|

ಕವಿಗಳು ವರ್ಣಿಸಿದ ಶುಭ್ರ ಹುಣ್ಣಿಮೆಯ
ಚಂದ್ರನಂತೆ ಬೆಳ್ಳಗಿನ ಮಗುವೊಂದು ಹುಟ್ಟಿದರೆ ಹರ್ಷೋನ್ಮಾದಕ್ಕೊಳಗಾಗದ
ತಾಯಿತಂದೆ ಭರತಖಂಡದಲ್ಲಿ ಇರಲಿಕ್ಕಿಲ್ಲ.
ಹಾಗಿರುವಾಗ ಅದಕ್ಕಿಂತಲೂ ಬೆಳ್ಳಗೆ ಅಂದರೆ
ಹಾಲಿಗಿಂತ ಬೆಳ್ಳಗೆ,
ಬಿಳಿ ಕಾಗದದ ಹಾಳೆಯಂತೆ,
ಬಿಳಿ ಸುಣ್ಣ ಬಳಿದ ಗೋಡೆಯ ಹಾಗೆ ಬೆಳ್ಳಗೆ ಇರುವ
ಮಗುವನ್ನು ಹೆತ್ತಾಗ ಹೆತ್ತ ತಾಯಿಗೆ ಹೇಗಾಗಲಿಕ್ಕಿಲ್ಲ,
ತಂದೆಗೆ ಹೇಗಾಗಲಿಕ್ಕಿಲ್ಲ?
ಇಂಥದೊಂದು ಗಂಡು ಮಗುವಿನ ತಾಯಿತಂದೆ ಆಗಬೇಕಾದರೆ
ಏಳು ಜನ್ಮಗಳ ಪುಣ್ಯಫಲ ಇರಬೇಕೆಂದುಕೊಳ್ಳುವುದರಲ್ಲಿ ತಪ್ಪೇನು?
ಇಂಥ ದಿವ್ಯ ಶಿಶುವೊಂದರ ಸೃಷ್ಟಿಯ ಹಿಂದೆ ಒಬ್ಬ
ವಿಜ್ಞಾನಿಯ ಕೈವಾಡವಿದೆಯೆಂಬ ಅನುಮಾನ ಹುಟ್ಟಿದರೆ,
ಕಪ್ಪು ಕಂದು ಮುಂತಾದ ವಿಧ ವಿಧದ ತ್ವಚೆಗಳನ್ನು
ಬಿಳಿ ಮಾಡಿ ನೂರಾರು ಬಗೆಯ ಲೇಪ ಲೆಪ್ಪಗಳನ್ನು ಬಿಕರಿ ಮಾಡಿ ಪ್ರತಿ ದಿನ
ಶತಕೋಟಿ ರೂಪಾಯಿಗಳನ್ನು ಸಂಪಾದಿಸುವ
ಕಂಪೆನಿಗಳು ಆ ವಿಜ್ಞಾನಿ ಅಟ್ಲಾಂಟಿಕ್ ಸಾಗರದಡಿಯಲ್ಲಿ ಅಡಗಿಕೊಂಡಿದ್ದರೂ
ಅವನನ್ನು ಪತ್ತೆ ಮಾಡಿ ಅಲ್ಲೇ ಧ್ವಂಸ ಮಾಡುವ ಸಂಭವ ಇದೆ.
ಅಂಕಿತ ಮತ್ತು ರಜನಿ ದಂಪತಿಗಳಿಗೆ ಹುಟ್ಟಿದ್ದು
ಒಂದು ಅಪೂರ್ವ ಶಿಶು.
ಅಪೂರ್ವ ಶ್ವೇತವರ್ಣದ ಶಿಶು.
ಮಗುವಿನ ಶುಭ್ರ ಶ್ವೇತ ತ್ವಚೆಯ ಬಣ್ಣದ ಬಗ್ಗೆ
ಅಂಕಿತ ರಜನಿ ದಂಪತಿಗೆ ಸಂತೋಷಪಡಬೇಕೋ ಗಾಬರಿಗೊಳ್ಳಬೇಕೋ ತಿಳಿಯಲಿಲ್ಲ.
ಶಿಶು ಹುಟ್ಟುವಾಗಲೇ ಲ್ಯೂಕೊಡರ್ಮ ತೊಂದರೆಯಿಂದ
ಹುಟ್ಟುವುದಿದೆ.
ಸಾಮಾನ್ಯವಾಗಿ ತಾಯಿ ತಂದೆಯರಿಬ್ಬರಿಗೂ ಲ್ಯೂಕೊಡರ್ಮ
ಇದ್ದರೆ ಮಗು ಕೂಡ ಹುಟ್ಟಿನಿಂದಲೇ ಲ್ಯೂಕೋಡರ್ಮಿಕ್ ಆಗುವ ಸಂಭವ ಹೆಚ್ಚು.
ಡಾಕ್ಟರುಗಳು ಪರೀಕ್ಷೆ ನಡೆಸಿ ಲ್ಯೂಕೋಡರ್ಮ ಅಲ್ಲ
ಎಂದು ಹೇಳಿದ ನಂತರ ಅಂಕಿತ ರಜನಿ ದಂಪತಿಯ ಚಿಂತೆ ಮಗುವಿನ ಚರ್ಮದಿಂದ ಅದರ
ಕೂದಲಿಗೆ ವರ್ಗಾವಣೆಗೊಂಡಿತು.
ಮಗುವಿನ ಮೈಬಣ್ಣ ಬೆಳ್ಳಗಿದ್ದುದಷ್ಟೇ ಅಲ್ಲ,
ಕೂದಲು ಕೂಡ ಅದೇ ರೀತಿ ಬೆಳ್ಳಗಿತ್ತು.
ಅದು ಮುಂದಕ್ಕೂ ಬಿಳಿಯಾಗಿಯೇ ಉಳಿಯುವುದೇ
ಕಪ್ಪಾಗುವುದೇ ಎನ್ನುವ ಚಿಂತೆ ಅವರನ್ನು ಮುತ್ತಿತು.
ಅದಕ್ಕೆ ಡಾಕ್ಟರುಗಳ ಬಳಿ ಉತ್ತರವಿರಲಿಲ್ಲ.
'ಕಪ್ಪಾಗಲೂಬಹುದು,
ಆದರೆ ಬಿಳಿಯಾಗಿಯೇ ಉಳಿಯುವ ಸಂಭವ ಹೆಚ್ಚು'
ಎಂದು ಡಾಕ್ಟರುಗಳು ಅಭಿಪ್ರಾಯಪಟ್ಟರು.
'ಯಾಕೆ
ಚಿಂತೆ ಮಾಡ್ತೀರಿ?
ಬಿಳಿ ಕೂದಲು ಚೆಂದ'
ಎಂದು ಒಬ್ಬಳು ನರ್ಸು ಸಮಾಧಾನ ಹೇಳಿದಳು.
'ಕೂದಲನ್ನು
ಕಪ್ಪು ಮಾಡಿಕೊಳ್ಳಬಹುದಲ್ಲ?'
ಎಂದು ಇನ್ನೊಬ್ಬಳು ನರ್ಸು ಹೇಳಿದಳು.
ಒಟ್ಟಿನಲ್ಲಿ ಮಗು ಚಂದ್ರಕಾಂತನ ಬಗ್ಗೆ ಅವನ ಅಪ್ಪ
ಅಮ್ಮನಿಗೆ ಎಷ್ಟು ಸಂತೋಷವಿತ್ತೋ ಅಷ್ಟೇ ಆತಂಕವೂ ಇತ್ತು.
ಅಂಕಿತ ಅಕೌಂಟೆಂಟ್ ಜನರಲ್ ಆಫೀಸಿನಲ್ಲಿ
ಗುಮಾಸ್ತನಾಗಿದ್ದ.
ರಜನಿ ಸಣ್ಣ ಉಳಿತಾಯ ಖಾತೆಯ ಸಣ್ಣ ಉಳಿತಾಯ ಯೋಜನಾ ಠೇವಣಿ
ಸಂಗ್ರಾಹಕಿಯಾಗಿದ್ದಳು.
ತಡವಾಗಿ ಮದುವೆಯಾಗಿದ್ದರಿಂದ ಚಂದ್ರಕಾಂತ ಹುಟ್ಟುವಾಗ
ಅಂಕಿತನಿಗೆ ಮೂವತ್ತೆಂಟು ವರ್ಷ,
ರಜನಿಗೆ ಮೂವತ್ತೆರಡು.
ಅಂಕಿತ ಕಷ್ಟಪಟ್ಟು ಹಣವುಳಿಸಿ ಕಂತಿನಲ್ಲಿ ಒಂದು
ಕಾರು ಕೊಂಡುಕೊಂಡಿದ್ದ.
ಬೆಂಗಳೂರಿನ ವಾಹನಸಾಗರದಲ್ಲಿ ಸಕಾಲದಲ್ಲಿ ಆಫೀಸು ತಲಪಲು
ಬಸ್ಸಿನಲ್ಲೇ ಹೋಗಬೇಕಾಗುತ್ತಿತ್ತು.
ಆದರೆ ಆಗಾಗ ಆಫೀಸರುಗಳ ಜೊತೆ ಟೂರ್ ಹೋಗಬೇಕಾಗಿ
ಬಂದಾಗ ಕಾರು ಉಪಯೋಗಕ್ಕೆ ಬರುತ್ತಿತ್ತು.
ಆಗ ಒಂದೊಂದು ಸಲ ಬೆಳಿಗ್ಗೆ ಏಳು ಗಂಟೆಗೂ ಮೊದಲೇ
ಮನೆಯಿಂದ ಹೊರಡಬೇಕಾಗುತ್ತಿದ್ದುದರಿಂದ ಕಾರಿನಲ್ಲಿ ಹೋಗಿ ಕಾರನ್ನು
ಆಫೀಸಿನಲ್ಲಿ ಬಿಡುತ್ತಿದ್ದ.
ಮಗು ಚಂದ್ರಕಾಂತನಿಗೆ ಸುಮಾರು ಎರಡು ವರ್ಷ
ಪ್ರಾಯವಾಗುವವರೆಗೂ ಮಗುವನ್ನು ಕಾಣಲು ಬರುವವರ ದಾಳಿಯಿಂದ ಅಂಕಿತ ಮತ್ತು ರಜನಿ
ದಂಪತಿಗಳು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ.
ಮನುಷ್ಯರಷ್ಟೇ ಅಲ್ಲ,
ಟಿವಿ ಚಾನೆಲುಗಳು,
ಪತ್ರಿಕೆಗಳು,
ತ್ವಚೆ ಬಿಳಿ ಮಾಡುವ ಸಾಧನಗಳನ್ನು ತಯಾರಿಸುವ
ಕಂಪೆನಿಗಳು ಅವರ ಬೆನ್ನು ಬಿದ್ದರು.
ವಿವಿಧ ಕೋನಗಳಲ್ಲಿ ಮಗುವಿನ ಚಿತ್ರಗಳು,
ತಾಯಿತಂದೆಯರ ಸಂದರ್ಶನ ಎಲ್ಲಾ ಟಿವಿ
ಚಾನೆಲುಗಳಲ್ಲಿ ಮೂಡಿ ಬಂತು.
ಮಗುವನ್ನು ಟಿವಿಯ ಮೇಲೆ ನೋಡಿದ ಬಹು ಮಂದಿಗೆ ಇದು
ಸ್ವಾಭಾವಿಕವಾಗಿಯೇ ಬಿಳಿಬಣ್ಣ ಪಡೆದುಕೊಂಡು ಹುಟ್ಟಿದ್ದು ಎಂದು ನಂಬಲು
ಕಷ್ಟವಾಯಿತು.
ತಂತಮ್ಮ ಚಾನಲನ್ನು ಜನಪ್ರಿಯಗೊಳಿಸುವ ನೂರೊಂದು
ತಂತ್ರಗಳಲ್ಲಿ ಇದೂ ಒಂದು ಎನ್ನುವವರೇ ಎಲ್ಲರೂ.
ಕಂಪ್ಯೂಟರ್ ಬಂದ ಮೇಲೆ ಸತ್ತ ಹೆಣವನ್ನು ಸಹ ಎದ್ದು
ಕುಳ್ಳಿರಿಸಿ ಮಾತಾಡಿದಂತೆ ತೋರಿಸುವುದು ಸಾಧ್ಯ,
ಮನುಷ್ಯನಿಗೆ ಯಾವ ಬಣ್ಣವನ್ನೂ ಹಚ್ಚಬಹುದು
ಎನ್ನುವುದು ಜಗಜ್ಜಾಹೀರಾದ ರಹಸ್ಯವೇ ಆಗಿತ್ತು.
ಮಾಧ್ಯಮಗಳ ಮತ್ತು ಕಾಸ್ಮೆಟಿಕ್ಸ್ ಕಂಪೆನಿಗಳ
ಜೊತೆಯಲ್ಲಿ ಆಯುರ್ವೇದ ಅಲೋಪತಿಯಿಂದ ತೊಡಗಿ,
ಹೋಮಿಯೋಪತಿ ಯುನಾನಿಯವರೆಗೆ ಒಂದಷ್ಟು ಔಷಧ
ತಯಾರಿಕಾ ಕಂಪೆನಿಗಳು ಅಂಕಿತ ರಜನಿ ದಂಪತಿಯನ್ನು ಪ್ರಶ್ನಾವಳಿಗಳಿಂದ
ಸಿಬಿಐಗಿಂತಲೂ ಘೋರವಾಗಿ ಕಾಡಿದರು.
ತಮ್ಮ ಶಿಶುವಿನ ಜನನದ ಹಿಂದೆ ಯಾವುದೇ ವೇದ್ಯಕೀಯ
ಪ್ರಯೋಗ ನಡೆದಿಲ್ಲ ಎಂದು ಅಂಕಿತ ಮತ್ತು ರಜನಿ ಸಾರಿ ಸಾರಿ ಹೇಳಿದ ಬಳಿಕವೂ
ಸಾಮಾನ್ಯ ಸಾಮಾಜಿಕರು ಅವರನ್ನು ಸುಮ್ಮನಿರಬಿಡಲಿಲ್ಲ.
ಗರ್ಭದಲ್ಲಿದ್ದಾಗ ತಾಯಿ ತಿಂದ ಆಹಾರ ಮತ್ತು
ಔಷಧಗಳೇನೆಂದು ಕೇಳಿ ಪಟ್ಟಿ ಮಾಡುವವರ ಪೀಡೆ ಬಹುತೇಕ ನಿರಂತರ ಎಂಬಂತಾಗಿ
ತಮಗೇಕೆ ಇಂಥದೊಂದು ಮಗು ಹುಟ್ಟಿತೋ ಎಂದು ಅಂಕಿತ ರಜನಿ ದಂಪತಿಗೆ
ಅನಿಸತೊಡಗಿದರೂ ಅವರ ಅಂತರ್ಯದಲ್ಲಿ ಅಂಥ ಮಗುವಿನ ಜನಕ ಜನಕಿಯರಾದ ಬಗ್ಗೆ
ಸಂತೋಷ ಇದ್ದೇ ಇತ್ತು.
ಭೂಮಿಯ ಮೇಲಿರುವ ಅತ್ಯಂತ ಬೆಳ್ಳಗಿನ ಹೂವಾದ
ಮೈಸೂರು ಮಲ್ಲಿಗೆಗಿಂತ ಬೆಳ್ಳಗಿದ್ದ ಮಗು ಚಂದ್ರಕಾಂತ ತ್ವಚೆ ಬೆಳ್ಳಗಿರುವ
ಒಂದೇ ಕಾರಣದಿಂದ ಜಗದ್ವಿಖ್ಯಾತನಾದುದನ್ನು ಕಂಡು
'ಎಂಥದು ಅದು
ಮಗುವಾ ಸುಣ್ಣ ಹಚ್ಚಿದ ಗೋಡೆಯ?'
ಎಂದು ಕರುಬಿದ ತಾಯಂದಿರೂ ಇದ್ದರು.
ಆದರೆ ಆ ಖ್ಯಾತಿಯಿಂದ ಮಗುವಿಗೂ ಅದನ್ನು
ಹೆತ್ತವರಿಗೂ ಉಂಟಾದ ಹಿಂಸೆಯನ್ನು ಕಂಡವರು
'ನಮಗೆ ಬೇಡಪ್ಪಾ
ಇಂಥ ಮಗು'
ಎಂದುಕೊಂಡವರೂ ಇದ್ದರು.
ಸುದೈವವಾಶಾತ್ ಅಂಕಿತ-
ರಜನಿ ದಂಪತಿ ಒಂದು ಹಿಂಸೆಯಿಂದ ಮುಕ್ತವಾಗಿದ್ದರು.
ತಾಯಿತಂದೆ ಕಪ್ಪಗಿದ್ದು ಅವರಿಗೆ
ಬೆಳ್ಳಂಬೆಳ್ಳಗಿನ ಮಗು ಹುಟ್ಟಿದರೆ ಅದು ಹುಟ್ಟಿಸುವ ಅನುಮಾನದ ಘೋರ ಹಿಂಸೆ
ಅಜಿತ ರಜನಿ ದಂಪತಿಯ ಪಾಲಿಗೆ ಬರಲಿಲ್ಲ.
ಯಾಕೆಂದರೆ,
ಅವರಿಬ್ಬರೂ ಸುಮಾರಾಗಿ ಬ್ರಿಟಿಷರಂತೆ
ಬೆಳ್ಳಗಿದ್ದರು.
ಯಾವ ಲಾಭವೂ ಇಲ್ಲದೆ ಅಂಕಿತ ರಜನಿ-
ದಂಪತಿ ಅನುಭವಿಸಿದ ಅವಿರತ ಹಿಂಸೆಯ ನಡುವೆ
ಅಂಕಿತನಿಗೆ ಎರಡು ವರ್ಷ ತುಂಬಿತು.
ಟಿವಿಯಲ್ಲಿ ನೋಡಿದ ಸಾವಿರಾರು ವಿಚಿತ್ರ
ಸಂಗತಿಗಳನ್ನು ಸ್ವಾಭಾವಿಕವಾಗಿಯೇ ಮರೆಯುವಂತೆ ಟಿವಿ ವೀಕ್ಷಕರು ಈ ಶ್ವೇತ
ಶಿಶುವಿನ ವೃತ್ತಾಂತವನ್ನು ಕೂಡ ಮರೆತರು.
ಚಂದ್ರಕಾಂತನ ವೃತ್ತಾಂತ ಆಧುನಿಕ ಐತಿಹ್ಯಗಳ
ಸಾಲಿಗೆ ಸೇರಿತು.
ಒಂದೇ ಒಂದು ಕತೆ ಇನ್ನೂ ಹರಡುತ್ತಲೇ ಇತ್ತು.
ಅದೇನೆಂದರೆ,
'ಬಿಳಿ
ತ್ವಚೆಯ ಮಗು ಹುಟ್ಟಬೇಕಾದರೆ ಗರ್ಭ ಧರಿಸಿದ ನಂತರ ಐದು ಹುಣ್ಣಿಮೆಯ ರಾತ್ರಿ
ಚಂದ್ರೋದಯದ ಹೊತ್ತಿನಿಂದ ಆರಂಭಗೊಂಡು ಐದು ಗಂಟೆಗಳ ಕಾಲ,
ನಗ್ನವಾಗಿ ಬೆಳದಿಂಗಳ ಬೆಳಕಿನಲ್ಲಿ ನಿಲ್ಲಬೇಕು'
ಎನ್ನುವುದಾಗಿತ್ತು.
ಹಾಗಾದರೆ ರಜನಿಗೆ ಯಾಕೆ ಅಂಥ ಬೆಳ್ಳಗಿನ ಮಗು ಹುಟ್ಟಿತು
ಎನ್ನುವುದಕ್ಕೂ ಕತೆಯಲ್ಲಿ ಉತ್ತರವಿತ್ತು.
ಅವಳು ಒಂಬತ್ತು ಹುಣ್ಣಿಮೆಯ ರಾತ್ರಿ ಹಾಗೆ
ನಿಂತದ್ದೇ ಕಾರಣ ಎಂದು ಕತೆ ಹೇಳುತ್ತಿತ್ತು.
ಅಸಂಖ್ಯಾತ ಗರ್ಭಿಣಿಯರು ಬಿಳಿಮಗುವನ್ನು ಹೆರುವ ಈ
ಪ್ರಯೋಗವನ್ನು ಆಗಲೇ ಆರಂಭಿಸಿಬಿಟ್ಟಿದ್ದಾರೆ ಎನ್ನುವ ಸುದ್ದಿಯೂ ಹಬ್ಬಿತ್ತು.
ಚಂದ್ರಕಾಂತ ಎಲ್ಲ ಮಕ್ಕಳಂತೆ ಇದ್ದ.
ತನ್ನ ಬಣ್ಣ ವಿಶೇಷವಾದುದು ಎನ್ನುವ ಭಾವ ಅವನಲ್ಲಿ
ಇರಲಿಲ್ಲ.
ಚಂದ್ರಕಾಂತನ ಬಣ್ಣ ಒಂದು ವಾಸ್ತವ ಎಂದಾದಾಗ
ನೆರೆಹೊರೆಯವರಿಗೆ ಕೂಡ ಅದರ ಕುರಿತಾದ ಕುತೂಹಲ ಕ್ರಮೇಣ ಕರಗಿತು.
ಅಂಗಾಂಗ ವೈಲಕ್ಷಣ್ಯದಿಂದ ಹುಟ್ಟಿದ ಮಕ್ಕಳ
ವಿಚಾರದಲ್ಲಿಯೂ ಹೀಗೆಯೇ ಸಂಭವಿಸುತ್ತದೆ.
ಚಂದ್ರಕಾಂತ ಬಹಳ ಚುರುಕಾಗಿದ್ದ.
ಎಲ್ಕೇಜಿ ದಾಟಿ ಯೂಕೇಜಿ ತಲಪಿದಾಗಲೇ
ಪ್ರಬುದ್ಧರಂತೆ ಕನ್ನಡವನ್ನೂ ಇಂಗ್ಲಿಷನ್ನೂ ಮಾತಾಡುತ್ತಿದ್ದ.
ಓದಲು ಬರೆಯಲು ಕಲಿಯುವುದಕ್ಕೆ ಬಹಳ ಮೊದಲೇ ಇತರರು
ಓದಿ ಹೇಳಿದ್ದನ್ನು ಅರ್ಥ ಮಾಡಿಕೊಳ್ಳುತ್ತಿದ್ದ.
ಮೂರನೇ ವರ್ಷದಲ್ಲೇ ಕೂಡಿಸುವ ಕಳೆಯುವ ಮಾತ್ರವಲ್ಲ,
ಗುಣಿಸುವ ಭಾಗಿಸುವ ಲೆಕ್ಕಗಳನ್ನು ಕೂಡ ಮಾಡಿ
ತೋರಿಸಿ ಶಿಕ್ಷಣ ತಜ್ಞರನ್ನು ಮತ್ತು ಮನೋವಿಜ್ಞಾನಿಗಳನ್ನು ಬೆರಗುಗೊಳಿಸಿದ್ದ.
ಐದನೇ ವರ್ಷದಲ್ಲಿ ಶಾಲೆಗೆ ಸೇರಿಸಲು ಅಂಕಿತ-
ರಜನಿ ದಂಪತಿ
ಚಂದ್ರಕಾಂತನನ್ನು ಕರೆದುಕೊಂಡು ಶಾಲೆಗೆ ಹೋದಾಗ
ಶಾಲೆಯ
ಸಮಸ್ತ ಮಕ್ಕಳು,
ಮಾತ್ರವಲ್ಲ ಎಲ್ಲಾ ಶಿಕ್ಷಕ ಶಿಕ್ಷಕಿಯರೂ
ಗುಂಪುಗೂಡಿದರು.
ಅಷ್ಟರಲ್ಲೇ ಜೀನಿಯಸ್ ಎನಿಸಿಕೊಂಡಿದ್ದ ಚಂದ್ರಕಾಂತನಿಗೆ
ಹೇಗೆ
ಕಲಿಸುವುದು,
ಏನು ಕಲಿಸುವುದು ಎನ್ನುವ ಚಿಂತೆ ಶಿಕ್ಷಕ
ಶಿಕ್ಷಕಿಯರನ್ನು ಕಾಡಿತು.
ಅವನ ಮೈಬಣ್ಣಕ್ಕೆ ಹೊಂದಿಕೊಳ್ಳಲು ಎಲ್ಲರಿಗೂ
ಐದಾರು ತಿಂಗಳು ಬೇಕಾಯಿತು.
ಯೂನಿಫಾರಮ್ಮಿನ ಹೊರಗೆ ಕಾಣಿಸುತ್ತಿದ್ದುದು ಮುಖ
ಮಾತ್ರವಾದುದರಿಂದ ಮೈ ಕೈ ಕಾಲು ನೋಡಲು ಅವನ ಉಡುಪು ಕಳಚಿಸುವ ಮಕ್ಕಳಿಂದ
ಅವನನ್ನು ಪಾರು ಮಾಡಲು ಶಿಕ್ಷಕ ಶಿಕ್ಷಕಿಯರು ಸದಾ ಜಾಗೃತವಾಗಿರಬೇಕಾಯಿತು.
ಒಮ್ಮೆ ಅವನನ್ನು ಬೆತ್ತಲೆ ಮಾಡಿ ಇಡೀ ಶಾಲೆಗೆ
ತೋರಿಸಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಿರ್ಧಾರ ಕೂಡ ಒಮ್ಮೆ ಶಾಲೆಯ
ಹೆಡ್ಮಿಸ್ಸು ಮಾಡಿದ್ದರು.
ಇತರ ಶಿಕ್ಷಕ ಶಿಕ್ಷಕಿಯರ ಅಭಿಪ್ರಾಯಕ್ಕೆ ಮಣಿದು,
ಶಿಕ್ಷಣ ತಜ್ಞರ ಅಭಿಪ್ರಾಯ ಕೇಳಿದಾಗ
'ಹಾಗೆ ಮಾಡಬೇಡಿ.
ಹಾಗೆ ಮಾಡಿದರೆ ಮಗುವಿನ ಮನಸ್ಸಿನ ಮೇಲೆ
ದುಷ್ಪರಿಣಾವುಂಟಾಗುತ್ತದೆ.
ಮುಖ್ಯವಾಗಿ,
ಗಂಡು ಮಗುವಿನ ವಿಚಾರದಲ್ಲಿ ಇದು ಮುಂದಕ್ಕೆ
ಮನೋವ್ಯಾಧಿಗೆ ಕಾರಣವಾಗಬಹುದು'
ಎಂದು ಎಚ್ಚರಿಸಿದರು.
ಅವನ ಮುಖ ಮಾತ್ರ ಸಾಮಾನ್ಯ ಬಿಳಿ ತ್ವಚೆಯಂತೆ ಕಾಣಲು ಬಣ್ಣ
ಬಳಿಯುವ ಸಲಹೆಯನ್ನು ಕೆಲವರು ಮಾಡಿದರು.
ಒಮ್ಮೆ ಸ್ನಾನದ ಹೊತ್ತಿನಲ್ಲಿ ರಜನಿ ಅವನ ಮುಖಕ್ಕೆ
ಚಂದನವರ್ಣದ ಕ್ರೀಮು ಬಳಿದು ನೋಡಿದಳು.
ಆದರೆ ಚಂದನವರ್ಣದಲ್ಲಿ ಶುಭ್ರ ಶ್ವೇತವರ್ಣದ
ಚಂದ್ರಕಾಂತನ ದೇಹದಲ್ಲಿ ಅವನ ಮುಖ ತುಂಬಾ ವಿಲಕ್ಷಣವಾಗಿ ಕಾಣಿಸತೊಡಗಿತು.
'ಉಡುಪು
ಹಾಕಿದಾಗ ಸರಿಯಾಗಿ ಕಾಣಿಸಬಹುದು'
ಎಂದು ಅಂಕಿತ ಹೇಳಿದಾಗ 'ಅದರಿಂದ
ಸಮಸ್ಯೆ ಹೇಗೆ ಪರಿಹಾರವಾದೀತು?
ಶಾಲೆಯ ಮಕ್ಕಳು ಆಗಲೂ ಉಡುಪು ಕಳಚಲು
ಪ್ರಯತ್ನಿಸಬಹುದು.
ಅಲ್ಲದೆ,
ಮುಖದ ಬಣ್ಣವನ್ನಷ್ಟೇ ಬದಲಾಯಿಸಿದರೆ
ಸಾಕಾಗುವುದಿಲ್ಲ.
ಅದಕ್ಕೆ ಹೊಂದುವಂತೆ ಕೂದಲಿಗೆ ಕೂಡ ಕಪ್ಪು ಬಣ್ಣ
ಹಚ್ಚಬೇಕಾಗುತ್ತದಲ್ಲ?'
ಎಂದಳು ರಜನಿ.
ಅಂಕಿತ-
ರಜನಿಯರನ್ನು ಬೇರೆ ಬೇರೆ ರೀತಿಯಲ್ಲಿ
ಚಂದ್ರಕಾಂತನ ಬಣ್ಣದ ಸಮಸ್ಯೆ ಸುತ್ತಿಕೊಂಡಿದ್ದರೂ ಚಂದ್ರಕಾಂತನಿಗೆ ಏನೂ
ಸಮಸ್ಯೆ ಕಾಣಿಸಲಿಲ್ಲ.
ಒಂದೇ ಒಂದು ಸಲ ಕಂಡದ್ದನ್ನು ಕೇಳಿದ್ದನ್ನು
ನೆನಪಿನಲ್ಲಿಟ್ಟುಕೊಳ್ಳುವ ಪ್ರತಿಭೆಯಿದ್ದ ಚಂದ್ರಕಾಂತನಿಗೆ ಕಲಿಕೆಗೆ
ಸಂಬಂಧಿಸಿದ ಯಾವ ಸಮಸ್ಯೆಯೂ ಇರಲಿಲ್ಲ.
ಯಾವ ಪರೀಕ್ಷೆಯೇ ಇರಲಿ,
ಪ್ರತಿ ಸಲ ನೂರರಲ್ಲಿ ನೂರು ಅಥವಾ ತೊಂಬತ್ತೆಂಟು-ತೊಂಬತ್ತೊಂಬತ್ತು
ಅಂಕ ಪಡೆಯುತ್ತಿದ್ದ.
ಚಂದ್ರಕಾಂತನಿಗೆ ಈಜು ಬಿಟ್ಟು ಬೇರೆ ಯಾವ
ಆಟದಲ್ಲಿಯೂ ಆಸಕ್ತಿಯಿರಲಿಲ್ಲ.
ಟಿವಿಯಲ್ಲಿ ಕೂಡ ಅವನು ನೋಡುತ್ತಿದ್ದುದು
ಈಜಾಟವನ್ನು ಮಾತ್ರ.
ಎಸ್ಸೆಸ್ಸೆಲ್ಸಿ ತಲಪುವ ಮೊದಲೇ ಚಂದ್ರಕಾಂತ ಹಲವು ಈಜು
ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದ.
ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಪ್ರಶಸ್ತಿ
ಗಳಿಸಿದ್ದ.
ಓದಿನ ನಂತರ ಅವನ ಒಂದೇ ಒಂದು ಆಸಕ್ತಿಯೆಂದರೆ ಈಜು.
ಒಂಬತ್ತನೇ ತರಗತಿಯಲ್ಲಿರುವಾಗಲೇ ಅಪ್ಪ ಅಧಿಕೃತ
ಪ್ರವಾಸಕ್ಕೆ ಹೋದ ಸಂದರ್ಭಗಳಲ್ಲಿ ಅಮ್ಮನ ಮನವೊಲಿಸಿ ಕಾರು ಚಲಾಯಿಸಲು
ಕಲಿತುಕೊಂಡಿದ್ದ.
ಚಂದ್ರಕಾಂತ ಸ್ಫುರದ್ರೂಪಿಯೂ ಆಗಿದ್ದುದರಿಂದ ಯಾವ
ಸ್ಪರ್ಧೆಯಲ್ಲಿ ಭಾಗವಹಿಸಿದರೂ ಅವನ ಮೈಬಣ್ಣ ಮತ್ತು ರೂಪದಿಂದಾಗಿ ಎಲ್ಲರ ಗಮನ
ಸೆಳೆಯುತ್ತಿದ್ದ.
ಫೊಟೊಗ್ರಾಫರುಗಳಂತೂ ಚಂದ್ರಕಾಂತ ಕಣ್ಣಿಗೆ ಬಿದ್ದೊಡನೆ
ಅವನ ಫೊಟೊ ಹಿಡಿಯದೆ ಬಿಡುತ್ತಿರಲಿಲ್ಲ.
ಟಿವಿಯ ಮೇಲಂತೂ ಅವನನ್ನು ನೂರಾರು ಸಲ
ಕಾಣಿಸಲಾಗಿತ್ತು.
ಇಷ್ಟಾದರೂ ಯಾವುದೇ ಕಂಪೆನಿ ಅವನಿಗೆ ರೂಪದರ್ಶಿಯಾಗಲು
ಆಮಂತ್ರಿಸಲಿಲ್ಲ.
ಅದಕ್ಕೆ ಕಾರಣ ಅವನ ಮೈಬಣ್ಣವಾಗಿತ್ತು.
ತ್ವಚೆಯನ್ನು ಬಿಳಿ ಮಾಡುವ ಸಾಧನಗಳ ಕಂಪೆನಿಗಳು
ಕೂಡ ಅವನ ಬಳಿ ಬರಲಿಲ್ಲ,
ಕಾರಣ ಅವನ ಮೈಬಣ್ಣ ಅವಾಸ್ತವಿಕ ರಜತವರ್ಣವಾಗಿತ್ತು.
ಯಾವ ಮೈಬಣ್ಣದ ಹುಡುಗಿಯೇ ಆಗಿರಲಿ,
ಅವಳನ್ನು ಶುಭ್ರ ಶ್ವೇತವರ್ಣೆಯಾಗಿ ತೋರಿಸಲು
ಸಾಧ್ಯವಿದ್ದುದರಿಂದ ಪ್ರಸಾಧನ ಸಾಮಾಗ್ರಿಯನ್ನು ತಯಾರಿಸುವ ಕಂಪೆನಿಗಳಿಗೆ
ನಿಜವಾದ ಶ್ವೇತವರ್ಣೀಯ ಎಂದು ಜಗಜ್ಜಾಹೀರಾದ ಹುಡುಗ ಅಥವಾ ಹುಡುಗಿಯ
ಅಗತ್ಯವಿರಲಿಲ್ಲ.
ಟಿವಿ ಚಾನೆಲುಗಳು ಚಂದ್ರಕಾಂತನನ್ನು ಪ್ರದರ್ಶಿಸಿದ್ದು
ಒಂದು ವಿಚಿತ್ರ ಶಿಶು ಎಂದೇ ಹೊರತು ಅವನ ಅಸದೃಶ ಶ್ವೇತವರ್ಣದ ಕಾರಣದಿಂದಲ್ಲ.
ಓದಿನಲ್ಲಿಯೂ ಉಳಿದೆಲ್ಲ ವಿಷಯಗಳಿಗಿಂತ
ಚಂದ್ರಕಾಂತನ ಆಸಕ್ತಿಯ ವಿಷಯಗಳು ವಿಜ್ಞಾನ ಮತ್ತು ಗಣಿತ.
ಎಸ್ಸೆಸ್ಸೆಲ್ಸಿಯಲ್ಲಿ ತೊಂಬತ್ತೆರಡು ಪರ್ಸೆಂಟ್
ಪಡೆದ ಚಂದ್ರಕಾಂತ ಗಣಿತದಲ್ಲಿ ನೂರರಲ್ಲಿ ನೂರು ಅಂಕ ಗಳಿಸಿದ್ದ.
ಪಿಯುಸಿಯಲ್ಲಿ ರ್‍ಯಾಂಕ್ ಗಳಿಸುವುದು ಖಚಿತವಿತ್ತು.
'ಪಿಯುಸಿ
ನಂತರ ಏನು ಮಾಡುತ್ತಿ?'
ಎಂದು ಕೇಳಿದರೆ,
ಅವನದು 'ಡಾಕ್ಟರಾಗಬೇಕು'
ಎನ್ನುವ ಒಂದೇ ಉತ್ತರ.
ಆದರೆ ಮಗ ಇಂಜಿನಿಯರಾಗಬೇಕೆನ್ನುವುದು ಅಂಕಿತ ರಜನಿ
ದಂಪತಿಯ ಮಹದಾಶೆಯಾಗಿತ್ತು.
ಯಾಕೆಂದರೆ,
ಡಾಕ್ಟರಾದರೆ ಎಂಡಿ ತನಕ ಓದಿಸಲು ಲಕ್ಷಗಟ್ಟಳೆ ಹಣ
ಸುರಿಯಬೇಕಾಗಿತ್ತು.
ಅಷ್ಟು ಹಣ ಅವರ ಬಳಿ ಇರಲಿಲ್ಲ.
ಡಾಕ್ಟರಾದರೆ ಸುಲಭದಲ್ಲಿ ಕೆಲಸ ಸಿಗುವುದಿಲ್ಲ.
ಸ್ವಂತ ಪ್ರಾಕ್ಟೀಸ್ ಮಾಡಲು ಮತ್ತಷ್ಟು ಬಂಡವಾಳ
ಬೇಕು.
ಆದ್ದರಿಂದ ಇಂಜಿನಿಯರಾಗುವುದು ಕ್ಷೇಮ ಎನ್ನುವುದು ಅವರ
ಭಾವನೆ.
ಸಾಫ್ಟ್‌ವೇರ್ ಇಂಜಿನಿಯರಾದರೆ ಕೂಡಲೇ ಒಳ್ಳೆಯ ಸಂಬಳದ
ನೌಕರಿ ಸಿಗುತ್ತದೆ,
ವಿದೇಶಕ್ಕೂ ಹೋಗಬಹುದು.
ನೌಕರಿಯಿಂದ ನಿವೃತ್ತಿಯಾಗುವ ಕಾಲಕ್ಕಾದರೂ
ಸಿರಿವಂತನಾಗಬೇಕು ಎನ್ನುವ ಮಹತ್ವಾಕಾಂಕ್ಷೆ ಅಂಕಿತನ ಮನದಾಳದಲ್ಲಿದ್ದರೆ,
ಸಾಧ್ಯವಾದಷ್ಟು ಬೇಗನೆ ಒಂದು ಸೈಟ್ ಕೊಂಡುಕೊಂಡು
ಮನೆ ಕಟ್ಟಿಸಿಕೊಳ್ಳಬೇಕು ಎನ್ನುವ ಹಿರಿಯಾಸೆ ರಜನಿಯದಾಗಿತ್ತು.
ಈಜಿನಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದ
ಚಂದ್ರಕಾಂತನಿಗೆ ಪಿಯುಸಿ ಎರಡನೆಯ ವರ್ಷದಲ್ಲಿದ್ದಾಗ ಸಮುದ್ರದಲ್ಲಿ
ಈಜಬೇಕೆಂದು ಮನಸ್ಸಾಯಿತು.
ಆಗೊಮ್ಮೆ ಈಗೊಮ್ಮೆ ಸಮುದ್ರದಲ್ಲಿ ಈಜುವ ಕುರಿತಾಗಿ
ಮಾತಾಡುತ್ತಿದ್ದ ಚಂದ್ರಕಾಂತ ದಸರಾ ರಜದಲ್ಲಿ ಸ್ನೇಹಿತರ ಜೊತೆ ಮಂಗಳೂರಿಗೆ
ಹೋಗುತ್ತೇನೆ ಎಂದು ಹೇಳಿದಾಗ,
ಗಂಡ ಹೆಂಡತಿ ಇಬ್ಬರಿಗೂ ಆ ಪ್ರವಾಸದ ಉದ್ದೇಶ
ಸ್ಪಷ್ಟವಾಯಿತು.
ಜೊತೆಗೆ ತುಂಬಾ ಗಾಬರಿಯಾಯಿತು.
''ಸಮುದ್ರದಲ್ಲಿ
ಈಜುವುದೆಂದರೆ ಈಜುಕೊಳದಲ್ಲಿ ಈಜಿದ ಹಾಗೆ ಅಲ್ಲ.
ಅದಕ್ಕೆ ಕೂಡ ಯಾರದಾದರೂ ಮಾರ್ಗದರ್ಶನ
ಬೇಕಾಗುತ್ತದೆ''
ಎಂದು ತಂದೆ ಹೇಳಿದಾಗ,
ಚಂದ್ರಕಾಂತ ತಾನು ಆಳ ಸಮುದ್ರದಲ್ಲಿ ಈಜಲು
ಹೋಗುತ್ತಿಲ್ಲ,
ದಡಕ್ಕೆ ಹತ್ತಿರ ಈಜಲು ಈಜು ಗೊತ್ತಿದ್ದರೆ ಸಾಕು ಎಂದ.
ಆದರೂ ಈಗ ಬೇಡ ನಿನ್ನ ಪಿಯುಸಿ ಕೊನೆಯ ಪರೀಕ್ಷೆಯ
ನಂತರ ನಾವೆಲ್ಲ ಒಟ್ಟಿಗೇ ಹೋಗುವ ಎಂದು ತಂದೆ ಹೇಳಿದರೂ ದಸರಾ ರಜದಲ್ಲಿ
ಸ್ನೇಹಿತರ ಜೊತೆ ಹೋಗುತ್ತೇನೆಂದು ಹಟ ಹಿಡಿದ ಚಂದ್ರಕಾಂತ.
ಅವನ ಜೊತೆಗೆ ಸಮುದ್ರ ನೋಡಲು ಹೊರಟಿದ್ದ ಇತರ
ಮೂವರೂ ಚೆನ್ನಾಗಿ ಈಜು ಬಲ್ಲವರು ಎಂದು ಖಾತ್ರಿಪಡಿಸಿಕೊಂಡ ಮೇಲೆ,
ಹಲವು ಶರ್ತಗಳನ್ನು ವಿಧಿಸಿ ತಮ್ಮ ಮಗನಿಗೆ
ಸ್ನೇಹಿತರ ಜೊತೆ ಮಂಗಳೂರಿಗೆ ಹೋಗಲು ಒಪ್ಪಿಗೆಯಿತ್ತರು.
ಪಣಂಬೂರು ಸಮುದ್ರ ತೀರದಲ್ಲಿ ನಾಲ್ವರೂ ಕಡಲಿನ
ನೀರಿಗಿಳಿದರು.
ನಾಲ್ವರಿಗೂ ಸಮುದ್ರ ಹೊಸತಾದ್ದರಿಂದ ಯಾರೂ ಅಲೆಗಳ
ಹೊಡೆತದಾಚೆ ಈಜುವ ಸಾಹಸಕ್ಕೆ ಹೋಗಲಿಲ್ಲ.
ಮೂವರೂ ನೀರಿನಲ್ಲಿ ಸುಮಾರು ಒಂದು ಗಂಟೆ ಕಳೆದು
ದಡಕ್ಕೆ ಮರಳುವಷ್ಟರಲ್ಲಿ ಎಲ್ಲರ ಮನೆಯಿಂದಲೂ ಹಲವು ಸಲ ಫೋನುಕರೆ ಬಂದಾಗಿತ್ತು.
ತಾವು ಸುರಕ್ಷಿತವಾಗಿ ಸಮುದ್ರದಲ್ಲಿ ಈಜಿ ಈಚೆ
ಬಂದಿದ್ದೇವೆ.
ಇವತ್ತು ರಾತ್ರಿಯೇ ಬಸ್ಸು ಹತ್ತುತ್ತಿದ್ದೇವೆ,
ನಾಳೆ ಬೆಳಗ್ಗೆ ಐದು ಗಂಟೆಗೆ
ಬೆಂಗಳೂರಿನಲ್ಲಿರುತ್ತೇವೆ ಎಂದು ಚಂದ್ರಕಾಂತ ಹೇಳಿದ್ದನ್ನು ಕೇಳಿದ ನಂತರವೇ
ಅಂಕಿತ-
ರಜನಿ ದಂಪತಿಗೆ ನಿರಾಳವಾಗಿ ಉಸಿರಾಡಲಾದದ್ದು.
ಓದಿನಲ್ಲಿ ಚಂದ್ರಕಾಂತ ಅಸಾಧಾರಣ
ಬುದ್ಧಿವಂತನಾಗಿದ್ದುದರಿಂದ 'ಇವನು
ವಿಶ್ವವಿಖ್ಯಾತ ವಿಜ್ಞಾನಿಯಾಗುತ್ತಾನೆ'
ಎಂದು ಜೋತಿಷಿಗಳಲ್ಲದವರು ಕೂಡ ಹೇಳುತ್ತಿದ್ದರು.
ಕಡಲಿನಲ್ಲಿ ಈಜಿದ ಅನುಭವದ ಬಗ್ಗೆ ಹರಟುತ್ತಾ
ಬೆಳಿಗ್ಗೆ ಐದು ಗಂಟೆಯ ಹೊತ್ತಿಗೆ ಮೆಜೆಸ್ಟಿಕಿನಲ್ಲಿ ನಾಲ್ವರು ಗೆಳೆಯರೂ
ಒಬ್ಬರನ್ನೊಬ್ಬರು ಬೀಳ್ಕೊಂಡರು.
ಚಂದ್ರಕಾಂತ ಒಂದು ಆಟೊ ಹೊಕ್ಕು,
'ಹನುಮಂತನಗರ'
ಎಂದಾಗ ಆಟೊದವನು ಆಟೊ ಚಾಲೂ ಮಾಡುವ ಮೊದಲು ಸ್ವಲ್ಪ ಹೊತ್ತು ಅವನ ಮುಖವನ್ನೇ
ನೋಡಿದ.
ಅದೇನೂ ಚಂದ್ರಕಾಂತನಿಗೆ ಹೊಸ ಅನುಭವವಲ್ಲ.
ಮಗುವಾಗಿದ್ದ ಕಾಲದಿಂದಲೇ ಜನ ತನ್ನ ಮುಖವನ್ನು
ಪುನಃ ಪುನಃ ನೋಡುವುದು ಅವನಿಗೆ ಗೊತ್ತಿದ್ದ ವಿಚಾರವಾದ್ದರಿಂದ ಅದು ಅವನಿಗೆ
ಅಭ್ಯಾಸವಾಗಿ,
ಕ್ರಮೇಣ ಜನರ ಈ ವಿಶೇಷ ವೀಕ್ಷಣೆ ಅವನ ಗಮನಕ್ಕೇ
ಹೋಗುತ್ತಿರಲಿಲ್ಲ.
ಚಂದ್ರಕಾಂತನ ಮುಖವನ್ನು ಟಿವಿಯ ಮೇಲೆ ಕಾಣದವರೇ
ಇಲ್ಲವೆಂದರೆ ಅತಿಶಯೋಕ್ತಿಯಲ್ಲ.
ಆದರೆ ಪತ್ರಿಕೆ ಪುಟಗಳಲ್ಲಿ ಅವನ ಮುಖ ಅದರ
ನಿಜವಾದ ಬಣ್ಣದಲ್ಲಿ ಮುದ್ರಣಗೊಳ್ಳಲು ಸಾಧ್ಯವಿಲ್ಲದ್ದರಿಂದ ಸುಮಾರಾಗಿ
ಕೆನೆಯ ಬಣ್ಣದಲ್ಲಿ ಮುದ್ರಿತವಾಗುತ್ತಿತ್ತು.
ಚಂದ್ರಕಾಂತನ ನಿಜವರ್ಣದಲ್ಲಿ ಯಾಕೆ
ಮುದ್ರಿಸಲಾಗುತ್ತಿಲ್ಲ ಎನ್ನುವುದಕ್ಕೆ ಕೆಲವು ಪತ್ರಿಕೆಗಳು ಪ್ರತ್ಯೇಕ
ವಿವರಣೆ ನೀಡುತ್ತಿದ್ದರು.
ಆಟೊದಿಂದ ಇಳಿದು ಮನೆಯ ಕರೆಗಂಟೆ
ಒತ್ತುವುದಕ್ಕೆ ಮೊದಲೇ ಲೈಟು ಹಾಕಿ ಬಾಗಿಲು ತೆರೆದ ರಜನಿ ಮಗನ ಮುಖವನ್ನು
ನೋಡಿ 'ಇದೇನಾಯ್ತೋ
ನಿಂಗೆ!'
ಎಂದು ಚೀರಿದಳು.
ಕೂಡಲೇ ಅಂಕಿತ ಕೂಡ ಗಾಬರಿಯಿಂದ
'ಏನು ಏನು'
ಎಂದು ಎದ್ದು ಓಡಿಬಂದ.
ಚಂದ್ರಕಾಂತನ ಹಾಲಿನ ಬಣ್ಣದ ಮುಖದ ಮೇಲೆ ಕೂದಲಿನ
ಎಳೆಗಿಂತಲೂ ಸೂಕ್ಷ್ಮವಾದ ಅಸಂಖ್ಯಾತ ಕೆಂಪು ಗೆರೆಗಳು ಮೂಡಿದ್ದವು.
ಮುಖದ ಮೇಲೆ ಮಾತ್ರ ಹೀಗಾಗಿದೆಯೆ ಮೈ ಮೇಲೂ
ಆಗಿದೆಯೆ ಎಂದು ಉಡುಪು ಕಳಚಿ ನೋಡಿದರೆ ನಖಶಿಖಾಂತ ಹಾಗೇ ಆಗಿತ್ತು.
''ಯಾವಾಗ ಆಯ್ತು
ಹೀಗೆ?
ನಿಂಗೆ ಏನೂ ಗೊತ್ತಾಗಲಿಲ್ಲವೆ?''
ರಜನಿ ಕೇಳಿದಳು.
''ಯಾವಾಗ ಅಂತ
ಗೊತ್ತಿಲ್ಲಮ್ಮ.
ಫ್ರೆಂಡ್ಸ್ ಏನೂ ಹೇಳಲಿಲ್ಲ''
ಚಂದ್ರಕಾಂತನೆಂದ.
ಮನಸ್ಸಿನೊಳಗಿನ ಬದಲಾವಣೆಗಳನ್ನು ಕೂಡ
ಗುರುತಿಸುವ ಶಕ್ತಿಯುಳ್ಳ ಫ್ರೆಂಡ್ಸಿಗೆ ಚಂದ್ರಕಾಂತನ ಮುಖದ ಮೇಲೆ ಆದ
ಬದಲಾವಣೆ ಯಾಕೆ ತಿಳಿಯಲಿಲ್ಲ ಎಂದು ಆಶ್ಚರ್ಯಪಟ್ಟರು ಅಂಕಿತ ಮತ್ತು ರಜನಿ.
''ಡೋಂಟ್ ಯೂ ಫೀಲ್
ಎನಿಥಿಂಗ್?
ಆರ್ ಯೂ ಓಕೆ?''
ಎಂದು ಕೇಳಿದ ಅಂಕಿತ.
''ಐ ಆಮ್ ಪರ್‍ಫೆಕ್ಟ್ಲಿ
ಓಕೆ.
ಆದ್ರೆ ಅಪ್ಪ ನಾನು ಸಮುದ್ರದ ನೀರಿನಲ್ಲಿ ಮುಳುಗಿದಾಗ ಒಂದು ವಿಚಿತ್ರ ಅನುಭವ
ಆಯ್ತು.
ಇಡೀ ಮೈಯಲ್ಲಿ ಒಮ್ಮೆ ಕರೆಂಟ್ ಹರಿದ ಹಾಗೆ ಆಯ್ತು.
'ಮೊದಲ
ಸಲ ಸಮುದ್ರದ ನೀರಿಗೆ ಇಳಿಯುವಾಗ ಒಂದು ಕ್ಷಣ ಸಾಮಾನ್ಯವಾಗಿ ಎಲ್ಲರಿಗೂ ಹಾಗೆ
ಆಗುತ್ತೆ.
ಅದೊಂಥರಾ ರೋಮಾಂಚನ'
ಅಂತ ಫ್ರೆಂಡ್ಸ್ ಹೇಳಿದ್ರು.
ಆದ್ರೆ ನಂಗೆ ಹಾಗಾಯ್ತಲ್ಲ,
ಅದು ಒಂದು ಕ್ಷಣ ಅಲ್ಲ.
ರೋಮಾಂಚನಾನೂ ಅಲ್ಲ.
ಸುಮಾರು ಐದು ನಿಮಿಷ ಹಾಗೆ ಆಗ್ತಾನೇ ಇತ್ತು.
ಅದನ್ನ ಗೆಳೆಯರ ಬಳಿ ಹೇಳಿದಾಗ ಅವ್ರು ನಕ್ಕು,
'ನೋಡಪ್ಪಾ
ಹುಲ್ಲಿನಿಂದಾರಂಭವಾಗಿ ಮನುಷ್ಯನವರೆಗೆ ಪ್ರತಿಯೊಂದೂ ಮೊದಲು ಇದ್ದದ್ದು ಇದೇ
ಸಮುದ್ರದ ನೀರಿನಲ್ಲಿ ಅಂತ ಡಾರ್ವಿನ್ ಹೇಳ್ಳಿಲ್ವ?
ಅವುಗಳಲ್ಲಿ ಶಾಶ್ವತವಾಗಿ ಸಮುದ್ರವನ್ನು ಬಿಟ್ಟು
ನೆಲದ ಮೇಲಕ್ಕೆ ಬಂದವುಗಳಲ್ಲಿ ಸಮುದ್ರದ ನೀರಿನ ಆಕರ್ಷಣೆ ಉಳಿದದ್ದು
ಮನುಷ್ಯನಿಗೆ ಮಾತ್ರ.
ಆ ಮನುಷ್ಯರಲ್ಲಿ ಕೆಲವರಲ್ಲಿ ಸ್ವಾಭಾವಿಕವಾಗಿಯೇ ಸ್ವಲ್ಪ
ಹೆಚ್ಚಿನ ಮಟ್ಟದಲ್ಲಿ ಇರುವ ಸೋಲಾರ್ ಇಲೆಕ್ಟ್ರಿಕಲ್ ಎನರ್ಜಿ ಸಮುದ್ರದ
ನೀರಿನೊಡನೆ ರಿಯಾಕ್ಟ್ ಆಗುವಾಗ ಹೀಗಾಗ್ತದೆ ಅಂದ್ರು'
ಎಂದ ಚಂದ್ರಕಾಂತ.
ಆವಾಗಲೇ ಚಿಂತೆಯ ಸಮುದ್ರದಲ್ಲಿ
ಮುಳುಗಿಹೋಗಿದ್ದ ಅಂಕಿತ-
ರಜನಿ ದಂಪತಿಗಳ ಕಿವಿಗೆ ಜೀನಿಯಸೂ ವಾಚಾಳಿಯೂ ಆದ ಮಗ
ವಿವರಿಸಿದ ವೈಜ್ಞಾನಿಕ ಸಿದ್ಧಾಂತ ಕೇಳಿಸಲೇ ಇಲ್ಲ.
ಅಂಕಿತ ಕುಟುಂಬ ವೈದ್ಯರಿಗೆ ಫೋನು ಮಾಡಿ
'ಚಂದ್ರಕಾಂತನಿಗೆ
ಏನೋ ಆಗಿದೆ.
ತಕ್ಷಣ ಬರಬೇಕು''
ಎಂದ.
ಐದೇ ನಿಮಿಷದಲ್ಲಿ ದಯಾನಂದ ಸಾಗರರ ಕಾರು ಮನೆಯ
ಮುಂದೆ ಬಂದು ನಿಂತಿತು.
ಚಂದ್ರಕಾಂತನನ್ನು ಪರೀಕ್ಷಿಸಿದ ಡಾಕ್ಟರು,
''ಗಾಬರಿಯಾಗುವಂಥದೇನೂ ಇಲ್ಲ.
ಸಮುದ್ರದ ಉಪ್ಪು ನೀರಿನಿಂದಾಗಿ ಏನೋ ರಿಯಾಕ್ಷನ್
ಆಗಿದೆ.
ನಿಮಗೆ ಕಾಣಿಸುತ್ತಿರುವುದು ಶರೀರದ ಮೇಲಿರುವ
ಕೋಟ್ಯಾನುಕೋಟಿ ಕ್ಯಾಪಿಲ್ಲರಿಗಳಲ್ಲಿ ಕೆಲವು ಮಾತ್ರ.
ಒಂದು ಇಂಜೆಕ್ಷನ್ ಕೊಡ್ತೇನೆ.
ಕ್ರಮೇಣ ಅರಿಯಾಗುತ್ತೆ''
ಎಂದು ಇಂಜಕ್ಷನ್ ಚುಚ್ಚಿ ಹೋದರು.
ಪ್ರಯಾಣದ ಬಳಲಿಕೆ,
ಇಂಜೆಕ್ಷನಿನ ಪ್ರಭಾವ ಎರಡೂ ಸೇರಿ
ನಿದ್ರಾಸಾಗರದಲ್ಲಿ ಮುಳುಗಿದ ಚಂದ್ರಕಾಂತ ಎಚ್ಚರೊಂಡಾಗ ಸಂಜೆ ಐದು ಗಂಟೆ.
ಚಂದ್ರಕಾಂತನ ಮುಖ ಮತ್ತು ಮೈಮೇಲಿದ್ದ ಕೆಂಪು
ಗೆರೆಗಳು ಅದೃಶ್ಯವಾಗಿದ್ದವು.
ಅದರ ಜೊತೆಗೆ ಗೋಚರಿಸಿದ ಅಚ್ಚರಿಯ ಸಂಗತಿಯೆಂದರೆ
ಚರ್ಮದ ಬಿಳಿಬಣ್ಣ ಮಾಯವಾಗಿ ಸಾಮಾನ್ಯವಾದ ಚರ್ಮದ ಬಣ್ಣ!
ಈ ಪವಾಡಸದೃಶ ಬದಲಾವಣೆಯನ್ನು ಕಂಡು ಅಂಕಿತ ರಜನಿ
ದಂಪತಿಗೆ ಉಂಟಾದ ಸಂತೋಷ ಅರ್ವಚನೀಯವಾಗಿತ್ತು.
ಊಟದ ಬಳಿಕ ತನ್ನ ಕಡಲೀಜಿನ ಅನುಭವವನ್ನು ಕೇಳಲು
ಕಾತರದಿಂದ ಕಾದಿದ್ದ ತಾಯಿತಂದೆಗೆ ಅದನ್ನು ವಿವರವಾಗಿ ಹೇಳಿ,
ಅವರ ಪ್ರಶ್ನೆಗಳಿಗೆಲ್ಲ ಉತ್ತರಿಸಿ ಚಂದ್ರಕಾಂತ
ಮತ್ತೆ ಮಲಗಿದ.
ಅಂಕಿತ-
ರಜನಿ ದಂಪತಿ ಕೂಡ
'ಮಗ
ಸುರಕ್ಷಿತವಾಗಿ ವಾಪಾಸು ಬರಲಿ'
ಎಂದು ಯಾವ ದೇವರುಗಳಿಗೆಲ್ಲ ಹರಕೆ ಹೊತ್ತಿದ್ದರೋ ಆ ದೇವರುಗಳನ್ನೆಲ್ಲ
ನೆನಪಿಸಿಕೊಂಡು ಬೇಗನೆ ಮಲಗಿ ಆನಂದಾನುಭವದಲ್ಲಿ ನಿಧಾನವಾಗಿ ನಿದ್ದೆಹೋದರು.
ಬೆಳಗ್ಗೆ ಎಂದಿಗಿಂತ ಸ್ವಲ್ಪ ಬೇಗನೆ ಎದ್ದ
ಮಗನ ಮುಖ ಮೈಯನ್ನು ನೋಡಿದಾಗ ಅಂಕಿತ ಮತ್ತು ರಜನಿಗೆ ಇನ್ನೇನು ಪ್ರಜ್ಞೆ
ಕಳೆದುಕೊಂಡು ಬಿದ್ದುಬಿಡುತ್ತೇವೆ ಎಂದನಿಸಿತು.
ಏನಾಗಿತ್ತೆಂದರೆ,
ಚಂದ್ರಕಾಂತನ ಚರ್ಮದ ಡರ್ಮಿಸ್ ಮತ್ತು ಎಪಿಡರ್ಮಿಸ್
ಎರಡೂ ಅದೃಶ್ಯವಾಗಿತ್ತು.
ವಾಸ್ತವದಲ್ಲಿ,
ಅದೃಶ್ಯವಾಗಿರಲಿಲ್ಲ ಪಾರದರ್ಶಕವಾಗಿದೆ ಎಂದು
ಸ್ಪರ್ಶಿಸಿ ನೋಡಿದಾಗ ತಿಳಿಯಿತು.
ಅಷ್ಟೇ ಅಲ್ಲ,
ಡರ್ಮಿಸ್ ಮತ್ತು ಎಪಿಡರ್ಮಿಸಿಗೆ ಹೊಂದಿಕೊಂಡು
ಮಾನವ ಶರೀರದಲ್ಲಿ ಎಲ್ಲೆಲ್ಲ ಮ್ಯೂಕಸ್ ಮೆಂಬ್ರೇನ್ ಮತ್ತು ಮಾಂಸಲ ಭಾಗ
ಇರುತ್ತದೋ ಅದು ಕೂಡ ಚಂದ್ರಕಾಂತನ ಶರೀರದಲ್ಲಿ ಪಾರದರ್ಶಕವಾಗಿ ಪರಿವರ್ತನೆ
ಹೊಂದಿದ್ದರಿಂದ ಕಣ್ಣಿನೊಳಗಿನ ಕಣ್ಣುಗಳು,
ಮಿದುಳು,
ಹೃತ್ಕೋಶಗಳು,
ಶ್ವಾಸಕೋಶಗಳು,
ಯಕೃತ್ತು,
ಜೀರ್ಣಾಂಗವ್ಯೂಹ,
ಮೂತ್ರಪಿಂಡಗಳು-ಹೀಗೆ
ದೇಹದೊಳಗಿನ ಪ್ರತಿಯೊಂದು ಅಂಗವೂ ಅವುಗಳ ನಿರಂತರವಾದ ಕ್ರಿಯೆಯ ಸಹಿತ
ಕಾಣಿಸುತ್ತಿತ್ತು.
ಅಂಕಿತ ಮತ್ತು ರಜನಿ ದಂಪತಿ ಮಾತು ಕಳೆದುಕೊಂಡವರಂತೆ,
ವಿಗ್ರಹದಂತೆ ಕುಳಿತುಬಿಟ್ಟರು.
ಏನು ಮಾಡಬೇಕು,
ಯಾರಲ್ಲಿ ಹೇಳಬೇಕು,
ಯಾವ ಡಾಕ್ಟರಲ್ಲಿಗೆ ಹೋಗಬೇಕು ಎಂದು
ನಿರ್ಧರಿಸಲಾಗದ ವಿವಶತೆಯಲ್ಲಿ ಹೊತ್ತು ಹೋದುದೇ ತಿಳಿಯಲಿಲ್ಲ.
ಮಗನೊಡನೆ ಮಾತಾಡುವುದು ಕೂಡ ಮರೆತುಹೋಯಿತು.
ತಾಯಿತಂದೆಗೆ ಏನಾಯಿತು,
ಯಾಕೆ ಹೀಗೆ ಕಣ್ಣು ಬಿಟ್ಟು ನೋಡುತ್ತಿದ್ದಾರೆ
ಎಂದು ಚಂದ್ರಕಾಂತನಿಗೆ ಅರಿವಾದದ್ದು ತನ್ನ ದೇಹವನ್ನು ನೋಡಿಕೊಂಡ ಮೇಲೆಯೇ.
ಅವನಿಗೆ ಕ್ಷಣ ಕಾಲದ ಶಾಕಿನ ನಂತರ
ಅಚ್ಚರಿಯೆನಿಸಿತು.
ಮೈ ನೋಡಿಕೊಂಡ ಮೇಲೆ ಅವನು ನಿಲುವುಗನ್ನಡಿಯಲ್ಲಿ ನೋಡಿದ.
ತನ್ನ ಮಿದುಳನ್ನೇ ನೋಡಿ ಅಚ್ಚರಿಗೊಂಡ.
ಅದರಲ್ಲಿ ನಡೆಯುತ್ತಿದ್ದ ಸ್ಪಂದನವನ್ನು
ಕುತೂಹಲದಿಂದ ನೋಡುವುದರಲ್ಲಿ ಮೈಮರೆತ.
ಮತ್ತೊಮ್ಮೆ ಮೈ ಮುಖ ಕೈ ಕಾಲು ನೋಡಿಕೊಂಡ.
ಆದರೆ ಅದಕ್ಕಿಂತೆಲ್ಲ ತನ್ನ ಮಿದುಳು
ಕುತೂಹಲದಾಯಕವಾಗಿ ಅವನಿಗೆ ಕಾಣಿಸಿತು.
ನೋಡುತ್ತಿರುವಂತೆಯೇ ಯಾವ ವಿಜ್ಞಾನಿಯೂ
ಕಾಣದ್ದನ್ನು ತಾನು ಕಾಣುತ್ತಿದ್ದೇನೆ ಎಂದರಿವಾಗಿ ರೋಮರಹಿತವಾಗಿ
ರೋಮಾಂಚಿನಾದ.
ತಾನು ಪಾರದರ್ಶಕವಾಗಿರುವ ಬಗ್ಗೆ ಅವನಿಗೆ ಏನೂ ಅನಿಸಲಿಲ್ಲ.
ಅವನು ಎಂದಿನಂತೆಯೇ ಇದ್ದ.
ಅಪ್ಪ ಅಮ್ಮ ಇನ್ನೂ ಶಾಕಿನಿಂದ ಹೊರಬರಲಾಗದ
ಮೌನದಲ್ಲಿರುವಾಗಲೇ ಹಲ್ಲು ತಿಕ್ಕಿ,
ಸ್ನಾನ ಮಾಡಿ ತಿಂಡಿ ತಿನ್ನಲು ಸಿದ್ಧನಾಗಿ,
''ಅಮ್ಮ ತಿಂಡಿ''
ಎಂದಾಗಲೇ,
ತಾವಿಷ್ಟು ಹೊತ್ತು ಇದ್ದುದು ವಾಸ್ತವದಲ್ಲಿ,
ಕನಸಿನಲ್ಲಿ ಅಲ್ಲ ಎನ್ನುವುದು ಖಾತ್ರಿಯಾಗಿ
ಇಬ್ಬರೂ ಕುಳಿತಲ್ಲಿಂದ ಎದ್ದರು.
ಅಂಕಿತ ಕುಟುಂಬ ವೈದ್ಯರಿಗೆ ಫೋನು ಮಾಡಿ ತಕ್ಷಣ
ಬರಬೇಕು ಎಂದ.
ಚಂದ್ರಕಾಂತನನ್ನು ನೋಡಿದ ಡಾಕ್ಟರ್ ದಯಾನಂದ ಸಾಗರ್
ಶಾಕಿನಿಂದ ಹೊರಬರಲು ಭರ್ತಿ ಮೂರು ನಿಮಿಷ ಬೇಕಾಯಿತು.
ಮೂರು ನಿಮಿಷದ ನಂತರ ಕುಳಿತಲ್ಲಿಂದ ವಿಗ್ರಹಕ್ಕೆ
ಜೀವ ಬಂದಂತೆ ಎದ್ದ ಡಾಕ್ಟರು ಮತ್ತೆ ಚಂದ್ರಕಾಂತನ ಕಡೆಗೆ ಕಣ್ಣು ಹಾಯಿಸಲು
ಕೂಡ ಆಗದೆ ಹೋಗಿಬಿಟ್ಟರು.
ಸುದ್ದಿ ಮನುಷ್ಯನಿಂದ ಮನುಷ್ಯನಿಗೆ,
ಮನುಷ್ಯನಿಂದ ಮಾಧ್ಯಮಗಳಿಗೆ,
ಮಾಧ್ಯಮಗಳಿಂದ ಕಂಪೆನಿಗಳಿಗೆ ಕೆಲವೇ ಗಂಟೆಗಳಲ್ಲಿ
ತಲಪಿತು.
ಮೊಟ್ಟ ಮೊದಲು ಧಾವಿಸಿ ಬಂದ ಒಬ್ಬ ಪತ್ರಕರ್ತ ಒಂದು
ಚಾಣಾಕ್ಷ ಕೆಲಸ ಮಾಡಿದ.
ಆತ ಹೇಳಿದ,
''ಚಂದ್ರಕಾಂತನೊಳಗೆ
ಏನಿದೆಯೋ ಅದೆಲ್ಲವೂ ಎಲ್ಲರೊಳಗೂ ಇರುವಂಥದೇ.
ಆದರೆ ಅದನ್ನು ಯಾರೂ ಕಂಡಿರುವುದಿಲ್ಲ.
ಅದನ್ನು ಇನ್ನೊಬ್ಬನಲ್ಲಿ ಕಾಣುವ ಅವಕಾಶವನ್ನು
ಕಳೆದುಕೊಳ್ಳಲು ಯಾರೂ ಸಿದ್ಧರಿರುವುದಿಲ್ಲ.
ಸಾವಿರಾರಲ್ಲ,
ಲಕ್ಷೆಪಲಕ್ಷ ಜನ ಬರುತ್ತಾರೆ,
ಅಂಗಡಿಗಳನ್ನು ಮುಚ್ಚಿ ಬರುತ್ತಾರೆ.
ಮಠ ಮಂದಿರ,
ಕಂಪೆನಿ ಬಾಗಿಲು ಮುಚ್ಚಿ ಬರುತ್ತಾರೆ.
ಸುನಾಮಿಯಿಂದಲಾದರೂ ದೂರ ಓಡಿ ಜೀವ
ಉಳಿಸಿಕೊಳ್ಳಬಹುದು.
ಜನಸಾಗರದಿಂದ ಬಚಾವಾಗುವುದು ಸಾಧ್ಯವಿಲ್ಲ.
ನಿಮ್ಮ ಮನೆಯೇ ಪುಡಿಪುಡಿಯಾದೀತು.
ನಿಮ್ಗೆ ನಾನು ಹೇಳುವುದರಲ್ಲಿ ವಿಶ್ವಾಸವುಂಟಾದರೆ,
ನಾನು ಈ ಕ್ಷಣವೇ ನಿಮ್ಮ ಮನೆಯ ಸುತ್ತ ಒಂದು
ಪೊಲೀಸು ಕೋಟೆಯನ್ನು ನಿರ್ಮಾಣ ಮಾಡುವ ವ್ಯವಸ್ಥೆ ಮಾಡ್ತೇನೆ.
ಪರಿಸ್ಥಿತಿ ಕೈಮೀರುವ ಮೊದಲೇ ಇದು ನಡೆಯಬೇಕು''
ಆತನ ಸಲಹೆಗೆ ಅಂಕಿತ-
ರಜನಿ ದಂಪತಿ ಕೂಡಲೇ ಒಪ್ಪಿಕೊಂಡರು.
ಕೂಡಲೇ ಆತ ಮೊಬೈಲಿನಲ್ಲಿ ತನ್ನ ಪತ್ರಿಕೆಯ
ಸಂಪಾದಕರನ್ನು ಸಂಪರ್ಕಿಸಿ,
ವಿಷಯ ತಿಳಿಸಿ,
ಕೂಡಲೇ ಗೃಹ ಮಂತ್ರಿಗೆ ತಿಳಿಸಬೇಕು.
ಅರ್ಧ ಗಂಟೆಯೊಳಗೆ ಪೊಲೀಸು ರಕ್ಷಣೆಯ ವ್ಯವಸ್ಥೆ
ಆಗದಿದ್ದರೆ ಕಾಲ್ತುಳಿತಕ್ಕೆ ಸಿಲುಕಿ ಸಾವಿರಾರು ಜನ ಪ್ರಾಣ
ಕಳೆದುಕೊಳ್ಳುತ್ತಾರೆ ಎಂದ.
ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು ಎಂಬ
ಮಾತಿರುವಾಗ ಇಂಥ ವಿಚಿತ್ರಾತಿವಿಚಿತ್ರ ಸಂಗತಿಯನ್ನು ತಟ್ಟನೆ ನಂಬುವುದು ಹೇಗೆ
ಎಂದು ಇಂಡಿಯನ್ ಟೈಮ್ಸ್ ದಿನಪತ್ರಿಕೆಯ ಸಂಪಾದಕರು ಹತ್ತೇ ನಿಮಿಷದಲ್ಲಿ
ಚಂದ್ರಕಾಂತನ ಮನೆಗೆ ಬಂದರು.
ಅಷ್ಟರಲ್ಲೇ ಮನೆಯ ಹೊರಗೆ ಸುಮಾರು ಸಾವಿರ ಮಂದಿ
ಸೇರಿಬಿಟ್ಟಿದ್ದರು.
ಅವರಿಗೆಲ್ಲ ಸಿಕ್ಕಿದ ಸುದ್ದಿಯ ಮೂಲ ಕೇವಲ ಒಂದೇ ಮನುಷ್ಯ
ಚಂದ್ರಕಾಂತನ್ನು ನೋಡಿ ಮಾತಾಡದೆ ಪಲಾಯನ ಮಾಡಿದ ಡಾಕ್ಟರ್ ದಯಾನಂದ ಸಾಗರ್!
ನೂರು ಪೊಲೀಸರ ತಂಡ ಚಂದ್ರಕಾಂತನ ಮನೆಯನ್ನು
ಸುತ್ತುವರಿದು ನಿಂತರು.
ಸ್ವತಃ ಗೃಹಮಂತ್ರಿ ಭರತಲಾಲ್ ಬಂದು ಚಂದ್ರಕಾಂತನನ್ನು
ಕಂಡರು.
ಅವರಿಗೆ ಶಾಕ್ ಆಗಲಿಲ್ಲ.
ಇದೊಂದು ಸಾಮಾನ್ಯ ಸಂಗತಿಯೆಂಬಂತೆ ಪೊಲೀಸು ರಕ್ಷಣಾ
ವ್ಯವಸ್ಥೆಯನ್ನು ಪರಿಶೀಲಿಸಿ ಹೊರಟುಹೋದರು.
ತನ್ನ ಕಾರಿನಿಂದಲೇ ಅವರು ಮಾಡಿದ ಮೊಟ್ಟ ಮೊದಲ
ಕೆಲಸವೆಂದರೆ ತನ್ನ ಆಪ್ತ ಮಿತ್ರನಾದ ಸುಪ್ರಸಿದ್ಧ ಐಡಿಯಲ್ ಬಯೋಟೆಕ್ನಿಕ್
ಎಂಬ ಕಂಪೆನಿಯ ಮಾಲಿಕ ದಯಾಸಾಗರ ಪಾಟಕಿಗೆ ಮೊಬೈಲಿಸಿ,
ಚಂದ್ರಕಾಂತನಿರುವ ಮನೆಯ ವಿಳಾಸ ತಿಳಿಸಿ,
''ತಕ್ಷಣ ಬಾ.
ನಿನಗೆ ಇಲ್ಲಿ ಒಂದು ಸಹಸ್ರಕೋಟಿ ಮೌಲ್ಯದ ಚಿನ್ನದ
ಗಣಿ ಕಾಣಿಸುತ್ತದೆ.
ಮೊಟ್ಟಮೊದಲು ನೀನು ಮಾಡಬೇಕಾದ್ದು ಏನೆಂದರೆ,
ತಕ್ಷಣ ಈ ಹುಡುಗ ಮತ್ತು ಅವನ ತಾಯಿತಂದೆಯನ್ನು
ಇಲ್ಲಿಂದ ಕರೆದುಕೊಂಡು ಹೋಗಿ ಒಂದು ಫೈವ್ ಸ್ಟಾರ್ ಹೋಟೆಲಿನಲ್ಲಿ ಇರಿಸುವುದು.
ಹುಡುಗನನ್ನು ಯಾರೂ ನೋಡಬಾರದು ಎನ್ನುವುದು ಬಹಳ
ಮುಖ್ಯ.
ನೀನು ಈ ಹುಡುಗನಿಗೆ ನಿನ್ನ ಕಂಪೆನಿಯಲ್ಲಿ ಒಂದು ಕೆಲಸ
ಕೊಡು.
ತಿಂಗಳಿಗೆ ಐದು ಲಕ್ಷ ಸಂಬಳ ನಿಶ್ಚಯಿಸು.
ಮುಂಗಡವಾಗಿ ಐದು ಲಕ್ಷ ಕೊಡು.
ಕುಟುಂಬಕ್ಕೆ ಇರಲು ಒಂದು ಕೋಟಿ ಬೆಲೆಯ ಒಂದು
ಮನೆಯ ವ್ಯವಸ್ಥೆ ಮಾಡು,
ಬಾಡಿಗೆಗಲ್ಲ,
ಅವರಿಗೇ,
ಅವರ ಸ್ವಂತಕ್ಕೆ.
ಮನೆಯ ವ್ಯವಸ್ಥೆಯಾದ ನಂತರ ಕೂಡ ಒಂದೆರಡು ತಿಂಗಳು
ಅವರು ಹೋಟೆಲಲ್ಲೇ ಇರಲಿ''
ಎಂದರು.
ಇಷ್ಟೊಂದು ಖರ್ಚುಗಳ ಬಗ್ಗೆ ದಯಾಸಾಗರ ಪಾಟಕ್
ಪ್ರಶ್ನಿಸಿದಾಗ, ''ಯೋಜನೆ
ಏನು ಎಂಥದು ಅಂತ ನಿಂಗೆ ಗೊತ್ತಾಗದಿದ್ರೆ ನಾನು ಹೇಳ್ತೇನೆ.
ಅವರನ್ನು ಹೋಟೆಲಿನಲ್ಲಿ ಇರಿಸಿ ಬಾ.
ಹಣ ನಾನು ಕೊಡ್ತೇನೆ.
ಲಾಭವಾದರೆ ಲಾಭ,
ನಷ್ಟವಾದರೆ ನಷ್ಟ ಫಿಫ್ಟಿ ಫಿಫ್ಟಿ ಒಂದು
ಅಗ್ರೀಮೆಂಟ್ ಮಾಡಿಕೊಳ್ಳೋಣ''
ಎಂದ.
ಚಂದ್ರಕಾಂತನೆಂಬ ಅಪೂರ್ವ ಮನುಷ್ಯನನ್ನು ಯಾರ
ಕಣ್ಣಿಗೂ ಬೀಳದಂತೆ ಮನೆಯೊಳಗಿಂದ ಹೇಗೆ ಹಾರಿಸಿಕೊಂಡು ಹೋಗಲಾಯಿತು ಎಂದು
ಅವನನ್ನು ಕಾಣಲು ಬಂದು ಸೇರಿದ ಜನರಲ್ಲಿ ಕಾಣಿಸಿದ್ದು ಕೆಲವೇ ಮಂದಿಗೆ.
ಒಂದು ಪರದೆಯಂತೆ ನಿಂತ ಪೊಲೀಸರ ಮರೆಯಲ್ಲಿ
ಚಂದ್ರಕಾಂತನ ಮುಖವನ್ನು ಸಂಪೂರ್ಣ ಮುಚ್ಚಿಟ್ಟುಕೊಂಡು ಕಾರು ಹತ್ತಿಸಲಾಯಿತು.
ಅಂಕಿತ ದಂಪತಿ ಮತ್ತು ಅವರ ಮಗ ಚಂದ್ರಕಾಂತನನ್ನು
ಹೋಟೆಲಿಗೆ ವರ್ಗಾಯಿಸಿದ ನಂತರ,
ತಟ್ಟನೆ ಆದ ಬದಲಾವಣೆಯಿಂದ ಉಂಟಾದ ಗಾಬರಿ
ಗೊಂದಲದಿಂದ ಅವರು ಹೊರಬಂದು ಸುಧಾರಿಸಿಕೊಂಡ ಬಳಿಕ ಐಡಿಯಲ್ ಬಯೋಟೆಕ್ನಿಕ್
ಕಂಪೆನಿಯ ಮಾಲಿಕ ದಯಾಸಾಗರ ಪಾಟಕ್ ತನ್ನ ಕೊಡುಗೆಯನ್ನು ಅವರ ಮುಂದಿರಿಸಿದ.
ಚಂದ್ರಕಾಂತನಿಗೆ ಈಗಿಂದೀಗಲೇ ತನ್ನ ಕಂಪೆನಿಯಲ್ಲಿ
ಐಡಿಯಾ ಪ್ರೊಮೋಟರ್ ಎನ್ನುವ ಹುದ್ದೆ,
ಇದು ಒಂದು ವರ್ಷದ ಕಂಟ್ರಾಕ್ಟ್ ಎಂದು ತಿಳಿಸಿದ
ದಯಾಸಾಗರ ಪಾಟಕ್, ''ತಿಂಗಳಿಗೆ
ಐದು ಲಕ್ಷ ಸಂಬಳ,
ಅದರಲ್ಲಿ ಐದು ಲಕ್ಷ ಅಡ್ವಾನ್ಸ್ ಆಗಿ ಈಗ ಕೊಡಲಾಗುವುದು,
ಒಂದು ವರ್ಷ ಪೂರ್ತಿಯಾದ ನಂತರ ಆ ಐದು ಲಕ್ಷವನ್ನು
ಬೋನಸ್ ಎಂದು ಪರಿಗಣಿಸಲಾಗುವುದು.
ವಾಸಕ್ಕೆ ಜಯನಗರದಲ್ಲಿ ಒಂದು ಕೋಟಿ ಬೆಲೆಯ
ಮನೆಯೊಂದನ್ನು ಖರೀದಿಸಿ ಚಂದ್ರಕಾಂತನ ಹೆಸರಿನಲ್ಲಿ ರಿಜಿಸ್ಟ್ರೇಷನ್
ಮಾಡಲಾಗುವುದು.
ಅದು ಅವನ ಸ್ವಂತ ಮನೆ.
ಈಗ ಇರುವ ಮನೆಯನ್ನು ನೀವು ಇಟ್ಟುಕೊಳ್ಳಬಹುದು''
ಎಂದ.
''ಅದು ಬಾಡಿಗೆ ಮನೆ''
ಎಂದ ಅಂಕಿತ.
ಅದಕ್ಕೆ ಪ್ರತಿಕ್ರಿಯಿಸದೆ,
ದಯಾಸಾಗರ ಪಾಟಕ್ ಚಂದ್ರಕಾಂತನೊಡನೆ ಹೇಳಿದ,
''ಓದು ಅರ್ಧದಲ್ಲಿ ನಿಲ್ಲುತ್ತದಲ್ಲಾ ಎಂದು
ಚಿಂತಿಸುವುದು ಬೇಡ.
ಹೇಗಿದ್ದರೂ ಈಗ ನಿಮ್ಮಿಂದ ಓದು ಮುಂದರಿಸಲು ಆಗಲಿಕ್ಕಿಲ್ಲ.
ಒಂದು ವರ್ಷದ ನಂತರ ಹೇಗಾಗುತ್ತದೆ ಅಂತ ನೋಡುವ.
ಒಂದು ವರ್ಷದ ಕಾಲ ಗಳಿಸಿದ ಬಯೋಟೆಕ್ನಿಕ್
ಜ್ಞಾನದಿಂದ ಬಯೋಟೆಕ್ನಿಕ್ ಸಬ್ಜೆಕ್ಟ್ ನಿಮಗೆ ಇಷ್ಟವಾದರೆ ಇಲ್ಲಿಯೇ ಅಥವಾ
ವಿದೇಶದಲ್ಲಿ ಓದು ಮುಂದುವರಿಸಲು ಕಂಪೆನಿ ಸ್ಕಾಲರ್‌ಶಿಪ್ ನೀಡುತ್ತದೆ''
ಎಂದ.
ಅಂಕಿತ-ರಜನಿ
ದಂಪತಿ ಮತ್ತು ಚಂದ್ರಕಾಂತ ಈ ಕೊಡುಗೆಯನ್ನು ಸ್ವೀಕರಿಸಿದರು.
ವಾಸ್ತವದ ಅರಿವು ಕೂಡ ಅವರಿಗೆ ಸ್ಪಷ್ಟವಾಗಿತ್ತು.
ಚಂದ್ರಕಾಂತ ಈ ಸ್ಥಿತಿಯಲ್ಲಿ ಹೊರಗೆ
ಹೋಗುವಂತಿಲ್ಲ.
ಆದುದರಿಂದ ಇದಕ್ಕಿಂತ ಸುರಕ್ಷಿತವೂ ಆಕರ್ಷಕವೂ ಆದ
ವ್ಯವಸ್ಥೆ ಬೇರೆ ಇರಲು ಸಾಧ್ಯವಿಲ್ಲ ಎನಿಸಿತು.
ಐಡಿಯಲ್ ಬಯೋಟೆಕ್ನಿಕ್‌ನಲ್ಲಿ ಐಡಿಯಾ
ಪ್ರಮೋಟರ್ ಆಗಿ ಮಾಡಲು ಏನೂ ಇರಲಿಲ್ಲ.
ಅವನಿಗೆ ಒಂದು ವಿಶಾಲವಾದ ಕ್ಯಾಬಿನ್ ಒದಗಿಸಲಾಯಿತು.
ಅವನನ್ನು ಯಾರೂ ಭೇಟಿಯಾಗಲು ಅವಕಾಶ ಇರಲಿಲ್ಲ.
ಮನೆಯಿಂದ ನೇರವಾಗಿ ಯಾರ ಕಣ್ಣಿಗೂ ಬೀಳದಂತೆ
ಆಫೀಸಿಗೆ ಕರೆದುಕೊಂಡು ಬರಲು ವಿಶೇಷ ವಾಹನದ ವ್ಯವಸ್ಥೆ ಮಾಡಲಾಯಿತು.
ಮರುದಿನ ದಯಾಸಾಗರ್ ಪಾಟಕ್ ತನ್ನ ಕಂಪೆನಿಯ
ಯೋಜನೆಯನ್ನು ಚಂದ್ರಕಾಂತನಿಗೆ ವಿವರಿಸಿದ,
''ನಿಮ್ಮ ಭವಿಷ್ಯದ ಚಿಂತೆ ನಿಮಗೆ ಸದ್ಯಕ್ಕೆ ಬೇಡ.
ನೀವು ಇಡೀ ಜಗತ್ತಿನ ಮಾನವ ಸಮುದಾಯಕ್ಕೆ ದೇವರ
ಒಂದು ಅಪೂರ್ವ ಕೊಡುಗೆಯಾಗಿದ್ದೀರಿ.
ಇಷ್ಟರವರೆಗೆ ಮೆಡಿಕಲ್ ಸಯನ್ಸ್ ಮತ್ತು ಮೆಡಿಕಲ್
ಪ್ರಾಕ್ಟೀಸಿಗೆ ಇರದಿದ್ದ ಒಂದು ಆಯಾಮ ನಿಮ್ಮಿಂದಾಗಿ ಇವತ್ತು
ತೆರೆದುಕೊಳ್ಳುತ್ತದೆ.
ಈವರೆಗೆ ಮನುಷ್ಯನ ದೇಹದೊಳಗಿನ ರಚನೆ ಮತ್ತು ಕ್ರಿಯೆಯನ್ನು
ಕಾಣುತ್ತಿದ್ದುದು ಎಕ್ಸ್‌ರೇ,
ಸ್ಕ್ಯಾನಿಂಗ್,
ಎಮ್‌ಆರ್‌ಐ ಮುಂತಾದವುಗಳ ಮೂಲಕ.
ಆದರೆ ಅವುಗಳಿಂದ ಡಾಕ್ಟರುಗಳಿಗೆ ಸಿಗುವುದು
ಸ್ಥಿರ ಚಿತ್ರಗಳು ಮಾತ್ರ.
ಅನಿಮೇಟೆಡ್ ಮೋಷನ್ ಪಿಕ್ಚರ್‌ಗಳು ಕೃತಕವಾಗಿ
ಮಾಡಿದವುಗಳು.
ನಿಮ್ಮ ಮೂಲಕ ವೈದ್ಯರಿಗೆ ಅಂದರೆ ವೈದ್ಯಕೀಯ ವಿಜ್ಞಾನಕ್ಕೆ
ಅರ್ಥಾತ್ ಮನುಕುಲಕ್ಕೆ ಮನುಷ್ಯನ ಒಳಗಿನ ನೇರದೃಶ್ಯ ಅದರ ಸಕಲ ಕ್ರಿಯೆಗಳ
ಸಹಿತ ಲಭಿಸುತ್ತದೆ.
ಇಷ್ಟರವರೆಗೆ ಯಾವ ವಿಜ್ಞಾನಿಯಿಂದಲೂ ಆಗದಿರುವಂಥದು
ನಿಮ್ಮಿಂದಾಗುತ್ತದೆ.
ಅದಕ್ಕಾಗಿ ನೀವು ಮಾಡಬೇಕಾದ್ದು ಹೆಚ್ಚು ಕಡಿಮೆ ಒಬ್ಬ
ಕಲಾವಿದನ ಮುಂದೆ ನಿಲ್ಲುವ ಒಬ್ಬಳು ರೂಪದರ್ಶಿಯ ಕೆಲಸ.
ವಾರದಲ್ಲಿ ಮೂರು ದಿನದಲ್ಲಿ ಐದು ಗಂಟೆಗಳ ಕಾಲ
ಎಚ್ಚರದಲ್ಲಿ ಮತ್ತು ಮೂರುಗಂಟೆಗಳ ಕಾಲ ನಿದ್ರೆಯಲ್ಲಿ ಮಾತ್ರ''
ಎಂದು ತಾವು ಮಾಡುವ ಫೋಟೋಗ್ರಫಿಯ ಬಗ್ಗೆ ವಿವರವಾಗಿ
ತಿಳಿಸಿದ.
ಚಂದ್ರಕಾಂತ ಒಪ್ಪಿಕೊಂಡು ಒಪ್ಪಂದಕ್ಕೆ ಸಹಿ ಹಾಕಿದ.
ಮರುದಿನವೇ ಚಿತ್ರೀಕರಣ ಆರಂಭಗೊಂಡಿತು.
ಒಪ್ಪಿಕೊಂಡಂತೆ ಮೂವೀ ಕೆಮರಾದ ಮುಂದೆ ಚಂದ್ರಕಾಂತ
ನಗ್ನವಾಗಿ ನಿಂತ.
ಚಿತ್ರೀಕರಣ ಮುಂದರಿಯಿತು.
ಮಿದುಳಿನಿಂದಾರಂಭವಾಗಿ ಶರೀರದೊಳಗಿನ ಪ್ರತಿಯೊಂದು
ಅಂಗದ ಕ್ರಿಯೆಯನ್ನು ಕ್ಯಾಮರಾ ಕಣ್ಣು ಸೆರೆ ಹಿಡಿಯಿತು.
ಭಾವನೆ ಮತ್ತು ಯೋಚನೆಗೆ ಮಿದುಳು ಸ್ಪಂದಿಸುವ ರೀತಿ,
ಅಹಾರವನ್ನು ನುಂಗುವಾಗ ಅದು ಗಂಟಲಿಂದ
ಕೆಳಗಿಳಿಯುವ ರೀತಿ,
ಜಠರದಲ್ಲಿ ಪಚನಗೊಳ್ಳುವ ರೀತಿ,
ಶ್ವಾಸಕೋಶಗಳು ಹಿಗ್ಗುವ ಮತ್ತು ಕುಗ್ಗುವ ರೀತಿ,
ಹೃದಯದಲ್ಲಿ ಹೃತ್ಕರಣ ಹ್ರತ್ಕುಕ್ಷಿಗಳಲ್ಲಿ ರಕ್ತ
ಶರೀರ ಭಾಗಗಳಿಂದ ಬಂದು,
ಮತ್ತೆ ಶರೀರ ಭಾಗಗಳಿಗೆ ಪಂಪ್ ಆಗುವ ರೀತಿ,
ಶ್ವಾಶಕೋಶವನ್ನು ಪ್ರವೇಶಿಸಿದ ಗಾಳಿಯಿಂದ
ಅಂಗಾರಾಮ್ಲ ಬಿಡುಗಡೆಗೊಂಡು ಮಲಿನ ರಕ್ತವು ಆಮ್ಲಜನಕದ ನೆರವಿನಿಂದ
ಶುದ್ಧಿಕರಣಗೊಡು ಹೃದಯಕ್ಕೆ ಹೋಗು ರೀತಿ.
ರಕ್ತವು ಪಿತ್ತಜನಕಾಂಗದಿಂದ ಪಿತ್ತರಸ ಜಿನುಗಿ
ಹೊರಹರಿದು ಮೇದೋಜೀರಕ ದ್ರವ ಮತ್ತು ಹೈಡ್ರೋಕ್ಲೋರಿಕ್ ದ್ರವದ ಜೊತೆ ಸೇರಿ
ಜಠರದಲ್ಲಿರುವ ಆಹಾರ ಪಚನಗೊಂಡ ನಂತರ ಸಣ್ಣಕರುಳಿನಲ್ಲಿ ವಿಲ್ಲೈಗಳು ಅದರ
ಸಾರಸತ್ವವನ್ನು ಹೀರಿದ ನಂತರ ಉಳಿದ ತ್ಯಾಜ್ಯ ದೊಡ್ಡ ಕರುಳಿಗೆ ತಳ್ಳಲ್ಪಡುವ
ರೀತಿ,
ಮೂತ್ರ ಜನಕಾಂಗದಲ್ಲಿ ಮೂತ್ರ ಶುದ್ಧೀಕರಣಗೊಂಡು
ಮೂತ್ರಕೋಶದಲ್ಲಿ ಮೂತ್ರ ಸಂಗ್ರಹವಾಗುವ ರೀತಿ-ಹೀಗೆ
ಮಾನವ ಶರೀರದೊಳಗೆ ಅವಿರತವಾಗಿ ನಡೆಯುವ ಕ್ರಿಯೆಯನ್ನು ಪರಿಪೂರ್ಣವಾಗಿ ನಾಲು
ಕೆಮರಾಗಳು ಸೆರೆ ಹಿಡಿದವು.
ಈ ಕೆಲಸ ಸುಮಾರು ಒಂದು ತಿಂಗಳ ಕಾಲ ನಡೆಯಿತು.
ಅನಂತರ ಸಕಲ ವಿಧದ ನ್ಯಾಚುರಲ್ ಫುಡ್ ಮತ್ತು ಜಂಕ್
ಫುಡ್ ಹೊಟ್ಟೆ ಸೇರಿದ ನಂತರ ಎಷ್ಟು ಹೊತ್ತಿನಲ್ಲಿ ಹೇಗೆ ವಿಘಟನೆಗೊಳ್ಳುತ್ತದೆ
ಮತ್ತು ಅದರಲ್ಲಿ ಎಷ್ಟು ಅಂಶ ದೇಹ ಸೇರುತ್ತದೆ ಎಷ್ಟು ಅಂಶ ಹೊತ್ತಿನಲ್ಲಿ
ಹೊರ ಹಾಕಲ್ಪಡುತ್ತದೆ ಎನ್ನುವುದನ್ನು ಚಿತ್ರೀಕರಿಸಲಾಯಿತು.
ಈ ಕೆಲಸಕ್ಕೆ ಸುಮಾರು ಮೂರು ತಿಂಗಳು ಬೇಕಾಯಿತು.
ಒಂದು ವಿಚಾರವನ್ನು ಮಾತ್ರ ಕೆಮರದಿಂದ
ಕಾಣಲಾಗಲಿಲ್ಲ.
ಚಂದ್ರಕಾಂತನ ಚರ್ಮವು ಪಾರದರ್ಶಕವಾದ್ದರಿಂದ ಚರ್ಮ ಹೇಗೆ
ಕೆಲಸ ಮಾಡುತ್ತದೆ,
ಚರ್ಮವನ್ನು ಬಿಳಿ ಮಾಡುವ ವಿವಿಧ ಸಾಧನ ಸಾಮಗ್ರಿಗಳು
ಚರ್ಮದ ಮೇಲೆ ಹೇಗೆ ಪ್ರವರ್ತಿಸುತ್ತವೆ ಎಂಬುದು ಚಿತ್ರೀಕರಣಕ್ಕೆ ಸಿಗಲಿಲ್ಲ.
ವಿವಿಧ ಪ್ರಸಾಧನ ಸಾಮಗ್ರಿಗಳು ಚರ್ಮದ ಮೇಲೆ ಏನು
ಪರಿಣಾಮ ಬೀರುತ್ತವೆ ಅಥವಾ ಪರಿಣಾಮ ಬೀರುತ್ತವೆಯೆ ಇಲ್ಲವೆ ಎನ್ನುವ ವಿಚಾರ
ರಹಸ್ಯವಾಗಿಯೇ ಉಳಿದುದು ಕಾಸ್ಮೆಟಿಕ್-ಬಯೋಟಿಕ್
ಕಂಪೆನಿಗಳಿಗೆ ಸಂತೋಷದಾಯಕವೇ ಆಗಿತ್ತು.
ಆದರೆ ಮಾನವ ಶರೀರದೊಳಗಿನ ವ್ಯವಹಾರಗಳು
ಬಟಾಬತ್ತಲಾಗಿ ಒಟ್ಟು ನೂರಾಒಂದು ಸಿಡಿಗಳಾಗಿ ಹೊರಬಂದುದೇ ತಡ
ಜಗತ್ತಿನಾದ್ಯಂತದಿಂದ ಮಿಲಿಯ ಮಿಲಿಯಾಂತರ ಸೀಡಿಗಳಿಗೆ ಬೇಡಿಕೆ ಬಂತು.
ಪೈರಸಿಯನ್ನು ಪ್ರತಿಬಂಧಿಸಲು ಕಾಪಿ ಮಾಡಲಾಗದಂತೆ
ಸಿಡಿಗಳನ್ನು ತಯಾರಿಸಲಾಯಿತು.
ಇದರಿಂದಾಗಿ ಐಡಿಯಲ್ ಬಯೋಟೆಕ್ನಿಕ್ ಕಂಪೆನಿಯ
ಮಾಲಿಕನಾದ ದಯಾಸಾಗರ ಪಾಟಕ್ ಮತ್ತು ಇಷ್ಟರಲ್ಲಿ ಮಾಜಿ ಗೃಹ ಸಚಿವನಾದ ಭರತಲಾಲ್
ಹುಟ್ಟುಹಾಕಿದ 'ದ
ಕಂಪ್ಲೀಟ್ ಮ್ಯಾನ್'
ಸಿಡಿಗಳನ್ನು ತಯಾರಿಸುವ 'ದ
ಕಂಪ್ಲೀಟ್ ಮ್ಯಾನ್ ಮೆಡಿಕೋಇಂಜಿನಿಯರಿಂಗ್ ಕಂಪೆನಿ'
ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸಿತು.
ದಯಾಸಾಗರ್ ಪಾಟಕ್ ಜಗತ್ತಿನ ನಂಬರ್ ವನ್
ಶ್ರೀಮಂತನಾದ,
ಭರತಲಾಲ್ ಜಗತ್ತಿನ ನಂಬರ್ ಟೂ ಶ್ರೀಮಂತನಾದ.
ಅಷ್ಟೇ ಅಲ್ಲ,
ಅದು ಯಾರಿಂದಲೂ ಯಾವತ್ತೂ ಮುರಿಯಲಾಗದ
ಶ್ರೀಮಂತಿಕೆಯ ದಾಖಲೆಯೆನಿಸಿದ್ದರಿಂದ ನಂಬರ್ ವನ್ ಶ್ರೀಮಂತರಾಗುವ ಅವಕಾಶ
ಬೇರೆ ಯಾರಿಗೂ ಇಲ್ಲವಾಗಿ ಉಳಿದೆಲ್ಲಾ ಶ್ರೀಮಂತರು ಸ್ಪರ್ಧೆಯಲ್ಲಿ ಆಸಕ್ತಿ
ಕಳೆದುಕೊಂಡು ಸಮಾಜಸೇವೆಗೆ ತೊಡಗಿದರು.
ಆದರೆ ತಾನೊಬ್ಬನೇ ಯಾವಾಗಲೂ ನಂಬರ್ ವನ್ ಆಗಿರಬೇಕು
ಎಂಬ ಜಿದ್ದು ದಯಾಸಾಗರ್ ಪಾಟಕ್ ಮತ್ತು ಭರತಲಾಲ್ ನಡುವೆ
ಹುಟ್ಟಿಕೊಂಡದ್ದರಿಂದ 'ದ
ಕಂಪ್ಲೀಟ್ ಮ್ಯಾನ್ ಮೆಡಿಕೋಇಂಜಿನಿಯರಿಂಗ್ ಕಂಪೆನಿ'
ವಿಭಜನೆಗೊಂಡು ಭರತಲಾಲನ ಒಡೆತನದಲ್ಲಿ ಹೊಸ ಕಂಪೆನಿ ಉಂಟಾಯಿತು.
ಅದರ ಹೆಸರು
'ಭಾರತ್ ಹೋಲ್
ಮ್ಯಾನ್ ಮೆಡಿಕೋಇಂಜಿನಿಯರಿಂಗ್ ಕಂಪೆನಿ'
ಎಂದಾಯಿತು.
ಎರಡು ಕಂಪೆನಿಯದೂ ಒಂದೇ ಉತ್ಪನ್ನ,
ಉತ್ಪನ್ನದ ಹೆಸರಿನಲ್ಲಿ ಮತ್ತು ಕಂಪೆನಿಯ
ಹೆಸರಿನಲ್ಲಿ ಮಾತ್ರ ಚಿಕ್ಕ ಬದಲಾವಣೆ.
ಹೊರ ಜಗತ್ತಿಗೆ ಅವರ ನಡುವೆ ವೈರವಿರುವಂತೆ
ತೋರಿದರೂ ಒಳಗೊಳಗೆ ಅವರು ಒಂದೇ ಆಗಿದ್ದರು ಮತ್ತು ಸ್ನೇಹಿತರಾಗಿಯೇ ಇದ್ದರು.
ಗಂಡ ಹೆಂಡಿರ ಸುಳ್ಳು ಜಗಳದಂಥ ಇವರಿಬ್ಬರ
ಜಗಳದಲ್ಲಿ ಚಂದ್ರಕಾಂತನನ್ನು ವಿಚಾರಿಸಿಕೊಳ್ಳುವವರೇ ಇರಲಿಲ್ಲ.
ಈಗ ಅವನ ಅಂತರಾಳವು ಜಾಗತಿಕ ರಹಸ್ಯವಾದುದರಿಂದ
ಅವನ ಅಂತರಾಳ,
ಅವನ ರೂಪ,
ಅವನ ಪ್ರತಿಭೆಯ ಕುರಿತು ಮಾತಾಡುವವರು ಕೂಡ
ಇರಲಿಲ್ಲ.
ಮತ್ತೆರಡು ಕೋಟಿ ನೀಡಿ ದಯಾಸಾಗರ ಪಾಟಕ್ ಮತ್ತು ಭರತಲಾಲ್
ಅಂಕಿತ ಮತ್ತು ರಜನಿಗೆ ಗುಡ್‌ಬೈ ಹೇಳಿದ್ದರು.
ಚಂದ್ರಕಾಂತನೂ ಒಂದು ವರ್ಷದ ಕಂಟ್ರಾಕ್ಟ್ ಮುಗಿಸಿ
ಮನೆಗೆ ಮರಳಿದ್ದ.
ಅಂಕಿತ ಎರಡು ಕೋಟಿಯನ್ನು ಹಲವು ಕಂಪೆನಿಗಳ ಸಾವಿರಾರು
ಶೇರುಗಳಲ್ಲಿ ತೊಡಗಿಸಿದ್ದರಿಂದ ಅದು ಕೂಡ ಬೆಳೆಯುತ್ತಲೇ ಇತ್ತು.
ಗಂಡ ಹೆಂಡತಿಯ ಧ್ಯಾನ ತಮ್ಮ ಹೂಡಿಕೆಯ ಕುರಿತೇ
ಆಗಿದ್ದುದರಿಂದ ಮಗನ ಜೊತೆ ಮಾತಾಡಲು ಕೂಡ ಅವರಿಗೆ ವೇಳೆ ಸಿಗುತ್ತಿರಲಿಲ್ಲ.
ಮನೆಸೇರಿದ ಚಂದ್ರಕಾಂತನಿಗೆ ಓದು ಮುಂದುವರಿಸುವ
ಮನಸ್ಸೇ ಇರಲಿಲ್ಲ.
ಅವನು ಇನ್ನು ಓದಿ,
ಅವನ ಪ್ರತಿಭೆ ಅರಳಿ ಆಗಬೇಕಾಗಿರುವುದೇನು
ಎನ್ನುವುದು ಅವನ ತಾಯಿತಂದೆಯರ ವಿಚಾರವಾಗಿತ್ತು.
ಸ್ವಾಭಾವಿಕವಾಗಿಯೇ ಚಂದ್ರಕಾಂತನಿಗೂ ಹಾಗೇ
ಅನಿಸಿತು.
ಫುಡ್ ಈಟಿಂಗ್ ಎಕ್ಸ್‌ಪರಿಮೆಂಟ್ ಕಾಲದಲ್ಲಿ ಅವನಿಗೆ
ನೀಡಿದ ಬಗೆಯ ತಿಂಡಿತಿನಸುಗಳು ಮತ್ತು ಪೇಯಗಳಲ್ಲಿ ಕೆಲವು ಅವನಿಗೆ ಬಹಳ
ಇಷ್ಟವಾಗಿ,
ಕ್ರಮೇಣ,
ನ್ಯಾಚುರಲ್ ಫುಡ್ಡಿನ ಮೇಲೆ
ತಿರಸ್ಕಾರವುಂಟಾಗಿತ್ತು.
ಮನೆಗೆ ಬಂದ ಬಳಿಕ ಸದಾ ಕಾಲ ಏನಾದರೊಂದನ್ನು ತಿನ್ನುತ್ತಾ
ಕುಡಿಯುತ್ತಾ ಇದ್ದ.
ಟಿವಿ ನೋಡುವುದರಲ್ಲಿ ಅವನ ಹಗಲು ರಾತ್ರಿಯಾಗುತ್ತಿತ್ತು.
ಹಲವು ಚ್ಯಾನಲುಗಲ್ಲಿ ಟಿವಿಯ ಮೇಲೆ ಅವನ
ಶರೀರಾಂತರಾಳವನ್ನು ಬೇರೆ ಬೇರೆ ಕೋನಗಳಲ್ಲಿ ತೋರಿಸಿ ಪಾಠಮಾಡುವ ಮೆಡಿಕಲ್
ಲೆಸನ್‌ಗಳು ಪ್ರಸಾರವಾಗುತ್ತಿದ್ದುವು.
ಕಂಪ್ಯೂಟರ್ ಅದನ್ನು ವೈವಿಧ್ಯಮಯವಾಗಿ ನವನವೀನ
ರೀತಿಯಲ್ಲಿ ಸಾದರಪಡಿಸುತ್ತಿತ್ತು.
ತಂತಮ್ಮ ಶರೀರದೊಳಗೆ ಎಲ್ಲೆಲ್ಲಿ ಏನೇನಿದೆ,
ಅದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಜನ
ಗಂಟೆಗಂಟೆಗಳ ಕಾಲ ವೀಕ್ಷಿಸುತ್ತಾ ಕುಳಿತುಕೊಳ್ಳುತ್ತಿದ್ದರು.
ಪ್ರತಿ ವೀಕ್ಷಕನಿಗೂ ಅದೊಂದು ವಿಸ್ಮಯಲೋಕವಾಗಿತ್ತು.
ಎಚ್ಚರ,
ಯೋಚಿಸುವ ಸ್ಥಿತಿ,
ಎಚ್ಚರ,
ಅರೆ ಎಚ್ಚರ,
ನಿದ್ರೆ,
ಕನಸು ಮುಂತಾದ ನಾನಾ ಅವಸ್ಥೆಗಳಲ್ಲಿ ಮಿದುಳು ಹೇಗೆ
ಸ್ಪಂದಿಸುತ್ತದೆ ಎನ್ನುವುದನ್ನು ಹಲವು ಪಾಲು ಹಿಗ್ಗಿಸಿ ತೋರಿಸಲಾಗುತ್ತಿತ್ತು.
ಅದು ಯಾವನೋ ಒಬ್ಬನ ದೇಹ,
ಯಾರದೋ ಮಿದುಳು ಎಂದು ವೀಕ್ಷಕರಿಗನಿಸಲಿಲ್ಲ,
ಅದು ತಮ್ಮದೇ ದೇಹ ತಮ್ಮದೇ ಮಿದುಳು
ಎಂದನಿಸುತ್ತಿತ್ತು.
ಶರೀರದ ಇತರ ಅಂತರಂಗಗಳಲ್ಲಿ ಜರಗುವ ಕ್ರಿಯೆಯ ಪರಿಣಾಮ
ಎಕ್ಸ್‌ಪೋಸಾಗಿ ಕಾಣಿಸುವಂತೆ ಮಿದುಳಿನಲ್ಲಿ ನಡೆಯುವ ಸ್ಪಂದನದ ಪರಿಣಾಮ
ಕಾಣಿಸುತ್ತಿರಲಿಲ್ಲವಾದುದರಿಂದ ಯಾವುದು ಎಷ್ಟು ಎಕ್‌ಸ್ಪೋಸಾದರೂ ಏನೋ ಎಕ್‌ಸ್ಪೋಸಾಗಲಿಲ್ಲ
ಎನ್ನುವ ಅತೃಪ್ತಿ ವೀಕ್ಷಕರನ್ನು ಯಾವಾಗಲೂ ಕಾಡುತ್ತಿತ್ತು.
ಈ ಮಾನವ ಸಹಜ ಮನೋದೌರ್ಬಲ್ಯ ಟಿವಿ ಚಾನಲುಗಳಿಗೆ
ವರದಾನವಾಗಿತ್ತು.
ಆದ್ದರಿಂದಲೇ ತೋರಿಸದ್ದನ್ನೇ ಮತ್ತೆ ಮತ್ತೆ ತೋರಿಸಲು
ಸಾಧ್ಯವಾಗುತ್ತಿತ್ತು.
ಸ್ಪಾನ್ಸರುಗಳ ಕೊರತೆ ಯಾವತ್ತೂ ಉಂಟಾಗಲಿಲ್ಲ.
'ಹೀಗೆ
ಜನರಿಗೆ ತಮ್ಮ ಒಳ ಹೊರಗನ್ನು ಎಡೆಬಿಡದೆ ತೋರಿಸುವುದರಿಂದ ದುಷ್ಪರಿಣಾಮವಿದೆ'
ಎಂದು ಬುದ್ಧಿಜೀವಿಗಳು ಹೇಳುತ್ತಿದ್ದರು.
ಆದರೆ ದುಷ್ಪರಿಣಾಮ ಏನು ಎಂದು ಹೇಳುವವರು ಯಾರೂ
ಇರಲಿಲ್ಲ.
ತಾವೇ ಕಂಡುಕೊಳ್ಳೋಣ ಎನ್ನುವ ಹಟವಂತೂ ವೀಕ್ಷಕರಿಗಿರಲಿಲ್ಲ.
ಬುದ್ದೀಜೀವಿಗಳು ಕೂಡ ವೀಕ್ಷಿಸುತ್ತಲೇ
ಮಾತಾಡುತ್ತಿದ್ದರಲ್ಲ?
ಚಂದ್ರಕಾಂತನಿಗೋಸ್ಕರ ಅಡುಗೆ ಮಾಡಬೇಕಾದ
ಅಗತ್ಯ ಕೂಡ ಅವನ ಅಮ್ಮನಿಗೆ ಅಷ್ಟಾಗಿ ಇರಲಿಲ್ಲ.
ಅಪ್ಪ ಅಮ್ಮ ಅದೇಕೋ ದಿನದ ಬಹಳ ಹೊತ್ತು ಮನೆಯಿಂದ
ಹೊರಗಿರುತ್ತಿದ್ದರು.
ಅಂಕಿತ ತನ್ನ ನೌಕರಿ ಬಿಟ್ಟುಬಿಟ್ಟಿದ್ದ.
ತನ್ನದೇ ಆದ ಒಂದು ಹೊಸ ಕಂಪೆನಿ ಆರಂಭಿಸುವ ಯೋಚನೆ
ಮಾಡುತ್ತಿದ್ದ.
ಚಂದ್ರಕಾಂತ ಏಕಾಂಗಿಯಾಗಿದ್ದ.
ಅವನು ಪಾರದರ್ಶಕವಾಗಿ ಪರಿವರ್ತನೆಗೊಂಡಾಗ ಅವನ
ತೂಕ ಮೂವತ್ತಮೂರು ಕಿಲೊಗ್ರಾಮ್.
ಈಗ ಅದು ಎಂಬತ್ತಮೂರು ಆಗಿತ್ತು.
ಅವನ ರೂಪ ಮತ್ತು ಆಕಾರ ಸಂಪೂರ್ಣವಾಗಿ ಬದಲಾಗಿತ್ತು.
ಅವನು ಈಗ ಕುಳಿತಲ್ಲಿಂದ ಕಷ್ಪಪಟ್ಟು ಏಳುತ್ತಿದ್ದ.
ಕಷ್ಟಪಟ್ಟು ನಡೆಯುತ್ತಿದ್ದ.
ಕಾರು ಡ್ರೈವ್ ಮಾಡುತ್ತಿದ್ದನಾದರೂ ಹೊರಗೆ ಹೋದರೆ
ಜನ ಮುತ್ತಿಕೊಳ್ಳಬಹುದೆಂಬ ಭಯದಿಂದ ಮನೆಯಿಂದ ಹೊರಗೆ ಹೋಗುತ್ತಿರಲಿಲ್ಲ.
ಹೀಗಿರುವಾಗ,
ಒಂದು ದಿನ ಸ್ನಾನ ಮಾಡುವಾಗ ತನ್ನ ಚರ್ಮ ಮತ್ತೆ
ಮೊದಲಿನ ಬಣ್ಣಕ್ಕೆ ಮರಳುತ್ತಿರುವಂತೆ ಚಂದ್ರಕಾಂತನಿಗೆ ಅನಿಸಿತು.
ಕೆಲವೇ ದಿನಗಳಲ್ಲಿ ಚರ್ಮದ ಪಾರದರ್ಶಕತೆ
ಅದೃಶ್ಯವಾಗಿ ಅವನ ಮೈಬಣ್ಣ ಎಲ್ಲರ ಮೈಬಣ್ಣದಂತಾಯಿತು.
ಆದರೆ ಕಂದು ಬಣ್ಣವಲ್ಲ,
ಸಾಮಾನ್ಯವಾದ ಗೌರವರ್ಣ.
ಈ ಬದಲಾವಣೆಯನ್ನು ಕಾಣುತ್ತಿದ್ದ ಅವನ ತಾಯಿ ತಂದೆ
ಹರ್ಷಿತರಾದರು.
ಅಷ್ಟೆ.
ಗಾಬರಿಗೊಳ್ಳಲಿಲ್ಲ.
ಸ್ವಾಭಾವಿಕವಾಗಿ ಆಗುವುದೇ ಆಗುತ್ತಿದೆ ಎಂಬಂತೆ
ಹೆಚ್ಚು ಆಶ್ಚರ್ಯ ಕೂಡ ಅವರಿಗೆ ಉಂಟಾಗಲಿಲ್ಲ.
ಎಲ್ಲಾ ಬದಲಾಗುತ್ತಿರುವಾಗ ಕೂದಲಿನ ಬಣ್ಣ ಕೂಡ
ಬದಲಾಗಬಹುದು,
ಅವನ ಪ್ರಾಯದ ಎಲ್ಲಾ ಹುಡುಗರ ಕೂದಲಿನಂತೆ ಕಪ್ಪಾಗಬಹುದು
ಎನ್ನುವ ನಿರೀಕ್ಷೆ ಮಾತ್ರ ಸುಳ್ಳಾಯಿತು.
ಕೂದಲು ಬಿಳಿ ಹತ್ತಿಯಂತೆ ಮೊದಲಿದ್ದ ಹಾಗೇ ಇತ್ತು.
ಬದಲಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಸುಮಾರು
ಆರು ತಿಂಗಳ ಕಳೆಯಿತು.
ಇನ್ನು ಬದಲಾಗುವುದಿಲ್ಲ ಎಂದು ಚಂದ್ರಕಾಂತನಿಗೆ
ಖಾತ್ರಿಯಾಯಿತು.
ಒಂದು ದಿನ ಅಪ್ಪ ಅಮ್ಮ ಮನೆಯಲ್ಲಿಲ್ಲದ ಹೊತ್ತು
ಚಂದ್ರಕಾಂತ ತನ್ನ ಕೂದಲಿಗೆ ಕಪ್ಪು ಬಣ್ಣ ಬಳಿದುಕೊಂಡ.
ತಂದೆಯ ಬಳಿ ಈಗ ಎರಡು ಕಾರು ಇತ್ತು.
ಚಂದ್ರಕಾಂತ ಒಂದು ಕಾರು ಹೊರಡಿಸಿಕೊಂಡು ನೇರವಾಗಿ
'ದ
ಕಂಪ್ಲೀಟ್ ಮ್ಯಾನ್ ಮೆಡಿಕೋಇಂಜಿನಿಯರಿಂಗ್ ಕಂಪೆನಿ'ಯ
ಆಫೀಸಿನ ಹನ್ನೆರಡನೇ ಮಹಡಿಗೆ ಹೋದ.
ಸುಮಾರು ಅವನದೇ ಪ್ರಾಯದ ಹತ್ತಿಪ್ಪತ್ತು ಯುವಕ
ಯುವತಿಯರು ಕಂಪ್ಯೂಟರಿನ ಮೇಲೆ ಕಣ್ಣು ನೆಟ್ಟು ಏನೋ ಮಾಡುತ್ತಿದ್ದರು.
ಒಬ್ಬನೊಡನೆ
'ಹಲೊ,
ನಂಗೆ ದಯಾಸಾಗರ ಪಾಟಕನ್ನು ಭೇಟಿಯಾಗಬೇಕಾಗಿತ್ತು
ಎಂದ.
ಆತ ಕಂಪ್ಯೂಟರ್ ಮೇಲಿಂದ ಕಣ್ಣೆತ್ತದೆ
'ಅವರು
ಮೀಟಿಂಗಿನಲ್ಲಿದ್ದಾರೆ.
ಅರ್ಧ ಗಂಟೆ ಬಿಟ್ಟು ಬನ್ನಿ'
ಎಂದ.
ಆರ್ಧ ಗಂಟೆ ಹೋಗುವುದಾದರೂ ಎಲ್ಲಿಗೆ ಎಂದು ಚಂದ್ರಕಾಂತ ಅಲ್ಲೇ ಹತ್ತಿರ
ಆಫೀಸಿನ ಹೊರಗಡೆ ಲಾಂಜಿನಲ್ಲಿ ಸೋಫಾದಲ್ಲಿ ಕುಳಿತ.
ತಟ್ಟನೆ ಎಲ್ಲಾ ಕಂಪ್ಯೂಟರ್‌ಗಳ ಮೇಲೂ ತನ್ನ ಶರೀರ
ಕಾಣಿಸುತ್ತಿರುವುದು ಅವನ ಗಮನಕ್ಕೆ ಬಂತು.
ತನ್ನ ಶರೀರದ ಜೊತೆ ಇವರು ಮಾಡುತ್ತಿರುವುದಾದರೂ
ಏನು ಎಂಬ ಕುತೂಹಲದಿಂದ ಅವರ ಹಿಂದಿನಿಂದ ಒಂದೊಂದೇ ಕಂಪ್ಯೂಟರನ್ನು ನೋಡುತ್ತಾ
ಹೋದ.
ಒಬ್ಬ ಅವನ ರಕ್ತ ಪರಿಚಲನೆಯ ಮೇಲೆ ಕೆಲಸ ಮಾಡುತ್ತಿದ್ದ.
ಮಲಿನ ರಕ್ತನಾಳಗಳಿಗೆ ನೀಲಿ ಬಣ್ಣ ಹಚ್ಚುತ್ತಿದ್ದ.
ಇನನು ಕೆಲವರು ಬೇರೆ ಬೇರೆ ಅಂಗಗಳಿಗೆ ಬೇರೆ ಬೇರೆ
ಬಣ್ಣ ಹಚ್ಚಿ ಪರಿಶೀಲಿಸುತ್ತಿದ್ದರು.
ಕೆಲವರು ಹೃದಯ,
ಶ್ವಾಸಕೋಶ,
ಯಕೃತ್ತು,
ಮೇದೋಜೀರಕ ಗ್ರಂಥಿ,
ಜಠರ,
ಕರುಳುಗಳು,
ಕಿಡ್ನಿ ಇತ್ಯಾದಿ ಎಲ್ಲವನ್ನು ದೇಹದಿಂದ ಕತ್ತರಿಸಿ
ಕಂಪ್ಯೂಟರ್ ಪರದೆಯ ಮೇಲೆ ಹರಡಿ ಇರಿಸಿಕೊಂಡಿದ್ದರು.
ಕೆಲವರು ಅದನ್ನು ಕೆಲವು ಡಮ್ಮಿ ದೇಹಗಳಿಗೆ ಜೋಡಿಸಿ
ನೋಡುತ್ತಿದ್ದರು.
ದಯಾಸಾಗರ ಪಾಟಕನ ಮೀಟಿಂಗ್ ಕೊನೆಗೊಂಡ
ಲಕ್ಷಣವಾಗಿ ನಾಲ್ಕೈದು ಮಂದಿ ಅವನ ಕೋಣೆಯಿಂದ ಹೊರಬಂದರು.
ಚಂದ್ರಕಾಂತ ಒಳಹೋದ.
ದಯಾಸಾಗರ ಪಾಟಕ್ ತಲೆಯೆತ್ತಿ
''ಯಾರು?
ಏನು?''
ಎಂದ
''ನಾನು
ಚಂದ್ರಕಾಂತ''
''ಯಾವ ಚಂದ್ರಕಾಂತ?''
''ನಿಮ್ಮ ಕಂಪ್ಲೀಟ್
ಮ್ಯಾನ್ ಪ್ರೊಜೆಕ್ಟಿನಲ್ಲಿ ಕೆಲಸ ಮಾಡ್ತಿದ್ದ ಚಂದ್ರಕಾಂತ''
''ಎಂಥ ಕೆಲಸ?''
''ನೀವು
ಚಿತ್ರೀಕರಿಸಿರುವ ಶರೀರದ ಚಂದ್ರಕಾಂತ''
ಪಾಟಕ್ ಒಮ್ಮೆ ಚಂದ್ರಕಾಂತನನ್ನು ನಖಶಿಖಾಂತ
ದಿಟ್ಟಿಸಿ,
''ಆ ಚಂದ್ರಕಾಂತ
ಹೀಗಿರಲಿಲ್ಲ''
ಎಂದ.
''ನಿಜ.
ನನ್ನ ತೂಕ ಈಗ ವಿಪರೀತ ಜಾಸ್ತಿಯಾಗಿಬಿಟ್ಟಿದೆ''
''ಆದರೆ ಆತನ ಕೂದಲು
ಬೆಳ್ಳಗಿತ್ತು''
''ಕೂದಲಿಗೆ
ಇವತ್ತಷ್ಟೇ ಕಪ್ಪು ಬಣ್ಣ ಹಚ್ಚಿಕೊಂಡಿದ್ದೇನೆ''
''ಆತ
ಪಾರದರ್ಶಕವಾಗಿದ್ದ''
''ಇತ್ತೀಚೆಗೆ ನಾನು
ಅಪಾರದರ್ಶಕವಾಗಿ ಪರಿವರ್ತನೆಗೊಂಡಿದ್ದೇನೆ''
''ಮನುಷ್ಯ
ಪಾರದರ್ಶಕವಾಗುವುದೇ ಅಸಾಧ್ಯ.
ಒಮ್ಮೆ ಪಾರದರ್ಶಕನಾದವನು ಮತ್ತೆ
ಅಪಾರದರ್ಶಕನಾಗುವುದು ಖಂಡಿತ ಸಾಧ್ಯವಿಲ್ಲ''
ಎಂದು ದಯಾಸಾಗರ ಪಾಟಕ್ ನಕ್ಕು,
''ಈಗೀಗ ನಾನು ಚಂದ್ರಕಾಂತ.
ನೀವು ಟಿವಿಯಲ್ಲಿ ತೋರಿಸುವುದು ನನ್ನದೇ ಶರೀರ
ಅಂತ ಸಾವಿರಾರು ಫೋನುಗಳು ಬರುತ್ತಿವೆ.
ಬಹುಶಃ ನಿಂಗೂ ಹಾಗನಿಸಿರಬಹುದು''
ಎಂದ.
''ನಾನು ನಿಮ್ಮಲ್ಲಿ
ಒಂದು ವರ್ಷ ಕಂಟ್ರಾಕ್ಟಿನಲ್ಲಿ ಕೆಲಸ ಮಾಡಿದ್ದೇನೆ.
ನೀವು ಚಿತ್ರೀಕರಿಸಿಕೊಂಡಿರುವುದು ನನ್ನದೇ
ಶರೀರವನ್ನು.
ನಿಮ್ಗೆ ನಂಬಿಕೆಯಾಗದಿದ್ದರೆ ನಾನು ನನ್ನ ತಂದೆಯನ್ನು
ಕರೆದುಕೊಂಡು ಬರುತ್ತೇನೆ''
''ಅದೆಲ್ಲ ಇರ್‍ಲಿ.
ನೌ ವಾಟ್ ಈಸ್ ಯುವರ್ ಪ್ರಾಬ್ಲೆಮ್?
ಫೈನಾನ್ಶಿಯಲ್?''
''ಹಾಗೇನೂ ಇಲ್ಲ''
''ಹಾಗಿದ್ರೆ ಈಗ
ನನ್ನಿಂದ ಏನಾಗ್ಬೇಕು?''
ಚಂದ್ರಕಾಂತನಿಗೆ ಪಾಟಕನಿಂದ ಏನೂ
ಆಗಬೇಕಾಗಿರಲಿಲ್ಲ.
ಏನೂ ಹೇಳಲು ತೋಚದೆ,
''ನಂಗೆ ದ ಕಂಪ್ಲೀಟ್ ಮ್ಯಾನ್‌ನ ಎಲ್ಲಾ ಸಿಡಿಗಳ
ಒಂದು ಸೆಟ್ ಬೇಕು''
ಎಂದ.
''ಅದಕ್ಕೇನಾಗಬೇಕು''
ಎಂದು ಪಾಟಕ್ ತಟ್ಟನೆ ಒಂದು ಚೀಟಿಯ ಮೇಲೆ ಒಂದು
ಗೆರೆ ಗೀಚಿ,
ಬೆಲ್ ಕುಟ್ಟಿದ.
ಒಳಬಂದ ಪರಿಚಾರಕನೊಡನೆ
''ಇವರನ್ನು
ಮಿಸ್ ರೇಖಾ ಅವರ ಬಳಿ ಕರೆದುಕೊಂಡು ಹೋಗು''
ಎಂದ.
ರೇಖಾ ಎನ್ನುವ ಹದಿಹರೆಯದ ಸುಂದರಿ ನೂರಾಒಂದು
ಸಿಡಿಗಳ ಒಂದು ಪ್ಯಾಕನ್ನು ಚಂದ್ರಕಾಂತನ ಕೈಯಲ್ಲಿ ಇರಿಸಿ.
''ಟ್ವೆಂಟಿ ಥೌಸಂಡ್
ರುಪೀಸ್''
ಎಂದಳು.
ಚಂದ್ರಕಾಂತನ ಬಳಿ ಹಣ ಇರಲಿಲ್ಲ.
''ಸಾಯಂಕಾಲ ಬಂದು ಕೊಂಡ್ಹೋಗ್ತೇನೆ''
ಎಂದು ಹೇಳಿ ಹೊರಟುಬಿಟ್ಟ.
ಅವನು ಮನೆಗೆ ಮರಳುವಷ್ಟರಲ್ಲಿ ತಾಯಿ ತಂದೆ
ಬಂದಿದ್ದರು.
ಚಂದ್ರಕಾಂತ ಕಾರು ತೆಗೆದುಕೊಂಡು ಎಲ್ಲಿಗೆ ಹೋದ ಎನ್ನುವ
ಯೋಚನೆಯಲ್ಲಿ ಮುಳುಗಿರುವಾಗ ಮನೆಯ ಮುಂದೆ ಕಾರಿನಿಂದ ಇಳಿದ ಮನುಷ್ಯ ತಮ್ಮ ಮಗ
ಚಂದ್ರಕಾಂತ ಎಂದು ಗುರುತು ಹಿಡಿಯಲು ಎರಡು ನಿಮಿಷ ಬೇಕಾಯಿತು.
ಆದರೆ ಈಗ ಅವನು ಹೇಗಿರಬೇಕು ಎಂದು ಅಂಕಿತ ಮತ್ತು
ರಜನಿ ಬಯಸಿದ್ದರೋ ಹಾಗೆ ಇದ್ದ.
ದೇಹ ಅಪಾರದರ್ಶಕವಾಗುವುದರೊಂದಿಗೆ ಕೂದಲು ಕೂಡ
ಕಪ್ಪಗಾಗಿರುವುದನ್ನು ಕಂಡು ಅವರಿಗೆ ತುಂಬಾ ಸಂತೋಷವಾಯಿತು.
ಚಂದ್ರಕಾಂತನಿಗೆ ಇಪ್ಪತ್ತು ತುಂಬಲು ಇನ್ನೂ
ಒಂದೆರಡು ತಿಂಗಳುಗಳಿದ್ದವಾದರೂ ಅವನು ಇಪ್ಪತ್ತೈದು ದಾಟಿದ ಯುವಕನಂತೆ
ಕಾಣಿಸುತ್ತಿದ್ದ.
ಮತ್ತೇನಾದರೂ ಎಡವಟ್ಟು ಆಗುವ ಮೊದಲು ಮದುವೆ ಮಾಡಿಸುವುದು
ಒಳ್ಳೆಯದು ಎಂದು ಅವರು ತೀವ್ರವಾಗಿ ಚಿಂತಿಸತೊಡಗಿದರು.
ಟಿಎಸ್‌ಐ
ಮುಂದಿನ ಸಂಚಿಕೆಗೆ...
|