ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 
ಇತರ ವಿಭಾಗಗಳು
 
ಚಿಲುಮೆ
ಕಳ್ಳತನಕ್ಕೊಂದು ವಿಮೆ
 
ಆಡಳಿತ ವೈಫಲ್ಯಕ್ಕೆ ಕಂತಿನ ಮೂಲಕ ಬೆಲೆ ತೆರುವ ಸಮಸ್ಯೆ ಗ್ರಾಹಕರದ್ದು!
Prasoon
ಪ್ರಸೂನ್ ಮಜುಂದಾರ್
ವಾಣಿಜ್ಯ ಸಂಪಾದಕ
ದ ಸಂಡೆ ಇಂಡಿಯನ್

 

ವಿಮಾ ಏಜೆಂಟರು ಎಂದೂ ಒಳ್ಳೆ ಸುದ್ದಿಗಳನ್ನು ಹೊತ್ತು ಬರುವುದೇ ಇಲ್ಲ. ಬೇಕಾದರೆ ಇದನ್ನು ಸಾರ್ವಕಾಲಿಕ ಸತ್ಯ ಎಂದೂ ಕರೆಯಬಹುದು! ಮೊನ್ನೆ ನನಗಾದ ಅನುಭವವನ್ನು ಕೇಳಿ, ಕೆಲವು ದಿನಗಳ ಹಿಂದೆ ನನ್ನ ವಿಮಾ ಏಜೆಂಟ್ ಕರೆ ಮಾಡಿ ನನ್ನ ಕಾರಿನ ವಿಮೆ ಬಾಕಿ ಉಳಿದಿದೆ ಹಾಗೂ ವಿಮೆಯನ್ನು ನವೀಕರಿಸಲು ಬಾಕಿ ಉಳಿದಿರುವ ಕಂತನ್ನು ಕಟ್ಟಬೇಕು ಎಂದು ತಿಳಿಸಿದಳು. ಇದರ ಜೊತೆಗೆ ಆ ಕೋಮಲ ದನಿ ಮತ್ತೊಂದು ಚುರುಗುಟ್ಟಿಸುವ ಸುದ್ದಿಯನ್ನೂ ಹೇಳಿತು, ಅದೇನೆಂದರೆ ನನ್ನ ಹಿಂದಿನ ವಿಮಾ ಕಂಪನಿಯಂತೆಯೇ ಉಳಿದ ಕಂಪನಿಗಳು (ಮೂರು ಕಂಪನಿಗಳನ್ನು ಬಿಟ್ಟು) ನನ್ನ ಕಾರಿಗೆ (ನನ್ನದು ಮಹೀಂದ್ರಾ ಸ್ಕಾರ್ಪಿಯೊ) ವಿಮೆ ನೀಡಬಾರದು ಎಂದು ನಿರ್ಧರಿಸಿವೆಯಂತೆ! ಆದರೆ ಏಕೆ? ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿತು.

ಆನಂತರ ವಿಮಾ ಕಂಪನಿಗಳ ಈ ನಿರ್ಧಾರದ ಹಿಂದಿರುವ ಕಾರಣ ಕೇಳಿದ ಮೇಲೆ ನನಗಂತೂ ತಲೆ ಗಿರ್ರೆಂದು ಬಿಟ್ಟಿತು; ವಿಮಾ ಕಂಪನಿಗಳೆಲ್ಲಾ ಇಂಥ ಒಕ್ಕೊರಲಿನ ನಿರ್ಧಾರ ತೆಗೆದುಕೊಳ್ಳಲು ಕಾರಣ ಮಹೀಂದ್ರಾ ಸ್ಕಾರ್ಪಿಯೋ ಅತೀ ಹೆಚ್ಚು ಕಳವಾಗುತ್ತಿರುವ ಗಾಡಿಯೆಂಬುದು!! ಇದರ ಜೊತೆಗೆ ಆಕೆ ಇನ್ನೊಂದು ಮಾತನ್ನೂ ಸೇರಿಸಿದಳು, ಕಾರಿಗೆ ವಿಮೆ ಒದಗಿಸುತ್ತಿರುವ ಮೂರು ಕಂಪನಿಗಳು ಯಾವುದೇ ರಿಯಾಯಿತಿಗಳನ್ನು ನೀಡುತ್ತಿಲ್ಲ. ಅಂದರೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ರೀತಿಯ ವಿಮೆ! ರಿಯಾಯಿತಿ ಬೇಕೆಂದು ನಾನು ಮತ್ತಷ್ಟು ಒತ್ತಡ ಹಾಕಿದರೆ ಆಕೆ ನನ್ನ ವಿಮೆಯನ್ನು `ಇನ್ನಿಲ್ಲ`ವಾಗಿಸಲು ಮತ್ತಷ್ಟು ಉತ್ಸುಕಳಾಗುತ್ತಾಳೆ ಎಂಬುದು ಆಕೆಯ ಮಾತಿನ ಧಾಟಿಯಿಂದಲೇ ಅರ್ಥವಾಗುತ್ತಿತ್ತು.

ಈ ಮಧ್ಯೆ ನನ್ನ ಆಘಾತ- ಆತಂಕಗಳನ್ನೆಲ್ಲಾ ಬದಿಗಿಟ್ಟು ಕಂಪನಿ ಹಾಗೂ ಗ್ರಾಹಕರ ಕುರಿತಾಗಿ ನಾನು ಯೋಚಿಸತೊಡಗಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಿಂದ ತನ್ನ ಗ್ರಾಹಕರನ್ನು ಪಾರುಮಾಡಲು ಮಹೀಂದ್ರಾ ಆಂಡ್ ಮಹೀಂದ್ರಾ ಕಂಪನಿ ಏನು ಮಾಡಬಹುದು ಎಂದು ಆಲೋಚಿಸಿದೆ. ಮಹೀಂದ್ರಾ ಆಂಡ್ ಮಹೀಂದ್ರಾ ಖುದ್ದಾಗಿ ಒಂದು ವಿಮಾ ಕಂಪನಿ ತೆರೆಯಬೇಕೇ? ಅಥವಾ ಕದ್ದೂ ಪ್ರಯೋಜನ ಇಲ್ಲ ಎಂಬಷ್ಟರ ಮಟ್ಟಿಗೆ ಕಾರನ್ನು ಕೆಟ್ಟದಾಗಿ ತಯಾರಿಸಬೇಕೇ? ಅಥವಾ ಎಂಥ ಸಂದರ್ಭದಲ್ಲೂ ಯಾವ ಮಹಾನ್ ಕಳ್ಳನಿಗೂ ಕದಿಯಲು ಅಸಾಧ್ಯವಾಗುವಂಥ ಭದ್ರತಾ ಕ್ರಮಗಳನ್ನು ಕಾರಿಗೆ ಒದಗಿಸಬೇಕೆ? ಕಂಪನಿ ಏನು ಮಾಡಬೇಕು ಎಂಬುದರ ಸ್ಪಷ್ಟ ಚಿತ್ರಣ ನನಗೆ ಸಿಗಲಿಲ್ಲ.

ಆದರೂ ದೇಶದ ಆಡಳಿತ ವ್ಯವಸ್ಥೆ ಸಕ್ರಿಯವಾಗುತ್ತದೆ ಮತ್ತು ಈ ವಿಚಿತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತದೆ ಮತ್ತು ಮುಂದೆ ಯಾವೊಬ್ಬನೂ ಕಾರು ಕದಿಯಲು ಧೈರ್ಯ ತೋರಲಾರ ಎಂಬ ಭರವಸೆಯಿಂದ ಕಂಪನಿಯೇನಾದರೂ ಸುಮ್ಮನೆ ಕುಳಿತಿದ್ದರೆ ಅದು ಶತ ಮೂರ್ಖತನ. ಏಕೆಂದರೆ ನಮ್ಮ ಆಡಳಿತ ವ್ಯವಸ್ಥೆ ಸಕ್ರಿಯವಾಗಿದಿದ್ದರೆ ಇಂಥ ಸಂದರ್ಭವೇ ಎದುರಾಗುತ್ತಿರಲಿಲ್ಲ. ಆದರೆ ಒಂದು ಮಾತ್ರ ನಿಜ. ಇನ್ನು ಮುಂದಾದರೂ ಆಡಳಿತ ವ್ಯವಸ್ಥೆ ಸೂಕ್ತವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಈಗ ಎದುರಾಗಿರುವ ಸಮಸ್ಯೆ ತಾನಾಗಿಯೇ ಬಗೆಹರಿಯುತ್ತದೆ ಎಂದು ಕಾದು ಕುಳಿತರೆ ನಮ್ಮ ಯಾವ ಕೆಲಸವೂ ಮುಂದೆ ಸಾಗುವುದಿಲ್ಲ.

ವಿದೇಶಗಳಲ್ಲಿ ವಿಮಾ ಪರಿಣಿತರು ಎಲ್ಲಾ ಸಮಸ್ಯೆಗಳನ್ನು ಮೊದಲೇ ಲೆಕ್ಕಾಚಾರ ಹಾಕಿ ನಂತರ ವಿಮೆಯ ಬಗ್ಗೆ ಆಲೋಚಿಸುತ್ತಾರೆ. ಆದರೆ ಭಾರತದಲ್ಲಿ ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿ ಇದೆ. ನಮ್ಮಲ್ಲಿ ಆಡಳಿತ ವೈಫಲ್ಯಕ್ಕೂ ಪಾಲಿಸಿದಾರನೇ ಗುರಿಯಾಗುತ್ತಾನೆ ಎನ್ನುವುದು ಮಾತ್ರ ವಿಚಿತ್ರ. ಅಂದಹಾಗೆ ಕಳ್ಳತನ ಇದೇ ರೀತಿ ಮುಂದುವರಿದರೆ ಈಗ ವಿಮೆ ನೀಡುತ್ತಿರುವ ಆ ಮೂರೂ ವಿಮಾ ಕಂಪನಿಗಳೂ ಸ್ಕಾರ್ಪಿಯೋ ಮೇಲಿನ ವಿಮೆಗೆ ಪೂರ್ಣವಿರಾಮ ಹಾಕುವ ಕಾಲ ದೂರವಿಲ್ಲ. ಮಹೀಂದ್ರಾ ಮಾತ್ರವಲ್ಲ, ಪರಿಸ್ಥಿತಿ ಹೀಗೇ ಮುಂದುವರಿದರೆ ಇದು ಇತರ ವಾಹನ ತಯಾರಿಕಾ ಕಂಪನಿಗಳ ಮಾರಾಟದ ಮೇಲೂ ಪರಿಣಾಮ ಬೀರಲಿದೆ ಎಂಬುದರಲ್ಲಿ ಆಶ್ಚರ್ಯವಿಲ್ಲ. ಆದ್ದರಿಂದ ಇನ್ನು ಮುಂದೆ ಕಾರು ಖರೀದಿಸುವಾಗ ಗ್ರಾಹಕ, ಮಾಮೂಲು ಮಾನದಂಡಗಳ ಪರೀಕ್ಷೆಗಳ ಜೊತೆಗೆ ಕಾರಿನ ಕಳ್ಳತನ ಸರಾಸರಿಯನ್ನೂ ತಾಳೆ ಹಾಕಿ ನೋಡಬೇಕಾಗುತ್ತದೆ! ಬಹುಶಃ ಆಗ ಕಾರು ತಯಾರಕರು ಹಾಗೂ ಕಂಪನಿಯ ಸಂಬಂಧ ಪಟ್ಟವರು ಸರ್ಕಾರಕ್ಕೆ ನೀಡುವ ಬೇಡಿಕೆಗಳ ಪಟ್ಟಿಯಲ್ಲಿ ಕಾರು ಕಳ್ಳತನವನ್ನು ಪರಿಶೀಲಿಸಬೇಕೆಂಬ ಅಂಶವನ್ನೂ ಸೇರಿಸಬಹುದು!

ಆದರೆ ಭವಿಷ್ಯದಲ್ಲಿ ಏನಾಗುತ್ತದೋ ಎಂಬುದನ್ನು ಈಗಲೇ ಊಹಿಸಿ ಹೇಳುವುದಂತೂ ಅಸಾಧ್ಯ. ಅದೂ ಅಲ್ಲದೆ ಭಾರತದಂತಹ ದೇಶದಲ್ಲಿ ಏನನ್ನು ಊಹಿಸಲೂ ಸಾಧ್ಯವಿಲ್ಲ. ನಾನಂತೂ ಎರಡೇ ಎರಡು ಆಯ್ಕೆಗಳ ಮುಂದೆ ಕೂತು ಮೀನ-ಮೇಷ ಎಣಿಸುತ್ತಿದ್ದೇನೆ, ಒಂದೋ ನನ್ನ ಕಾರನ್ನು ಮಾರಬೇಕು, ಇಲ್ಲದಿದ್ದರೆ ನಮ್ಮ ಆಡಳಿತದ ನಿರಂತರ ವೈಫಲ್ಯಕ್ಕೆ ಕಂತುಗಳನ್ನು ಕಟ್ಟುತ್ತಾ ಬೆಲೆ ತೆರಬೇಕು!!

ಐಐಪಿಎಂ
'ಥಿಂಕ್ ಟ್ಯಾಂಕ್'

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .