|
ನೀವು ಮೆಚ್ಚುವ ಉದ್ಯಮಪತಿ...
ಭಾರತದ ಹದಿಹರೆಯದವರ ಮೇಲೆ ನ್ಯಾನೊ ಪರಿಣಾಮ ಬಹಳವಾಗಿದೆ ಎಂಬುದು ಸ್ಪಷ್ಟ. ರತನ್ ಟಾಟಾ ಅವರನ್ನು ಶೇ. 27ಕ್ಕೂ ಹೆಚ್ಚಿನ ಹದಿಹರೆಯದವರು ಮೆಚ್ಚಿಕೊಂಡಿದ್ದು, ಅನಿಲ್ ಅಂಬಾನಿ ಅವರನ್ನು ಶೇ. 25ರಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ. ಅದೇ ಸಣ್ಣ ನಗರಗಳಲ್ಲಿ ಈ ಫಲಿತಾಂಶ ವ್ಯತಿರಿಕ್ತವಾಗಿದೆ. ಅಲ್ಲಿ ಅಂಬಾನಿ ಮೊದಲಿಗರಾಗಿದ್ದರೆ, ಟಾಟಾ ನಂತರದ ಸ್ಥಾನದಲ್ಲಿದ್ದಾರೆ. ಅಗ್ರ ಐದು ಹೆಸರುಗಳಲ್ಲಿ ನಾರಾಯಣಮೂರ್ತಿ ಮತ್ತು ಅಜೀಂ ಪ್ರೇಮ್‌ಜಿ ಹೆಸರು ಇಲ್ಲದಿರುವುದೇ ಐಟಿ ವಲಯ ನಿರೀಕ್ಷೆಯಷ್ಟು ಪ್ರಸಿದ್ಧಿ ಪಡೆದಿಲ್ಲ ಎಂಬುದಕ್ಕೆ ಸಾಕ್ಷಿ. ಮುಖೇಶ್ ಮತ್ತು ಅನಿಲ್ ಅಂಬಾನಿ ಶೇ. 44 ಮತ ಗಳಿಸುವುದರ ಮೂಲಕ ಧೀರೂಭಾಯಿ ಜೊತೆಗೆ ಅಂಬಾನಿ ಕುಟುಂಬದ ವರ್ಚಸ್ಸು ಅಖಂಡವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ವಾಣಿಜ್ಯೋದ್ಯಮಿ ಆಗಬೇಕೆಂಬ ಹಂಬಲ ಇದೆಯೇ?
ವಾಣಿಜ್ಯೋದ್ಯಮಿಗಳು ದೇಶದ ಭವಿಷ್ಯ ರೂಪಿಸುತ್ತಾರೆ ಎಂದಿದ್ದರೂ ಶೇ. 33ರಷ್ಟು ಯುವ ಪೀಳಿಗೆ ಮಾತ್ರ ಈ ಕ್ಷೇತ್ರಕ್ಕೆ ಕಾಲಿಡುವ ಆಶಯ ವ್ಯಕ್ತಪಡಿಸುತ್ತಾರೆ. ಶೇ. 44ರಷ್ಟು ಮಂದಿ ಈ ಕ್ಷೇತ್ರ ಪ್ರವೇಶಿಸುವ ಇಚ್ಛೆ ವ್ಯಕ್ತಪಡಿಸಿಲ್ಲ. ಶೇ. 23ರಷ್ಟು ಮಂದಿ ಈ ಕುರಿತು ಯೋಚಿಸಿಯೇ ಇಲ್ಲ ಎಂದಿದ್ದಾರೆ! ಪೂರ್ವ ಭಾರತದ ಮೂರರಲ್ಲಿ ಎರಡು ಭಾಗ ಹದಿಹರೆಯದವರು ವ್ಯಾಣಿಜ್ಯೋದ್ಯಮಿಯಾಗಲು ಬಯಸುವುದಿಲ್ಲ. ಉತ್ತರ ಭಾರತದವರು ಈ ಕ್ಷೇತ್ರಕ್ಕೆ ಬರುವ ಆಶಯ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಹಾಗೂ ದಕ್ಷಿಣದ ಯುವಜನ ಹೆಚ್ಚಿನ ಪ್ರಮಾಣದಲ್ಲಿ ಉದ್ಯಮ ಕ್ಷೇತ್ರಕ್ಕೆ ಬರುವ ಹಂಬಲ ವ್ಯಕ್ತಪಡಿಸುತ್ತಾರೆ.
ಭಾರತವನ್ನು ಜಾಗತಿಕ ಭೂಪಟದಲ್ಲಿ ಎತ್ತಿ ಹಿಡಿದವರು ಯಾರು?
ದಶಕಗಳ ಹಿಂದೆ ಬಾಲಿವುಡ್ ಚಿತ್ರಗಳೇ ಎಲ್ಲರನ್ನೂ ಭಾರತದೆಡೆಗೆ ಸೆಳೆದಿತ್ತು. ಪ್ರಕಾಶ್ ಪಡುಕೋಣೆ ಮತ್ತು ಪಿ.ಟಿ. ಉಷಾ ಕ್ರೀಡಾ ಕ್ಷೇತ್ರದಲ್ಲಿ ಭಾರತೀಯರು ಹೆಮ್ಮೆ ಪಡುವಂತಹ ಕ್ಷಣಗಳಿಗೆ ಕಾರಣರಾಗಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಭಾರತೀಯ ಉದ್ಯಮಪತಿಗಳು ಇಡೀ ಜಗತ್ತೇ ನಮ್ಮೆಡೆಗೆ ದೃಷ್ಟಿ ನೆಡುವಂತೆ ಮಾಡಿದ್ದಾರೆ. ಜಾಗತಿಕ ವಿಶ್ಲೇಷಕರು ಚೀನಾದ ಜೊತೆಗೆ ಭಾರತವನ್ನೂ ಉದಾಹರಿಸುವಂತಾಗಿರುವುದರಲ್ಲಿ ವಾಣಿಜ್ಯೋದ್ಯಮಿಗಳ ಪಾಲೇ ಹೆಚ್ಚು.
ಟಿಎಸ್‌ಐ |