ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಸಂಪಾದಕೀಯ
ಐಪಿಎಲ್ ಸಾದರಪಡಿಸಿದ ಕಟು ವಾಸ್ತವ: ಕ್ರಿಕೆಟ್ ಲೋಕದ ಸಾಮ್ರಾಟ ಭಾರತ
    
Arindam Choudhuri
ಅರಿಂದಮ್ ಚೌಧುರಿ,
ಪ್ರಧಾನ ಸಂಪಾದಕರು, ದ ಸಂಡೆ ಇಂಡಿಯನ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿ ಕೊನೆಗೂ ಮುಕ್ತಾಯಗೊಂಡಿದೆ. ಅದರಲ್ಲಿಯಂತೂ ಟೂರ್ನಿಯಲ್ಲಿಯೇ ಅತ್ಯಂತ ಕಡಿಮೆ ಸಾಮರ್ಥ್ಯವಿರುವ ತಂಡ ಎಂದು ಪರಿಗಣಿಸಲಾಗಿದ್ದ 'ಅಂಡರ್ ಡಾಗ್' ರಾಜಸ್ತಾನ ಪ್ರಶಸ್ತಿ ಗೆಲ್ಲುವ ಮೂಲಕ ಅತ್ಯದ್ಭುತವಾಗಿದ್ದ ಟೂರ್ನಿಗೆ ರೋಮಾಂಚಕ ಅಂತ್ಯವನ್ನು ಹಾಡಿದೆ. ಅದೂ ಕೊನೆಯ ಓವರ್‌ವರೆಗೆ ಸಾಗಿ ಪ್ರೇಕ್ಷಕರನ್ನು ರೋಮಾಂಚನದ ಅಲೆಯ ಮೇಲೆ ತೇಲಿಸಿದ ಫೈನಲ್‌ನಲ್ಲಿ ರಾಜಸ್ತಾನ ಪ್ರಶಸ್ತಿ ಬಾಚಿಕೊಂಡಿತು. ನಾನು ಒಪ್ಪಿಕೊಳ್ಳಬೇಕಾದ ಒಂದು ವಾಸ್ತವವಿದೆ. ಅದೇನೆಂದರೆ ಟೂರ್ನಿಯ ಆರಂಭದಲ್ಲಿ ನಾನು ಐಪಿಎಲ್ ಯಶಸ್ಸಿನ ಬಗ್ಗೆ ಬಹಳಷ್ಟು ಅನುಮಾನಪಟ್ಟಿದ್ದೆ. ನಮ್ಮ ದೇಶದಲ್ಲಿ ಕ್ಲಬ್ ಸಂಸ್ಕೃತಿ ಇಲ್ಲದ ಕಾರಣ ಐಪಿಎಲ್ ಇಲ್ಲಿ ಯಶಸ್ಸು ಸಾಧಿಸಲಾರದು ಎಂದು ವಾದಿಸಿದ್ದೆ. ಏಕೆಂದರೆ ಇಡೀ ಐಪಿಎಲ್ ಟೂರ್ನಿ ಯುರೋಪ್‌ನ ಕ್ಲಬ್ ಸಂಸ್ಕೃತಿಯ ಪಡಿಯಚ್ಚಾಗಿತ್ತು. ಅದರಲ್ಲಿಯಂತೂ ಭಾರತೀಯರ ಪಾಲಿಗೆ ಕ್ರಿಕೆಟ್ ಒಂದು ಧರ್ಮ. ಇಲ್ಲಿ ಕ್ರಿಕೆಟ್ ಆಟಗಾರರೆಂದರೆ ಆರಾಧ್ಯ ದೈವಗಳು. ಇಂತಹ ಸಂದರ್ಭದಲ್ಲಿ ನಮ್ಮ 'ದೇವರು'ಗಳೇ ಬೇರೆ, ಬೇರೆ ಕ್ಲಬ್‌ಗಳನ್ನು ಪ್ರತಿನಿಧಿಸುತ್ತಾ ಪರಸ್ಪರ ಹೋರಾಟಕ್ಕೆ ಇಳಿಯುವುದನ್ನು ಭಾರತೀಯರು ಎಷ್ಟರ ಮಟ್ಟಿಗೆ ಸಹಿಸಿಕೊಂಡಾರು? ಎನ್ನುವುದು ನನ್ನ ಪ್ರಶ್ನೆಯಾಗಿತ್ತು. ಇದಕ್ಕಿಂತ ಮೊದಲು ನಡೆದ ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್) ವೈಫಲ್ಯ ಕೂಡ ಅಂತಹುದೇ ಮಾದರಿಯ ಐಪಿಎಲ್ ಯಶಸ್ವಿಯಾಗಲಾರದು ಎಂಬ ಮುನ್ಸೂಚನೆ ನೀಡಿತ್ತು. ಆದರೆ, ಐಪಿಎಲ್ ಟೂರ್ನಿ ವಿಜೃಂಭಿಸಿದ ರೀತಿ ದೇಶದಾದ್ಯಂತ ಅಚ್ಚರಿಯ ಅಲೆಯನ್ನೇ ಎಬ್ಬಿಸಿ ಬಿಟ್ಟಿದೆ.

ಭಾರತೀಯರು ಇದುವರೆಗೆ ಅನುಭವಿಸದ ಒಂದು ಅಪೂರ್ವ ಅವಕಾಶವನ್ನು ಒದಗಿಸಿಕೊಡುವ ಮೂಲಕ ಐಪಿಎಲ್ ಯಶಸ್ಸಿನ ಹಾದಿ ಹಿಡಿಯಿತು. ಅದೇನೆಂದರೆ ಪ್ರಾಥಮಿಕವಾಗಿ ಭಾರತೀಯರ ಪಾಲಿಗೆ ಪಿಕ್‌ನಿಕ್, ಹವ್ಯಾಸಗಳು ಮತ್ತು ಪಠ್ಯೇತರ ಚಟುವಟಿಕೆಗಳೆಂದರೆ ಒಂದು ರೀತಿಯ ಆಲಸ್ಯವಿದೆ. ಆ ಬಗ್ಗೆ ಹಸಿವೂ ಇದೆ! ಅಳಿದುಳಿದ ಅಮೂಲ್ಯ ಸಮಯದಲ್ಲಿ ಬದುಕನ್ನು ನಾವು ಅನುಭವಿಸುವುದು ಹೇಗೆ? ಎಂದು ನಾವಿನ್ನೂ ಸಂಪೂರ್ಣವಾಗಿ ಅರಿತಿಲ್ಲ. ಆ ಕಂದಕವನ್ನು ಐಪಿಎಲ್ ಯಶಸ್ವಿಯಾಗಿ ತುಂಬಿದೆ. ಒಂದೂವರೆ ತಿಂಗಳ ಕಾಲ ಐಪಿಎಲ್ ಭಾರತದಲ್ಲಿ ಹುಚ್ಚು ಕ್ರಿಕೆಟ್ ಅಲೆಯನ್ನು ಎಬ್ಬಿಸಿತು. ಮಾತ್ರವಲ್ಲ ಒಂದು ಸಾಹಸವಾಗಿ ಯಶಸ್ವಿಯೂ ಆಯಿತು. ಟೂರ್ನಿಯ ಆರಂಭದಲ್ಲಿ ಜನಸಾಮಾನ್ಯ ಐಪಿಎಲ್ ಪಂದ್ಯಗಳ ಬಗ್ಗೆ ಅಂತಹ ಆಸಕ್ತಿ ತೋರದೇ ಇದ್ದರೂ, ಕ್ರಮೇಣ ಹುಚ್ಚು ತಲೆಗೇರಿ ಬಿಟ್ಟಿತು. ಐಪಿಎಲ್ ಪಂದ್ಯಗಳನ್ನು ವೀಕ್ಷಿಸುವ ಸಲುವಾಗಿಯೇ ಜನರು ತಮ್ಮ ಜೀವನ ಶೈಲಿಯನ್ನೂ ಬದಲಾಯಿಸಿಕೊಂಡ ಉದಾಹರಣೆಗಳು ಇವೆ ಎಂಬ ವರದಿಗಳು ಕೂಡ ಬಂದಿವೆ. ಅಷ್ಟರ ಮಟ್ಟಿಗೆ ಐಪಿಎಲ್ ಜನಸಾಮಾನ್ಯನ ಜೀವನದ ಮೇಲೆ ಪರಿಣಾಮ ಬೀರಿತು. ಐಪಿಎಲ್ ಯಶಸ್ವಿಯಾಗಲು ಮತ್ತೊಂದು ಪ್ರಮುಖ ಕಾರಣ, ಟ್ವೆಂಟಿ-20 ಕ್ರಿಕೆಟ್ ಪಂದ್ಯಗಳ ಮಾದರಿ. ಅದು ತತ್‌ಕ್ಷಣದ ಚಟ್-ಪಟ್ ಮನೋರಂಜನಾ ಲೋಕ. ಅದರ ಜೊತೆ ಅದು ಕ್ರಿಕೆಟ್ ಮತ್ತು ಬಾಲಿವುಡ್ ತಾರೆಗಳ ಸಂಗಮವಾಗಿ ಕೂಡ ಮನಸೆಳೆಯಿತು. ಇದರೊಂದಿಗೆ ವಿದೇಶಗಳಿಂದ ಆಗಮಿಸಿದ್ದ ಚಿಯರ್ ಲೀಡರ್ಸ್ ಮತ್ತು ಅವರನ್ನು ಸುತ್ತುವರಿದ ವಿವಾದಗಳು ಕೂಡ ಐಪಿಎಲ್ ಪಾಲಿಗೆ ಮಸಾಲೆಯಾದವು. ಇನ್ನೂ ಐಪಿಎಲ್ ಕನಸನ್ನು ವಾಸ್ತವವಾಗಿ ಸಾಕಾರಗೊಳಿಸಿದ ಲಲಿತ್ ಮೋದಿಗೆ 'ಹ್ಯಾಟ್ಸ್ ಆಫ್' ಎಂದು ಹೇಳಲೇಬೇಕು. ಐಪಿಎಲ್ ಪರಿಕಲ್ಪನೆ ಮೂಡಿದ ದಿನದಿಂದ ಈ ಟೂರ್ನಿ ಯಶಸ್ವಿಯಾಗುತ್ತದೆ ಎಂದು ಮೋದಿ ಬಲವಾಗಿ ನಂಬಿದ್ದರು. ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಟೂರ್ನಿ ಹಾಗೂ 2006ರಲ್ಲಿ ನಡೆದ ವಿಶ್ವಕಪ್ ಫುಟ್‌ಬಾಲ್ ಟೂರ್ನಿಗಿಂತ ಹೆಚ್ಚು ಟೆಲಿವಿಷನ್ 'ಟಿಆರ್‌ಪಿ' ದರ ಐಪಿಎಲ್‌ಗೆ ಲಭ್ಯವಾಗಿದೆ ಎನ್ನುವುದೇ ಯಶಸ್ಸಿನ ಮಾನದಂಡ. ಇನ್ನು ಉದ್ಯಮದ ನೆಲೆಯಲ್ಲಿ ಐಪಿಎಲ್ ಯಶಸ್ಸನ್ನು ಅಳೆಯಲು ಹೊರಟರೆ ಎರಡು ಕ್ಲಬ್‌ಗಳ ಮಾಲೀಕರು ಮಾತ್ರ ನಷ್ಟ ಅನುಭವಿಸಲಿಲ್ಲ. ಉಳಿದ ಆರು ಮಾಲೀಕರು ನಷ್ಟ ಅನುಭವಿಸಿದರು. ಆದರೆ ಅವರು ಗಾಬರಿ ಪಡಬೇಕಾದ ಅವಶ್ಯಕತೆ ಇಲ್ಲ. ಇದಿನ್ನೂ ಟೂರ್ನಿಯ ಮೊದಲ ವರ್ಷ. ಈ ಬಾರಿ ಐಪಿಎಲ್‌ಗೆ ಸಿಕ್ಕಿರುವ ಜನ ಹಾಗೂ ಹಣ ಬೆಂಬಲವನ್ನು ನೋಡಿದಾಗ ಖಂಡಿತ ಮುಂಬರುವ ವರ್ಷಗಳಲ್ಲಿ ಹಣದ ಹೊಳೆ ಹರಿಯಲಿದೆ ಎನ್ನಬಹುದು.

ಇದಲ್ಲದಕ್ಕಿಂತ ಮುಖ್ಯವಾಗಿ ಭಾರತೀಯ ಕ್ರಿಕೆಟ್ ಮೇಲೆ ಐಪಿಎಲ್ ಅತ್ಯಂತ ಪರಿಣಾಮಕಾರಿಯಾದ ಸಕಾರಾತ್ಮಕ ಪರಿಣಾಮ ಬೀರಿದೆ. ಇಷ್ಟರವರೆಗೆ ಭಾರತ ಕ್ರಿಕೆಟ್ ಲೋಕದ ಅನಭಿಷಿಕ್ತ ಅಧಿಪತಿ ಎಂದು ಎಲ್ಲರೂ ಹೇಳುತ್ತಿದ್ದರು. ಆದರೀಗ ಭಾರತವೇ ಕ್ರಿಕೆಟ್ ಲೋಕದ ಸಾಮ್ರಾಟ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೇ ಐಪಿಎಲ್ ಸಾಬೀತು ಮಾಡಿದೆ. ಈ ಯಶಸ್ಸಿನ ನಂತರ ಭಾರತವನ್ನು ಕ್ರಿಕೆಟ್ ಲೋಕದ ಕೇಂದ್ರ ಬಿಂದು ಎಂದು ಜಗತ್ತು ಒಪ್ಪಿಕೊಳ್ಳಲೇಬೇಕಾಗಿದೆ. ಕ್ರಿಕೆಟ್ ಅಭಿಮಾನಿಗಳ ಸಂಖ್ಯೆಯ ದೃಷ್ಟಿಯಿಂದ ಇದುವರೆಗೆ ಎಲ್ಲ ದೇಶಗಳನ್ನು ಮೀರಿ ನಿಂತಿದ್ದ ಭಾರತ ಈಗ ಎಲ್ಲ ದೃಷ್ಟಿಗಳಿಂದಲೂ ಅಗ್ರಸ್ಥಾನಕ್ಕೇರಿ ನಿಂತಿದೆ. ಸಾಂಪ್ರದಾಯಿಕವಾಗಿ ಇಂಗ್ಲೆಂಡನ್ನು ಕ್ರಿಕೆಟ್ ಲೋಕದ ಕೇಂದ್ರಬಿಂದು ಎಂದು ಒಪ್ಪಿಕೊಳ್ಳಲಾಗಿದೆ. ಆದರಲ್ಲೀಗ ಫುಟ್‌ಬಾಲ್ ಹಾಗೂ ಇನ್ನಿತರ ಕ್ರೀಡೆಗಳು ಅತ್ಯಂತ ಜನಪ್ರಿಯವಾಗಿ ಕ್ರಿಕೆಟನ್ನು ಮೀರಿ ನಿಂತಿವೆ. ಅಲ್ಲಿನ ದಿನಪತ್ರಿಕೆಗಳಲ್ಲಿನ 20 ಕ್ರೀಡಾಪುಟಗಳ ಪೈಕಿ ಕೇವಲ ಒಂದು ಪುಟವನ್ನು ಕ್ರಿಕೆಟ್‌ಗೆ ಮೀಸಲಿಡಲಾಗುತ್ತದೆ. ಅದೂ, ಇಂಗ್ಲೆಂಡ್ ತಂಡ ಭಾಗವಹಿಸಿದ ಪ್ರಮುಖ ಸರಣಿಗಳಾಗಿದ್ದರೆ ಮಾತ್ರ. ಇನ್ನು ಕ್ರಿಕೆಟ್ ಶಕ್ತಿಗಳಾಗಿ ವಿಜೃಂಭಿಸಿದವರ ಪಟ್ಟಿಯನ್ನು ಗಮನಿಸಿದರೆ ಒಂದು ಕಾಲದಲ್ಲಿ ವೆಸ್ಟ್ ಇಂಡೀಸ್ ಹಾಗೂ ಈಗ ಆಸ್ಟ್ರೇಲಿಯ ಸಾಮ್ರಾಟರ ಸ್ಥಾನದಲ್ಲಿ ನಿಂತಿದೆ. ಆದರೆ, ಐಪಿಎಲ್ ಅಭೂತಪೂರ್ವ ಯಶಸ್ಸು ಆ ಎಲ್ಲವನ್ನೂ ಮೀರಿ ಭಾರತವನ್ನು ಕ್ರಿಕೆಟ್ ಲೋಕದ ಸಾಮ್ರಾಟನ ಪಟ್ಟಕ್ಕೇರಿಸಿ ಕೂರಿಸಿದೆ. ಅದೂ ಭಾರತ ತಂಡ ಒಮ್ಮೆಯೂ ಕೆರಿಬಿಯನ್ ದೊರೆಗಳಂತೆ ಅಥವಾ ಕಾಂಗರೂ ಪಡೆಯಂತೆ ತನ್ನ ಸಾಧನೆಯ ಮೂಲಕ ಎಲ್ಲರನ್ನೂ, ಎಲ್ಲವನ್ನೂ ಮೆಟ್ಟಿ ನಿಂತಿಲ್ಲ. ಆಗಾಗ ಅತ್ಯುತ್ತಮ ಪ್ರದರ್ಶನ ನೀಡಿದರೂ, ನಮ್ಮ ತಂಡ ಸ್ವದೇಶ ಅಥವಾ ವಿದೇಶದಲ್ಲಿ ಸ್ಥಿರವಾದ ಪ್ರದರ್ಶನ ನೀಡಿ ಮೈದಾನದಲ್ಲಿ ಮೆರೆಯುತ್ತಿಲ್ಲ. ಆದರೂ, ನಾವಿಂದು ಕ್ರಿಕೆಟ್ ಲೋಕದ ಅಭಿಷಿಕ್ತ ದೊರೆಗಳು!

50 ಮತ್ತು 60ರ ದಶಕವನ್ನೇ ತೆಗೆದುಕೊಂಡರೆ ಕ್ರಿಕೆಟ್ ಮಟ್ಟಿಗೆ ಇದ್ದುದ್ದು ಬ್ರಿಟಿಷ್ ದೊರೆಗಳು ಮಾತ್ರ. 70 ಮತ್ತು 80ರ ದಶಕದಲ್ಲಿ ವೆಸ್ಟ್ ಇಂಡೀಸ್ ತನ್ನ ಅಪ್ಪಟ ಪ್ರತಿಭೆಗಳ ಮೂಲಕ ಮತ್ತು ಅತ್ಯದ್ಭುತ ಸ್ಥಿರ ಪ್ರದರ್ಶನಗಳ ಮೂಲಕ 'ಜಂಟಲ್‌ಮೆನ್ ಗೇಮ್'ನ ಸ್ವರೂಪವನ್ನೇ ಬದಲಾಯಿಸಿ ತನ್ನ ಛಾಪನ್ನು ಮೂಡಿಸಿತು. ಅದಾದ ಮೇಲೆ ಕಾಂಗರೂ ಪಡೆಯ ಯುಗಾರಂಭ. ಇನ್ನು ಮುಂದಿನ ಯುಗ ಭಾರತದ್ದು. ಒಂದೆಡೆ ಐಪಿಎಲ್ ಮೂಲಕ ಭಾರತದಲ್ಲಿನ ಬೇರು ಮಟ್ಟದ ಅಪ್ಪಟ ಪ್ರತಿಭೆಗಳ ಅನಾವರಣವಾಗಿದೆ. ಇನ್ನೊಂದೆಡೆ ಯಾವುದೇ ಕಾರಣಕ್ಕೆ ಐಪಿಎಲ್ ಋತುವಿನಲ್ಲಿ ಇನ್ಯಾವುದೇ ಅಂತರ್ ರಾಷ್ಟ್ರೀಯ ಸರಣಿ ನಡೆಯದಂತಹ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆ ನಿಚ್ಚಳವಾಗಿದೆ. ಐಪಿಎಲ್ ಯಶಸ್ಸನ್ನು ಗಮನಿಸಿದ ಪ್ರತಿಯೊಬ್ಬ ಅಂತರ್ ರಾಷ್ಟ್ರೀಯ ಕ್ರಿಕೆಟ್ ತಾರೆಯೂ ಮುಂದಿನ ಋತುವಿನಲ್ಲಿ ಅದರ ಅವಿಭಾಜ್ಯ ಅಂಗವಾಗುವ ಆತುರ-ಕಾತರ ವ್ಯಕ್ತಪಡಿಸಲಿದ್ದಾನೆ. ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸಲು ನಮಗೆ ಅವಕಾಶ ನೀಡಿ ಎಂದು ಅವರವರ ಕ್ರಿಕೆಟ್ ನಿಯಂತ್ರಣ ಮಂಡಳಿಗಳ ಮೇಲೆ ಒತ್ತಡ ಹೇರಲಿದ್ದಾರೆ. ಆ ನಿಟ್ಟಿನಲ್ಲಿ ಅವರು ಯಶಸ್ವಿಯಾದರೆ ಮುಂದಿನ ಋತುವಿನಿಂದ ಐಪಿಎಲ್ ನಡೆಯುವಾಗ ವಿಶ್ವದ ಎಲ್ಲ ಕ್ರಿಕೆಟ್ ಪ್ರೇಮಿಗಳ ದೃಷ್ಟಿ ಭಾರತದ ಮೇಲೆ ಮಾತ್ರ ನೆಟ್ಟಿರುತ್ತದೆ. ಆ ಮೂಲಕ ಪ್ರತಿ ವರ್ಷ 45 ದಿನಗಳ ಕಾಲ ಭಾರತ ಕ್ರಿಕೆಟ್ ಲೋಕದ ಮೇಲೆ ತನ್ನ ಏಕಸ್ವಾಮ್ಯ ಸ್ಥಾಪಿಸಲಿದೆ!!

 

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .