|
ಸೇನೆಯಲ್ಲಿ ಕಾರ್ಯ ನಿರ್ವಹಿಸುವ ತವಕ ನಿಮಗಿದೆಯೇ?
ಅ ಚ್ಚರಿ! ಅಚ್ಚರಿ! ಒಟ್ಟಾರೆಯಾಗಿ ಶೇ. 42ರಷ್ಟು ಭಾರತೀಯ ಯುವಜನರು ಸೇನೆ ಸೇರಲು ಆಸಕ್ತಿ ಪ್ರಕಟಿಸಿದ್ದಾರೆ. ಆದರೆ ಸೇನಾಧಿಕಾರಿಗಳನ್ನು ಕೇಳಿದರೆ? ಕಡಿಮೆ ವೇತನ ಮತ್ತು ಉದ್ಯೋಗ 'ಸ್ಥಿತಿ'ಯ ಕಾರಣ ನೀಡಿ ವೃತ್ತಿ ತೊರೆಯುವ ಮಾತಾಡುತ್ತಾರೆ! ಬಹುಶಃ ಹೆಚ್ಚಿನ ಹದಿಹರೆಯವರಿಗೆ ದೇಶಭಕ್ತಿ ಮತ್ತು ಹೋರಾಟದ ಕುರಿತು ವಿಶೇಷ ಕಲ್ಪನೆಗಳಿರುವುದೇ ಇದಕ್ಕೆ ಕಾರಣ. ಆದರೆ ಮಹಾನಗರ ಮತ್ತು ಸಣ್ಣ ನಗರಗಳ ಯುವಜನತೆಯ ನಡುವೆ ಅಭಿಪ್ರಾಯ ವ್ಯತ್ಯಾಸವಿದೆ. ಮಹಾನಗರದ ಶೇ. 40ಕ್ಕೂ ಕಡಿಮೆ ಮಂದಿ ಸೇನೆಯಲ್ಲಿ ಕಾರ್ಯನಿರ್ವಹಿಸ ಬಯಸಿದರೆ, ಸಣ್ಣ ನಗರದ ಶೇ. 45ಕ್ಕೂ ಹೆಚ್ಚು ಮಂದಿ ಸೇನೆ ಪ್ರವೇಶಿಸಲು ಬಯಸುತ್ತಾರೆ.
ಭಾರತ- ಪಾಕಿಸ್ತಾನ ಸಂಬಂಧ ಸುಧಾರಿಸಬಹುದೆ?
ಇ ಲ್ಲಿ ಆಶ್ಚರ್ಯ ಎಂದರೆ ಮಹಾನಗರ ಮತ್ತು ಸಣ್ಣ ನಗರ ಎಂಬ ಪ್ರಾದೇಶಿಕ ಭೇದವಿಲ್ಲದೆ ಹದಿಹರೆಯದವರ ಅಭಿಪ್ರಾಯಗಳು ಒಂದೇ ತೆರನಾಗಿವೆ. ಭಾರತದಾದ್ಯಂತ ಶೇ. ೬೧ಕ್ಕೂ ಹೆಚ್ಚು ಮಂದಿ ಪಾಕಿಸ್ತಾನದೊಂದಿಗಿನ ಸಂಬಂಧ ವೃದ್ಧಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾರ್ಗಿಲ್ ಕದನ ಮತ್ತು ಸಂಸತ್ತಿನ ಮೇಲೆ ದಾಳಿ ಘಟನೆ ನಂತರ ಭಾರತ-ಪಾಕಿಸ್ತಾನ ನಡುವಿನ ಸಂಬಂಧ ಇನ್ನಷ್ಟು ವಿಷಮವಾಗುತ್ತಿದ್ದ ಸಂದರ್ಭದಲ್ಲಾದರೆ ಇದು ಬಹುದೂರದ ಮಾತಾಗಿತ್ತು. ಇಂದಿನ ಯುವ ಪೀಳಿಗೆ ದೇಶ ವಿಭಜನೆ ಸಂದರ್ಭದ ಸಂಘರ್ಷ ಅಥವಾ ಕಾಶ್ಮೀರಕ್ಕಾಗಿ ನಡೆದ ಯುದ್ಧದ ತೀವ್ರತೆಯ ಕುರಿತು ತಲೆ ಕೆಡಿಸಿಕೊಂಡಿಲ್ಲ. ಅವರಿಗೆ ಏನಿದ್ದರೂ ಪಾಕ್‌ನೊಂದಿಗೆ ಉತ್ತಮ ಸಂಬಂಧ ಎಂದಾಕ್ಷಣ ಕೇವಲ ಗಡಿ ಭಯೋತ್ಪಾದನೆಯಷ್ಟೇ ಯೋಚನೆಗೆ ಬರುತ್ತದೆ. ಯುವ ಜನರು ಈ ಕುರಿತಂತೆ ಏನಾದರೂ ಸಕಾರಾತ್ಮಕ ಬದಲಾವಣೆ ಆಗಬಹುದು ಎಂಬ ನಿರೀಕ್ಷೆಯಲ್ಲೇ ಇದ್ದಾರೆ.
ಭಾರತದ ಭವಿಷ್ಯಕ್ಕೆ ಅತ್ಯಂತ ದೊಡ್ಡ ಬೆದರಿಕೆ ಯಾವುದು?
ಈ
ವಿಷಯದ ಕುರಿತು ಪ್ರದೇಶದಿಂದ ಪ್ರದೇಶಕ್ಕೆ ಅಭಿಪ್ರಾಯಭೇದವಿದೆ. ಆದರೆ ಒಟ್ಟಾರೆಯಾಗಿ ಭಯೋತ್ಪಾದನೆ ದೇಶದ ಅಭಿವೃದ್ಧಿಗೆ ಮುಖ್ಯ ಬೆದರಿಕೆಯಾಗಿದ್ದು, ಭ್ರಷ್ಟಾಚಾರ ಮತ್ತು ನಿರುದ್ಯೋಗ ಸಮಸ್ಯೆ ನಂತರದ ಸ್ಥಾನದಲ್ಲಿದೆ. ಭಾರತದ ಪಶ್ಚಿಮ ಭಾಗದ ಶೇ. 70ರಷ್ಟು ಯುವಜನರು ಭಯೋತ್ಪಾದನೆಯೇ ಬಹುದೊಡ್ಡ ಬೆದರಿಕೆ ಎಂದಿರುವುದು ಈ ಫಲಿತಾಂಶ ಬರಲು ಪ್ರಮುಖ ಕಾರಣ. ಮುಂಬೈ ಮತ್ತು ಗುಜರಾತ್ ಬಾಂಬ್ ಸ್ಫೋಟಗಳು ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿವೆ. ಆದರೆ ಇಲ್ಲಿ ಒಂದು ವೈರುಧ್ಯ ಎಂದರೆ ಕರ್ನಾಟಕ ಇಸ್ಲಾಂ ಭಯೋತ್ಪಾದನೆಯ ಮುಖ್ಯ ತಾಣವಾಗಿ ಮಾರ್ಪಡುತ್ತಿದ್ದರೂ ದಕ್ಷಿಣ ಭಾರತದ ಶೇ. 20ರಷ್ಟು ಮಂದಿ ಭಯೋತ್ಪಾದನೆ ಅಂತಹ ಸಮಸ್ಯೆ ಎಂದು ಪರಿಗಣಿಸಿಲ್ಲ. ದಕ್ಷಿಣ ಭಾರತದ ಶೇ. 50ರಷ್ಟು ಮಂದಿಗೆ ಭ್ರಷ್ಟಾಚಾರವೇ ಅತ್ಯಂತ ಗಂಭೀರ ಬೆದರಿಕೆ.
ಅಮೆರಿಕ ಭಾರತಕ್ಕೆ ನೆರವು ನೀಡಲಿದೆಯೇ?
ಭಾರತ ಮತ್ತು ಅಮೆರಿಕ ಹೇಗೆ ಜಾಗತಿಕ ರಾಜತಾಂತ್ರಿಕ ಸಹಭಾಗಿಗಳಾಗುತ್ತಿವೆ ಎಂಬುದನ್ನು ಮಾಧ್ಯಮಗಳು ಪ್ರಚಾರ ಮಾಡುತ್ತಿದ್ದರೂ, ಹಾಲಿವುಡ್ ಚಿತ್ರಗಳ ಮೂಲಕ ಜನರನ್ನು ಆಕರ್ಷಿಸುತ್ತಿದ್ದರೂ ಶೇ. 45ಕ್ಕೂ ಹೆಚ್ಚಿನ ಹದಿಹರೆಯದವರು ಅಮೆರಿಕ ಭಾರತಕ್ಕೆ ನೆರವಾಗಬಲ್ಲದು ಎಂಬುದನ್ನು ಅಲ್ಲಗಳೆಯುತ್ತಾರೆ. ಶೇ. 55ರಷ್ಟು ಯುವಜನತೆ ಅಮೆರಿಕ ನೆರವು ನೀಡಲಿದೆ ಎಂದಿದ್ದರೂ ಭಾರತದಲ್ಲಿ ಅಮೆರಿಕ ವಿರೋಧಿ ಆಂದೋಲನದ ಮೂಲಕವೇ ಅಸ್ತಿತ್ವ ಕಂಡುಕೊಳ್ಳುತ್ತಿರುವ ಪ್ರಕಾಶ್ ಕಾರಟ್ ಮತ್ತು ಅವರ ಎಡಪಕ್ಷೀಯ ಬಣಕ್ಕೆ ಇದು ಖುಷಿಯ ವಿಚಾರವಾಗಬಹುದು!
ಟಿಎಸ್‌ಐ |