|

ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಸಣ್ಣ ಕಥೆಗಳನ್ನು ಬರೆಯುತ್ತಾ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕೇಶವರೆಡ್ಡಿ ಹಂದ್ರಾಳ ಯಾವುದೇ ಚಳವಳಿಯ ಹಣೆಪಟ್ಟಿ ಅಂಟಿಸಿಕೊಂಡು ಮುಂಚೂಣಿಗೆ ಧಾವಿಸಿ ಆಟಾಟೋಪ ಮಾಡಿದವರಲ್ಲ. ತಮ್ಮಷ್ಟಕ್ಕೆ ತಮ್ಮ ಮಿತಿ-ಪರಿಮಿತಿಗಳಲ್ಲೇ ಕಥಾಸೃಷ್ಟಿಮಾಡುತ್ತಾ ಓದುವ ಅಭಿರುಚಿಯನ್ನು ಪೋಷಿಸಿಕೊಂಡು ಬಂದಿರುವ ಕೇಶವರೆಡ್ಡಿಯವರ ಇತ್ತೀಚಿನ ಕಥಾ ಸಂಕಲನ 'ಬಾರಕ್ಕ ಬೆಳದಿಂಗಳೆ'. ಈ ಸಂಕಲನದಲ್ಲಿ ಹದಿನಾರು ಕಥೆಗಳಿವೆ. ಕುಂವೀ ಅಣ್ಣನಿಗೆ ಪತ್ರರೂಪದಲ್ಲಿರುವ ಮೊದಲ ಕಥೆ 'ಮಾಯಾವಿ', ಹಂದ್ರಾಳರ ಬಾಲ್ಯವನ್ನೂ ಅವರೆದೆಯಲ್ಲಿ ಅಚ್ಚೊತ್ತಿ ನಿಂತಿರುವ ಅಜ್ಜಿಯ ಕಥೆಯನ್ನು ನಿರೂಪಿಸುವ ಮೂಲಕ ಲೇಖಕರ ಕಥನಶಕ್ತಿಯ ಬೇರುಗಳನ್ನು ಪರಿಚಯಿಸುತ್ತದೆ. ಸಂಕಲನದ ಹೆಸರಿನ ಕಥೆಗಾಗಿ ನೀವು ಹುಡುಕಾಡಿದರೆ ನಿರಾಶರಾಗಬೇಕಾಗುತ್ತದೆ. ಆದರೆ ಈ ನಿರಾಶೆ ತಾತ್ಕಾಲಿಕ. ಬೆಳದಿಂಗಳು ಕೇಶವರೆಡ್ಡಿ ಹಂದ್ರಾಳರಿಗೆ ಕಾಡುವ ಪ್ರತಿಮೆಯಾಗಿರಬೇಕು. ಸಂಕಲನದ ಬಹುತೇಕ ಕಥೆಗಳಲ್ಲಿ, ತಂಪು- ಸಾಂತ್ವನ- ಶೃಂಗಾರ ಪ್ರತೀಕವಾದ ತಿಂಗಳ ಚಂದಿರನ ಪ್ರತಿಮೆ ಹಲವು ನಮೂನೆ- ನೆಲೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮನುಷ್ಯ ಸಂಬಂಧಗಳು, ಗಂಡು-ಹೆಣ್ಣಿನ ಸಂಬಂಧಗಳು, ಅವುಗಳಿಗೆ ಲಗತ್ತಾದ ಜೀವನದ ಮೌಲ್ಯಗಳ ಪರಿಧಿಯಲ್ಲಿ ಸಾಗುವ ಇಲ್ಲಿನ ಕಥೆಗಳಲ್ಲಿ ಬೆಂದ ಭೂಮಿಯ ಬೆಳದಿಂಗಳ ಧ್ಯಾನ ಪ್ರಬಂಧದನಿಯಾಗಿ ಅಂತಃಕರಣವನ್ನು ತಟ್ಟುತ್ತದೆ.
ಕೇಶವರೆಡ್ಡಿ ಹಂದ್ರಾಳರದು ದೇಸಿ ಸಂವೇದನೆಗೆ ಒಲಿದ ಪ್ರತಿಭೆ. ಶಿಷ್ಟ ಸಂವೇದನೆಯ ಕೆಲವು ಕಥೆಗಳೂ (ಮೇಣದ ಮನೆ, ಧ್ಯಾನ) ಇಲ್ಲಿವೆ. ಕಥೆಗಾರರಾಗಿ ಹಂದ್ರಾಳರ ಯಶಸ್ಸಿರುವುದು ದೇಸಿಯಲ್ಲಾದರೂ ಶಿಷ್ಟದ ಪ್ರಯೋಗಗಳು ಅವರ ಸಂಕ್ರಮಣದ ಸೂಚಿಯಾಗಿವೆ. ದೇಸಿಯಲ್ಲಿ ಅವರಿಗೆ ಸಿದ್ಧಿಸಿರುವಷ್ಟು ನಿರಾಳ ಅಭಿವ್ಯಕ್ತಿ ಶಿಷ್ಟದಲ್ಲಿ ಸಹಜವಾಗಿಯೇ ವಸ್ತು- ತಂತ್ರ ಎರಡರಲ್ಲೂ ಸುಲಭಗಮ್ಯವಾಗಿಲ್ಲ. ವೈಚಾರಿಕ ಭಿತ್ತಿ, ಅನುಭವ ಸಾಂದ್ರತೆ, ಭಾವನಾ ಸಂಘರ್ಷಗಳನ್ನು ನಿಭಾಯಿಸುವುದರಲ್ಲಿ ದೇಸಿಯಲ್ಲಿ ಸಲಿಲವಾಗುವಷ್ಟು ಶಿಷ್ಟ ಸಂವೇದನೆಯಲ್ಲಿ ಸಾಧ್ಯವಾಗುವುದಿಲ್ಲ. ಈ ಸಂಕಲನದಲ್ಲಿ ವಿಮರ್ಶೆ ಗಮನಿಸಲೇಬೇಕಾದ ಕಥೆಗಳೆಂದರೆ- 'ಮೇಣದ ಮನೆ', 'ಡಾಕ್ಟರ್ ಹುಲಿಗೆಪ್ಪನ ಸ್ಕೂಟರ್ ಲೋನು', 'ಬಾರೆಲೆ ಹಕ್ಕಿ ಬಣ್ಣದ ಹಕ್ಕಿ', 'ಬೊಜ್ಜೀರಕ್ಕನ ಬುಡ್ಡೊಕ್ಳು', 'ವೆಂಕಟೇಶ ಉರೂಫ್ ಯಂಗ್ಟೇಸ' ದೇಸಿ ಸಂವೇದನೆಯ ಕಥೆಗಳಾಗಿದ್ದು, ಕೇಶವರೆಡ್ಡಿ ಹಂದ್ರಾಳರ ಕಥನಶಕ್ತಿಗೆ ಹೆಗ್ಗುರುತಾಗಿ ನಿಲ್ಲುತ್ತವೆ.
'ಡಾಕ್ಟರ್ ಹುಲಿಗೆಪ್ಪ...', ಸ್ನಾತಕ್ಕೋತ್ತರ ಪದವೀಧರನಾಗಿ ನಗರಜೀವನಕ್ಕೆ ಒಡ್ಡಿಕೊಂಡೂ ಹಳ್ಳಿಯ ಮುಗ್ಧತೆಯನ್ನೂ ಸಾಚಾತನವನ್ನೂ ಉಳಿಸಿಕೊಂಡ ವ್ಯಕ್ತಿಯೊಬ್ಬ ನಿರಪರಾಧಿಯಾದರೂ ವ್ಯವಸ್ಥೆಯ ಹುನ್ನಾರಗಳಿಗೆ ಬಲಿಯಾಗುವುದನ್ನು ಮಾರ್ಮಿಕವಾಗಿ ನಿರೂಪಿಸುವ ಕಥೆ. 'ವೆಂಕಟೇಶ ಉರೂಫ್ ಯಂಗ್ಟೇಸ'- ಜಾಗತೀಕರಣದ ಸಾಂಸ್ಕೃತಿಕ ದುಷ್ಪರಿಣಾಮಗಳನ್ನು ಮನಕಲಕುವಂತೆ ಬಿಂಬಿಸುವ ಕಥೆ. ಹಳ್ಳಿಗೆ ಬರುವ ಸೊಸೆಯೊಬ್ಬಳ ಬೊಜ್ಜು ಹೊಟ್ಟೆ, ಅದರ ಪ್ರಧಾನ ಆಕರ್ಷಣೆಯಾದ ಹೊಕ್ಕುಳು, ಜನ ಈ ಹೊಕ್ಕುಳನ್ನು ವರ್ಣಿಸುವ- ವ್ಯಾಖ್ಯಾನಿಸುವ ರೀತಿ, ಈ ಪರಿ ಆಕೆಯ ಗಂಡನಲ್ಲಿ ಮೂಡಿಸುವ ವಿಹ್ವಲತೆಗಳಿಂದಾಗಿ ಓದುಗರನ್ನೂ ಸೆಳೆದುಕೊಳ್ಳುವ ಒಂದು ಸರಸ ಕಥೆ 'ಬೊಜ್ಜೀರಕ್ಕನ ಬುಡ್ಡೊಕ್ಳು'. ಇದರ ವಿಶೇಷ ಛಾಪೆಂದರೆ ಅಶ್ಲೀಲಕ್ಕೆ ವಾಲದ ಸೌಂದರ್ಯಾಭಿಜ್ಞತೆ.
'ಮೇಣದ ಮನೆ', 'ಧ್ಯಾನ', 'ಹಿಮದ ತೆನೆ' ಮತ್ತು 'ತೆರೆ' ಶಿಷ್ಟ ಸಂವೇದನೆಯ ಕಥೆಗಳು ಎನ್ನಬಹುದಾದವು. ಬಂಧದ ದೃಷ್ಟಿಯಿಂದ ಉತ್ತಮ ಶಿಲ್ಪ ಸದೃಶವಾದ ಬರವಣಿಗೆ ಎನ್ನಬಹುದಾದ 'ಮೇಣದ ಮನೆಯ' ಅಸ್ತಿಭಾರವೇ ಶಿಥಿಲ. ಈ ಕಥೆಯ ನಾಯಕಿ ಇಬ್ಬರು ಮಕ್ಕಳಾಗಿ, ಮದುವೆಯಾದ ಹತ್ತು ವರ್ಷಗಳ ನಂತರ, ತನಗಾಗಿ ಕಾಯುತ್ತಿರುವ ಮಾಜಿ ಪ್ರೇಮಿಯ ಪ್ರೀತಿಯ ಬದ್ಧತೆಗೆ ಬೆರಗಾಗಿ ವಿವಾಹ ವಿಚ್ಛೇದನ ಪಡೆದು ಅಮೆರಿಕಕ್ಕೆ ಹಾರುತ್ತಾಳೆ. ಹತ್ತು ವರ್ಷಗಳ ಸಫಲ ದಾಂಪತ್ಯ ತ್ಯಜಿಸಿ ಹಳೆಯ ಗೆಳೆಯನ ಪ್ರೀತಿಬದ್ಧತೆಗೆ ಮಾರುಹೋಗಲು ಗಟ್ಟಿಯಾದ ಕಾರಣ ಸಿಗದೆ ಅವಳ ತೀರ್ಮಾನ ಸಹಜವೆನಿಸುವುದಿಲ್ಲ. '...ಬುಡ್ಡೊಕ್ಳು' ಕಥೆಯಲ್ಲಿ ಅಶ್ಲೀಲವಾಗದ ಗಂಡು- ಹೆಣ್ಣಿನ ಸಂಬಂಧ ಇಲ್ಲಿ ಅಶ್ಲೀಲತೆಯೇ ಮೈವೆತ್ತಿದಂತೆ ನಮ್ಮನ್ನು ನಾಚಿಸುತ್ತದೆ.
'ಧ್ಯಾನ'ದ ನಾಯಕಿ, 'ಮೇಣದ ಮನೆ'ಯ ನಾಯಕಿಗಿಂತ ಪ್ರಬುದ್ಧಳು. ಬದುಕಿನ ಕೆಮಿಸ್ಟ್ರಿಯಲ್ಲಿ ಭಾವುಕತೆ, ವ್ಯಾಮೋಹಗಳಿಗೆ ಅವಕಾಶವಿಲ್ಲ ಎನ್ನುವ ಈ ದಿಟ್ಟೆ, ಗಂಡು-ಹೆಣ್ಣಿನ ಪ್ರೀತಿ ಸಂಬಂಧಗಳ ಬಗ್ಗೆ ತಾಳುವ ನಿಲುವಿನ ಹಿಂದೆ ಪುರುಷನೊಬ್ಬನಿಂದ ತಿರಸ್ಕೃತಳಾದ ಗಟ್ಟಿಕಾರಣವಿದೆ. ಪ್ರೀತಿ- ಆಕರ್ಷಣೆಗಳಿದ್ದೂ ದೂರ ಉಳಿಯುವ, ದೂರವಾಗುವ ಈ ವಿಲಕ್ಷಣ ಕಥೆ ನವ್ಯದ ಅನಾಥಪ್ರಜ್ಞೆಯನ್ನು ನೆನಪಿಗೆ ತರುತ್ತದೆ.
ಸಾಂಸ್ಕೃತಿಕ ಪಲ್ಲಟದ ನೋವನ್ನು ಬಿಂಬಿಸುವ ಉತ್ತಮ ಕಥೆಯಾಗುವ ಎಲ್ಲ ದ್ರವ್ಯವಿದ್ದೂ ಲೇಖಕರ ಹತ್ತಿಕ್ಕಲಾಗದ ಅಮೆರಿಕ ವ್ಯಾಮೋಹ ವಿರೋಧಿ ತುಡಿತಗಳಿಂದಾಗಿ ವಾಚಾಳಿಯಾಗಿದೆ. ವ್ಯಂಗ್ಯ, ವಿಡಂಬನೆ, ಲೇವಡಿಗಳು 'ವರ್ಲ್ಡ್ ಟ್ರೇಡ್ ಸೆಂಟರ್ ಉರುಳಿದ್ದು ಒಳ್ಳೇದೆ ಆಯ್ತು' ಎನ್ನುವ ಸಿನಿಕತನದ ಮೇರುಮುಟ್ಟುತ್ತದೆ. 'ಬಾರೆಲೆ ಹಕ್ಕಿ- ಬಣ್ಣದ ಹಕ್ಕಿ'ಯ ನೈಟ್‌ಕ್ಲಬ್ ನರ್ತಕಿ ಆಕಾಶದ ಚಂದ್ರಮನೊಂದಿಗೆ ನಡೆಸುವ ಸಂವಾದದಲ್ಲಿ ಹಲವಾರು ಕಥೆಗಳು ತೆರೆದುಕೊಂಡು ಸ್ಪಂದನಶೀಲವಾಗುತ್ತದೆ. ಷೋಡಶಿಯೊಬ್ಬಳ ಕನಸಿನ ಪ್ರಪಂಚದಂತೆ ಓದಿಸಿಕೊಳ್ಳುವ 'ಹಿಮದ ತೆನೆ' ಕೊನೆಯ ವಿವರಗಳಲ್ಲಿ ನಮಗೆ ವಾಸ್ತವದ ಬಿಸಿಯನ್ನು ತಾಕಿಸುವುದರಲ್ಲಿ ಯಶಸ್ವಿಯಾಗುತ್ತದೆ. ಇವೆರಡೂ ಭಾವಗೀತಾತ್ಮಕ ಕಥೆಗಳು.
ಕೇಶವರೆಡ್ಡಿ ಹಂದ್ರಾಳರ ಮುಂದಿನ ಹೆಜ್ಜೆಗಳ ಬಗ್ಗೆ ಹೊಸ ನಿರೀಕ್ಷೆಗಳನ್ನು ಹುಟ್ಟಿಸುವ ಕಥೆಗಳನ್ನೊಳ- ಗೊಂಡಿರುವ ಈ ಸಂಕಲನದ ಪ್ರಕಟಣೆಯಿಂದ 'ಅಂಕಿತ' ಒಂದು ಸಾರ್ಥಕ ಕೆಲಸವನ್ನು ಮಾಡಿದೆ. .
ಟಿಎಸ್‌ಐ
ಜಿ.ಎನ್. ರಂಗನಾಥ ರಾವ್
|