ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಬಣ್ಣದ ಲೋಕ

ಎಂಥ ಹದವಿತ್ತಾ... ಹರೆಯಕೆ ಏನು ಮುದವಿತ್ತಾ...

 

ಮಂದಿರಾ ಬೇಡಿ: ನಟಿ, ರೂಪದರ್ಶಿ, ಟಿವಿ ನಿರೂಪಕಿ

ಇಂದಿನ ಯುವ ಪೀಳಿಗೆಯ ಎದುರು ಹೇರಳ ಅವಕಾಶಗಳು ತೆರೆದುಕೊಳ್ಳುತ್ತಿವೆ. ಅದೂ ತಮ್ಮ ಜೀವನದ ಎಳವೆಯಲ್ಲಿಯೇ ಉತ್ತಮ ಉದ್ಯೋಗ ಅವಕಾಶಗಳೂ ಅವರೆದುರಿವೆ. ಮಾಧ್ಯಮಗಳ ವ್ಯಾಪಕತೆಯಿಂದಾಗಿ ಹೆಚ್ಚಿನ ಯುವ ಜನಾಂಗ ಇಲ್ಲಿನ ಉದ್ಯೋಗಾವಕಾಶಗಳತ್ತ ಒಲವು ತೋರುತ್ತಿದೆ. ಹಿಂದೆ ಕಲಾತ್ಮಕ ಕ್ಷೇತ್ರಕ್ಕೆ ಕೇವಲ ಕಲೆಯೆಡೆಗೆ ಒಲವಿದ್ದ ಮಂದಿ ಮಾತ್ರ ಪ್ರವೇಶಿಸುತ್ತಿದ್ದರು. ಆದರೆ ಈಗ ಹಾಗಲ್ಲ. ಈ ಕ್ಷೇತ್ರದಲ್ಲಿ ಅನುಪಮ ಮತ್ತು ಆಸಕ್ತಿದಾಯಕ ಆಯ್ಕೆಗಳು ಇವೆ. ಹದಿಹರೆಯದವರ ನೆಚ್ಚಿನ ಕ್ಷೇತ್ರವಾದ ಬಾಲಿವುಡ್ ಮತ್ತು ಕ್ರಿಕೆಟ್‌ನೆಡೆಗೆ ಹೋಗಲೂ ಇವು ರಹದಾರಿ. ಈಗಂತೂ ಇಂಟರ್‌ನೆಟ್ ಮೂಲಕ ಇಡೀ ಜಗತ್ತೇ ನಮ್ಮ ಬೆರಳ ತುದಿಗಿರುತ್ತದೆ. ಒಂದು ಬಟನ್ ಅದುಮಿದರೆ ಮಾಹಿತಿಗಳ ಕಣಜವೇ ಕಣ್ಣೆದುರು ತೆರೆದುಕೊಳ್ಳುತ್ತದೆ. ಇದು ಒಬ್ಬ ವ್ಯಕ್ತಿಯ ಬೌದ್ಧಿಕ ಮಟ್ಟ ಹೆಚ್ಚಲು ಸಹಕಾರಿ. ನಾನು ಹದಿಹರೆಯದಲ್ಲಿದ್ದಾಗ ನನಗಿದ್ದ ಪ್ರಬುದ್ಧತೆಗೂ ಈಗಿನ ಅದೇ ವಯಸ್ಸಿನವರ ಬೌದ್ಧಿಕ ಸಾಮರ್ಥ್ಯಕ್ಕೂ ಇರುವ ವ್ಯತ್ಯಾಸಕ್ಕೆ ಇದೇ ಕಾರಣ.

ಅಮೃತಾ ರಾವ್: ನಟಿ

ಜಾಹೀರಾತುಗಳಲ್ಲಿ ಅಭಿನಯಿಸಿ ನಾನು ಗುರುತಿಸಿಕೊಂಡಿದ್ದು ಅದೃಷ್ಟ. ಆದರೆ ಈ ಅವಕಾಶಗಳು ನನಗೆ ದೊರಕಿದ್ದು ಮಾತ್ರ ಆಕಸ್ಮಿಕ. ಹದಿಹರೆಯದಲ್ಲಿದ್ದ ನಾನು ಕೇವಲ ಮೋಜಿಗಾಗಿ ಮಾಡೆಲಿಂಗ್ ಮಾಡಿದ್ದೆ. ನಂತರ ಅಲ್ಲಿ ಆಯ್ಕೆಯಾಗಿ ಬಹಳಷ್ಟು ಜಾಹೀರಾತುಗಳಲ್ಲಿ ಅಭಿನಯಿಸಿದೆ ಮತ್ತು ನಿರ್ದೇಶಕರು ನನ್ನನ್ನು ಗುರುತಿಸಿದರು. 'ಇಷ್ಕ್ ವಿಶ್ಕ್' ಚಿತ್ರದ ಯುವ ಪಾತ್ರದಲ್ಲಿ ಅಭಿನಯಿಸಲು ಅವಕಾಶ ದೊರಕಿದ್ದರ ಕುರಿತು ನನಗೆ ಸಂತೋಷವಿದೆ. ಆಗ ನಾನು ಬಹಳ ಚಿಕ್ಕವಳಾಗಿದ್ದು, ಬಾಕ್ಸ್ ಆಫೀಸ್, ವಿಮರ್ಶೆ, ಕ್ಯಾಮರಾ ಆಂಗಲ್, ಪ್ರಚಾರ, ಮಾಧ್ಯಮಗಳನ್ನು ಆಕರ್ಷಿಸುವುದು... ಈ ಕುರಿತು ಏನೂ ತಿಳಿದಿರಲಿಲ್ಲ. ಪಾತ್ರ ಮತ್ತು ನನ್ನ ಪ್ರದರ್ಶನಗಳ ಬಗ್ಗೆಯಷ್ಟೇ ಗಮನ ಕೇಂದ್ರೀಕರಿಸಿದ್ದೆ. ಆ ಸಂದರ್ಭ ಹಾಗಿತ್ತು ಅನ್ನುವುದರ ಬಗ್ಗೆ ನನಗೆ ಮೆಚ್ಚುಗೆಯಿದೆ. ನಮ್ಮ ಸಂಪೂರ್ಣ ಮನಸ್ಸನ್ನು ಈ ಚಿತ್ರಕ್ಕೆ ಸಮರ್ಪಿಸಿ ದುಡಿದಿರುವುದೇ ಚಿತ್ರಕ್ಕೆ ವಿಶೇಷ ಕಳೆ ತಂದಿತ್ತು. ನಾನು ಪ್ರವೇಶಿಸಿದ ಸಮಯಕ್ಕೆ ಹೋಲಿಸಿದರೆ ಈಗಿನ ಚಿತ್ರರಂಗದಲ್ಲಿ ಬಹಳ ಬದಲಾವಣೆಗಳಾಗಿವೆ. ಅಭಿನಯ, ಗ್ಲಾಮರ್ ಎಲ್ಲದರಲ್ಲೂ ಬಹಳಷ್ಟು ವ್ಯತ್ಯಾಸಗಳಾಗಿವೆ.

ಕಂಗನಾ ರಾಣಾವತ್ ನಟಿ

ನಾನು ಯುವಪೀಳಿಗೆಯ ಹುಡುಗಿಯಾಗಿದ್ದು, ಬಹಳ ಧೈರ್ಯವಂತೆ ಮತ್ತು ಅಷ್ಟೇ ಮುನ್ನುಗ್ಗುವ ಪ್ರವೃತ್ತಿ ಇರುವಾಕೆ. ಈ ಜಗತ್ತಿನಲ್ಲಿ ಸಾಧಿಸಲು ಅಸಾಧ್ಯ ಎಂದು ನಾನು ಯೋಚಿಸಿದ್ದೇ ಇಲ್ಲ. ಹದಿಹರೆಯದವಳಾಗಿ ನಾನು ಮುಂದೆ ಏನು ಮಾಡುತ್ತೇನೆ ಎಂಬುದರ ಕುರಿತು ನನಗೆ ಸ್ಪಷ್ಟ ಕಲ್ಪನೆಯಿರಲಿಲ್ಲ. ನಾನು ಕನಸಿನ ಲೋಕದಲ್ಲೇ ಇರುತ್ತಿದ್ದೆ. ನನ್ನ ಹೆತ್ತವರು ಆಗ ನನ್ನನ್ನು ವಾಸ್ತವ ಜೀವನದ ಕರಿತು ಎಚ್ಚರಿಸಿದ್ದರಿಂದ ವೃತ್ತಿಜೀವನವನ್ನು ಗಂಭೀರವಾಗಿ ಪರಿಗಣಿಸಿದೆ. ವೈದ್ಯೆ ಅಥವಾ ಎಂಜಿನಿಯರ್ ಎಂಬ ಪದಗಳು ನನ್ನನ್ನು ಯಾವತ್ತೂ ಆಕರ್ಷಿಸಿರಲಿಲ್ಲ. ಹಾಗಾಗಿ ಅವೆಲ್ಲವನ್ನೂ ಹೊರತುಪಡಿಸಿ ಭಿನ್ನವಾದದ್ದನ್ನು ಸಾಧಿಸಲು ಹೊರಟೆ. ಜೀವನದಲ್ಲಿ ಏನು ಮಾಡಿದರೂ ದೊಡ್ಡ ಪ್ರಮಾಣದಲ್ಲಿ ಮಾಡುವುದು ನನ್ನ ಸ್ವಭಾವ. ನಾನು ಯಾವತ್ತೂ ಎದೆಗುಂದಿದ್ದೇ ಇಲ್ಲ. ಪ್ರತಿ ಕಾರ್ಯವನ್ನು ಅಸಾಮಾನ್ಯ ರೀತಿಯಲ್ಲಿ ಮಾಡುವುದೇ ನನ್ನ ಶೈಲಿ. ಓದಿನ ವಿಷಯದಲ್ಲೂ ನಾನು ಒಂದು ಹೆಜ್ಜೆ ಮುಂದೆ. ಶೇ.90 ಅಂಕ ತೆಗೆದು ಉತ್ತೀರ್ಣಳಾಗುವಾಗಲೂ ನಾನು ಶೇ.100 ಅಂಕ ಗಳಿಸಲು ಪ್ರಯತ್ನಿಸುತ್ತಿದ್ದೆ.

ಶಾನ್ ಮುಖರ್ಜಿ ಹಿನ್ನೆಲೆ ಗಾಯಕ, ಟಿವಿ ನಿರೂಪಕ

ಹದಿಹರೆಯದವರು ಅನೇಕ ವಿಚಾರಗಳಿಂದ ಪ್ರೇರಿತರಾಗಿದ್ದಾರೆ ಅನ್ನುವುದಕ್ಕಿಂತ ಅವರೇ ನಮ್ಮ ದೇಶವನ್ನು ನಡೆಸುತ್ತಿದ್ದಾರೆ ಎಂಬುದು ನನ್ನ ಭಾವ. ಉದ್ಯೋಗದಲ್ಲಿ ತೊಡಗಿಕೊಳ್ಳುತ್ತಿರುವವರ ವಯಸ್ಸು ೨೩-೨೪ಕ್ಕೆ ಇಳಿದಿರುವುದರಿಂದಲೇ ಯುವ ಪೀಳಿಗೆ ತಮ್ಮ ವೃತ್ತಿ ಹಾಗೂ ಜೀವನದೆಡೆಗೆ ಸಣ್ಣ ವಯಸ್ಸಿನಲ್ಲೇ ಎಷ್ಟು ಆಸಕ್ತಿ ತೋರುತ್ತಾರೆ ಎಂಬುದು ತಿಳಿಯುತ್ತದೆ. ಹದಿಹರೆಯ ಮತ್ತು ಯುವಜನಾಂಗ ರಾಷ್ಟ್ರ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳುವಲ್ಲಿ ತಮ್ಮ ಪ್ರಭಾವ ಬೀರುತ್ತಿರುವುದು ಅವರಿಗಿರುವ ಜಾಗೃತಿಯ ದ್ಯೋತಕ. ರಿಯಾಲಿಟಿ ಶೋಗಳಲ್ಲಿ ನಾನು ಬಹಳಷ್ಟು ಯುವ ಪ್ರತಿಭಾವಂತ ಗಾಯಕರೊಂದಿಗೆ ಮಾತನಾಡಿದ್ದೇನೆ. ತಾವು ಆಯ್ದುಕೊಂಡ ಕ್ಷೇತ್ರದೆಡೆಗೆ ಅವರಿಗಿರುವ ಉತ್ಸಾಹ ಮತ್ತು ಆಕರ್ಷಣೆಯನ್ನು ನಾನು ಗಮನಿಸಿದ್ದೇನೆ. ಮನರಂಜನಾ ಕ್ಷೇತ್ರದಲ್ಲಿ ಸಿಗುವ ನಾನಾ ಸೌಲಭ್ಯಗಳಿಂದ ಆಕರ್ಷಿತರಾಗಿ ಅವರು ಇಲ್ಲಿ ಕಾಲಿಟ್ಟಂತೆ ಕಾಣುತ್ತದೆ.

ಟಿಸ್ಕಾ ಛೋಪ್ರಾ ನಟಿ

ಹದಿಹರೆಯದ ಕಾಲಘಟ್ಟವನ್ನು ದಾಟಿ ಬಂದಿರುವ ನನಗೆ ಅಚ್ಚರಿಯಾಗುವ ಸಂಗತಿ ಎಂದರೆ ಯುವ ಪೀಳಿಗೆ ಭಿನ್ನ ಮತ್ತು ಸವಾಲಿರುವ ವೃತ್ತಿಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಜ್ಜ ನೆಟ್ಟ ಆಲದ ಮರದ ಕೆಳಗೆ ನಿಂತು ಯೋಚಿಸುವ ಪ್ರವೃತ್ತಿ ಈಗ ಮಾಯವಾಗಿದ್ದು ಹೊಸ ಅವಕಾಶಗಳೆಡೆಗೆ ತಮ್ಮನ್ನು ತಾವು ತೆರೆದುಕೊಳ್ಳುತ್ತಿದ್ದಾರೆ. ಡಿಜೆ, ಟ್ಯಾಟೂ ಡಿಸೈನರ್, ರಾಕ್ ಬ್ಯಾಂಡ್ ಸೇರಿಕೊಳ್ಳುವುದು, ವಿಂಡೊ ಡಿಸ್‌ಪ್ಲೇ ಇಂತಹ ವಿಭಿನ್ನ ಉದ್ಯೋಗಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಜೊತೆಗೆ 'ಸ್ಪೇಸ್ ಡಸ್ಟ್' ಅಧ್ಯಯನದಂತಹ ಕ್ಲಿಷ್ಟಕರ ವಿಚಾರಗಳತ್ತ ಒಲವು ತೋರುತ್ತಿರುವುದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಅಭಿವೃದ್ಧಿಗೆ ಅತ್ಯುತ್ತಮ ಕೊಡುಗೆ. ಈ ತರಹ ಉದ್ಯೋಗಗಳಲ್ಲಿ ವೈವಿಧ್ಯ ಮತ್ತು ಜ್ಞಾನಸ್ಫೋಟ ಏಕಕಾಲದಲ್ಲಿ ನಮ್ಮ ಕಾಲದಲ್ಲಿ ಆಗಿದ್ದೇ ಇಲ್ಲ. ಇಂತಹ ವಿಶೇಷವಾದ ಅವಕಾಶಗಳನ್ನು ಗುರುತಿಸುವ ಶಕ್ತಿ ಹದಿಹರೆಯದವರಿಗಿದೆ ಎಂಬುದೇ ಮೆಚ್ಚತಕ್ಕದ್ದು. ಇನ್ನೊಂದು ವಿಚಾರ ಎಂದರೆ ತಮ್ಮ ನಿರ್ಧಾರಗಳ ಬಗ್ಗೆ ಅವರಿಗೆ ಬಹಳ ಖುಷಿ ಇರುವುದು ಅವರ ಆತ್ಮವಿಶ್ವಾಸವನ್ನು ತೋರಿಸುತ್ತದೆ.

ಸುಭಾಷ್ ಘಾಯ್ ನಿರ್ದೇಶಕ

ಕಳೆದ ನಾಲ್ಕು ವರ್ಷಗಳಿಂದ ನಾನು ಹೊಸ ಮುಖಗಳನ್ನು ಅದರಲ್ಲೂ ಹದಿಹರೆಯದವರನ್ನು ಭೇಟಿ ಮಾಡುತ್ತಲೇ ಇದ್ದೇನೆ ಹಾಗೂ ಅವರಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ಕಂಡಿದ್ದೇನೆ. ನಮಗೆ ದೊರಕದಿದ್ದಂತಹ ಅದೆಷ್ಟೋ ಅವಕಾಶಗಳು ಈಗಿನ ಯುವಪೀಳಿಗೆಗೆ ದೊರಕುತ್ತಿದೆ. ತಾಂತ್ರಿಕವಾಗಿ ಅವರು ಬಹಳ ತಿಳಿದುಕೊಂಡಿದ್ದಾರೆ. ಜೊತೆಗೆ ಅವರಲ್ಲಿ ಅಸಹನೆ ಹೆಚ್ಚಿದ್ದು ಫಲಿತಾಂಶವನ್ನು ಬಹುಬೇಗ ನಿರೀಕ್ಷಿಸುತ್ತಾರೆ. ಅವರಲ್ಲಿರುವ ಕೊರತೆ ಎಂದರೆ ಹೊಸ ಕಲ್ಪನೆಯೊಂದರ ಅಂತಃಸ್ಸತ್ವ ಮತ್ತು ಸೌಂದರ್ಯದತ್ತ ಗೌರವವಿಲ್ಲದಿರುವುದು. 'ಕಟ್ ಆಂಡ್ ಪೇಸ್ಟ್' ಜೀವನಶೈಲಿಗೆ ಒಗ್ಗಿಕೊಳ್ಳುತ್ತಿರುವ ಹದಿಹರೆಯದವರು ಯಶಸ್ಸು ಹೇಗಾದರೂ ದೊರಕಬೇಕು ಎಂಬುದನ್ನು ಬಯಸುತ್ತಿದ್ದಾರೆ.

 

ಪ್ರಸಿದ್ಧ ಮೆನನ್

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .