|
ಶಿಕ್ಷಣದ ಅರ್ಥ ಸಾರ್ಥಕವಾಗಬೇಕಾದರೆ ಮಕ್ಕಳ ಸರ್ವತೋಮುಖ
ಅಭಿವೃದ್ಧಿಯಾಗಬೇಕು...
ಹೀಗೆ ಹೇಳಿಬಿಡುವುದು,
ಘೋಷಣೆ ಕೂಗಿಬಿಡುವುದು ಅಥವಾ ವೇದಿಕೆಯಲ್ಲಿ ಆ
ಕ್ಷಣಕ್ಕೆ ಮಾತ್ರ ನುಣುಚಿಕೊಂಡರೆ ಸಾಕೆಂದು ಭಾಷಣಕ್ಕಾಗಿ ನಾಲ್ಕು ಸಾಲು ಉರು
ಹಚ್ಚಿಕೊಂಡು ಬಂದು ರಾಧಾಕೃಷ್ಣನ್ ಹಾಗೆ ಹೇಳಿದ್ದಾರೆ,
ಅಬ್ದುಲ್ ಕಲಾಂ ಹೀಗೆ ಹೇಳಿದ್ದಾರೆ ಎಂದು
ಒಪ್ಪಿಸಿಬಿಡುವುದು ಬಹಳ ಸುಲಭ.
ಆದರೆ ಎಲ್ಲ ಒಳ್ಳೆಯ ಮಾತುಗಳೂ ಕಾರ್ಯರೂಪಕ್ಕೆ
ಬಂದರೆ ಮಾತ್ರ ನಿಜಕ್ಕೂ ಮಕ್ಕಳ ಮನಸ್ಸು ಅರಳಿ ಅವರು ಸ್ವಾವಲಂಬಿಗಳಾಗಿ
ಬೆಳೆದು ನಿಲ್ಲಲು ಸಾಧ್ಯವಾಗುತ್ತದೆ.
ಈ 'ಪ್ರಾಯೋಗಿಕ
ಶಿಕ್ಷಣದತ್ತ'
ಇಂದು ಪ್ರತಿಯೊಬ್ಬ ತಂದೆ-
ತಾಯಿ-
ಶಿಕ್ಷಕ-
ಅಧಿಕಾರಿ ವರ್ಗದವರೂ ಗಮನ ಹರಿಸಬೇಕಾಗಿದ್ದು
ಅತ್ಯಗತ್ಯ.
ಇದೀಗ ಮತ್ತೆ ಶಾಲೆಗಳು ಪ್ರಾರಂಭವಾಗಿವೆ.
ಮಕ್ಕಳು ನಗು ಮುಖದಲ್ಲಿ-
ಸಮವಸ್ತ್ರದಲ್ಲಿ ಒಬ್ಬರನ್ನೊಬ್ಬರು ಎದುರುಗೊಂಡು
ಸಾಮೂಹಿಕ ಸಂತೋಷದ ಪಾಠವನ್ನು ಅವರಿಗೇ ತಿಳಿಯದಂತೆ ಚಂದದಲ್ಲಿ ಕಲಿಯುತ್ತಾ
ಭಾಷೆ,
ವಿಜ್ಞಾನ,
ಗಣಿತ,
ಸಮಾಜ ಪರಿಚಯ ಪಾಠಗಳನ್ನು ಕಲಿಯುವುದು-
ಕಲಿತು ದೊಡ್ಡವರಾಗುವುದು ನಿಜಕ್ಕೂ ಜೀವನದ ಬಹು
ದೊಡ್ಡ ಸಂಗತಿ.
ಇದಕ್ಕೆ ಯಾವ ಕುಂದು-
ಕೊರತೆಯೂ ಬರದಂತೆ ವ್ಯವಸ್ಥೆ ಮಾಡಿಕೊಡಬೇಕಾದುದು,
ಮಾರ್ಗದರ್ಶನ ಮಾಡುವುದು ಮಾತ್ರ ದೊಡ್ಡವರ
ಜವಾಬ್ದಾರಿ.
ಮಕ್ಕಳ ಭವಿಷ್ಯವನ್ನು ಹಸನಾಗಿಸುವುದಕ್ಕಿಂತ ದೊಡ್ಡ
ಜವಾಬ್ದಾರಿ ಬೇರೆ ಯಾವುದಾದರೂ ಇದೆಯೇ?
'ಇಂದಿನ
ಮಕ್ಕಳೇ ಮುಂದಿನ ಪ್ರಜೆಗಳು'
ಎಂಬ ಕನಸಿನ ವಿಕಾಸ ಆಗಲೇಬೇಕಾದರೆ ಅದು
'ಶಿಕ್ಷಣ
ಕ್ಷೇತ್ರ'ದಿಂದ
ಮಾತ್ರ ಸಾಧ್ಯ.
ಇದಕ್ಕೆ ಬೇಕಾಗಿರುವುದು ಸೂಕ್ತ ಚಿಂತನೆ ಮತ್ತು ಮಕ್ಕಳ
ಬಗೆಗಿನ ಪ್ರೀತಿ.
ಯಾವುದೇ ಪೂರ್ವಗ್ರಹಗಳಿಲ್ಲದ ಪ್ರಗತಿ ಪಥದತ್ತ ಒಲವು.
ಪ್ರಗತಿ ಪಥವೆಂದರೆ ನಾನಿಲ್ಲಿ ಡಾಕ್ಟರ್-
ಎಂಜಿನಿಯರ್,
ಐಟಿ,
ಸಿಇಒ ಎಂದು ಬೆರಳು ತೋರಿಸಿ ಹೆಸರಿಸುತ್ತಿಲ್ಲ.
ಹಾಗೆ ಒಂದು ವೇಳೆ ನಾನು ಹೇಳಿದೆನೆಂದರೆ ಅದು
'ಶಿಕ್ಷಣ'
ಎಂಬ ಚೆಲುವಿನ ಪದಕ್ಕೇ ಅವಮಾನ ಎಸಗಿದಂತಾಗಿಬಿಡುತ್ತದೆ.
ಹಾಗಾದರೆ
'ಶಿಕ್ಷಣ'
ಎಂದರೇನು?
ಸ್ವಲ್ಪ ವಿಮರ್ಶಿಸಿಯೇ ಬಿಡೋಣ.
ಸರಳವಾಗಿ,
ಆದರೆ ಆಳವಾಗಿ ನನ್ನದೇ ಆದ ಚಿಂತನೆಯನ್ನು-
ದೃಷ್ಟಿಕೋನವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಶಿಕ್ಷಣವೆನ್ನುವುದು ಮಗುವಿಗೆ ತನ್ನ ಸ್ವಂತ ನಿರ್ಧಾರವನ್ನು ತಾನೇ
ತೆಗೆದುಕೊಂಡು ತಾನೂ ಜೀವಿಸಲು ಕಲಿತು ತನ್ನ ಜೊತೆಯವರನ್ನೂ ಜೀವಿಸಲು ಅನುವು
ಮಾಡಿಕೊಡುವ ಚೈತನ್ಯದ ಸರಪಳಿ.
ಮಗು ಗರ್ಭದಲ್ಲಿರುವಾಗಿನಿಂದ ತಾಯಿಯ ಆರೈಕೆ-
ಸಂಭ್ರಮಗಳಲ್ಲಿ ಆರೋಗ್ಯದಿಂದ ಹುಟ್ಟುವ ವರದಾನ
ಪಡೆದುಕೊಳ್ಳುತ್ತದೆ.
ಈ ಆರೋಗ್ಯವೇ ಮುಂದೆ ಅದರ ಮೆದುಳು ಹಾಗೂ ಇತರ ಅಂಗಾಗಗಳ
ಸಮರ್ಥ ವಿಕಸನಕ್ಕೆ ಕಾರಣವಾಗುತ್ತದೆ.
'ಆರೋಗ್ಯವೇ
ಭಾಗ್ಯ'
ಎಂಬ ಪ್ರಾಥಮಿಕ ಶಿಕ್ಷಣದ ಧ್ಯೇಯ ಎಂದಿಗೂ ಸುಳ್ಳಲ್ಲ.
ಇನ್ನೆಲ್ಲ ಐಶ್ವರ್ಯವೂ ಆರೋಗ್ಯದ ನಂತರ ಮಾತ್ರ.
'ಮೊದಲ
ಪಾಠ ಶಾಲೆ'
ಮನೆಯೇ ಆಗಿ ತಾಯಿ ಮೊದಲ ಗುರುವಾಗುವ ಸಂದರ್ಭವಂತೂ ಮಗುವಿನ ಶಿಕ್ಷಣಕ್ಕೆ
ಭದ್ರವಾದ ಅಡಿಪಾಯ.
ತಾಯಿಯ ಎದೆ ಹಾಲು,
ಅವಳ ಜೋಗುಳ,
ಅವಳ ಮಾತು,
ಅವಳ ಮಡಿಲ ಸ್ಪರ್ಶ,
ಬೆಚ್ಚನೆಯ ಅಪ್ಪುಗೆ ಎಲ್ಲವೂ
'ಶಿಕ್ಷಣ'ಕ್ಕೆ
ಮುಖ್ಯವಾಗಿ ಬೇಕೇ ಬೇಕಾಗಿರುವ ಸಂಸ್ಕೃತಿಯ ಕೊಂಡಿ.
ಶಿಕ್ಷಣಕ್ಕೂ ಮಗುವಿನ ಪ್ರಾಥಮಿಕ ಆರೈಕೆಗೂ
ಅವಿನಾಭಾವ ನಂಟಿದೆ ಎಂಬುದನ್ನು ಒಪ್ಪಲೇಬೇಕು.
ಮುಖ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಮುಳುವಾಗಿರುವ
'ಆರ್ಥಿಕ ನೀತಿ'ಯನ್ನೂ
'ಪರೀಕ್ಷಾ
ವಿಧಾನ'ವನ್ನೂ
ವೈಜ್ಞಾನಿಕ ದೃಷ್ಟಿಕೋನದ ಒರೆಗೆ ಹಚ್ಚಿ ನೋಡಲೇಬೇಕಾಗಿದೆ.
'ಡೊನೇಷನ್'
ಎಂಬ ಭೂತ ಸಾಕಷ್ಟು ಮಕ್ಕಳನ್ನು ಬಾಧಿಸುತ್ತಿದೆ.
ಸಾಮಾನ್ಯವಾಗಿ ಜನರ ದೃಷ್ಟಿಯ
'ತಕ್ಕ
ಮಟ್ಟಿಗಿನ ಶಾಲೆ'ಗಳೆಲ್ಲಾ
ಭಾರಿ ಶುಲ್ಕ ಪಡೆಯುವುದರಿಂದ 'ಒಳ್ಳೆಯ
ಶಾಲೆ ನಮಗಲ್ಲ'
ಎಂದು ಮಕ್ಕಳು ಹಿಂತೆಗೆಯುವಂತಾಗಿದೆ.
ಹಾಗಾದರೆ ಕಡಿಮೆ ಶುಲ್ಕ ತೆಗೆದುಕೊಳ್ಳುವ ಶಿಕ್ಷಣ
ಸಂಸ್ಥೆಗಳು ಕಡಿಮೆ ದರ್ಜೆಯವು ಎಂಬ ಅರ್ಥ ಬರುವುದಿಲ್ಲವೇ?
ವಿದ್ಯೆಯ ಅರ್ಥ ಇಷ್ಟೊಂದು ಸಂಕುಚಿತವಾಗಿ
'ಹಣ'ಕ್ಕೆ
ಮಾತ್ರ ಸೀಮಿತವಾಗಿ ಬಿಟ್ಟರೆ ಯಥಾಪ್ರಕಾರ ಕಲಿಯಬಲ್ಲ ಮಕ್ಕಳ ಮನಸ್ಸಿನಲ್ಲಿ
ಹಣಕ್ಕಾಗಿ ವ್ಯಾಮೋಹ,
ದುರಾಸೆ ಎಲ್ಲಾ ಹುಟ್ಟಿಕೊಂಡು
'ಹಣವೇ
ಮನುಷ್ಯತ್ವಕ್ಕಿಂತ ದೊಡ್ಡದು,
ಇನ್ನೊಬ್ಬನನ್ನು ತುಳಿದಾದರೂ ಸರಿ ನಾನು ಮೇಲೆ
ಬಂದರೆ ಸಾಕು'
ಎಂಬ ದುಷ್ಟ ಬುದ್ಧಿ ಮಕ್ಕಳಲ್ಲಿ ಮನೆ ಮಾಡಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ.
ಜೊತೆಗೆ ಈ ಎಸ್‌ಎಸ್‌ಎಲ್‌ಸಿ,
ದ್ವಿತೀಯ ಪಿಯುಸಿಗಳ
'ಮೌಲ್ಯಮಾಪನ'
ಮತ್ತೊಂದು ಭಯಂಕರ ಭೂತ.
ಮೌಲ್ಯಮಾಪಕರ ಉದಾಸೀನಕ್ಕೋ ಅಥವಾ ಕಂಪ್ಯೂಟರ್ ಮಾಹಿತಿ
ದೋಷದ ಫಲವೋ ಅಂತೂ ಎಷ್ಟೋ ವಿದ್ಯಾರ್ಥಿಗಳಿಗೆ ಈ ಮೌಲ್ಯಮಾಪನದ
ಅಸಮರ್ಪಕತೆಯಿಂದ ಇದು ಅನ್ಯಾಯವಾಗುತ್ತಿರುವುದು ಹಾಗೂ ಅವರನ್ನು ನಿರಾಶೆಯ
ಕೂಪಕ್ಕೆ ದೂಡುತ್ತಿರುವುದು ಸುಳ್ಳಲ್ಲ.
ತತ್‌ಕ್ಷಣ ಶಿಕ್ಷಣ ಇಲಾಖೆ ಕಾರ್ಯೋನ್ಮುಖವಾಗಿ ಮರು
ಮೌಲ್ಯಮಾಪನ ಸಂದರ್ಭ ಒದಗಿ ಬಂದಾಗ ವಿದ್ಯಾರ್ಥಿಗಳನ್ನು ನಿರುತ್ತೇಜನಗೊಳಿಸದೆ,
ಅಧೀರರನ್ನಾಗಿ ಮಾಡದೆ ಮುಂದಿನ ಕ್ರಮಗಳನ್ನು
ಕೈಗೊಳ್ಳುವಂಥ ಸೂಕ್ತ ಹೆಜ್ಜೆ ಇಡಬೇಕಾಗಿದೆ.
ಮುಖ್ಯವಾಗಿ ಮೌಲ್ಯಮಾಪನ ಮಾಡುವ ಶಿಕ್ಷಕರು ಅದು
ವಿದ್ಯಾರ್ಥಿ ಜೀವನದ ಬಹು ಮುಖ್ಯ ಅಂಗ,
ಅರೆ ಕ್ಷಣದ ನಿರ್ಲಕ್ಷ್ಯ ಒಂದು ಜೀವಕ್ಕೆ
ಸಂಚಕಾರವಾಗಬಹುದು ಅಥವಾ ಭವಿಷ್ಯವನ್ನೇ ತಿರುಚಬಹುದು ಎಂಬ ಅರಿವಿನಿಂದ
ಮೌಲ್ಯಮಾಪನ ಮಾಡಿ ಒಮ್ಮೆಲೇ ಸರಿಯಾದ ನ್ಯಾಯ ಒದಗಿಸಬೇಕಾಗಿದೆ.
ಅಕಸ್ಮಾತ್ ಮರು ಮೌಲ್ಯಮಾಪನದ ಅಗತ್ಯ ಬಂದರೆ,
ಎಲ್ಲಾ ವಿದ್ಯಾರ್ಥಿಗಳೂ ಆ ಶುಲ್ಕವನ್ನು
ಭರಿಸುವಂತಿರಬೇಕು.
ದುಬಾರಿ ಶುಲ್ಕದ ಕಾರಣಕ್ಕಾಗಿ ಒಬ್ಬ ವಿದ್ಯಾರ್ಥಿ ಮರು
ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದೇ ಸಾಧ್ಯವಾಗದ ಸ್ಥಿತಿ ಎಂತಹ ಘೋರ
ಅನ್ಯಾಯಕ್ಕೆ ಎಡೆಮಾಡಿಕೊಡುತ್ತದೆಯಲ್ಲವೇ?
ಅಂತಹ ನಷ್ಟ,
ಅನ್ಯಾಯವನ್ನು ಮತ್ತೆ ಆತನ ಜೀವನದಲ್ಲಿ
ಸರಿದೂಗಿಸುವ ಅವಕಾಶವಿದೆಯೇ?
ಹಾಗೇ ಮೌಲ್ಯಮಾಪಕರು ಕೂಡ ಮರುಮೌಲ್ಯಮಾಪನ ತಮ್ಮ
ಸ್ವಾಭಿಮಾನಕ್ಕೆ ಬಿದ್ದ ಪೆಟ್ಟು ಎಂದು ತಪ್ಪಾಗಿ ಅರ್ಥೈಸದೆ ವಿದ್ಯಾರ್ಥಿ
ನಿಜವಾಗಿಯೂ ಬರೆದಿದ್ದರೆ ದೊರಕಬೇಕಾದ ಅಂಕಗಳನ್ನು ನ್ಯಾಯವಾಗಿಯೇ ನೀಡಿ
ಗೌರವಿಸಲೇ ಬೇಕಾಗಿದೆ.
ಮಾರ್ಕ್ಸ್‌ಕಾರ್ಡ್‌ಗಳನ್ನು ಮೀರಿದ ಮನೋವಿಕಾಸ ಮಕ್ಕಳಿಗೆ ಬರಬೇಕು.
ಸಿರಿತನ-
ಬಡತನ,
ಹುಡುಗ-
ಹುಡುಗಿ ಎಂಬ ಭೇದ-
ಭಾವವಿಲ್ಲದೆ ಜೀವನವನ್ನು ಸ್ವಂತಿಕೆಯಿಂದ
ನಿರ್ವಹಿಸುವ ಪ್ರೀತಿ ಎಂಬ 'ಸಂಸ್ಕೃತಿ'ಯ
ಶಿಕ್ಷಣ ನಮ್ಮದಾಗಬೇಕು.
ಅದಕ್ಕೆ ಪೂರಕವಾಗಿ ಶೈಕ್ಷಣಿಕ ರಂಗವನ್ನು ಹೆಚ್ಚು
ವೈಜ್ಞಾನಿಕವೂ,
ಜನಪರವೂ ಆಗುವಂತೆ ವಿನ್ಯಾಸಗೊಳಿಸಬೇಕಿದೆ.
ಮೌಲ್ಯಮಾಪನ,
ಪರೀಕ್ಷೆ,
ಪ್ರವೇಶ ನೀತಿ,
ಪಠ್ಯ ರಚನೆ,
ಬೋಧನೆ ಎಲ್ಲಾ ರಂಗದಲ್ಲೂ ಮನೋವಿಕಾಸ ಮತ್ತು
ನಾಗರಿಕ ಪ್ರಜ್ಞೆ ಮೂಡಿಸುವ ಪ್ರಯತ್ನಗಳು,
ಎಲ್ಲ ಮಕ್ಕಳಿಗೂ ಸಮಾನ ಅವಕಾಶ ಮತ್ತು
ನ್ಯಾಯಸಮ್ಮತ ಭವಿಷ್ಯವನ್ನು ಕಲ್ಪಿಸುವುದು ಗುರಿಯಾಗಬೇಕು.
ನಮ್ಮ ಶಿಕ್ಷಣದಲ್ಲಿ ಇಂದು ಎಲ್‌ಕೆಜಿ,
ಯುಕೆಜಿ ಹಂತದಿಂದ ವಿವಿ ಶಿಕ್ಷಣದ ವರೆಗೆ ಪ್ರತಿ
ಹಂತದಲ್ಲೂ ಉಳ್ಳವರು ಮತ್ತು ಇಲ್ಲದವರ ಎಂಬ
'ಕೊಳ್ಳುವ
ಶಕ್ತಿ'ಯನ್ನು
ಅವಲಂಬಿಸಿ ಅವಕಾಶಗಳು ಮಕ್ಕಳಿಗೆ ಸಿಗುವ ಸ್ಥಿತಿ ಇದೆ.
ಇದು ಮೌಲ್ಯಮಾಪನದಂತಹ ವಿಷಯದಲ್ಲೂ ತೀರಾ
ಸ್ಪಷ್ಟವಾಗೇ ಕಾಣುವಂತಿದೆ ಎಂಬುದು ದುರದೃಷ್ಟಕರ.
ಇಂತಹ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕೂಲಿ
ಮಾಡುವಾತನ ಮಗನೊಬ್ಬ ಕೂಡ ಉನ್ನತ ಶಿಕ್ಷಣ ಪಡೆಯುವುದು,
ಆತ್ಮಗೌರವದ ಜೊತೆಗೆ ಪ್ರಾಪಂಚಿಕ ಬದುಕಿನ ಅಗತ್ಯವೂ
ಆದ ನ್ಯಾಯಸಮ್ಮತ ಅಂಕ ಗಳಿಸುವುದು ಸಾಧ್ಯವಾಗುವುದೇ?
ಅಂತಹದ್ದು ಸಾಧ್ಯ ಎನ್ನುವುದಾದರೆ ಮಾತ್ರ ನಮ್ಮ
ಶಿಕ್ಷಣ ಸಮಾನ ಶಿಕ್ಷಣ ಎಂಬುದನ್ನು ಒಪ್ಪಿಕೊಳ್ಳಬಹುದು.
ಇಲ್ಲವಾದಲ್ಲಿ ಶೈಕ್ಷಣಿಕ ವಿಕಾಸಕ್ಕೆ
ಸಂಬಂಧಿಸಿದಂತಹ ಬೊಗಳೆಗಳಿಗೆ ಬೆಲೆ ಇರದು.
ಟಿಎಸ್‌ಐ
|