|
ಈ
ವಿಧಾನಸಭಾ ಚುನಾವಣೆಯಲ್ಲಿ ನೀವು ವಿಭಿನ್ನವಾದ ನೆಲೆಯಲ್ಲಿ ನಿಂತು ವಿಶಿಷ್ಟ
ಪಾತ್ರ ವಹಿಸುತ್ತಿದ್ದೀರಲ್ಲಾ ?
ಕಳೆದ
36 ವರ್ಷಗಳಿಂದ
ನಾನು ಜನತಾ ಪರಿವಾರದಲ್ಲಿ ಪ್ರಾಮಾಣಿಕವಾಗಿ ನೆಲೆ ನಿಂತಿದ್ದೆ.
ಪ್ರತಿ ಸಂದರ್ಭದಲ್ಲೂ,
ಪಕ್ಷದ ಏಳಿಗೆಗಾಗಿ ನಾನು ಒಬ್ಬ ರಾಜಕಾರಣಿಯಾಗಿ
ಸಕಾರಾತ್ಮಕ ಪಾತ್ರ ವಹಿಸಿದ ವ್ಯಕ್ತಿ.
ಆದರೆ,
ಕಳೆದ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿನ ಜೆಡಿ(ಎಸ್)
ಪಕ್ಷ ಅಕ್ಷರಶಃ ಒಂದು ಪರಿವಾರದ ಸ್ವಂತ ಆಸ್ತಿಯಾಗಿ
ಪರಿವರ್ತನೆಗೊಂಡಿತು.
ಪಕ್ಷದೊಳಗಿನ ವಾತಾವರಣದಿಂದ ಬೇಸರಗೊಂಡ ನಾನು ಬಹಳ ನೊಂದು
ಜನತಾ ಪರಿವಾರದಿಂದ ಹೊರಬಂದೆ.
ನಾನಾಗಿಯೇ ನಾನು ಪಕ್ಷ ಬಿಟ್ಟು ಹೊರಬರಲಿಲ್ಲ.
ದೇವೇಗೌಡರ ಬಗ್ಗೆ ನನಗೆ ಬಹಳ ಗೌರವವಿದೆ.
ಆದರೆ,
ಅವರ ರಾಜಕೀಯ ನಿಲುವುಗಳು ನನಗೆ ಇಷ್ಟವಾಗಲಿಲ್ಲ.
ಒಂದು ಹಂತದಲ್ಲಂತೂ ನನ್ನನ್ನು ಸಂಪೂರ್ಣವಾಗಿ ಬದಿಗೆ
ತಳ್ಳಲಾಯಿತು.
ಇನ್ನೇನು ಮಾಡುವುದು?
ಬೇರೆ ದಾರಿ ಕಾಣದೇ ಜೆಡಿ(ಎಸ್)
ತೊರೆದೆ.
ಒಂದೂವರೆ ವರ್ಷಗಳ ಕಾಲ ರಾಜಕೀಯವಾಗಿ ಎತ್ತ ಹೆಜ್ಜೆ
ಹಾಕುವುದು ಎಂದು ದೀರ್ಘವಾದ ಆಲೋಚನೆ ಮಾಡಿದೆ.
ಕೊನೆಗೆ ಜಯಪ್ರಕಾಶ ನಾರಾಯಣ ಅವರ ತತ್ವ
ಸಿದ್ಧಾಂತಗಳಿಗೆ ಬದ್ಧನಾಗಿದ್ದ ನನಗೆ ಬಿಎಸ್‌ಪಿಯೇ ಸೂಕ್ತ ಎಂದೆನಿಸಿತು.
ಆ ಕಾರಣದಿಂದ ಮಾಯಾವತಿ ಅವರನ್ನು ನನ್ನ
ನಾಯಕಿಯನ್ನಾಗಿ ಸ್ವೀಕರಿಸಿದೆ.
ಹಾಗಿದ್ದರೆ ನೀವು ಹತಾಶೆಗೊಳಗಾಗಿ ಬಿಎಸ್‌ಪಿ
ಸೇರಿದ್ದಲ್ಲ ,
ಇದೊಂದು ಪೂರ್ವ ನಿಯೋಜಿತ ಹಾಗೂ ಸ್ಪಷ್ಟ ರಾಜಕೀಯ ಹೆಜ್ಜೆ?
ಹತಾಶೆಯ ಪ್ರಶ್ನೆಯೇ ಇಲ್ಲ .
ವೈಯಕ್ತಿಕ ಜೀವನ ಮತ್ತು ರಾಜಕೀಯದಲ್ಲಿ ನಾನು
ಬಹಳಷ್ಟು ಅನುಭವಿಸಿದ್ದೇನೆ.
25
ವರ್ಷಗಳಷ್ಟು ದೀರ್ಘ ಕಾಲ ಶಾಸಕನಾಗಿದ್ದೆ.
ಜನ ನನ್ನನ್ನು ಆರು ಬಾರಿ ಆಯ್ಕೆ ಮಾಡಿ ವಿಧಾನಸಭೆಗೆ
ಕಳುಹಿಸಿದ್ದಾರೆ.
ಹಲವಾರು ಬಾರಿ ಸಚಿವ ಸ್ಥಾನ ಕೂಡ ಲಭ್ಯವಾಗಿತ್ತು.
ಆದ್ದರಿಂದ ಹತಾಶೆಯ ಮಾತೇ ಇಲ್ಲ.
ನನ್ನ ರಾಜಕೀಯ ಜೀವನದ ಬಗ್ಗೆ ನನಗೆ ತೃಪ್ತಿಯಿದೆ.
ಜೆಪಿ ಸಿದ್ಧಾಂತಗಳಿಗೆ ಬಿಎಸ್‌ಪಿ ಹತ್ತಿರವಿರುವ
ಕಾರಣ ನಾನು ಈ ಪಕ್ಷಕ್ಕೆ ಬಂದೆ.
ಭಾರತದಲ್ಲಿನ ಸದ್ಯದ ರಾಜಕೀಯ ಪರಿಸ್ಥಿತಿಯನ್ನು
ಗಮನಿಸಿದಾಗ ಬಿಎಸ್‌ಪಿ ಒಂದು ಸೂಕ್ತವಾದ ಹಾಗೂ ಪರಿಪಕ್ವವಾದ ಪಕ್ಷ ಎಂದು ನನ್ನ
ಅನಿಸಿಕೆ.
ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯ ಮೇಲೆ ಬಿಎಸ್‌ಪಿ
ಎಂತಹ ಪರಿಣಾಮ ಬೀರಲಿದೆ ?
ಒಟ್ಟಾರೆ ಫಲಿತಾಂಶದ ಬಗ್ಗೆ ನಾನೇನು ನಿಖರವಾಗಿ
ಹೇಳುವ ಸ್ಥಿತಿಯಲ್ಲಿ ಇಲ್ಲ .
ಈ ರಾಜ್ಯದ ಮತದಾರರು ಯಾರ ಬಗ್ಗೆ ಒಲವು ವ್ಯಕ್ತ
ಪಡಿಸುತ್ತಾರೋ?
ಯಾರಿಗೆ ಗೊತ್ತು?
ರಾಜ್ಯದಲ್ಲಿನ ಒಟ್ಟು
224 ಕ್ಷೇತ್ರಗಳ
ಪೈಕಿ 218ರಲ್ಲಿ
ಬಿಎಸ್‌ಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ತಾಂತ್ರಿಕ ಕಾರಣಗಳಿಂದ ಉಳಿದ
6 ಕ್ಷೇತ್ರಗಳಲ್ಲಿ
ನಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಸಾಧ್ಯವಾಗಲಿಲ್ಲ.
ಸ್ಪರ್ಧಿಸಿದವರ ಪೈಕಿ ಇಂತಿಷ್ಟೇ ಅಭ್ಯರ್ಥಿಗಳು
ಗೆಲ್ಲುತ್ತಾರೆ ಎಂದು ನಾನು ನಿಖರವಾಗಿ ಹೇಳುವುದು ಅಸಾಧ್ಯ.
2004ರ
ಚುನಾವಣೆಯಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ಒಟ್ಟು ಚಲಾವಣೆಯಾದ ಮತಗಳ ಪೈಕಿ ಶೇಕಡಾ
2ರಷ್ಟನ್ನು
ತಮ್ಮದಾಗಿಸಿಕೊಂಡಿದ್ದರು.
ಈ ಬಾರಿ ಆ ಸಂಖ್ಯೆ ಶೇಕಡಾ
10-15ಕ್ಕೆ
ಏರುತ್ತದೆ ಎಂಬ ಭರವಸೆ ನನಗಿದೆ.
ಇದರರ್ಥ ಬಿಎಸ್‌ಪಿ ಪರೋಕ್ಷ ಪರಿಣಾಮ ಬೀರಲಿದೆ ಹಾಗೂ
ಕಾಂಗ್ರೆಸ್‌ನ ಸಾಂಪ್ರದಾಯಿಕ ವೋಟ್‌ಬ್ಯಾಂಕ್‌ಗೆ ಲಗ್ಗೆ ಹಾಕಲಿದೆ ಎಂದೆ ?
ಒಟ್ಟಾರೆ ಫಲಿತಾಂಶದ ಮೇಲೆ ಬಿಎಸ್‌ಪಿ ಖಂಡಿತ
ಪರಿಣಾಮ ಬೀರಲಿದೆ .
ಅದಂತೂ ನೂರಕ್ಕೆ ನೂರು ಸತ್ಯ.
ಇನ್ನುಳಿದಂತೆ ನಾವು ಕೇವಲ ಕಾಂಗ್ರೆಸ್‌ನ
ಸಾಂಪ್ರದಾಯಿಕ ವೋಟ್‌ಬ್ಯಾಂಕ್‌ಗೆ ಲಗ್ಗೆ ಹಾಕುತ್ತೇವೆ ಎನ್ನುವುದು ಬೇರೆ
ಪಕ್ಷಗಳು ಹುಟ್ಟುಹಾಕಿದ ಸಿದ್ಧಾಂತ.
ಬಿಎಸ್‌ಪಿಗೆ ಬಿಜೆಪಿ ಮತ್ತು ಜೆಡಿ(ಎಸ್)
ಸಾಂಪ್ರದಾಯಿಕ ಮತಗಳು ಕೂಡ ಹರಿದು ಬರಲಿವೆ.
ಏಕೆಂದರೆ ಬಿಜೆಪಿಯನ್ನು ಬೆಂಬಲಿಸುತ್ತಿರುವ
ಮೇಲ್ಜಾತಿಯ ಮಂದಿ ಕೂಡ ನಮ್ಮತ್ತ ಬರುತ್ತಿದ್ದಾರೆ.
ಆ ಎರಡು ಪಕ್ಷಗಳಿಂದ ನಮಗೆ ಅದು ಎಷ್ಟು ಪ್ರಮಾಣದಲ್ಲಿ
ಮತಗಳು ಹರಿದು ಬರಲಿದೆ ಎನ್ನುವುದು ಚುನಾವಣೆಯ ನಂತರವೇ ಗೊತ್ತಾಗಲಿದೆ.
ಬಿಎಸ್‌ಪಿ ಅಭ್ಯರ್ಥಿಗಳು ಶೇಕಡಾವಾರು ಹೆಚ್ಚು ಮತ
ಸೆಳೆಯುವುದರಿಂದ ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದ ಫಲಿತಾಂಶದ ಮೇಲೆ ಗಂಭೀರವಾದ
ಪರಿಣಾಮ ಆಗಲಿದೆ.
ನಮ್ಮ ಈ ಯಶಸ್ಸಿನಿಂದ ಕೇವಲ ಕಾಂಗ್ರೆಸ್ ಅಭ್ಯರ್ಥಿಗಳಿಗೆ
ಹೊಡೆತ ಬೀಳಲಿದೆ ಎಂಬ ಮಾತನ್ನು ನಾನು ಒಪ್ಪುವುದಿಲ್ಲ.
ನಮ್ಮಿಂದಾಗಿ ಬಿಜೆಪಿ ಹಾಗೂ ಜೆಡಿ(ಎಸ್)
ಅಭ್ಯರ್ಥಿಗಳು ಕೂಡ ಗೆಲ್ಲುವ ಅವಕಾಶವನ್ನು
ಕಳೆದುಕೊಳ್ಳಲಿದ್ದಾರೆ.
ಒಟ್ಟಾರೆ ಹೇಳಬೇಕೆಂದರೆ ರಾಜ್ಯದಲ್ಲಿ ಬಿಎಸ್‌ಪಿ ಒಂದು
ಶಕ್ತಿಯಾಗಿ ಹೊರಹೊಮ್ಮಲಿದೆ.
ಮೇಲ್ನೋಟಕ್ಕೆ ಅದು ಮಾಧ್ಯಮಗಳ ಕಣ್ಣಿಗೆ
ಬೀಳುತ್ತಿಲ್ಲ.
ಆದರೆ,
ವಾಸ್ತವ ನೆಲೆಯಲ್ಲಿ ಬಿಎಸ್‌ಪಿಗೆ ಬೇರು ಮಟ್ಟದಲ್ಲಿ ಸಾಕಷ್ಟು
ಬೆಂಬಲ ದೊರಕುತ್ತಿದೆ.
ಜನಸಾಮಾನ್ಯರ ಹೃದಯಕ್ಕೆ ನಮ್ಮ ಪಕ್ಷ ಲಗ್ಗೆ ಹಾಕಿದೆ.
ಬೇರು ಮಟ್ಟದಲ್ಲಿ ನಿಮ್ಮ ಪಕ್ಷಕ್ಕೆ
'ಭಾರಿ ಬೆಂಬಲ'
ಸಿಗಲು ಪ್ರಮುಖ ಕಾರಣ?
ರಾಜ್ಯದಲ್ಲಿ ಮಾಯಾವತಿ ಹಾಗೂ ಬಿಎಸ್‌ಪಿಯ ಒಂದು
ಲಕ್ಷಕ್ಕಿಂತ ಹೆಚ್ಚು ಬೇರು ಮಟ್ಟದ ಕಾರ್ಯಕರ್ತರಿದ್ದಾರೆ .
ಈ ಕಾರ್ಯಕರ್ತರು ಅತ್ಯಂತ ಪ್ರಾಮಾಣಿಕವಾಗಿ ಹಾಗೂ
ನಿಷ್ಠೆಯಿಂದ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ.
ಮಾಯಾವತಿ ಅವರ ಸಂದೇಶಗಳನ್ನು ಅವರು ನೇರವಾಗಿ
ಮತದಾರರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೇರೆ ಪಕ್ಷಗಳ ಕಾರ್ಯಕರ್ತರಿಗೂ ನಮ್ಮ ಪಕ್ಷದ
ಕಾರ್ಯಕರ್ತರಿಗೂ ಅಪಾರ ವ್ಯತ್ಯಾಸವಿದೆ.
ಇವರು ಬಿಎಸ್‌ಪಿಯ ಕಟ್ಟಾ ಅನುಯಾಯಿಗಳು.
ಈ ಅನುಯಾಯಿಗಳೇ ನಮ್ಮ ಪಕ್ಷದ ನಿಜವಾದ
ಶಕ್ತಿಯಾಗಿದ್ದಾರೆ.
ಅವರ ಪ್ರಯತ್ನಗಳ ಫಲವಾಗಿ ರಾಜ್ಯದೆಲ್ಲೆಡೆ ಬಿಎಸ್‌ಪಿ ಪರ ಅಲೆ
ಎದ್ದಿರುವುದಂತೂ ಸ್ಪಷ್ಟ.
ಮಾಯಾವತಿಯವರು ಚಾಮರಾಜನಗರ ಹಾಗೂ ದೇವನಹಳ್ಳಿಗೆ ಚುನಾವಣಾ
ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ವ್ಯಕ್ತವಾದ ಜನಬೆಂಬಲವೇ ಅದಕ್ಕೆ ಸಾಕ್ಷಿ.
ಬಿಎಸ್‌ಪಿ ಕೇವಲ ದಲಿತ ವೋಟ್‌ಬ್ಯಾಂಕ್ ಅನ್ನು
ಅವಲಂಬಿಸಿದೆ ಎಂಬ ಮಾತು ಕೂಡ ಇದೆಯಲ್ಲಾ ?
ಇಲ್ಲ .
ಬಿಎಸ್‌ಪಿ ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ಸೇರಿದ
ಪಕ್ಷವಲ್ಲ.
ಸಮಾಜದ ಮೇಲ್ಜಾತಿ ಎಂದು ಪರಿಗಣಿಸಲಾದ ಬ್ರಾಹ್ಮಣರು,
ಲಿಂಗಾಯತರು ಮತ್ತು ಒಕ್ಕಲಿಗರು ಕೂಡ ನಮ್ಮ ಪಕ್ಷಕ್ಕೆ
ಬಂದು ಸೇರಿದ್ದಾರೆ,
ಸೇರುತ್ತಿದ್ದಾರೆ.
ಈ ಬಾರಿ ರಾಜ್ಯದಲ್ಲಿ ನಾವು ಟಿಕೆಟ್ ನೀಡಿದ
218
ಅಭ್ಯರ್ಥಿಗಳಲ್ಲಿ 40
ಮಂದಿ ಲಿಂಗಾಯತರಿದ್ದಾರೆ.
15 ಬ್ರಾಹ್ಮಣ
ಅಭ್ಯರ್ಥಿಗಳು ಹಾಗೂ 25
ಒಕ್ಕಲಿಗ ಅಭ್ಯರ್ಥಿಗಳಿಗೆ ಬಿಎಸ್‌ಪಿ ಟಿಕೆಟ್ ನೀಡಿದೆ.
ಪಕ್ಷ ಟಿಕೆಟ್ ನೀಡಿದೆ ಎನ್ನುವುದಕ್ಕಿಂತ ಅವರೆಲ್ಲ
ಮಾಯಾವತಿ ಅವರ ನಾಯಕತ್ವದ ಮೇಲೆ ನಂಬಿಕೆಯಿಟ್ಟುಕೊಂಡು,
ಪಕ್ಷದ ತತ್ವಸಿದ್ಧಾಂತಗಳಿಗೆ ಮಾರು ಹೋಗಿ
ನಮ್ಮೊಂದಿಗೆ ಜೊತೆಯಾಗಿ ನಿಂತಿದ್ದಾರೆ.
ಇದಾದ ನಂತರವೂ ಬಿಎಸ್‌ಪಿಗೆ ದಲಿತರ ಪಕ್ಷ ಎಂಬ
ಹಣೆಪಟ್ಟಿಯನ್ನು ಕಟ್ಟಲು ಯಾರಾದರೂ ಮುಂದಾದಲ್ಲಿ ನಾವೇನೂ ಮಾಡಲು ಸಾಧ್ಯವಿಲ್ಲ.
ಬಿಎಸ್‌ಪಿ ಈ ದೇಶದ ಸಾಮಾನ್ಯ ಜನತೆಗೆ ಸೇರಿದ ಪಕ್ಷ.
ಇದು ಜನರ ಪಕ್ಷ.
ರಾಜ್ಯದ ಮಟ್ಟಿಗೆ ಬಿಎಸ್‌ಪಿಯ ಭವಿಷ್ಯದ ಯೋಜನೆಗಳು ?
ವೈಯಕ್ತಿವಾಗಿ ಹೇಳುವುದಾದರೆ ನಾನು ಯಾವುದೇ ಭಾರಿ
ಯೋಜನೆ ಹಾಕಿಕೊಂಡಿಲ್ಲ .
ಆದರೆ,
ಬಿಎಸ್‌ಪಿ ಪಕ್ಷದ ದೃಷ್ಟಿಯಲ್ಲಿ ಹೇಳುವುದಾದರೆ ನಮ್ಮ ನಾಯಕಿ
ಮಾಯಾವತಿ ಕರ್ನಾಟಕದ ಬಗ್ಗೆ ನಿಖರವಾದ ಯೋಜನೆಗಳನ್ನು ಹಾಕಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಇಂದಲ್ಲ ನಾಳೆ ಅಥವಾ
ನಾಳೆಯಲ್ಲದಿದ್ದರೆ ನಾಡಿದ್ದು ಬಿಎಸ್‌ಪಿ ಸರ್ಕಾರವನ್ನು ಸ್ಥಾಪಿಸಬೇಕು ಎಂಬ
ಯೋಜನೆ ಇದೆ.
ನಿಮ್ಮ ದೃಷ್ಟಿಯಲ್ಲಿ ಈ ಬಾರಿ ಕರ್ನಾಟಕದಲ್ಲಿ
ಯಾವುದಾದರೂ ಒಂದು ಪಕ್ಷಕ್ಕೆ ಬಹುಮತ ಬರಲಿದೆಯೇ ?
ಖಂಡಿತ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರಲು
ಸಾಧ್ಯವಿಲ್ಲ .
ಕಳೆದ ಬಾರಿಯಂತೆಯೇ ಈ ಬಾರಿ ಕೂಡ ಇಲ್ಲಿ ಸ್ಪಷ್ಟ ಜನಾದೇಶ
ಬರಲಾರದು.
ಇದಕ್ಕೆ ರಾಜ್ಯದಲ್ಲಿನ ಮತದಾರರು ಹೊಣೆಯಲ್ಲ.
ರಾಜ್ಯದ ಯಾವುದೇ ಪ್ರಮುಖ ರಾಜಕೀಯ ಪಕ್ಷ ಅಥವಾ
ರಾಜಕೀಯ ಮುಖಂಡ ಇಲ್ಲಿ ಜವಾಬ್ದಾರಿಯುತವಾಗಿ ವರ್ತಿಸಿಲ್ಲ.
ಈಗ ಕೂಡ ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ.
ಈ ರಾಜ್ಯ ಹಾಗೂ ಜನರ ಆಸೆ-ಆಕಾಂಕ್ಷೆಗಳನ್ನು
ಜವಾಬ್ದಾರಿಯುತವಾಗಿ ಈಡೇರಿಸುವಲ್ಲಿ ನಾವೆಲ್ಲ ವಿಫಲರಾಗಿದ್ದೇವೆ.
ಈ ಬಾರಿ ಕೂಡ ನಾವು ವಿಫಲರಾಗಲಿದ್ದೇವೆ.
ಈ ವೈಫಲ್ಯದ ಹಿನ್ನೆಲೆಯಲ್ಲಿಯೇ ರಾಜ್ಯದಲ್ಲಿ
ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ.
ಎರಡು ಅಥವಾ ಹೆಚ್ಚೆಂದರೆ ಮೂರು ವರ್ಷಗಳ ಅವಧಿಯೊಳಗೆ
ಆ ಸರ್ಕಾರ ಅಸ್ತಿತ್ವ ಕಳೆದುಕೊಳ್ಳುತ್ತದೆ.
ಮಾಯಾವತಿ ಅವರ ಮಾಯೆ ಕೇವಲ ಉತ್ತರ ಪ್ರದೇಶಕ್ಕೆ ಸೀಮಿತ
ಎಂದು ಕೆಲವು ರಾಜಕೀಯ ಪಂಡಿತರು ಮತ್ತು ರಾಜಕಾರಣಿಗಳ ಪ್ರಚಾರ
ಮಾಡುತ್ತಿದ್ದಾರಲ್ಲಾ ?
ಹೌದು .
ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಒಬ್ಬ ದಲಿತ
ಮಹಿಳೆ ರಾಷ್ಟ್ರೀಯ ನಾಯಕಿಯಾಗಿ ಹೊರಹೊಮ್ಮುವುದು ಇಷ್ಟವಿಲ್ಲ.
ಒಬ್ಬ ಕಟ್ಟುನಿಟ್ಟಾದ ಆಡಳಿತಗಾರ್ತಿ ಈ ದೇಶವನ್ನು
ಆಳುವುದು ಅವರಿಗೆ ಬೇಕಿಲ್ಲ.
ಆ ಕಾರಣದಿಂದ ಇಂತಹ ಗಾಳಿಸುದ್ದಿಯನ್ನು ಹರಡುತ್ತಲೇ
ಇರುತ್ತಾರೆ.
ಮಾಯಾವತಿಯಂತಹ ಕೆಚ್ಚೆದೆಯ ನಾಯಕಿಯನ್ನು ಸಹಿಸಿಕೊಳ್ಳುವ
ತಾಕತ್ತು ಆ ಪಟ್ಟಭದ್ರ ಹಿತಾಸಕ್ತಿಗಳಿಗೆ ಇಲ್ಲ.
ಅದಕ್ಕಾಗಿ ಇಂತಹ ಊಹಾಪೋಹಗಳನ್ನು ಕಾಲಕಾಲಕ್ಕೆ
ಮಾಧ್ಯಮಗಳ ಮೂಲಕ ಹರಡಲಾಗುತ್ತದೆ.
ದಲಿತರ ವೋಟ್‌ಬ್ಯಾಂಕ್ ಮೂಲಕವೇ ಅಧಿಕಾರಕ್ಕೆ ಬಂದ
ಮಾಯಾವತಿ ಅವರು ಉತ್ತರಪ್ರದೇಶದಲ್ಲಿಯೇ ದಲಿತರ ಏಳಿಗೆಗಾಗಿ ಉತ್ತಮ ಕಾರ್ಯಗಳನ್ನು
ಕೈಗೊಳ್ಳುತ್ತಿಲ್ಲ ಮತ್ತು ಅಲ್ಲಿ ದಲಿತರ ಮೇಲೆ ದೌರ್ಜನ್ಯ ಮುಂದುವರಿದಿದೆ ಎಂಬ
ಆಪಾದನೆ ಇದೆಯಲ್ಲಾ ?
ಇದೆಲ್ಲ ವಿರೋಧ ಪಕ್ಷಗಳು ನಡೆಸುತ್ತಿರುವ
ಚಿತಾವಣೆ .
ಮಾಯಾವತಿ ಮತ್ತು ಅವರ ಆಡಳಿತದ ಬಗ್ಗೆ ಉತ್ತರ ಪ್ರದೇಶದ
ಜನತೆಗೆ ಸಮಾಧಾನ ಇಲ್ಲದೇ ಹೋಗಿದ್ದರೆ ಇತ್ತೀಚೆಗಷ್ಟೆ ನಡೆದ ಉಪ ಚುನಾವಣೆಯಲ್ಲಿ
ನಮ್ಮ ಪಕ್ಷ ಎಲ್ಲ ಸ್ಥಾನಗಳಲ್ಲಿ ಜಯಭೇರಿ ಬಾರಿಸಲು ಹೇಗೆ ಸಾಧ್ಯವಾಗುತ್ತಿತ್ತು?
ಪ್ರಜಾಪ್ರಭುತ್ವದಲ್ಲಿ ಬೊಬ್ಬೆ ಹೊಡೆಯುವ ರಾಜಕೀಯ
ಮುಖಂಡರಿಗಿಂತ ಮತ ಹಾಕುವ ಪ್ರಭುವೇ ಸೂಕ್ತವಾದ ನ್ಯಾಯಮೂರ್ತಿ.
ಚುನಾವಣಾ ಫಲಿತಾಂಶಗಳೇ ಆಡಳಿತಕ್ಕೆ ಹಿಡಿದ ಕೈಗನ್ನಡಿ.
ಜನರ ಬೆಂಬಲ ದೊರಕಿದ ಕಾರಣದಿಂದಾಗಿಯೇ ಉಪ
ಚುನಾವಣೆಯಲ್ಲಿ ಕೂಡ ನಮ್ಮ ಪಕ್ಷ ಜಯಭೇರಿ ಬಾರಿಸಿದ್ದು.
ಮಾಯಾವತಿ ಆಡಳಿತ ಅಲ್ಲಿನ ಜನರಿಗೆ ಇಷ್ಟವಾಗದೇ
ಹೋಗಿದ್ದಲ್ಲಿ ಈ ಗೆಲುವು ಎಲ್ಲಿ ಸಾಧ್ಯವಾಗುತ್ತಿತ್ತು?
2009 ರ ಸಾರ್ವತ್ರಿಕ
ಚುನಾವಣೆ ಮೇಲೆ ಬಿಎಸ್‌ಪಿ ಎಂತಹ ಪರಿಣಾಮ ಬೀರಲಿದೆ?
ದೇಶದಲ್ಲಿನ ಈಗಿನ ರಾಜಕೀಯ ಪರಿಸ್ಥಿತಿಯನ್ನು
ಗಮನಿಸಿದಾಗ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ
ನೆಲೆ ಕಳೆದುಕೊಂಡಿವೆ .
ಅದರ ಪರಿಣಾಮವಾಗಿಯೇ ಅವುಗಳ ಕೈಯಲ್ಲಿ ಸ್ವತಂತ್ರವಾಗಿ
ಸರ್ಕಾರ ರಚಿಸಲು ಸಾಧ್ಯವಾಗುತ್ತಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ದೇಶದ ಜನತೆಯ ಪಾಲಿಗೆ
ಆಶಾಕಿರಣವಾಗಿರುವುದು ಮಾಯಾವತಿ ಅವರ ಬಿಎಸ್‌ಪಿ.
ನಮ್ಮ ಪಕ್ಷ ಮುಂದಿನ ಸಾರ್ವತ್ರಿಕ ಚುನಾವಣೆಯ ವೇಳೆ
ಬಹು ದೊಡ್ಡ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿದೆ.
ನಂತರ ಮುಂಚೂಣಿಯಲ್ಲಿ ನಿಂತು ಮಾಯಾವತಿ ಅವರೇ ಈ
ದೇಶವನ್ನು ಮುನ್ನಡೆಸಬೇಕಾದ ವಾತಾವರಣದ ಸೃಷ್ಟಿಯಾಗಲಿದೆ.
ಇದರರ್ಥ ,
ಮಾಯಾವತಿ ಅವರು ಕಿಂಗ್ ಮೇಕರ್ ಆಗುತ್ತಾರೋ?
ಅಥವಾ ಸ್ವತಃ ಪ್ರಧಾನ ಮಂತ್ರಿಯಾಗುತ್ತಾರೋ?
ಕಿಂಗ್ ಮೇಕರ್ ಅಲ್ಲ .
ಅವರೇ ಸ್ವತಃ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ.
ಮಾಯಾವತಿಯಂತಹ ಒಬ್ಬ ನಾಯಕಿ ಈ ದೇಶದ ಪ್ರಧಾನಿಯಾಗಿ
ಆಯ್ಕೆಯಾಗಲು ಇದು ಸೂಕ್ತ ಕಾಲ.
ಈ ದೇಶ ಮತ್ತು ದೇಶದ ಜನರ ಹಿತಾಸಕ್ತಿಯ ದೃಷ್ಟಿಯಿಂದ
ಮಾಯಾವತಿ ಭಾರತದ ಪ್ರಧಾನ ಮಂತ್ರಿಯಾಗುವುದು ತೀರಾ ಅನಿವಾರ್ಯ.
2009ರ
ಸಾರ್ವತ್ರಿಕ ಚುನಾವಣೆಯ ನಂತರ ಅವರು ಆ ಸ್ಥಾನವನ್ನು ಅಲಂಕರಿಸಿಯೇ ತೀರುತ್ತಾರೆ.
ಆ ಬಗ್ಗೆ ಅನುಮಾನವೇ ಬೇಡ.
ಟಿಎಸ್‌ಐ |