|
ಹದಿಹರೆಯಕ್ಕೆ ಅಧ್ಯಾತ್ಮದ ಸ್ಪರ್ಶ
ಅಧ್ಯಾತ್ಮದ ಮೂಲಕ ಪ್ರಾಯೋಗಿಕವಾಗಿ ಬದುಕಿನ ನೈಜ
ಅಂತರ್ ದೃಷ್ಟಿಯನ್ನು ಕಂಡುಕೊಳ್ಳಲು ಸಾಧ್ಯ
ಶ್ರೀ ಶ್ರೀ ರವಿಶಂಕರ ಗುರೂಜಿ
'ಆರ್ಟ್ ಆಫ್ ಲಿವಿಂಗ್'ನ
ಗುರು, ಬೆಂಗಳೂರು
ಪ್ರತಿಯೊಬ್ಬರ ಜೀವನದಲ್ಲಿಯೂ ಹದಿಹರೆಯ ಎಂದರೆ ಗೊಂದಲದ ಗೂಡು.
ಸಣ್ಣಮಕ್ಕಳಂತೆ ಅವರೇನು ಕೈಗೊಂದು ಆಟಿಕೆ,
ಬಾಯಿಗೆ ಸಿಹಿ ನೀಡಿಬಿಟ್ಟರೆ ಸಮಾಧಾನಗೊಳ್ಳುವವರಲ್ಲ;
ಹಾಗಂತ ಭಾವನಾತ್ಮಕವಾಗಿ ತೀರಾ ಪ್ರಬುದ್ಧರೂ ಅಲ್ಲ.
ಆಗತಾನೇ ಹೊಸ ಜಗತ್ತಿನ ಕದ ತೆರೆದಿರುತ್ತದೆ.
ನಿರುತ್ಸಾಹಗೊಂಡ ಸಂದರ್ಭದಲ್ಲಿ ಅವರಿಗೆ ಬೇಕಾಗಿರುವುದು ಅದಮ್ಯ
ಪ್ರೋತ್ಸಾಹ ಮತ್ತು ಆತ್ಮವಿಶ್ವಾಸದ ಆಸರೆ.
ಹದಿಹರೆಯ, ಬದುಕಿನ
ಏರಿಳಿತಗಳನ್ನು ಕಾಣುವ ಸಮಯ,
ಅಲ್ಲಿ ಏಕಾಂತವಿರುತ್ತದೆ. ಶರೀರದ
ಹಾರ್ಮೋನ್‌ಗಳಲ್ಲಿ ಹಲವಾರು ಬದಲಾವಣೆಗಳಾಗುತ್ತವೆ.
ಆಕೆ/ಆತ ತನ್ನ ದೇಹ,
ಮನಸ್ಸು, ಭಾವನೆ,
ಕನಸು, ಕಷ್ಟ-ಕಾರ್ಪಣ್ಯಗಳೊಂದಿಗೆ
ಆಪ್ತವಾಗಿಬಿಡುವ ಸುಂದರ ಕ್ಷಣ.
ಹದಿಹರೆಯ ಎಂದರೆ ಹಾಗೇ; ಯಾರೂ
ನಮ್ಮನ್ನು ಅರ್ಥಮಾಡಿಕೊಳ್ಳುತ್ತಿಲ್ಲವೆಂಬ ಏಕಾಂಗಿ ಭಾವನೆ.
ಹೆತ್ತವರು ಒಳ್ಳೆಯದು ಅಥವಾ ಕೆಟ್ಟದ್ದು ಏನೇ ಹೇಳಲಿ ಮನಸ್ಸು ಮಾತ್ರ
ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ.
ಪ್ರತಿ ಕ್ಷಣದಲ್ಲೂ ತತ್‌ಕ್ಷಣದ ಪರಿಹಾರ,
ತೃಪ್ತಿಯ ಹಾತೊರೆಯುವಿಕೆ.
ಬಯಸಿದ್ದೆಲ್ಲಾ ಈಗಲೇ ಆಗಿಬಿಡಬೇಕೆಂದು ತುಡಿಯುವ ಮನಸ್ಸು.
ಇಂಥ ಸಂಕೀರ್ಣ ಸಮಯದಲ್ಲಿ ಯುವಜನರಲ್ಲಿ ಭರವಸೆಯ ಬೆಳಕು ತುಂಬಬೇಕು.
ಹದಿಹರೆಯದಲ್ಲಿ ಬದುಕಿನ ಸವಾಲುಗಳನ್ನು ಎದುರಿಸುವಲ್ಲಿ ಅಧ್ಯಾತ್ಮ
ಬಹುಮುಖ್ಯ ಪಾತ್ರ ವಹಿಸುತ್ತದೆ.
ಅಧ್ಯಾತ್ಮದ ಮೂಲಕ ಪ್ರಾಯೋಗಿಕವಾಗಿ ಬದುಕಿನ ನೈಜ ಅಂತರ್ ದೃಷ್ಟಿಯನ್ನು
ಕಂಡುಕೊಳ್ಳಲು ಸಾಧ್ಯ. ಅಧ್ಯಾತ್ಮ
ಎಂದರೆ ಜ್ಯೋತಿ, ಆಸರೆ ಮತ್ತು
ನಮ್ಮೊಳಗಿನ ಸುಪ್ತ ಚೈತನ್ಯವನ್ನು ಎಚ್ಚರಿಸುವುದು.
ಪ್ರತಿಯೊಂದು ಯುವಮನಸ್ಸು ಉತ್ಸಾಹವನ್ನು ವೃದ್ಧಿಸಿಕೊಳ್ಳಲು
ಹಾತೊರೆಯುತ್ತದೆ.
ದುರದೃಷ್ಟವೆಂದರೆ ಆಧ್ಯಾತ್ಮಿಕತೆ ಕೆಲವೊಮ್ಮೆ ಗಂಭೀರವೆಂದೆನಿಸಿದರೆ,
ಇನ್ನು ಕೆಲವೊಮ್ಮೆ ಬೇಸರ ಹುಟ್ಟಿಸುತ್ತದೆ.
ಈ ಕಲ್ಪನೆಯನ್ನು ನಾವು ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆ ಖಂಡಿತಾ
ಇದೆ. ಇದು ಹದಿಹರೆಯದ ಯುವ
ಮನಸ್ಸುಗಳಿಗೆ ವಿಶೇಷವಾಗಿ ನಾವು ಬೋಧಿಸಬೇಕಾದ ಪಾಠ.
ಆಧ್ಯಾತ್ಮಿಕತೆ ಎಂದರೆ ಕೇವಲ ಪ್ರಾಯೋಗಿಕ ಅಧ್ಯಯನವಲ್ಲ,
ಅದು ಮೌಲ್ಯಯುತ ವ್ಯವಸ್ಥೆ,
ಬದುಕಿನ ದಾರಿ;
ಜೀವನೋತ್ಸಾಹ ಮತ್ತು ಪ್ರಗತಿ.
ನಮ್ಮ ಮಕ್ಕಳು ಸತ್ಪ್ರಜೆಗಳಾಗಿ ಬಾಳಬೇಕಾದರೆ ಅವರಲ್ಲಿ ಆಧ್ಯಾತ್ಮಿಕತೆಯ
ಜ್ಯೋತಿ ಹಚ್ಚಬೇಕು. ಆದರೆ
ಇತ್ತೀಚಿನ ದಿನಗಳಲ್ಲಿ ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಲು ಹೆತ್ತವರಿಗೆ
ಸಮಯವೇ ಇರುವುದಿಲ್ಲ.
ಸಂಸ್ಕೃತದಲ್ಲಿ "ನಿಮ್ಮ ಮಗ/ಮಗಳು
16 ದಾಟಿದರೆ,
ಅವರೊಂದಿಗೆ ಆತ್ಮೀಯ ಗೆಳೆಯನಾಗಿರಿ"
ಎನ್ನುವ ಮಾತಿದೆ.
ಪ್ರತಿಯೊಂದು ವಿಚಾರವನ್ನೂ ಅವರಿಗೆ ಬೋಧಿಸಬೇಡಿ,
ಏನು ಮಾಡಬೇಕು ಅಥವಾ ಏನು ಮಾಡಬಾರದು ಎಂಬುದನ್ನು ಹೇಳಬೇಡಿ.
ಕೇವಲ ಅವರ ಕಷ್ಟಗಳಲ್ಲಿ ಅವರೊಂದಿಗೆ ಕೈಜೋಡಿಸಿ.
ಹೆತ್ತವರಾಗಿ ಅಲ್ಲ ಸ್ನೇಹಿತರಂತೆ ಜೊತೆಗಿರಿ.
ಹಾಗಿದ್ದಾಗ ನಿಮ್ಮ ಜೊತೆ ಅವರು ಮನಬಿಚ್ಚಿ ಮಾತನಾಡುತ್ತಾರೆ,
ತಮ್ಮದೆಲ್ಲವನ್ನೂ ಹಂಚಿಕೊಳ್ಳುತ್ತಾರೆ.
ಹೆಚ್ಚಾಗಿ ಹದಿಹರೆಯದ ಯುವಜನರು ಹೆತ್ತವರಿಗಿಂತ ಸ್ನೇಹಿತರ ಜೊತೆಗೆ
ಮನಬಿಚ್ಚಿ ಮಾತನಾಡುತ್ತಾರೆ. ಇದು
ಸಾಮಾನ್ಯ ಪ್ರಕ್ರಿಯೆ. ಇದೇ ಮಾತು
ಅಧ್ಯಾಪಕರಿಗೂ ಅನ್ವಯಿಸುತ್ತದೆ.
ಅಧ್ಯಾಪಕರೂ ವಿದ್ಯಾರ್ಥಿಗಳ ಜೊತೆಗೆ ಗೆಳೆಯನಂತೆ ವರ್ತಿಸಬೇಕು,
ಮಾತನಾಡಬೇಕು.
ಪ್ರತಿ ಹೆತ್ತವರು ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆದು ಮೌಲ್ಯಯುತ
ಬದುಕನ್ನು ಪಡೆದು ಪ್ರಗತಿಯ ಪಥದಲ್ಲಿ ಸಾಗಬೇಕೆನ್ನುವುದನ್ನೇ ಆಶಿಸುತ್ತಾರೆ.
ಮಕ್ಕಳ ಸಂತೋಷವೇ ಅವರ ಖುಷಿ.
ಆದರೆ ಕೆಲವೆಡೆ ಆ ಸಂತೋಷದ ಕೊಂಡಿಯೇ ಕಳಚಿದೆ.
ಒಂದು ಪುಟ್ಟ ಮಗುವನ್ನು ಗಮನಿಸಿ.
ಆ ಪುಟ್ಟ ಮುಖದಲ್ಲಿ ಸೂಸುವ ನಗೆಮಿಂಚು ಎಷ್ಟೊಂದು
ಸುಂದರವಾಗಿರುತ್ತದೆ. ಅದೇ ಮಗು
ಶಾಲೆ ಅಥವಾ ಕಾಲೇಜಿಗೆ ಕಾಲಿಟ್ಟಾಗ ಅದರ ಮುಖವನ್ನು ಗಮನಿಸಿ;
ಆ ಸಂತೋಷ, ಮುಗ್ಧತೆ,
ಸೌಂದರ್ಯವನ್ನು ಕಾಣಲು ಸಾಧ್ಯವಾಗುವುದೇ?
ಇತ್ತೀಚಿನ ಸಮೀಕ್ಷೆ ಪ್ರಕಾರ ಒಂದು ಮಗು ದಿನಕ್ಕೆ
400 ಬಾರಿ ನಕ್ಕರೆ,
ಯೌವನಾವಸ್ಥೆಯಲ್ಲಿ ದಿನಕ್ಕೆ ಕೇವಲ
17 ಬಾರಿ ಮಾತ್ರ ನಗುತ್ತದೆ.
ಆದರೆ ಪ್ರಾಪ್ತ ವಯಸ್ಸಿಗೆ ಬಂದವರ ಮುಖದಲ್ಲಿ ಅಪರೂಪಕ್ಕೆ ನಗು
ಮೂಡುತ್ತದೆ.
ಇತ್ತೀಚೆಗೆ ಯುರೋಪ್‌ನಲ್ಲಿ ಯುವಜನರ ಬಗ್ಗೆ ನಡೆಸಿರುವ ಅಧ್ಯಯನದ ಬಗ್ಗೆ
ಹೇಳುತ್ತೇನೆ. ಶೇ.
70ರಷ್ಟು ಮಂದಿ ಯುವಕರು
ಅವರ ಹೆತ್ತವರನ್ನು ದ್ವೇಷಿಸುತ್ತಾರೆ ಮತ್ತು ಶೇ.
80ರಷ್ಟು ಮಂದಿ ಅವರ
ಪ್ರಾಧ್ಯಾಪಕರನ್ನು ದ್ವೇಷಿಸುತ್ತಾರೆಂದು ಸಮೀಕ್ಷೆ ತಿಳಿಸಿದೆ.
ಹೆಚ್ಚಿನ ಯುವಜನರು ಹಿಂಸೆ ಮತ್ತು ಅಪರಾಧದಂತಹ ಪಾಪಕೃತ್ಯಗಳತ್ತ ಮುಖ
ಮಾಡಿರುವುದು ವಿಪರ್ಯಾಸ.
ಕೆಲವೊಮ್ಮೆ ಕನಿಷ್ಠ ಮಾನವೀಯ ಮೌಲ್ಯಗಳೂ ನಮ್ಮಿಂದ ಮರೆಯಾಗಿರುತ್ತವೆ.
ಸ್ವಾರ್ಥ ಶಿಕ್ಷಣ ಪ್ರವೃತ್ತಿಯ ನಡುವೆ ಸ್ನೇಹ ಅರ್ಥ ಕಳೆದುಕೊಂಡಿದೆ.
ಇಂಥ ಸನ್ನಿವೇಶದಲ್ಲಿ ಮಕ್ಕಳು ಮಾನವೀಯತೆಯನ್ನು ಕಳೆದುಕೊಳ್ಳದೆಯೇ
ಹುಟ್ಟಿನಿಂದಲೇ ಕ್ರಿಯಾಶೀಲ ಮತ್ತು ಚಿಂತನಾಶೀಲರಾಗಿ ಬೆಳೆಯಬೇಕೆಂಬುದನ್ನು
ನಾವು ಮನಗಾಣಬೇಕಿದೆ. ಐಹಿಕ
ತೃಪ್ತಿ ಯಾವುದೇ ವ್ಯಕ್ತಿಯನ್ನು ಪರಿಪೂರ್ಣನನ್ನಾಗಿಸುವುವಿಲ್ಲ.
ಮುಗ್ಧತೆ ಜೊತೆಗಿನ ಬೌದ್ಧಿಕತೆಯಿಂದ ಜೀವನ ಪರಿಪೂರ್ಣತೆ ಸಾಧಿಸಲು
ಸಾಧ್ಯ.
ಇಂದು ಯುವಜನರು ಪ್ರಬುದ್ಧರಾಗಿದ್ದಾರೆ ಮತ್ತು ಅವರ ಬದುಕಿಗೆ ಅಧ್ಯಾತ್ಮ
ಅಗತ್ಯ ಎಂಬುದನ್ನು ನಾವು
ಅರಿತುಕೊಳ್ಳಬೇಕು. ಹಾಗೇ
ಯುವಜನರು ಕೂಡ. ಅಗಾಧ ಸಾಮರ್ಥ್ಯ
ಮತ್ತು ಶಕ್ತಿಯಿಂದ ಸಾಧನೆಯ ದಾರಿ ಕಂಡುಕೊಳ್ಳಬಹುದು.
ಪ್ರತಿಯೊಬ್ಬರೂ ಇಂದ್ರಿಯ ಪ್ರಶಾಂತತೆ,
ಮನಃಶಾಂತಿ, ಆಂತರಿಕ
ಶಾಂತಿ ಮತ್ತು ಪರಿಶುದ್ಧ ಪ್ರೀತಿಗಾಗಿ ಹಂಬಲಿಸುತ್ತಾರೆ.
ಆಧ್ಯಾತ್ಮಿಕತೆಯಿಂದ ಯುವ ಮನಸ್ಸುಗಳಿಗೆ ಶಾಂತಿ ದೊರೆಯಲು ಖಂಡಿತ
ಸಾಧ್ಯ.
ಪ್ರಸ್ತುತ ಯುವಜನರು ಜೀವನದ ಬಗ್ಗೆ ತಮ್ಮಲ್ಲಿರುವ ದೃಷ್ಟಿಕೋನವನ್ನು
ಇನ್ನಷ್ಟು ವಿಸ್ತರಿಸಬೇಕು.
ಸಾಂಸ್ಕೃತಿಕ ಮೂಲ ಮತ್ತು ಮೌಲ್ಯಯುತ ವ್ಯವಸ್ಥೆಯನ್ನು ಒಳಹೊಕ್ಕು ನೋಡಬೇಕು.
ಇದರಿಂದ ಜವಾಬ್ದಾರಿಯ ಅರಿವು,
ನಾಯಕತ್ವ, ಮಾತ್ರವಲ್ಲ
ವಿಶಾಲ ದೃಷ್ಟಿಕೋನ, ಶಾಂತಿ
ಲಭಿಸುತ್ತದೆ. ಇದು ಅಧ್ಯಾತ್ಮದ
ತಿರುಳು.
ಟಿಎಸ್‌ಐ
ತಮ್ಮನ್ನೂ ಇತರರಂತೆಯೇ ಕಾಣುವ ತವಕ
ಬಹುತೇಕ ಒಡೆದ ಕುಟುಂಬಗಳ ಮತ್ತು ಕಲಿಕೆಯಲ್ಲಿ
ಹಿಂದಿರುವ ಮಕ್ಕಳು ಒತ್ತಡಕ್ಕೆ ಎರವಾಗುತ್ತಾರೆ
ಆರತಿ
ಚೆಟ್ಟಿನಾಡ್ ವಿದ್ಯಾಶ್ರಮ,
ಚೆನ್ನೈ
ಪ್ರತಿಯೊಬ್ಬರೂ ಸಮೂಹದೊಳಗೆ ಗುರುತಿಸಿಕೊಳ್ಳ ಬಯಸುತ್ತಾರೆ.
ಅದಾಗಲೇ ಜಾರಿಯಲ್ಲಿರುವ ಗುಂಪಿನ ಭಾಗವಾಗುವ ಆಸೆ ಎಲ್ಲರಲ್ಲೂ
ಮೂಡುವುದು ಸಹಜ. ಯುವ
ಮನಸ್ಸುಗಳಲ್ಲಿ ಈ ಆಕಾಂಕ್ಷೆ ಸ್ವಲ್ಪ ತೀವ್ರ ಸ್ವರೂಪದ್ದೇ ಆಗಿರುತ್ತದೆ.
ಅವರು ತಮ್ಮ ಹದಿಹರೆಯವನ್ನೆಲ್ಲಾ ಈ ಪ್ರಯತ್ನದಲ್ಲೇ ಕಳೆದು
ಬಿಡುತ್ತಾರೆ. ಇಂದು ಜಾಗತಿಕವಾಗಿ
ಹದಿಹರೆಯದವರು ತೀವ್ರ ಒತ್ತಡದಲ್ಲಿ ಸಿಲುಕಿದ್ದಾರೆ.
ತಮ್ಮ ಆಪ್ತ ಸ್ನೇಹಿತರು ಕಟ್ಟಿರುವಂತಹ ವಾಚ್ ಬೇಕು ಎನ್ನುವ
ಒತ್ತಡದಿಂದ ಆರಂಭವಾಗಿ,
ಮತ್ತೊಂದು ಗ್ಲಾಸ್ ಬೀರ್ ಕುಡಿಯೋದು ಅಥವಾ ಮತ್ತೊಂದು ಸುತ್ತು ಮಾದಕದ್ರವ್ಯ
ಸೇವನೆಯವರೆಗೂ ಈ ಒತ್ತಡ ಸಾಗುತ್ತದೆ.
ಇದೆಲ್ಲಾ ಸಮೂಹದೊಳಗೆ ಸೇರುವ ತವಕದ ಪ್ರಭಾವ.
ಇತರರು ತಮ್ಮನ್ನೂ ಅವರಂತೆಯೇ ಕಾಣಬೇಕೆಂಬ ಆಕಾಂಕ್ಷೆಯ ಪರಿಣಾಮ.
ಈ ಆಸೆಗೆ ನೀರೆರೆಯುವ ಇಂದು ಯುವಜನರು ಒಟ್ಟಾರೆ ಗೊಂದಲದ
ಗೂಡಾಗಿದ್ದಾರೆ. ಕೊನೆಗೆ ಇಲ್ಲೂ
ಸಲ್ಲದೆ ಅಲ್ಲೂ ಸಲ್ಲದವರಾಗುತ್ತಾರೆ.
ನಮ್ಮದು ಭ್ರಮಾಲೋಕ ಎಂದೇ ಹೇಳಬಹುದು.
ಆದರೆ ನಾವು ಜಾಗತಿಕವಾಗಿ ಕಠಿಣ ಹಾದಿಯಲ್ಲಿ
ಮುನ್ನುಗ್ಗುತ್ತಿದ್ದೇವೆ ಎನ್ನುವುದೂ ನಿಜ.
ಇತರರು ನಮ್ಮ ಜೀವನದ ಬಗ್ಗೆ ಟೀಕಿಸಲು ಮತ್ತು ಅಭಿಪ್ರಾಯ ಹೇಳಲು
ಅವಕಾಶ ಕೊಡುತ್ತಿದ್ದೇವೆ. ಆದರೆ
ನಾವು ಇತರರು ಏನು ಹೇಳುತ್ತಾರೆ ಮತ್ತು ಯೋಚಿಸುತ್ತಾರೆ ಎಂದುಕೊಂಡು ನಿರ್ಧಾರ
ಕೈಗೊಳ್ಳುವುದಿಲ್ಲ, ನಮ್ಮ
ಸಂಪೂರ್ಣ ಜೀವನವನ್ನೇ ಅವರ ಕೈಗೊಪ್ಪಿಸಿ ಬಿಡುತ್ತೇವೆ.
ನಮ್ಮ ಚಿಂತನೆ ಮತ್ತು ಕಾರ್ಯವೈಖರಿಗಳನ್ನು ನಿಯಂತ್ರಿಸುವ
ಅಧಿಕಾರವನ್ನು ಅವರಿಗೆ ಒಪ್ಪಿಸುತ್ತೇವೆ.
ಪ್ರತಿ ಯುವಕರೂ ಈ ಒತ್ತಡವನ್ನು ಸಹಿಸುವ ಸಾಮರ್ಥ್ಯ ಪಡೆದಿಲ್ಲ.
ಆತ್ಮವಿಶ್ವಾಸ ಕಡಿಮೆ ಇರುವ ಮಕ್ಕಳು ಈ ಒತ್ತಡಗಳ ಬಲಿಪಶುವಾಗಿ
ಬಿಡುತ್ತಾರೆ. ಬಹುತೇಕ ಒಡೆದ
ಕುಟುಂಬಗಳ ಮತ್ತು ಕಲಿಕೆಯಲ್ಲಿ ಹಿಂದಿರುವ ಮಕ್ಕಳು ಈ ಒತ್ತಡಕ್ಕೆ
ಎರವಾಗುತ್ತಾರೆ. ಹದಿಹರೆಯದ
ಬದುಕೆಂದರೆ ಏನು ಎಂಬುದನ್ನು ಹಿರಿಯರು ಎಂದಾದರೂ ಅರ್ಥೈಸಿಕೊಂಡಿದ್ದಾರೆಯೆ?
ಆ ವಯಸ್ಸಿನ ಭಾವನೆಗಳು ಮತ್ತು ಚಿಂತನೆಗಳನ್ನು
ತಿಳಿದುಕೊಂಡಿದ್ದಾರೆಯೆ? ಈ
ವ್ಯಾಪಕ ಒತ್ತಡಗಳಿಗೆ ಮಕ್ಕಳು ಬಲಿಬೀಳಲು ಹೆತ್ತವರೂ ಜವಾಬ್ದಾರರು
ಎನ್ನಬಹುದು. ತಮ್ಮ ಮಕ್ಕಳು
ಅದಾಗಲೇ ಒತ್ತಡದಿಂದ ನರಳುತ್ತಿರುವಾಗ ಅವರ ಮೇಲೆ ಬೈಗುಳದ ಮಳೆ ಸುರಿಸಿ,
ಅವರನ್ನು ಇತರ ಮಕ್ಕಳ ಜೊತೆ ಹೋಲಿಸಿ ನೋಡುವುದು ಸರಿಯಲ್ಲ.
ಒಂದು ದಿನ ಈ ಎಲ್ಲಾ ಹತಾಶೆಗಳು ಬೆಂಕಿಯಾಗಿ ಉರಿಯಲಿವೆ.
ಜೀವನದ ಈ ಹತಾಶೆ ಮಕ್ಕಳನ್ನು ಅಪಾಯಕಾರಿ ಕೃತ್ಯಗಳಿಗೆ ಕೈಹಾಕಲು
ಪ್ರೇರೇಪಿಸಬಹುದು. ಯಾವ ತಂದೆ-ತಾಯಿಯೂ
ಇಂತಹ ಸ್ಥಿತಿಯನ್ನು ತಂದುಕೊಳ್ಳಲು ಬಯಸರು ಎನ್ನುವುದು ನನ್ನ ನಂಬಿಕೆ.
ಮಕ್ಕಳು ಮತ್ತು ಹೆತ್ತವರ ನಡುವೆ ಹಾರ್ದಿಕ ಸಂಬಂಧವಿದ್ದಲ್ಲಿ ಅಧಿಕ
ಒತ್ತಡವನ್ನು ನಿಭಾಯಿಸಬಹುದು.
ಹೆತ್ತವರು ಮಕ್ಕಳ ಸ್ವತಂತ್ರ ಮನೋಭಾವವನ್ನು ಪ್ರೋತ್ಸಾಹಿಸಿ ಜೀವನದಲ್ಲಿ
ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಲು ಒತ್ತಾಯಿಸಬೇಕಿದೆ.
ಇದು ಎಂಥ ಒತ್ತಡವನ್ನಾದರೂ ನಿಭಾಯಿಸುವ ಸಾಮರ್ಥ್ಯವನ್ನು ಮಕ್ಕಳಿಗೆ
ನೀಡುತ್ತದೆ.
ಟಿಎಸ್‌ಐ
'ಸುಳ್ಳು'
ಸೃಷ್ಟಿಸುವ ಗೋಜಲುಗಳ ನಡುವೆ
ಸುಳ್ಳು ಹೇಳುವ ಮೂಲಕ ನಾವು ಪಶ್ಚಾತ್ತಾಪದ
ಭಾವನೆಯಿಂದ ಪೋಷಕರ ಮುಂದೆ ನಿಲ್ಲುವುದನ್ನು ತಪ್ಪಿಸಿಕೊಳ್ಳುತ್ತಿದ್ದೇವೆ
ಸ್ವಯಂಶ್ರೀ ಮಿಶ್ರಾ
ರಾವೆನ್‌ಶಾ ಜೂನಿಯರ್ ಕಾಲೇಜು,
ಕಟಕ್,
ಒರಿಸ್ಸಾ
ಸುಳ್ಳು ಹೇಳುವುದು !
ಆಹಾ,
ಯಾವುದೇ ವಯಸ್ಸಿನವರಿಗೂ ಇದು ಅಪರಿಚಿತ ಪದವಾಗಲು
ಸಾಧ್ಯವಿಲ್ಲ.
ಯುವಜನರಲ್ಲಿ ಸುಳ್ಳು ಹೇಳುವುದು ಸಾಮಾನ್ಯ ಹವ್ಯಾಸವಾಗಿ
ಹೋಗಿದೆ.
ಸನ್ನಿವೇಶಗಳಿಗೆ ತಕ್ಕಂತೆ ಸುಳ್ಳು ಹೇಳುವುದು
ಹದಿಹರೆಯದಲ್ಲಿ ಒಂದು ಸಾಮಾನ್ಯ ಪ್ರವೃತ್ತಿ ಎಂದು ಮನಃಶಾಸ್ತ್ರದಲ್ಲಿ
ಹೇಳಲಾಗಿದೆ.
ನಾವು ಸಾಮಾನ್ಯವಾಗಿ ಹೆತ್ತವರಲ್ಲಿ ಸುಳ್ಳು ಹೇಳುತ್ತೇವೆ.
ಸಮಸ್ಯೆ ಸೃಷ್ಟಿಸಬಲ್ಲ ಸನ್ನಿವೇಶಗಳಿಂದ
ನುಣುಚಿಕೊಳ್ಳುವುದಕ್ಕೆ,
ಸತ್ಯ ಮುಚ್ಚಿಡಲು,
ಹೆತ್ತವರನ್ನು ಮೆಚ್ಚಿಸಲು ಅಥವಾ ಹವ್ಯಾಸವಾಗಿ
ಬದಲಾದ ಪರಿಣಾಮ ನಾವೆಲ್ಲಾ ಸುಳ್ಳು ಹೇಳುತ್ತೇವೆ.
ಆದರೆ ನಾವು ನಮ್ಮ ಹೆತ್ತವರಿಗೆ ಎಷ್ಟು ಆಪ್ತವಾಗಿದ್ದರೂ ಎಲ್ಲಾ
ವಿಷಯಗಳನ್ನೂ ಅವರ ಮುಂದೆ ಬಿಚ್ಚಿಡುವುದು ಸಾಧ್ಯವಿಲ್ಲದ ಮಾತು.
ಪರಸ್ಪರ ಭಿನ್ನ ಚಿಂತನೆಯಿಂದ ಹೀಗಾಗಿರಬಹುದು.
ಹಲವಾರು ಬಾರಿ ಕೆಲ ವಿಷಯಗಳ ಬಗ್ಗೆ ಸುಮ್ಮನೆ ಚರ್ಚಿಸುತ್ತಾ
ಭಿನ್ನಾಭಿಪ್ರಾಯಗಳನ್ನು ಬೆಳೆಸಿಕೊಳ್ಳುತ್ತೇವೆ ಎಂದು ನನಗೆ ಅನ್ನಿಸಿದ್ದಿದೆ.
ಉದಾಹರಣೆಗೆ ನನ್ನ ಸ್ನೇಹಿತೆಯೊಬ್ಬಳು,
"ನಾನು ನನ್ನ ಸ್ನೇಹಿತರ ಜೊತೆ ತಿರುಗಾಡುತ್ತಿದ್ದೇನೆ ಎಂದು ನನ್ನ
ಅಮ್ಮನಿಗೆ ಹೇಳಿದಲ್ಲಿ ಅವರು ನನಗೆ ಉಪದೇಶ ನೀಡಲಾರಂಭಿಸುತ್ತಾರೆ.
ಒಟ್ಟಾರೆ ನನ್ನ ತಲೆ ಕೆಡುತ್ತದೆ.
ಅದಕ್ಕೆ ನಾನು ವಿಶೇಷ ತರಗತಿ ಇತ್ತು,
ಹೀಗಾಗಿ ತಡವಾಯಿತು ಎಂದುಬಿಡುತ್ತೇನೆ.
ಇದರಿಂದ ನಾನು ಆರಾಮವಾಗಿರಬಹುದು ಮತ್ತು ತಂದೆ-ತಾಯಿ
ಕೂಡ ಖುಷಿಯಾಗಿರುತ್ತಾರೆ"
ಎನ್ನುತ್ತಾಳೆ. ಇಲ್ಲಿ ನಾವು
ಗಮನಿಸಬೇಕಾದ ಮುಖ್ಯ ಅಂಶವೆಂದರೆ,
ನಾವು ನಮ್ಮ ಪರಿಸ್ಥಿತಿ ಕುರಿತ ಸ್ಪಷ್ಟ ಚಿತ್ರಣವನ್ನು ಹೆತ್ತವರ ಮುಂದೆ
ಇಡುವುದು ಸಾಧ್ಯವಿಲ್ಲ. ನನ್ನ
ಗೆಳತಿಯ ಹೇಳಿಕೆ ಬಹಳಷ್ಟು ಹದಿಹರೆಯದವರ ಭಾವನೆಗಳ ಪ್ರತೀಕ ಎನ್ನಬಹುದು.
ಈ ವಯಸ್ಸಿನಲ್ಲಿ ನಾವೇನು ಮಾಡುತ್ತೇವೆಯೋ ಅದು ಸಹಜ ಮತ್ತು ಸರಿ ಎಂಬ
ಭಾವನೆಯಿಂದ ನಾವು ಹೆತ್ತವರ ಮುಂದೆ ಸುಳ್ಳು ಹೇಳುತ್ತೇವೆ.
ಆ ಮೂಲಕ ನಾವು ನೈತಿಕ ಉಪದೇಶಗಳನ್ನು ಮತ್ತು ಪಶ್ಚಾತ್ತಾಪದ
ಭಾವನೆಯಿಂದ ಅವರ ಮುಂದೆ ನಿಲ್ಲುವುದನ್ನು ತಪ್ಪಿಸಿಕೊಳ್ಳುತ್ತಿದ್ದೇವೆ.
ಹೆತ್ತವರು ಮಕ್ಕಳ ಜೊತೆ ಮುಕ್ತವಾಗಿ ವ್ಯವಹರಿಸಬೇಕು.
ಈ ನಿಟ್ಟಿನಲ್ಲಿ ಹೆತ್ತವರು ಮತ್ತು ಮಕ್ಕಳು ಇಬ್ಬರೂ
ಪ್ರಯತ್ನಿಸಬೇಕಿದೆ. ಹೆತ್ತವರ
ಜೊತೆ ಎಲ್ಲವನ್ನೂ ಹಂಚಿಕೊಳ್ಳುವ ಧೈರ್ಯ ಮಕ್ಕಳಲ್ಲಿ ಮೂಡಬೇಕು.
ಪ್ರತಿ ಮಗುವಿನ ಜೀವನದಲ್ಲೂ ಹದಿಹರೆಯ ಒಂದು ನಾಜೂಕಾದ ಕಾಲಘಟ್ಟ,
ಜಾಗರೂಕವಾಗಿ ನಿಭಾಯಿಸಿದಲ್ಲಿ ಮಾತ್ರ ಸಕಾರಾತ್ಮಕ ಫಲಿತಾಂಶಗಳನ್ನು
ಎದುರು ನೋಡಬಹುದು ಎನ್ನುವುದನ್ನು ಅವರು ಅರಿತುಕೊಳ್ಳಬೇಕು.
ಮಕ್ಕಳಿಗೆ ಸ್ವಾತಂತ್ರ್ಯ ನೀಡಬೇಕು.
ಹಾಗೆಯೇ ಅವರು ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಳ್ಳುವ ಮತ್ತು
ಸುಳ್ಳು ಹೇಳದಂತಹ ಸಂಬಂಧವನ್ನು ಹೆತ್ತವರು ಅವರ ಜೊತೆ ಬೆಳೆಸಿಕೊಳ್ಳಬೇಕು.
ಮಕ್ಕಳೂ ಸಹ, ಸುಳ್ಳನ್ನು
ನಿಜ ಮಾಡಲು ಸಾವಿರ ಸುಳ್ಳುಗಳನ್ನು ಪೋಣಿಸಬೇಕಾಗುತ್ತದೆ,
ಇಷ್ಟೆಲ್ಲಾ ಆದ ಮೇಲೂ ನಾವೇ ಸಮಸ್ಯೆಯ ಕೂಪದಲ್ಲಿ
ಸಿಲುಕಿಕೊಳ್ಳುವುದು ಎಂಬುದನ್ನು ಮನಗಾಣಬೇಕು.
ಟಿಎಸ್‌ಐ
ಸಂಪತ್ತಿಗಿಂತ ಕುಟುಂಬವೇ ಮಿಗಿಲು
ಸ್ವಪ್ನಿಲ್ ಶೇಕ್ಡೆ
ಕನಕವಲ್ಲಿ ಕಾಲೇಜ್,
ಸಿಂಧುದುರ್ಗ್,
ಮಹಾರಾಷ್ಟ್ರ
ಈ ಕಾಲದಲ್ಲಿ ದುಡ್ಡೇ ದೊಡ್ಡಪ್ಪ.
ಇಂದಿನ ಕೈಗಾರಿಕೀಕರಣ ಮತ್ತು ತಂತ್ರಜ್ಞಾನ ಯುಗದಲ್ಲಿ
ಪ್ರತಿಯೊಬ್ಬರಿಗೂ ಹಣವೇ ಮುಖ್ಯವಾಗಿದೆ.
ಯಾರಾದರೂ ನನಗೆ ಜೀವನದಲ್ಲಿ ಹಣ ಮುಖ್ಯವೇ ಅಲ್ಲ ಎಂದು ಹೇಳಿದರೆ
ಅದಕ್ಕಿಂತ ದೊಡ್ಡ ಸುಳ್ಳು ಮತ್ತೊಂದಿಲ್ಲ.
ಆದರೆ ಒಬ್ಬ ಭಾರತೀಯನಾಗಿ ಹಣ ಮತ್ತು ಕುಟುಂಬದ ನಡುವೆ ಒಂದನ್ನು
ಆರಿಸಿಕೊಳ್ಳುವಂತೆ ಹೇಳಿದರೆ ನಮ್ಮಲ್ಲಿ ಬಹುತೇಕರು ನಿಸ್ಸಂಶಯವಾಗಿ ಕುಟುಂಬ
(ನಮ್ಮ ಭಾವನಾತ್ಮಕ ಸಂಬಂಧಗಳು,
ಕೌಟುಂಬಿಕ ಪ್ರೇಮದಿಂದಾಗಿ)ವನ್ನೇ
ಆರಿಸಿಕೊಳ್ಳುತ್ತೇವೆ. ಈ
ಮಾತಿನಲ್ಲಿ ಖಂಡಿತಾ ಯಾವುದೇ ಉತ್ಪ್ರೇಕ್ಷೆಯಿಲ್ಲ.
ಹಾಗಿದ್ದರೂ ನಮ್ಮ ಜೀವನದಲ್ಲಿ ಹಣ ಮತ್ತು ಕುಟುಂಬ ಎರಡೂ ಮುಖ್ಯ ಪಾತ್ರ
ವಹಿಸಿವೆ. ಆದರೆ ಅವುಗಳ
ಪ್ರಾಮುಖ್ಯ ಪರಸ್ಪರ ತಳಕು ಹಾಕಿಕೊಂಡಿವೆ.
ಉದಾಹರಣೆಗೆ ನನ್ನ ಬಳಿ ಸಾಕಷ್ಟು ಹಣವಿದ್ದು ಕುಟುಂಬವಿಲ್ಲದೇ
ಇದ್ದಲ್ಲಿ ಆ ಹಣದಿಂದ ಏನೂ ಪ್ರಯೋಜನವಿಲ್ಲ.
ನನ್ನಲ್ಲಿರುವ ಹಣವನ್ನು ನನ್ನ ಪ್ರೀತಿಪಾತ್ರರಿಗಾಗಿ ವಿನಿಯೋಗಿಸಿ
ತೃಪ್ತಿಪಡುವ ಹಾಗಿಲ್ಲ. ಆದರೆ
ನನ್ನ ಪ್ರಗತಿಯನ್ನು ಬೆಂಬಲಿಸುವ ಮತ್ತು ಪ್ರೋತ್ಸಾಹಿಸುವ ಕುಟುಂಬ
ಜೊತೆಗಿದ್ದಲ್ಲಿ ಪರಮಸುಖಿಯಾಗಿರಬಹುದು.
ಇಂತಹ ಸಂದರ್ಭದಲ್ಲಿ ಹಣವಿಲ್ಲದೆಯೂ ಜೀವನ ನಡೆಸಬಹುದು.
ನನ್ನಲ್ಲಿ ಹಣ ಮತ್ತು ಕುಟುಂಬ ಎರಡೂ ಇದ್ದಲ್ಲಿ ನಾನು ಆ
ಸಮೃದ್ಧಿಯನ್ನು ಪ್ರೀತಿ-ಪಾತ್ರರ
ಮೇಲೆ ಸುರಿಸಿ ಖುಷಿ ಪಡಬಹುದು.
ಹಾಗೆಯೇ ನನ್ನ ಕುಟುಂಬದ ಬೆಂಬಲ ಮತ್ತು ಪ್ರೋತ್ಸಾಹವನ್ನೂ ಪಡೆದುಕೊಳ್ಳಬಹುದು.
ಒಂದು ಸಲ ಹಣವನ್ನು ಕಳೆದುಕೊಂಡರೆ ಏನಾದರೂ ಮಾಡಿ ಮತ್ತೆ
ಪಡೆದುಕೊಳ್ಳಬಹುದು. ಆದರೆ
ಕಳೆದುಕೊಂಡ ಕುಟುಂಬವನ್ನು ಮತ್ತೆ ಪಡೆಯುವುದು ಅಸಾಧ್ಯದ ಮಾತಾದೀತು.
ಹಾಗಾಗಿ ನನಗೆ ಕುಟುಂಬ ಅತೀ ಮುಖ್ಯ ಮತ್ತು ಹಣಕ್ಕಿಂತ
ಬೆಲೆಬಾಳುವಂತಹುದು.
ಟಿಎಸ್‌ಐ
ಬದಲಾಗಬೇಕಿರುವ ದೃಷ್ಟಿಕೋನ
ಶಾರ್ಮಿನ್ ಶಜಾರ್
ಕಾರ್ಮೆಲ್ ಕಾನ್ವೆಂಟ್ ಶಾಲೆ,
ರೂರ್ಕೆಲಾ
ಕಾಲಕ್ಕೆ ತಕ್ಕಂತೆ ಕುಣಿ ಎಂಬ ಮಾತಿದೆ.
ಇಂದು ಹಣ ಗಳಿಸುವ ಗುರಿಯನ್ನೇ ಇಟ್ಟುಕೊಂಡು ಸಮಾಜದ ಎಲ್ಲಾ
ಚಟುವಟಿಕೆಗಳೂ ನಡೆಯುತ್ತವೆ.
ಆದರೆ ವೈಯಕ್ತಿಕ ಮತ್ತು ಕುಟುಂಬಗಳ ನಡುವಿನ ಅನುಬಂಧ ಮಾತ್ರ ಇಂದಿಗೂ
ಬಲಿಷ್ಠವಾಗಿದೆ. ಕುಟುಂಬವಿಲ್ಲದ
ಜೀವನ ದುರಂತಗಾಥೆ, ಅದು
ಪರಿಪೂರ್ಣವೆನಿಸದು. ಕುಟುಂಬವು
ನಮಗೆ ಅದಮ್ಯ ಪ್ರೇಮ ನೀಡುತ್ತದೆ.
ಹಣದಿಂದ ಬೆಲೆಬಾಳುವ ಮಂಚ ಖರೀದಿಸಬಹುದು ಆದರೆ ನಿದ್ದೆಯನ್ನಲ್ಲ.
ಒಬ್ಬ ಉನ್ನತ ಶಿಕ್ಷಣ ಪಡೆದ ಬುದ್ಧಿವಂತನಿಗೆ ಹಣ ಸಂಪಾದಿಸುವುದು
ಒಂದು ಮಹತ್ವದ ದೈಹಿಕ ಪ್ರಕ್ರಿಯೆಯಾಗಿರುತ್ತದೆ.
ಆತನ ಮುಖ್ಯ ಉದ್ದೇಶ ಜೀವನೋಪಾಯಕ್ಕೆ ಏನಾದರೂ ವ್ಯವಸ್ಥೆ
ಕಲ್ಪಿಸಿಕೊಳ್ಳುವುದು. ಹೀಗೆ
ಹಣದಿಂದ ತಕ್ಷಣದ ಸಂತೋಷವನ್ನು ಪಡೆದುಕೊಳ್ಳಬಹುದು.
ಆದರೆ ಇದು ಶಾಶ್ವತವೇ?
ಹಣ ಗಳಿಸುವ ಭರದಲ್ಲಿ ನಾವು ನಮ್ಮನ್ನೇ ಮರೆಯುವ ಹಂತ ತಲುಪಿಬಿಡುತ್ತೇವೆ.
ಇದು ಒಬ್ಬನ ಜೀವನದಲ್ಲಿ ಘಟಿಸಬಹುದಾದ ಬಹುದೊಡ್ಡ ದುರಂತ.
ಮಾಧ್ಯಮಗಳು ಹಿರಿಯ ನಾಗರಿಕರು ಮತ್ತು ಹದಿಹರೆಯದವರ ವರ್ಚಸ್ಸನ್ನು
ಮರುಕಳಿಸುವ ಪ್ರಯತ್ನಗಳನ್ನು ನಡೆಸಬೇಕಿದೆ.
ಹದಿಹರೆಯದವರನ್ನು ಮಾಧ್ಯಮಗಳು ಕಠಿಣ ಹಾಗೂ ಕೆಲಸಕ್ಕೆ ಬಾರದವರು
ಎಂಬಂತೆ ಚಿತ್ರಿಸುವುದು ಬದಲಾಗಬೇಕಿದೆ.
ಸಮೂಹ ಮಾಧ್ಯಮಗಳು ಪ್ರೇಕ್ಷಕರ ಮೇಲೆ ಎಂದೂ ಬದಲಿಸಲಾಗದ ಪರಿಣಾಮ
ಬೀರುತ್ತವೆ. ಹೀಗಾಗಿ ಅವು ತಮ್ಮ
ಹೊಣೆಯರಿತು ಮುಂದುವರಿಯಬೇಕು.
ಆದರೆ ಇದು ಎರಡೂ ತಲೆಮಾರಿನವರು ಮಾಧ್ಯಮಗಳಿಂದ ಎಷ್ಟರ ಮಟ್ಟಿಗೆ ಪ್ರಭಾವಕ್ಕೆ
ಒಳಗಾಗುತ್ತಾರೆ ಎನ್ನುವುದನ್ನೂ ಆಧರಿಸಿದೆ.
ಎರಡೂ ವ್ಯವಸ್ಥೆಗಳನ್ನು ಚೆನ್ನಾಗಿ ವಿಶ್ಲೇಷಿಸಿದ ಬಳಿಕ ತಾವು ಯಾವ
ಕಡೆಗೆ ವಾಲಬೇಕು ಎನ್ನುವ ತೀರ್ಮಾನ ಕೈಗೊಳ್ಳುವ ಆಯ್ಕೆಯನ್ನು ಹೊಸ
ತಲೆಮಾರಿಗೇ ನೀಡಬೇಕು.
ಟಿಎಸ್‌ಐ
ಪ್ರೇಮದ ಅಮಲಿನಲ್ಲಿ ಜೀವನ ಮರೆಯಬಾರದು
ಸುರ್ಜಯನ್ ಘೋಷ್
ಸೌತ್ ಪಾಯಿಂಟ್ ಹೈಸ್ಕೂಲ್,
ಕೋಲ್ಕತ್ತಾ
ಯಾವುದೇ ನೋವನ್ನು ಹೀರಿಕೊಳ್ಳುವ ಶಕ್ತಿ ಪ್ರೇಮಕ್ಕಿದೆ.
ನಾವು ಪ್ರೇಮದಲ್ಲಿ ಸಿಲುಕಿದ್ದೇವೆಯೇ ಅಥವಾ ಇಲ್ಲವೇ ಎಂದು
ಅರಿಯುವುದು ಹೇಗೆ? ಹಾಗೆಯೇ
ವಿರುದ್ಧ ಲಿಂಗದವರ ಜೊತೆಗೇ ಏಕೆ ಪ್ರೀತಿಯಲ್ಲಿ ಸಿಲುಕಬೇಕು?
ನಾನು ಒಬ್ಬ ವಿಶಿಷ್ಟ ವ್ಯಕ್ತಿಯ ಮೇಲೆ ನಮ್ಮ ಹೃದಯದಲ್ಲಿ ಬೆಳೆಯುವ
ಆರಾಧನೆ ಬಗ್ಗೆ ಮಾತನಾಡುತ್ತಿದ್ದೇನೆ.
ಹಾಗೆಯೇ ನಮ್ಮ ತಂದೆ-
ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸಬೇಕು ಎಂಬ ತುಡಿತವನ್ನು ಮನದಲ್ಲಿ
ಉದ್ದೀಪನಗೊಳಿಸುವ ಆ ವಿಶೇಷ ವ್ಯಕ್ತಿಯ ಬಗ್ಗೆ.
ನಮ್ಮ ಹೆತ್ತವರು ನಮ್ಮನ್ನು ಒಳ್ಳೇ ಹಾದಿಯಲ್ಲಿ ಮುನ್ನಡೆಯಲು
ಪ್ರೋತ್ಸಾಹಿಸುತ್ತಲೇ ಇರುತ್ತಾರೆ.
ನಮ್ಮ ಬಗ್ಗೆ ದುರಾಲೋಚನೆ ಎಂದಿಗೂ ಮಾಡರು.
ಆದರೆ ಅಕಸ್ಮಾತ್ತಾಗಿ ನಾವು ನಾಲ್ಕು-
ಐದು ತಿಂಗಳಿಗಿಂತ ಹೆಚ್ಚು ಪರಿಚಿತರಲ್ಲದ ವ್ಯಕ್ತಿಯ ಕಡೆಗೆ ಸಲಹೆ-
ಸೂಚನೆಗಳಿಗಾಗಿ ವಾಲುವುದೇಕೆ?
ಆ ವಿಶಿಷ್ಟ ವ್ಯಕ್ತಿ ಶಾಶ್ವತವಾಗಿ ನಮ್ಮೊಂದಿಗೆ ಇರುತ್ತಾರೆ
ಎನ್ನುವ ವಿಷಯದಲ್ಲೂ ನಮಗೆ ಖಚಿತತೆ ಇರುವುದಿಲ್ಲ.
ಹಾಗಾಗಿ ಹದಿಹರೆಯದ ಪ್ರೇಮ ಒಂದು ರೀತಿಯ ಉದ್ದೀಪನ ಮಾತ್ರ.
ಈ ಹದಿಹರೆಯದಲ್ಲೇ ಮಕ್ಕಳು ತಮ್ಮ ಕೈಗೆ ಸಿಗದ ಹಿರಿಯರ ಜಗತ್ತಿಗೆ
ಇಣುಕಿ ಹಾಕುವ ಕಾತುರತೆ ಪ್ರದರ್ಶಿಸುವುದು.
ಆದರೆ ಪ್ರೀತಿಯ ಮತ್ತೊಂದು ಮುಖ ಹೊಣೆಗಾರಿಕೆ ಎನ್ನುವುದನ್ನು
ಸಾಮಾನ್ಯವಾಗಿ ಯುವಜನರು ಮರೆತುಬಿಡುತ್ತಾರೆ.
ಇದೇ ಸಂದರ್ಭದಲ್ಲಿ ಹದಿಹರೆಯದ ಪ್ರೇಮ ಜೀವನದ ಅಭ್ಯುದಯದ ಹಾದಿಯಾದದ್ದೂ
ಇದೆ. ತಮ್ಮ ವಿಭಿನ್ನ
ಕ್ಷೇತ್ರಗಳಲ್ಲಿ ಪರಸ್ಪರ ಸಂತೋಷಗಳನ್ನು ಹಂಚಿಕೊಳ್ಳಬಹುದು.
ನಮ್ಮ ಬಗ್ಗೆ ಅಕ್ಕರೆ ತೋರಿಸುವ ಮತ್ತು ನಮ್ಮ ಜೀವನದ ಕಷ್ಟ-ಸುಖಗಳಲ್ಲಿ
ಭಾಗಿಯಾಗುವ ವ್ಯಕ್ತಿಯೊಬ್ಬರಿದ್ದಾರೆ ಎನ್ನುವ ಭಾವನೆಯೇ ಅತ್ಯುತ್ತಮ.
"ಪ್ರೇಮದ ಬಲದಿಂದ ಎಲ್ಲಾ ಯುದ್ಧಗಳನ್ನೂ
ಗೆಲ್ಲಬಹುದು"
ಎನ್ನುವುದನ್ನು ಒಪ್ಪಿಕೊಳ್ಳಬಹುದು.
ಆದರೆ ಪ್ರೀತಿಯೇ ಜೀವನವಲ್ಲ.
ಪ್ರೀತಿ ಜೀವನದ ಒಂದು ಭಾಗ.
ಆದರೆ ಜೀವನ ಪ್ರೀತಿಯ ಒಂದು ಭಾಗವಲ್ಲ.
ಟಿಎಸ್‌ಐ |