ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಸಣ್ಣ ಕಥೆ
ಹೊಸದಾದ ಫ್ರೇಮ್
ಸಂಧ್ಯಾ ಹೊನಗುಂಟೆಕರ್

ಬೆವರಿಂದ ಬಟ್ಟೆ ಮೈಗಂಟಿದ್ದವು. ಕಾಯ್ದ ಆರ್.ಸಿ.ಸಿ.ಯಿಂದ ಬಿರುಗಾಳಿ ಎಳೆದು ಬಿಡುತ್ತಿದ್ದ ಫ್ಯಾನ್ ಕಡೆ ನೋಡಿದ ನನ್ನಿಂದ ಇಷ್ಟೇ ಆಗೋದು ಎಂಬಂತೆ ಸುತ್ತುತಿತ್ತು. ಕೂತು ಸಾಕಾಗಿತ್ತು. ಇನ್ನೇನು ಊಟದ ಸಮಯ. ಬಹುಶಃ ಈಗ ಒಳಗೆ ಕರಿಬಹುದೇನೋ ಎಂದು ಉತ್ಸಾಹ ತುಂಬಿಕೊಂಡು ಅರ್ಧಗಂಟೆ ಕಳೆಯಿತು. ಯಾವ ಸೂಚನೆ ಇಲ್ಲ. ಅನುಮಾನ ಬಂದು ಕಂಪ್ಯೂಟರ್ ಮುಂದೆ ಕುಳಿತವನನ್ನು ಸಾಹೇಬ್ರು ಊಟಕ್ಕ ಯಾವಾಗ ಹೋಗ್ತಾರ? ಎಂದು ಕೇಳಿದಾಗ ಆಗ್ಲೇ ಹೋದ್ರು ಎಂದ ಮಾನಿಟರ್‌ನಿಂದ ಕಣ್ಣು ಕೀಳಿಸದೇ. ಒಂದು ಕ್ಷಣ ಸನ್ನಿಪಾತವಾದಂತಾಯ್ತು. ಇದೇ ಒಂದು ಬಾಗಿಲು ಆ ಕೋಣೆಗೆ ಅಂದುಕೊಂಡಿದ್ದ! ಏನು ಮಾಡಲು ತೋಚಲಿಲ್ಲ. ಮನದ ಮೂಲೆಯಿಂದ ನೋವು ಬಸಿಯುತಿತ್ತು. ಇನ್ಯಾಕ ಕೂತಿದಿ ಜಾಗ ಖಾಲಿ ಮಾಡು? ಎಂಬಂತೆ ಆತ ನೋಡಿದ.

ಸೂರ್ಯನಿಗೆ ಭೂಮಿಮ್ಯಾಲೆ ಅದ್ಯಾಕ ಸಿಟ್ಟು ಬಂದಿತ್ತೊ ಕೆಂಗಣ್ಣಿನಿಂದ ನೋಡ್ತಿದ್ದ. ಹೊಟ್ಟೆಗೆ ಸುರಿದು ಕೊಂಡಿದ್ದ ಒಂದು ಕಪ್ಪು ಚಹ ಯಾವಾಗಲೋ ಇಂಗಿ ಹೋಗಿತ್ತು. ನಾಲಿಗೆಯಿಂದ ತುಟಿಗಳನ್ನು ಒದ್ದಿ ಮಾಡಿಕೊಂಡು ಉಗುಳು ನುಂಗಿದ. ಕಿಸೆಗೆ ಕೈ ಹಾಕಿ ಇರುವ ಐದು ರೂಪಾಯಿ ನಾಣ್ಯವನ್ನು ಮುಟ್ಟಿಕೊಂಡ. ಚುರುಗುಟ್ಟೊ ಹೊಟ್ಟೆಗೆ ಏನಾದ್ರೂ ಹಾಕಿಕೊಂಡ್ರಾಯ್ತು ಅಂತ ಬೇಕರಿಯತ್ತ ಹೋಗುತ್ತಿದ್ದಂತೆ ಅದೇಕೊ ಬೇಡವೆನಿಸಿ ಮತ್ತೆ ನೇರವಾಗಿ ಹೊರಟ. ತಿಂಗಳಾಗಲು ಮೂರುದಿನ ಖಾನಾವಳಿಗೆ ದುಡ್ಡು ತುಂಬಬೇಕು. ಈಗೂ ಅವ್ವಗ ಕೇಳಲಿಕ್ಕಿ ನಾಚಿಕಿಯೆನಿಸ್ತದ.

ಶ್ರೀ ಕುಬೇರ ರಾಜ್ಯ ಲಾಟರಿ... ಮೊದಲ ಬಹುಮಾನ ಒಂದು ಲಕ್ಷ ರೂಪಾಯಿ ಬಂಪರ್ ಬಹುಮಾನ ನಿಮ್ಮದು. ಪೇಪರ್ ಮಾರುವ ಹುಡುಗ ಲಕ್ಷಾಧೀಶ್ವರ... ಕೇವಲ ಐದು ರೂಪಾಯಿಯಲ್ಲಿ ಲಕ್ಷಾಧೀಶರಾಗುವಿರಿ. ಶ್ರೀ ಕುಬೇರ ರಾಜ್ಯ ಲಾಟರಿ... ನಿಮ್ಮ ಅದೃಷ್ಟವನ್ನು ಪರೀಕ್ಷಿಸಿ... ಎಂದೊಬ್ಬ ಜನರನ್ನು ಉತ್ಸಾಹಿಸಲು ಕೂಗುತ್ತಿದ್ದ.

ಮತ್ತೆ ಕೈ ಕಿಸೆಯೊಳಗೆ ನಾಣ್ಯ ಮುಟ್ಟಿಕೊಂಡ ಹೇಗೊ ಐದು ರೂಪಾಯಿ ಇದೆ. ನನಗೆ ಬಹುಮಾನ ಬಂದ್ರೆ... ನಾಣ್ಯ ಕೈಗೆ ಬಂತು ಲಕ್ಕಿ ನಂಬರ್ ಆರಿಸಿದ. ನಾಣ್ಯ ಅವನಿಗೆ ಕೊಟ್ಟು ಇನ್ನೇನು ಟಿಕೇಟು ಹರಿಯಬೇಕೆನ್ನುವಷ್ಟರಲ್ಲಿ ಬ್ಯಾಡ ಬ್ಯಾಡ ಹರಿಬ್ಯಾಡ ನನ್ನ ರೊಕ್ಕ ವಾಪಸ್ಸು ಕೊಡು ಅಂತ ಒದರಿದ. ಇವನ ವಿಚಿತ್ರ ವರ್ತನೆಗೆ ರೇಗಿ ಲಾಟರಿ ಮಾರುವಾತ ದುಡ್ಡು ವಾಪಸ್ಸು ಮಾಡಿದ. ನಾಣ್ಯವನ್ನೇ ದೃಷ್ಟಿಸಿದ ಈ ತಿಂಗಳ ಕೊನೆಯ ಐದು ರೂಪಾಯಿ ಇರಲಿ ಮತ್ಯಾವ ಕೆಲಸಕ್ಕೋ ಬೇಕಾಗುತ್ತದೆಂದುಕೊಂಡ.

ಈವರೆಗೂ ಕೊಟ್ಟ ಒಟ್ಟು ಸಂದರ್ಶನಗಳ ನೆನಪಾಯ್ತು ವಿಷಾದದ ನಗು ಹಾಯಿತು. ಅವ್ವನ ಸಂಭ್ರಮದ ಮುಖ ನೆನಪಾಯ್ತು.

ನಿಂಗ ದೊಡ್ಡ ಆಪಿಸ್ರ ನೋಕ್ರಿ ಸಿಗ್ತದಲಾ ಮಗಾ ಬೆರಗು ಕಣ್ಣಿಂದ ಕೇಳಿದ್ದಳು. ಅವಳ ಮುಗ್ಧತೆಗೆ ನೋವುಂಟು ಮಾಡಲಾಗಲಿಲ್ಲ. ಹರಿದ ಸೀರೆಯ ತೂತುಗಳನ್ನು ಮರೆಮಾಚುವ ಅವ್ವಗ ಹೆಂಗ ಸಂತೋಷ ತಂದೇನು...?

ಆಗಾಗ ಸ್ನೇಹಿತ ರಾಜಶೇಖರ್ ಹೇಳ್ತಿದ್ದ ನಿನ್ನ ಹತ್ರ ರೊಕ್ಕಾ... ಇಲ್ಲ... ಇನ್‌ಫ್ಲೂಯನ್ಸ್ ಯಾವುದರ ಇದ್ರ ನೌಕರಿ. ಇದರಾಗ ಒಂದೂ ಇಲ್ಲಂದ್ರ... ನಿನ್ನ ಗತಿ ಗೋವಿಂದಾ... ಅವನ ಉಡಾಫೆ ಮಾತಿಗೆ ರೇಗುತ್ತದೆ. ಭರವಸೆಗಳನ್ನು ಹುಟ್ಟುಹಾಕ್ತಾನೆ ಅವನ ಜೊತೆ ಇರಬಾರ್ದು ಅನ್ನಿಸುತ್ತದೆ. ಆದ್ರ... ಆಗಾಗ ಆತ ಕೊಡೋ ರೊಕ್ಕದ ಸಹಾಯ!! ಥೂ ಯಾವ ನಿರ್ಧಾರನೂ ಕೈಗೂಡದಿಲ್ಲ. ನಾಣ್ಯದೊಂದಿಗೆ ಆಟ ಆಡುತ್ತಲೇ ರಸ್ತೆ ಮೇಲೆ ಹೆಜ್ಜೆ ಮೂಡಿಸಿದ್ದ. ಆದ್ರೆ ಒಮ್ಮಿಗಲೇ ಕೈಯೊಳಗಿನ ನಾಣ್ಯ ಜಾರಿ ಉರುಳಿ ಹೋಯ್ತು. ಅದರ ಹಿಂದೇ ಓಡಿದ. ಚಿಕ್ಕರಸ್ತೆ ತಿರುಗುವಲ್ಲಿ ಉರುಳಿ ಬಿತ್ತು. ದುಡ್ಡಿಗೆ ಕೈ ಹಾಕುತ್ತಲೇ ಸಣ್ಣ ಸಂದಿಯತ್ತ ಕಣ್ಣು ಹಾಯ್ದಿತ್ತು. ಅದೊಂದು ಮೆರವಣಿಗೆ. ಸ್ವಾಮಿಯೊಬ್ಬರ ಆಗಮನದ ಸಂಭ್ರಮ. ಶಂಕರ ಹೇಳಿದ್ದು ನೆನಪಾಯ್ತು. ಊರಿಗೆ ದೊಡ್ಡ ಸ್ವಾಮಿಗಳು ಬರ್‍ತಿದ್ದಾರೆ. ಅವರ ದರ್ಶನದಿಂದಲೇ ಪೀಡೆಗಳೆಲ್ಲ ಪರಿಹಾರ ನೀನೂ ಬರ್‍ತಿಯೇನೋ ಎಂದಾಗ 'ಬರುವುದಿಲ್ಲ' ಎಂಬಂತೆ ತಲೆಯಾಡಿಸಿದ್ದ. ಎಲ್ಲದರಲ್ಲೂ ವಿಶ್ವಾಸಗಳು ಸಡಿಲವಾಗಿದ್ದವು. ಯಾವುದೋ ವಿಚಾರದೊಳಗಿದ್ದವನು ಜನ-ಜಂಗುಳಿಯಲ್ಲಿ ಅರಿವಿಲ್ಲದೆ ಸಿಲುಕಿದ್ದ. ಮೆರವಣಿಗೆಯಲ್ಲಿ ಒಬ್ಬನಾಗಿದ್ದ. ಭಜನೆಗೆ ತನ್ಮಯದಿಂದ ತಾಳ ಹಾಕಿದ ಆವೇಶದಿಂದ ಕುಣಿದ ಭಕ್ತಿಪರವಶನಾದ.

*****

ಸ್ವಾಮೀಜಿಯ ಕೋಣೆ ನಿಶ್ಯಬ್ದ ನಿರ್ಮಲ ವಾತಾವರಣ. ಅವರಲ್ಲಿ ಅದೇಕೋ ಹೊಯ್ದಾಟ ಮನಸ್ಸು ಸ್ಥಿಮಿತ ಸಾಧಿಸುತ್ತಿಲ್ಲ. ಏನೋ ಕಳವಳ ಹಣೆಯಲ್ಲಿ ನಿರಿಗೆ ಮೂಡಿತ್ತು. ಹೇಗಾದ್ರು ಮನಸ್ಸನ್ನು ಹಿಡಿತಗೊಳಿಸಬೇಕು. ಧ್ಯಾನ ಮಾಡುವುದಾದರೆ... ಯೋಚನೆ ಬಂದ ತಕ್ಷಣ ಸ್ಥಾನದಲ್ಲಿ ಆಸೀನರಾದರು.

ಸ್ವಾಮಿಜಿ... ಎಮ್ಮೆಲ್ಲೇ ಸಾಬ್ರು ತಮ್ಮನ್ನು ಕಾಣಬಯಸಿದ್ದಾರೆ ಶಿಷ್ಯನೊಬ್ಬ ಬಂದು ಮೆಲ್ಲಗೆ ಹೇಳಿದ. ಅವರಿಗೆ ಕೂಡಲೆಂದು ಹೇಳಿ ಧ್ಯಾನಸ್ಥರಾದರು. ಯೋಚನೆಗಳನ್ನು ದೂರ ಸರಿಸುತ್ತ ಮನಸ್ಸು ಮೌನವಾಗಿ ಒಳಗೆ ಇಳಿಯತೊಡಗಿತು. ಒಳಗೆ... ಇನ್ನೂ ಒಳಗೆ... ಇಳಿದು ಸುತ್ತಲಿನದೆಲ್ಲರಲ್ಲಿ ಇಡಿಯಾಗಿ ಆವರಿಸಿತು. ಆವರಿಸಿಯೂ ಪ್ರತ್ಯೇಕತೆಯನ್ನು ಪ್ರತಿನಿಧಿಸುತ್ತ ಗುಹಾಂತರದೊಳಗೆ ಪ್ರವೇಶ ಅಲ್ಲಿಯ ಹೆಪ್ಪುಗಟ್ಟಿದ ಕತ್ತಲೆಯನ್ನು ನುಂಗುತ್ತ ಬೆಳದಿಂಗಳ ತಂಪು ಹರಡತೊಡಗಿತ್ತು. ಚಂದ್ರಕಿರಣದ ಆ ಬೆಳಕು ಹಗುರ... ಚೈತನ್ಯದಿಂದ ಸಾಗುತ್ತ ವಿಶಾಲ ಬಯಲೊಂದರಲ್ಲಿ ಅನಾವರಣಗೊಂಡು ಬಯಲಲ್ಲಿ ಬಯಲಾಗುತ್ತ ಬೆಳಕಿನೊಂದಿಗೆ ಬೆರೆತು ಆನಂದದಿಂದ ಬಂಧನರಹಿತ ಬಾನಾಡಿಯಾಗಿ ಚೈತನ್ಯದ ಗೊಂಚಲಿಗೆ ಆತುಕೊಂಡಂತಾಯ್ತು.

ನಿಧಾನವಾಗಿ ಕಣ್ಣುರೆಪ್ಪೆಯಗಲಿಸಿದರು. ತೃಪ್ತಿ ದೃಢತೆ ಮುಖದಲ್ಲಿ ಮನದಲ್ಲಿ ಮಿಂಚಿತು ಇದನ್ನೇ ಗಮನಿಸುತ್ತಿದ್ದ ಶಿಷ್ಯ ಬಂದು ಸುರಿದ...

ಗುರುಗಳೆ ಮಂಟಪಕ್ಕೆ ದಯಮಾಡಬೇಕು ಎಂದಾಗ ಚಟ್ಟನೆ ಎದ್ದು ಹೊರಟರು. ಬಾಗಿಲಿಗೆ ಕಾದು ನಿಂತಿದ್ದ ಎಮ್ಮೆಲ್ಲೆ ಸಾಬ್ರು ಸಾಷ್ಟಾಂಗವೆರಗಿದರು. ಮಾತುಗಳೆಲ್ಲ ಅವರದ್ದೆ ಬರಿ ಹುಂ ಉಹೂಂ ಮಾತ್ರ ಸ್ವಾಮೀಜಿದಾಗಿತ್ತು. ಒಂದೇ ಸಮನೆ ಸ್ವಾಮಿಗಳಲ್ಲಿ ಗೋಗರಿತಿದ್ದ.

ತಮ್ಮದಿನ್ನೂ ಎಲ್ಲಿಯೂ ಆಶ್ರಮವಿಲ್ಲವಂತ ಶಿಷ್ಯರು ಹೇಳಿದ್ರು ತಾವು ದಯತೋರಬೇಕು. ಇಲ್ಲಿಂದ ತಾವು ಎಲ್ಲಿಯೂ ಹೋಗಬಾರದು ತಮ್ಮ ಸಲ್ವಾಗಿ ನಿರ್ಮಲ ಪ್ರಶಾಂತ ಆಶ್ರಮ ಕಟ್ಟಿಸ್ತೀನಿ. ಸ್ವಾಮಿಗಳು ನಕ್ಕು ಸನ್ಯಾಸಿಗಳು ಒಂದೆಡೆ ಅಂಟಿಕೊಳ್ಳಬಾರದು. ಆ ಭಗವಂತ ಎಲ್ಲಿ ಸೂಚಿಸುವನೋ ಅಲ್ಲಿ ಸೇವೆಗೆ ಹೋಗಬೇಕು. ಹಂಗಾರ ತಾವು ಇನ್ನ ಈ ಊರಾಗ... ಅನುಮಾನಿಸಿ ಕೇಳುವಾಗಲೇ ಸ್ವಾಮಿಗಳು ಎರಡು ದಿನ... ಆನಂತರ ವಿಶ್ವಧರ್ಮ ಸಮ್ಮೇಳನಕ್ಕೆ ಪ್ರಧಾನಮಂತ್ರಿಗಳಿಂದ ಆಹ್ವಾನವಿದೆ ಎಂದರು.

ತಾವು ಸೇವಾ ನಿಮಿತ್ತ ಎಲ್ಯರ್‍ಯ ಹೋಗಿಬರ್ರಿ ಆದ್ರ ತಮ್ಮ ಆಶ್ರಮ ಇಲ್ಲೇ ಮಾಡಿಕೋರಿ ತಮಗ ಸೇವಾ ಸಲ್ಲಿಸ್ಲಿಕ್ಕಿ ನಂಗ ಈ ಅವಕಾಶ ಮಾಡ್ಬೇಕು ಸ್ವಾಮೀಜಿಯ ಕಾಲಿಗೆ ಮತ್ತೆ ಅಡ್ಡ ಬಿದ್ದರು. ದೇವಭವನದ ಪ್ರವಚನಕ್ಕೆ ಕರೆದೊಯ್ಯಲು ಡಾ. ರಘುನಾಥ ಬಂದಿದ್ದಾರೆ ಗುರೂಜಿ ಎಂದು ಶಿಷ್ಯ ಹೇಳಿದ.

ಡಾಕ್ಟರು ಬನ್ನಿ ಸ್ವಾಮೀಜಿ... ಎಂದು ಆದರಿಸಿ ಕಾರಿನ ಬಾಗಿಲು ತೆಗೆದರು ಡ್ರೈವರ್‌ಗೆ ನೀನು ಬೇಡ ನಾನೇ ಡ್ರೈವ್ ಮಾಡ್ತೀನಿ ಎಂದು ಸ್ವಾಮೀಜಿ ಪಕ್ಕ ಕೂಡಲು ಅನುಮತಿ ಕೇಳಿದರು.

ಭವನ ಜನರಿಂದ ತುಂಬಿತ್ತು ಸ್ವಾಮೀಜಿಯ ಆಗಮನದಿಂದ ಗುಜುಗುಜು. ಮರುಕ್ಷಣವೇ ಮೌನ. ಆ ಮುಖದ ತೇಜಸ್ಸು ನಡೆಯಲ್ಲಿಯ ದೃಢತೆಗೆ ಜನ ಬೆರಗಾಗಿತ್ತು ಮೌನವು ಆಶ್ಚರ್ಯ ಉದ್ಗಾರಗಳಿಂದ ಸ್ವಲ್ಪ ಸ್ವಲ್ಪ ಸಡಿಲಗೊಂಡಿತು.

ಶ್ಲೋಕದೊಂದಿಗೆ ಪ್ರವಚನ ಆರಂಭವಾಯ್ತು ಘನಗಂಭೀರ ಧ್ವನಿ ತರಂಗಗಳು ಅಲೆ ಅಲೆಯಾಗಿ ದೇವ ಭವನದಲ್ಲಿ ಹರಿದಾಡತೊಡಗಿತು. ಸ್ಪಷ್ಟ ಖಚಿತ ದೋಷಮುಕ್ತ ನುಡಿಗಳು ಭಕ್ತರ ಅಂತರ್ಯವನ್ನು ಹೊಕ್ಕಿದ್ದವು. ಹಸಿದೊಡಲು ಇನ್ನೂ ಬೇಕೆಂದು ಹಪಹಪಿಸುವಂತೆ ಇನ್ನೂ ಕೇಳಬೇಕು ಎನ್ನುವಾಗಲೇ ಸ್ವಾಮಿಜಿ ಶಾಂತಿಮಂತ್ರದೊಂದಿಗೆ ಮುಕ್ತಾಯಗೊಳಿಸಿದರು.

******

ಶಿಷ್ಯ ವೃಂದದಲ್ಲಿ ಗುಸುಗುಸು ಅದೇಕೋ ಸ್ವಾಮಿಜಿ ಇಂದು ಹಾಲು ಹಣ್ಣು ತೆಗೆದುಕೊಳ್ಳಲಿಲ್ಲ. ಬೆಳಿಗ್ಗೆ ಪ್ರಸಾದ ತೆಗೆದುಕೊಳ್ಳುವಾಗಲೂ ಅಷ್ಟೇ ಶಾಸ್ತ್ರ ಮುಗಿಸಿದ್ರು ಈಗ ಮತ್ತೆ ಧ್ಯಾನ ಹಿರಿಯ ಶಿಷ್ಯ ಮಾತ್ರ ಏನೂ ಮಾತಾಡಲಿಲ್ಲ. ಹೌದು! ಸ್ವಾಮಿಜಿ ಅನ್ಯಮನಸ್ಕರಾಗಿದ್ದಾರೆ. ಯಾವುದೋ ಅಲೌಕಿಕ ಪ್ರಶ್ನೆ ಕಾಡುತ್ತಿರಬೇಕು. ಅದಕ್ಕೆ ಚಿಂತನೆಗೆ ತೊಡಗಿದ್ದಾರೆ. ಅದರ ಉತ್ತರ ಪಡೆಯುವವರೆಗೂ ಬಿಡುವವರಲ್ಲ. ಧ್ಯಾನದ ನಂತರ ಅಧ್ಯಯನ ಮಾಡುತ್ತಾರೇನೋ ಓಹ್!... ಅಧ್ಯಯನಕ್ಕೆ ಸಿದ್ಧಪಡಿಸ್ಬೇಕು. ಉಳಿದವರನ್ನು ಎಚ್ಚರಿಸಿ ಗುಂಪುಗಟ್ಟಿದವರನ್ನು ಚದುರಿಸಿದ. ಮತ್ತೆ ಗುರುಗಳತ್ತ ದೃಷ್ಟಿ ಹಾಯಿತು. ಯಾವ ಪಾರಮಾರ್ಥಿಕ ಸಮಸ್ಯೆಗೆ ಸಿಲುಕಿದ್ದಾರೋ ಎಂಬ ಅನುಮಾನದೊಂದಿಗೆ ಹೊರಟ.

ಮರುದಿನ ನದಿಯ ತೀರಕ್ಕೆ ಹೋಗಿ ಸ್ನಾನಕ್ಕೆ ಬಂದಾಗ ಮೂಡಣದ ಕೆಂಪು ಕತ್ತಲೆಗೆ ಸೂರ್ಯ ಬರುತ್ತಿದ್ದಾನೆ ಜಾಗ ಖಾಲಿ ಮಾಡು ಎನ್ನುತ್ತಿತ್ತು. ಕತ್ತಲಿನ ಸಹವಾಸ ಕಳಿಯಿತು ಸದ್ಯ... ಎಂಬಂತೆ ಪಕ್ಷಿಗಳು ಅಂತೂ ಸೂರ್ಯ ಬಂದ ಎಂದು ಕಿಚಿಪಿಚಿಗುಟ್ಟುತ್ತ ಮಗ್ಗುಲು ಬದಲಿಸುತ್ತಿದ್ದವು. ಸ್ವಾಮಿಜಿಯ ಸ್ನಾನ ಮುಗಿದರೂ ನೀರಿಂದ ಏಳಲಿಲ್ಲ ಏಕಾಂತದಲ್ಲೇ ಇರಬೇಕೆನಿಸಿ ತಮ್ಮೊಬ್ಬರನ್ನೇ ಬಿಟ್ಟು ಹೋಗಲು ಶಿಷ್ಯನಿಗೆ ಹೇಳಿದರು. ಕಣ್ಣು ಮುಚ್ಚಿ ಕುಳಿತರು.

ನಾನು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ ಈ ಊರಿಗೆ ಬರುವೆನೆಂದು. ಬದುಕಿನಲ್ಲಿ ಒಗಟುಗಳನ್ನು ಸೃಷ್ಟಿಸಿದ ಸ್ಥಳ ಮರೆಯಲಾಗಲಿಲ್ಲ. ಜೀವನದ ದಾರಿಯಲ್ಲಿ ಮುಗ್ಗರಿಸಿದಾಗೆಲ್ಲ ಇದೇ ದಡಕ್ಕೆ ಬರುತ್ತಿದ್ದೆ. ಈ ನೀರಿನೊಂದಿಗೆ ದುಃಖ ಹರಿದುಹೋಗಲಿ ಎಂದು. ಅವ್ವ ಊರಿಗೆ ಬಂದು ಹೋಗಲು ಹೇಳಿದ್ದಾಳೆ. ಆದರೆ ಹೋಗಲಾಗುತ್ತಿಲ್ಲ. ಆದರೂ ನನಗಾಗಿ ಜೀವ ತೇಯ್ದ ಅವಳಿಗೆ ನನ್ನಿಂದ ಏನೂ ಮಾಡಲಾಗಲಿಲ್ಲ ಎಂಬ ನೋವು ದೂರವಾಗಿದೆ. ಈ ಮೊದಲು ಅವಳ ಹರಿದ ಸೀರೆ ಕೃಶವಾದ ಶರೀರ ನನ್ನನ್ನು ತುಂಬಾ ಕಾಡುತ್ತಿತ್ತು.

ಕಣ್ಣು ಕಾಣಂಗಿಲ್ಲಾ ಮಗಾ... ಎಂದು ಸೂಜಿ ಪೋಣಿಸಿ ಕೊಡಲು ಹೇಳುವಾಗಿನ ಮಾತು ನನ್ನ ಚುಚ್ಚುತಿತ್ತು. ಆದರೆ ಈಗ ಆ ಅಳುಕುಗಳಿಲ್ಲ. ಹೌದು! ಆ ಬಾರಿ ನನ್ನ ನೋಡಲು ಬಂದಾಗ ಜರದ ಸೀರೆ ಉಟ್ಟು ಕೈಗೆ ಬಂಗಾರದ ಬಳೆ ಕನ್ನಡಕ ಹಾಕಿಕೊಂಡದನ್ನು ನೋಡಿ ಸಂತೋಷವಾಯ್ತು. ನಾನ್ಯಾವುದನ್ನು ಕೊಟ್ಟಿಲ್ಲ. ಜನರೇ ಭಕ್ತಿಯಿಂದ ತಂದುಕೊಟ್ಟಿದ್ದಾರಂತೆ.

ಅವ್ವ ಲಕ್ಷಣವಾಗಿ ಕಾಣುತ್ತಿದ್ದರೂ ಮುಖದಲ್ಲಿ ನೋವಿತ್ತು. ಅವ್ವಾ ಈಗ ಕಣ್ಣು ಚಂದ ಕಾಣ್ತದಲ್ಲಾ...ಯಾವ ಚಿಂತೆ ಇಲ್ಲದ ಸುಖವಾಗಿರವ್ವ... ಎಂದಾಗ

ಅವ್ವಾ ವಿಷಾದದ ನಗೆ ಚೆಲ್ಲಿ ಈಗ ಸೀರಿ ಬಂಗಾರದಿಂದ ಸುಖ ಸಿಗಂಗಿಲ್ಲ ಮಗಾ... ಈ ವಯದಾಗ ತೊಡಿಯಾಗ ಮಮ್ಮಗ ಆಡಿದ್ರನ ಖರೇ ಸುಖಾಪ್ಪ. ಭಾರವಾದ ದನಿಲಿಂದ ಹೇಳಿದಾಗ ಕಣ್ಣಲ್ಲಿ ನೀರು ತುಳುಕಿದ್ದು ಕಂಡು ನಾನು ಬೇರೆಡೆ ಗಮನ ನೆಟ್ಟಿದ್ದೆ.

ಹೌದು! ನನಗೂ ಆಸೆಗಳಿದ್ದವು ಕಾಲೇಜಿನಲ್ಲಿರುವಾಗ ಹೇಮಾಳ ನೋಟ ನನ್ನ ಇಡೀ ಮೈಯನ್ನು ಬೆಚ್ಚಗಾಗಿಸುತಿತ್ತು. ಹರೆಯದಲ್ಲಿ ಕನಸುಗಳಿಗೆ ಕೈಕಾಲು ಮಾಡುವುದು ಅರಿವಾಗುವುದೇ ಇಲ್ಲ. ಬದುಕಿನ ಸುಂದರವಾದ ಸಂದಿಗಳಲ್ಲಿ ನಾನೂ ಹಾಯುತಿದ್ದೆ. ಹಾಸಿಗೆಯಲ್ಲಿ... ಮೈಮನದಲ್ಲಿ ಚಳಿ ಮೂಡಿ ಚಡಪಡಿಸಿ ರೋಮಾಂಚನದ ಗಳಿಗೆಯನ್ನು ಕನವರಿಸಿದ್ದೇನೆ. ಹಳ್ಳಿಗೆ ಹೋದಾಗ ಅದೊಂದು ದಿನ ಪಾರು ಊರ ಹೊರಗಿನ ಹಾಳು ಮಂಟಪದಲ್ಲಿ ನನ್ನ ಅಪ್ಪಿಕೊಂಡಾಗ ಉನ್ಮತ್ತನಾಗಿದ್ದೆ. ಅವ್ವನ ಜೊತೆ ಸೀತಾ ಬಂದಿದ್ದಳು. ತನ್ನ ಎರಡೂ ಮಕ್ಕಳಿಂದ ನಮಸ್ಕಾರ ಮಾಡಿಸಿ ಆಶೀರ್ವಾದ ಪಡೆಯಲು. ಅವ್ವ ನನ್ನ ಸೊಸೆ ಎಂದು ಎಲ್ಲರ ಮುಂದೆ ಹೇಳುವಾಗ ನಾಚಿ ನನ್ನ ನೋಡುತ್ತಿದ್ದ ಸೀತಾ ನಾನು ಸನ್ಯಾಸ ಸ್ವೀಕರಿಸಿದ ಮೇಲೆ ಅವ್ವನ ತೆಕ್ಕೆಗೆ ಬಿದ್ದು ಅತ್ತಳಂತೆ. ಮದುವೆಯೇ ಬೇಡ... ನಾನೂ ಹಾಗೆ ಇರ್‍ತೀನಿ ಎಂದಳಂತೆ. ಅವ್ವ ಬೈದು ಬುದ್ದಿ ಹೇಳಿ ಮದುವೆ ಮಾಡಿಸಿದಳಂತೆ.

ತರುಣ ಸನ್ಯಾಸಿ ಜನರು ಅಭಿಮಾನದಿಂದ ಹೆಮ್ಮೆ ಗೌರವದಿಂದ ಹೇಳುತ್ತಿದ್ದರು. ಆದರೆ ನನಗೆ ಸನ್ಯಾಸಿತನ ಸೋಗೆನಿಸುತ್ತದೆ. ಬದುಕು ಕಳೆದುಕೊಂಡ ದುಃಖ ಎದೆಯೊಳಗೆ ಮಡುವಾಗುತ್ತದೆ. ಯಾರಿಗೆ ಬೇಕಿತ್ತು...? ಈ ವೈರಾಗ್ಯ ಈ ಸನ್ಯಾಸತ್ವ. ಈಗ ಹತ್ತು ಬಾರಿ ನಮಸ್ಕಾರ ಮಾಡಿ ಆಶ್ರಮ ಕಟ್ಟಿಸುವೆ ಎಂಬ ಎಂಎಲ್ಲೇಗೆ ಅದೆಷ್ಟು ಬಾರಿ ಗೋಗರೆದಿದ್ದೆ... ಒಂದು ಸಣ್ಣ ಕೆಲಸ ಕೊಡಿಸಿ ಎಂದು. ಓದಿದರೇನಾಯ್ತು ರೊಕ್ಕ ಖರ್ಚಮಾಡ್ಲಿಕ್ರ ನೌಕರಿ ಎಲ್ಲಿ ಸಿಗ್ತದ... ವ್ಯಂಗವಾಗಿ ಚುಚ್ಚಿದ್ದ ಮನದ ಗಾಯ ಕಾಣೋದಿಲ್ಲ ಆದರೆ ಕೊನೆವರೆಗೂ ಮಾಯೋದಿಲ್ಲ. ಬದುಕು ಕಟ್ಟಲು ಅವಕಾಶ ಕೊಡದವನು ಆಶ್ರಮ ಕಟ್ಟಿಸ್ತಾನಂತೆ. ತುಂಬಾ ಹೀನಾಯವಾಗಿ ಬೈದಿದ್ದ. ಕಸಿವಿಸಿಯಾಗಿ ರಾಜಶೇಖರನ ಮುಂದೆ ಹೇಳಿದ್ದೆ. ಅವನು ಸಮಸ್ಯೆ ಬಗೆಹರಿಸ್ತಾನಂತಲ್ಲ. ಸಮಾಧಾನವೂ ಹೇಳುವುದಿಲ್ಲವೆಂದು ಗೊತ್ತು. ಆದರೆ ಆತ ಜೋರಾಗಿ ನಕ್ಕು ಇಷ್ಟಕ ಯಾಕ ಗೋಳಾಡ್ತಿ ಅವ ಅಂದದ್ದು ನಿನ್ನ ಮೈಗಿ ಅಂಟಿದ ಧೂಳು. ಅದನ್ನ ಹಂಗೇ ಝಾಡಿಸಿ ಬಿಡಬೇಕು. ಹೀಂಗ ಅಳ್ಕೋತ ಕೂತ್ರ ಯಾರ ಸಮಾಧಾನ ಮಾಡ್ತಾರೋ ನಿನ್ನ...?

ಇಲ್ಲ ಅಂವ ಅಷ್ಟು ಮಂದ್ಯಾಗ ಮಾನ ಹೋಗಂಗ ಬೈದ. ನಾಚಿಕಿಯಾಗಿ ಸಾಯಂಗಾಯ್ತು.

ಥೂ ನಿನ್ನ ಬದಕಬೇಕಂದ್ರ ನಾಚಿಗಿ ಮಾನ ಮರ್ಯಾದಿ ಎಲ್ಲಾ ಬಿಡಬೇಕೋ... ಎಲ್ಲಾ ಬಿಡಬೇಕು... ನಕ್ಕು ಮಾತು ನಿಲ್ಲಿಸಿದ.

ಅವನಂದಂತೆ ನಾಚಿಕೆ ಮಾನ ಎಲ್ಲಾ ಬಿಟ್ಟೆ ಜೊತೆಗೆ ಸಂಬಂಧಗಳು... ಹಸಿ ಹಸಿ ತಾಜಾ ಕನಸುಗಳು... ಬಣ್ಣ ಬಣ್ಣದ ಬದುಕು... ಎಲ್ಲವನ್ನು ಬಿಟ್ಟು ಬಿಟ್ಟೆ. ನಾನು ಎಲ್ಲವನ್ನು ಬಿಟ್ಟು ಕಾವಿ ತೊಟ್ಟಾಗ ಶಾಂತೂ ಬಂದಿದ್ದಳು.

ಅಣ್ಣಾ... ಹಿಂಗ್ಯಾಕ ಮಾಡಿದಿ ಅವ್ವ ಸುದ್ದಿ ಗೊತ್ತಾಗಿ ಹಾಸಿಗಿ ಹಿಡಿದಾಳ ಅಲ್ಲಿದ್ದವರು ಸಮಾಧಾನ ಹೇಳಿದ್ರು.

ಮಗೂ... ಅವರು ಈಗ ನಿನ್ನಣ್ಣ ಅಲ್ಲಮ್ಮ. ಸ್ವಾಮೀಜಿ... ಸ್ವಾಮೀಜಿ ಅಂದ್ರ ಸರ್ವಸಂಗ ಬಂಧನಗಳನ್ನು ತೊರೆದ ಪರಿತ್ಯಾಗಿ ಎಂಬ ಉತ್ತರ ಕೇಳಿ ತನ್ನ ಬೊಗಸಿಯೊಳಗೆ ಮುಖ ಇಟ್ಟು ಹೋ ಎಂದು ಅತ್ತ ಶಾಂತೂಳನ್ನು ಕಂಡು ನಾನು ಮೌನವಾಗಿದ್ದೆ. ಕಣ್ಣು ಮುಚ್ಚಿ ಅಳು ದುಃಖಗಳನ್ನು ರೆಪ್ಪೆಯೊಳಗೆ ಮುಚ್ಚಿಟ್ಟೆ. ನಾನು ಇನ್ನೇನು ಅತ್ತುಬಿಡುತ್ತೇನೋ ಅನ್ನುವಷ್ಟರಲ್ಲಿ ಜನ ಅವಳನ್ನು ಅಲ್ಲಿಂದ ಬೇರೆಡೆಗೆ ಕರೆದೊಯ್ದರು. ಅವಳು ಇನ್ನೂ ಅಳುತ್ತಿದ್ದು ಅವಳ ಬಿಕ್ಕಳಿಕೆ ನನ್ನ ಕಾವಿ ಬಟ್ಟೆಯಲ್ಲಿ ಕಲೆಯುಂಟು ಮಾಡಿತ್ತು. ಆಗ ಎಲ್ಲರಿಗೂ ನೋವಾಗಿತ್ತು. ಆದರೆ ಈಗ ಮರೆತು ಸಹಜ ಸ್ಥಿತಿಗೆ ಬಂದಿದ್ದಾರೆ. ಗಂಡನೊಂದಿಗೆ ಮತ್ತೊಮ್ಮೆ ಬಂದಿದ್ದಳು. ಮಾತಿನಲ್ಲಿ ಪ್ರೀತಿಗಿಂತ ಭಕ್ತಿ ಜಾಸ್ತಿಯಿತ್ತು. ಸಂಬಂಧದ ಎಳೆಗಳು ಬಿಡಿಸಿಕೊಂಡಿದ್ದವು. ಗಂಡನೂ ಭಯಭಕ್ತಿಯಿಂದ ಕೈಜೋಡಿಸಿಕೊಂಡು ನಿಂತಿದ್ದ. ನನಗಿಂತ ದೊಡ್ಡವನಾದರೂ ತಾನೇ ಮುಂದೆ ಬಂದು ಕೇಳಿ ಮದುವೆಯಾಗಿದ್ದ. ಮದುವೆ ಖರ್ಚಿಗೇನೂ ಕಷ್ಟವಾಗಿರಲಿಲ್ಲ. ಹಲವಾರು ಭಕ್ತರು ಮುಂದಾಗಿ ಅದ್ದೂರಿಯಾಗಿ ಖರ್ಚು ಮಾಡಿದ್ದರು. ಆಕಸ್ಮಾತ ನಾನೂ ಸ್ವಾಮಿಯಾಗದಿದ್ದರೆ...?

******

ಸ್ವಾಮೀಜಿಗೆ ನಿನ್ನೆಯ ಪ್ರವಚನದಲ್ಲಿ ನಡೆದ ಪ್ರಕರಣ ನೆನಪಾಯ್ತು. ಪ್ರವಚನದ ನಂತರದ ಸಂವಾದದಲ್ಲಿ ಅನೇಕ ಪ್ರಶ್ನೆಗಳು... ಆಧ್ಯಾತ್ಮದ ವಿಷಯಗಳಿಗೆ ಉತ್ತರವೇನೋ ಕೊಟ್ಟರು. ಆದರೆ ಕೆಲವು ಯುವಪಡ್ಡೆ ಹುಡುಗರು ವೈಯಕ್ತಿಕ ವಿಷಯಕ್ಕೆ ಬಂದಾಗ ಬಿಕ್ಕಟ್ಟು ಶುರುವಾಯ್ತು. ಒಬ್ಬ ಎದ್ದುನಿಂತಾಗ ಸ್ವಾಮೀಜಿಗೆ ಆಶ್ಚರ್ಯ... ಸಂತೋಷ... ಯಾವುದನ್ನೂ ಮುಖದಲ್ಲಿ ತೋರಿಸದಂತೆ ಹಿಡಿದಿಡುವ ಪ್ರಯತ್ನದಲ್ಲಿದ್ದಾಗಲೇ ಆತ ತನ್ನ ಪ್ರಶ್ನೆ ಎಸೆದಿದ್ದ.

ಸ್ವಾಮೀಜಿ... ತಾವು ಸನ್ಯಾಸ ಸ್ವೀಕರಿಸಿದ್ದು ಆಧ್ಯಾತ್ಮದಲ್ಲಿ ಆಸಕ್ತಿ ಇತ್ತು ಅಂತೋ ಅಥವಾ ಈ ಬದುಕಿನಿಂದ ಪಲಾಯನಗೊಳ್ಳಲೋ ಪ್ರಶ್ನೆಯ ತೀಕ್ಷ್ಣತೆ ಸ್ವಾಮಿಗಳನ್ನು ಚುಚ್ಚಿತ್ತು. ಕೈಯೊಳಗಿನ ಕನ್ನಡಿ ಜಾರಿದಂತೆ ಸ್ವಾಮೀಜಿಯ ಗಾಂಭಿರ್ಯದ ಮುಖವಾಡ ಕಳಚಿತು. ಸುಖದಿಂದ ವಿಮುಖನಾಗಬೇಕೆಂದು ಕವಚದೊಳಗೆ ಬೆಳೆಯಬೇಕೆಂದುಕೊಂಡವರ ಕವಚ ಹರಿದುಹೋಯ್ತು. ನಿಯಂತ್ರಣ ಮೀರಿ ಮುಖಭಾವ ಬದಲಾದಾಗ ಆತ ತನ್ನ ಅನುಮಾನ ಖಚಿತವಾದಂತೆ ನೀನು... ನಾಗೇಶಾ... ಸ್ವಾಮೀಜಿ... ತೊದಲಿದ. ಸ್ವಾಮೀಜಿಗೆ ಮೊದಲೇ ಗೊತ್ತಿತ್ತು. ರಾಜಶೇಖರ ತಮ್ಮನ್ನು ಗುರುತಿಸ್ತಾನೆಂದು. ಹೌದು... ಬೇರೆ ಯಾವುದೇ ಸಂದರ್ಭದಲ್ಲಿದ್ದರೆ ಅಸಾಧ್ಯವಿತ್ತೇನೋ. ಆದರೆ ನನ್ನನ್ನು ಅಸಹಾಯಕನಾಗಿದ್ದಾಗ ಗೊಂದಲದಲ್ಲಿದ್ದಾಗ ತುಂಬ ಹತ್ತಿರದಿಂದ ನೋಡಿದವನಲ್ಲವೆ...?

ಏಕಾಂತದೊಳಗೆ ಬಂದು ಬೆಟ್ಟಿಯಾದ ರಾಜಶೇಖರ. ಯಾಕೋ ಹೀಂಗ ಮಾಡಿಬಿಟ್ಟಿ...? ಬೇರೆ ದಾರಿ ಏನೂ ಹೊಳಿಲಿಲ್ಲೇನು? ಗೆಳೆತನದ ಸರಪಳಿ ನೇಯ್ದು ಕೇಳಿದ. ಅವನಂತೆ ನಿರಾಳವಾಗಿ ಮಾತಾಡಲು ಸ್ವಾಮೀಜಿಗಾಗಲಿಲ್ಲ. ಮೌನವೇ ಸಹಾಯಕ್ಕೆ ಬಂತು.

ಮಾತಾಡೋ... ಸಮಸ್ಯೆ ಬಂದಾಗೆಲ್ಲ ನನ್ನ ಬಳಿ ಬರ್‍ತಿದ್ದಿ... ಆದ್ರ ಸನ್ಯಾಸಿ ತಗೋ ಹೊತ್ತಿಗಿ ನೆನಪಾಗ್ಲಿಲ್ಲೇನೋ? ಉದ್ವೇಗದಿಂದ ಮಾತಾಡಿದ. ಇವರು ಗಾಂಭಿರ್ಯದಿಂದ ಇರಲಿ ಬಿಡು... ಈಗ ಆದದ್ದಾಯ್ತು. ನಿನ್ನ ವಿಷಯ ಹೇಳು ಅಂದಾಗ ಆತ ಮಾತು ಮರೆತು ಕುಳಿತಿದ್ದ. ಉಡಾಫೆ ಮಾತುಗಳನ್ನಾಡುವ ರಾಜಶೇಖರ ಬದಲಾಗಿದ್ದಾನೆ. ಬದುಕಿನ ಹಲವು ಮಗ್ಗುಲುಗಳನ್ನು ಕಂಡಿದ್ದಕ್ಕಿರಬೇಕು. ತನ್ನ ಕುರಿತು ಏನನ್ನು ಹೇಳದೆ ಭಾರವಾದ ಮನಸ್ಸಿನಿಂದ ಹೊರ ಹೋಗುವಾಗ ತನಗೇಕೆ ಆತನನ್ನು ತಡೆಯಬೇಕು. ಅವನೊಂದಿಗೆ ಏನೆಲ್ಲ ಮಾತಾಡಬೇಕು ಎನಿಸುತ್ತಿದೆ? ಸ್ವಾಮಿಜಿ ಮತ್ತೆ ಯೋಚನೆಯೊಳಗೇ ಇಳಿದರು.

ರಾಜಶೇಖರ ಹೇಳಿದಂತೆ ನಾನು ದುಡುಕಿದೆನೆ...? ಬದುಕುವ ದಾರಿ ಹುಡುಕಬೇಕಿತ್ತೇನೋ... ಬಹುಬೇಗ ಸೋತುಹೋದೆನೆ...? ಇಲ್ಲ... ಈಗ ಹಾಗೆನಿಸುತ್ತಿವೆ. ಆದರೆ ಆ ದಿನಗಳಲ್ಲಿ ಅನುಭವಿಸಿದ ಕಷ್ಟ... ಸಂಕಟ... ನನಗೆ ಬುದ್ಧಿ ಬಂದಾಗಿನಿಂದ ಅಂದ್ರೆ... ಅಪ್ಪ ಬೇನೆಯಿಂದ ನರಳುವಾಗಿಂದ ನೋವು-ಕಷ್ಟಗಳು ನನ್ನ ಜೋಳಿಗೆಯೊಳಗೇ ತುಂಬಿದ್ದವು. ಡಾ. ರಘುನಾಥನ್... ಹೌದು ಇದೇ ಡಾಕ್ಟರ್ ಹಣ ಬರುವವರೆಗೂ ಪೇಶೆಂಟನ್ನು ಮುಟ್ಟುವುದಿಲ್ಲವೆಂದು ಹೇಳಿದ. ನಾನು ಕೇಳಿಕೊಂಡೆ ಅವ್ವ ಅತ್ತು ಹೇಳಿದ್ದಳು... ಮನೆಯಿದೆ ನಮಗೆ ಹೇಗಾದ್ರೂ ಮಾಡಿ ಹಣ ಹೊಂದಿಸುತ್ತೇವೆಂದು ಅಲವತ್ತುಕೊಂಡೆವು. ಅದೇನಿದ್ರೂ ಹಣ ಬಂದ ಮೇಲೆನೇ ಎಂದಿದ್ದ ಈ ರಘುನಾಥನ್. ಮೊನ್ನೆ ನನ್ನೆದಿರು ಹೇಗೆ ಹಲ್ಲುಗಿಂಜತ್ತಿದ್ದ. ತನ್ನ ಕಾರಲ್ಲೇ.... ನನ್ನ ಪಕ್ಕ ಕೊಡಲು ಅನುಮತಿ ಕೇಳ್ತಾನೆ. ಛೀ ಅನ್ನಿಸುತ್ತೆ ಅವನ ಮೇಲಲ್ಲ. ನನ್ನ ಈ ಸ್ವಾಮಿ ಪಟ್ಟದ ಮೇಲೆ. ಮನುಷ್ಯನನ್ನ ಮನುಷ್ಯನಾಗಿ ನೋಡದ ಸ್ವಾಮಿಯ ಫ್ರೇಮಲ್ಲಿ ಗೌರವಿಸುವ ಈ ಪರಿಗೆ ಹೇಸಿಗೆಯಾಗುತ್ತದೆ. ಅವ್ವ ಊರಲ್ಲಿಯ ಮನೆಯನ್ನು ಮಾರಿ ಹಣ ತಂದಾಗ ಅಪ್ಪ ನಮ್ಮನ್ನು ಬಿಟ್ಟುಹೋಗಿದ್ದ.

ಹಣ ತರಲು ಬಹಳ ಲೇಟಾಯ್ತು ಎಂದು ಆತ ಸತ್ತಿದ್ದಕ್ಕೆ ಈ ಡಾಕ್ಟರ್ ಕಾರಣ ಹೇಳಿದ್ದ. ನಾನು ಸ್ವಾಮಿಯಾಗಲು ಕಾರಣಗಳು ಇವು ಎಂದು ಜನರೆದರು ಹೇಳುವುದಕ್ಕಾಗದೆ ಅಧ್ಯಾತ್ಮದ ಸೋಗನ್ನು ಚೆನ್ನಾಗಿ ನಿರ್ವಹಿಸುವ ಪ್ರಯತ್ನ ಈಗ ಅವಶ್ಯಕ.

ಹೊತ್ತು ನೆತ್ತಿಗೇರುತಿತ್ತು. ಇವತ್ತೂ ಪೂಜೆ ಮಾಡ್ಲಿಲ್ಲ. ಮನಸ್ಸು ಸ್ಥಿರವಿಲ್ಲ. ಆದ್ರೆ ಶಿಷ್ಯರೆಲ್ಲ ತಿಳಿದಿದ್ದೆ ಬೇರೆ. ಈ ಊರಿಗೆ ಬಂದಾಗಿಂದ ಪೂರ್ವಾಶ್ರಮ ಪೀಡಿತರಾಗಿದ್ದಾರೆ. ಇದಕ್ಕೂ ಮೊದಲೂ... ಇತ್ತು ಬಯಸಿದ ಬದುಕನ್ನುಪಡೆಯದ ನೋವಿತ್ತು. ಆದ್ರೆ ಈಗ... ಈ ಊರಿನ ಹಲವು ಮುಖಗಳನ್ನು ಕಂಡಾಗ ರೋಷ ಉಕ್ಕುತ್ತಿದೆ. ಸನ್ಯಾಸಿ ಎಲ್ಲವನ್ನು ಜಯಿಸಬೇಕು. ನಿಜ ಅದಕ್ಕೂ ಸಮಯ ಬೇಕೇನೋ. ಪ್ರವಚನದ ಮೊದಲು ಹೇಳುವ ಶಬ್ದಗಳು ಸರ್ವಸಂಗ ಪರಿತ್ಯಾಗಿ ತರುಣ ಸನ್ಯಾಸಿ... ಅವರಲ್ಲಿ ಗರಗಸದ ಅನುಭವವಾಗುತ್ತಿದೆ. ಆದಷ್ಟು ಬೇಗ ಈ ಊರಿಂದ ಹೋಗಬೇಕು. ಆದಷ್ಟು ಬೇಗ... ಎಂದುಕೊಳ್ಳುವಂತೆಯೇ ಮನದೊಳಗಿಂದ ದನಿ ಬಂತು. ನೀನು ಸನ್ಯಾಸಿ ಎಲ್ಲವನ್ನೂ ಸಮನಾಗಿ ಸ್ವೀಕರಿಸು. ಈ ಊರು ಆ ಊರು ಎನಬೇಡ. ಸಮಸ್ಯೆಗಳನ್ನು ಸ್ವಾರ್ಥವನ್ನು ಮೆಟ್ಟು. ಪರಿಸ್ಥಿತಿಯಿಂದ ಪಲಾಯನ ಬೇಡ. ಸ್ವಾಮೀಜಿಗೆ ನಗು ಬಂತು ಗಹಗಹಿಸಿ ನಕ್ಕರು... ಜೋರಾಗಿ... ಹೊಟ್ಟೆತುಂಬಾ ನಕ್ಕರು. ಶಿಷ್ಯರೆಲ್ಲ ಗಾಬರಿಯಿಂದ ಆಶ್ಚರ್ಯದಿಂದ ಗುರುಗಳನ್ನು ದೃಷ್ಟಿಸಿದರು. ಸ್ವಾಮೀಜಿ ನಗುತ್ತ... ನಗುತ್ತ ಬಂದ ಕಣ್ಣೀರನ್ನು ಒರಿಸಿಕೊಳ್ಳಲಿಲ್ಲ. ಒಳ ಮನಸ್ಸಿಗೆ ಹುಚ್ಚ ಇದೆಲ್ಲ ನನಗೆ ಸಾಧ್ಯವಾಗಿದ್ದರೆ ನಾನೇಕೆ ಸನ್ಯಾಸಿಯಾಗುತ್ತಿದ್ದೆ. ಬದುಕನ್ನೇ ಗೆಲ್ಲುತ್ತಿದ್ದೆ ಕೊರಳಲ್ಲಿಯ ತಾಯಿತ ಮುಟ್ಟಿಕೊಂಡರು. ಅವ್ವ ಕೊಟ್ಟ ಹಣದಲ್ಲಿಯ ಕೊನೆಯ ಐದು ರೂಪಾಯಿ ನಾಣ್ಯ... ಬದುಕಿಗೆ ಹೊಸ ದಾರಿ... ಅಲ್ಲ ಹೊಸ ಫ್ರೇಮ್ ತೊಡಿಸಿದ ನಾಣ್ಯ.. ಈಗ ಅದು ಕಾವಿಬಟ್ಟೆಯಲ್ಲಿ ಕುತ್ತಿಗೆಯ ತಾಯಿತವಾಗಿದೆ.

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .