ಪ್ರಜಾಪ್ರಭುತ್ವ ಚಿರಾಯು!
ಮೇ
8,
2008, ಯಮಕನಮರಡಿ
ಯಮಕನಮರಡಿ ಎಂಬ ಪರಿಶಿಷ್ಟ ವರ್ಗದ ಮೀಸಲು
ಕ್ಷೇತ್ರ ಅಕ್ಷರಶಃ ಗೊಂಡಾರಣ್ಯ.
ಸರ್ವ ರೀತಿಯಲ್ಲೂ ಅತ್ಯಂತ ಹಿಂದುಳಿದ ಈ
ಕ್ಷೇತ್ರದ ಮುಖ್ಯ ಕೇಂದ್ರವಾದ ಯಮಕನಮರಡಿಗೆ ಕಾಲಿಟ್ಟರೂ ಸಾಕು ಅದು
ಸರ್ವವೇದ್ಯವಾಗದೇ ಇರದು.
ಅಲ್ಲಿನ ಅಂಗಡಿಯೊಂದರ ಅಂಚಿನಲ್ಲಿ ಚಪ್ಪಲಿ
ರಿಪೇರಿ ಮಾಡಿಕೊಂಡಿರುವ ಅಶೋಕ್ ಕಳೆದ ಇಪ್ಪತೈದು ವರ್ಷಗಳಿಂದಲೂ ಚಪ್ಪಲಿ
ಹೊಲಿದುಕೊಂಡೇ ಜೀವನ ಸಾಗಿಸುತ್ತಿದ್ದಾರೆ.
ಚಮ್ಮಾರರು,
ಕುಂಬಾರ,
ಕಮ್ಮಾರ ಮುಂತಾದ ಕುಶಲಕರ್ಮಿಗಳ ಅಭಿವೃದ್ಧಿಗಾಗಿ
ಸರ್ಕಾರಗಳು ಪ್ರತಿ ವರ್ಷ ವ್ಯಯ ಮಾಡುವ ಹಣ ಕೂಡ ಅಶೋಕ್ ಅವರ ಬೆವರಂತೆಯೇ
ನಿತ್ಯನಿರಂತರ.
ಚಮ್ಮಾರರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಕೂಡ ಭರ್ಜರಿ
ಬಜೆಟ್ ಅನುದಾನವನ್ನೇ ಪಡೆಯುತ್ತಿದೆ.
ಆದಾಗ್ಯೂ ಅಂತಹವೆಲ್ಲಾ ನಿಜವಾಗಿಯೂ ಅರ್ಹರಿಗೆ
ತಲುಪುತ್ತಿವೆಯೇ ಎಂಬುದನ್ನು ತಿಳಿಯಬೇಕಾದರೆ ಮಾಜಿ ಜವಳಿ ಸಚಿವ ಸತೀಶ್
ಜಾರಕಿಹೊಳಿ ಸ್ಪರ್ಧಿಸಿರುವ ಯಮಕನಮರಡಿಯ ಅಶೋಕ್ ಕಥೆಯೇ ಸಾಕು.
ಅಶೋಕ್ ಮಾತುಗಳಲ್ಲೇ ಹೇಳುವುದಾದರೆ,
ಅವರಿಗೆ ಸರ್ಕಾರದಿಂದ ಈವರೆಗೆ ಒಂದು ಪೈಸೆ ನೆರವು
ಕೂಡ ಸಿಕ್ಕಿಲ್ಲ.
ಜೊತೆಗೆ ತಮ್ಮಂತಹ ಕುಶಲಕರ್ಮಿಗಳಿಗೆ ಊರುಗೋಲಾಗುವಂತಹ
ಯೋಜನೆಗಳು ಸರ್ಕಾರದಲ್ಲಿ ಇವೆ ಎಂಬುದು ಕೂಡ ಅವರಿಗೆ ತಿಳಿದಿಲ್ಲ.
ಆದರೂ ಅವರು ಹೇಳುತ್ತಾರೆ;
ಸರ್ಕಾರ ನಮಗೆ ಏನಾರ ಕೊಡಲಿ,
ಬಿಡಲಿ,
ನಾವು ಓಟಂತೂ ಹಾಕಲೇಬೇಕಲ್ರಿ...
ಅದು ನಮ್ಮ ಕರ್ತವ್ಯ ಅದ...
ಅದನ್ನು ಮರೆಯೋಂಗಿಲ್ರಿ...
ಎಂದು!
ಪ್ರಜಾಪ್ರಭುತ್ವ ಚಿರಾಯು ಎನ್ನೋಣವೇ?
ಮುಖಂಡರ
'ತೀರ್ಥಯಾತ್ರೆ'
ಮೇ
8,
2008, ಅರಭಾವಿ
ಬೆಳಗಾವಿ ಜಿಲ್ಲೆಯ ಪಂಚ ಪಾಂಡವರು ಎಂದೇ
ಕರೆಸಿಕೊಳ್ಳುವ ಜಾರಕಿಹೊಳಿ ಸಹೋದರರು ಮತ್ತು ಅವರ ಸಾಂಪ್ರದಾಯಿಕ ವಿರೋಧಿ
ಕೌಜಲಗಿ ಕುಟುಂಬದ ನಡುವಿನ ಹಣಾಹಣಿಯ ಕಣ ಈ ಬಾರಿ ಅರಭಾವಿ ಕ್ಷೇತ್ರ.
ಎಲ್ಲಾ ಅರ್ಥದಲ್ಲೂ ಪರಸ್ಪರ ಕತ್ತಿ ಮಸೆಯುವ ಈ
ಭಾರೀ ಕುಳಗಳ ನಡುವೆ ಈಗಂತೂ ದೊಡ್ಡ ಸಮರವೇ ಆರಂಭವಾಗಿಬಿಟ್ಟಿದೆ ಎಂಬುದನ್ನು
ಈ ಕ್ಷೇತ್ರದ ಪ್ರತಿ ಹಳ್ಳಿ-ಹಳ್ಳಿಗಳೂ
ಪ್ರತಿಧ್ವನಿಸುತ್ತವೆ.
ಅದೂ ನೀರವ ಮೌನದ ಮೂಲಕವೇ!
ಹೌದು,
ಇಲ್ಲಿನ ಹಳ್ಳಿಗಳಲ್ಲಿ ಬಹುತೇಕ ಸದ್ದಿಲ್ಲದ,
ಗದ್ದಲವಿಲ್ಲದ ಅಘೋಷಿತ ಬಂದ್ ಸ್ಥಿತಿ
ನಿರ್ಮಾಣವಾಗಿಬಿಟ್ಟಿದೆ.
ಅದು ಚುನಾವಣಾ ಆಯೋಗದ ಬಿಗಿ ಕ್ರಮದ ಪರಿಣಾಮವಂತೂ ಅಲ್ಲ
ಬಿಡಿ.
ಮತ್ತೇನು ಕಾರಣವೆಂಬ ಪ್ರಶ್ನೆ ಮೂಡಿದರೆ,
ಅದಕ್ಕೆ ಸಿಗುವ ಉತ್ತರ ಕುತೂಹಲಕರ.
ದಲಿತ ಮತ್ತು ಹಿಂದುಳಿದ ವರ್ಗಗಳ ನಾಯಕ
ಬಾಲಚಂದ್ರ ಜಾರಕಿಹೊಳಿ ಮತ್ತು ಲಿಂಗಾಯಿತ ನಾಯಕ ಕೌಜಲಗಿ ನಡುವಿನ
ಗುದ್ದಾಟದಲ್ಲಿ ತಾವು ಯಾರ ಪರ ವಹಿಸಿದರೂ
'ಅಪಾಯ'
ತಪ್ಪಿದ್ದಲ್ಲ ಎಂಬುದನ್ನು ಹತ್ತಾರು ವರ್ಷಗಳ ಅನುಭವದಲ್ಲಿ ಕಂಡುಕೊಂಡಿರುವ
ಕ್ಷೇತ್ರದ ಹಲವು ಮುಖಂಡರುಗಳಿಗೆ ಚುನಾವಣಾ ಸಂದರ್ಭದಲ್ಲಿ ಯಾರ ಪರವೂ ವಹಿಸದೇ
ಇರಲು ಸಾಧ್ಯವಾಗದ ಸ್ಥಿತಿ.
ಒಂದು ವೇಳೆ ಯಾರದಾದರೂ ಪರ ಪ್ರಚಾರಕ್ಕೆ ಹೋದರೆ
ನಾಳೆ ತಮ್ಮ ಭವಿಷ್ಯಕ್ಕೆ ಕಲ್ಲು ಬಿದ್ದಂತೆಯೇ!
ಇಂತಹ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಲು ಅವರಿಗೆ
ಹೊಳೆದ ಉಪಾಯವೆಂದರೆ ತೀರ್ಥಯಾತ್ರೆ!
ಹೌದು,
ಕ್ಷೇತ್ರದ ಬಹುತೇಕ ಮೇಲ್ವರ್ಗದ ಮುಖಂಡರುಗಳು
ಪಕ್ಷ-
ಪಾರ್ಟಿ ಭೇದ ಮರೆತು ಸಾಮೂಹಿಕವಾಗಿ
7-8
ವಾಹನಗಳಲ್ಲಿ ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದಾರೆ!
ಅದೂ ಗೋವಾದಿಂದಲೇ ತಮ್ಮ
'ತೀರ್ಥಯಾತ್ರೆ'
ಆರಂಭಿಸಿದ್ದಾರಂತೆ!!
ಲಕಲಕಿಸುವ ಲಲನೆಯರು!
ಮೇ
10,
2008,
ಕಲಘಟಗಿ
ಕಲಘಟಗಿಯ ಬಸ್ ನಿಲ್ದಾಣದಲ್ಲಿ ಅಂದು ಎಲ್ಲಿ
ನೋಡಿದರೂ ಬಣ್ಣ-
ಬಣ್ಣದ ಹೊಸ ಸೀರೆ ಉಟ್ಟ ನೀರೆಯರೇ!
ಇದೇನಿದು ಇಷ್ಟೊಂದು ಹೆಂಗಸರು,
ಅದೂ ಎಲ್ಲಾ ಹೊಸ ಸೀರೆಯುಟ್ಟುಕೊಂಡೇ ಬಂದಿದ್ದಾರೆ,
ಮದುವೆಗೆ ಬಂದಿರಬಹುದು ಎನಿಸಿದರೂ...
ಸುಮ್ನೆ ಕೇಳೋಣ ಎನಿಸಿ ಅವರೊಲ್ಲಬ್ಬರನ್ನು ಮಾತಿಗೆ
ಎಳೆದರೆ ನಿಜ ಬೇರೆಯದೇ!
ರಾಷ್ಟ್ರೀಯ ಪಕ್ಷವೊಂದರ ಭಾರೀ ಹಣಬಲದ
ವ್ಯಕ್ತಿಯೊಬ್ಬರು ಕ್ಷೇತ್ರದ ಎಲ್ಲಾ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಭಾರಿ
'ಉಡುಗೊರೆ'ಯನ್ನೇ
ಕೊಟ್ಟಿದ್ದು,
ಅದರ ಫಲವಾಗಿಯೂ ಈ ಮಹಿಳಾ ಮಣಿಗಳು ಲಕಲಕಿಸುವ ಸೀರೆಗಳಲ್ಲಿ
ಕಂಗೊಳಿಸುತ್ತಿದ್ದಾರೆ ಎಂಬ ಸಂಗತಿ ಹೊರಬಿತ್ತು!
ಕ್ಷೇತ್ರದಲ್ಲಿ ಈ ಬಾರಿ ಚುನಾವಣೆಗೆ ಭಾರಿ
ಖದರ್ ಬಂದಿದ್ದು,
ಹಳ್ಳಿ-ಹಳ್ಳಿಗೂ
ಬೃಹತ್ ಪ್ರಮಾಣದ 'ಭಕ್ಷೀಸು'
ನೀಡಲಾಗಿದೆಯಂತೆ!
ಜೊತೆಗೆ ಪ್ರತಿ ಮಹಿಳಾ ಮತ್ತು ಪುರುಷರ ಸ್ವಸಹಾಯ ಮತ್ತು
ಸ್ತ್ರೀಶಕ್ತಿ ಸಂಘಗಳಿಗೆ ಸಂಘದ ಬಾಬ್ತು ಮತ್ತು ಸದಸ್ಯರಿಗೆ ವೈಯಕ್ತಿಕ
ಬಾಬ್ತು ಎಂದು ಪ್ರತ್ಯೇಕ ಕಾಣಿಕೆಯನ್ನೂ ನೀಡಲಾಗಿದೆಯಂತೆ!
ಈ ಉಡುಗೊರೆ ಆಟ ಎಲ್ಲಿಯವರೆಗೆ ಹೋಗಿದೆ ಎಂದರೆ,
ಅಲ್ಲಿ ಈಗ ನಾಲ್ಕು ಜನ ಸೇರಿ ಸಿನಿಮಾಕ್ಕೆ ಹೋದರೂ,
ಜನ ಏನೋ ಧಣಿಗಳು ಸ್ಪಾನ್ಸರ್ ಮಾಡಿದ್ರಾ?
ಎಂದು ಅರ್ಧ ತಮಾಷೆ ಮತ್ತು ಅರ್ಧ
ಹೊಟ್ಟೆಕಿಚ್ಚಿನಿಂದ ಕೇಳುವಂತಹ ಸ್ಥಿತಿ ಇದೆ!
ಜೋಪಡಿ ಇವೆ ಕಣ್ರಿ!
ಮೇ
11,
2008,
ದೂಳೀಕೊಪ್ಪ ಕ್ರಾಸ್
'ಬಡತನ ನಿರ್ಮೂಲನೆ'ಯಷ್ಟೇ
ಪುರಾತನವಾದ ಮತ್ತೊಂದು ಘೋಷಣೆ ಎಂದರೆ
'ಗುಡಿಸಲುರಹಿತ
ರಾಜ್ಯವನ್ನಾಗಿ ಮಾಡುತ್ತೇವೆ'
ಎಂಬುದು.
ಆದರೆ,
ಅಂತಹ ಘೋಷಣೆಗಳು ಎಂತಹ ಅಪ್ಪಟ ಹುಸಿ ನಾಟಕಗಳು ಎಂಬುದಕ್ಕೆ
ನಿದರ್ಶನ,
'ಭಾರತ
ಪ್ರಕಾಶಿಸುತ್ತಿದೆ'
ಎಂಬಷ್ಟೇ ವಿರೋಧಾಭಾಸ ದೂಳೀಕೊಪ್ಪ ಕ್ರಾಸ್ ಎಂಬ ಜಾಗ.
ನಗರದ ನರಕಗಳಾದ ಕೊಳಗೇರಿಗಳು ನಾಚುವಂತೆ ಇರುವ ಈ
ಪ್ರದೇಶದಲ್ಲಿ ಸುಮಾರು ೬0ಕ್ಕೂ
ಹೆಚ್ಚು ಕುಟುಂಬಗಳು ಇಂದಿಗೂ ಜೋಪಡಿಗಳಲ್ಲೇ ವಾಸಿಸುತ್ತಿದ್ದಾರೆ.
ಬ್ಯಾಡಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈ
ಊರಿನ ಜನ ಅಕ್ಷರಶಃ ಕಡುಬಡವರು ಎಂಬುದಕ್ಕೆ ಅರೆ-ಬರೆ
ಹುಲ್ಲುಹಾಸಿನ,
ಮಣ್ಣಿನ ಗೋಡೆಗಳೂ ಇಲ್ಲದೆ ತಟ್ಟಿ ಬಾಗಿಲುಗಳ ಗುಡಿಸಲುಗಳ
ಉದ್ದನೆ ಸಾಲೇ ಸಾಕ್ಷಿ.
150 ಮತಗಳಿರುವ
ಇಲ್ಲಿಗೆ ಮಾಜಿ ಶಾಸಕ ನೆಹರೂ ಓಲಿಕರ ಅವರು ಕಳೆದ ಬಾರಿ ಮತ ಯಾಚನೆಗೆ
ಬಂದಿದ್ದರು.
ಗುಡಿಸಲುಗಳನ್ನು ಕಂಡು
'ಕರಗಿಹೋದ'
ಅವರು ಆರಿಸಿಬಂದಲ್ಲಿ ಎಲ್ಲರಿಗೂ ಆಶ್ರಯ ಮನೆ ಕೊಡುವುದಾಗಿ ಹೇಳಿ ಹೋಗಿದ್ದರು.
ಇದೀಗ ಮತ್ತೆ ಚುನಾವಣೆ ಬಂದಿದೆ.
ಆದರೆ,
ಇಲ್ಲಿನ ಕೂಲಿಕಾರ್ಮಿಕರಿಗೆ ಮನೆ ಇರಲಿ,
ಕನಿಷ್ಠ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ
ಪರಿಚಯ ಕೂಡ ಆಗಿಲ್ಲ.
ಬಹುತೇಕ ಕುಟುಂಬಗಳಿಗೆ ಹಸಿರು ಪಡಿತರ ಚೀಟಿ ಸಿಕ್ಕಿಲ್ಲ.
ವಿದ್ಯುತ್ ಸಂಪರ್ಕವಿಲ್ಲ,
ಚಿಮಣಿ ಬುಡ್ಡಿಯ ದೀಪದಲ್ಲೇ ಓದುವ ಮಕ್ಕಳು ದಿನ
ಬೆಳಗಾದರೆ ಬರೋಬ್ಬರಿ ಎರಡೂವರೆ ಕಿ.ಮೀ.
ದೂರ ನಡೆದು ಶಾಲೆಯ ಮೆಟ್ಟಿಲು ತುಳಿಯಬೇಕಿದೆ.
ಆಸ್ಪತ್ರೆಗೆ ಹೋಗಲು ಜನ ಕನಿಷ್ಠ
12 ಕಿ.ಮೀ.
ದೂರ ಸಾಗಬೇಕು!
ಬಹುಶಃ ಈ ಸತ್ಯ ಅರಿತೇ ಎಲ್ಲಾ ಪಕ್ಷಗಳೂ
'ಅಭಿವೃದ್ಧಿಯೇ
ನಮ್ಮ ಮಂತ್ರ (ಕುತಂತ್ರ)'
ಎನ್ನುತ್ತಿರಬೇಕು ಅಲ್ಲವೇ?!
'ಕಾಗದದ ಮೇಲಷ್ಟೇ
ಕಾಮಗಾರಿ'
ಮೇ
8,
2008, ಶಹಾಪುರ
ಗುಲ್ಬರ್ಗ ಜಿಲ್ಲೆಯ ಶಹಾಪುರದ ರಸ್ತೆಯೊಂದರ
ಕಾಮಗಾರಿ ತೀರಾ ಕಳಪೆಯಾಗಿತ್ತಂತೆ.
ಅದೇಕೆ ಇಷ್ಟು ಕಳಪೆ ಎಂದು ಅಲ್ಲಿನ ನಿವಾಸಿ
ಶಿಕ್ಷಕರೊಬ್ಬರು ಅಧಿಕಾರಿಗಳನ್ನು ವಿಚಾರಿಸಿದರೆ ಸರಿಯಾದ ಉತ್ತರವೇ ಬರಲಿಲ್ಲ.
ಸರಿ ಆ ಶಿಕ್ಷಕರು ಮಾಹಿತಿ ಹಕ್ಕು ಕಾಯ್ದೆ ಅಡಿ
ಅರ್ಜಿ ಹಾಕಿದರು.
ಉತ್ತರ ಬಂತು:
ಒಂದು ಕಿ.ಮೀ.
ದೂರದ ಆ ರಸ್ತೆಗೆ
'ಕಾಗದದ ಮೇಲೆ
ಖರ್ಚಾದ'
ಹಣ ಐದು ಕೋಟಿ ರೂ.
ಆದರೆ ರಸ್ತೆ ಕಾಮಗಾರಿಯನ್ನು ನೋಡಿದರೆ ಐದು ಲಕ್ಷ ಕೂಡಾ
ಖರ್ಚಾದಂತಿರಲಿಲ್ಲ.
ಸರಿ ಅಲ್ಲಿನ ನಿವಾಸಿಗಳನ್ನೆಲ್ಲಾ ಎಚ್ಚರಿಸಿ ಆ ಶಿಕ್ಷಕರು
ಪ್ರತಿಭಟನೆ ಮಾಡಿದರು.
ಕೊನೆಗೆ ಮರು ಕಾಮಗಾರಿ ನಡೆಸಲಾಯಿತು.
ಆಗಲೂ ಪೂರಾ ಹಣ ವಿನಿಯೋಗಿಸಲಿಲ್ಲ ಬಿಡಿ.
ಆದರೆ ಜನಪ್ರತಿನಿಧಿಗಳಿಗೆ ಒಂದು ಒಳ್ಳೆಯ ಪಾಠ
ಆಯಿತು.
ಈಗ ರಾಜಕಾರಣ ಎಷ್ಟು ಹೊಲಸಾಗಿದೆ ಎಂದರೆ
ಸುಸಂಸ್ಕೃತರು,
ಒಳ್ಳೆಯವರು ರಾಜಕೀಯ ಆಯ್ಕೆ ಮಾಡಿಕೊಳ್ಳೋದೂ ಇಲ್ಲ.
ಅಕಸ್ಮಾತ್ ಆ ಕ್ಷೇತ್ರ ಪ್ರವೇಶಿಸಿದರೆ ಅಲ್ಲಿ
ಉಳಿಯುವುದೂ ಇಲ್ಲ.
ಅಭ್ಯರ್ಥಿಗಳು ಮನೆ ಬಾಗಿಲಿಗೆ ಕೈ ಮುಗಿದುಕೊಂಡು ಬಂದರೆ
ನಮ್ಮ ಜನ ಕರಗಿ ಹೋಗಿಬಿಡ್ತಾರೆ.
ಅಷ್ಟು ದೊಡ್ಡ ಮನುಷ್ಯ ಮನೆ ಬಾಗಿಲಿಗೆ ಬಂದರಲ್ಲ
ಅಂತಾ ವೋಟು ಹಾಕಿ ಬಿಡ್ತಾರೆ.
ಈ ಮನೋಭಾವ ಹೋಗಬೇಕು.
ರಾಜಕಾರಣಿಗಳು ಎಂದರೆ ಅವರನ್ನು ದೂರ ಇಡಬೇಕು.
ಮನೆಬಾಗಿಲಿಗೆ ಸೇರಿಸಬಾರದು.
ಇದ್ದುದರಲ್ಲಿ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ
ಮಾಡಬೇಕು ಎನ್ನುತ್ತಾರೆ ಆ ಶಾಲಾ ಶಿಕ್ಷಕರು.
ಒದೆಯಂಗಿಲ್ಲ,
ಹಾಲೂ ಕೊಡಂಗಿಲ್ಲ...
ಮೇ
8,
2008, ಜೇವರ್ಗಿ
ಗುಲ್ಬರ್ಗ ಜಿಲ್ಲೆಯ ಜೇವರ್ಗಿ ಕ್ಷೇತ್ರದಿಂದ
ಸತತ ಎಂಟು ಬಾರಿ ಆರಿಸಿ ಬಂದು ಇದೀಗ ಗಿನ್ನಿಸ್ ದಾಖಲೆಗೆ ಸಜ್ಜಾಗಿರುವ ಮಾಜಿ
ಮುಖ್ಯಮಂತ್ರಿ ಧರ್ಮಸಿಂಗ್ ಅವರನ್ನು ಅಲ್ಲಿನ ಜನ ಒಂದೇ ವಾಕ್ಯದಲ್ಲಿ
ವಿಶ್ಲೇಷಿಸುವುದು ಹೀಗೆ.
ಧರ್ಮಸಿಂಗ್ ಅವರು ಕಳೆದ
35 ವರ್ಷಗಳಿಂದ
ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
14
ವರ್ಷ ಮಂತ್ರಿಯಾಗಿದ್ದು 2
ವರ್ಷ ಮುಖ್ಯಮಂತ್ರಿಯೂ ಆಗಿದ್ದಾರೆ.
ಆದರೆ ಜೇವರ್ಗಿ ತಾಲೂಕು ಅತಿ ಹಿಂದುಳಿದಿದ್ದು
174ನೇ
ಸ್ಥಾನದಲ್ಲಿದೆ ಎಂದು ಅಲ್ಲಿನ ಜನ ದೂರುತ್ತಾರೆ.
ಹಾಗಾದರೆ ಅವರನ್ನು ನೀವು ಯಾಕೆ ಆರಿಸುತ್ತೀರಿ?
ಎಂದು ಪ್ರಶ್ನಿಸಿದರೆ,
ಧರ್ಮಸಿಂಗ್ ಅವರು ಕೆಲಸ ಮಾಡದಿದ್ದರೂ ಸಾಧು
ಮನುಷ್ಯ.
ಹಾಲು ಕೊಡದ ಆಕಳಾದರೂ,
ಒದೆಯುವುದಿಲ್ಲ.
ಜೊತೆಗೆ ಯಲಕ್ಷನ್ ಟ್ರಿಕ್ಸ್ ಕೂಡಾ ಅವರಲ್ಲಿವೆ...
ಎನ್ನುತ್ತಾರೆ ಅಲ್ಲಿನ ಜನ.
'ಅಧಿಕಾರಿಗಳಿಗೇಕೆ
ರಾಜಕೀಯ'
ಮೇ
8,
2008,
ಗುಲ್ಬರ್ಗ
ಸ್ವಾ ತಂತ್ರ್ಯಾನಂತರ ಇಷ್ಟು ವರ್ಷದಲ್ಲಿ
ದೇಶದ ರಾಜಕಾರಣಿಗಳು ಜನರಿಗೆ ಸ್ವಾರ್ಥ ಕಲಿಸಿದ್ದಾರೆಯೇ ವಿನಾ ದೇಶಭಕ್ತಿ
ಕಲಿಸಲಿಲ್ಲ ಎಂದು ಗುಲ್ಬರ್ಗದ ನಿವಾಸಿ ದೀಪಕ್ ಹೇಳಿದಾಗ ರಾಜಕಾರಣದ
ಅಧೋಗತಿಯತ್ತಲೇ ಮಾತು ಹೊರಳಿತು.
ಯಾವುದೇ ಯೋಜನೆ,
ಕಾಮಗಾರಿಯ ಹಣದ ಮುಕ್ಕಾಲು ಭಾಗ ಮಂತ್ರಿಯಿಂದ
ಹಿಡಿದು ಕಂಟ್ರಾಕ್ಟರ್‌ರ ಬೊಕ್ಕಸಕ್ಕೇ ಹರಿಯುತ್ತದೆ.
ಸಾರ್ವಜನಿಕ ಆಸ್ತಿ,
ಕೆಲಸಗಳತ್ತ ಯಾರಿಗೂ ಲಕ್ಷ್ಯ ಇಲ್ಲ,
ತಮ್ಮ ಅಭಿವೃದ್ಧಿಯತ್ತಲೇ ಗಮನ.
ಹೀಗಿದ್ದಾಗ ಯಾವುದೇ ರಾಜ್ಯದ ಅಭಿವೃದ್ಧಿ ಹೇಗೆ
ಎಂಬುದು ಅವರ ಪ್ರಶ್ನೆ.
ಇದೀಗ ಐಎಎಸ್,
ಐಪಿಎಸ್ ಅಧಿಕಾರಿಗಳಂಥವರೂ ರಾಜಕಾರಣಕ್ಕೆ
ಧುಮುಕುತ್ತಿರುವುದಕ್ಕೆ ಕಾರಣ ತಾವು ಅಕ್ರಮವಾಗಿ ಗಳಿಸಿದ ಆಸ್ತಿಯನ್ನು
ರಕ್ಷಿಸಿಕೊಳ್ಳುವುದೇ ವಿನಾ ಬೇರೇನೂ ಅಲ್ಲ ಎನ್ನುತ್ತಾರೆ ಅವರು.
'ಮಂತ್ರಿ ಅಲ್ಲ ಜನಸೇವಕ
ಎನ್ನಿ'
ಮೇ 9,
2008, ಬಸವ ಕಲ್ಯಾಣ
ಬೀದರ್ ಜಿಲ್ಲೆಯ ಬಸವಕಲ್ಯಾಣ ಜಾಗತಿಕ
ಇತಿಹಾಸದಲ್ಲೇ ಮಹತ್ತರವಾದ 12ನೇ
ಶತಮಾನದ ಸಾಮಾಜಿಕ ಕ್ರಾಂತಿ ನಡೆದ ಸ್ಥಳ.
ಆದರೆ ಆ ಬಸವಕಲ್ಯಾಣ ಇಂದು ಅವ್ಯವಸ್ಥೆಯ ಆಗರ.
ಅಲ್ಲಿ
12ನೇ ಶತಮಾನದ
ಸ್ಮಾರಕಗಳಿದ್ದರೂ ಅವುಗಳ ನಿರ್ವಹಣೆ ಇಲ್ಲ.
ಕಲ್ಯಾಣದ ಸಮಗ್ರ ಅಭಿವೃದ್ಧಿ ಕಾರ್ಯ ಈಗಷ್ಟೇ
ಆರಂಭವಾಗಿದೆ.
ಅಲ್ಲಿನ ಅನುಭವಮಂಟಪದ ಸಂಚಾಲಕ ಶರಣ ಸಿದ್ದರಾಮಣ್ಣ ಅವರು
ರಾಜಕಾರಣಿಗಳಲ್ಲಿರುವ ದುರಾಸೆ,
ಇಚ್ಛಾಶಕ್ತಿ ಕೊರತೆಯ ಕುರಿತು ತುಂಬಾ ಆತಂಕ
ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ
ರಾಜಪ್ರಭುತ್ವದ ಸಂಕೇತವಾದ 'ಮಂತ್ರಿ'
ಎಂಬ ಹುದ್ದೆ ಏಕೆ ಎಂಬುದು ಅವರ ಪ್ರಶ್ನೆ.
ಮಂತ್ರಿ ಎಂಬ ಪದವೇ ಅಧಿಕಾರ,
ದರ್ಪವನ್ನು ಸೂಚಿಸುತ್ತದೆ.
ಆ ಸ್ಥಾನದ ಪೈಪೋಟಿಗೂ ಕಾರಣವಾಗುತ್ತದೆ.
ಮಂತ್ರಿ ಪದದ ಬದಲು
'ಜನಸೇವಕ'
ಎಂಬ ಪದ ಬಳಸಬೇಕು.
ಜನಸೇವಕ-1,
ಜನಸೇವಕ-2
ಎಂದು ನಂಬರ್ ಕೊಡಬಹುದು;
ಮುಖ್ಯಮಂತ್ರಿ ಸ್ಥಾನದವರಿಗೆ
'ಮಹಾ ಜನಸೇವಕ'
ಎನ್ನಬಹುದು.
ಆಗಲಾದರೂ ಮಂತ್ರಿಗಳ ದರ್ಪ,
ಪೈಪೋಟಿ ಕಡಿಮೆಯಾಗಬಹುದು ಎನ್ನುತ್ತಾರೆ ಅವರು.
ಕರೋಡ್ ಪತಿ
v/s
ಅಧೋಗತಿ
ಮೇ 9,
2008,
ಬಸವ ಕಲ್ಯಾಣ
ಬೀದರ್‌ಗೆ ಹೋಗುವ ಮಾರ್ಗದಲ್ಲಿ ನಾವು
ಬಸವಕಲ್ಯಾಣಕ್ಕೆ ಭೇಟಿ ನೀಡಿದಾಗ ಅಲ್ಲಿ ಬಸವೇಶ್ವರ ಮೆರವಣಿಗೆ
ನಡೆಯುತ್ತಿತ್ತು.
ಸುತ್ತಮುತ್ತಲ ನೂರಾರು ಜನ ಅಲ್ಲಿ ಸೇರಿದ್ದರು.
ಆ ತಗ್ಗು-ದಿಣ್ಣೆಗಳಿಂದ
ಕೂಡಿದ ಕೆಟ್ಟ ರಸ್ತೆಗೆ ಚರಂಡಿ ಇಲ್ಲದೆ ಹೊಲಸು ನೀರೆಲ್ಲಾ ಹರಿದು
ಬರುತ್ತಿತ್ತು.
ಆದರೆ ಅಲ್ಲಿನ ಜನ ಇದಕ್ಕೆಲ್ಲಾ ತಲೆ ಕೆಡಿಸಿಕೊಂಡಿರಲಿಲ್ಲ.
'ಏನ್ರಿ
ಇಷ್ಟೊಂದು ಕುಲಗೆಟ್ಟ ಹಳ್ಳಿ ಇದು?'
ಎಂದು ಉತ್ಸವಕ್ಕೆ ಬಂದ ಆಳಂದದ ಶರಣಪ್ಪ ಗೂಳೆಯನ್ನು ಪ್ರಶ್ನಿಸಿದರೆ ಏ ಈಗ
ಕೆಲಸ ಚಾಲೂ ಆಗ್ಯದ್ರೀ.
400 ಕೋಟಿ
ಬಿಡುಗಡೆ ಆಗ್ಯದ ಅಂದ್ರು.
ಜೊತೆಗೆ ತಮ್ಮ ವಿವರವನ್ನೂ ನೀಡಿದರು.
ಆತನಿಗೆ ಮೂವರು ಮಕ್ಕಳಂತೆ.
1ನೇ
ನಂಬರ್‌ದವ ಮಿಲಟರಿ,
2ನೇ ನಂಬರ್‌ದವ
ಒಕ್ಕಲುತನ ಮಾಡುತ್ತಿದ್ದರೆ 3ನೇ
ನಂಬರ್‌ದವ ರಾಜಕಾರಣಿಗಳ ಹಿಂದೆ ಸುತ್ತುತ್ತಾನಂತೆ.
ಈಗ ಬಸವಕಲ್ಯಾಣ ಸಮಗ್ರ ಅಭಿವೃದ್ಧಿ ಕಾರ್ಯಕ್ರಮ
ಚಾಲೂ ಆಗಿರುವುದರಿಂದ 3ನೇ
ನಂಬರ್‌ದವನೂ ಜೀವನದಲ್ಲಿ ಸೆಟಲ್ ಆಗಬಹುದು ಎಂಬ ಆಶೆ ಆ ಅಜ್ಜನದು.
ಅಂದಹಾಗೆ ನೀವೇ ಆರಿಸಿ ಕಳಿಸಿದ ಶಾಸಕರು ನಿಮ್ಮ
ಊರಿಗೆ ಏನು ಕೆಲಸ ಮಾಡಿದ್ದಾರೆ ಎಂದರೆ ಅಜ್ಜ
'ಗೆದ್ದೋರು
ಕರೋಡ್‌ಪತಿ ಆಗ್ತಾರ,
ಕ್ಷೇತ್ರ ಅಧೋಗತಿ ಮಾಡ್ತಾರ'
ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ.
'ಕನ್ನಡ್ ಅಚ್ಚಾ ಹೈ ಲೇಕಿನ್...'
ಮೇ 10,2008, ಬೀದರ್
ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ನಿಮಗೆ
ಕನ್ನಡ ಬರದಿದ್ದಲ್ಲಿ ಏನೂ ತೊಂದರೆ ಇಲ್ಲ;
ಆದರೆ ಉರ್ದು,
ಹಿಂದಿ
(ದಕ್ಖನಿ ಶೈಲಿ)
ಬರದಿದ್ದಲ್ಲಿ ಪ್ರಯಾಸಪಡಬೇಕಾದೀತು.
ಬೀದರ್‌ನ ಚೌಬಾರಾ,
ಮಹಮ್ಮದ್ ಗವಾನ್ ಮದರಸಾ ಸುತ್ತಲಿನ ನಿವಾಸಿಗಳನ್ನು
ನೀವು ಕನ್ನಡದಲ್ಲಿ ಮಾತನಾಡಿಸ ಹೋದರೆ ಯಾವುದೇ
'ಫಾಯಿದೆ'
ಸಿಗುವುದಿಲ್ಲ.
ಈ ಬಗ್ಗೆ ಚರಂಡಿಯೊಂದರಲ್ಲಿ ಗಾರೆ ಕೆಲಸ ಮಾಡುತ್ತಿದ್ದ
ಮುಜ್ಬೀರ್ ಕೂಡಾ ಬೇಸರ ವ್ಯಕ್ತಪಡಿಸಿದ.
ಕನ್ನಡ್ ಬಹುತ್ ಅಚ್ಚಾ ಭಾಷ.
ಹಮ್‌ಲೋಗ್ ಕರ್ನಾಟಕ್ ಮೆ ರಹೆನಾವಾಲೋ ಹಮ್ ಕನ್ನಡ್
ಬಾತೆ ನಯಿ ಕರ್‍ತೆ,
ಯೆ ಅಚ್ಚಾ ನಯಿ...
(ಕನ್ನಡ ತುಂಬಾ ಸುಂದರ ಭಾಷೆ.
ಕರ್ನಾಟಕದಲ್ಲಿ ವಾಸಿಸುವ ನಾವು ಕನ್ನಡ ಮಾತನಾಡದೇ
ಇರುವುದು ಸರಿಯಲ್ಲ)
ಎಂದು ಆತ ಪಕ್ಕಾ ದಕ್ಖನಿಯಲ್ಲೇ ವರಸೆ ಹಾಕಿದ.
ಹುಟ್ಟಿದಾಗಿನಿಂದ ಬೀದರ್‌ನಲ್ಲಿದ್ದರೂ ಆತನಿಗೆ
ಕನ್ನಡ ಬರುವುದಿಲ್ಲವಂತೆ,
ಅರ್ಥವೂ ಆಗುವುದಿಲ್ಲವಂತೆ.
ಹಿಂದೂಗಳು ಕೂಡಾ ಉರ್ದುವನ್ನೇ ಮಾತನಾಡುವುದರಿಂದ
ಆತನಿಗೆ ಕನ್ನಡ ಕಲಿಯುವ ಅವಕಾಶವೇ ಸಿಗಲಿಲ್ಲವಂತೆ.
ವಿಶೇಷವೆಂದರೆ ಈ ಭಾಗದ ಹಿಂದೂಗಳು
ಮುಸ್ಲಿಮರಿಗಿಂತಲೂ ಚೆನ್ನಾಗಿ ಉರ್ದು ಮಾತನಾಡುತ್ತಾರೆ.
ಹಿಂದೂ ಸ್ನೇಹಿತರು ಒಂದೆಡೆ ಸೇರಿದಾಗ ಉರ್ದು
ಮಾತನಾಡುವುದೇ ಅವರಿಗೆ ಕಂಫರ್ಟಬಲ್!
ನಮ್ಮಂತಹ ಹೊಸಬರು ಬಂದಾಗ ಕಷ್ಟಪಟ್ಟು ಕನ್ನಡ
ಮಾತನಾಡುತ್ತಾರೆ.
ಸ್ವಲ್ಪ ಹಳಬರಾದೆವೆಂದರೆ ದಕ್ಖನಿ ಸೊಗಡು ಹಾಜರ್!
'ಈ ಜನ ಭಾರಿ ಮುಗ್ಧರು'
ಮೇ
11,
2008,
ಬಿಜಾಪುರ
ಉತ್ತರ ಕರ್ನಾಟಕದ ಪ್ರತಿ ನಗರದಲ್ಲಿನ ಹಾಗೇ
ಬಿಜಾಪುರದಲ್ಲೂ ಕುಡಿಯುವ ನೀರಿನ ಸಮಸ್ಯೆ ವಿಪರೀತವೇ.
ಪಂಚ ನದಿಗಳ ಬೀಡಾಗಿದ್ದ ಬಿಜಾಪುರದಲ್ಲಿ
(ಅವಿಭಾಜಿತ
ಬಿಜಾಪುರ ಕರ್ನಾಟಕದ 'ಪಂಜಾಬ್'
ಎಂದೇ ಖ್ಯಾತಿ ಪಡೆದಿತ್ತು)
ಕುಡಿಯಲೂ ನೀರಿಲ್ಲದಿರುವುದು ಅಚ್ಚರಿಯ ವಿಷಯವೇ.
ಇಲ್ಲಿ
12
ದಿನಗಳಿಗೊಮ್ಮೆ ನೀರು ಬರುತ್ತದೆ ಎಂದರೆ ನಿಜವಾಗಿಯೂ ನೀವು ನಂಬಬೇಕು.
ಜನರೂ ಕೂಡಾ ಇದಕ್ಕೆ ಒಗ್ಗಿ ಹೋಗಿದ್ದಾರೆ.
ಎರಡು ವಾರ ನೀರು ಬರದಿದ್ದರೂ ತಡೆದುಕೊಳ್ಳುವ
'ಸ್ಟೋರೇಜ್
ವ್ಯವಸ್ಥೆ'ಯನ್ನೆಲ್ಲಾ
ಮಾಡಿಕೊಂಡಿದ್ದಾರೆ.
ಈಗ 'ಚುನಾವಣಾ
ಸೀಸನ್'
ಆದ್ದರಿಂದ ೬ ದಿನಗಳಿಗೊಮ್ಮೆ ನೀರು ಬರುತ್ತಿದೆ.
ನಗರಕ್ಕೆ ನೀರಿನ ಸೌಲಭ್ಯ ಕಲ್ಪಿಸಬೇಕಾದ್ದು
ನಗರಸಭೆಯ ಕರ್ತವ್ಯ;
ನೀವು ಅದೇಕೆ ಪ್ರತಿಭಟನೆ ಮಾಡಬಾರದು ಎಂದು ಸ್ಥಳೀಯ
ನಾಗರಿಕರನ್ನು ವಿಚಾರಿಸಿದರೆ,
ಇಲ್ಲಿನ ಜನ ತುಂಬಾ ಸಾಧು ಮತ್ತು ಮುಗ್ಧರು.
ಎಷ್ಟೇ ತೊಂದರೆಯಾದರೂ ಪ್ರತಿಭಟನೆ ಮಾಡೊಲ್ಲ.
ಎಲ್ಲದ್ದಕ್ಕೂ ಅಡ್ಜಸ್ಟ್ ಮಾಡಿಕೊಂಡು ಬಿಡುತ್ತಾರೆ.
ನೀರು
12 ದಿನಗಳಿಗೊಮ್ಮೆ ಬಾರದೆ ಮೂರು ದಿನಕ್ಕೊಮ್ಮೆ
ಬಂದಿತೋ ಜನ ಕಕ್ಕಾಬಿಕ್ಕಿಯಾಗಿ ಬಿಡುತ್ತಾರೆ ಎಂದು ಸ್ಥಳೀಯ ನಾಗರಿಕರೊಬ್ಬರು
ಗಂಭೀರವಾಗಿ ಹೇಳಿದರು!
ವೋಟ್ ಹಾಕ್ತೀನಿ;
ಬಾಕಿ ಕೊಡಿ...
ಮೇ
12,
2008, ನವನಗರ,
ಬಾಗಲಕೋಟೆ
ನಾನು ಯಾವ ಸಲನೂ ವೋಟು ತಪ್ಪಿಸಿಲ್ಲ.
ಆದ್ರೆ ಈ ಸಲಿ ವೋಟು ಹಾಕೋದು ಎಲ್ಲಿ?
ಅದೇ ಗೊತ್ತಿಲ್ಲ.
ಯಾರಾದ್ರೂ ನನ್ನ ಕರ್‍ಕೊಂಡು ಹೋಗಿ,
ಹಾಕ್ತೀನಿ...
ಆದರೆ ಅದಕ್ಕೂ ಮುಂಚೆ ನನ್ನ ಬಾಕಿ ಕೊಡಿಸಿ ಸಾರ್...
ಬಾಗಲಕೋಟೆಯ ನವನಗರದ ಮೀರಾಬಿ ಮೇಲಿನಮನಿ ಎಂಬ
ಮಹಿಳೆ ಹೇಳುತ್ತಲೇ ಹೋದರು.
ಹಳೇ ಬಾಗಲಕೋಟೆಯಲ್ಲಿದ್ದ ಆಕೆಯ ಮನೆ ಆಲಮಟ್ಟಿ
ಹಿನ್ನೀರಿನಲ್ಲಿ ಮುಳುಗಿದ ಮೇಲೆ ಆಕೆಗೆ ನವನಗರದಲ್ಲಿ ಜಾಗ ನೀಡಲಾಯಿತು.
ಪರಿಹಾರ ಧನದಲ್ಲಿ ಅರ್ಧಭಾಗ ಮಾತ್ರ
ನೀಡಿರುವುದರಿಂದ ಆಕೆಯೂ ಅರ್ಧಂಬರ್ಧ ಮನೆಯನ್ನೇ ಕಟ್ಟಿಸಿಕೊಂಡಿದ್ದಾರೆ.
ಮಕ್ಕಳೆಲ್ಲಾ ದುಡಿಯಲು ಹೊರಗೆ ಹೋಗಿರುವುದರಿಂದ
ಆಕೆ ಏಕಾಂಗಿ.
ಹಿಂದೆ ಹಳೇ ಬಾಗಲಕೋಟೆ ಮುಳುಗಡೆಗೆ ಮುನ್ನ ಆಕೆಯ ಅಂಗಡಿ
ಚೆನ್ನಾಗಿಯೇ ನಡೆಯುತ್ತಿತ್ತು.
ಈಗ ದೂರದ ನವನಗರದಲ್ಲಿ ಆಕೆಯ ಜೀವನೋಪಾಯಕ್ಕೆ
ದಾರಿಯೇ ಇಲ್ಲ.
ಕಳೆದ ಮೂರು ವರ್ಷದಿಂದಲೂ ಬಾಕಿ ಹಣಕ್ಕಾಗಿ
ಓಡಾಡುತ್ತಿದ್ದರೂ ಪ್ರಯೋಜನವಾಗಿಲ್ಲ.
ಈ ಸಲ ಚುನಾವಣೆ ವೇಳೆಯಲ್ಲಾದರೂ ನನ್ನ ಬಾಕಿ
ಬರಬಹುದು ಎಂಬ ದೂರದ ಆಶೆ ಆಕೆಗಿದೆ.
ಯಾರಾದರೂ ಹೊರಗಿನವರು ಭೇಟಿ ಕೊಟ್ಟಾಗ
'ಸ್ವಾಮಿ ಬಾಕಿ
ಕೊಡಿಸಿ'
ಎಂದು ದುಂಬಾಲು ಬೀಳುವುದೇ ಈಗ ಆಕೆಯ ನಿತ್ಯದ ಕಾಯಕ.
ಪರವಾನಗಿ ರಗಳೆ!
ಮೇ
12,
2008,
ಹಳೇ ಬಾಗಲಕೋಟೆ
ಈ ಬಾರಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ
ಹಣಕಾಸು ವ್ಯವಹಾರ ನೋಡಿಕೊಳ್ಳುವವರಿಗೆ ಬಿಡುವಿಲ್ಲದ ಕೆಲಸ.
ಪ್ರಚಾರ ಕಾರ್ಯಕ್ಕೆ ಬಳಸುವ ವಾಹನ,
ಕಟ್ಟುವ ಧ್ವಜದಿಂದ ಹಿಡಿದು ಸಭೆ ನಡೆಸುವ
ಸ್ಥಳದವರೆಗೆ ಪ್ರತಿಯೊಂದಕ್ಕೂ ಅಧಿಕಾರಿಗಳಿಂದ ಪರವಾನಗಿ ಪಡೆದುಕೊಳ್ಳಬೇಕು;
ಈ ಹಿಂದಿನ ಚುನಾವಣೆಗಳಲ್ಲಿ ಕಾರ್ಯಕರ್ತರ ಕಾಟವೇ
ಹೆಚ್ಚಾಗಿತ್ತು.
ಅಲ್ಲಿ ಬ್ಯಾನರ್ ಕಟ್ಟಿದ್ದೇವೆ,
ಇಲ್ಲಿ ಪೋಸ್ಟರ್ ಹಚ್ಚಿದ್ದೇವೆ,
ಮೈಕ್ ಪ್ರಚಾರ ನಡೆಸಿದ್ದೇವೆ,
ಸಭೆಗೆ ಜನರನ್ನ ಕರೆ ತಂದಿದ್ದೇವೆ ಎಂದು ಸಾಕಷ್ಟು
ದುಡ್ಡು ಕಸಿದುಕೊಂಡು ಹೋಗುತ್ತಿದ್ದರು.
ಪುಣ್ಯಕ್ಕೆ ಈ ಬಾರಿ ಆ ಕಾಟ ಇಲ್ಲ.
ಆದರೆ ಪ್ರತಿಯೊಂದಕ್ಕೂ ಅಧಿಕಾರಿಗಳ ಪರ್ಮಿಷನ್
ತೆಗೆದುಕೊಳ್ಳುವ ಹೊಸ ಕಿರಿಕಿರಿ ಉಂಟಾಗಿದೆ ಎನ್ನುತ್ತಾರೆ ಬಾಗಲಕೋಟೆ
ಪಕ್ಷೇತರ ಅಭ್ಯರ್ಥಿಯ ಹಣಕಾಸು ಉಸ್ತುವಾರಿ ನೋಡುಕೊಳ್ಳುವವರೊಬ್ಬರು.
ಈ ಮುನ್ನ ಹಣಕಾಸು ಉಸ್ತುವಾರಿ ನೋಡಿಕೊಳ್ಳಲು
ಅಭ್ಯರ್ಥಿಯ ಆಪ್ತ ವಲಯದವರಲ್ಲಿ ಸ್ಪರ್ಧೆಯೇ ಇರುತ್ತಿತ್ತಂತೆ.
ಆದರೆ ಈ ಬಾರಿ ಆ ಹುದ್ದೆಯ ಕಿರಿಕಿರಿ ಯಾರಿಗೂ
ಬೇಡವಂತೆ.
ಟಿಎಸ್ಐ