ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 

ಕಾವೇರಿತು ಕಾರುಬಾರು ಚುನಾವಣೆ ಮೇಲೆ ಗುಜ್ಜರ್ ಕಣ್ಣು

 

ಮೀಸಲಾತಿ ಮತ್ತು ರಾಜಸ್ತಾನ ವಿಧಾನಸಭಾ ಚುನಾವಣೆ ನಡುವೆ ಅವಿನಾಭಾವ ಸಂಬಂಧ

ರಾಜಸ್ತಾನದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಾತಿ ರಾಜಕೀಯ ಹಾಗೂ ಮೀಸಲಾತಿ ನಾಟಕದ ಗತಿ ತೀವ್ರವಾಗುತ್ತವೆ. 2004ರ ವಿಧಾನಸಭೆ ಚುನಾವಣೆಗಿಂತ ಮೊದಲು ಜಾಟ್ ಜನಾಂಗದವರು ಅವರನ್ನು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ಸೇರಿಸುವಂತೆ ಒತ್ತಾಯ ಮಾಡಿದ್ದರು. ಅಷ್ಟರೊಳಗೆ ಅವರು ಕೇಂದ್ರ ಸರ್ಕಾರ ಪ್ರಕಟಿಸಿದ್ದ ಒಬಿಸಿ ಪಟ್ಟಿಯಲ್ಲಿ ಸ್ಥಾನಗಳಿಸಿದ್ದರು. ರಾಜ್ಯದಲ್ಲಿ ಕೂಡ ನಮಗೆ ಅದೇ ಸ್ಥಾನಮಾನ ನೀಡಿ ಎಂದು ಬೀದಿಗಿಳಿದಿದ್ದರು. ಅದರ ಪರಿಣಾಮವಾಗಿ ಆಗ ರಾಜಸ್ತಾನ ವಿಧಾನಸಭಾ ಚುನಾವಣೆಯ ಗತಿಯೇ ಬದಲಾಗಿ ಬಿಟ್ಟಿತ್ತು. ಈಗ ಅವರ ಸ್ಥಾನದಲ್ಲಿ ಗುಜ್ಜರ್ ಜನಾಂಗದವರು ಬಂದು ನಿಂತಿದ್ದಾರೆ. ಇನ್ನೇನು ವಸುಂಧರ ರಾಜೇ 2009ರ ಚುನಾವಣೆಗೆ ಸಿದ್ಧವಾಗಬೇಕು ಎಂದುಕೊಳ್ಳುತ್ತಿರುವಾಗಲೇ ಗುಜ್ಜರ್ ಪ್ರತಿಭಟನೆ ಮತ್ತೆ ಗಗನವನ್ನು ಚುಂಬಿಸಿದೆ.

'ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ' ಎಂದು ಗುಜ್ಜರ್ ಜನಾಂಗದವರು ಕಳೆದ ವಾರದ ಮೊದಲ ಭಾಗದಲ್ಲಿ ರಾಜಸ್ತಾನದೆಲ್ಲೆಡೆ ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪವನ್ನು ತಾಳಿದೆ. 2007ರ ಮೇ ತಿಂಗಳಲ್ಲಿ ಉತ್ತರ ಭಾರತದಾದ್ಯಂತ ಗುಜ್ಜರ್ ಜನಾಂಗ ನಡೆಸಿದ ಪ್ರತಿಭಟನೆಯ ಸಮಯದಲ್ಲಿ 21 ಜನರು ಸಾವೀಗಿಡಾಗಿದ್ದರು. ಈ ಬಾರಿ ಪ್ರತಿಭಟನೆ ರಾಜಸ್ತಾನಕ್ಕೆ ಮೀಸಲಾಗಿದ್ದರೂ, ಅಧಿಕೃತ ಮಾಹಿತಿ ಮೇರೆಗೆ ಈಗಾಗಲೇ 60ಕ್ಕಿಂತಲೂ ಹೆಚ್ಚು ಮಂದಿ ಹಿಂಸೆಗೆ ಬಲಿಯಾಗಿದ್ದಾರೆ.

ಗುಜ್ಜರ್ ಜನಾಂಗದವರಿಗೆ ಮೀಸಲಾತಿ ನೀಡಿ ಎಂದು ರಾಜಸ್ತಾನ ಮುಖ್ಯಮಂತ್ರಿ ವಸುಂಧರ ರಾಜೇ ಸಿಂಧಿಯ ಅವರು ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಇದರಿಂದ ಗುಜ್ಜರ್ ಜನರು ಮತ್ತಷ್ಟು ಕುಪಿತಗೊಂಡಿದ್ದಾರೆ. "ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಿಷಯವನ್ನು ಸಂಪೂರ್ಣವಾಗಿ ಚರ್ಚಿಸಿ ನಂತರ ಅದನ್ನು ಅಧಿಕೃತವಾಗಿ ಕೇಂದ್ರ ಸರ್ಕಾರಕ್ಕೆ ರವಾನಿಸಬೇಕಿತ್ತು. ಅದನ್ನು ಬಿಟ್ಟು ನೇರವಾಗಿ ಪ್ರಧಾನ ಮಂತ್ರಿ ಅವರಿಗೆ ಪತ್ರ ಬರೆದರೆ ಪ್ರಯೋಜನ ಇಲ್ಲ" ಎಂದು ಗುಜ್ಜರ್ ಸಂಘಟನೆಯೊಂದರ ವಕ್ತಾರ ರೂಪ್ ಸಿಂಗ್ ಹೇಳಿದ್ದಾರೆ.

1871ರಲ್ಲಿ ಬ್ರಿಟಿಷರು ಗುಜ್ಜರ್ ಜನಾಂಗದವರನ್ನು ಬುಡಕಟ್ಟು ಜನಾಂಗದ ಪಟ್ಟಿಗೆ ಸೇರಿದ್ದರು. ಅದೊಂದು ಅಪಾಯಕಾರಿ ನಡೆಯಾಗಿತ್ತು ಎಂದು ಈಗ ಸಾಬೀತಾಗಿದೆ. ಒಮ್ಮೆ ಕೇಂದ್ರ ಹಾಗೂ ರಾಜ್ಯ ಗುಜ್ಜರ್ ಜನಾಂಗಕ್ಕೆ ಇತರೆ ಹಿಂದುಳಿದ ವರ್ಗದ ಹಣೆಪಟ್ಟಿ ಹಚ್ಚಿದವು ಎಂದಾದ ಕೂಡಲೇ ಇಂತಹುದೇ ಆರ್ಥಿಕವಾಗಿ ಮುಂದುವರಿದ ಎಲ್ಲ ಜನಾಂಗಗಳು ಅವುಗಳ ಹಕ್ಕು ಮಂಡನೆ ಮಾಡಲು ಪ್ರಾರಂಭಿಸುತ್ತವೆ. ಕಳೆದ ಸುಮಾರು 2 ವರ್ಷಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಲೇ ಬಂದಿರುವ ಗುಜ್ಜರ್ ಜನಾಂಗ ಇದುವರೆಗೆ ಬೇಡಿಕೆ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ.

ಆ ಹಿನ್ನಲೆಯಲ್ಲಿಯೇ ಪ್ರತಿಭಟನೆಯನ್ನು ಗುಜ್ಜರ್ ಪಡೆ ವ್ಯಾಪಕಗೊಳಿಸಿದ ಪರಿಣಾಮ ರಾಜಧಾನಿ ದೆಹಲಿ ಮೇಲೂ ಆಗಿದೆ. ರಾಜಧಾನಿಗೆ ಬರುವ ಹಾಲು, ತರಕಾರಿಯನ್ನು ತಡೆಯುವ ಮೂಲಕ ಬಿಸಿ ಮುಟ್ಟಿಸುವ ಯತ್ನವನ್ನು ಗುಜ್ಜರ್ ಪಡೆ ಮಾಡಲಾರಂಭಿಸಿದೆ. ಒಟ್ಟಾರೆ ರಾಜಸ್ತಾನದೆಲ್ಲೆಡೆ ಸಂಚಾರ ಅಸ್ತವ್ಯಸ್ತವಾಗುವಷ್ಟರ ಮಟ್ಟಿಗೆ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಈ ನಡುವೆ ಪ್ರಧಾನ ಮಂತ್ರಿಗಳ ಸಚಿವಾಲಯ ವಸುಂಧರ ರಾಜೇ ಅವರ ಪತ್ರವನ್ನು ಕೇಂದ್ರ ಸಂಪುಟದ ಮುಂದೆ ಇಡುವ ನಿರ್ಧಾರ ಮಾಡಿದೆ. ದುರಂತವೆಂದರೆ ಇಂತಹ ಭಾರಿ ಪ್ರತಿಭಟನೆಯೊಂದು ಪ್ರಾರಂಭವಾದಾಗ ಅದನ್ನು ಆರಂಭದಲ್ಲಿಯೇ ಮೊಟಕುಗಳಿಸುವ ಬದಲು ರಾಜಕೀಯ ಪಕ್ಷಗಳು ಅದರ ಲಾಭ ಪಡೆಯಲು ಮುಂದಾಗುತ್ತವೆ. ಗುಜ್ಜರ್ ಜನಾಂಗದವರು ಮೂಲತಃ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್‌ಗಳು. ರಾಜಸ್ತಾನದಲ್ಲಿ ಆ ಜನಾಂಗದ ಮತದರಾರರು ಬಿಜೆಪಿ ಬೆಂಬಲಿಗರೂ ಕೂಡ ಆಗಿದ್ದಾರೆ. ಮೀಸಲಾತಿಯನ್ನೇ ಆಧರಿಸಿ ಅವರು 2 ಪಕ್ಷಗಳ ವಿರುದ್ಧ ತಿರುಗಿ ಬಿದ್ದಲ್ಲಿ ಅದರ ಲಾಭ ಪಡೆಯಲು ಬಿಎಸ್‌ಪಿ ನಾಯಕಿ ಮಾಯಾವತಿ ಸಿದ್ಧರಾಗಿದ್ದಾರೆ. ಇನ್ನೊಂದೆಡೆ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಮತ್ತು ಅಮರ್ ಸಿಂಗ್ ಕೂಡ ಗುಜ್ಜರ್ ಮತಬ್ಯಾಂಕ್ ಒಲಿಸಿಕೊಳ್ಳುವ ಯತ್ನಕ್ಕೆ ಕೈ ಹಾಕಿದ್ದಾರೆ. ಇಂತಹ ರಾಜಕೀಯ ದೊಂಬರಾಟದ ನಡುವೆ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಗುಜ್ಜರ್ ಜನಾಂಗ ಬಿಎಸ್‌ಪಿ ಕಡೆ ಸರಿಯುವ ಸಾಧ್ಯತೆಗಳು ಒಡಮೂಡುತ್ತಿವೆ.

ಇನ್ನೊಂದು ಪ್ರಮುಖ ವಿಷಯವೆಂದರೆ ಗುಜ್ಜರ್ ಜನಾಂಗ ಕೇವಲ ರಾಜಸ್ತಾನಕ್ಕೆ ಸೀಮಿತವಾಗಿಲ್ಲ. ಪಕ್ಕದ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಗಡಿ ಭಾಗದಲ್ಲಿ ಕೂಡ ಅವರ ಪ್ರಾಬಲ್ಯ ಇದೆ. ಪ್ರತಿಭಟನೆಯ ಕಾವು ಇದೇ ರೀತಿ ಹೆಚ್ಚಿದರೆ ಸುತ್ತಮುತ್ತಲಿನ ನಾಲ್ಕೈದು ರಾಜ್ಯಗಳಲ್ಲಿ ಈ ಕಾವು ಏರಬಹುದು. ಇದೆಲ್ಲದರ ನಡುವೆ ದೆಹಲಿ ಹಾಗೂ ಇನ್ನಿತರ ನಗರ ಪ್ರದೇಶಗಳಲ್ಲಿ ನೆಲೆ ನಿಂತು ಆರ್ಥಿಕವಾಗಿ ಸಬಲರಾಗಿರುವ ಗುಜ್ಜರ್ ಜನಾಂಗದ ಪ್ರತಿನಿಧಿಗಳು, ಈಗ ನಡೆಯುತ್ತಿರುವ ಪ್ರತಿಭಟನೆಗೆ ಹಣ ಬೆಂಬಲ ನೀಡಲಾರಂಭಿಸಿದ್ದಾರೆ.

ಹೇಗಿದ್ದರೂ ಚುನಾವಣಾ ಸಮಯ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸೂಕ್ತ ಕಾಲ ಎಂದು ಗುಜ್ಜರ್ ಜನಾಂಗದವರು ಕೂಡ ನಿರ್ಧರಿಸಿದಂತಿದೆ. ರಾಜಕೀಯ ವಿಶ್ಲೇಷಕ ಮಹೇಶ್ ರಂಜನ್ ಪ್ರಕಾರ, "ಪರಸ್ಪರ ಚರ್ಚೆಯ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ದುರಂತವೆಂದರೆ ರಾಜಸ್ತಾನದಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಆದರೂ, ಅಲ್ಲಿನ ಸರ್ಕಾರ ಪ್ರತಿಭಟನೆಗೆ ಇಳಿದವರ ಜೊತೆ ಮಾತುಕತೆ ನಡೆಸುವ ಬದಲು ಪೊಲೀಸ್ ಬಲದೊಂದಿಗೆ ಅವರನ್ನು ನಿಯಂತ್ರಿಸುವ ದುಸ್ಸಾಹಸಕ್ಕೆ ಇಳಿದಿದೆ."

ಸಮ್ಮಿಶ್ರ ಸರ್ಕಾರಗಳ ಈ ಯುಗದಲ್ಲಿ ಗುಜ್ಜರ್ ಜನಾಂಗದವರು ರಾಜಸ್ತಾನದ ಮಟ್ಟಿಗೆ ರಾಜಕೀಯವಾಗಿ ಅತ್ಯಂತ ಮಹತ್ವದ ಸ್ಥಾನ ಹೊಂದಿದ್ದಾರೆ. ಇರುವ 200 ವಿಧಾನಸಭಾ ಕ್ಷೇತ್ರಗಳ ಪೈಕಿ 43ರ ಭವಿಷ್ಯವನ್ನು ನಿರ್ಧರಿಸುವ ಸಾಮರ್ಥ್ಯ ಈ ಜನಾಂಗಕ್ಕೆ ಇದೆ. ರಾಜಸ್ತಾನದ ಒಟ್ಟು ಜನಸಂಖ್ಯೆಯ ಪೈಕಿ ಶೇಕಡಾ 5ರಷ್ಟು ಗುಜ್ಜರ್ ಜನಾಂಗದವರಿದ್ದರೂ, ಈಗ ಶಾಸಕರಾಗಿರುವವರ ಸಂಖ್ಯೆ ಕೇವಲ 7 ಮಾತ್ರ. ಇವರ ಕಡುವೈರಿಗಳಾದ ಮೀನಾ ಬುಡಕಟ್ಟು ಜನಾಂಗ ಶೇಕಡಾ 12ರಷ್ಟು ಜನಸಂಖ್ಯೆ ಹೊಂದಿದ್ದು ಒಟ್ಟು 33 ಶಾಸಕರ ಬಲಿಷ್ಠ ಪಡೆಯನ್ನೇ ಹೊಂದಿದೆ. ಮಾತ್ರವಲ್ಲ ಅವರನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲಾಗಿದೆ. ಈಗ ನಮಗೂ ಆ ಪಟ್ಟಿಗೆ ಸೇರಲು ಅವಕಾಶ ನೀಡಿ ಎನ್ನುವುದು ಗುಜ್ಜರ್ ಬೇಡಿಕೆ. ಆದರೆ, ಮೀನಾ ಜನಾಂಗದವರು ಈ ಸೇರ್ಪಡೆಯನ್ನು ವಿರೋಧಿಸುತ್ತಿದ್ದಾರೆ.

ಗುಜ್ಜರ್ ಮತ್ತು ಮೀನಾ ಜನಾಂಗಗಳ ನಡುವಿನ ದ್ವೇಷಕ್ಕೆ ಐತಿಹಾಸಿಕ ಹಿನ್ನಲೆ ಕೂಡ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕಾಕಾ ಕಾಲೇಲ್ಕರ್ ಸಮಿತಿ ಪರಿಶಿಷ್ಟ ಪಂಗಡದ ಪಟ್ಟಿಯನ್ನು ಪುನರ್ ವಿಮರ್ಶೆ ಮಾಡಿದ ಸಂದರ್ಭದಲ್ಲಿ ಮೀನಾ ಜನಾಂಗಕ್ಕೆ ಮಣೆ ಹಾಕಿತ್ತು. ಗುಜ್ಜರ್ ಜನಾಂಗವನ್ನು ಸಂಪೂರ್ಣವಾಗಿ ಕಡೆಗಣಿಸಿತ್ತು. ಈಗ ಗುಜ್ಜರ್ ಜನಾಂಗ ಸಿಡಿಯುತ್ತಿರುವುದು ಅದೇ ವಿಷಯಕ್ಕೆ ಸಂಬಂಧಿಸಿದಂತೆ.

"ಮೀಸಲಾತಿಗೆ ಸಂಬಂಧಿಸಿದಂತೆ ಎಲ್ಲ ನಿರ್ಣಯಗಳನ್ನೂ ಕೇಂದ್ರ ಸರ್ಕಾರವೇ ತೆಗೆದುಕೊಳ್ಳುತ್ತದೆ. ಆ ವಿಷಯವನ್ನು ಅರಿತು ಗುಜ್ಜರ್ ಜನಾಂಗದ ಮುಖಂಡರು ನ್ಯಾಯಯುತ ರೀತಿಯಲ್ಲಿ ಅವರ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದೆ ಇಡಬೇಕು. ಅದರ ಬದಲು ಬೀದಿಗಿಳಿದು ಜನಸಾಮಾನ್ಯರ ಬದುಕನ್ನು ಹದಗೆಡಿಸುವುದು ಸರಿಯಲ್ಲ" ಎನ್ನುವುದು ವಸುಂಧರಾ ರಾಜೇ ಅವರ ವಾದ. ವಾದೇ ಏನೇ ಇದ್ದರೂ ಗುಜ್ಜರ್ ಜನಾಂಗದ ಕೋಪ-ತಾಪ 2009ರ ಚುನಾವಣೆ ಸಂದರ್ಭದಲ್ಲಿ ರಾಜೇ ಅವರ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗುವ ಸಾಧ್ಯತೆ ಕೂಡ ಇದೆ.

ಟಿಎಸ್‌ಐ

ಅನಿಲ್ ಪಾಂಡೆ

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .