ಸ್ಕಾರ್ಲೆಟ್ ಪ್ರೀತಿ
ಫೆಂಟಾಸ್ಟಿಕ್ ಫೋರ್ ನಟಿ ಸ್ಕಾರ್ಲೆಟ್ ಜೋಹಾನ್ಸನ್ ಇತ್ತೀಚೆಗಷ್ಟೇ ರಿಯಾನ್ ರೆನಾಲ್ಡ್ಸ್ ಜೊತೆ ನಿಶ್ಚಿತಾರ್ಥ ಘೋಷಿಸಿ ಅಭಿಮಾನಿಗಳ ಹೃದಯಕ್ಕೆ ಕಿಚ್ಚು ಹಚ್ಚಿದ್ದಳು. ಕಲಾವಿದ ಅಥವಾ ಕಲೆಗಳನ್ನು ಮೆಚ್ಚುವ ವ್ಯಕ್ತಿಗಳೆಂದರೆ ಸ್ಕಾರ್ಲೆಟ್‌ಗೆ ಅಚ್ಚುಮೆಚ್ಚು. ಸ್ವತಃ ಜೋಹಾನ್ಸನ್ ಪ್ರದರ್ಶನ ಕಲೆಗಳ ಪರಿಣಿತೆ. ಭಾವುಕ ವ್ಯಕ್ತಿಗಳನ್ನು ಮೆಚ್ಚುವ ಸ್ಕಾರ್ಲೆಟ್, ಪ್ರೀತಿಯನ್ನು ಬಹಿರಂಗವಾಗಿ ಪ್ರದರ್ಶಿಸುವವರನ್ನು ಕಂಡರೆ ಇಷ್ಟ ಎನ್ನುತ್ತಿದ್ದಾಳೆ. ಅಬ್ಬಾ, 'ಪ್ರೀತಿಯ ಕಡಲಲ್ಲಿ ತೇಲಿಸು ಗೆಳೆಯಾ' ಎಂದು ಪರೋಕ್ಷವಾಗಿ ರಿಯಾನ್‌ಗೆ ಸಂದೇಶ ಕಳುಹಿಸುತ್ತಿದ್ದಾಳೆಯೇ?
ಸಿಡಿಗುಂಡು ಅಂಶು

ಅಂಶು. ಮುಸರಿ ಕೃಷ್ಣಮೂರ್ತಿ ಮೊಮ್ಮಗಳು ಎಂದೇ ಜನಪ್ರಿಯ. ನಟನೆ ಬಗ್ಗೆ ಎರಡು ಮಾತಿಲ್ಲ. ಈಗ 'ಟೀಮ್' ಚಿತ್ರದಲ್ಲಿ ನಾಯಕಿ ಪಟ್ಟ. ಕನ್ನಡ ಚಿತ್ರರಂಗದ ತಾರತಮ್ಯ ಬಗ್ಗೆ ಮಾತು ಬಂತು ಅಂದ್ರೆ ಸಿಡಿಗುಂಡು ಆಗಿ ಬಿಡ್ತಾಳೆ ನಮ್ಮ ಅಂಶು. ಬಿಪಾಶಾ- ಕರೀನಾ ತರಾ ಸೊಂಟ ಬಳುಕಿಸೋ ನಾಯಕಿಯರೇ ಬೇಕು ಅನ್ನೋ ನಿರ್ದೇಶಕರು ಅವರಿಗೆ ತೆರೋ ದುಡ್ಡನ್ನೇ ನಮಗೆ ಕೊಡಲಿ. ನಾವೂ ಸರ್ಜರಿ- ಗಿರ್ಜರಿ ಮಾಡ್ಕೊಂಡು ಅಷ್ಟೇ ಸಣಕಲು ಶರೀರಾನ ಪಡೀತೀವಿ ಅಂತಾ ಸವಾಲೆಸೆದಿದ್ದಾಳೆ ಈ ಪೋರಿ. ಅಷ್ಟೆಲ್ಲಾ ಮಹಾನ್ ಕೆಲ್ಸ ಮಾಡೋರಿದ್ರೆ ಕನ್ನಡ ಸಿನಿಮಾಗಳು ಹೀಗಿರ್‍ತಿತ್ತೆ ಸ್ವಾಮಿ? ಎಲ್ಲಾ ಅವಕಾಶಗಳನ್ನು ಒಪ್ಪಿಕೊಳ್ತಿದ್ದ ಅಂಶು ಈಗ ಸ್ವಲ್ಪ ಚ್ಯೂಸಿಯಾಗಿದ್ದಾಳೆ. ಗುಡ್‌ಲಕ್ ಅನ್ನೋಣವೆ?
ಸೈಫ್- ಕರೀನಾ ಲಂಡನ್ ಭೇಟಿ
'ಜೀ ಸಿನಿ ಅವಾರ್ಡ್' ಸಮಾರಂಭದಲ್ಲಿ ಭಾಗವಹಿಸಲು ತೆರಳಿದ್ದ ಬಾಲಿವುಡ್‌ನ ಚೋಟೆ ನವಾಬ್ ಸೈಫ್ ಅಲಿ ಖಾನ್ ಮತ್ತು ಮಾದಕ ತಾರೆ ಕರೀನಾ ಕಪೂರ್ ಲಂಡನ್‌ನ ಬೀದಿಗಳಿಗೆ ಕಿಚ್ಚು ಹಚ್ಚಿದ್ದರು! ಹೌದು, ಇಬ್ಬರೂ ನಗರವಿಡೀ ಸುತ್ತಾಡಿದ್ದೇ ಸುತ್ತಾಡಿದ್ದು. ಇತರ ಅತಿಥಿಗಳಿಗಾಗಿ ವ್ಯವಸ್ಥೆ ಮಾಡಿರುವ ಹೊಟೇಲ್‌ನಿಂದ ದೂರವಾಗಿ ಪ್ರತ್ಯೇಕ ಹೊಟೇಲ್‌ನಲ್ಲಿ ಕೊಠಡಿ ಕಾದಿರಿಸುವಂತೆ ಆಯೋಜಕರನ್ನು ವಿನಂತಿಸಿಕೊಂಡಿದ್ದರು. 'ತಶನ್' ತೋಪೆದ್ದು ಹೋದರೆ ಏನಾಯಿತು? ಈ ಜೋಡಿಗೆ ಮಜಾ ಮಾಡಲು ಕಾರಣಗಳಿಗೇನೂ ಬರವಿಲ್ಲ!
ಕಿಟ್ಟಿ ಶುಕ್ರದೆಸೆ

'ಇಂತಿ ನಿನ್ನ ಪ್ರೀತಿಯ' ಸಿನಿಮಾದ ಭಾವುಕ ನಟನೆಯಿಂದ ಸ್ಯಾಂಡಲ್‌ವುಡ್ ಮನಗೆದ್ದ ಪೋರ ಶ್ರೀನಗರ ಕಿಟ್ಟಿ. ಆ ಚಿತ್ರ ಸಾಧಾರಣ ಯಶಸ್ಸು ಕಂಡಿದೆ. ಆದರೆ ನಾಯಕ ಕಿಟ್ಟಿಗೆ ಅವಕಾಶಗಳ ಸರಮಾಲೆಯೇ ಬಂದು ಬೀಳುತ್ತಿದೆ. ಜೂನ್ ಕೊನೇ ವಾರದಲ್ಲಿ ಸಪ್ತಪದಿ ತುಳೀತಿರೋ ಈ ನಟ ನಾಗತಿಹಳ್ಳಿ ನಿರ್ದೇಶನದ 'ಒಲವೇ ಜೀವನ ಲೆಕ್ಕಾಚಾರ' ಚಿತ್ರೀಕರಣವನ್ನು ಇನ್ನೂ ಮುಗಿಸಿಲ್ಲ. ಆಗಲೇ 'ಮುಂಗಾರು...' ಹುಡುಗಿ ಪೂಜಾಗಾಂಧಿ ನಾಯಕಿಯಾಗಿರೋ ದಿನೇಶ್‌ಬಾಬು ನಿರ್ದೇಶನದ 'ಜನುಮದ ಗೆಳತಿ' ಚಿತ್ರೀಕರಣ ಆರಂಭಿಸಿದ್ದಾರೆ. ಇದರಲ್ಲಿ ಕಿಟ್ಟಿಗೆ ಗ್ಯಾಂಗ್‌ಸ್ಟರ್ ಪಾತ್ರ. ರವಿ ಬೆಳೆಗೆರೆ ನಿರ್ದೇಶನದ 'ಒಂದು ಮಳೆಯ ರಾತ್ರಿ' ಮತ್ತು 'ಗೆಳೆಯ' ನಿರ್ದೇಶಕ ಹರ್ಷ ನಿರ್ದೇಶನದ ಚಿತ್ರಗಳಲ್ಲೂ ಅಭಿನಯಿಸುತ್ತಿದ್ದಾರೆ. ಅದೃಷ್ಟ ಕಾಲಿಗೆ ತೊಡರಿಕೊಂಡು ಬರೋದು ಅಂದ್ರೆ ಇದೇ ಏನೋ?
ಸೋಣಿ ಕುಡಿ ರಾಗಿಣಿ
ಮತ್ತೊಬ್ಬಾಕಿ ಸೋಣಿ ಕುಡಿ ನಮ್ ಕನ್ನಡ ಭೂಮ್ಯಾಗ ಬಂದ್ ಬಿಟ್ಟಾಳ. ಹೆಸ್ರು ರಾಗಿಣಿ. 'ಸ್ಯಾಂಡಲ್‌ವುಡ್ ಅಂದ್ರೆ ಭಾಳ ಇಷ್ಟ ಕಣ್ರೀ' ಎಂದು ಬಾಯಿ ತುಂಬಾ ಬಡಬಡಾಯಿಸ್ತಾಳ. ಮಾಡ್ಲಿಂಗ್ ಮಾಡ್ತಿದ್ದ ಈಕೀನ ಕನ್ನಡಕ್ಕೆ ಕರ್‌ಕಂಡ್ ಬಂದ್ರು ಪ್ರಸಾದ್. ಈಗಂತೂ ಈ ಶಾಣೆ ಸಿನಿಮಾನ ಸೀರಿಯೆಸ್ ಆಗಿ ತಗಂಡಾಳ. ಮೊದ್ಲು 'ಬೈ 2 ಕಾಫಿ' ಅಂದ್ಕೊಂಡ್ ಘಮ್ ಅಂತ ಚಿತ್ರರಂಗಕ್ಕೆ ಬಂದಿದ್ಲು. ಯಾಕೋ ಕಾಣೆ ಅದ್ ಮುಂದೇ ಹೋಗಿಲ್ಲ ಅಂತೀನಿ. ಅದಕ್ಕ ಈಗ 'ಹೋಳಿ' ಆಡಾಕ ಹತ್ಯಾರ. ಗಾಸಿಪ್ ಅಂದ್ರ ಏನಂತ ಹಲ್ ಕಿಸೀತಾಳ ರಾಗಿಣಿ. ಅದ್ನೂ ನಾವೇ ಹೇಳ್ಕೊಡ್ಬೇಕಾ? ಆದ್ರೂ ಸವಾಲೆಸ್ಯೊ ಪಾತ್ರ ಅಂದ್ರ ಇಷ್ಟ. ಗ್ಲಾಮರ್ ಪಾತ್ರಗಳೆಲ್ಲಾ ಒ.ಕೆ. ಅಂತೂ ಮತ್ತೊಂದು ಸೋಣಿ ಕುಡಿ ತೆವಳೋಕೆ ಹತ್ಯಾಳ. ಏನ್ ಮಾಡೋಣ? ಬದುಕ್ಕೋಳಿ ಅನ್ನೋದೆ!!
ಪ್ರೀತಿ ಗೊಂದಲ
ಪ್ರೀತಿ ಜಿಂಟಾಗೆ ಅಳಬೇಕೋ ನಗಬೇಕೋ ಎಂದು ಅರಿವಾಗುತ್ತಿಲ್ಲ! ಐಪಿಎಲ್‌ನಲ್ಲಿ ತನ್ನ ತಂಡ 'ಪಂಜಾಬ್ ಕಿಂಗ್ಸ್ ಇಲೆವೆನ್' ಜಯಭೇರಿ ಬಾರಿಸುತ್ತಿರುವುದಕ್ಕೆ ಸಂಭ್ರಮದ ಉತ್ತುಂಗದಲ್ಲಿದ್ದಾಳೆ. ಆದರೆ ಇದೇ ವೇಳೆ ಸ್ನೇಹಿತ ಶಾರುಖ್ ಖಾನ್ ತಂಡ 'ಕೋಲ್ಕತ್ತಾ ನೈಟ್ ರೈಡರ್‍ಸ್' ಸೋಲುತ್ತಿರುವುದಕ್ಕೆ ಆಕೆಗೆ ಖೇದವೆನಿಸುತ್ತಿದೆ. ಹುಟ್ಟೂರು ಮುಂಬೈ ತಂಡ ದಾಖಲೆ ನಿರ್ಮಿಸುತ್ತಿರುವ ಪರಿ ಕಂಡು ಆಶ್ಚರ್ಯದಿಂದ ಮೂಕಳಾಗಿದ್ದಾಳೆ. ಇಷ್ಟೆಲ್ಲಾ ಭಿನ್ನ ಭಾವನೆಗಳನ್ನು ತಡೆದುಕೊಳ್ಳುವುದಾದರೂ ಹೇಗೆ ಎನ್ನುವುದೇ ಆಕೆಯ ಚಿಂತೆ. ಒಂದೇ ಕಾಲಕ್ಕೆ ಅಳೋದು ಮತ್ತು ನಗೋದು ಸಾಧ್ಯವಿಲ್ಲ ತಾನೆ? ದೊಡ್ಡ ದುರಂತವೇ ಸರಿ. ಪಾಪ ಪ್ರೀತಿ!!
ದೀಪಿಕಾ ಮದುವೆ ಯೋಗ
ರಣ್‌ಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ನಿಶ್ಚಿತಾರ್ಥ ಎಂಬ ಗುಲ್ಲು ಬಾಲಿವುಡ್ ತುಂಬಾ ಹರಿದಾಡುತ್ತಿದೆ. ಆದರೆ ಇದೆಲ್ಲಾ ಸುಳ್ಳು ಸುದ್ದಿ ಎಂದು ಇಬ್ಬರೂ ಸ್ಪಷ್ಟೀಕರಣ ನೀಡಿ ಸುಸ್ತಾಗಿದ್ದಾರೆ. ವೈಯಕ್ತಿಕ ಜೀವನ ಆಮೇಲೆ, ಈಗೇನಿದ್ದರೂ ಬಾಲಿವುಡ್ ಕಡೆಗೇ ಗಮನ ಎಂದಿದ್ದಾಳೆ ದೀಪಿಕಾ. ಅಂದಹಾಗೆ ಮಗ ಈಗಲೇ ಮದುವೆ ಪ್ರಸ್ತಾಪ ಇಟ್ಟಿದ್ದಾನೆ ಎನ್ನುವ ಸುದ್ದಿ ಕೇಳಿದಾಗ ರಣಬೀರ್ ಕುಟುಂಬ ದಿಗ್ಭ್ರಾಂತವಾಗಿತ್ತು! ಆದರೆ ಈ ಜೋಡಿ ಭವಿಷ್ಯದಲ್ಲಿ ಮದುವೆಯಾಗಲೂಬಹುದು ಎನ್ನುವುದನ್ನು ಮಾತ್ರ ಕಪೂರ್ ಕುಟುಂಬ ಅಲ್ಲಗಳೆದಿಲ್ಲ.
ಎನ್.ಕೆ. ಸುಪ್ರಭಾ, ನೂಪುರ್ ಚೌಹಾಣ್