|

ಇದು ಕಲಿಯುಗ
'ನಮಗೆಂಥ ಸರ್ಕಾರ ಬೇಕು?'
ಮುಖಪುಟ ಲೇಖನ ಮೂಡಿಬಂದ ರೀತಿ ಅದ್ಭುತ.
ಅದೂ ಜನಸಾಮಾನ್ಯರ ದೃಷ್ಟಿಕೋನದಲ್ಲಿ ಎಂತಹ ಸರ್ಕಾರ ಬೇಕು
ಎಂಬುದನ್ನು ತಿಳಿಸಿದ ರೀತಿ ಶ್ಲಾಘನೀಯ.
ಹಣ್ಣಿನ ವ್ಯಾಪಾರಿ,
ಕ್ಷೌರಿಕ,
ಕ್ಯಾಂಟೀನ್ ಮಾಲೀಕ,
ಕಂಡಕ್ಟರ್,
ಹೂವಿನ ವ್ಯಾಪಾರಿ...
ಹೀಗೆ ಸಮಾಜದ ವೈವಿಧ್ಯಮಯ ಕ್ಷೇತ್ರದ ಮಂದಿಯಿಂದ
ಅಭಿಪ್ರಾಯ ಸಂಗ್ರಹಣೆ ಮಾಡಲಾಗಿದೆ.
ಕೇವಲ ದೊಡ್ಡವರ ಮಾತುಗಳನ್ನೇ ನೋಡಿ ಏಕತಾನವಾಗಿದ್ದ
ಮನಸ್ಸಿಗೆ ಈ ಓದು ಹೊಸ ಹುರುಪು ನೀಡಿತು.
ಅದರಲ್ಲೂ ಕೆಜಿಎಫ್ ಚಿನ್ನದ ಗಣಿ ಸೆಕ್ಯೂರಿಮಾತುಗಳಂತೂ
ಇಂದಿನ ರಾಜಕೀಯ ಪಕ್ಷಗಳ ನಿಜಸ್ಥಿತಿಯನ್ನು ಹೊರಗೆಡಹುವಂತಿತ್ತು.
ಎಲ್ಲಾ ಸರ್ಕಾರಗಳೂ ಅಕ್ಷರಶಃ ಫೋರ್‌ಟ್ವೆಂಟಿಗಳೇ!
ಇನ್ನು ಮಂಗಳೂರಿನ ಮಹಿಳೆ ಹೇಳಿದಂತೆ ರಾಜಕಾರಣಿಗಳೆಲ್ಲಾ
ಅವರವರ ಹೆಂಡತಿ ಮಕ್ಕಳ ಹೊಟ್ಟೆ ತುಂಬಿಸಲೇ ನೋಡುತ್ತಾರೆಯೇ ವಿನಃ ಚುನಾವಣೆ ನಂತರ
ಬಡವರನ್ನು ಮೂಸಿ ನೋಡಲೂ ಬರುವುದಿಲ್ಲ.
ಎಲ್ಲಾ ಕಲಿಯುಗ ಎಂದು ಸುಮ್ಮನಾಗಬೇಕೆ?
ಕೆ.ಎನ್. ಅಂಕಿತಾ
ಹಾಸನ
ಉತ್ತಮ ಆಯ್ಕೆ
ಟಿಎಸ್‌ಐ ಮುಖಪುಟ
ಲೇಖನದಲ್ಲಿ ಹೆಚ್ಚಿನ ಜನಸಾಮಾನ್ಯರು ಬಹುಮತವಿರುವ ಒಂದೇ ಪಕ್ಷ ಅಧಿಕಾರಕ್ಕೆ ಬರಬೇಕು
ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ನನ್ನ ಅಭಿಮತವೂ ಇದೇ ಆಗಿತ್ತು.
ಚುನಾವಣಾ ಫಲಿತಾಂಶವೂ ಅದೇ ರೀತಿ ಬಂದಿದೆ.
ಏಕ ಪಕ್ಷ ಅಧಿಕಾರಕ್ಕೆ ಬಂದ ಮೇಲಾದರೂ ನಮ್ಮ ನಿರೀಕ್ಷೆಗಳು
ಕೈಗೂಡುತ್ತವೆಯೇ ಎಂಬುದನ್ನು ಕಾದುನೋಡಬೇಕಾಗಿದೆ.
ಮತ್ತೆ ಸಮ್ಮಿಶ್ರ ಸರ್ಕಾರವೇನಾದರೂ ಅಧಿಕಾರಕ್ಕೆ
ಬಂದಿದ್ದರೆ ರಾಜ್ಯದ ಜನತೆ ಆಕಾಶದೆಡೆಗೆ ಮುಖ ಮಾಡಿ
ಕುಳಿತುಕೊಳ್ಳಬೇಕಾಗಿತ್ತು.
ಅದೇ ಎತ್ತು ಏರಿಗೆಳೆಯಿತು,
ಕೋಣ ನೀರಿಗೆಳೆಯಿತು ಎಂಬ ಪರಿಸ್ಥಿತಿಯೇ ಮತ್ತೆ
ರಾಜ್ಯದಲ್ಲಿ ಸೃಷ್ಟಿಯಾಗುತ್ತಿತ್ತು.
ಆದರೆ ಈ ಬಾರಿ ಜನತೆ ಸರಿಯಾದ ಆಯ್ಕೆಯನ್ನೇ ಮಾಡಿದ್ದಾರೆ
ಎಂಬುದು ನನ್ನ ಅಭಿಮತ.
ಕೆ. ಪ್ರಭಾಕರ್
ಮಂಗಳೂರು
ಸರ್ಕಾರ ಕಣ್ತೆರೆಯಲಿ
ಟಿಎಸ್‌ಐ ಮುಖಪುಟ ಲೇಖನ ಈ ಬಾರಿ ಸಿಂಪ್ಲಿ ಸೂಪರ್ಬ್!
ಆಹ್...
ಎಂತೆಂಥ ಅಭಿಪ್ರಾಯಗಳು.
ಒಂದಕ್ಕಿಂತ ಒಂದು ಭಿನ್ನ ಆಲೋಚನೆಗಳು.
ಅಂದರೆ ಕರ್ನಾಟಕದ ಜನತೆ ದಡ್ಡರಲ್ಲ ಎಂಬುದು
ಇಷ್ಟರಲ್ಲೇ ಸಾಬೀತಾಗುತ್ತದೆ.
ತಮಗೆ ಎಂತಹ ಸರ್ಕಾರ ಎಂಬ ಸ್ಪಷ್ಟ ಅರಿವು ಇಲ್ಲಿ
ಅಭಿಪ್ರಾಯ ಮಂಡಿಸಿದ ಪ್ರತಿಯೊಬ್ಬರಿಗೂ ಇತ್ತು.
ಪಾನಿಪೂರಿ ವ್ಯಾಪಾರಿಯಿಂದ ತೊಡಗಿ,
ಹತ್ತಿ ಬೆಳೆಗಾರ,
ಕನ್ನಡ ಹೋರಾಟಗಾರ,
ರೈಲ್ವೇ ಕೂಲಿ...
ಹೀಗೆ ಎಲ್ಲರಿಗೂ ತಮಗೆ ಎಂತಹ ಜನನಾಯಕ ಬೇಕಾಗಿದ್ದಾನೆ
ಎಂಬ ಕುರಿತು ಸ್ಪಷ್ಟ ಯೋಚನೆ ಇದೆ ಎಂದಾದಲ್ಲಿ ಫಲಿತಾಂಶವೂ ಸ್ಪಷ್ಟ ತಾನೇ?
ಎಲ್ಲರೂ ಸಮ್ಮಿಶ್ರ ಸರ್ಕಾರದ ಆಡಳಿತದಿಂದ ಕೈ
ಸುಟ್ಟುಕೊಂಡವರೇ.
ಶಿಕ್ಷಣಕ್ಕೆ ಆದ್ಯತೆ ನೀಡಿ ಎಂದು ಹೇಳುವಾಗಲೇ ಪ್ರತಿಯೊಬ್ಬರೂ
ಪ್ರಜ್ಞಾವಂತರು ಎಂಬುದು ತಿಳಿಯುತ್ತದೆ.
ಇನ್ನು ಕಣ್ತೆರೆದು ನೋಡುವ ಕೆಲಸ ಸರ್ಕಾರದ್ದಷ್ಟೆ.
ಲಲಿತಾ ಕುಮಾರಿ
ಮೈಸೂರು
ದೇಶ ಕಂಡ
ಮಹಾನ್ ರಾಜಕಾರಣಿ
ಟಿಎಸ್‌ಐ
50ನೇ ಸಂಚಿಕೆಯಲ್ಲಿ ಪ್ರಕಟವಾದ
'ಎಲ್ಲರಂಥಲ್ಲದ ನಾಯಕ
ರಾಜೀವ್ ಇಲ್ಲದ ಭಾವ ಸದಾ ಕಾಡುವುದು ಏಕೆ?'
(ಅರಿಂದಮ್ ಚೌಧುರಿ)
ಸಂಪಾದಕೀಯ ಚಿಂತನಾರ್ಹ.
ರಾಜೀವ್ ಗಾಂಧಿ ಹತ್ಯೆಯಾಗಿ
17 ವರ್ಷಗಳು ಕಳೆದಿವೆ.
ಖಂಡಿತ ದೇಶದ ಜನತೆ ಈ ಕಾಲಾವಧಿಯಲ್ಲಿ ಒಂದಲ್ಲಾ ಒಂದು
ಬಾರಿ ರಾಜೀವ್ ಅಂಥ ನಾಯಕ ಇದ್ದಿದ್ದರೆ ಎಂದು ಯೋಚಿಸದೆ
ಇರಲಿಕ್ಕಿಲ್ಲ.
ಹಾಗೆಂದು ಅವರಂತಹ ಮತ್ತೊಂದು ನಾಯಕ ಹುಟ್ಟೇ ಇಲ್ಲ ಎಂದೇನಲ್ಲ.
ಅವರು ಜನರಿಗೆ ಮೆಚ್ಚುಗೆಯಾಗುವುದು ಅವರಲ್ಲಿದ್ದ
ಸಹೃದಯತೆಗಾಗಿ.
ರಾಜಕೀಯ ಭಾವನೆ ಮಾತ್ರ ಮೇಳೈಸಿಕೊಂಡಿದ್ದ ಪಕ್ಕಾ ರಾಜಕಾರಣಿಯಲ್ಲ
ರಾಜೀವ್.
ವೃತ್ತಿಪರ ರಾಜಕಾರಣಿಗಳಿಗಿರುವ ಯಾವ ಅಂಶವೂ ಅವರಲ್ಲಿ ಇರಲಿಲ್ಲ.
ಏಷಿಯನ್ ಗೇಮ್ಸ್ ಆರಂಭಿಸಿ ಭಾರತೆದೆಡೆ ಇಡೀ ಪ್ರಪಂಚ
ಮುಖಮಾಡಿ ಕುಳಿತುಕೊಳ್ಳುವಂತೆ ಮಾಡಿದರು.
ಹಾಗಾಗಿ ಪ್ರಧಾನಿಯಾಗಿ ಅವರು ಮಹತ್ವದ ಸ್ಥಾನ
ಪಡೆಯುತ್ತಾರೆ.
ಅವರಿಗೆ ನಮನ ಸಲ್ಲಿಸಿದ ಅರಿಂದಮ್ ಅವರಿಗೆ ಕೃತಜ್ಞತೆಗಳು.
ಮಲ್ಲಿಕಾ ಮೋಹನ್
ರಾಯಚೂರು
ಮುತ್ಸದ್ದಿಗೆ
ನಮನ
ರಾಹುಲ್ ಗಾಂಧಿ ಎಷ್ಟೇ
'ಡಿಸ್ಕವರ್ ಇಂಡಿಯಾ'
ಎನ್ನುತ್ತಾ ತಿರುಗಾಡುತ್ತಿರಬಹುದು,
ಆದರೆ ರಾಜೀವ್ ಗಾಂಧಿ ವರ್ಚಸ್ಸು ಪಡೆಯುವುದು ಮಾತ್ರ
ಕಷ್ಟ. ಭಾರತ
ಕಂಡ ಅತ್ಯುತ್ತಮ ನಾಯಕರಲ್ಲಿ ರಾಜೀವ್ ಒಬ್ಬರು.
ಅಮೆರಿಕದೊಂದಿಗೆ ದ್ವಿಪಕ್ಷೀಯ ಮಾತುಕತೆಯ ಕ್ರಾಂತಿಕಾರಕ
ಹೆಜ್ಜೆ ಮುಂದಿಟ್ಟದ್ದನ್ನು ಯಾರು ತಾನೆ ಮರೆಯಬಲ್ಲರು?
'ವಿಳಂಬ ನೀತಿ'
ತೊಡೆದು ಹಾಕಿ ಉದ್ಯಮಿಗಳಿಗೆ ಉತ್ತಮ ವಾತಾವರಣ ಕಲ್ಪಿಸಿಕೊಟ್ಟಿದ್ದನ್ನೂ ಮರೆಯಲು
ಸಾಧ್ಯವಿಲ್ಲ.
ಸಾರ್ವಜನಿಕ ವಲಯದ ಉದ್ದಿಮೆಗಳು ಕಾರ್ಯಸ್ಥಗಿತಗೊಳಿಸದಂತೆ
ನೋಡಿಕೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸಿದರು.
ಶ್ರೀಲಂಕಾದೊಂದಿಗಿನ ಸಂಬಂಧ,
ಪಂಚಾಯತ್‌ರಾಜ್ ಸಬಲೀಕರಣ ಇವೆಲ್ಲದರಲ್ಲೂ ದೂರದೃಷ್ಟಿ
ಇಟ್ಟುಕೊಂಡಿದ್ದ ಮಹಾನ್ ವ್ಯಕ್ತಿ.
ತೀರಾ ಸೀಮಿತ ಅಧಿಕಾರವಧಿಯಲ್ಲಿ ಇಷ್ಟು ಸಾಧನೆ ಮಾಡಿದ ಆ
ಮುತ್ಸದ್ದಿಗೊಂದು ನಮನ.
ಆರ್. ವಿನಾಯಕ
ಬೆಂಗಳೂರು
ಜಾಗೃತಿ ಮೂಡಿಸಿದ
ಲೇಖನ
'ಕಳ್ಳಭಟ್ಟಿ
ದುರಂತ:
ಕೊಲೆಗಾರರು ಯಾರು?'
(ಸತೀಶ್ ಚಪ್ಪರಿಕೆ)
ಲೇಖನ ಪ್ರಸ್ತುತ ವಿಷಮಗೊಳ್ಳುತ್ತಿರುವ ಸಾಮಾಜಿಕ
ಪರಿಸ್ಥಿತಿಗೆ ಹಿಡಿದ ಕೈಗನ್ನಡಿ.
ಕಳ್ಳಭಟ್ಟಿ ಕುಡಿದು ಅಷ್ಟೊಂದು ಜನ ಸಾಯುತ್ತಿದ್ದರೆ
ಇಂತಹ ಒಂದು ದಂಧೆ ನಡೆಯುತ್ತಿದೆ ಎಂಬುದು ಪೊಲೀಸರಿಗಾಗಲೀ ಅಥವಾ ಅಬಕಾರಿ
ಇಲಾಖೆಗಳಿಗಾಗಲೀ ತಿಳಿದೇ ಇರಲಿಲ್ಲವೇ ಎಂಬ ಪ್ರಶ್ನೆ ಒಂದೆಡೆ
ಮೂಡುತ್ತದೆ.
ಹಿಂದೆ ಇದ್ದ ಜೆಡಿ(ಎಸ್)-ಬಿಜೆಪಿ
ಸರ್ಕಾರ ಸಾರಾಯಿ ನಿಷೇಧಕ್ಕೆ ತೋರಿದ ಆಸ್ಥೆಯನ್ನೇ ಕಳ್ಳಭಟ್ಟಿ ದಂಧೆ ಕಡಿವಾಣಕ್ಕೂ
ತೋರಿದ್ದರೆ?
ಬಹುಶಃ ಈ ಘಟನೆ ನಡೆಯುತ್ತಲೇ ಇರಲಿಲ್ಲ.
ಇಲ್ಲಿ ಮತ್ತೊಂದು ಖೇದಕರ ಅಂಶ ಎಂದರೆ ರಾಷ್ಟ್ರೀಯ
ಮಾಧ್ಯಮಗಳ ನಿರ್ಲಕ್ಷ್ಯ ಪ್ರವೃತ್ತಿ.
ವಿದೇಶಿ ಮಹಿಳೆಯೊಬ್ಬಳು ಸತ್ತರೆ ಗಂಟೆಗಟ್ಟಲೆ ಅದನ್ನೇ
ಬಿತ್ತರಿಸುವ ಮಾಧ್ಯಮಗಳು ಇಲ್ಲಿ ರಾಶಿ ಹೆಣ ಬೀಳುವಾಗ ಸುಮ್ಮನೆ ಇದ್ದದ್ದು ಅವುಗಳ
ಸಾಮಾಜಿಕ ಕಾಳಜಿಯನ್ನೇ ಪ್ರಶ್ನಿಸುವಂತೆ ಮಾಡಿದೆ.
ಬಡವರ ಪಾಲಿನ ದನಿಯಾದಾಗಲೇ ಮಾಧ್ಯಮಕ್ಕೂ ಅರ್ಥ.
ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಾಗಿದೆ.
ಈ ವಿಚಾರ ಪ್ರಕಟಿಸಿ ಮಾಧ್ಯಮಗಳಿಗೇ ಜಾಗೃತಿ ಮೂಡಿಸಿದ
ಟಿಎಸ್‌ಐ ಅನ್ನು ಮೆಚ್ಚಿಕೊಳ್ಳಲೇಬೇಕು.
ಆನಂದ ಕೇಶವ್
ಬೆಳಗಾವಿ
ಮೂಲ ವ್ಯವಸ್ಥೆ ಸುಧಾರಿಸಲಿ
'ಕೊಲೆಗಡುಕ ಧರ್ಮಾಂಧತೆ'
(ಪ್ರೊ.ಕೆ.ಎಸ್.
ನಿಸಾರ್ ಅಹಮದ್)
ಲೇಖನ ಇಸ್ಲಾಂ ಧರ್ಮದ ತೇಜೋವಧೆಯ ಮೂಲಕಾರಣಗಳ ಸುತ್ತ
ಹೆಣೆದುಕೊಂಡಿದೆ.
ಹೌದು,
ಇಂದಿನ 21ನೇ
ಶತಮಾನದಲ್ಲಿ ಭಯೋತ್ಪಾದನೆಯ ಮೂಲ
'ಕರ್ತೃ'ಗಳು
ಯಾರೆಂದು ನಾವು ಯೋಚಿಸಿದ್ದೇ ಆದಲ್ಲಿ,
ಅದು ಇಸ್ಲಾಂ ಧರ್ಮದ ಮೂಲ'ಭೂತ'ವಾದಿಗಳು.
ಹಿರಿಯರೆನಿಸಿಕೊಂಡ ಅವರು ಪಾಕಿಸ್ತಾನದ ಮದರಸಾಗಳಲ್ಲಿ
ಎಳೆಯ ಮಕ್ಕಳಿಗೆ 'ಉಗ್ರವಾದ'ವನ್ನು
ಬೋಧಿಸಿದ್ದು,
ಆತ್ಮಹತ್ಯಾ ದಾಳಿ,
ಜಿಹಾದ್ ಮುಂತಾದವುಗಳನ್ನು ಹೇಳಿಕೊಟ್ಟದ್ದು ಎಲ್ಲರಿಗೂ
ತಿಳಿದ ವಿಷಯ.
ಇಂತಹ ಮಕ್ಕಳು ಬಾಲ್ಯದಿಂದಲೇ
ಉಗ್ರವಾದಗಳನ್ನೂ ಬೆಳೆಸಿಕೊಳ್ಳುತ್ತಾ ತಾವೂ ಬೆಳೆಯುತ್ತಾರೆ.
ಮುಂದೆ ಒಸಾಮಾ ಬಿನ್ ಲಾಡೆನ್ ಇಲ್ಲವೇ ಮುಲ್ಲಾ ಓಮರನೋ
ಆಗುತ್ತಾರೆ.
ಭಾರತದಂತಹ ದೇಶಗಳಿಗೆ ಬಂದು 'ನಾಯಿಕೊಡೆ'ಗಳಂತೆ
ತಮ್ಮ ಸಂಘಟನೆಗಳನ್ನು ಬೆಳೆಸುತ್ತಾರೆ.
ಇಂಥವರು ಭಾರತದಂತಹ ಸಭ್ಯ ದೇಶವನ್ನು
2011ರೊಳಗಾಗಿ ಇಸ್ಲಾಂ
ರಾಷ್ಟ್ರವಾಗಿಸುವ ಸವಾಲೊಡ್ಡುತ್ತಾರೆ.
ಈಗಾಗಲೇ ಒಂದು ವರದಿಯ ಪ್ರಕಾರ ಭಾರತದಲ್ಲಿ
175 ಭಯೋತ್ಪಾದನೆಯ
ಸಂಘಟನೆಗಳಿವೆಯೆಂದು ಊಹಿಸಲಾಗಿದೆ.
ಈ ಎಲ್ಲಾ ಸಮಸ್ಯೆಗಳಿಗೆ ಮೂಲವ್ಯವಸ್ಥೆ ಸುಧಾರಣೆಯೇ
ಪರಿಹಾರ.
ಇಸ್ಲಾಂ ಧರ್ಮದ ಪಾಲಕರು ತಮ್ಮ ಮಕ್ಕಳ ಮೇಲೆ ನಿಗಾ ಇಡಲಿ,
ಮದರಸಾಗಳಿಗೆ ಸರ್ಕಾರವೇ ಆದರ್ಶ ಶಿಕ್ಷಕರನ್ನು ನೇಮಿಸಿ,
ಅಲ್ಲಿ ಆಗಬಹುದಾದ ಅಚಾತುರ್ಯವನ್ನು ತಪ್ಪಿಸಲಿ.
ಸಾಧ್ಯವಾದರೆ ಪೋಟಾ ಕಾಯ್ದೆಯನ್ನು ಜಾರಿಗೆ ತರಲಿ.
ಇವೆಲ್ಲಾ ಪರಿಹಾರಗಳ ಮೂಲಕ ಇಸ್ಲಾಂ ಧರ್ಮದ ಕಳಂಕ ಕರಗಲಿ.
ಜನತೆಯಲ್ಲಿ ಸಾಮಾಜಿಕ ಸಾಮರಸ್ಯ ಬೆಳೆದು ಶಾಂತಿ ನೆಲೆಸಲಿ.
ಸಂತೋಷ್ ಕೃ ಪಾಟೀಲ
ಗೋಕಾಕ
| ಬಹುಮಾನಿತ ಪತ್ರಗಳು |
ಗಾಂಧಿ ಸ್ಮರಣೆ
ಮಹಾತ್ಮ ಗಾಂಧಿ 1931ರಲ್ಲಿ ಬ್ರಿಟಿಷ್ ಲಾರ್ಡ್ ಚಾನ್ಸಲರ್‌ಗಳನ್ನು ಭಾರತದ ಸ್ವಾತಂತ್ರ್ಯಕ್ಕಾಗಿ ಮೊರೆ ಇಡುತ್ತಾ ನ್ಯಾಯಯುತ ಪರಿಹಾರಕ್ಕಾಗಿ ಬೇಡಿದ ಸಂದರ್ಭದಲ್ಲಿ ಹೇಳಿದ ಮಾತು ನೆನಪಾಗುತ್ತದೆ. "ಹಿಂಸೆಗೆ ಒಳಗಾದ ಪ್ರತಿ ವ್ಯಕ್ತಿಯೂ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಬೇಕು... 'ಈಗ ಆ ಕುರಿತು ಯಾವುದೇ ಆಶಾವಾದ ಇಡುವುದು ಸಾಧ್ಯವಿಲ್ಲವೆಂದಾದರೂ, ಒಂದು ವಿಷಯವಂತೂ ಸತ್ಯ. ನಾನು ನನಗೇ ಮಾರ್ಗದರ್ಶನ ಮಾಡಿಕೊಂಡಿದ್ದೇನೆ. ಇಲ್ಲವೆಂದಾದಲ್ಲಿ ನಾನು ವಕೀಲನಾಗಿರುತ್ತಲೇ ಇರಲಿಲ್ಲ. ಯಾವುದೇ ವಿಚಾರಕ್ಕೆ ನ್ಯಾಯ ದೊರಕದು ಎಂದು ನ್ಯಾಯಮೂರ್ತಿ ಹೇಳಿದರೆ ಆ ಕೂಡಲೇ ಆತನನ್ನು ಆ ಸ್ಥಾನದಿಂದ ಕಿತ್ತೊಗೆಯಬೇಕು.' ಲಾರ್ಡ್ ಚಾನ್ಸಲರ್ ನಾನು ನಿಮ್ಮ ಬಳಿ ಈಗ ಹೇಳುವುದೇನೆಂದರೆ, ನನಗೆ ಭಾರತೀಯ ಸಂವಿಧಾನದ ಪ್ರಸ್ತಾವನೆ ಪ್ರಕಾರ, "ನಾವು, ಭಾರತೀಯರು ಭಾರತದ ಸಂವಿಧಾನವನ್ನು ಸಾರ್ವಭೌಮ, ಸಾಮಾಜಿಕ, ಜಾತ್ಯತೀತ, ಪ್ರಜಾಪ್ರಭುತ್ವ, ಗಣತಂತ್ರ ಮತ್ತು ರಕ್ಷಣೆ ಇರುವ ರಾಷ್ಟ್ರವಾಗಿ ರೂಪಿಸಿದ್ದೇವೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಸಮಗ್ರತೆಗಳೇ ದೇಶದ ಸಂಪತ್ತು." ನ್ಯಾಯದಾನ ವಿಳಂಬ, ನ್ಯಾಯ ನಿರಾಕರಣೆಯೇ ಸರಿ. ಒಂದು ವೇಳೆ ಇದನ್ನು ಸರಿಪಡಿಸಲು ಸಾಧ್ಯವಾಗಿಲ್ಲ ಎಂದರೆ ದೇಶವನ್ನು ಉತ್ತಮ ಸ್ಥಿತಿಗೆ ತರಲು ಸಾಧ್ಯವೇ ಇಲ್ಲ. ದೇಶದ ನಾಗರಿಕರು ಹಣ ಹಾಗೂ ಬಲ ಪ್ರಯೋಗಿಸಿ ನ್ಯಾಯಕ್ಕಾಗಿ ಬೇರೆ ದಾರಿ ಹಿಡಿಯುತ್ತಿದ್ದಾರೆ. ಇದು ಭಾರತದಲ್ಲಿ ನಡೆಯದಂತೆ ತಡೆಯೋಣ.
ಎಸ್. ದೇವಿ
ಬೆಂಗಳೂರು
ಬದಲಾದ ಆದ್ಯತೆಗಳು
'ಕಳಚುವ ಸಂಸಾರ ಕೊಂಡಿ'ಯಂತಹ ಹೃದಯಸ್ಪರ್ಶಿ ಲೇಖನ ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು. ಟಿಎಸ್‌ಐ ಕೈಗೆತ್ತಿಕೊಂಡ ಕೂಡಲೇ ಆಕರ್ಷಕ ತಲೆಬರಹ ನನ್ನನ್ನು ಸೆಳೆಯಿತು. ಆದರೆ ಲೇಖನವನ್ನು ಓದುತ್ತಿದ್ದಂತೆಯೇ ನಾನು ದಿಗ್ಭ್ರಾಂತಳಾದೆ. ವೈವಾಹಿಕ ಮೋಸಗಳು ನಿರಂತರವಾಗಿ ನಡೆಯುತ್ತಿವೆ ಎನ್ನುವುದು ನಮಗೆಲ್ಲಾ ಗೊತ್ತಿರುವ ವಿಚಾರವೇ. ಆದರೆ ಅದರ ತೀವ್ರತೆ ಎಷ್ಟಿದೆ ಎನ್ನುವುದನ್ನು ಟಿಎಸ್‌ಐ ಬಹಿರಂಗಪಡಿಸಿದೆ. ನಮ್ಮ ಜೀವನಶೈಲಿಯಲ್ಲಾಗಿರುವ ಬದಲಾವಣೆಯ ಪರಿಣಾಮವಿದು. ಭಾರತ ಉದಾರೀಕರಣಕ್ಕೆ ತೆರೆದುಕೊಂಡ ಬಳಿಕ ಆರ್ಥಿಕವಾಗಿ ಮಾತ್ರವಲ್ಲ, ಸಮಾಜ ಮತ್ತು ಯೋಚನಾ ಸರಣಿಗಳೂ ಬದಲಾಗುತ್ತಿವೆ. ನಮ್ಮ ಆದ್ಯತೆಗಳೂ ಬದಲಾಗಿವೆ. ಈ ಹಿಂದೆ ಜೀವನದ ಆದ್ಯ ಕರ್ತವ್ಯ ಎಂದು ಭಾವಿಸಲಾಗಿದ್ದ ಮದುವೆ ಈಗ ಹಿಂದೆ ಸರಿದಿದೆ. ಇದು ತಪ್ಪಲ್ಲ. ಆದರೆ ಇದೇ ಕಾರಣಕ್ಕೆ ಇಷ್ಟೊಂದು ವಿಚ್ಛೇದನಾ ಪ್ರಕರಣಗಳು ನಮ್ಮ ಮುಂದಿವೆ. ಯುವಕರು ತಾಳ್ಮೆ ವಹಿಸಬೇಕಿದೆ. ಭಿನ್ನಾಭಿಪ್ರಾಯಗಳನ್ನು ಮರೆತು ಹೊಂದಾಣಿಕೆ ಮಾಡಿಕೊಳ್ಳಲು ಕಲಿಯಬೇಕು.
ರೇಣು ಕುಮಾರಿ
ಇ- ಮೇಲ್ ಮೂಲಕ
24x7 ನ್ಯಾಯಾಲಯ
'ನ್ಯಾಯದಾನ ವಿಳಂಬ, ನ್ಯಾಯ ನಿರಾಕರಣೆ' ಎನ್ನುವ ಮಾತಿದೆ. ನಮ್ಮ ನ್ಯಾಯಾಲಯಗಳ ಕಿವಿಗೆ ಈ ವಾಕ್ಯ ಬೀಳುವುದು ಕಡಿಮೆಯೇನೋ. ಈ ಪತ್ರಿಕೆಗೆ ಬರೆದ ಪತ್ರದ ಮೂಲಕ ನಾನು ಒಬ್ಬ ಸಾಮಾನ್ಯ ನಾಗರಿಕನಾಗಿದ್ದುಕೊಂಡು ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಹೈಕೋರ್ಟ್‌ಗಳ ನ್ಯಾಯಾಧೀಶರು ಮತ್ತು ಇತರ ವಕೀಲರನ್ನೆಲ್ಲಾ ನ್ಯಾಯ ನೀಡಲು ವಿಳಂಬಿಸಬೇಡಿ ಎಂದು ಬೇಡಿಕೊಳ್ಳುವೆ. ಇದರಿಂದ ಬಲಿಪಶುಗಳಿಗೆ ಮಾತ್ರ ಹಿಂಸೆಯಲ್ಲ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರೂ ಆ ಹಿಂಸೆ ಅನುಭವಿಸಬೇಕಾಗುತ್ತದೆ. ಇಂದು ಅಪರಾಧಗಳ ಸಂಖ್ಯೆ ಏರಿದೆ ಮತ್ತು ನ್ಯಾಯಾಲಯಗಳ ಮೇಲೆ ಒತ್ತಡ ಹೆಚ್ಚಾಗಿದೆ ಎನ್ನುವುದನ್ನು ನಾನು ಬಲ್ಲೆ. ಆದರೆ ಯಾವುದೇ ಖಾಸಗಿ ಕಾರ್ಖಾನೆಗಳಲ್ಲಿ ಕೆಲಸದ ಒತ್ತಡ ಹೆಚ್ಚಾದರೆ ಅವರು ಹಗಲು ರಾತ್ರಿ ಎನ್ನದೆ ಕೆಲಸ ಮಾಡಿ ಹೆಚ್ಚು ಉತ್ಪನ್ನಗಳನ್ನು ತಯಾರಿಸಲು ಪ್ರಯತ್ನಿಸುತ್ತಾರೆ. ಅಂದರೆ ವಾರದ ಏಳೂ ದಿನಗಳಲ್ಲಿ 24 ಗಂಟೆ ಕೆಲಸ ಮಾಡುತ್ತಾರೆ. ನ್ಯಾಯಾಲಯಗಳೂ ಇದನ್ನು ಅನುಸರಿಸಬಹುದಲ್ಲವೆ?
ಪಿ. ಗೀತಾ
ಒರಿಸ್ಸಾ
|
ಅನ್ಯಾಯದ ವಿರುದ್ಧ ಪ್ರತಿಭಟನೆ
'ಕಳಚುವ
ಸಂಸಾರ ಕೊಂಡಿ'
(ಪ್ರಿಯಾಂಕಾ ರಾಯ್)
ಲೇಖನ ವೈವಾಹಿಕ ಜೀವನದಲ್ಲಿ ಸುಳ್ಳು,
ವಂಚನೆಗಳಲ್ಲಿ ಸೊರಗಿದ ಮಹಿಳೆಯ ಸ್ಥಿತಿಗತಿಯನ್ನು
ಚೆನ್ನಾಗಿ ತಿಳಿಯ ಪಡಿಸಿತು.
ನಮ್ಮ ನಡುವೆ ದಿನನಿತ್ಯ ಒಂದಲ್ಲಾ ಒಂದು ವಿವಾಹ ವಂಚನಾ ಪ್ರಕರಣಗಳು
ನಡೆಯುತ್ತಲೇ ಇರುತ್ತವೆ.
ಆದರೆ ಅವುಗಳಲ್ಲಿ ಬೆಳಕಿಗೆ ಬರುವುದು ಕೇವಲ ಬೆರಳೆಣಿಕೆಯಷ್ಟು.
ಇಂತಹ ವಂಚನೆ ಬಯಲಿಗೆ ಬರದಿರಲು ಮಹಿಳೆ ಭಯದಿಂದ
ಸುಮ್ಮನಿರುವುದೇ ಮುಖ್ಯ ಕಾರಣ.
ಆಕೆ
ಅನ್ಯಾಯದ ವಿರುದ್ಧ ಸೆಟೆದು ನಿಂತರೆ ಇಂತಹ ಸಮಸ್ಯೆಗಳೇ
ಹುಟ್ಟಲಾರವು.
ಅದರಲ್ಲೂ 21ನೇ
ಶತಮಾನದ ಮಹಿಳೆ ವಿದ್ಯಾವಂತೆ.
ಆಕೆ ಅನ್ಯಾಯವನ್ನು ಪ್ರತಿಭಟಿಸುವ ಮನೋವೃತ್ತಿಯನ್ನು
ಬೆಳೆಸಿಕೊಳ್ಳಬೇಕು.
ಎಸ್. ಶಶಿಕಲಾ
ಶಿವಮೊಗ್ಗ
ಚಿಂತನೆ ಅಗತ್ಯ
'ಹೆದ್ದಾರಿ
V/s
ಕಾಲುದಾರಿ....
ಎಲ್ಲಿಯವರೆಗೆ?'
(ರಶ್ಮಿ ಹೆಗಡೆ)
ಲೇಖನ ಚಿಂತನಾರ್ಹ.
ಮಹಾನಗರಗಳ ಬದುಕು ಇಂದು ಯಾಂತ್ರಿಕವಾಗುತ್ತಾ ಸಾಗುತ್ತಿದೆ.
ಪುಟ್ಟ ಹಳ್ಳಿಯಿಂದ ಕನಸುಗಳನ್ನು ಹೊತ್ತು ನಗರಕ್ಕೆ
ಅದೆಷ್ಟೋ ಜೀವಗಳು ದಿನನಿತ್ಯ ಬರುತ್ತವೆ.
ತಾನೇನೋ ಮಹತ್ತರವಾದದ್ದನ್ನು ಸಾಧಿಸಬೇಕು ಎಂಬ ಹಂಬಲವೇ
ಆತನನ್ನು ಇಲ್ಲಿಯವರೆಗೆ ತಂದಿರುತ್ತದೆ,
ನಿಜ.
ಆದರೆ ಇಲ್ಲಿ ಬಂದ ಕೂಡಲೇ ಹತ್ತರೊಳಗೆ ಹನ್ನೊಂದಾಗಿ ಹೋಗಿ
ಬಿಡುತ್ತಾನೆ.
ಅದೂ ಆತನಿಗೇ ತಿಳಿಯದಂತೆ!
ಎಂತಹ ವ್ಯಂಗ್ಯ ಇದು.
ಯಾವುದೋ ವಿದೇಶೀ ಕಂಪೆನಿಯಲ್ಲಿ ಹಗಲು ರಾತ್ರಿ ಕೆಲಸ.
ಆ ಕೆಲಸದ ಒತ್ತಡದ ನಡುವೆ ತಾನು ಬದುಕುವುದನ್ನೇ
ಮರೆಯುತ್ತಿದ್ದೇನೆ ಎಂಬುದನ್ನೂ ಆತ ಮರೆತಿರುತ್ತಾನೆ.
ಅವೇ ಟ್ರಾಫಿಕ್ಕು,
ಸಿಗ್ನಲ್ಲು,
ಹೊಟೇಲ್ ಊಟಗಳು,
ಆಫೀಸಿನ ಟೀ ಮಿಶನ್‌ಗಳಿಗೆ ಒಗ್ಗಿಕೊಳ್ಳುತ್ತಾ ಅಮ್ಮನ
ಕೈಯ ಕಾಫಿ ರುಚಿಯೇ ಮರೆತು ಹೋಗಿರುತ್ತದೆ.
ಮಾನವ ಯಂತ್ರಗಳನ್ನಷ್ಟೇ ಕೊಡುತ್ತಿವೆಯೇ ಮಹಾನಗರ
ಹಾಗಿದ್ದರೆ?
ಪ್ರತಿಯೊಬ್ಬನೂ ಚಿಂತಿಸಬೇಕಾಗಿದೆ.
ಅಂಜಲಿ ಭಟ್
ಇ-ಮೇಲ್ ಮೂಲಕ
ಮೆಚ್ಚುಗೆಯಾದವು
ದೇಶ-ವಿದೇಶಗಳ
ಸುದ್ದಿ,
ನಂಬಿದರೆ ನಂಬಿಯಂತಹ ವಿಶೇಷ ಸುದ್ದಿಗಳು ಬಹುವಾಗಿ
ಮೆಚ್ಚುಗೆಯಾಗುತ್ತವೆ.
ಪತ್ರ ಚರಿತ್ರೆ ಕೇವಲ ಪತ್ರವಷ್ಟೇ ಆಗಿ ಉಳಿಯದೆ ಇತಿಹಾಸದ ಪರಿಚಯ
ಮಾಡಿಸಿಕೊಡುತ್ತದೆ.
ಸಿನಿಮಾ ಸುದ್ದಿ,
ಹೊಸದಾಗಿ ಸೇರಿಕೊಂಡ ಪುಸ್ತಕ ವಿಮರ್ಶೆ ಅಂಕಣಗಳು
ಮೆಚ್ಚುಗೆಯಾದವು.
ಪಿ. ಶೇಖರ್
ಇ-ಮೇಲ್ ಮೂಲಕ
ಉತ್ತಮ ಪತ್ರಿಕೆ
ಟಿಎಸ್‌ಐ ಮೊದಲ ಸಂಚಿಕೆಯಿಂದ
ಇಲ್ಲಿಯವರೆಗೆ ಓದುತ್ತಲೇ ಬಂದಿದ್ದೇನೆ.
ಕರ್ನಾಟಕದಲ್ಲಾಗುತ್ತಿರುವ ಬೆಳವಣಿಗೆಗಳು,
ಇಲ್ಲಿನ ಸಮಸ್ಯೆಗಳು,
ರಾಜಕೀಯದಾಟ...
ಹೀಗೆ ವೈವಿಧ್ಯಮಯ ಲೇಖನಗಳು ಉತ್ತಮ ಓದಿಗೆ
ಪೂರಕವಾಗುತ್ತಿವೆ.
ಧನಂಜಯ
98457****
| ಉತ್ತಮ ವಿಶ್ಲೇಷಣೆ
|

ಟಿಎಸ್‌ಐ ವರದಿ ಮಾಡಿರುವ ರಾಜಕೀಯ ವಿಶ್ಲೇಷಣೆ ಬಹಳ ಚೆನ್ನಾಗಿ ಮೂಡಿಬಂದಿದೆ. ಚುನಾವಣೆಗೆ ಸಂಬಂಧಿಸಿದಂತೆ ಹಲವು ಟಿವಿ ಚಾನೆಲ್‌ಗಳು, ಪತ್ರಿಕೆಗಳು ಸಮೀಕ್ಷೆ ಮಾಡಿದ್ದವು. ಆದರೆ ಅವುಗಳೆಲ್ಲಕ್ಕಿಂತ ಚೆನ್ನಾಗಿ ಈ ಪತ್ರಿಕೆ ವಾಸ್ತವವನ್ನು ತೆರೆದಿಟ್ಟಿದೆ. ಯಾವ ಕ್ಷೇತ್ರದಲ್ಲಿ ಯಾರ ಗೆಲುವು, ಯಾವ ಕಾರಣಕ್ಕೆ, ಗೆಲುವು ಹಾಗೂ ಸೋಲಿಗೆ ಕಾರಣಗಳನ್ನು ಬಹಳ ವಿಶ್ಲೇಷಣಾತ್ಮಕವಾಗಿ ತಿಳಿಸಲಾಗಿದೆ. ಕ್ಷೇತ್ರ ಪುನರ್ ವಿಂಗಡಣೆಯಾಗಿರುವುದರಿಂದ ಯಾರು ಯಾವ ಕ್ಷೇತ್ರದಲ್ಲಿ ಪ್ರಬಲರಾಗಿದ್ದಾರೆ ಎಂದು ತಿಳಿಸುವುದರ ಜೊತೆಗೆ, ರಾಜಕೀಯ ವಿಶ್ಲೇಷಣೆ ಅಲ್ಲದೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕಡೆಯೂ ಗಮನ ಹರಿಸಲಾಗಿದೆ. ಕ್ಷೇತ್ರದಲ್ಲಿ ಎಷ್ಟು ಅಭಿವೃದ್ಧಿಯಾಗಿದೆ, ಅಲ್ಲಿನ ಸಮಸ್ಯೆ ಏನು, ಅದಕ್ಕೆ ಯಾವ ಪಕ್ಷ ಯಾವ ಆಶ್ವಾಸನೆ ನೀಡಿದೆ ಎಂಬ ಹಲವು ಅಂಶಗಳನ್ನು ವಿಶ್ಲೇಷಣೆ ಮಾಡಿದೆ. ಬೇರೆ ಯಾವ ಪತ್ರಿಕೆಯೂ ಇಷ್ಟು ವಿಷದವಾಗಿ ವಿಶ್ಲೇಷಿಸಿಲ್ಲ. ನೀವು ಮಾಡಿ ಯಶಸ್ವಿಯಾಗಿದ್ದೀರಿ. ಸಂಪೂರ್ಣ ಟಿಎಸ್‌ಐ ತಂಡಕ್ಕೆ ಧನ್ಯವಾದಗಳು.
ಧನಂಜಯ
ಕೆ.ಜಿ.ಎಫ್ |
|