ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಪ್ರತಿಧ್ವನಿ
ಓದುಗರ ಪತ್ರ
 

ತಾರತಮ್ಯ ಏಕೆ?

'ಉತ್ತರ ಕರ್ನಾಟಕ: ಚದುರಿದ ಚಿತ್ರಗಳು' (ಶಶಿ ಸಂಪಳ್ಳಿ ಮತ್ತು ಬಿ.ಎಸ್. ನಾರಾಯಣ ಸ್ವಾಮಿ) ಮುಖಪುಟ ಲೇಖನ ಕರ್ನಾಟಕದ ಶಾಪಗ್ರಸ್ತ ಭಾಗ ಉತ್ತರ ಕರ್ನಾಟಕದ ವಾಸ್ತವ ಚಿತ್ರಣವನ್ನು ತೆರೆದಿಟ್ಟಿದೆ. ಟಿಎಸ್‌ಐನಲ್ಲಿ ಪ್ರಕಟವಾದ ಬರಹಗಳು ಅಭಿವೃದ್ಧಿಯ ಸೋಂಕೂ ತಗುಲದ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳ ಜನರ ದುಸ್ಥಿತಿಯನ್ನು ಓದುಗರಿಗೆ ವಿವರಿಸಿದ್ದು ಈ ಸಮಸ್ಯೆಗಳು ನಮ್ಮ ರಾಜಕಾರಣಿಗಳಿಗೆ ಏಕೆ ಅರ್ಥವಾಗುತ್ತಿಲ್ಲ ಎಂಬ ಕೊರಗು ಕಾಡುತ್ತಿದೆ. ಲೇಖನದಲ್ಲಿ ಬಳಸಲಾದ ಒಂದೊಂದು ಚಿತ್ರವೂ ಒಂದೊಂದು ಕಥೆಯನ್ನು ಹೇಳುತ್ತಿದ್ದವು. ಕೇವಲ ದಕ್ಷಿಣ ಕರ್ನಾಟಕದ ಅಭಿವೃದ್ಧಿಯತ್ತ ಗಮನ ಹರಿಸುವ ರಾಜಕಾರಣಿಗಳಿಗೆ ಇಲ್ಲಿನ ಜನರ ಸಮಸ್ಯೆ ಎಂದಿಗೂ ಅರ್ಥವಾಗಿಯೇ ಇಲ್ಲ. ಏಕೀ ತಾರತಮ್ಯ ನೀತಿ? ಅಭಿವೃದ್ಧಿ ಎಂದರೆ ಏನು ಎಂದು ಪ್ರಶ್ನಿಸುವ ಮಟ್ಟಕ್ಕೆ ಬಂದಿದ್ದೇವೆ ಎಂದಾದರೆ ಇಲ್ಲಿನ ಪರಿಸ್ಥಿತಿಯನ್ನು ನೀವೇ ಅರ್ಥಮಾಡಿಕೊಳ್ಳಿ. ಜನನಾಯಕರು ಜಾಣ ಕುರುಡು ಪ್ರದರ್ಶಿಸುವುದು ಬಿಟ್ಟು ಇನ್ನಾದರೂ ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಲಿ.

ಆರ್. ಗಂಗರಾಜು
ರಾಯಚೂರು

ಅಭಿವೃದ್ಧಿ ಎಂದರೆ...?

ಕಳೆದ ಬಾರಿಯ ಟಿಎಸ್‌ಐ ಓದುತ್ತಿದ್ದಂತೆ ಉತ್ತರ ಕರ್ನಾಟಕದ ಚದುರಿದ ಬದುಕಿನ ಚಿತ್ರಣ ಮನದ ಮುಂದೆ ಹಾದುಹೋಯಿತು. ನಮ್ಮ ಅಮೂಲ್ಯ ಹಕ್ಕುಗಳನ್ನು ಚಲಾಯಿಸಿದರೆ ಅದಕ್ಕೆ ಸಿಗುವ ಪ್ರತಿಫಲ ಇದೇನಾ? ರಾಜಕೀಯ ನಾಯಕರಿಗೆ ಅಭಿವೃದ್ಧಿ ಪದದ ಅರ್ಥ ತಿಳಿದಿದೆಯೇ? ಇಷ್ಟೆಲ್ಲಾ ಅಭಿವೃದ್ಧಿ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ರಾಜಕೀಯ ಧುರೀಣರು ನಿಜವಾಗಿಯೂ ಜನಸಾಮಾನ್ಯನಿಗೆ ನೀಡಿದ್ದೇನು? ಈ ಪ್ರಶ್ನೆಗಳು ಧುತ್ತನೆ ನನ್ನೊಳಗೆ ಮೂಡಿದ್ದವು. ಹೊಟ್ಟೆ ತುಂಬುವಷ್ಟು ಹೆಂಡ ಸೀರೆ ಖರ್ಚಿಗಿಷ್ಟು ನೋಟು ಕೈಗಿತ್ತು ಮತ ಪಡೆದರೆ ಅಭಿವೃದ್ಧಿಯಾದೀತೇ? ರಾಜಕೀಯ ಪುಂಡಾಟಗಳಿಗೆ ಬಲಿಯಾಗುವುದು ಒಪ್ಪೊತ್ತಿನ ಊಟಕ್ಕೂ ಪರದಾಡುವ ಬಡವರು. ಇದಕ್ಕೆ ನಿದರ್ಶನ ಇತ್ತೀಚೆಗಿನ ಕಳ್ಳಭಟ್ಟಿ ದುರಂತ. ಯಾವುದೇ ಒಬ್ಬ ಮತದಾರ ಮತ ನೀಡುವುದು ಭರವಸೆಗಳನ್ನು ಈಡೇರಿಸುತ್ತಾರೆ ಎನ್ನುವ ಅಚಲ ನಂಬಿಕೆಯಿಂದ. ಆದರೆ ರಾಜಕೀಯ ನಾಯಕರಿಗೆ ಈ ಬಗ್ಗೆ ಯೋಚಿಸುವಷ್ಟು ಸಮಯವಿರುವುದಿಲ್ಲ. 'ಉತ್ತರ ಕರ್ನಾಟಕ: ಚದುರಿದ ಚಿತ್ರಗಳು' ಲೇಖನದ ಮೂಲಕ ಉತ್ತರ ಕರ್ನಾಟಕದ ಜನರ ಬದುಕಿನ ಸಮಸ್ಯೆಗಳ ಒಳಹೊಕ್ಕು ನೋಡುವ ಪ್ರಯತ್ನ ಮಾಡಿದ್ದಕ್ಕೆ ಟಿಎಸ್‌ಐಗೆ ಧನ್ಯವಾದಗಳು.

ಎಸ್.ಎನ್. ಕವಿತಾ
ಮಡಿಕೇರಿ

ಅಚ್ಚರಿಯಾಯಿತು!

'ಉತ್ತರ ಕರ್ನಾಟಕ: ಚದುರಿದ ಚಿತ್ರಗಳು' ರಾಜಕೀಯ ನಾಯಕರ ನಿರ್ಲಕ್ಷ್ಯತೆಗೆ ಹಿಡಿದ ಕನ್ನಡಿ. ಮನಮಿಡಿಯುವ ಛಾಯಾಚಿತ್ರಗಳು ಬಡವರ ಬದುಕನ್ನು ಕಣ್ಣೆದುರು ತಂದಿಟ್ಟವು. ಚುನಾವಣೆ ಬಂದಾಗ ಬಡವರ ಮನೆಗೆ ಬಂದು ಕೈಮುಗಿಯುವ ರಾಜಕೀಯ ಪಕ್ಷಗಳಿಗೆ ಗೆದ್ದ ಬಳಿಕ ಉಳ್ಳವರು ಮಾತ್ರ ಕಾಣುತ್ತಾರೆ. ಬಡವರು ಬಡವರಾಗಿಯೇ ಉಳಿಯುತ್ತಾರೆ. ಉತ್ತರ ಕರ್ನಾಟಕದ ಜನರ ಸ್ಥಿತಿ ಇಷ್ಟೊಂದು ಹದೆಗೆಟ್ಟಿದೆ ಎಂಬುದನ್ನು ಓದಿದಾಗ ನಿಜವಾಗಿಯೂ ಅಚ್ಚರಿ ಕಾಡದೆ ಇರಲಿಲ್ಲ.

ವೈ. ರಾಮಚಂದ್ರ
ತುಮಕೂರು

ಅಭಿವೃದ್ಧಿ ದೂರ?!

'ಉತ್ತರ ಕರ್ನಾಟಕ: ಚದುರಿದ ಚಿತ್ರಗಳು' ಓದಿ ಮನಕರಗಿತು. ದಕ್ಷಿಣ ಭಾರತ ಮತ್ತು ಉತ್ತರ ಕರ್ನಾಟಕವನ್ನು ಹೋಲಿಸಿದರೆ ಉತ್ತರ ಕರ್ನಾಟಕ ಅಭಿವೃದ್ಧಿ ಪಥ ಹಿಡಿಯಲು ಇನ್ನೂ ದೂರವಿದೆ ಎಂದನಿಸುತ್ತದೆ. ಅಂತೂ ಕರ್ನಾಟಕದಲ್ಲಿ ಚುನಾವಣೆ ಮುಗಿದೇಬಿಟ್ಟಿದೆ. ಮತದಾರ ಬಂಧುವಿನಲ್ಲಿ ಒಂದೇ ಒಂದು ಅವಕಾಶ ಕೋರಿದ ಬಿಜೆಪಿ ಕೊನೆಗೂ ಅಧಿಕಾರಕ್ಕೇರಿದೆ. ಈ ಅವಕಾಶದಲ್ಲಿ ತೀರ ಹಿಂದುಳಿದ ಪ್ರದೇಶಗಳತ್ತ ಹೆಚ್ಚು ಗಮನಹರಿಸಲಿ.

ಎಲ್. ಶೇಖರ್
ಹುಬ್ಬಳ್ಳಿ

ವಸ್ತುನಿಷ್ಠರಲ್ಲ ಬುಷ್‌ನಿಷ್ಠರು!

'ದೊಡ್ಡಣ್ಣನ ಪ್ರಜಾಪ್ರಭುತ್ವದ ಸೋಗಿನ ನಡುವೆ ವಸ್ತುನಿಷ್ಠ ಪತ್ರಕರ್ತರ ನಾಪತ್ತೆ' (ಅರಿಂದಮ್ ಚೌಧುರಿ) ಸಂಪಾದಕೀಯ ಅಮೆರಿಕದ ಆಂತರಿಕ ಕಟುಸತ್ಯವನ್ನು ಹೊರಗೆಡವಿದೆ. ದುಷ್ಟ ಕಾರ್ಯಗಳು ಬಹಿರಂಗವಾದರೆ ಬುಷ್ ಸರ್ಕಾರ ವಿಶ್ವಸಂಸ್ಥೆ ಮತ್ತು ಪ್ರಪಂಚದ ಕೆಂಗಣ್ಣಿಗೆ ಗುರಿಯಾಗಬಹುದೆಂಬ ಭಯದಿಂದಲೇ ವಸ್ತುನಿಷ್ಠ ಪತ್ರಕರ್ತರು 'ಬುಷ್ ನಿಷ್ಠ'ರಾಗಿದ್ದಾರೆ. ಪತ್ರಕರ್ತನೊಬ್ಬ 'ಜಾಗತಿಕ ಸೊತ್ತು' ಎಂಬ ಸಾಮಾನ್ಯ ಜ್ಞಾನವನ್ನೂ ಅಮೆರಿಕ ತಿಳಿದಂತಿಲ್ಲ. ಇರಾಕ್ ದಾಳಿ ಸದ್ದಾಂ ಗಲ್ಲು ಅಲ್‌ಜಾಜಿರಾ ವಾಹಿನಿ ಕಾರ್ಯಾಲಯ ಧ್ವಂಸ... ಹೀಗೆ ಕರಾಳ ಸರಮಾಲೆಯನ್ನು ಧರಿಸಿದ ಆ ರಾಷ್ಟ್ರ ಎಷ್ಟರಮಟ್ಟಿಗೆ ದೊಡ್ಡಣ್ಣ? ನನಗನಿಸಿದ ಪ್ರಕಾರ ಅಮೆರಿಕ ತಾನು ಮಾಡುವ ದುಷ್ಟ ಕಾರ್ಯಗಳಿಂದಲೇ ಪ್ರಪಂಚದ ದೊಡ್ಡಣ್ಣ! ಪತ್ರಕರ್ತರು ಅಮೆರಿಕದ ಗುಲಾಮರಲ್ಲ. ಈ ಪ್ರವೃತ್ತಿಯನ್ನು ಅಮೆರಿಕದ ಎಲ್ಲಾ ಪತ್ರಿಕೆಗಳು ಸಾಮೂಹಿಕವಾಗಿ ಖಂಡಿಸಬೇಕಿದೆ. ಇಲ್ಲದೆ ಹೋದಲ್ಲಿ ಆ ದೇಶದ ಕರಾಳ ಅವನತಿಗೆ ಪತ್ರಿಕೆಗಳೇ ಪರೋಕ್ಷ ಮುನ್ನುಡಿ ಬರೆದಂತಾದೀತು.

ಸಂತೋಷ ಕೃ ಪಾಟೀಲ
ಗೋಕಾಕ

ಕಠಿಣ ಶಿಕ್ಷೆ ಅಗತ್ಯ

'ಜೈಪುರ ಸ್ಫೋಟ: 'ಪಿಂಕ್ ಸಿಟಿ'ಯಲ್ಲಿ ರಕ್ತದೋಕುಳಿ' (ರಾಜನ್ ಪ್ರಕಾಶ್) ಲೇಖನ ಓದಿದಾಗ ನನಗನಿಸಿದ್ದು. ನಮ್ಮಲ್ಲೂ ಆಗಾಗ ಇಂಥ ಭಯೋತ್ಪಾದನಾ ಕೃತ್ಯಗಳು ನಡೆಯುತ್ತವೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಕೊಟ್ಟು ತನಿಖೆಗೆ ಆದೇಶ ನೀಡಿ ಕೈ ತೊಳೆದುಕೊಂಡು ಸುಮ್ಮನಿರುತ್ತವೆ. ನಂತರ ಸರ್ಕಾರ ಮಾತ್ರವಲ್ಲ ಸಾರ್ವಜನಿಕರೂ ಅದನ್ನು ಮರೆತುಬಿಡುತ್ತಾರೆ. ತೀವ್ರ ತನಿಖೆ ನಡೆಸಿ ಭಯೋತ್ಪಾದಕರನ್ನು ಬಂಧಿಸಿದಾಗ ಶಿಕ್ಷೆ ವಿಧಿಸಿದಾಗ ಮಾನವ ಹಕ್ಕುಗಳ ಪ್ರತಿಪಾದಕರು ಬುದ್ಧಿಜೀವಿಗಳು ಪ್ರಗತಿಪರರು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಾರೆ. ಇದರಿಂದ ಭಯೋತ್ಪಾದನೆ ಮೂಲೋಚ್ಛಾಟನೆ ಸಾಧ್ಯವೇ ಆಗುತ್ತಿಲ್ಲ. ಭಯೋತ್ಪಾದಕರನ್ನು ಉಗ್ರ ಶಿಕ್ಷೆಗೆ ಗುರಿಪಡಿಸಿದಲ್ಲಿ ಮಾತ್ರ ರಾಷ್ಟ್ರದ ಅಸ್ತಿತ್ವ ಮತ್ತು ಭದ್ರತೆ ಕಾಯ್ದುಕೊಳ್ಳಲು ಸಾಧ್ಯವಾದೀತು.

ರೇ.ಚ. ರೇವಡಿಗಾರ
ಸಿಂಧಗಿ

ಮಾರಣಹೋಮ

ಬಹುಶಃ ಭಾರತದಲ್ಲಿ ಭಯೋತ್ಪಾದಕರ ಮೇಲಾಟಕ್ಕೆ ಕೊನೆಯೆಂಬುದಿಲ್ಲ ಎಂದು ಕಾಣುತ್ತಿದೆ. ದಿನದಿಂದ ದಿನಕ್ಕೆ ಭಯೋತ್ಪಾದಕರು ಬೆಂಕಿ ಉಗುಳುತ್ತಿರುವುದನ್ನು ಕಂಡಾಗಲೇ ಭಯವಾಗುತ್ತಿದೆ. ಇತ್ತೀಚಿನ ಜೈಪುರ ಸ್ಫೋಟದಲ್ಲೂ ನೂರಾರು ಮಂದಿ ಸಾವಿಗೀಡಾಗಿದ್ದು ಅಮಾಯಕರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ರಕ್ಷಣಾ ವೈಫಲ್ಯ ಮತ್ತೊಮ್ಮೆ ಸಾಬೀತಾಗಿದೆ. ಜಿಹಾದ್ ಹೆಸರಲ್ಲಿ ಇಂದು ಮಾರಣಹೋಮವಾಗುತ್ತಿದೆಯೇ ವಿನಃ ಬೇರೇನೂ ಅಲ್ಲ. ನಿಜ ಹೇಳಬೇಕೆಂದರೆ ಇದಕ್ಕೆಲ್ಲಾ ಮೂಲ ಕಾರಣ ಮೂಲಭೂತವಾದಿಗಳು. ಅವರು ತಮ್ಮ ಮನೋಧರ್ಮವನ್ನು ಬದಲಿಸುವವರೆಗೆ ಭಯೋತ್ಪಾದಕರ ಕಾಟಕ್ಕೆ ಕೊನೆಯಿಲ್ಲ ಎಂಬುದಂತೂ ನಿಜ.

ಎಂ. ಶ್ಯಾಮ್ ಪ್ರಸಾದ್

ಮೈಸೂರು

ಇದು ಉದ್ಯಮವಲ್ಲ

'ರಾಹುಲ್ ದ್ರಾವಿಡ್‌ಗೆ ಮದ್ಯದ ದೊರೆಯ ಕಾರ್ಪೋರೇಟ್ ಪಾಠ' (ಸತೀಶ್ ಚಪ್ಪರಿಕೆ) ಲೇಖನದಲ್ಲಿ ಚರ್ಚಿಸಿದ ಅಂಶಗಳು ಸಮರ್ಪಕವಾಗಿವೆ. ಕ್ರಿಕೆಟ್ ಎಂಬುದು ಕಾರ್ಪೋರೇಟ್ ಕಚೇರಿಯೊಂದರ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕಾರ್ಯ ನಿರ್ವಹಿಸಿದಂತಲ್ಲ ಎಂಬುದನ್ನು ಮದ್ಯದ ದೊರೆ ವಿಜಯ್ ಮಲ್ಯ ಅರ್ಥ ಮಾಡಿಕೊಳ್ಳಬೇಕು. ಏನು ಹೇಳಬೇಕಿದ್ದರೂ ಆಟಗಾರರ ಮನೋಸ್ಥಿತಿಯನ್ನು ಅರಿತುಕೊಳ್ಳಬೇಕು. ತನ್ನ ಐಪಿಎಲ್ ತಂಡ ಸಮರ್ಥ ಪ್ರದರ್ಶನ ನೀಡಿಲ್ಲ ಎಂಬ ಮಾತ್ರಕ್ಕೆ ಬಹಿರಂಗ ಟೀಕೆ ಮಾಡುವುದು ಶೋಭೆ ತರುವುದಿಲ್ಲ. ಇದನ್ನು ಮಲ್ಯ ಅರಿತುಕೊಳ್ಳಬೇಕು. ದ್ರಾವಿಡ್ ಅವರ ಸಾಮರ್ಥ್ಯ ಇಡೀ ಲೋಕಕ್ಕೆ ತಿಳಿದಿದೆ ಎಂಬುದು ಬಹುಶಃ ಮಲ್ಯ ಅವರಿಗೆ ತಿಳಿದಿಲ್ಲವೇನೋ?

ಸೊಹೇಲ್ ಅಬ್ಬಾಸ್
ಬೆಂಗಳೂರು

ಹೊಸ ಮುನ್ನುಡಿ

ವಾಸುದೇವ ನಾಡಿಗರ 'ಭರವಸೆ ಹುಟ್ಟಿಸುವ ಭವದ ಹಕ್ಕಿ' (ಜಿ.ಎನ್. ರಂಗನಾಥ ರಾವ್) ವಿಮರ್ಶೆ ಓದಿದೆ. ಬಹುಶಃ ಪ್ರಸ್ತುತ ಭರವಸೆ ಹುಟ್ಟಿಸುವ ಕವನಗಳು ಕಡಿಮೆಯಾಗುತ್ತಿವೆ. ಇಂಥ ಸಂದರ್ಭದಲ್ಲಿ '...ಭವದ ಹಕ್ಕಿ' ಕನ್ನಡ ಕಾವ್ಯ

ಪರಂಪರೆಗೆ ಹೊಸ ಮುನ್ನುಡಿ ಬರೆಯಲು ಹೊರಟಿದೆ ಎಂದೆನಿಸಿದರೆ ತಪ್ಪಾಗಲಾರದು. 'ಹೆದ್ದಾರಿಗಳು ನಿದ್ರಿಸುವುದಿಲ್ಲ ಥೇಟ್ ಬುದ್ಧ ಬಸವ ಗಾಂಧಿಯ ತರಹ' ಈ ಸಾಲು ಎಷ್ಟೊಂದು ಅರ್ಥಪೂರ್ಣವಾಗಿದೆ. ಹೌದು! ಮೌಲ್ಯ ಆದರ್ಶಗಳು ಮಣ್ಣುಗೂಡಿವೆ ಎಂದು ಬೊಬ್ಬಿಡುವವರು ಈ ಮಾತನ್ನು ಅರ್ಥಮಾಡಿಕೊಳ್ಳಬೇಕು. ಮೌಲ್ಯ ಆದರ್ಶಗಳು ಇನ್ನೂ ಜೀವಂತವಾಗಿವೆ ಅವನ್ನು ಉಳಿಸಿ ಬೆಳೆಸಬೇಕು ಅಲ್ಲವೇ? ಭರವಸೆ ಹುಟ್ಟಿಸುವ ಇನ್ನಷ್ಟು ಕಾವ್ಯ ಲಹರಿಗಳು ಹರಿದುಬರಲಿ ಎಂಬುದು ನಮ್ಮ ಆಶಯ.

ಕಾವ್ಯ ಶ್ರೀನಿವಾಸ್
ಬೆಂಗಳೂರು

ಬಹುಮಾನಿತ ಪತ್ರಗಳು

ವಾಲ್‌ಮಾರ್ಟ್ ಅಪಾಯಕಾರಿ?

'ಚಿಲ್ಲರೆ ವ್ಯಾಪಾರ ಭವಿಷ್ಯ' (ಪ್ರಸೂನ್ ಮಜುಂದಾರ್) ಅಂಕಣದಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆದಿಟ್ಟರೆ ಸಾಮಾಜಿಕ ಮತ್ತು ಆರ್ಥಿಕ ಕುಸಿತ ಎದುರಿಸಬೇಕಾದೀತು ಎನ್ನುವ ಕಳವಳ ನೂರಕ್ಕೆ ನೂರರಷ್ಟು ಸತ್ಯ. ಹೌದು! ವಾಲ್-ಮಾರ್ಟ್‌ಗೆ ಭಾರತ 'ಚಿನ್ನದ ಗಣಿ'. ಆದರೆ ಭಾರತೀಯರಿಗೆ ಈ ವಾಲ್‌ಮಾರ್ಟ್ ಉತ್ತಮ ಅವಕಾಶವೇ ಎಂಬುದನ್ನೂ ಯೋಚಿಸಬೇಕಿದೆ. ಅಮೆರಿಕ ವಾಲ್ ಮಾರ್ಟ್‌ನ ತವರು. ಆದರೆ ಇಲ್ಲಿಯೂ ವಾಲ್‌ಮಾರ್ಟ್‌ನ ನೌಕರರು ಮತ್ತು ಜನವಿರೋಧಿ ನೀತಿಗಳಿಂದಾಗಿ ತೀವ್ರ ವಿರೋಧ ವ್ಯಕ್ತವಾಗಿದೆ. ಬಾಲಕಾರ್ಮಿಕರನ್ನು ಅತೀ ಕಡಿಮೆ ವೇತನ ನೀಡಿ ದುಡಿಸುವುದು ಮತ್ತು ತಾರತಮ್ಯ ನೀತಿ ಅನುಸರಿಸುತ್ತಿರುವುದನ್ನು ಜನರು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಇದೇ ಧೋರಣೆ ಇಟ್ಟುಕೊಂಡು ಅದು ಭಾರತಕ್ಕೂ ಲಗ್ಗೆಯಿಟ್ಟರೆ? ಒಂದು ವೇಳೆ ವಾಲ್‌ಮಾರ್ಟ್ ಭಾರತಕ್ಕೆ ಪ್ರವೇಶಿಸಿದರೆ ಮಧ್ಯಮ ವರ್ಗದ ಉದ್ಯಮ ವಲಯಕ್ಕೆ ಅಪಾಯದ ಕರೆಗಂಟೆಯಾಗುವುದರಲ್ಲಿ ಎಳ್ಳಷ್ಟು ಅನುಮಾನವಿಲ್ಲ. ನೌಕರರ ಸುರಕ್ಷತೆ ವಿಚಾರದಲ್ಲಿಯೂ ವಾಲ್‌ಮಾರ್ಟ್ ಕಾನೂನು ಉಲ್ಲಂಘನೆ ಮಾಡುತ್ತಿದೆ. ಒಟ್ಟಾರೆಯಾಗಿ ವಾಲ್‌ಮಾರ್ಟ್‌ನಂತಹ ಸಂಸ್ಥೆಗಳು ನಮ್ಮ ಜೀವನ, ಜೀವನೋಪಾಯ ಮತ್ತು ಉದ್ಯೋಗವಕಾಶಗಳ ಮೇಲೆ ತೀವ್ರ ಪರಿಣಾಮ ಬೀರಲಿವೆ.

ನೀಲಂ ಪಹ್ವಾ
ಪುಣೆ

ಪ್ರಕ್ಷುಬ್ಧ ಸ್ಥಿತಿ

ಕಾಂಗ್ರೆಸ್ ಒಂದು ಕಹಿ ಸತ್ಯವನ್ನು ಒಪ್ಪಿಕೊಳ್ಳಲೇಬೇಕಾಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆಡಳಿತಕ್ಕೆ ಬಂದು 4 ವರ್ಷಗಳೇ ಸರಿದಿವೆ. ಆದರೆ ಸರ್ಕಾರದ ಆರ್ಥಿಕ ಮತ್ತು ವಿದೇಶಿ ನೀತಿಗಳಿಗೂ ಹಿಂದಿನ ಎನ್‌ಡಿಎ ಸರ್ಕಾರಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಯುಪಿಎ ಹಿಂದಿನ ಆಡಳಿತ ಸರ್ಕಾರ ಅನುಸರಿಸಿದ ಕಾರ್ಯವಿಧಾನಗಳ ಹಾದಿಯನ್ನೇ ಹಿಡಿದಿದೆ ವಿನಃ ಯಾವುದೇ ಹೊಸ ಚಿಂತನೆ ಮಾಡಿಲ್ಲ. ಸರ್ಕಾರ ನಡೆದು ಬಂದ 4 ವರ್ಷಗಳನ್ನು 'ಅಲಕ್ಷ್ಯ ಮತ್ತು ಮಾರಕ' ಎಂದು ಹೇಳಿದರೆ ತಪ್ಪಾಗದು. ಯುಪಿಎ ಸರ್ಕಾರ ಹಣದುಬ್ಬರ (ಶೇ. 7.8ರಷ್ಟು ಏರಿಕೆ), ಕೃಷಿ ವಿಷಮಸ್ಥಿತಿಯಿಂದಾಗಿ ಆತ್ಮಹತ್ಯೆಗೆ ಶರಣಾದ ರೈತರು, ಕೈಗಾರಿಕಾ ಉತ್ಪನ್ನಗಳ ಇಳಿಕೆ (ಶೇ. 3ರಷ್ಟು ಇಳಿಕೆ) ಮೊದಲಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ. ಖಂಡಿತವಾಗಿಯೂ ಯುಪಿಎ ಪ್ರಕ್ಷುಬ್ಧ ಸ್ಥಿತಿಯಲ್ಲಿದೆ ಮತ್ತು ಯುಪಿಎ 'ಉಪೇಕ್ಷಿಸಿದ ಭರವಸೆ'ಗಳನ್ನು ದೀರ್ಘಕಾಲದ ವಿರೋಧ ಪಕ್ಷ ಬಿಜೆಪಿ ಟೀಕಿಸುತ್ತಿದೆ.

ವಿನಯ್ ಸಚ್‌ದೇವ
(ಇ-ಮೇಲ್ ಮೂಲಕ)

ಸರ್ಕಾರದ ವೈಫಲ್ಯ

'ಜೈಪುರ ಸ್ಫೋಟ: 'ಪಿಂಕ್ ಸಿಟಿ'ಯಲ್ಲಿ ರಕ್ತದೋಕುಳಿ' (ರಾಜನ್ ಪ್ರಕಾಶ್) ಲೇಖನಕ್ಕೆ ಈ ಪ್ರತಿಕ್ರಿಯೆ. ಭಾರತದಲ್ಲಿ ಸರಣಿ ಬಾಂಬ್ ಸ್ಫೋಟ ತೀರ ಸಾಮಾನ್ಯ ಸಂಗತಿ. ಎಷ್ಟರಮಟ್ಟಿಗೆ ಎಂದರೆ ಬಾಂಬ್ ಸ್ಫೋಟವಾದರೆ ಜನರು, ರಾಜಕಾರಣಿಗಳು ಅಥವಾ ಮಾಧ್ಯಮಗಳಿಗೇ ಆಗಲಿ ಎರಡು ದಿನಗಳಿಗಿಂತ ಹೆಚ್ಚು ನೆನಪಿನಲ್ಲಿರುವುದಿಲ್ಲ. ನಿಜ ಹೇಳಬೇಕೆಂದರೆ ಜೈಪುರದ ಈ ಘೋರಕೃತ್ಯ ಭಯೋತ್ಪಾದಕರ ಕಲ್ಲೆದೆಗೆ ಉತ್ತಮ ಉದಾಹರಣೆ. ಹೈದರಾಬಾದ್, ಅಜ್ಮೀರ್, ವಾರಣಾಸಿ ಮತ್ತು ಲಖನೌ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ನಡೆದ ತನಿಖೆಗಳಿಂದ ಫಲಿತಾಂಶ ಬಂದಿಲ್ಲ. ಭಯೋತ್ಪಾದಕರ ಕುರಿತಾಗಿ ಸರ್ಕಾರದ ಮೃದು ಧೋರಣೆ ಮತ್ತು ವೈಫಲ್ಯ ಈ ಕುಕೃತ್ಯಗಳಿಗೆ ಇನ್ನಷ್ಟು ಉತ್ತೇಜನ ನೀಡುತ್ತಿದೆ. ಭಯೋತ್ಪಾದನೆ ಮತ್ತು ನಕ್ಸಲಿಸಂ ಹಿಂಸೆಯ ವಿರುದ್ಧ ಹೋರಾಡಬೇಕಾಗಿರುವುದು ಈಗಿನ ತುರ್ತು. ಹೀಗೆಯೇ ಮೌನ ವೀಕ್ಷಕರಾದರೆ, ತಿಂಗಳಿಗೊಂದು ಸರಣಿ ಬಾಂಬ್ ಸ್ಫೋಟ, ನಂತರ ವಾರಕ್ಕೊಂದು ಹೀಗೆ ಮುಂದುವರಿಯುತ್ತಲೇ ಇರುವ ಸಾಧ್ಯತೆ ಇದೆ.

ಪ್ರಮೀಳಾ ರಾಣಾವತ್
ಜೋಧ್‌ಪುರ್

ಸೃಜನಾತ್ಮಕ ಪತ್ರಿಕೆ

'ದೊಡ್ಡಣ್ಣನ ಪ್ರಜಾಪ್ರಭುತ್ವದ ಸೋಗಿನ ನಡುವೆ ವಸ್ತುನಿಷ್ಠ ಪತ್ರಕರ್ತರ ನಾಪತ್ತೆ' (ಅರಿಂದಮ್ ಚೌಧುರಿ) ಸಂಪಾದಕೀಯ ಚಿಂತನೆಗೆ ಹಚ್ಚಿತು. ಹಾಗೆಯೇ 'ಉತ್ತರ ಕರ್ನಾಟಕ: ಚದುರಿದ ಚಿತ್ರಗಳು' ಮರೆತು ಹೋಗಿರುವ ಜನನಾಯಕರಿಗೆ ಮರುಹುಟ್ಟು ನೀಡಿದೆ. ಐಶ್ವರ್ಯಾ ರೈ ಕಾಲಿಗೆ ಮುಳ್ಳು ಚುಚ್ಚಿದರೆ ಮುಖಪುಟದಲ್ಲಿ ದೊಡ್ಡ ಸುದ್ದಿಯಾಗುತ್ತದೆ. ಆದರೆ ರೈತರ ಆತ್ಮಹತ್ಯೆ ಅಣು ಒಪ್ಪಂದ ಬಡತನ ಮುಂತಾದ ಮಹಾ ಸಮಸ್ಯೆಗಳು ಮಾಧ್ಯಮಗಳಿಗೆ ದೊಡ್ಡ ಸುದ್ದಿಯೇ ಅಲ್ಲ. ಸ್ಥಳೀಯ ಮಾತ್ರವಲ್ಲ ಜಾಗತಿಕ ಮಟ್ಟದಲ್ಲೂ ಇದೇ ಸ್ಥಿತಿ. ಅದೇ ರೀತಿ ಜೈಪುರ ಬಾಂಬ್ ಸ್ಫೋಟ ಬಗ್ಗೆ ಉತ್ತಮ ಮಾಹಿತಿ ಇತ್ತಾದರೂ ಒಳನೋಟಗಳಿರಲಿಲ್ಲ. ಟಿಎಸ್‌ಐ ಬಹಳ ಸೃಜನಾತ್ಮಕವಾಗಿ ಹೊರ ಬರುತ್ತಿದೆ. ಇದು ಹೀಗೆಯೇ ಎಲ್ಲರಿಗೂ ಉಪಯುಕ್ತ ಪತ್ರಿಕೆ ಎನಿಸಲಿ ಎಂಬುದೇ ನಮ್ಮ ಪ್ರಾರ್ಥನೆ.

ಶೌಕತ್ ಆಲಿ
(ಇ-ಮೇಲ್ ಮೂಲಕ)

ಭಾವನೆಗಳಿಗೆ ಧಕ್ಕೆಯಾಗದಿರಲಿ

'ಹುಸೇನ್ ಆಗಮನದ ನಿರೀಕ್ಷೆ' (ಮಲಿಕ್ ರಶೀದ್ ಫೈಸಲ್) ಲೇಖನ ಓದಿದೆ. ದೆಹಲಿ ಹೈಕೋರ್ಟ್ ಎಂ.ಎಫ್. ಹುಸೇನ್ ತವರಿಗೆ ಮರಳಲು ಅರ್ಹರು ಎಂಬ ಹೇಳಿಕೆ ನೀಡಿರುವುದು ಸ್ವಾಗತಾರ್ಹವೇ. ಆದರೆ ಕಲಾಲೋಕದ ಜೀವಂತ ದಂತಕಥೆ ಹುಸೇನ್ ತನ್ನ ಕಲಾಪ್ರತಿಭೆಯನ್ನು ಪ್ರಚುರಪಡಿಸುವ ಉದ್ದೇಶದಿಂದ ಭಾರತೀಯರ ಭಾವನೆಗಳಿಗೆ ಘಾಸಿಗೊಳಿಸದಿರಲಿ. ಪ್ರಾಚೀನ ಚಿತ್ರಕಲೆಗಳಲ್ಲಿ ಲೈಂಗಿಕತೆಯನ್ನು ಚಿತ್ರಿಸಲಾಗುತ್ತಿತ್ತು. ಆದರೆ ಈ ಮಾತು ಪ್ರಸ್ತುತ ಎಂದೆನಿಸುತ್ತಿಲ್ಲ. ಕಾಲ ಬದಲಾಗಿದೆ ಎನ್ನುವುದನ್ನೂ ನೆನಪಲ್ಲಿಟ್ಟಿರಬೇಕು. ಭಾರತಮಾತೆಯ ಅಶ್ಲೀಲ ಕಲಾಕೃತಿ ಬಿಡಿಸಿದ ಇವರು ನಂತರ ಕ್ಷಮೆ ಯಾಚಿಸಿದ್ದು ಶ್ಲಾಘನೀಯ. ದೇಶದ ಅದ್ಭುತ ಕಲಾಪ್ರತಿಭೆ ಮತ್ತೆ ತವರಿಗೆ ಮರಳಲಿ ಎನ್ನುವುದು ನನ್ನ ಆಶಯ.

ಮಹಮ್ಮದ್ ಆಸಿಫ್
(ಇ-ಮೇಲ್ ಮೂಲಕ)

ವಲಸಿಗರ ನಾಡು

ಪ್ರತಿ ಬಾರಿ ಬಿಚ್ಚುಮಾತು ಅಂಕಣವನ್ನು ತಪ್ಪದೆ ಓದುತ್ತೇನೆ. ಈ ಬಾರಿಯ 'ಚಿನಕುರುಳಿ ಚೆಲುವೆ ಜೆನ್ನಿ' (ಡಿ.ಎಸ್.ಶ್ರೀಕಲಾ) ಲೇಖನ ಚೆನ್ನಾಗಿತ್ತು. ಕನ್ನಡ ಚಿತ್ರೋದ್ಯಮ ಇಂದು ವಲಸಿಗರ ಕ್ಷೇತ್ರವಾಗಿದೆ. ನಟಿಯರು ಕನ್ನಡದಲ್ಲಿ ಪದಾರ್ಪಣೆ ಮಾಡಿ ಬಳಿಕ ಇತರ ಭಾಷೆಗಳಿಗೆ ಹಾರುತ್ತಾರೆ. ಜೆನಿಫರ್‌ನಂತಹ ಅಕರ್ಷಕ ನಟಿ ಕನ್ನಡಕ್ಕೆ ಬೇಕಿತ್ತು. ಆಕೆ ಕನ್ನಡದಲ್ಲೇ ನೆಲೆ ನಿಲ್ಲಲಿ ಎಂದು ಆಶಿಸೋಣ.

94800*****

ಚಕ್ ದೇ..

'ಎಲ್ಲಿ ನೋಡಿದರೂ ಕ್ರಿಕೆಟ್, ಕ್ರಿಕೆಟ್. ಇನ್ನೇನು ಅಂಬೆಗಾಲಿಕ್ಕುವ ಪುಟ್ಟ ಮಗು ಜೊತೆ ಕ್ರಿಕೆಟ್ ಬಗ್ಗೆ ಕೇಳಿದರೆ ಪಟ ಪಟನೆ ಉತ್ತರಿಸುವ ಸಾಮರ್ಥ್ಯ ಅದಕ್ಕಿದೆ. ಕ್ರಿಕೆಟ್ ತಂಡದ ಬಗ್ಗೆ ಕೇಳಿದರೆ ಎಲ್ಲಾ ಸದಸ್ಯರ ಹೆಸರನ್ನೂ ಹೇಳುತ್ತದೆ. ಅದೇ ಮಗುವಿನಲ್ಲಿ ಹಾಕಿ ಬಗ್ಗೆ ಕೇಳಿದರೆ? ಒಂಚೂರು ಗೊತ್ತಿರುವುದಿಲ್ಲ. ಹೌದು! ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ ಹೆಸರಿಗೆ ಮಾತ್ರ 'ರಾಷ್ಟ್ರೀಯ ಕ್ರೀಡೆ'ಯಾಗಿರುವುದು ನೋವಿನ ಸಂಗತಿ. ಅಧೋಗತಿಯತ್ತ ಸಾಗುತ್ತಿರುವ ಈ ಕ್ರೀಡೆಗೆ ಹಾಕಿ ಫೆಡರೇಷನ್ ಕೂಡ ಸಹಕರಿಸುತ್ತಿರುವುದು ದುರಂತವೇ ಸರಿ. ಇಂತಹ ಸನ್ನಿವೇಶದಲ್ಲಿ ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆಯ ಕೊಡವ ಕುಟುಂಬಗಳು ಕಳೆದ 12 ವರ್ಷದಿಂದ ಹಮ್ಮಿಕೊಳ್ಳುತ್ತಿರುವ ಹಾಕಿ ಟೂರ್ನಿ ಶ್ಲಾಘನೀಯ. ಅದೂ 30,000 ಪ್ರೇಕ್ಷಕರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ ಎಂದರೆ ನಿಜಕ್ಕೂ ಚಕ್ ದೇ... ಅನ್ನಲೇಬೇಕಾದ ವಿಚಾರ. ರಾಷ್ಟ್ರೀಯ ಕ್ರೀಡೆಯನ್ನು ಉಳಿಸಿ ಬೆಳೆಸಬೇಕಾದಲ್ಲಿ ಇಂತಹ ಟೂರ್ನಿಗಳು ಅನಿವಾರ್ಯ.

ಎಂ. ಇರ್ಷಾದ್
ವೇಣೂರು (ಇ-ಮೇಲ್ ಮೂಲಕ)

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .