ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಪುಟ ಲೇಖನ : ಭವಿಷ್ಯದ ಬೆಳಕು
ನಾಳೆಗಳ ನಂಟಿನ ಹರೆಯ...
 
 

ಅವರಿಗೆ ತಮ್ಮ ಮೊಬೈಲ್ ಫೋನ್, ಎಲೆಕ್ಟ್ರಾನಿಕ್ ಸಾಮಗ್ರಿಗಳು, ಆರ್ಕುಟ್, ಫೇಸ್‌ಬುಕ್ ಆನ್‌ಲೈನ್ ಸಮುದಾಯಗಳೆಂದರೆ ಜೀವಾಳವೆಂಬಷ್ಟರಮಟ್ಟಿಗೆ ವ್ಯಾಮೋಹ. ಕಣ್ಣ ತುಂಬಾ ತುಂಬಿದ ಕನಸುಗಳಂತೆಯೇ ಮನಸ್ಸಿನ ತುಂಬಾ ಅವುಗಳದ್ದೇ ಸಂತೆ. ಎಸ್‌ಎಂಎಸ್, ಇ-ಮೇಲ್‌ಗಳ ವಿಚಿತ್ರ ಪರಿಭಾಷೆಗಳ ಮೂಲಕ ಅವರು ಭಾಷೆಯ ಸ್ವರೂಪವನ್ನೇ ಚಿತ್ರವಿಚಿತ್ರಗೊಳಿಸಿಬಿಟ್ಟಿದ್ದಾರೆ. ಅವರು ತೀರಾ ಸ್ವಾರ್ಥಿಗಳು ಮತ್ತು ಮಹತ್ವಾಕಾಂಕ್ಷೆಗಳಿಲ್ಲದೆ ತತಕ್ಷಣದ ಖುಷಿ, ಮೋಜು- ಮೇಜವಾನಿಯಲ್ಲೇ ಕಳೆದುಹೋಗಿದ್ದಾರೆ. ತಮ್ಮ ಸುತ್ತಮುತ್ತ ಏನು ನಡೀತಿದೆ ಎಂಬುದರ ಬಗ್ಗೆ ಅವರೆಂದೂ ತಲೆಕೆಡಿಸಿಕೊಳ್ಳಲಾರರು. ಪ್ರಪಂಚ ಜ್ಞಾನ ಕಡಿಮೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯೆಂದರೆ ಅವರಿಗೆ ಏನೆಂದೂ ಗೊತ್ತಿಲ್ಲದಷ್ಟು ಅಸಡ್ಡೆ. ಇವೆಲ್ಲಾ ಗುಣಗಳೂ ಒಟ್ಟು ಸೇರಿದರೆ ಅದು ಭಾರತೀಯ ನಗರವಾಸಿ ಹದಿಹರೆಯದ ಪಡೆ!

ಅಥವಾ ಅವರು ನಿಜವಾಗಿಯೂ ಹಾಗೇ ಇರುವುದಾ? ದೇಶ ಮತ್ತು ಜಗತ್ತಿನ ಪ್ರಸ್ತುತ ಪರಿಸ್ಥಿತಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಷ್ಟರಮಟ್ಟಿಗೆ ಭಾರತದ ನಗರವಾಸಿ ಹದಿಹರೆಯದವರು ತಮ್ಮದೇ ಭ್ರಮೆಯ ಲೋಕದಲ್ಲಿ ಇದ್ದಾರೆ ಎಂಬುದು ಮುಖ್ಯವಾಹಿನಿ ಮಾಧ್ಯಮದ ಪರಿಕಲ್ಪನೆ. ಅದನ್ನೇ ಅದು ತನ್ನ ಪುರವಣಿ, ವಿಶೇಷ ಸಂಚಿಕೆಗಳಲ್ಲೂ ಪದೇ- ಪದೇ ಹೇಳುತ್ತಾ ನಂಬಿಸುತ್ತಲೂ ಇದೆ. ಅದೇ ಹೊತ್ತಿಗೆ ಮುಂದಿನ ದಶಕಗಳಲ್ಲಿ ಭಾರತದ ಭವಿಷ್ಯಕ್ಕೆ ಇದೇ ಹದಿಹರೆಯದ ಪೀಳಿಗೆಯೇ ಹೊಸ ಭಾಷ್ಯ ಬರೆಯಲಿದೆ ಎಂಬ ವಿಶ್ಲೇಷಕರು, ಸಾಮಾಜಿಕ- ಆರ್ಥಿಕ ಪಂಡಿತರ ಭವಿಷ್ಯಗಳೂ ತೇಲಿಬರುತ್ತಿವೆ. ಅದೇನೇ ಇರಲಿ, ಭಾರತೀಯ ಹದಿಹರೆಯದ ಪೋರ- ಪೋರಿಯರನ್ನು ಸಾರಾಸಗಟಾಗಿ ತಳ್ಳಿಹಾಕುವುದಂತೂ ಸಾಧ್ಯವೇ ಇಲ್ಲ. ಇಂತಹ ವೈರುಧ್ಯದ ಬಗ್ಗೆ ಚಿಂತನೆ ನಡೆಸುತ್ತಿದ್ದಾಗ, ಟಿಎಸ್‌ಐ ತಂಡದ ಹಲವರು 'ನಾವೇಕೆ ಒಂದಿಡೀ ಸಂಚಿಕೆಯನ್ನು ಭಾರತೀಯ ಹದಿಹರೆಯದವರಿಗೇ ಮೀಸಲಿಡಬಾರದು?' ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಹಾಗೇ ತೂರಿಬಂದ ಪ್ರಶ್ನೆಯ ಹಿಂದೆಯೇ ಅಂತಹ ಸಂಚಿಕೆಗೆ ಹದಿಹರೆಯದವರನ್ನೇ ಅತಿಥಿ ಸಂಪಾದಕರನ್ನಾಗಿ ಮಾಡಿದರೆ ಹೇಗೆ? ಎಂಬ ಅದ್ಭುತ ಸಲಹೆಯೂ ಬಂತು.

ಪ್ರಧಾನ ಸಂಪಾದಕರು ಆ ಯೋಚನೆಗೆ ಹಸಿರು ನಿಶಾನೆ ತೋರಿಸುತ್ತಲೇ ನಮ್ಮ ಸಂಪಾದಕೀಯ ಬಳಗದಲ್ಲೂ ಮನೆಮಾಡಿದ್ದ ಸಾಕಷ್ಟು ತಪ್ಪು ಕಲ್ಪನೆಗಳನ್ನು ದೂರ ಮಾಡಿ ಹದಿಹರೆಯದವರ ಲೋಕದ ವಾಸ್ತವವನ್ನು ತೋರಿದ ಹೊಸ ಶೋಧನೆಯತ್ತ ಹೆಜ್ಜೆ ಹಾಕಿದೆವು. ನಾವು ಅಕ್ಷರಶಃ ಭಾರತದ ಮೂಲೆಮೂಲೆಯಿಂದ 23 ಮಂದಿ ಕಾಲೇಜು (ಪಿಯುಸಿ ಅಥವಾ +2 ಹಂತ)ವಿದ್ಯಾರ್ಥಿಗಳನ್ನು ದೆಹಲಿಗೆ ಆಹ್ವಾನಿಸಿದೆವು. ಅವರು ನಮ್ಮ ತಂಡದೊಂದಿಗೆ ಕೆಲವು ದಿನಗಳನ್ನು ಕಳೆಯುವುದರೊಂದಿಗೆ ಇವತ್ತಿನ ಹದಿಹರೆಯದವರ ಯೋಚನೆಗಳೇನು, ಪ್ರಸ್ತುತ ವಿವಾದಾತ್ಮಕ ವಿಷಯಗಳಿಗೆ ಅವರ ಪ್ರತಿಕ್ರಿಯೆಗಳೇನು, ನಾಳೆಯ ಕನಸುಗಳೇನು ಎಂಬುದರ ಪರಿಚಯ ಮಾಡಿಕೊಟ್ಟರು. ಟಿಎಸ್‌ಐ ಹಿರಿಯ ಸಹೋದ್ಯೋಗಿಗಳು ಮತ್ತು ಈ ಹದಿಹರೆಯದವರು ಹಾಗೂ ಅವರ ಪೋಷಕರು, ಸಂಬಂಧಿಕರ ನಡುವೆ ಅಷ್ಟೊತ್ತಿಗಾಗಲೇ ಸಾಕಷ್ಟು ದೂರವಾಣಿ ಸಂಭಾಷಣೆ, ಇ-ಮೇಲ್‌ಗಳು ವಿನಿಮಯವಾಗಿದ್ದವು. ಪ್ಲಾನ್‌ಮನ್ ಮೀಡಿಯಾ ಪ್ರಾಯೋಜಿತ ವಿಮಾನಗಳಲ್ಲಿ ಈ ಹುಡುಗ- ಹುಡುಗಿಯರೆಲ್ಲಾ ತಮ್ಮ- ತಮ್ಮ ಊರುಗಳಿಂದ ಬರುವಾಗ ಅವರೊಂದಿಗೆ ಯಾರು ಇರುತ್ತಾರೆ, ಅವರಿಗೆಲ್ಲಾ ವಾಸ್ತವ್ಯದ ವ್ಯವಸ್ಥೆ, ಅವರು ಒಬ್ಬೊಬ್ಬರೇ ಬರುವುದರಿಂದ ಸುರಕ್ಷತೆಯ ಪ್ರಶ್ನೆ ಏನು? ಹಾಗೇ ದೆಹಲಿಯ ಹವಾಮಾನ ಹೇಗಿದೆ ಎಂಬಂತಹ ಪ್ರಶ್ನೆಗಳು ಸಹಜವಾಗಿ ಕೇಳಿಬಂದವು. ಅವುಗಳಿಗೆಲ್ಲಾ ತೃಪ್ತಿಕರ ಉತ್ತರವೂ ಸಿಕ್ಕ ಮೇಲೆ ಎಲ್ಲವೂ ಸ್ಪಷ್ಟವಾಯಿತು.

ಅಂತೂ (ಕೆಳಗಿನ ಸಾಲಿನಲ್ಲಿ ಎಡದಿಂದ ಬಲಕ್ಕೆ ಅನುಕ್ರಮವಾಗಿ) ದೆಹಲಿಯ ಸಮುದ್ರ ಸಾರಂಗಿ, ರುದ್ರ ಶ್ರೀರಾಮ್, ಅಹಮದಾಬಾದ್‌ನ ವಿರಾಲ್ ವೀರೇಂದ್ರಭಾಯ್ ಶಾ, ಗುವಾಹತಿಯ ಬಿಶ್ವಜಿತ್ ದೇಕಾ, ಶ್ರೀನಗರದ ಅಕಿಬ್ ಬಶೀರ್, ಪಣಜಿಯ ಸ್ವಪ್ನಿಲ್ ವಸಂತ್ ಶೇಕ್ಡೆ, ಚೆನ್ನೈನ ಜೋಯಲ್ ಕ್ಲಿಂಟನ್, ಬೆಂಗಳೂರಿನ ಅಭಿಲಾಶ್ ಅಭಿ, ಹೈದರಾಬಾದ್‌ನ ಕಾವ್ಯಶ್ರೀ ಚೆರಾಲಾ, ಬೆಂಗಳೂರಿನ ನಂದಿನಿ ದೇ, ಪಾಟ್ನಾದ ಆಕಾಂಕ್ಷಾ ಶರ್ಮ, ಚೆನ್ನೈನ ಎಚ್. ಆರತಿ, ಲಕ್ನೋದ ಸಾಕ್ಷಿ ರಾಣಾ, ಅಹಮದಾಬಾದ್‌ನ ದಾಫ್ನೆ ಡಿಸೋಜಾ, ಶಿವಮೊಗ್ಗದ ಸಮನಾ ಶ್ರೀನಿವಾಸ್, ಕೋಲ್ಕತ್ತಾದ ಶಾರ್ಮಿನ್ ಶಜಾರ್, ಭೋಪಾಲ್‌ನ ಇರುಮ್ ಸಿದ್ಧಿಕಿ, ಗುವಾಹತಿಯ ಪರಿಮಿತಾ ನಾಗೇನ್ ಶರ್ಮ, ಕೋಲ್ಕತ್ತಾದ ಅರುಂಧತಿ ಗುಪ್ತಾ, ಜೈಪುರದ ಅಂಬಿಕಾ ಕವಿಯಾ, ಕಟಕ್‌ನ ಸ್ವಯಂಶ್ರೀ ಮಿಶ್ರಾ, ಚೆನ್ನೈನ ಲಕ್ಷ್ಮಿಪ್ರಿಯಾ, ಕೊಲ್ಕತ್ತಾದ ಸುರ್ಜಯನ್ ಘೋಷ್ ಹಾಗೂ ಹೈದರಾಬಾದ್‌ನ ವೀರೇಂದರ್ ಗುಜ್ಜಾರಿ ದೆಹಲಿಗೆ ಬಂದಿಳಿದಿದ್ದರು.

ಉತ್ಸಾಹದ ಬುಗ್ಗೆಯಂತಿದ್ದ ಭಾವೀ ಪ್ರಜೆಗಳೊಂದಿಗೆ ಕಳೆದ ದಿನಗಳು ನಿಜವಾಗಿಯೂ ಹೊಸ ಜಗತ್ತಿನ ಪರಿಚಯ ಮಾಡಿಸಿದವು. ಶಾಲೆಗಳಾಚೆಯ ಬದುಕಿನ ಬಗ್ಗೆ ಬಹಳ ದೊಡ್ಡ ಕನಸುಗಳನ್ನು ಕಟ್ಟಿಕೊಂಡಿರುವ ಅಗಾಧ ಪ್ರತಿಭಾವಂತರ ತಂಡ ಅದಾಗಿತ್ತು. ನಗರ ಪ್ರದೇಶದ ಮಧ್ಯಮವರ್ಗದ ಹದಿಹರೆಯದವರು ಬಡತನ, ಕೋಮು ಗಲಭೆಗಳು, ನಿರುದ್ಯೋಗ, ಭ್ರಷ್ಟಾಚಾರ, ಪಾಕಿಸ್ತಾನದೊಂದಿಗಿನ ಸಂಬಂಧ ಸುಧಾರಣೆಯಂತಹ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ಭ್ರಮೆಯನ್ನು ಈ ನೇರ ನಡೆ-ನುಡಿಯ ಪೋರರ ಪಡೆ ತಲೆಕೆಳಗು ಮಾಡಿತು. ವೇಗವಾಗಿ ಬದಲಾಗುತ್ತಿರುವ ಈ ಜಗತ್ತು ಅವರಿಗಾಗಿ ಕೊಡುಗೆ ನೀಡಲಿರುವ ಯಾವುದೇ ಸವಾಲನ್ನೂ ಅವರು ಅಷ್ಟೇ ದಿಟ್ಟತನದಿಂದ ಮತ್ತು ಮುಕ್ತ ಮನಸ್ಸಿನಿಂದ ಸ್ವೀಕರಿಸಲು ಸಜ್ಜಾಗಿದ್ದಾರೆ. ಹಾಗೇ ನಮ್ಮ ಅತಿಥಿ ಸಂಪಾದಕರಲ್ಲಿ ಕೆಲವರು ತಮ್ಮ ತುಂಟತನದಿಂದಲೂ ನಮಗೆ ಸಾಕಷ್ಟು ಮನರಂಜನೆಯನ್ನೂ ನೀಡಿದರು!

ಹಾಗಂತ ದೇಶ, ಕುಟುಂಬ, ರಾಜಕೀಯ, ಅಮೆರಿಕ, ಲೈಂಗಿಕತೆ, ಕ್ರೀಡೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಭಾರತೀಯ ಹದಿಹರೆಯದವರು ಯಾವ ರೀತಿ ಯೋಚಿಸುತ್ತಾರೆ ಎಂಬುದನ್ನು ಈ 23 ಮಂದಿಯ ಅಭಿಪ್ರಾಯವನ್ನೇ ಅವಲಂಬಿಸಿ ನಿರ್ಧರಿಸುವುದು ಸಾಧ್ಯವಿಲ್ಲ ಎಂಬುದು ಟಿಎಸ್‌ಐಗೆ ಗೊತ್ತಿದೆ. ಹಾಗಾಗಿಯೇ, ಮಾರ್ಕೆಟಿಂಗ್ ಸಂಶೋಧನಾ ಕ್ಷೇತ್ರದ ಪ್ರಮುಖ ಅಂಗಸಂಸ್ಥೆ ಐಸಿಎಂಆರ್ ರಾಷ್ಟ್ರದಾದ್ಯಂತ ವಿಶೇಷ ಜನಮತ ಸಂಗ್ರಹ ಕೂಡ ನಡೆಸಿತು. ಸುಮಾರು 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಪ್ರಶ್ನಾವಳಿಯನ್ನು ನೀಡುವ ಮೂಲಕ ಸಮೀಕ್ಷೆ ನಡೆಸಲಾಯಿತು.

ಈಗ 17-18ರ ಹರೆಯದ ಎಲ್ಲ ಅತಿಥಿ ಸಂಪಾದಕರನ್ನೂ ಟಿಎಸ್‌ಐ ಮುಂದಿನ ಹತ್ತು ವರ್ಷಗಳವರೆಗೆ (ಅವರ 27- 28ರ ವಯೋಮಾನದ ವರೆಗೆ!) ಗಮನಿಸಲಿದೆ, ಅವರ ಬೆಳವಣಿಗೆ, ಯಶಸ್ಸು, ಕನಸು ಕೈಗೂಡಿದ ಖುಷಿ, ನೋವು- ನಲಿವುಗಳನ್ನು ಹಂಚಿಕೊಳ್ಳಲಿದೆ. ಈ ಇರುಮ್, ನಂದಿತಾ, ಅಕಿಬ್, ದಾಫ್ನೆ ಅವರು ನಾಳೆ ಏನೆಲ್ಲಾ ಆಗಬಹುದು ಎಂಬ ಬಗ್ಗೆ ನಿಮಗೂ ಕುತೂಹಲವಿಲ್ಲದೇ ಇರಲಾರದು!

ಟಿಎಸ್‌ಐ

ಮುಖಪುಟ ಲೇಖನದಲ್ಲಿ ಇನ್ನೇನಿದೆ

ರಾಷ್ಟ್ರ ಮಟ್ಟದ ಪ್ರಪ್ರಥಮ ಐಸಿಎಂಆರ್-ಟಿಎಸ್‌ಐ ಸಮೀಕ್ಷೆ

ಹದಿಹರೆಯದ ಹೃದಯದಾಳದಲ್ಲಿ :  ಭವಿಷ್ಯದ ಬೆಳಕು ನಾಳೆಗಳ ನಂಟಿನ ಹರೆಯ...

ಹದಿಹರೆಯದ ಪ್ರಬುದ್ಧತೆ : ರಾಷ್ಟ್ರೀಯ

ರಾಷ್ಟ್ರೀಯ: ದೇಶ ಕಾಯುವವರ ಮಕ್ಕಳ ಕಾಯುವವರ್‍ಯಾರು?

ರಾಜಕೀಯ : ಯಾರು ಹಿತವರು ನಮಗೆ...

ರಾಜಕೀಯ: ಕೀಳು ರಾಜಕೀಯವನ್ನು ತೆಗಳಿ, ರಾಜಕಾರಣವನ್ನಲ್ಲ

ಬಾಂಧವ್ಯ : ಕುಟುಂಬ, ಹಣ, ಕಾಮ-ಪ್ರೇಮ...

ಬಾಂಧವ್ಯ: ಹದಿಹರೆಯಕ್ಕೆ ಅಧ್ಯಾತ್ಮದ ಸ್ಪರ್ಶ

ಸಂಗೀತ ಲೋಕ: ಹದಿಹರೆಯದ ಸಂಗೀತಗಾಥೆ

ಸಿನಿಮಾ ಪ್ರಪಂಚ : ಬಾಲಿವುಡ್ ಕನಸುಗಳು

ಕ್ರೀಡಾ ಲೋಕ : ಬೆಂಕಿಯ ಚಿಲುಮೆ ಎಲ್ಲಿದೆ?

ಕ್ರೀಡಾ ಲೋಕ: ಬದ್ಧತೆಯಿದ್ದಲ್ಲಿ ಬಯಕೆ ಕೈಗೂಡುವುದು ಖಚಿತ

ವೈವಿಧ್ಯಮಯ : ದೇವರು, ಧರ್ಮ ಮತ್ತು ಆದರ್ಶ ಪ್ರಾಯರು

ವೈವಿಧ್ಯಮಯ: ತಾರುಣ್ಯದ ಕನಸು- ಕನವರಿಕೆಯ ನಡುವೆ

ಡಿಂಪಲ್ ಚೆಲುವೆ ದೀಪಿಕಾ

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .