ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಯಡಿಯೂರಪ್ಪ ಮುಂದಿರುವ 10 ಪ್ರಮುಖ ಸವಾಲುಗಳು
 

ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಪ್ರಥಮ ಬಾರಿಗೆ ನೆಲೆಯೂರುವ ಮೂಲಕ ಕೇಸರಿ ಪಾಳೆಯದಲ್ಲಿ ಉತ್ಸಾಹ ಇಮ್ಮಡಿಸಿದೆ. ಆದರೆ, ವಿಂಧ್ಯ ಪರ್ವತ ಶ್ರೇಣಿಯ ಈಚೆ ಇದೇ ಮೊದಲ ಬಾರಿಗೆ ಸ್ವಂತ ಬಲದ ಮೇಲೆ ಬಿಜೆಪಿ ಮುಖ್ಯಮಂತ್ರಿಯಾದ ಬಿ.ಎಸ್. ಯಡಿಯೂರಪ್ಪ ಮುಂದಿನ ದಿನಗಳು ಎಣಿಸಿಕೊಂಡಷ್ಟು ಸುಲಭವಾಗಿರುವುದಿಲ್ಲ ಎನ್ನುತ್ತಾರೆ ಟಿಎಸ್‌ಐನ ಬಿ.ಎಸ್. ನಾರಾಯಣಸ್ವಾಮಿ, ಶಶಿ ಸಂಪಳ್ಳಿ ಮತ್ತು ಸತೀಶ್ ಚಪ್ಪರಿಕೆ. ಮುಖ್ಯಮಂತ್ರಿ ಮುಂದಿರುವ ಸವಾಲುಗಳ ಮೇಲೆ ಕಣ್ಣೋಟ ಹರಿಸುವ ಯತ್ನ ಇದು.

 1

ಒಡಲೊಳಗಿನ ಬೆಂಕಿಯುಂಡೆ

ಅನಂತ ಕುಮಾರ್ ಬಣ, ರೆಡ್ಡಿ ಬ್ರದರ್ಸ್ ಮತ್ತು ಪಕ್ಷೇತರರು ಯಡಿಯೂರಪ್ಪ ಪಾಲಿಗೆ ಹಗಲು-ರಾತ್ರಿಯಿಡೀ ದುಸ್ವಪ್ನವಾಗಿ ಕಾಡಲಿದ್ದಾರೆ. ಬಿಜೆಪಿ ಸರ್ಕಾರ, ಯಡಿಯೂರಪ್ಪ ಭವಿಷ್ಯ ಈ ಮೂವರನ್ನೇ ಅವಲಂಬಿಸಿದೆ.

ಮೇಲ್ನೋಟಕ್ಕೆ ಕರ್ನಾಟಕದ ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖದಲ್ಲಿ ನಗು ತುಂಬಿದೆ. 'ಪರಶುರಾಮ', ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂತ ನಂತರ ಪ್ರಸನ್ನವದನ. ಆದರೆ, ಒಡಲೊಳಗೆ ಬೆಂಕಿಯುಂಡೆ ಕಟ್ಟಿಕೊಂಡು, ಅದರ ಬಿಸಿಯನ್ನು ಒಂದೊಂದು ಕ್ಷಣವೂ ಅವರು ಅನುಭವಿಸುತ್ತಲೇ ಇದ್ದಾರೆ, ಅನುಭವಿಸುತ್ತಲೇ ಇರಬೇಕು. ಬಯಸಿ, ಬಯಸಿ ಕೊನೆಗೂ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂತ ಮೇಲೆ ಮುಂದಿರುವುದು ಸುಲಭದ ದಾರಿಯಲ್ಲ; ಕಲ್ಲು ಮುಳ್ಳಿನ ಹಾದಿ ಎಂದು ಅವರಿಗೂ ಗೊತ್ತಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಮೇಲಲ್ಲ, ಅದಕ್ಕಿಂತ ಮೊದಲೂ ಬಿಜೆಪಿಯೊಳಗಿನ ಎರಡು ಬಣಗಳ ನಡುವಿನ ಶೀತಲ ಸಮರ ನಡೆಯುತ್ತಲೇ ಬಂದಿದೆ. ಅದೇನೂ ಗೌಪ್ಯ ವಿಷಯವೇನಲ್ಲ. ಜೆಡಿ(ಎಸ್) ವಚನಭಂಗ ಮಾಡಿದ ಮೇಲೆ, ಸಾರ್ವಜನಿಕವಾಗಿ ನಾವು ಬೀದಿ ರಂಪ ಮಾಡಿದಲ್ಲಿ ಉಳಿಗಾಲವಿಲ್ಲ ಎಂಬ ವಿಷಯವನ್ನು ಯಡಿಯೂರಪ್ಪ ಮತ್ತು ಅನಂತ ಕುಮಾರ್ ಇಬ್ಬರೂ ಅರಿತುಕೊಂಡರು. ಆ ಕಾರಣ, ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅವಿಭಕ್ತ ಕುಟುಂಬದಂತೆ ಕಂಗೊಳಿಸಿತು. ಆದರೀಗ ಅಧಿಕಾರ ಸಿಕ್ಕ ಕೂಡಲೇ ಎರಡು ಬಣಗಳ ನಡುವಿನ ಭಿನ್ನಾಭಿಪ್ರಾಯ ಜಗದೀಶ್ ಶೆಟ್ಟರ್ ರೂಪದಲ್ಲಿ ಸ್ಫೋಟಿಸಿದೆ. ಯಡಿಯೂರಪ್ಪ ಪ್ರಕಾರ, ಪಕ್ಷದ ಹಿತದೃಷ್ಟಿಯಿಂದ ಶೆಟ್ಟರ್‌ಗೆ ವಿಧಾನಸಭಾಧ್ಯಕ್ಷ ಸ್ಥಾನದ ಆಸೆ ತೋರಿಸಲಾಗಿದೆ. ಆದರೆ, ಶೆಟ್ಟರ್ ನನಗೆ ಸರ್ವಥಾ ವಿಧಾನಸಭಾಧ್ಯಕ್ಷ ಸ್ಥಾನ ಬೇಡವೇ ಬೇಡ ಎಂದಾಗಿದೆ. ಕೊನೆಯ ಕ್ಷಣದಲ್ಲಿ ಭಿನ್ನಮತ ಶಮನ ಮಾಡುವ ಸಲುವಾಗಿ ಯಡಿಯೂರಪ್ಪ, ಅನಂತ ಕುಮಾರ್ ಬಣದ ಶೆಟ್ಟರ್‌ಗೆ ಯಾವುದಾದರೂ ಸಚಿವ ಪದವಿಯನ್ನು ನೀಡಲೂಬಹುದು ಅಥವಾ ಶೆಟ್ಟರ್ 'ದೊಡ್ಡವರು ಹೇಳಿದ್ದ'ಕ್ಕೆ ಒಪ್ಪಿಗೆ ಕೂಡ ಸೂಚಿಸಬಹುದು. ಆದರೆ, ಇದಿನ್ನೂ ಆರಂಭ. ಟಿಎಸ್‌ಐಗೆ ನೀಡಿದ ವಿಶೇಷ ಸಂದರ್ಶನದ ಸಂದರ್ಭದಲ್ಲಿ ಅನಂತ ಕುಮಾರ್ "ಯಡಿಯೂರಪ್ಪ ಸರ್ಕಾರ 5 ವರ್ಷಗಳ ಕಾಲ ಭದ್ರವಾಗಿ ಉಳಿದು ಕೊಳ್ಳುತ್ತದೆ" ಎಂದು ಹೇಳಿದ್ದರೂ, ಬುಡ ಅಲುಗಾಡಿಸುವ ಕೆಲಸ ನಡೆಯುತ್ತಲೇ ಇರುತ್ತದೆ.

ಈ ನಡುವೆ ಬಿಜೆಪಿಯಲ್ಲಿ ಒಂದು 'ಭಸ್ಮಾಸುರ' ಪಡೆ ಹುಟ್ಟಿಕೊಂಡಿದೆ. ದುರಂತವೆಂದರೆ ಮ್ಯಾಜಿಕ್ ಸಂಖ್ಯೆ 113ದಾಟಲು 6 ಪಕ್ಷೇತರ ಶಾಸಕರ ಬೆಂಬಲಗಳಿಸಲು ಯಡಿಯೂರಪ್ಪ ಅದೇ 'ಭಸ್ಮಾಸುರ'ರನ್ನೇ ನಂಬಬೇಕಾಯಿತು. ಸದ್ಯದ ಮಟ್ಟಿಗೆ ಹೇಳುವುದಾದರೆ ಕರ್ನಾಟಕದ ರಾಜಕೀಯವನ್ನೇ ಬಳ್ಳಾರಿಯ 'ರೆಡ್ಡಿ ಬ್ರದರ್ಸ್' ನಿಯಂತ್ರಿಸುತ್ತಿದ್ದಾರೆ. ಆದರೆ, ಕೆಲವೇ ತಿಂಗಳಲ್ಲಿ ಇದೇ 'ಭಸ್ಮಾಸುರ' ಪಡೆ ಯಡಿಯೂರಪ್ಪ ಅವರಿಗೆ ಕಂಟಕವಾದಲ್ಲಿ ಅಚ್ಚರಿ ಪಡಬೇಕಿಲ್ಲ. 'ಯಾವುದೇ ಷರತ್ತುಗಳಲ್ಲಿದೇ' 6 ಶಾಸಕರನ್ನು ಬಿಜೆಪಿ ಬುಟ್ಟಿಗೆ ಹಾಕಿಕೊಳ್ಳುವ ಸುಸಜ್ಜಿತ ಕಾರ್ಯಾಚರಣೆಯ ಮೇಲ್ವಿಚಾರಣೆ ಹೊತ್ತಿತ್ತು ಈ ಪಡೆ. ಒಮ್ಮೆ ಕಾರ್ಯಾಚರಣೆ ಯಶಸ್ವಿಯಾದ ಕೂಡಲೇ ಕರುಣಾಕರ ರೆಡ್ಡಿ ಕಣ್ಣು, ಇಲ್ಲದ 'ಉಪ ಮುಖ್ಯಮಂತ್ರಿ' ಹುದ್ದೆಯ ಮೇಲೆ ಬಿತ್ತು. "ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದೇ ನಾವು" ಎಂಬಂತಹ ಭಾವನೆ ಈಗಾಗಲೇ ರೆಡ್ಡಿ ಬ್ರದರ್ಸ್ ಮನದಲ್ಲಿ ಆಳವಾಗಿ ನೆಟ್ಟಿದೆ. ಅದರ ಪರಿಣಾಮದಿಂದಾಗಿಯೇ ಉಪ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಟ್ಟಿದ್ದು. ಅವರನ್ನು ಸಂತೃಪ್ತಿಗೊಳಿಸುವುದು ಅನಿವಾರ್ಯವಾದ ಕಾರಣದಿಂದಲೇ ಯಡಿಯೂರಪ್ಪ ಅವರು ಜನಾರ್ಧನ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ಇಬ್ಬರನ್ನೂ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವುದು. ಮಾತ್ರವಲ್ಲ, ಅವರ 'ಸಹೋದರ' ಶ್ರೀರಾಮುಲು ಅವರಿಗೆ ಕೂಡ ಸಚಿವ ಪಟ್ಟ ನೀಡಲಾಗಿದೆ. ಒಂದೇ ಮನೆಯಲ್ಲಿ ಮೂರು ಮಂತ್ರಿಗಳು! ಇದೇ ಪರಿಸ್ಥಿತಿ ಮುಂದುವರಿದಲ್ಲಿ 'ರೆಡ್ಡಿ ಬ್ರದರ್ಸ್' ಒಂದು ದಿನ ಯಡಿಯೂರಪ್ಪ ಅವರಿಗಿಂತ ದೊಡ್ಡದಾಗಿ ಬೆಳೆದು ನಿಲ್ಲುತ್ತಾರೆ.

ಇನ್ನು ಜೊತೆಯಲ್ಲಿರುವ 6 ಪಕ್ಷೇತರರು. ಯಡಿಯೂರಪ್ಪ ಸರ್ಕಾರ ಅಸ್ತಿತ್ವದಲ್ಲಿ ಇರಬೇಕಾದರೆ ಈ ಪೈಕಿ ಕನಿಷ್ಠ ಮೂವರನ್ನಾದರೂ ದಿನದ 24 ಗಂಟೆಗಳ ಕಾಲ ಸಂತೃಪ್ತರಾಗಿರಬೇಕು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಏನನ್ನೇ ಮಾಡಲಿ ಅಥವಾ ಬಿಡಲಿ. ಅದ್ಯಾವುದೂ ಅವರನ್ನು ಉಳಿಸಲಾರದು. ಅವರ ಅಳಿವು-ಉಳಿವು ಯಾರ ಕೈಯಲ್ಲಿದೆ ಎಂದರೆ ಆ ಮೂವರ ಕೈಯಲ್ಲಿ. ಅಧಿಕಾರದಲ್ಲಿ ಇರಬೇಕೆಂದರೆ ಮಾನ್ಯ ಮುಖ್ಯಮಂತ್ರಿಗಳು, 6ರ ಪೈಕಿ 3ಮಂದಿಯ ಎಲ್ಲ ಆಗು-ಹೋಗುಗಳನ್ನು ಪೂರೈಸುತ್ತಲೇ ಇರಬೇಕು. ಇವರು ಯಡಿಯೂರಪ್ಪ ಪಾಲಿಗೆ ಬಿಸಿ ತುಪ್ಪ. ಹೀಗೆ, ಪಕ್ಷದೊಳಗಿನ ಹಾಗೂ ಪಕ್ಷದ ಹೊರಗಿನ 'ಭಿನ್ನಮತ' ಯಡಿಯೂರಪ್ಪ ಪಾಲಿಗೆ ದುಸ್ವಪ್ನವಾಗಿ ಕಾಡಲಿವೆ. ಈ 'ಭಿನ್ನಮತ'ವನ್ನು ಯಾರ ರೀತಿ 'ಮ್ಯಾನೇಜ್' ಮಾಡುತ್ತಾರೆ ಎನ್ನುವುದರ ಮೇಲೆ ಬಿಜೆಪಿ ಹಾಗೂ ಯಡಿಯೂರಪ್ಪ ಭವಿಷ್ಯ ನಿಂತಿದೆ.

ಟಿಎಸ್‌ಐ

2

ಸಮಸ್ಯೆಗಳ 'ರಾಜಧಾನಿ' ಬೆಂಗಳೂರು

ಯಡಿಯೂರಪ್ಪ ಸರ್ಕಾರದ ಪಾಲಿಗೆ ಬೆಂಗಳೂರು ಕೂಡ ಒಂದು ಬೃಹತ್ ಸಮಸ್ಯೆಯೇ. ಸರ್ಕಾರ ಇಲ್ಲಿ ಔದ್ಯಮಿಕ ಮತ್ತು ರಿಯಲ್ ಎಸ್ಟೇಟ್ ಮಾಫಿಯ ಜೊತೆ ಜನಸಾಮಾನ್ಯನನ್ನೂ ಸಂತೃಪ್ತಿಗೊಳಿಸಬೇಕು. ಸರ್ಕಸ್ ಆರಂಭವಾಗಿದೆ...

ದೂರದ ಬೆಟ್ಟ ನುಣ್ಣಗೆ ಎಂಬ ಮಾತಿಗೆ ಸಾಕ್ಷಿ ನಮ್ಮ ರಾಜಧಾನಿ, 'ಸಿಲಿಕಾನ್ ಸಿಟಿ', ಉದ್ಯಾನನಗರಿ, ಬೆಂಗಳೂರು. ಹತ್ತಿರ-ಹತ್ತಿರ ಒಂದು ಕೋಟಿ ಜನರನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಬೆಂಗಳೂರು ಈಗ ಬೆಳೆಯುತ್ತಿರುವ ಪರಿಯನ್ನು ಕಂಡಾಗ ಇನ್ನು ಕೆಲವೇ ದಿನಗಳಲ್ಲಿ ಅದು ಸಮಸ್ಯೆಗಳ 'ರಾಜಧಾನಿ'ಯಾಗಿ ಅಧಿಕಾರಾರೂಢ ಪಕ್ಷದ ಪಾಲಿಗೆ ನುಂಗಲಾರದ ತುತ್ತಾಗಲಿದೆ. ದೇಶದಲ್ಲಿ ನೆಲೆ ನಿಂತಿರುವ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಪೈಕಿ ಶೇಕಡಾ 33ರಷ್ಟು ಬೆಂಗಳೂರಿನಲ್ಲಿಯೇ ಇವೆ. ಜೈವಿಕ ತಂತ್ರಜ್ಞಾನ ಸಂಸ್ಥೆಗಳ ಪೈಕಿ ಶೇಕಡಾ 48ರಷ್ಟು ಉದ್ಯಾನನಗರಿಯಲ್ಲಿಯೇ ತಳವೂರಿವೆ. ಆರ್ಥಿಕವಾಗಿ ಬೆಂಗಳೂರು ಎಗ್ಗಿಲದೇ ಬೆಳೆಯುತ್ತಿದೆ. ಇಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಯುವಜನರು ಅವರಿಗೆ ಸಿಕ್ಕಿದ ಆರ್ಥಿಕ ಸ್ವಾತಂತ್ರ್ಯದ ಮೂಲಕ ಇಂದ್ರಲೋಕವನ್ನೇ ಇಲ್ಲಿ ಸೃಷ್ಟಿಸಿ ಬಿಟ್ಟಿದ್ದಾರೆ. ಇನ್ನೊಂದೆಡೆ, ನಗರದಲ್ಲಿನ 22 ಲಕ್ಷ ಜನರು 733ಕೊಳಗೇರಿಗಳಲ್ಲಿ ನೆಲೆ ನಿಂತಿದ್ದಾರೆ! ಒಂದೆಡೆ ಇಂದ್ರಲೋಕ, ಮತ್ತೊಂದೆಡೆ ಕೊಳಗೇರಿಗಳ ಸಾಮ್ರಾಜ್ಯ. ಒಂದರ್ಥದಲ್ಲಿ ಬೆಂಗಳೂರು ಆಧುನಿಕ ಜಗತ್ತಿನ ವಿಪರ್ಯಾಸ. ಒಟ್ಟಾರೆ ಸಾಮಾಜಿಕ ಅಸಮಾನತೆಯ ಕೂಪವಾಗಿ ಪರಿವರ್ತನೆಗೊಂಡಿರುವ ಬೆಂಗಳೂರು ಮೂಲಸೌಲಭ್ಯಗಳ ಕೊರತೆಯಿಂದ ನಲುಗಿದೆ.

ಒಂದೆಡೆ ಇನ್ಫೋಸಿಸ್‌ನ ದೊಡ್ಡ ತಲೆಗಳು, ಬಯೋಟೆಕ್‌ನ ಕಿರಣ್ ಮಜುಂದಾರ್ ಷಾ "ನಮಗೆ ಎಲ್ಲ ಮೂಲಸೌಲಭ್ಯಗಳನ್ನು ನೀಡಿ. ಇಲ್ಲವಾದರೆ, ಬೇರೆ ರಾಜ್ಯಗಳತ್ತ ಮುಖ ಮಾಡುತ್ತೇವೆ" ಎಂಬ ಬೆದರಿಕೆಯನ್ನು ಆಗಾಗ ಸರ್ಕಾರಕ್ಕೆ ಹಾಕುತ್ತಲೇ ಇರುತ್ತಾರೆ. ಇನ್ನೊಂದೆಡೆ ಶ್ರೀರಾಂಪುರದ ಕೊಳಗೇರಿಯಲ್ಲಿ ಒಂದು ಹನಿ ನೀರಿಗಾಗಿ ಜನಸಾಮಾನ್ಯ ಪರಿಪಾಟಲು ಪಡುತ್ತಲೇ ಇರುತ್ತಾನೆ. ಹೀಗೆ ಎರಡು ಮೊನಚಾದ ಅಲಗುಗಳು ಸರ್ಕಾರವನ್ನು ಪದೇ, ಪದೇ ಚುಚ್ಚುತ್ತಲೇ ಬಂದಿವೆ. ಚುಚ್ಚುತ್ತಲೇ ಇರುತ್ತವೆ. ಯಡಿಯೂರಪ್ಪ ಸರ್ಕಾರ ಕೂಡ ಇದಕ್ಕೆ ಹೊರತಾಗಿಲ್ಲ. ಔದ್ಯಮಿಕ ಹಾಗೂ ರಿಯಲ್ ಎಸ್ಟೇಟ್ 'ಲಾಬಿ'ಗಳು ಸದಾ ಸರ್ಕಾರದ ಮೇಲೆ ಒತ್ತಡ ಹೇರಿ ತಮಗೇನು ಬೇಕೋ, ಅದನ್ನು ಪಡೆಯಲು ಯಶಸ್ವಿಯಾಗುತ್ತವೆ. ಆದರೆ, ಜನಸಾಮಾನ್ಯರ ಪರ ಲಾಬಿ ಮಾಡಲು ಇಲ್ಲಿ ಯಾರೂ ಇಲ್ಲ. ಈಗ ಆ ಜವಾಬ್ದಾರಿಯನ್ನು ಯಡಿಯೂರಪ್ಪ ಮತ್ತು ಅವರ ಸಚಿವ ಪಡೆ ಹೊರಬೇಕಾಗಿದೆ. ಹಾಗೆ ನೋಡಿದರೆ ರಾಜಕೀಯವಾಗಿ ಕೂಡ ಔದ್ಯಮಿಕ ಹಾಗೂ ರಿಯಲ್ ಎಸ್ಟೇಟ್ ಲಾಬಿ ಬಲ ಹೆಚ್ಚಿದೆ. ರಾಜಕಾರಣಿಗಳಿಗೆ ಜನಸಾಮಾನ್ಯ ಬೇಕಾಗುವುದು ಚುನಾವಣೆಗಿಂತ ಮೊದಲು ಮಾತ್ರ. ಚುನಾವಣಾ ಫಲಿತಾಂಶ ಬಂದು ಅಧಿಕಾರ ದಕ್ಕಿದ ಮೇಲೆ ಎಲ್ಲರೂ ಮುಖ ಮಾಡಿ ನಿಲ್ಲುವುದು ಔದ್ಯಮಿಕ ಹಾಗೂ ರಿಯಲ್ ಎಸ್ಟೇಟ್ ಲಾಬಿಯತ್ತಲೇ. ಎಲ್ಲ ಸರ್ಕಾರಗಳು ಮುಖ್ಯವಾಗಿ ಕೆಲಸ ಮಾಡುವುದು ಆ ಲಾಬಿಯನ್ನು ಸಂತೃಪ್ತಿಗೊಳಿಸುವುದಕ್ಕಾಗಿಯೇ. ಯಡಿಯೂರಪ್ಪ ಸರ್ಕಾರ ಈ ನಿಟ್ಟಿನಲ್ಲಿ ವಿಭಿನ್ನವಾಗಿ ನಿಲ್ಲಲಿದೆಯೇ?

ಹಾಗೆ ನೋಡಿದಲ್ಲಿ ಬೆಂಗಳೂರು ಮೂಲಸೌಲಭ್ಯಗಳ ಸದ್ಯದ ಸ್ಥಿತಿ ಜನಸಾಮಾನ್ಯನನ್ನೂ ಸಂತೃಪ್ತಗೊಳಿಸಿಲ್ಲ. ನೀರು, ರಸ್ತೆ, ಶುಚಿತ್ವ, ಮಿತಿ ಮೀರಿದ ಟ್ರಾಫಿಕ್ ...ಹೀಗೆ ಸಾಮಾನ್ಯ ಸಂಗತಿಗಳು ಕೂಡ ಜನರ ಪಾಲಿಗೆ ದೊಡ್ಡ ಸಮಸ್ಯೆಯಾಗಿ ನಿಂತಿವೆ. "ನಿಯಂತ್ರಣವಿಲ್ಲದ ಬೆಳವಣಿಗೆ ಇದಕ್ಕೆಲ್ಲ ಕಾರಣ" ಎಂದು ಸುಲಭವಾಗಿ ನುಣುಚಿಕೊಳ್ಳಬಹುದು. ಆದರೆ, ಆ ನಿಯಂತ್ರಣವಿಲ್ಲದ ಬೆಳವಣಿಗೆಗೆ ಸರ್ಕಾರ ಕೂಡ ಕಾರಣ ಎನ್ನುವುದನ್ನು ಆಡಳಿತದ ಹೊಣೆ ಹೊತ್ತವರು ಅರ್ಥ ಮಾಡಿಕೊಳ್ಳಬೇಕು. ಜೊತೆ-ಜೊತೆಯಲ್ಲಿಯೇ ಆರ್ಥಿಕವಾಗಿ ಬೆಂಗಳೂರನ್ನು ಇನ್ನೂ ಸದೃಢ ಮಾಡುವ ನಿಟ್ಟಿನಲ್ಲಿ ನೂತನ ಸರ್ಕಾರ ದಿನದ 24 ಗಂಟೆಗಳ ಕಾಲ ಕಾರ್ಯ ನಿರತವಾಗಬೇಕಿದೆ.

ಈ ನಡುವೆ ದೇವನಹಳ್ಳಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ 'ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ'ಕ್ಕೆ ಸುಸಜ್ಜಿತ ಸಂಪರ್ಕ, ನಗರದ ಮಧ್ಯದಲ್ಲಿನ ಎಚ್‌ಎಎಲ್ ವಿಮಾನ ನಿಲ್ದಾಣವನ್ನು ಉಳಿಸಿಕೊಳ್ಳುವುದು, ಮೆಟ್ರೋ ಕಾಮಗಾರಿ, ಬೆಂಗಳೂರು-ಮೈಸೂರು ಕಾರಿಡಾರ್ ರಸ್ತೆಗೆ ಮುಕ್ತಿ...ಇವು ಯಡಿಯೂರಪ್ಪ ಸರ್ಕಾರದ ಮುಂದಿರುವ ಸದ್ಯದ ಸವಾಲುಗಳು. ಬೃಹತ್ ಬೆಂಗಳೂರು ಯೋಜನೆಯನ್ನು ಸಮರ್ಪಕ ಹಾಗೂ ಸಮರ್ಥವಾಗಿ ಜಾರಿಗೆ ತರಲು ಗಂಭೀರ ಪ್ರಯತ್ನಗಳನ್ನು ಮಾಡಬೇಕಿದೆ.

ಒಟ್ಟಾರೆ ಇನ್ಫೋಸಿಸ್- ಬಯೋಟೆಕ್ ದಣಿಗಳನ್ನು ಸಂತೃಪ್ತಿಗೊಳಿಸುತ್ತಲೇ, ಜನಸಾಮಾನ್ಯರ ಮನಸ್ಸನ್ನು ತಣಿಸುವ ಕೆಲಸ ಕೂಡ ನೂತನ ಸರ್ಕಾರ ಮಾಡಬೇಕಿದೆ. ಇದನ್ನು ಯಡಿಯೂರಪ್ಪ ಎಷ್ಟು ಸಮರ್ಥವಾಗಿ ಮಾಡುತ್ತಾರೆ ಎನ್ನುವುದರ ಮೇಲೆ ಅವರ ಭವಿಷ್ಯ ನಿಂತಿದೆ. ಏಕೆಂದರೆ, ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 17 ಸ್ಥಾನಗಳನ್ನು ಪಡೆದಿದೆ. ಆ ವಿಶ್ವಾಸ ಉಳಿಸಿಕೊಳ್ಳುವ ಜವಾಬ್ದಾರಿ ಯಡಿಯೂರಪ್ಪ ಹೆಗಲೇರಿ ಕುಳಿತಿದೆ.

ಟಿಎಸ್‌ಐ

3

ಸಮೃದ್ಧ ಕರ್ನಾಟಕ? ಅಧಿಕಾರ?

ರಾಜ್ಯವನ್ನು ಆರ್ಥಿಕವಾಗಿ ಸಬಲ ಮಾಡಬೇಕಿದ್ದರೆ ಯಡಿಯೂರಪ್ಪ ಗಣಿ ಉದ್ಯಮ ಮತ್ತು ರಿಯಲ್ ಎಸ್ಟೇಟ್ ಮಾಫಿಯಾವನ್ನು ನಿಯಂತ್ರಿಸಬೇಕು. ಅವುಗಳಿಗೆ ಕಾನೂನಿನ ಚೌಕಟ್ಟಿನಡಿ ಕಡಿವಾಣ ಹಾಕಬೇಕು.

ಔದ್ಯಮಿಕ ವಲಯದಲ್ಲಿ ಕರ್ನಾಟಕ ದೇಶದ ಪ್ರಮುಖ ಆಧಾರಸ್ತಂಭ. ದೇಶದ ಔದ್ಯಮಿಕ ಪ್ರಗತಿಗೆ ರಾಜ್ಯದ ಐಟಿ, ಬಿಟಿ ಕ್ಷೇತ್ರಗಳ ಕೊಡುಗೆ ಅತ್ಯಂತ ನಿರ್ಣಾಯಕ. ಹಾಗೇ ವಿದೇಶಿ ನೇರ ಬಂಡವಾಳ ಹೂಡಿಕೆದಾರರಿಗೆ ಕೂಡ ರಾಜ್ಯ ಮೊದಲ ಆದ್ಯತೆಯಾಗಿದೆ. ಉತ್ಪಾದನೆ, ಕೃಷಿ ಮತ್ತು ಸೇವಾ ವಲಯ ಆಧಾರಿತ ಉದ್ಯಮಗಳು ರಾಜ್ಯದ ಅಭಿವೃದ್ಧಿಯನ್ನು ನಿರ್ಧರಿಸುತ್ತಿವೆ.

ಐಟಿ ವಲಯ ಮತ್ತು ಗಣಿ ಉದ್ಯಮದ ರಫ್ತು ಪ್ರಮಾಣಗಳು ರಾಜ್ಯದ ಪ್ರಮುಖ ವಿದೇಶಿ ವಿನಿಮಯ ಗಳಿಕೆ ಮಾನದಂಡಗಳಾಗಿರುವಂತೆಯೇ ಜೈವಿಕ ತಂತ್ರಜ್ಞಾನ, ಕೃಷಿ, ಜವಳಿ, ಸಕ್ಕರೆ, ಆಟೋಮೊಬೈಲ್ ಉತ್ಪನ್ನಗಳು ಕೂಡ ಸಾಕಷ್ಟು ಪ್ರಮಾಣದಲ್ಲಿ ವಿದೇಶಿ ವಿನಿಮಯ ಗಳಿಸುತ್ತಿವೆ.

ಆದರೆ, ಇತ್ತೀಚಿನ ವರ್ಷಗಳಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಆಂಧ್ರಪ್ರದೇಶ, ಗುಜರಾತ್, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳು ಪೈಪೋಟಿಗಿಳಿದಿವೆ. ರಾಜ್ಯದ ಮೂಲಸೌಕರ್ಯಗಳ ನಿರಾಶಾದಾಯಕ ಸ್ಥಿತಿ ಮತ್ತು ಆಡಳಿತಶಾಹಿಯ ನಿಧಾನವೇ ಪ್ರಧಾನ ಧೋರಣೆಯಿಂದಾಗಿ ಹಲವು ಉದ್ಯಮಗಳು ಈಗಾಗಲೇ ಬೇರೆ ರಾಜ್ಯಗಳತ್ತ ಮುಖಮಾಡಿವೆ. ಜೊತೆಗೆ ವಿಶೇಷ ಆರ್ಥಿಕ ವಲಯಗಳಿಗಾಗಿ ಕೃಷಿ ಭೂಮಿ ಬಿಟ್ಟು ಕೊಡಲು ರೈತರು ಸಿದ್ಧರಿಲ್ಲ. ಆ ಸಂಬಂಧ ಈಗಾಗಲೇ ಮಂಗಳೂರು, ಕೊಪ್ಪಳ, ಚಾಮರಾಜನಗರ, ಗದಗ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಹಾಗೇ ರಾಜ್ಯದ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನೀಡುವಲ್ಲಿ ವಿಫಲವಾಗಿರುವ ಕಾರಣ ಸಾಕಷ್ಟು ರೈತರು ಕಬ್ಬು ಬೆಳೆಯುವುದನ್ನೇ ಕೈಬಿಟ್ಟಿದ್ದಾರೆ. ಅದರ ಪರಿಣಾಮ ಸಕ್ಕರೆ ಉತ್ಪಾದನೆಯ ಮೇಲಾಗುವುದು ನಿಶ್ಚಿತ. ಜವಳಿ ಪಾರ್ಕ್, ವೈನ್ ಪಾರ್ಕ್, ಜೈವಿಕ ಪಾರ್ಕ್‌ಗಳ ಆರಂಭದ ಕಳೆದ ಬಜೆಟ್ ಭರವಸೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಜೊತೆಗೆ ರಾಜ್ಯದ ರಸ್ತೆ, ರೈಲು ಮತ್ತು ವಿಮಾನ ಸಂಪರ್ಕ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾಗಿಲ್ಲ. ಬಂದರುಗಳಿಗೆ ರಾಜ್ಯದ ವಿವಿಧ ಔದ್ಯಮಿಕ ನಗರಗಳಿಂದ ರೈಲು ಮತ್ತು ರಸ್ತೆ ಸಂಪರ್ಕ ವ್ಯವಸ್ಥೆ ತೀರಾ ಹದಗೆಟ್ಟಿದೆ. ಜಲ ಸಂಪನ್ಮೂಲ ಮತ್ತು ವಿದ್ಯುತ್ ಕೊರತೆ ಮುಂದಿನ ದಿನಗಳಲ್ಲಿ ರಾಜ್ಯದ ಉದ್ಯಮ ವಲಯವನ್ನು ಕಂಗೆಡಿಸುವ ಸ್ಥಿತಿ ಇದೆ. ಮೂಲ ಸೌಕರ್ಯಗಳನ್ನು ಉತ್ತಮಪಡಿಸುವ ಮೂಲಕ ಉದ್ಯಮಿಗಳನ್ನು ರಾಜ್ಯದಲ್ಲೇ ಉಳಿಸಿಕೊಳ್ಳುವುದರ ಜೊತೆಗೆ ಇನ್ನಷ್ಟು ಬಂಡವಾಳವನ್ನು ಆಕರ್ಷಿಸುವುದು ಈಗಿನ ಅಭಿವೃದ್ಧಿ ದರವನ್ನು ಕಾಯ್ದುಕೊಳ್ಳುವಲ್ಲಿ ಅನಿವಾರ್ಯ. ಹಾಗೇ ಉದ್ಯಮದ ಆದ್ಯತೆ ಕೃಷಿ ಮತ್ತು ಇತರ ವಲಯಗಳಿಗೆ ಕಂಟಕಪ್ರಾಯವಾಗದಂತೆ ಎಚ್ಚರಿಕೆ ವಹಿಸುವ ಅಗತ್ಯ ಕೂಡ ಹೆಚ್ಚಿದೆ.

ರಾಜ್ಯದ ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗಿ ವಲಯ ಹಿಂದಿಕ್ಕಿದೆ. ಆದರೆ, ಸಾರ್ವಜನಿಕ ವಲಯದ ಹಲವು ಉದ್ಯಮಗಳು ಇಂದಿಗೂ ಗಣನೀಯ ಪ್ರಮಾಣದ ಕೊಡುಗೆ ನೀಡುತ್ತಿವೆ ಎಂಬುದನ್ನು ಮರೆಯುವಂತಿಲ್ಲ. ಹಾಗೇ ಬೃಹತ್ ಮತ್ತು ಸಣ್ಣ ಉದ್ಯಮಗಳು ಸಮತೋಲನ ಕೂಡ ಗಮನಿಸಬೇಕಾದ ಅಂಶ. ವಿದ್ಯುತ್‌ನಂತಹ ಮೂಲ ಸೌಕರ್ಯದ ಕೊರತೆಯಿಂದಾಗಿ ಕಳೆದ ವರ್ಷ ಶೇ.50ರಷ್ಟು ಸಣ್ಣ ಉದ್ಯಮಗಳು ಬಾರಿ ನಷ್ಟ ಅನುಭವಿಸಿವೆ.

ಇನ್ನು ರಾಜ್ಯದಲ್ಲಿ ಆಟೋಮೊಬೈಲ್, ಎಲೆಕ್ಟ್ರಾನಿಕ್, ಜವಳಿ, ಉಕ್ಕು ಮತ್ತು ಜೈವಿಕ ತಂತ್ರಜ್ಞಾನ ಉದ್ಯಮದ ಸಾಧ್ಯತೆಗಳನ್ನು ನಿರೀಕ್ಷಿತ ಪ್ರಮಾಣದಲ್ಲಿ ಬಳಸಿಕೊಂಡಿಲ್ಲ. ಈ ಮಾತು ಪ್ರವಾಸೋದ್ಯಮ ಕ್ಷೇತ್ರಕ್ಕೂ ಅನ್ವಯಿಸದೇ ಇರದು.

ಪ್ರಮುಖವಾಗಿ ಗಣಿ ಉದ್ಯಮದಲ್ಲಿ ಪಾರದರ್ಶಕತೆ ತರಬೇಕಿದೆ. ಉದ್ಯಮದ ಹೆಸರಲ್ಲಿ ಕರ್ನಾಟಕದ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಗಣಿ ದಣಿಗಳಿಗೆ ಕಡಿವಾಣ ಹಾಕಬೇಕಿದೆ. ಗಣಿ ನೀತಿಯನ್ನು ಸಂಪೂರ್ಣ ಪರಿಷ್ಕರಣೆಗೊಳಪಡಿಸಿ ಅಕ್ರಮ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ತಿರುಗಿಸಬೇಕಿದೆ. ಹಾಗೇ ರಿಯಲ್ ಎಸ್ಟೇಟ್ ಉದ್ಯಮ ಕೂಡ ತೀವ್ರ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಅದನ್ನೂ ಕಾನೂನಿನ ಅಂಕುಶದಲ್ಲಿ ಪಳಗಿಸಿದಲ್ಲಿ ಸಾವಿರಾರು ಕೋಟಿ ರೂಪಾಯಿ ಆದಾಯ ಮೂಲವಾಗಲಿದೆ. ಆದರೆ, ಆ ಎರಡೂ ವಲಯದ ಪ್ರಭಾವಿಗಳು ಈಗ ಮುಖ್ಯಮಂತ್ರಿಗಳ ಸರ್ಕಾರದಲ್ಲೂ ಪಾಲುದಾರರಾಗಿದ್ದಾರೆ. ಹಾಗಾಗಿ ಈಗ ಅವರೆದರುರು ತಾವೇ ಹೇಳಿದ ಸಮೃದ್ಧ ಕರ್ನಾಟಕದ ಕನಸು ಮತ್ತು ತಮ್ಮ ಅಧಿಕಾರದ ಆಧಾರ ಸ್ತಂಭಗಳಾಗಿರುವ ಈ ಎರಡು ಉದ್ಯಮಗಳಲ್ಲಿ ಯಾವುದನ್ನು ಆಯ್ಕೆಮಾಡಿಕೊಳ್ಳಬೇಕು ಎಂಬ ಬಹುದೊಡ್ಡ ಸವಾಲಿದೆ. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇವೆ, ಸಮಗ್ರ ಅಭಿವೃದ್ಧಿಗಾಗಿ ತಮಗೆ ಮತ ನೀಡಿ ಎಂದು ಅಧಿಕಾರದ ಗದ್ದುಗೆ ಏರಿರುವ ಮಾನ್ಯ ಮುಖ್ಯಮಂತ್ರಿಗಳು ಯಾವುದನ್ನು ಆಯ್ಕೆಮಾಡಿಕೊಳ್ಳುತ್ತಾರೆ ಕಾದು ನೋಡೋಣ.

ಟಿಎಸ್‌ಐ

4

ಬಣಗುಡುವ ಉದ್ಯಮ, ಹಸಿದ ಹೊಲ...

ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಅಗತ್ಯಕ್ಕಿಂತ ಹೆಚ್ಚಿದ್ದರೂ ಕೊರತೆ ಅನುಭವಿಸುತ್ತಿದ್ದೇವೆ. ಇನ್ನೊಂದೆಡೆ ನೀರಾವರಿ ಯೋಜನೆಗಳು ಕೂಡ ಭ್ರಷ್ಟಾಚಾರದ ಕೂಪವಾಗಿ ಪರಿವರ್ತನೆಗೊಂಡು ನರಳುತ್ತಿವೆ.

ರಾಜ್ಯದ ಅರ್ಥ ವ್ಯವಸ್ಥೆ ನಿಂತಿರುವುದು ಕೃಷಿ ಮತ್ತು ಉದ್ಯಮ ವಲಯದ ಮೇಲೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಅವೆರಡೂ ವಲಯಗಳ ಏಳಿಗೆ ಅನಿವಾರ್ಯ. ಆ ಎರಡೂ ವಲಯಗಳಿಗೆ ವಿದ್ಯುತ್ ನಿರ್ಣಾಯಕ. ದುರದೃಷ್ಟವೆಂದರೆ ವಿದ್ಯುತ್ ಕೊರತೆಯಿಂದಾಗಿ ಕಳೆದ ಬೇಸಿಗೆಯಲ್ಲಿ ರಾಜ್ಯದ ಉದ್ಯಮ ವಲಯ ಶೇ.20 ರಷ್ಟು ನಷ್ಟ ಅನುಭವಿಸಿದೆ. ಇನ್ನು ಕೃಷಿ ವಲಯದ ನಷ್ಟವನ್ನು ಲೆಕ್ಕವಿಟ್ಟವರಿಲ್ಲ.

ಮಳೆ ಪ್ರಮಾಣದ ತೀರಾ ಕಡಿಮೆ ಇರುವ ಗುಜರಾತ್‌ನಲ್ಲಿ ವಿದ್ಯುತ್ ಸ್ವಾವಲಂಬನೆ ಸಾಧಿಸುವುದು ಸಾಧ್ಯವಾದರೆ ಹತ್ತಾರು ಪ್ರಮುಖ ನದಿಗಳನ್ನು ಹೊಂದಿರುವ, ಯಥೇಚ್ಛ ಮಳೆ ಸುರಿಯುವ ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ 'ಗುಜರಾತ್ ಮಾದರಿ'ಯ ಕನಸು ಹೊತ್ತಿರುವ ಮುಖ್ಯಮಂತ್ರಿಗಳಿಗೆ ಈಗಾಗಲೇ ಎದುರಾಗಿರಬಹುದು. ರಾಜ್ಯದ ವಿದ್ಯುತ್ ಉತ್ಪಾದನೆ (ಜಲ ವಿದ್ಯುತ್, ಉಷ್ಣ ವಿದ್ಯುತ್ ಮತ್ತು ಪವನಶಕ್ತಿ ಸೇರಿ) ಸಾಮರ್ಥ್ಯ 7,784 ಮೆಗಾ ವ್ಯಾಟ್. ಆದರೆ, ಉತ್ಪಾದನೆಯಾಗುತ್ತಿರುವುದು 7,048 ಮೆಗಾ ವ್ಯಾಟ್. ರಾಜ್ಯದಲ್ಲಿ ಬೇಡಿಕೆ ಇರುವುದು 6,253ಮೆಗಾ ವ್ಯಾಟ್‌ಗೆ. ಅಂದರೆ, ಅಗತ್ಯ ಪ್ರಮಾಣಕ್ಕಿಂತ ಸುಮಾರು 800 ಮೆಗಾ ವ್ಯಾಟ್ ಅಧಿಕ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಆದರೂ, 500-600 ಮೆಗಾ ವ್ಯಾಟ್ ವಿದ್ಯುತ್ ಕೊರತೆ ರಾಜ್ಯವನ್ನು ಕಾಡುತ್ತಿದೆ!

ನೀರಾವರಿ ಸೌಲಭ್ಯಗಳ ವಿಷಯದಲ್ಲಿ ರಾಜ್ಯ ದೇಶದಲ್ಲೇ ಅತ್ಯಂತ ಹಿಂದೆ ಬಿದ್ದಿರುವ ಪ್ರದೇಶ. ಹಾಗಾಗಿ ರಾಜ್ಯದಲ್ಲಿ ನೀರಾವರಿ ಮತ್ತಿತರ ಸಮಸ್ಯೆಯಿಂದಾಗಿ ಸುಮಾರು ನಾಲ್ಕು ಲಕ್ಷ ಹೆಕ್ಟೇರ್ ಕೃಷಿ ಯೋಗ್ಯ ಭೂಮಿ ಇನ್ನೂ ಸಾಗುವಳಿಗೆ ಲಭ್ಯವಾಗದೆ ಪಾಳುಬಿದ್ದಿದೆ.

ರಾಜ್ಯದ ಕೃಷ್ಣಾ ಮತ್ತು ಕಾವೇರಿ ಕಣಿವೆಯಲ್ಲಿ ಅವಕಾಶವಿರುವಷ್ಟು ಪ್ರಮಾಣದಲ್ಲಿ ನೀರಾವರಿ ಯೋಜನೆಗಳ ಮೂಲಕ ರಾಜ್ಯದ ಪಾಲಿನ ನೀರಿನ ಸದ್ಬಳಕೆ ಮಾಡಿಕೊಂಡಿಲ್ಲ. ಕಾವೇರಿ ಕಣಿವೆಯಲ್ಲಿ ನೀರಿನ ಬಳಕೆ ಪ್ರಮಾಣದಲ್ಲಿ ನ್ಯಾಯಮಂಡಳಿಯ ಪಕ್ಷಪಾತದ ತೀರ್ಪು ಅಡ್ಡಗಾಲಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ತನ್ನ ಪರವಾಗಿರುವಂತೆ ಸಮರ್ಪಕ ವಾದ ಮಂಡಿಸಬೇಕಿದೆ. ಹಾಗೇ ಕೃಷ್ಣಾ ಕಣಿವೆಯಲ್ಲಿ ಬಚಾವತ್ ತೀರ್ಪಿನ ಪ್ರಕಾರ ರಾಜ್ಯದ ಪಾಲಿನ 734 ಟಿಎಂಸಿ ಅಡಿ ನೀರು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ. ಆ ನೀರಿನ ಬಳಕೆಗೆ 2000ನೇ ಸಾಲಿಗೆ ಕಾಲಮಿತಿ ಮುಗಿದಿದ್ದರೂ ಇನ್ನೂ ಕೇವಲ 600 ಟಿಎಂಸಿ ಅಡಿ ನೀರನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ಕಳೆದ ಹಲವು ದಶಕಗಳಿಂದ ನೆನಗುದಿಗೆ ಬಿದ್ದಿರುವ ತುಂಗಾ ಮೇಲ್ಡಂಡೆ, ಭದ್ರಾ ಮೇಲ್ಡಂಡೆ, ಮಲಪ್ರಭಾ- ಘಟಪ್ರಭಾ, ಬೆಣ್ಣೆತೋರಾ ಮುಂತಾದ ವಿವಿಧ ಹಂತದ ಯೋಜನೆಗಳಿಗೆ ಮುಕ್ತಿ ನೀಡಬೇಕಿದೆ. ಭದ್ರಾ ನಾಲೆಗಳ ಆಧುನೀಕರಣ ಕಾಮಗಾರಿ ಕೂಡ ಜರೂರಾಗಿ ಮುಗಿಯಬೇಕಿದೆ. ಆ ನಂತರ ಅಲ್ಲಿ ಉಳಿತಾಯವಾಗುವ ನೀರು ಮತ್ತು ಭದ್ರಾ ನದಿಯಲ್ಲಿ ನಿಜವಾಗಿಯೂ ಲಭ್ಯವಿರುವ ನೀರಿನ ಪ್ರಮಾಣವನ್ನು ಆಧರಿಸಿ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಬೇಕಿದೆ. ಕೃಷ್ಣಾ ಮೇಲ್ದಂಡೆ ಮೊದಲ ಹಂತದ ಎರಡನೇ ಮತ್ತು ಮೂರನೇ ವಿಭಾಗದ ಕಾಮಗಾರಿ ಕೂಡ ಜರೂರಾಗಿ ಮುಗಿಯಬೇಕಿದೆ. ಆ ಮೂಲಕ ಬರಪೀಡಿತ ಗುಲ್ಬರ್ಗಾ, ರಾಯಚೂರು, ಬಿಜಾಪುರ ಜಿಲ್ಲೆಗಳಿಗೆ ಹಾಗೂ ಮಲಪ್ರಭಾ- ಘಟಪ್ರಭಾ ಯೋಜನೆಗಳ ಅನುಷ್ಠಾನದ ಮೂಲಕ ಬೆಳಗಾವಿ ಜಿಲ್ಲೆಯ ಒಣ ಭೂಮಿಗೆ ನೀರು ಹರಿಸಬೇಕಿದೆ. ಸಿಂಗಟಾಲೂರು ಏತ ನೀರಾವರಿ, ಅಮರ್ಜಾ, ಮುಲ್ಲಾಮಾರಿ, ವಾರಾಹಿ ಯೋಜನೆಗಳು ಕೂಡ ತ್ವರಿತವಾಗಿ ಮುಗಿಯಬೇಕಿದೆ.

ಬೃಹತ್ ಯೋಜನೆಗಳಿಂದಾಗಿ ಪರಿಸರ ನಾಶ, ಜೈವಿಕ ಸಮತೋಲನ ಏರುಪೇರು ಹಾಗೂ ಬೃಹತ್ ಬಂಡವಾಳ ಹೂಡಿಕೆಯಂತಹ ಹೊರೆಗಳು ಎದುರಾಗುವುದನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹಾಗೂ ರೈತ ಕಾಯಕ ಕೆರೆಯಂತಹ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜಕೀಯ ಇಚ್ಛಾಶಕ್ತಿ ಪದರ್ಶಿಸಿದಲ್ಲಿ ವಿವಾದಗಳಿಲ್ಲದೆ ಸಾಕಷ್ಟು ನೀರಾವರಿ ಸಮಸ್ಯೆ ಬಗೆಹರಿಸುವುದು ಸಾಧ್ಯ. ಗುತ್ತಿಗೆದಾರರ ಲಾಬಿಗೆ ಮಣಿಯದ ಪ್ರಾಮಾಣಿಕತೆ ಕೂಡ ಅದಕ್ಕೆ ಬೇಕು. ಹಾಗೇ ಈಗಾಗಲೇ ಇರುವ ನೀರಾವರಿ ಪ್ರದೇಶದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಬೆಳೆ ನೀತಿ ಉಲ್ಲಂಘನೆಯನ್ನು ಪರಿಣಾಮಕಾರಿಯಾಗಿ ತಡೆದು ನೀರಿನ ಸದ್ಬಳಕೆಗೆ ಅವಕಾಶ ಕಲ್ಪಿಸಬೇಕು. ಅಕ್ರಮ ಪಂಪ್‌ಸೆಟ್ ಮತ್ತು ಮುಗಿಬಿದ್ದು ಎಲ್ಲರೂ ಅಧಿಕ ನೀರು ಬೇಡುವ ಬೆಳೆಗಳನ್ನೇ ಬೆಳೆಯುವುದನ್ನು ನಿಯಂತ್ರಿಸಬೇಕಿದೆ. ನೀರಾವರಿ ಸೌಲಭ್ಯದ ಕೊರತೆ ಇರುವ ಕಡೆ ಪರ್ಯಾಯ ಬೆಳೆಗಳನ್ನು ಲಾಭದಾಯಕವಾಗಿ ಬೆಳೆಯುವಂತಹ ಪರಿಸ್ಥಿತಿ ನಿರ್ಮಾಣ ಮಾಡಬೇಕು. ಮಾರುಕಟ್ಟೆ, ಮೂಲಸೌಕರ್ಯದಂತಹ ಸೌಲಭ್ಯ ಕಲ್ಪಿಸಬೇಕು. ಯಡಿಯೂರಪ್ಪ ಅವರೊಬ್ಬರೇ ಇದಕ್ಕೆ ಟೊಂಕ ಕಟ್ಟಿ ನಿಂತರೆ ಸಾಲದು.

ಟಿಎಸ್‌ಐ

5

ನಾವು ತಿನ್ನುವ ಅನ್ನಕ್ಕೂ ಕನ್ನ!

ವ್ಯತಿರಿಕ್ತ ಕೃಷಿ ನೀತಿಯಿಂದಾಗಿ ರಾಜ್ಯದ ಕೃಷಿ ವಲಯ ತತ್ತರಿಸಿ ಹೋಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಅಪ್ಪಟ 'ಮಣ್ಣಿನ ಮಗ' ರೈತರ ನೋವಿಗೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ.

'ರೈತರು' ಮತ್ತು 'ಭಗವಂತ'ನ ಹೆಸರಿನಲ್ಲಿ ನಮ್ಮ ನೂತನ ಮುಖ್ಯಮಂತ್ರಿಗಳು ಅಧಿಕಾರ ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ, ದುರಂತವೆಂದರೆ ಅವರ ಮುಂದಿರುವ ಮಹತ್ವದ ಸವಾಲುಗಳಲ್ಲಿ ದೇವರಿಗಿಂತ (ದತ್ತಪೀಠ, ಹಿಂದುತ್ವ) ರೈತರದ್ದೇ ಒಂದು ಪಟ್ಟು ಹೆಚ್ಚು. ಒಂದೆಡೆ ಬರ ಮತ್ತೊಂದೆಡೆ ಪ್ರವಾಹ, ಇತ್ತ ರೈತರ ಸರಣಿ ಆತ್ಮಹತ್ಯೆ ಅತ್ತ ಕೃಷಿ ಉತ್ಪಾದನೆಯ ಭಾರೀ ಕುಸಿತ, ನೀರಾವರಿ ಸೌಲಭ್ಯದಲ್ಲಿ ದೇಶದಲ್ಲೇ ಅತ್ಯಂತ ಹಿಂದುಳಿದಿರುವುದು, ಬಂಜರು ಭೂಮಿ ಪ್ರಮಾಣದಲ್ಲಿ ರಾಜಸ್ಥಾನದ ನಂತರದ ಸ್ಥಾನ ಪಡೆದಿರುವುದು... ಹೀಗೆ ಸಮಸ್ಯೆಗಳ ದೊಡ್ಡ ಸಾಲೇ 'ರೈತ ನಾಯಕ' ಯಡಿಯೂರಪ್ಪ ಅವರನ್ನು ಎದುರುಗೊಳ್ಳುತ್ತಿದೆ.

ಕಳೆದ ಹತ್ತು ವರ್ಷಗಳಲ್ಲಿ ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ 20 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ವತಃ ಅವರ ಸ್ವಕ್ಷೇತ್ರ ಶಿಕಾರಿಪುರ ತಾಲ್ಲೂಕಿನಲ್ಲೇ ಕಳೆದ ಒಂದೇ ವರ್ಷದಲ್ಲಿ ಏಳು ಮಂದಿ ರೈತರು (ಗಂಡ- ಹೆಂಡತಿ ಒಟ್ಟಿಗೇ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೂ ಸೇರಿ) ಜೀವ ತೆಗೆದುಕೊಂಡಿದ್ದಾರೆ. ಈ ವಿಷಯದಲ್ಲೂ ರಾಜ್ಯ ಇತರ ರಾಜ್ಯಗಳನ್ನು ಹಿಂದಿಕ್ಕಿದೆ. ಬರಗಾಲ, ಸಾಲದ ಹೊರೆ, ಹೀನಾಯ ಸ್ಥಿತಿಯಲ್ಲಿರುವ ಕೃಷಿ ಮಾರುಕಟ್ಟೆ ವ್ಯವಸ್ಥೆ, ಸಣ್ಣ ಮತ್ತು ಅತಿಸಣ್ಣ ರೈತರ ಪ್ರಮಾಣವೇ ಹೆಚ್ಚಿರುವ ತುಂಡು ಭೂಮಿ ಕೃಷಿ, ದುಬಾರಿಯಾಗಿರುವ ಕೃಷಿ ಮುಂತಾದವೇ ರೈತರ ಕೊಲೆಗಡುಕ ಅಂಶಗಳು ಎಂಬುದು ತಿನ್ನುವ ಅನ್ನ ಎಲ್ಲಿಂದ ಬರುತ್ತದೆ ಎಂಬ ಅರಿವಿರುವ ಎಲ್ಲರಿಗೂ ಗೊತ್ತಿರುವ ಸತ್ಯವೇ.

ರಾಜ್ಯದ ರೈತರ ಆದಾಯ ಕೂಡ ಕಳೆದ ಒಂದೂವರೆ ದಶಕದಿಂದ ಏರಿಕೆ ಕಂಡಿಲ್ಲ. ಆದರೆ, ಅವರು ಕೃಷಿಗೆ ಸುರಿಯುವ ಬೀಜ, ಗೊಬ್ಬರ ಸೇರಿದಂತೆ ಕೃಷಿ ಕೂಲಿ ದರದಲ್ಲಿ ಕೂಡ ಮೂರ್‍ನಾಲ್ಕು ಪಟ್ಟು ಏರಿಕೆಯಾಗಿದೆ.ರಾಜ್ಯದ ಜಿಡಿಪಿ(ಒಟ್ಟು ರಾಜ್ಯ ಉತ್ಪನ್ನ)ಯಲ್ಲಿ ಕೃಷಿ ಉತ್ಪನ್ನಗಳ ಕೊಡುಗೆ ಶೇ.1.5 ಮಾತ್ರ. ಕಳೆದ ಕೆಲವು ವರ್ಷಗಳಿಂದ ಜಿಡಿಪಿಗೆ ಕೃಷಿ ವಲಯದ ಕೊಡುಗೆ ಆತಂಕಕಾರಿ ಪ್ರಮಾಣದಲ್ಲಿ ಕುಸಿಯುತ್ತಲೇ ಇದೆ. ಹಣಕಾಸು ಖಾತೆಯನ್ನೂ ನಿರ್ವಹಿಸಿದ ಅನುಭವವಿರುವ ಯಡಿಯೂರಪ್ಪ ಅವರಿಗೆ, ಇಂತಹ ವ್ಯತಿರಿಕ್ತ ಬೆಳವಣಿಗೆಯಿಂದಾಗಿ ಕೃಷಿ ವಲಯ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ, ಈಗಾಗಾಲೇ ದುಬಾರಿಯಾಗುತ್ತಿರುವ ಕೃಷಿ ಮತ್ತು ಕಾರ್ಮಿಕರ ಸಮಸ್ಯೆಯಿಂದ ದಿಕ್ಕೆಟ್ಟಿರುವ ನೀರಾವರಿ ಮತ್ತು ಮಳೆಯಾಶ್ರಿತ ಭಾಗದ ರೈತರು ಕೃಷಿಗೆ ಬೆನ್ನು ಹಾಕಿ ನಗರಗಳತ್ತ ವಲಸೆ ಬರುವ ಪ್ರಮಾಣ ಹೆಚ್ಚಲಿದೆ ಎಂಬುದು ಅರ್ಥವಾಗದೇ ಇರದು.

ಕಳೆದ 2006ರ ಡಿಸೆಂಬರ್‌ನಲ್ಲಿ ಬಿಜೆಪಿ- ಜೆಡಿ(ಎಸ್) ಸಮ್ಮಿಶ್ರ ಸರ್ಕಾರದಲ್ಲಿ ಕೃಷಿ ಬೆಳವಣಿಗೆ ಮತ್ತು ಉತ್ಪಾದನೆ ದರವನ್ನು ಮುಂದಿನ ಹತ್ತು ವರ್ಷಗಳಲ್ಲಿ ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆಯಿಂದ 'ರೈತ ಕೇಂದ್ರಿತ ಕೃಷಿ ನೀತಿ'ಯನ್ನು ಪ್ರಕಟಿಸಿದ್ದರು. ಆದರೆ, ಆ ನೀತಿ ಎಷ್ಟರಮಟ್ಟಿಗೆ ಅನುಷ್ಠಾನಕ್ಕೆ ಬಂದಿದೆ ಎಂಬುದರತ್ತ ಮಾನ್ಯ ಮುಖ್ಯಮಂತ್ರಿಗಳು ತುರ್ತು ಗಮನ ಹರಿಸಬೇಕಿದೆ. ಸಾಕಷ್ಟು ಸದಾಶಯದ ಅಂಶಗಳಿಂದ ಕೂಡಿದ್ದ ಕೃಷಿ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದು ತೀರಾ ಜರೂರಾಗಿ ಆಗಬೇಕಿದೆ.

ರೈತ ಹಿತ ಕಾಯುವುದು ಎಂದರೆ, ಸಾಲ ಮನ್ನಾದಂತಹ ಜನಪ್ರಿಯ ಕ್ರಮಗಳ ಘೋಷಣೆ ಎಂಬ ಮತಬ್ಯಾಂಕ್ ಕೇಂದ್ರಿತ ಆಶಯದಿಂದ ಹೊರಬಂದು ವಾಸ್ತವಾಂಶಗಳನ್ನು ಅಧ್ಯಯನ ಮಾಡುವುದು ಮುಖ್ಯ. ಆ ನಿಟ್ಟಿನಲ್ಲಿ ಹಣಕಾಸು ಸಚಿವರಾಗಿ ತಾವು ಕಳೆದ ಅವಧಿಯಲ್ಲಿ ಮಾಡಿದ ಸಾಲ ಮನ್ನಾದ ಪ್ರಯೋಜನ ಯಾವ ರೈತರಿಗೆ ಅಂದರೆ; ಅವರ ಆರ್ಥಿಕ, ಭೂ ಒಡೆತನ ಪ್ರಮಾಣ, ಸಾಮಾಜಿಕ ಹಿನ್ನೆಲೆ ಆಧರಿಸಿ- ಆಗಿದೆ ಎಂಬುದನ್ನು ವಿವೇಚಿಸಬೇಕಿದೆ. ಮೇಲ್ವರ್ಗ ಮತ್ತು ಮೇಲ್ಜಾತಿ ರೈತರ ಆಡುಂಬೊಲಗಳಾಗಿರುವ ಸಹಕಾರ ಬ್ಯಾಂಕುಗಳು ಎಷ್ಟರಮಟ್ಟಿಗೆ ನಿಜವಾಗಿಯೂ ಸಂಕಷ್ಟದಲ್ಲಿರುವ ಕೆಳ ವರ್ಗದ ರೈತರಿಗೆ ನೆರವು ನೀಡಿವೆ ಎಂಬುದು ಪರಾಮರ್ಶೆಗೊಳ್ಳಬೇಕಿದೆ.

ಒಂದೆಡೆ ನೀರಾವರಿ ಕೊರತೆ, ಇನ್ನೊಂದೆಡೆ ನೀರಿನ ಅವೈಜ್ಞಾನಿಕ ನಿರ್ವಹಣೆಯಿಂದ ಒದ್ದೆ ಮರುಭೂಮಿಯಾಗುತ್ತಿರುವ ನೀರಾವರಿ ಭೂಮಿ. ರೈತರಿಗೆ ಸಕಾಲಕ್ಕೆ ಬೀಜ, ಗೊಬ್ಬರಗಳು ದೊರೆಯದಿರುವುದು, ಕಳಪೆ ಬೀಜ- ಗೊಬ್ಬರ ವಂಚನೆ ಜಾಲಕ್ಕೆ ಕೃಷಿ ಅಧಿಕಾರಿಗಳೇ ಬೆಂಗಾವಲಾಗಿರುವುದು. ವಿಶೇಷ ಆರ್ಥಿಕ ವಲಯ, ಕೈಗಾರಿಕೆಗಳು, ರಾಷ್ಟ್ರೀಯ ಬೀಜ ಮಸೂದೆಯಂತಹ ರೈತ ವಿರೋಧಿ ಮಸೂದೆಗಳು... ಹೀಗೆ ಕೃಷಿ ಸವಾಲುಗಳು ಬೆಟ್ಟದಷ್ಟಿವೆ. ಕೃಷಿ ಸಬಲೀಕರಣದ ಹೊರತು ಅದರೊಂದಿಗೇ ತಳಕು ಹಾಕಿಕೊಂಡಿರುವ ಆತ್ಮಹತ್ಯೆ, ಬಡತನ, ಅನಕ್ಷರತೆ, ನಗರ ಪ್ರದೇಶಕ್ಕೆ ವಲಸೆ ಮುಂತಾದ ಸಮಸ್ಯೆಗಳನ್ನು ತೊಡೆದುಹಾಕಲಾಗದು ಎಂಬುದನ್ನು 'ರೈತ ನಾಯಕ'ರಿಗೆ ನೆನಪಿಸಬೇಕಿಲ್ಲ ಎಂದು ಆಶಿಸೋಣ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡ ಅಪ್ಪಟ 'ಮಣ್ಣಿನ ಮಗ'ನೇ ಅಲ್ಲವೇ?

ಟಿಎಸ್‌ಐ

6

ಸಾಮಾಜಿಕ ಸ್ವಾಸ್ಥ್ಯದ ಹೊರೆ

ಒಂದು ಕಾಲದಲ್ಲಿ ಹಾರ್ಡ್‌ಕೋರ್ ಹಿಂದುತ್ವವನ್ನೇ ತನ್ನ ಬಂಡವಾಳ ಮಾಡಿಕೊಂಡಿತ್ತು ಬಿಜೆಪಿ. ಆದರೀಗ, ಕೇಸರಿ ಪಕ್ಷ ಹಿಂದುತ್ವ ಮುಖವಾಡ ಕಳಚಿ ಎಲ್ಲರನ್ನೂ ಅಪ್ಪಿಕೊಳ್ಳಲು ಹೊರಟಿದೆ. ಮುಂದೆ..?
 

ಇಪ್ಪತ್ತೊಂದು ವರ್ಷಗಳಷ್ಟು ಕಾಲ ದೀರ್ಘ ಹೋರಾಟದ ನಂತರ ಬಿಜೆಪಿ ಕರ್ನಾಟಕದಲ್ಲಿ ನೆಲೆ ನಿಂತಿದೆ. ಆದರೆ, ಅಂದಿನಿಂದ ಇಂದಿನವರೆಗೆ ಬಿಜೆಪಿ ಸಮಾಜದ ಮೇಲ್ವರ್ಗ ಹಾಗೂ ಹಿಂದು ಪಕ್ಷ ಎಂಬ ಹಣೆಪಟ್ಟಿಯನ್ನೇ ಹೊತ್ತುಕೊಂಡು ಬಂದಿದೆ. ಅಲ್ಪಸಂಖ್ಯಾತರು, ದಲಿತರು ಮತ್ತು ಸಮಾಜದ ಕೆಳಸ್ತರದಲ್ಲಿರುವ ಜನಸಾಮಾನ್ಯ ಇದುವರೆಗೆ ಬಿಜೆಪಿಯನ್ನು ತನ್ನ ಪಕ್ಷ ಎಂದು ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದಲ್ಲಿಯೇ ಅಪ್ಪಿಕೊಂಡಿಲ್ಲ. ಇಂತಹ ಸನ್ನಿವೇಶದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಒಟ್ಟಾರೆ ಸಮಾಜದ ಬೆಂಬಲವನ್ನು ಹೇಗೆ ಕಾಪಾಡುತ್ತದೆ ಮತ್ತು ಹೇಗೆ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಹೋಗುತ್ತದೆ ಎನ್ನುವುದು ಕುತೂಹಲಕಾರಿ ಅಂಶ. ಏಕೆಂದರೆ ರಾಜ್ಯದಲ್ಲಿನ ಒಟ್ಟು 5.28 ಕೋಟಿ ಜನಸಂಖ್ಯೆಯ ಪೈಕಿ ಶೇಕಡಾ 40ರಷ್ಟು ದಲಿತರು ಮತ್ತು ಅಲ್ಪಸಂಖ್ಯಾತರಿದ್ದಾರೆ. ಈಗ ಅಧಿಕಾರದ ಗದ್ದುಗೆಗೇರಿದ ಬಿಜೆಪಿ ಯಾವುದೇ ಕಾರಣಕ್ಕೆ ಸಮಾಜದ ಈ ಭಾಗವನ್ನು ರಾಜಕೀಯ ಹಾಗೂ ಸಾಮಾಜಿಕವಾಗಿ ಅವಗಣಿಸುವ ಹಾಗಿಲ್ಲ. ಅಕಸ್ಮಾತ್ ದಲಿತರು- ಅಲ್ಪಸಂಖ್ಯಾತರನ್ನು ಅವಗಣಿಸಿದರೆ ಅದು ಕರ್ನಾಟಕದಲ್ಲಿ ಬಿಜೆಪಿಯ ಅಂತ್ಯಕ್ಕೆ ಬರೆದ ಮುನ್ನುಡಿ ಎಂದೇ ತಿಳ