ಬಫೆಟ್ ಅವರ ಜೊತೆಗಿದ್ದೇನೆ. fಜೀವಂತ ಮನುಷ್ಯರನ್ನು ನಂಬಿ ಸವಾಲು ಹಾಕುವವರ ಮೇಲೆ ಬಾಜಿ ಕಟ್ಟಲು ಇಚ್ಚಿಸುತ್ತೇನೆಯೇ ಹೊರತು ಸತ್ತ ಡೈನೋಸಾರ್‌ಗಳನ್ನು ನಂಬುವ ವ್ಯಕ್ತಿಗಳ ಮೇಲೆ ಬಾಜಿ ಕಟ್ಟಲು ನಾನು ಬಯಸುವುದಿಲ್ಲ.

ಟಿಎಸ್‌ಐ

 

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .