ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಬಿಚ್ಚು ಮಾತು
ಡಿಂಪಲ್ ಚೆಲುವೆ ದೀಪಿಕಾ
 
ತಮ್ಮ ಚೊಚ್ಚಲ ಚಿತ್ರ 'ಓ ಶಾಂತಿ ಓಂ' ಚಿತ್ರದ ಮೂಲಕ ಬಾಲಿವುಡ್ ಲೋಕದಲ್ಲೇ ಮಿನುಗಿ ಮನೆಮಾತಾದ ಸೂಪರ್ ಮಾಡೆಲ್ ದೀಪಿಕಾ ಪಡುಕೋಣೆ. ಮೂಲತಃ ಕರ್ನಾಟಕದವರಾದ ದೀಪಿಕಾ, ಸಮೀಕ್ಷೆ ಪ್ರಕಾರ ಹದಿಹರೆಯದವರ ಹೃದಯ ಗೆದ್ದಿದ್ದು 'ಮಾದಕ ತಾರೆ' ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ವೃತ್ತಿ, ಬದುಕು ಹಾಗೂ ಪ್ರೇಮದ ಕುರಿತು ಟಿಎಸ್‌ಐನ ಗೌರಿ ಪ್ರತಾಪ್ ಸಿಂಗ್ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ

ಶಾರುಖ್ ಖಾನ್ ಜೊತೆ ಚೊಚ್ಚಲ ಬಾಲಿವುಡ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಗುತ್ತದೆ ಮತ್ತು ಇಷ್ಟು ಜನಪ್ರಿಯತೆ ಪಡೆಯುತ್ತೀರಿ ಎನ್ನುವ ಕಲ್ಪನೆ ನಿಮಗಿತ್ತೆ?

ಪ್ರಾಮಾಣಿಕವಾಗಿ ಹೇಳಬೇಕೆಂದರೆ ಶಾರುಖ್ ಜೊತೆ ಬಾಲಿವುಡ್‌ಗೆ ಕಾಲಿಡುತ್ತೇನೆ ಎಂದು ಖಂಡಿತಾ ಅಂದುಕೊಂಡಿರಲಿಲ್ಲ. ಹಾಗೆ ನೋಡಿದರೆ ನನಗೆ ಚಲನಚಿತ್ರದಲ್ಲಿ ನಟಿಸಲು ಆಸಕ್ತಿಯೇ ಇರಲಿಲ್ಲ. ನಾನು ರೂಪದರ್ಶಿಯಾಗಿ ಮುಂದುವರಿಯ ಬೇಕೆಂದಿದ್ದೆ. ಮಾಡೆಲಿಂಗ್‌ನಲ್ಲಿ ಒಂದು ವರುಷ ಕಳೆದ ಮೇಲೆ ಅವಕಾಶಗಳು ಬರಲಾರಂಭಿಸಿದವು. ಆಗಲೇ ಫರ್‍ಹಾ 'ಓಂ ಶಾಂತಿ ಓಂ' ಚಿತ್ರದಲ್ಲಿ ನಟಿಸುವ ಅವಕಾಶ ಕೊಟ್ಟಾಗ ಪ್ರಯತ್ನಿಸುವುದರಲ್ಲಿ ತಪ್ಪೇನಿಲ್ಲ ಅಂದುಕೊಂಡೆ.

ತಂದೆ ಕ್ರೀಡಾ ಪಟು. ನೀವು ರಾಜ್ಯಮಟ್ಟದ ಬ್ಯಾಡ್‌ಮಿಂಟನ್ ಆಟಗಾರ್ತಿ. ಹಾಗಿದ್ದರೆ ರೂಪದರ್ಶಿಯಾದದ್ದು? ಕುಟುಂಬದ ಬೆಂಬಲ ಹೇಗಿತ್ತು?

ನನ್ನ ಗೆಳತಿಯೊಬ್ಬಳ ಅಮ್ಮ ಮಾಡೆಲಿಂಗ್ ಸಂಯೋಜಕರಾಗಿದ್ದರು. ಅವರು ಒಂದು ದಿನ ಶಾಲೆಯಲ್ಲಿ ನನ್ನನ್ನು ನೋಡಿ, ನಾನೂ ಜಾಹಿರಾತು ಅಭಿಯಾನಗಳಲ್ಲಿ ಭಾಗವಹಿಸಬಹುದು ಎಂದು ನನ್ನ ಅಮ್ಮನಿಗೆ ಸಲಹೆ ಕೊಟ್ಟರು. ನಾನು ಆಗ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದೆ. ಕ್ಯಾಮರಾ ಮುಂದೆ ನಿಲ್ಲುವ ಬಗ್ಗೆ ನನ್ನಲ್ಲಿದ್ದ ಅತೀವ ಆಸಕ್ತಿಗೆ ಹೆತ್ತವರೂ ಪ್ರೋತ್ಸಾಹಿಸಿದರು. ಮಗಳ ಆಸಕ್ತಿ ಯಾವ ಕಡೆಗಿದೆ ಎನ್ನುವುದನ್ನು ಗಮನಿಸಿದ ಅವರು ಅದಕ್ಕೇ ಉತ್ತೇಜನ ನೀಡಿದ್ದರು ವಿನಃ ಬ್ಯಾಡ್‌ಮಿಂಟನ್ ಆಟಗಾರ್ತಿಯಾಗಲು ಒತ್ತಾಯಿಸಲಿಲ್ಲ.

ಪ್ಲೇಬಾಯ್ ಮತ್ತು ಕಿಂಗ್‌ಫಿಶರ್ ಕ್ಯಾಲೆಂಡರ್‌ಗೆ ಮಾಡೆಲಿಂಗ್ ಮಾಡಿದ್ದೀರಿ. ಇದಕ್ಕೆ ಎಕ್ಸ್‌ಪೋಸಿಂಗ್ ಅಗತ್ಯವಿದೆ. ಕುಟುಂಬದ ಪ್ರತಿಕ್ರಿಯೆ ಹೇಗಿತ್ತು?

ಇಲ್ಲ, ನಾನು ಪ್ಲೇಬಾಯ್‌ಗೆ ಏನನ್ನೂ ಮಾಡಿಲ್ಲ. ಇನ್ನು ಕಿಂಗ್‌ಫಿಶರ್ ಕ್ಯಾಲೆಂಡರ್ ವಿಷಯಕ್ಕೆ ಬಂದಲ್ಲಿ, ನನ್ನ ಹೆತ್ತವರು ನನಗೆ ಕೆಲ ಉತ್ತಮ ಆದರ್ಶ ಮತ್ತು ನೈತಿಕ ಶಿಕ್ಷಣ ನೀಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ನನ್ನ ಮೇಲೆ ನಂಬಿಕೆ ಇದೆ. ಈಜುಡುಗೆ ತೊಡಬಲ್ಲ ಮೈಮಾಟ ನನಗಿದ್ದ ಕಾರಣ ಆ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿದ್ದೆ. ಆ ಜಾಹೀರಾತು ಅಭಿಯಾನಕ್ಕೆ ಅತುಲ್ ಕಸ್ಬೇಕರ್ ಛಾಯಾಚಿತ್ರಕಾರನಾಗಿದ್ದುದೂ ಮತ್ತೊಂದು ಕಾರಣ. ನನಗೆ ಅವರ ಮೇಲೆ ಒಂಥರಾ ಕುರುಡು ನಂಬಿಕೆ!

ಬಾಲಿವುಡ್‌ನ ಅತ್ಯುತ್ತಮ ಮೈಮಾಟ ಕಾಯ್ದುಕೊಂಡಿರುವ ಕೆಲವೇ ಯುವತಿಯರಲ್ಲಿ ನೀವೂ ಒಬ್ಬರು. ಆ ಶಿಸ್ತು ನಿಮ್ಮಲ್ಲಿ ಹೇಗೆ ಬಂತು? ವ್ಯಾಯಾಮ ಎಂದರೆ ಖುಷಿಯೇ?

ನಿಜ ಹೇಳಬೇಕೆಂದರೆ ನಾನು ವ್ಯಾಯಾಮ ಮಾಡೋದೇ ಇಲ್ಲ. ನಾನು ತಿಂಡಿಪೋತಿ. ತಿಂದದ್ದೆಲ್ಲಾ ಅರಗಿಸಿಕೊಳ್ಳಬಲ್ಲೆ ಅನ್ನೋ ಆತ್ಮವಿಶ್ವಾಸ ನನ್ನದು! ಆದರೂ ಕೊಂಚ ದಪ್ಪಗಾಗುತ್ತಿದ್ದೇನೆ, ಹೀಗಾಗಿ ಶಿಸ್ತು ತಂದುಕೊಳ್ಳಬೇಕಿದೆ. ಕ್ರೀಡಾಪಟುವಾಗಿದ್ದಕ್ಕೆ ಹೀಗಿದ್ದೀನಿ.

ಮೊತ್ತ ಮೊದಲ ಬಾರಿ ಕ್ಯಾಮರಾ ಎದುರಿಸಿದ ಅನುಭವ? ಹಾಗೆಯೇ ಶಾರುಖ್ ಜೊತೆಗೆ ಮೊದಲ ಶಾಟ್?

ಮೊದಮೊದಲು ಸ್ವಲ್ಪ ನರ್ವಸ್ ಆಗಿದ್ದೆ. ಆದರೆ ನಾನು ಫರ್‍ಹಾ ಖಾನ್‌ಗೆ ಧನ್ಯವಾದ ಅರ್ಪಿಸಲೇಬೇಕು. ಚಿತ್ರೀಕರಣಕ್ಕೆ ಮುನ್ನ ಅನೇಕ ಸಲ ನಾನು ಶಾರುಖ್‌ರನ್ನು ಭೇಟಿಯಾಗುವ ಅವಕಾಶ ಕಲ್ಪಿಸಿ ಕೊಟ್ಟಿದ್ದರು. ಹೀಗಾಗಿ ಮೊದಲ ಶಾಟ್‌ನಲ್ಲಿ ಕಂಪನ ಇರಲಿಲ್ಲ. ಆರಂಭದಲ್ಲಿ ನನಗೆ ಕಡಿಮೆ ಸಂಭಾಷಣೆ ಇರುವಂತೆ ನನ್ನ ದೃಶ್ಯಗಳನ್ನು ಯೋಜಿಸಿದ್ದರು. ಕಷ್ಟದ ದೃಶ್ಯಗಳೆಲ್ಲಾ ಕೊನೆಗೆ ಇಟ್ಟಿದ್ದರು.

ನಿಮ್ಮ ಮೊದಲ ಸಂಭಾಷಣೆ ಏನಾಗಿತ್ತು?

"ಕುತ್ತೇ ಕಮೀನೇ ಭಗವಾನ್ ಕೇಲಿಯೇ ಮುಜೆ ಚೋಡ್ ದೇ". (ನಗು)

ಪ್ರತಿ ಜನಪ್ರಿಯ ವ್ಯಕ್ತಿಯ ಹಿಂದೆಯೂ ವಿವಾದಗಳಿರುತ್ತವೆ. ಇದು ನಿಮ್ಮನ್ನು ಎಷ್ಟು ಬಾಧಿಸುತ್ತದೆ?

ನಿಜ ಹೇಳಬೇಕೆಂದರೆ ನನ್ನನ್ನು ವಿವಾದ ಬಾಧಿಸುವುದೇ ಇಲ್ಲ. ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಬೇಕು-ಬೇಡದ್ದನ್ನೆಲ್ಲಾ ಕೇಳಿ ಆಗಿದೆ. ಒಂದು ಮಿತಿಯನ್ನು ದಾಟಿದ ಮೇಲೆ ಜನರೂ ಆ ಬಗ್ಗೆ ಓದುವುದು ಮತ್ತು ನಂಬುವುದನ್ನು ಬಿಟ್ಟಿದ್ದಾರೆ.

ನಿಮ್ಮ ಹೆಸರನ್ನು ಹಲವು ತಾರೆಯರ ಜೊತೆ ಸೇರಿಸಲಾಗಿತ್ತು. ಧೋನಿ, ಯುವರಾಜ್ ಅಥವಾ ರಣಬೀರ್ ಕಪೂರ್? ಯಾವುದು ನಿಜ?

ಯಾರೇ ಪ್ರಸಿದ್ಧ ವ್ಯಕ್ತಿಗಳು ಒಂದೆರಡು ಸಲ ಜೊತೆಯಾಗಿ ಕಾಣಿಸಿಕೊಂಡರೆ, ಅವರ ನಡುವೆ ಸಂಬಂಧ ಸೃಷ್ಟಿಸಲಾಗುತ್ತದೆ. ಧೋನಿ ವಿಷಯವನ್ನೇ ತೆಗೆದುಕೊಂಡರೆ, ನಾನು ಆತನ ಅಚ್ಚುಮೆಚ್ಚಿನ ನಟಿಯಾಗಿದ್ದಲ್ಲಿ ನಮ್ಮ ಮಧ್ಯೆ ಸಂಬಂಧ ಇದೆ ಎನ್ನುವುದನ್ನು ಮಾಧ್ಯಮಗಳು ಹೇಗೆ ಹೇಳಬಲ್ಲವು? ಇನ್ನು ಯುವರಾಜ್ ವಿಷಯದಲ್ಲೂ ಸಾಕಷ್ಟು ವಿಷಯಗಳನ್ನು ಹೇಳಲಾಗಿದೆ. ಅದಕ್ಕೆಲ್ಲಾ ಸ್ಪಷ್ಟನೆ ನೀಡುವುದನ್ನು ಮೀರಿ ಜೀವನದಲ್ಲಿ ಮುಂದೆ ಸಾಗಿ ಬಂದಿದ್ದೇನೆ. ನಾನೀಗ ಇರುವೆಡೆ ಸಂತೋಷವಾಗಿದ್ದೇನೆ ಎಂದು ಹೇಳಲಿಚ್ಛಿಸುತ್ತೇನೆ. ಈ ಬಗ್ಗೆ ಹೆಚ್ಚು ಮಾತನಾಡಲು ನನಗಿಷ್ಟವಿಲ್ಲ.

ಸಾಮಾನ್ಯವಾಗಿ ಪ್ರತಿ ಮಾಡೆಲ್‌ಗಳಿಗೂ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಕನಸಿರುತ್ತದೆ. ನಿಮ್ಮ ಯೋಚನೆ ಏನಾಗಿತ್ತು?

ಯಾವುದೇ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸದೆ ಭಾರತದ ಸೂಪರ್‌ಮಾಡೆಲ್ ಆಗಬೇಕೆನ್ನುವುದು ನನ್ನ ಕನಸಾಗಿತ್ತು. ನಾನು ಅದನ್ನು ನನಸು ಮಾಡಿದ್ದೇನೆ.

ಗ್ಲಾಮರ್ ಪ್ರಪಂಚವನ್ನು ವಿಶಾಲ ಮತ್ತು ಅತೀ ಕೆಟ್ಟ ಪ್ರಪಂಚ ಎನ್ನಲಾಗುತ್ತಿದೆ. ನಿಮಗೆ ಮಾಡೆಲಿಂಗ್ ಮತ್ತು ನಟನೆ ಎರಡರಲ್ಲೂ ಅನುಭವವಿತ್ತು. ಯಾವ ಕ್ಷೇತ್ರ ಅಚ್ಚುಮೆಚ್ಚು? ಈ ಕ್ಷೇತ್ರ ಪ್ರವೇಶಿಸುವವರಿಗೆ ನಿಮ್ಮ ಸಲಹೆ?

ಎರಡೂ ಕ್ಷೇತ್ರಗಳು ವಿಭಿನ್ನ. ನೀವು ಚಿತ್ರರಂಗದ ಒಂದು ಭಾಗವಾಗಿದ್ದರೆ ಅದು ನಿಮ್ಮ ಜೀವನದ ಒಂದು ಅಂಗವಾಗಿರುತ್ತದೆ. ನೀವು ಆ ಪಾತ್ರದ ಜೊತೆಗೆ ಕನಿಷ್ಠ ಆರು ತಿಂಗಳು ಅಥವಾ ಕೆಲ ಬಾರಿ ವರ್ಷಗಳವರೆಗೆ ಬೆಸೆದುಕೊಂಡಿರುತ್ತೀರಿ. ಮಾಡೆಲಿಂಗ್ ಕ್ಷೇತ್ರ ಅಥವಾ ಜಾಹೀರಾತು ಅಭಿನಯದಲ್ಲಿ ಅಂತಹ ಅನುಬಂಧ ಇರುವುದಿಲ್ಲ. ಒಂದು ದಿನ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿ ಮರುದಿನ ಆ ಬಗ್ಗೆ ಮರೆತು ಬಿಡುತ್ತೇವೆ. ಜಾಹಿರಾತಾಗಿದ್ದರೆ ಒಂದೆರಡು ದಿನ ಕೆಲಸ ಮಾಡಿ ಮರೆಯುತ್ತೇವೆ. ನನ್ನ ಸಲಹೆ ಎಂದರೆ, ಅದ್ಭುತ ಸೌಂದರ್ಯವಿದ್ದರೆ ಸಾಲದು, ಶ್ರಮ ಪಡುವ ಬದ್ಧತೆಯೂ ಇರಬೇಕು. ಹೊರಗಿನಿಂದ ನೋಡಿದರೆ ಇದೊಂದು ಭ್ರಮಾಲೋಕ. ಕನಸಿನ ಪ್ರಪಂಚ. ಆದರೆ ದೈಹಿಕ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಕಠಿಣ ಜಗತ್ತು. ಹೋರಾಟಕ್ಕೆ ಸಿದ್ಧರಾಗಿದ್ದಲ್ಲಿ ಒಳಿತು.

ಶಾರುಖ್ ಖಾನ್ ಅವರು ನಿಮ್ಮನ್ನು ಮಾಧ್ಯಮಗಳ ಟೀಕೆಗಳಿಂದ ತಪ್ಪಿಸಿದ್ದರು. ಅವರಿಂದ ನೀವು ಏನು ಕಲಿತಿದ್ದೀರಿ?

ಶಾರುಖ್ ಮತ್ತು ಫರ್‍ಹಾ ಎಲ್ಲಾ ರೀತಿಯಲ್ಲೂ ನನ್ನ ಜೀವನಪೂರ್ತಿ ನಂಬಬಹುದಾದಂತಹ ವ್ಯಕ್ತಿಗಳು. ಸಲಹೆ ಅಥವಾ ಇನ್ಯಾವುದೇ ರೀತಿಯ ಸಹಾಯ ಬೇಕಿದ್ದಲ್ಲಿ ಇಂದಿಗೂ ಅವರು ನನ್ನ ಜೊತೆಗಿದ್ದಾರೆ ಎನ್ನುವ ವಿಶ್ವಾಸ ನನಗಿದೆ.

ಪ್ರಸ್ತುತ ನಟಿಸುತ್ತಿರುವ ಮತ್ತು ಹಳೇ ನಟರಲ್ಲಿ ನಿಮ್ಮ ಅಚ್ಚುಮೆಚ್ಚಿನ ನಟ- ನಟಿ?

ಮಧು ಬಾಲಾ ಮತ್ತು ಹೇಮಮಾಲಿನಿ. ಅಮಿತಾಬ್ ಬಚ್ಚನ್ ಮತ್ತು ರಿಷಿ ಕಪೂರ್. ಹೊಸಬರಲ್ಲಿ ಖಂಡಿತಾ ರಣ್‌ಬೀರ್.

ಚಿಕ್ಕ ವಯಸ್ಸಲ್ಲೇ ಗ್ಲಾಮರ್ ಪ್ರಪಂಚಕ್ಕೆ ಕಾಲಿಟ್ಟಿದ್ದೀರಿ. ಯುವತಿ ಮತ್ತು ಹೊಸಬಳು ಎನ್ನುವ ಕಾರಣಕ್ಕೆ ಯಾರಾದರೂ ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದ್ದಿದೆಯೆ?

ಇಲ್ಲವೇ ಇಲ್ಲ. ಈ ದುರುಪಯೋಗಪಡಿಸಿಕೊಳ್ಳುವ ವಿಚಾರ ನಿಮ್ಮ ವ್ಯಕ್ತಿತ್ವವನ್ನು ಆದರಿಸಿರುತ್ತದೆ.ಅವರ ಮಾತುಗಳನ್ನು ಒಪ್ಪಿಕೊಳ್ಳಲು ಎಷ್ಟರಮಟ್ಟಿಗೆ ಸಿದ್ಧರಾಗಿದ್ದೀರಿ ಎನ್ನುವುದೂ ಮುಖ್ಯ. ಹೀಗಾಗಿ ಚಿತ್ರರಂಗ ಅಥವಾ ಮಾಡೆಲಿಂಗ್ ಕ್ಷೇತ್ರ ಕೊಳಕು ಎಂದು ವಾದಿಸುವುದು ಸರಿಯಲ್ಲ.

ದೀಪಿಕಾ ಪಡುಕೋಣೆ ಅಲೆಯನ್ನು ನಿಮ್ಮ ಹೆತ್ತವರು ಹೇಗೆ ಸ್ವೀಕರಿಸಿದ್ದಾರೆ? ಅವರಿಗೆ ಇದು ಹೊಸ ಅನುಭವ...

ಅವರಿಗೆ ನನ್ನ ಮೇಲೆ ಅಪಾರ ಹೆಮ್ಮೆ ಹಾಗೂ ಸಂತೋಷವಿದೆ. ಅವರಿಗೂ ಇದು ಹೊಸದು ಮತ್ತು ನನಗೂ. ನಾನು ಅವರ ಬಳಿ ಸಲಹೆ ಕೇಳುತ್ತಿರುತ್ತೇನೆ ಮತ್ತು ಎಲ್ಲಾ ವಿಷಯಗಳನ್ನು ಹೆತ್ತವರಿಗೆ ಹೇಳುತ್ತಿರುತ್ತೇನೆ.

ಯುವ ವಯಸ್ಸಿನಲ್ಲೇ ನೀವು ಇಷ್ಟೊಂದು ಪ್ರಸಿದ್ಧಿ ಮತ್ತು ಕೀರ್ತಿ ಪಡೆದಿದ್ದೀರಿ. ಇದು ಅತಿ ವೇಗದ ಬೆಳವಣಿಗೆ ಎಂದು ಅನಿಸುತ್ತಿಲ್ಲವೆ?

ಇಲ್ಲ. ಇದು ನಾನು ಆರಿಸಿಕೊಂಡ ವೃತ್ತಿಯ ಒಂದು ಭಾಗ. ನಾನು ಇಂದಿನ ಈ ಮಟ್ಟವನ್ನು ತಲುಪಲು ಕಠಿಣ ಶ್ರಮ ಪಟ್ಟಿರುವೆ. ಈ ಕೆಲಸವನ್ನು ಸಂಪೂರ್ಣವಾಗಿ ಆಹ್ಲಾದಿಸುತ್ತಿದ್ದೇನೆ. ಜನ ಮೆಚ್ಚುಗೆಗಾಗಿ ನಾನು ತಪ್ಪು ಹಾದಿ ತುಳಿದಿಲ್ಲ. ಒಂದು ಚಿತ್ರ ಸೂಪರ್ ಹಿಟ್ ಆಗಿರೋದಿಕ್ಕೆ ಹೊಸಚಿತ್ರ ತೆರೆ ಕಾಣುವ ಬಗ್ಗೆ ನನಗೆ ಆತಂಕ ಇಲ್ಲ ಎನ್ನುವವರಿದ್ದಾರೆ. ಆದರೆ ಅಮಿತಾಬ್ ಬಚ್ಚನ್ ಇಂದಿಗೂ ತಮ್ಮ ಚಿತ್ರ ಬಿಡುಗಡೆಯಾಗುವಾಗ ನರ್ವಸ್ ಆಗಿರುತ್ತಾರೆ. ಹಾಗಿರುವಾಗ ಈಗಷ್ಟೇ ಅಂಬೆಗಾಲಿಡುತ್ತಿರುವ ನಾನು ಆ ಭಾವನೆಯಿಂದ ಹೊರ ಬರಲು ಸಾಧ್ಯವೆ?

ಗೆಳೆಯನಾಗಿ ರಣಬೀರ್ ಕಪೂರ್?

ನಮ್ಮ ಸಂಬಂಧದಲ್ಲಿ ಪ್ರಯತ್ನ ಹಾಕುವ ಅಗತ್ಯವೇ ಇಲ್ಲ. ಯಾವುದನ್ನೂ ನಾವು ಯೋಜಿಸಿ ಮಾಡಿಲ್ಲ. ನಾವಿಬ್ಬರೂ ಜೊತೆಯಾಗಿ ಅದ್ಭುತವಾಗಿ ಕಾಲ ಕಳೆದಿದ್ದೇವೆ. ಇದೇ ಕಾರಣಕ್ಕೆ ನಾವಿಬ್ಬರೂ ಹೆಚ್ಚು ಆಪ್ತವಾಗಿದ್ದೇವೆ. ಪರಸ್ಪರ ಸ್ನೇಹಿತರಾದಾಗ, ಯಾವುದೋ ಸಂಬಂಧದೊಳಗೆ ಸಿಲುಕಬೇಕೆನ್ನುವ ಉದ್ದೇಶ ನಮ್ಮಲ್ಲಿರಲಿಲ್ಲ. ಒಬ್ಬ ಹೊಸ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದೇನೆ ಎಂಬ ಭಾವನೆ ಇತ್ತು. ಸ್ನೇಹಿತರಾದ ನಂತರ ಪ್ರೇಮ ಮೂಡಿತು. ಇದೇ ನಮ್ಮ ಸಂಬಂಧದ ವಿಶೇಷತೆ.

ಟಿಎಸ್‌ಐ

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .