ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಬಾಂಧವ್ಯ ವೃದ್ಧಿ
 
ಹದಿಹರೆಯದವರ ಮನ ಅರಿಯಿರಿ
 

ಸವಾಲನ್ನು ಎದುರಿಸಲು ಸಿದ್ಧರಾಗಿರುವ ಯುವಜನರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುವುದು ಹೆತ್ತವರ ಕರ್ತವ್ಯ

 
ಪ್ರಹ್ಲಾದ್ ಕಕ್ಕರ್

ಪ್ರಖ್ಯಾತ ಜಾಹೀರಾತು ಚಿತ್ರ ನಿರ್ದೇಶಕ

ಹದಿಹರೆಯದವರು ಅದ್ಭುತ ಸಾಧನೆಗಳನ್ನು ಮಾಡುತ್ತಿದ್ದಾರೆ. ತಾಂತ್ರಿಕ, ಕ್ರೀಡೆ, ಉದ್ಯಮ, ವೈದ್ಯಕೀಯ... ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅನನ್ಯ ಸಾಧನೆಗಳನ್ನು ಮಾಡಿ ಮುನ್ನಡೆಯುತ್ತ್ತಿರುವ ಯುವಜನಾಂಗ ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆಯನ್ನೇ ನೀಡುತ್ತಿದೆ. ಆದರೆ ಅವರನ್ನು ನಿಭಾಯಿಸುವಾಗ ಹಲವಾರು ಸಂದಿಗ್ಧಗಳು ಎದುರಾಗುವುದಿದೆ.

ಒಂದು ಕಾಲದಲ್ಲಿ ಮಕ್ಕಳು ಅಪ್ಪ- ಅಮ್ಮ ಹೇಳಿದ್ದೆಲ್ಲವನ್ನೂ ಪ್ರಶ್ನೆ ಮಾಡದೆ ಪಾಲಿಸುತ್ತಿದ್ದರು. ಆದರೆ ಈಗ ಹಾಗಿಲ್ಲ. ಕಾಲ ಬದಲಾದಂತೆ ಮಕ್ಕಳ ಮನಸ್ಥಿತಿಯೂ ಬದಲಾಗಿದೆ. ತಮ್ಮ ಜೀವನ ಸಂಗಾತಿಯನ್ನು ಆರಿಸುವುದು ಇರಲಿ ಅಥವಾ ವೃತ್ತಿಯ ಆಯ್ಕೆಯಾಗಿರಲಿ ಅಥವಾ ಇನ್ಯಾವುದೇ ವಿಚಾರದ ಕುರಿತಾಗಲಿ ಯುವಜನರು ತಮ್ಮದೇ ನಿರ್ಧಾರಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಹಾಗಾಗಿ ಹೆತ್ತವರೂ ಈ ಸಂದಿಗ್ಧವನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ಅವರ ಕಾಲದಲ್ಲಿ ಎರಡೋ ಅಥವಾ ಮೂರೋ ವೃತ್ತಿ ಆಯ್ಕೆಗಳಿದ್ದವು ಮತ್ತು ಅವರ ಜೀವನದಲ್ಲಿ ಮದುವೆಗೇ ಪ್ರಾಶಸ್ತ್ಯ ನೀಡಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ವೃತ್ತಿಪರ ಆಯ್ಕೆಗಳೂ ವಿಶಾಲವಾಗಿವೆ. ವೇತನವೂ ಏರಿದೆ. ಹೆತ್ತವರು ತಮ್ಮ ಮೂರು ವರ್ಷಗಳ ವೃತ್ತಿ ಜೀವನದಲ್ಲಿ ಶೇಖರಿಸಿಡಬಹುದಾಗಿದ್ದ ವೇತನವನ್ನು ಇಂದಿನ ಮಕ್ಕಳು ಪ್ರಥಮ ಮಾಸಿಕ ವೇತನದಲ್ಲೇ ಪಡೆಯುತ್ತಾರೆ! ಅಂದರೆ ಮಕ್ಕಳು ಬೇಜವಾಬ್ದಾರರಾಗಿದ್ದಾರೆ ಅಥವಾ ದಾರಿ ತಪ್ಪುತ್ತಿದ್ದಾರೆ ಎಂದರ್ಥವಲ್ಲ. ಅವರು ಸಂತೋಷದಿಂದ ಜೀವನ ಸಾಗಿಸ ಬಯಸುತ್ತಾರೆ. ಆದರೆ ಹಣದ ವಿಚಾರದಲ್ಲಿ ಮಕ್ಕಳು ಬೇಜವಾಬ್ದಾರಿ ತೋರಿದಲ್ಲಿ ಮಾತ್ರ ಹೆತ್ತವರು ಮಧ್ಯೆ ಪ್ರವೇಶಿಸಬೇಕಾಗುತ್ತದೆ.

ಹದಿಹರೆಯದಲ್ಲಿ ಹೆತ್ತವರು ಮಕ್ಕಳ ಜೊತೆ ಎಂತಹ ಸಂಬಂಧ ಬೆಸೆದುಕೊಳ್ಳುತ್ತಾರೆ ಎನ್ನುವುದು ಬಹುಮುಖ್ಯ. ಮಕ್ಕಳು ತಮ್ಮ ತಂದೆ-ತಾಯಿಗೆ ನಿಜವಾಗಿಯೂ ಗೌರವ ತೋರುತ್ತಾರೆ ಮತ್ತು ಪ್ರೀತಿಸುತ್ತಾರೆ. ಇತ್ತ ಹೆತ್ತವರೂ ಅದಕ್ಕೆ ತಕ್ಕಂತೆ ಬದಲಾಗಬೇಕು. ತಮ್ಮ ಮಕ್ಕಳ ಜೊತೆ ಮುಕ್ತವಾಗಿ ಮಾತುಕತೆ ನಡೆಸಬೇಕು, ಅವರನ್ನು ಅರಿತುಕೊಳ್ಳಬೇಕು ಹಾಗೂ ಅವರ ಯೋಚನಾ ಸರಣಿಯನ್ನು ಮೆಚ್ಚಿಕೊಳ್ಳಬೇಕು. ಹದಿಹರೆಯದ ಮಕ್ಕಳನ್ನು ಸ್ನೇಹಿತರಂತೆ ಕಂಡು ಅವರ ಸಕಾರಾತ್ಮಕ ನಿಲುವುಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು. ಈ ತಲೆಮಾರಿನ ಯೋಚನಾ ಸರಣಿ ತಮಗಿಂತ ಮಾರು ದೂರದಲ್ಲಿದೆ ಎನ್ನುವುದನ್ನು ಹೆತ್ತವರು ತಿಳಿದುಕೊಳ್ಳಬೇಕು. ಇಂದಿನ ಯುವಜನರು ತುಂಬಾ ಮಹತ್ವಾಕಾಂಕ್ಷಿಗಳು. ವ್ಯಾಪಕ ಆಶೋತ್ತರಗಳನ್ನು ಬೆಳೆಸಿಕೊಂಡಿರುತ್ತಾರೆ. ಇವರು ಯಾವುದೇ ಸವಾಲುಗಳನ್ನು ಎದುರಿಸಲು ಸಿದ್ಧರು. ಪ್ರಯೋಗಕ್ಕೆ ಸದಾ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಹೆತ್ತವರು ಅವರ ಜೊತೆಗಿದ್ದು ಸಹಕಾರ ಮತ್ತು ಪ್ರೋತ್ಸಾಹ ನೀಡಬೇಕು.

ಪ್ರಣಯ ಜೀವನದ ಬಗ್ಗೆಯೂ ಅವರ ಯೋಚನಾ ಸರಣಿ ಬದಲಾಗಿದೆ. ತಂದೆ-ತಾಯಿ ಹುಡುಗಿ/ಹುಡುಗ ನೋಡಿ ಮದುವೆ ಸಂಬಂಧ ಕುದುರಿಸುವ ವ್ಯವಸ್ಥೆಯಿಂದ ನಾವು ಬಹು ದೂರ ನಡೆದು ಬಂದಿದ್ದೇವೆ. ಈಗೇನಿದ್ದರೂ ಯುವಜನರೇ ತಮ್ಮ ಬಾಳ ಸಂಗಾತಿಯನ್ನು ಆರಿಸಿಕೊಳ್ಳುವ ಸ್ಥಿತಿ ಇದೆ. ಹೀಗಾಗಿ ಭಾವನೆಗಳೇ ಇಲ್ಲಿ ಪ್ರಾಮುಖ್ಯ ವಹಿಸಿರುವುದನ್ನು ನಾವು ಕಾಣಬಹುದು. ತಾವು ಪ್ರೀತಿಸುವ ವ್ಯಕ್ತಿ ಜೊತೆ ಜೀವನಪರ್ಯಂತ ಕಾಲ ಕಳೆಯಲು ಅವರು ಬಯಸುತ್ತಾರೆ. ಅಂದರೆ ಪ್ರೀತಿ ಏನು ಎಂಬುದನ್ನು ಅವರು ತಿಳಿದುಕೊಂಡಿದ್ದಾರೆ ಎಂದರ್ಥ. ಹೌದು, ಕೆಲವರು ಸಂಬಂಧಗಳಲ್ಲಿ ಬಂಧಿಯಾಗುತ್ತಾರೆ ಮತ್ತು ಕೆಲ ದಿನಗಳಲ್ಲೇ ಆ ಬಂಧನಗಳನ್ನೆಲ್ಲಾ ತೊರೆದು ಹೊರಹೋಗುತ್ತಾರೆ. ಅವರಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೆ ಎನ್ನುವುದು ನನ್ನ ಭಾವನೆ. ಅವರು ಅಭದ್ರತಾ ಭಾವನೆಯಿಂದ ನರಳುತ್ತಿರುತ್ತಾರೆ. ಒಬ್ಬ ವ್ಯಕ್ತಿಯಿಂದ ಪ್ರಾಮುಖ್ಯ ಪಡೆದುಕೊಳ್ಳಲಾಗದವರು ಅವರು. ಇಲ್ಲಿ ನಾವು ಮಕ್ಕಳನ್ನು ಹೇಗೆ ಬೆಳೆಸುತ್ತೇವೆ ಎನ್ನುವುದೂ ಮುಖ್ಯವಾಗುತ್ತದೆ. ಮಕ್ಕಳು ಅತ್ಯುತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ಬೆಳೆದಿದ್ದರೆ ಅವರು ಎಂದೂ ತಪ್ಪು ಹಾದಿ ಹಿಡಿಯಲು ಸಾಧ್ಯವೇ ಇಲ್ಲ. ಸ್ನೇಹಿತರಿಂದ ಮಕ್ಕಳು ಸಾಕಷ್ಟು ಕಲಿಯುತ್ತಾರೆ. ಆದರೆ ಚಿಕ್ಕಂದಿನಿಂದಲೇ ಬೆಳೆಸಿಕೊಂಡು ಬಂದ ಮೌಲ್ಯಗಳೇ ಅವರಿಗೆ ತಮ್ಮ ಮಿತಿಯಲ್ಲಿ ಇರುವುದನ್ನು ಕಲಿಸುತ್ತದೆ. ಹಾಗಾಗಿ ಹೆತ್ತವರು ತಮ್ಮ ಮಕ್ಕಳಿಗೆ ಮೌಲ್ಯಗಳನ್ನು ಅಳವಡಿಸಿಕೊಳ್ಳುವತ್ತ ಗಮನ ಹರಿಸಬೇಕು. ಹಾಗಿದ್ದಲ್ಲಿ ಉಳಿದ ವಿಚಾರಗಳತ್ತ ಅವರು ಚಿಂತಿಸುವ ಅಗತ್ಯವೇ ಇರುವುದಿಲ್ಲ.

ಇತ್ತೀಚೆಗೆ 'ಲಿವ್ ಇನ್ ರಿಲೇಷನ್‌ಶಿಪ್' (ವಿವಾಹೇತರ ಸಹಜೀವನ) ದೊಡ್ಡ ಟ್ರೆಂಡ್ ಆಗಿ ಬೆಳೆಯುತ್ತಿದೆ. ನಾನು ಇದನ್ನು ಅನುಭವಿಸಿದ್ದೇನೆ. ಹಾಗಾಗಿ ಮದುವೆಗೆ ಸಮಾನವಾದುದು ಯಾವುದೂ ಇಲ್ಲ ಎನ್ನುವುದು ನನ್ನ ವೈಯಕ್ತಿಕ ಅನುಭವ. ಯುವಜನರೂ ಕೆಲ ಸಮಯದ ಬಳಿಕ ಈ ಸತ್ಯವನ್ನು ಅರಿತುಕೊಳ್ಳುತ್ತಾರೆ ಎನ್ನುವುದು ನನ್ನ ಆಶಯ. ವಿವಾಹೇತರ ಸಹಜೀವನದಲ್ಲಿ ನೀವು ಯಾವಾಗ ಬೇಕಾದರೂ ಬಂಧನವನ್ನು ಕಡಿದುಕೊಳ್ಳಬಹುದು. ಹಾಗಾಗಿ ಇಲ್ಲಿ ಸಂಬಂಧಗಳು ಶಾಶ್ವತವಾಗಿರುವುದಿಲ್ಲ. ಒಂದೆರಡು ತಿಂಗಳು ಅಥವಾ ವರ್ಷಕ್ಕೆ ಕೊನೆಗೊಳ್ಳುವ ಈ ಸಂಬಂಧಗಳಿಗೆ ನಿಜವಾಗಿ ಅರ್ಥವೇ ಇಲ್ಲ ಎಂದರೆ ತಪ್ಪಿಲ್ಲ. ಆದರೆ ಮದುವೆ ಎಂಬುದು ಹಾಗಲ್ಲ. ವಿವಾಹ ನೀವು ಪ್ರೀತಿಸುವವರ ಜೊತೆ ಹೊಂದಾಣಿಕೆ, ಒಡಂಬಡಿಕೆ ಮತ್ತು ತ್ಯಾಗದ ಮೂಲಕ ಸುದೀರ್ಘ ಸಂಬಂಧ ಬೆಳೆಸಿಕೊಳ್ಳುವುದನ್ನು ಕಲಿಸುತ್ತದೆ. ಈ ಬಗ್ಗೆ ನೀವು ಗಹನವಾಗಿ ಯೋಚಿಸಿ ನೋಡಿದಲ್ಲಿ ಒಂದು ಸತ್ಯ ಎದ್ದುಕಾಣುತ್ತದೆ. ಇಂದಿನ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಸಂಬಂಧಗಳನ್ನು ಬೆಸೆದುಕೊಳ್ಳುತ್ತಾರೆ. ಏಕೆಂದರೆ ಅವರು ಪ್ರಬುದ್ಧರಾಗಿರುತ್ತಾರೆ. ಪ್ರೀತಿ ಎಂಬ ಭಾವನೆ ಅಸ್ತಿತ್ವದಲ್ಲಿದೆ ಎನ್ನುವುದನ್ನು ಆಗಲೇ ತಿಳಿದುಕೊಂಡಿರುತ್ತಾರೆ. ತಾವು ಪ್ರೀತಿಸುವ ವ್ಯಕ್ತಿಯೊಂದಿಗೆ ಜೀವನ ಕಳೆಯಬೇಕು ಎಂದು ಅವರು ಅದಾಗಲೇ ನಿರ್ಧರಿಸಿರುತ್ತಾರೆ. ಹಾಗಾಗಿ ಜೀವನದ ಆದಿಯಲ್ಲೇ ಮನಮೆಚ್ಚುವ ಸಂಗಾತಿಗಾಗಿ ಅನ್ವೇಷಣೆ ಆರಂಭಿಸಿರುತ್ತಾರೆ.

ಜಾಗೃತಿ ಮತ್ತು ಭರಪೂರ ಮಾಹಿತಿಗಳು ಮಕ್ಕಳ ಮುಗ್ಧತೆಯನ್ನು ಕಸಿಯುತ್ತವೆ ಎನ್ನುವ ಊಹಾಪೋಹಗಳೆಲ್ಲಾ ಕೆಲಸಕ್ಕೆ ಬಾರದವು. ಈಗಿನ ಮಕ್ಕಳು ನಾವು ಅವರ ವಯಸ್ಸಿನಲ್ಲಿ ಇದ್ದ ಹಾಗಿಲ್ಲ. ಹದಿಹರೆಯದವರು ಹೆಚ್ಚು ಪ್ರಬುದ್ಧರು ಮತ್ತು ಸಮತೋಲಿತ ಚಿಂತನೆ ಉಳ್ಳವರು. ಈ ಜಾಗೃತಿಯೇ ಅವರನ್ನು ತಮಗೆ ಹೊಸತಾಗಿರುವ ವಿಷಯಗಳ ಬಗ್ಗೆ ಪ್ರಯೋಗಕ್ಕೆ ಇಳಿಯಲು ಪ್ರೇರೇಪಿಸುತ್ತದೆ. ಇಂತಹ ಸಂದರ್ಭದಲ್ಲಿ ಹೆತ್ತವರು ಅವರ ಜೊತೆ ಸ್ನೇಹಿತರಂತೆ ನಡೆದುಕೊಳ್ಳಬೇಕು. ಅವರ ತಲೆಯಲ್ಲಿ ಯಾವ ಚಿಂತನೆ ಹರಿದಾಡುತ್ತಿದೆ ಎನ್ನುವುದನ್ನು ಅರಿತುಕೊಂಡು ಆ ಬಗ್ಗೆ ಸಲಹೆ- ಸೂಚನೆಗಳನ್ನು ನೀಡುತ್ತಿರಬೇಕು.

ತಮ್ಮ ಮಕ್ಕಳು ಧೂಮಪಾನ ಅಥವಾ ಮಾದಕ ದ್ರವ್ಯಗಳ ಸೇವನೆಯತ್ತ ಆಕರ್ಷಿತರಾಗಿದ್ದಾರೆ ಎಂದು ತಿಳಿದಾಗ ಅವರನ್ನು ಹೊಡೆಯುವುದು ಅಥವಾ ಥಳಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಒಂದು ವೇಳೆ ಅಪ್ಪ-ಅಮ್ಮ ಇಂತಹ ಕೃತ್ಯಕ್ಕಿಳಿದಲ್ಲಿ ಮಕ್ಕಳು ಉಗ್ರಸ್ವರೂಪಿಗಳಾಗಿ ಬದಲಾಗಬಹುದು. ಇಂತಹ ಅಭ್ಯಾಸಗಳು ಎಷ್ಟು ಹಾನಿಕರ ಎನ್ನುವುದನ್ನು ಅವರು

ಮಕ್ಕಳಿಗೆ ತಿಳಿ ಹೇಳಬೇಕು. ಹದಿಹರೆಯದಲ್ಲಿ ದುರಭ್ಯಾಸಗಳ ದಾಸರಾಗುವುದರಿಂದ ಉಂಟಾಗುವ ಪರಿಣಾಮವನ್ನು ಅವರಿಗೆ ಮನಗಾಣಿಸಬೇಕು. ದುರಭ್ಯಾಸಗಳನ್ನು ತಮ್ಮ ಎದುರಲ್ಲೇ ಅನುಸರಿಸುವಂತೆ ಒತ್ತಾಯಿಸಿ ಕನಿಷ್ಠ ದುರಭ್ಯಾಸಗಳ ಬಗ್ಗೆ ಮಾಹಿತಿ ನೀಡಲು ಪ್ರಯತ್ನಿಸಬೇಕು. ಈ ಮೂಲಕ ಅವರು ಮಕ್ಕಳನ್ನು ವಿಶ್ವಾಸಕ್ಕೆ ತಂದುಕೊಳ್ಳಬಹುದು. ಮುಂದಿನ ಸಲ ನಿಮ್ಮ ಮಕ್ಕಳು ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಅಥವಾ ಯಾವುದೇ ಸಮಸ್ಯೆ ಸೃಷ್ಟಿಯಾದಲ್ಲಿ ಆಕೆ/ಆತ ಹೆತ್ತವರ ಬಳಿಗೇ ಬರುತ್ತಾರೆ. ಅಮ್ಮ-ಅಪ್ಪಂದಿರು ಈ ದಿನಗಳಲ್ಲಿ ಹಿಂದಿನಂತೆ ಮಕ್ಕಳ ಮೇಲೆ ಶಿಸ್ತು ಅಥವಾ ಮಿತಿಗಳನ್ನು ಹೇರುವ ಪ್ರಯತ್ನ ಮಾಡಬಾರದು. ಒಂದು ಹೆಜ್ಜೆ ಮುಂದೆ ಹೋಗಿ ಈಗಿನ ತಲೆಮಾರಿನ ಯುವಜನರನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಬೇಕು.

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .