|

ಕಥಾ ಸಾಹಿತ್ಯವನ್ನಷ್ಟೇ ಅಲ್ಲದೆ ಜೀವ
ಜಗತ್ತಿನ ವಿಸ್ಮಯಗಳು,
ಹಕ್ಕಿ-
ನದಿ-
ನಾಗರಿಕತೆ,
ವಿಜ್ಞಾನ,
ಪ್ರಕೃತಿ-
ಪರಿಸರ ಇಂಥ ಅದಮ್ಯ ಆಸಕ್ತಿಯ ವಿಷಯಗಳ ಬಗ್ಗೆಯೂ
ವಿಪುಲವೂ ವೈವಿಧ್ಯಮಯವೂ ಆದ ಸಾಹಿತ್ಯವನ್ನು ರಚಿಸಿರುವ ಕಾರಣದಿಂದಾಗಿಯೇ
ಪೂರ್ಣಚಂದ್ರ ತೇಜಸ್ವಿ ನಮಗೆ ಹೊಸ ಶತಮಾನದ ಹೊಸ್ತಿಲಲ್ಲಿ ಕನ್ನಡದ ಅಸಾಧಾರಣ
ಲೇಖಕರಾಗಿ ಎದ್ದು ಕಾಣುತ್ತಾರೆ.
ಇಂಥ ವೈಶಿಷ್ಟ್ಯದಿಂದಾಗಿ ಅಧ್ಯಯನ ಯೋಗ್ಯ
ಲೇಖಕರಾಗಿ ಹೊಸ ತಲೆಮಾರಿನ ಓದುಗ-
ವಿಮರ್ಶಕರನ್ನು ತಮ್ಮತ್ತ ಸೆಳೆದುಕೊಂಡಿರುವ
ತೇಜಸ್ವಿಯವರ ಹೊಸ ಪುಸ್ತಕ ಪ್ರಕಟವಾಯಿತೆಂದರೆ ಹೆಚ್ಚಿನ ನಿರೀಕ್ಷೆ-
ಅಪೇಕ್ಷೆಗಳು ಹುಟ್ಟುವುದು ಸಹಜ.
ಪ್ರಸ್ತುತ,
ಇದೀಗ ಪ್ರಕಟವಾಗಿರುವ
'ಪಾಕ ಕ್ರಾಂತಿ
ಮತ್ತು ಇತರ ಕತೆಗಳು'
ಇದಕ್ಕೆ ಹೊರತಲ್ಲ.
ತೇಜಸ್ವಿಯವರ ಮರಣೋತ್ತರ ಪ್ರಕಟಣೆಯಾದ
'ಪಾಕ ಕ್ರಾಂತಿ...'
ಯಲ್ಲಿ ೮ ಕತೆಗಳಿವೆ.
ಇವೆಲ್ಲ ೧೯೬೨ರಿಂದ ೨೦೦೭ರ ಅವಧಿಯೊಳಗೆ ನಿಯತಕಾಲಿಕಗಳಿಗೆ
ಬರೆದ ಬರಹಗಳು.
ಪ್ರಾಯಶಃ ತೇಜಸ್ವಿಯವರೇ ನಿರ್ಲಕ್ಷಿಸಿರಬಹುದಾದ ಈ ಬರಹಗಳು
ಈಗ ಸಂಕಲಿತವಾಗಿ ಪ್ರಕಟಗೊಂಡಿದೆ.
ಈ ಬರಹಗಳನ್ನು ಕತೆಗಳು ಎಂದು ಕರೆಯಲಾಗಿದೆಯಾದರೂ,
ವಿಮರ್ಶೆ,
ಸಣ್ಣಕತೆಯ ಚೌಕಟ್ಟಿಗೇ ಸೀಮಿತಗೊಳಿಸಿ ಬರಹಗಳನ್ನು
ನೋಡಬೇಕಾಗಿಲ್ಲ.
ಕತೆಗೆ ವೃತ್ತಾಂತ ಇತ್ಯಾದಿ ಬೇರೆ ಬೇರೆ
ಆಯಾಮಗಳಿರುವುದನ್ನು ನೆನಪಿನಲ್ಲಿಟ್ಟುಕೊಂಡೇ ತೇಜಸ್ವಿಯವರ ಈ ಬರಹಗಳನ್ನು
ಓದಬೇಕು.
ಏಕಕಾಲಕ್ಕೆ ರೋಮಾಂಚಕಾರಿ ಅನುಭವ ಮತ್ತು
ಜ್ಞಾನಾರ್ಜನೆ ಎರಡೂ ಆಗುವ ತೇಜಸ್ವಿಯವರ ಬರವಣಿಗೆಯ ವಿಶಿಷ್ಟ ಛಾಪು ಇಲ್ಲೂ
ನಮಗೆ ಕಾಣ ಸಿಗುತ್ತವೆ.
'ಪಾಕ ಕ್ರಾಂತಿ',
ಸುವರ್ಣ ಸ್ವಪ್ನ',
'ನಗು',
'ಮೃತ್ಯೋರ್ಮಾ...'
ಇಂಥ ವಿಶಿಷ್ಟ ಛಾಪಿನ ಬರಹಗಳು.
ಹೆಂಡತಿ ಎಂಥ ಪಾಕ ಪ್ರವೀಣೆಯೇ ಇರಲಿ,
ಪತಿ ವಿಧೇಯಳೇ ಆಗಿರಲಿ ಗಂಡಸಿಗೆ ಒಂದಲ್ಲ ಒಂದು
ದಿನ ಅಡಿಗೆ ಕೆಲಸದ ಪಾಳಿ ತಪ್ಪಿದ್ದಲ್ಲ.
ಹೀಗೆ ಗಂಡಸಿನ ಅಡಿಗೆ ಮನೆ ಪ್ರವೇಶವಾದದ್ದೇ ಒಂದು
ಕ್ರಾಂತಿಯೋ ಅಥವಾ ಒಂದು ಬಂಡಾಯವೋ ಶತಃಸಿದ್ಧ.
ಇಂಥ ಕ್ರಾಂತಿಯ ಒಂದು ಪರಿಯನ್ನು ತೇಜಸ್ವಿಯವರ
'ಪಾಕ
ಕ್ರಾಂತಿ'
ದರ್ಶನ ಮಾಡಿಸುತ್ತದೆ.
ಈ ಪಾಕ ಕ್ರಾಂತಿಯ ಕ್ಷೆಭೆ ನಾಲಗೆ ರುಚಿಯಿಂದ ಹಿಡಿದು
ರೇಷನ್ ಕಾರ್ಡ್ ವ್ಯವಸ್ಥೆ,
ರಾಜಕೀಯ-
ಧರ್ಮ-
ದೇವರು-
ನಾಮಕರಣದ ಉಮೇದು-
ಸಾಹಿತ್ಯ ವಿಮರ್ಶೆ-
ಉಗ್ರಗಾಮಿಗಳು-
ಪೊಲೀಸರು,
ಹೀಗೆ ಎಲ್ಲರಿಗೂ ಎಲ್ಲದಕ್ಕೂ ಪ್ರಸಂಗಾವಧಾನಿಯಾಗಿ
ಅಮರಿಕೊಳ್ಳುವುದರೊಂದಿಗೆ ಒಂದು ಜೀವನ ಚಕ್ರವೇ ಪ್ರತ್ಯಕ್ಷವಾಗುತ್ತದೆ.
ನಾಯಿ ಮರಿಯೂ ಮೂಸದ ಅಡಿಗೆಯ ರಹಸ್ಯ,
ಕುಕ್ಕರ್ ಚರ್ನೋಬಿಲ್ ಆಗುವುದು,
ಸಾಹಿತ್ಯ ವಿಮರ್ಶಕರು ಪೊಲೀಸ್ ಅಧಿಕಾರಿಗಳಾಗಿ
ಬ್ರಹ್ಮ ಸೃಷ್ಟಿಯ ಪಾತ್ರಗಳನ್ನು ವಿಚಾರಣೆಗೊಳಪಡಿಸಬೇಕಾದ ಅಗತ್ಯ,
ಪೊಲೀಸರ ಪ್ರೊಸೀಜರ್ರು ಮತ್ತು ಪ್ರಾಣಭಯ
ಇವುಗಳನ್ನೆಲ್ಲ ಓದಿಯೇ 'ಕ್ರಾಂತಿ'ಯನ್ನು
ಆಗು ಮಾಡಿಕೊಳ್ಳಬೇಕಾಗುತ್ತದೆ.
ಇದೇನು ಕತೆಯೋ ಲಲಿತ ಪ್ರಬಂಧವೋ ಎಂದೆಲ್ಲ ರೇಜಿಗೆ
ಮಾಡಿಕೊಳ್ಳದೆ 'ಪಾಕ
ಕ್ರಾಂತಿ'ಯಲ್ಲಿ
ಮುಳುಗೆದ್ದಾಗ ವೇದ್ಯವಾಗುವುದು,
ತೇಜಸ್ವಿಯವರು ಶುರುವಿಗೆ ಹೇಳುವ ಈ ಮಾತುಗಳ
ಅಂತರಾರ್ಥ.
ಕೆಲವೆಲ್ಲಾ ಮನುಷ್ಯನಿಗೆ ಅನುಭವಿಸಿದ ಮೇಲೆಯೇ
ಅರ್ಥವಾಗುವುದು.
ಇಂಥ ಒಂದು ಅನುಭವ ಹಾಗೂ ತಲೆಗೆ ಹೋಗಬೇಕಾದ ಕೆಲವು
ವಿಚಾರಗಳಿಂದಾಗಿ 'ಪಾಕ
ಕ್ರಾಂತಿ'
ನಮಗೆ ತಾಕುತ್ತದೆ,
ತಾಕಲಾಟವುಂಟುಮಾಡುತ್ತದೆ.
'ಸುವರ್ಣ ಸ್ವಪ್ನ'-
ಒಂದು ವಯೋಮಾನದ
(ಹದಿ ಹರೆಯ)
ಸ್ಥಿತ್ಯಂತರ-
ಗತ್ಯಂತರಗಳ ಮನೋವೈಜ್ಞಾನಿಕ ವಿಶ್ಲೇಷಣೆಗೆ
ಹತ್ತಿರವಾದ ಬರಹ.
ಹತ್ತೂರೆನ್ನುವ ಕುಗ್ರಾಮವನ್ನೂ ಅದರ ಸುತ್ತಮುತ್ತ
ಪ್ರಪಂಚದ 'ಸ್ಥಿತ
ಪ್ರಜ್ಞ'ರನ್ನು
ಸಾಕ್ಷಿಯಾಗಿಟ್ಟುಕೊಂಡು ರಮೇಶ ಎಂಬ ಹದಿಹೈದನೊಬ್ಬನ ಕನಸು-
ಮನಸುಗಳಲ್ಲಿ ಪಯಣಿಸುವ
'ಸುವರ್ಣ
ಸ್ವಪ್ನ'
ಕೊನೆಯಲ್ಲಿ ಕಾಣಿಸುವ ಹೆಬ್ಬಂಡೆ ಸೀಳಿಕೊಂಡು ದಾಂಗುಡಿ ಇಟ್ಟ ಆಲದ ಸಸಿಯ
ರೂಪಕದಲ್ಲಿ ಅರ್ಥವತ್ತಾಗುತ್ತದೆ.
ಇದಕ್ಕೂ ರಮೇಶನ ಬುದ್ಧಿ ಸರಿಯಾಗಿದ್ದಕ್ಕೂ ಸಂಬಂಧ
ಕಲ್ಪಿಸುವುದು ಲೇಖಕರಿಗೆ ಹುಚ್ಚಾಟವೆನ್ನಿಸಿದರೂ ಇದು ಸ್ವಪ್ನಾವಸ್ಥೆ ದಾಟಿದ
ರಮೇಶನ ಗತ್ಯಂತರದ ಆರಂಭ ಬಿಂದು ಎನ್ನಿಸುವುದು ಸಹಜ ಬೆಳವಣಿಗೆ.
'ನಗು'
ಸಹ ಮನೋವೈಜ್ಞಾನಿಕ ವಿಶ್ಲೇಷಣೆಯ ಆಸುಪಾಸಿನ ಬರಹ.
ಕಾಯಿಲೆ ಬಿದ್ದ ಮೇಷ್ಟ್ರು ಜಾಗಕ್ಕೆ ಹಂಗಾಮಿಯಾಗಿ
ಬರುವ ಮೇಡಂ ಬಡಪಾಯಿ ವಿದ್ಯಾರ್ಥಿಯೊಬ್ಬನಿಗೆ
'ನಗು'
ಶಿಕ್ಷೆ ವಿಧಿಸುವ ಮೂಲಕ ತನ್ನ ಸುಪ್ತ ಮನಸ್ಸನ್ನು ಹರಿ ಬಿಡುತ್ತಾಳೆ.
ವಿದ್ಯಾರ್ಥಿಯ ಸುಪ್ತ ಮನಸ್ಸಿಗೂ ಪುಟ ಕೊಡುತ್ತಾಳೆ.
ಈ ಶಿಕ್ಷೆಯ ಪ್ರಕ್ರಿಯೆಯಲ್ಲಿ ಇಬ್ಬರೂ ಹಗುರಾಗುವ
ರೀತಿ ನಮ್ಮ ಅಂತಃಕರಣವನ್ನು ತಟ್ಟುತ್ತದೆ.
'ರೋಗಗ್ರಸ್ತ'
ಜಗತ್ತೊಂದರ ಈ ಎರಡು ಪಾತ್ರಗಳ ಮೂಲ ಬವಣೆ ಉಳಿದವರಿಗೆ ಪಾಠವಾಗಬೇಕಾದ
ಅಗತ್ಯವನ್ನು ಮನ ಗಾಣಿಸುತ್ತದೆ.
ಬಾಲಕನೊಬ್ಬನ ಅದಮ್ಯ ಕುತೂಹಲ,
ಉತ್ಸಾಹ,
ಚೇಷ್ಟೆ-
ಚಟುವಟಿಕೆಗಳ ಚೈತನ್ಯಪೂರ್ಣ ಜಗತ್ತಿನಲ್ಲಿ
ವಿಷಾದದ ಗೆರೆಯಾಗಿ ಸುಳಿಯುವ ಅಜ್ಜಿಯ ಸಾವು ದೊಡ್ಡವರ ಪಾಲಿಗೆ ಸತ್ಯವನ್ನು
ಎದುರಿಸುವ ಹಾಗೂ ಅದನ್ನು ನುಡಿಯಲ್ಲಿ ಸಾಕ್ಷಾತ್ಕಾರಗೊಳಿಸಬೇಕಾದ ಸವಾಲಾಗುವ
ಒಂದು ಸನ್ನಿವೇಶದ ಚಿಂತನ ಚಿತ್ರ
'ಮೃತ್ಯೋರ್ಮಾ...'.
ಸತ್ತ ಅಜ್ಜಿ ದೇವರ ಹತ್ತಿರ ಹೋದರು ಎಂದು ಮುಗ್ಧ
ಮಕ್ಕಳ ಕುತೂಹಲವನ್ನು ವಂಚಿಸಲಾಗದ ಮನಸ್ಸನ್ನು ಎಚ್ಚರಿಸುವುದು
'ಮೃತ್ಯೋರ್ಮಾ
ಅಮೃತಂಗಮಯ'.
ತೇಜಸ್ವಿಯವರ ಮೇರು ಕೃತಿಗಳೆಂದು
ಪರಿಗಣಿಸಲಾಗಿರುವ 'ಕರ್ವಾಲೊ',
'ಚಿದಂಬರ
ರಹಸ್ಯ',
'ಜುಗಾರಿ
ಕ್ರಾಸ್'
ಮೊದಲಾದ ಕಾದಂಬರಿಗಳು ಹಾಗೂ 'ಅಬಚೂರಿನ
ಪೋಸ್ಟಾಫೀಸು',
'ಕುಬಿ
ಮತ್ತು ಇಯಾಲ',
'ಕಿರಿಗೂರಿನ
ಗಯ್ಯಾಳಿಗಳು'
ಕಥಾ ಸಂಕಲನಗಳ ಎದುರು 'ಪಾಕ
ಕ್ರಾಂತಿ ಮತ್ತು ಇತರ ಕತೆಗಳು'
ಖಂಡಿತವಾಗಿಯೂ ತೇಜಸ್ವಿಯರ ಉತ್ಕೃಷ್ಟ ಬರಹಗಳ ಮಾದರಿಯಲ್ಲ ಎಂಬುದನ್ನು
ಒಪ್ಪಿಕೊಂಡೂ ಇವು ಮುಖ್ಯವಾಗುವುದು ಅವರ ಬರವಣಿಗೆಯ ಸರಣಿಯಲ್ಲಿನ ಸಾವಯವ
ಸಂಬಂಧಗಳ ಕಾರಣದಿಂದಾಗಿ.
ಎಂದೇ ತೇಜಸ್ವಿಯವರ ಸಾಹಿತ್ಯ ವಾಚಿಕೆಗೆ ಇದು ಒಂದು ಪುಟ್ಟ
ಮೆಟ್ಟಿಲು.
ಟಿಎಸ್‌ಐ
ಜಿ.ಎನ್. ರಂಗನಾಥ ರಾವ್
ಕೃತಿಯ ಪುಟಗಳಿಂದ..
ಆದರೆ,
ಇಂಥ ಅಧ್ವಾನದ ಊರಿನಲ್ಲಿದ್ದು ಒಳ್ಳೆ ಕತೆ
ಕಾದಂಬರಿಗಳನ್ನು ಒಬ್ಬ ಬರೆಯಬೇಕೆಂದು ವಿಮರ್ಶಕರು ನಿರೀಕ್ಷಿಸಿಸುವುದು
ಲೇಖಕನ ಯೋಗ್ಯತೆಗೆ ಮೀರಿದ ಜವಾಬ್ದಾರಿಯನ್ನು ಅವರ ತಲೆಯ ಮೇಲೆ ಹೊರಿಸಿದ ಹಾಗೆ.
ಖ್ಯಾತ ವಿಮರ್ಶಕರಾದ ಜಿ.ಎಚ್.
ನಾಯಕರನ್ನೂ ಟಿ.ಪಿ.
ಅಶೋಕರನ್ನೂ ಇಲ್ಲಿಗೆ ಸೀನಿಯಾರಿಟಿ ಪ್ರಕಾರ
ಸರ್ಕಲ್ ಇನ್ಸ್‌ಪೆಕ್ಟರ್,
ಸಬ್‌ಇನ್ಸ್‌ಪೆಕ್ಟರಾಗಿ ನೇಮಿಸಿ ಬ್ರಹ್ಮಸೃಷ್ಟಿಯ
ಈ ಪಾತ್ರಗಳಿಗೆಲ್ಲ ಚೆನ್ನಾಗಿ ಚರ್ಚಿಸಿ ಸರಿಯಾಗಿ ವರ್ತಿಸುವಂತೆ
ಹೇಳಿಕೊಡದಿದ್ದರೆ ಇಲ್ಲಿ ತುಂಬಿ ತುಳುಕುತ್ತಿರುವ ಈ ಅಸಂಬದ್ಧ ಪಾತ್ರಗಳೆಲ್ಲಾ
ಕತೆ ಕಾದಂಬರಿಗಳೊಳಗೆ ನುಸುಳುವುದನ್ನು ಒಬ್ಬ ಲೇಖಕನಿಂದ ತಡೆಯಲು ಸಾಧ್ಯವೇ?
ನಾನು ಸಾಯುವವರೆಗೂ ಒಳ್ಳೆ ಕತೆ ಕಾದಂಬರಿ
ಬರೆಯುವುದು ಅಸಾಧ್ಯವೇ ಸರಿ.(ಪಾಕ
ಕ್ರಾಂತಿ ಕಥೆಯಿಂದ)
|