ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಪತ್ರ ಚರಿತ್ರೆ
ಸರೋಜಿನಿ ನಾಯ್ಡು ಬರೆದ ಪತ್ರ
 

ಹದಿನಾಲ್ಕನೇ ವಯಸ್ಸಿನಲ್ಲಿ ಅನ್ಯ ಜಾತೀಯನನ್ನು ಪ್ರೇಮಿಸಿದ ತಪ್ಪಿಗೆ ಸರೋಜಿನಿ ನಾಯ್ಡು ಅವರನ್ನು ಕೇಂಬ್ರಿಡ್ಜ್‌ಗೆ ಕಳುಹಿಸಲಾಗಿತ್ತು. ಅಲ್ಲಿ ಕಲಿಕೆಗಿಂತ ಹೆಚ್ಚಾಗಿ ಅವರು ಒಲವು ತೋರಿದ್ದು ಕವನಗಳೆಡೆಗೆ. ಇತಿಹಾಸದ ಪ್ರಮುಖ ಘಟನೆಯಾದ ಸ್ವಾತಂತ್ರ್ಯ ಹೋರಾಟದಿಂದ ಅವರು ಪ್ರಭಾವಿತರಾಗುವುದಕ್ಕೂ ಮುಂಚಿನ ದಿನಗಳವು. ಸ್ವತಂತ್ರ ಭಾರತದ ಪ್ರಪ್ರಥಮ ಮಹಿಳಾ ರಾಜ್ಯಪಾಲರಾಗಿದ್ದ ಸರೋಜಿನಿ ಒಬ್ಬ ಉತ್ತಮ ವಕೀಲೆಯೂ ಹೌದು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ವಿದೇಶಿಯರ ಬೆಂಬಲ ಗಳಿಸುವಲ್ಲೂ ಅವರದು ಪ್ರಮುಖ ಪಾತ್ರ. ಸರೋಜಿನಿ ನಾಯ್ಡು ಅವರು ಡೆಕ್ಕನ್ ಪ್ರಾಂತದಲ್ಲಿದ್ದಾಗ ಗೋಪಾಲ ಕೃಷ್ಣ ಗೋಖಲೆ ಅವರಿಗೆ ಬರೆದ ಈ ಪತ್ರದಲ್ಲಿ ಅಲ್ಲಲ್ಲಿ ಹಾಸ್ಯಪ್ರಜ್ಞೆ ಮೆರೆದಿದ್ದನ್ನು ಗಮನಿಸಬಹುದು.

24 ಡಿಸೆಂಬರ್ 1914,
ಹೈದರಾಬಾದ್

ಆತ್ಮೀಯ ಗೋಖಲೆ ಅವರಿಗೆ,

ನಿಮ್ಮ ಕುರಿತು ಅಥವಾ ನಿಮ್ಮಿಂದ ಸುದ್ದಿಗಳನ್ನು ಕೇಳಿ ಬಹಳ ದಿನಗಳೇ ಆದವು. ನನ್ನ ಕಟ್ಟುನಿಟ್ಟಿನ ಹಾಗೂ ನಿಸ್ವಾರ್ಥ ಪ್ರತಿಬಂಧ ನಿಮ್ಮ ಮೇಲಿದ್ದರೂ, ನಿಮ್ಮ ಮೌನ ಮಾತ್ರ ಕಾತರ ಹಾಗೂ ನೋವನ್ನುಂಟು ಮಾಡುವಂಥದ್ದು. ಇದು ನೀವು ಅಶಕ್ತರಾಗಿದ್ದೀರಿ ಎಂಬುದಕ್ಕಿಂತ ಬರೆಯಲು ಸಮಯವಿಲ್ಲದಷ್ಟು ಉತ್ತಮ ಸ್ಥಿತಿ ತಲುಪಿದ್ದೀರಿ ಎಂಬ ಅರ್ಥಕೊಡುತ್ತದೆ ಎಂದು ಭಾವಿಸಿದ್ದೇನೆ!

ನಾನೇ ಬರೆಯಬಹುದಿತ್ತು, ಆದರೆ ನನ್ನ ಆರೋಗ್ಯ ಹದಗೆಟ್ಟಿದೆ. ದಿನವೂ ಜ್ವರ ಹಾಗೂ ನಿರಂತರ ಜನರ ಆಕ್ರಮಣ! ಅವೆರಡರ ಹೆಚ್ಚಳ ಒಬ್ಬನ ಸಮಯ ಹಾಗೂ ಪ್ರಸನ್ನತೆಯ ಮೇಲೆ ಮಾರಕ ಪರಿಣಾಮವನ್ನೇ ಬೀರಲಿದೆ ಎಂಬುದು ನಿಮಗೂ ಗೊತ್ತು. ಬಿಡಿ, ಮನೋಧರ್ಮಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ನನಗೆ ಪುರುಷರು ಮತ್ತು ಸೊಳ್ಳೆಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಈವರೆಗೆ ಸೂಕ್ತ ಪರಿಹಾರೋಪಾಯ ದೊರಕಿಲ್ಲ. ಆದರೆ ಇಬ್ಬರಲ್ಲೂ ಒಂದು ಸಾಮ್ಯತೆ ಇದೆ; ಅದು ಕುಟುಕುವ ಗುಣ! ಆದರೆ ಅದೃಷ್ಟವಶಾತ್ ಮನುಷ್ಯ ಸೊಳ್ಳೆಗಳನ್ನು ನಾನು ಲಂಡನ್ ಗಾಳಿಯಲ್ಲಿ ವಿಷ ಸೇರಿಸಲಿ ಎಂಬ ಉದ್ದೇಶದಿಂದ ಬಿಟ್ಟುಬಂದಿರುವೆ.

ಇಲ್ಲಿನ ಪುರುಷರು ವಿಚಿತ್ರ ಹೈದರಾಬಾದ್ ಗುಣವನ್ನೇ ಮೈಗೂಡಿಸಿಕೊಂಡಿದ್ದಾರೆ! ಸಭ್ಯ ಹಾಗೂ ಮೃದು ಹೃದಯಿಗಳು. ಅವರೂ ಬದುಕುತ್ತಾರೆ, ಇತರರನ್ನೂ ಬದುಕಲು ಬಿಡುತ್ತಾರೆ. ಅವರಿಗೆಲ್ಲಾ ನಾಯಕರಾಗಬೇಕೆಂಬ ಬಯಕೆಯೇ ಇಲ್ಲವೇ ಎಂದು ಒಂದೊಮ್ಮೆ ನನಗೆ ಅಚ್ಚರಿಯಾಗುತ್ತದೆ.'ನಮ್ಮ ನಾಯಕರು' ಎಂದು ಈ ಯುವಕರು ವ್ಯಂಗ್ಯವಾಗಿ ಕರೆಯುತ್ತಾರೆ. ಈಗೊಮ್ಮೆ ನಕ್ಕು ಬಿಡಿ. ಗಂಟುಕಟ್ಟಿದ ಘನಗಂಭೀರ ಮುಖಮುದ್ರೆಯನ್ನು ಸಡಿಲಿಸಿ ಮನಃಪೂರ್ವಕವಾಗಿ ಖುಷಿಪಡಿ; ಹೇಗೆ ನಾನು ರೋಗ ಹರಡುವ, ಮಾತ್ಸರ್‍ಯ ಪೂರ್ಣ ಸೊಳ್ಳೆಗಳನ್ನು ಕಂಡು ಈ ಮೊದಲು ನಕ್ಕೆನೋ ಹಾಗೆ!

ಹ್ಞಾಂ, ಭಾರತಮಾತೆ ತನಗಂಟಿದ ರೋಗದಿಂದ ಗುಣಮುಖಳಾಗಬೇಕಾದರೆ ಹೊಸ ಪೀಳಿಗೆಯ ಪುರುಷರು ಇಲ್ಲಿ ಹುಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸ್ವಪ್ರೇರಣೆ, ಆಳವಾದ ನಿಷ್ಕಪಟತೆ, ಭಾವನೆಗಳನ್ನು ಧೈರ್ಯವಾಗಿ ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯ, ಪ್ರತಿ ಕಾರ್ಯದಲ್ಲಿ ಶ್ರದ್ಧೆ ತೋರುವ ವ್ಯಕ್ತಿಗಳ ಅಗತ್ಯ ನಮಗಿದೆ. ರಾಷ್ಟ್ರ ಪ್ರೇಮವುಳ್ಳ, ದೇಶ ಸೇವೆಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವ ವ್ಯಕ್ತಿಗಳು ಬೇಕೇ ಹೊರತು ಸ್ವಾರ್ಥಿ ಹಾಗೂ ಅಪ್ರಾಮಾಣಿಕರಲ್ಲ. ಓಹ್, ವಂಚಕರು ಹಾಗೂ ಪೂರ್ವಗ್ರಹಪೀಡಿತರನ್ನು ನಾನೆಷ್ಟು ದ್ವೇಷಿಸುವೆ. ಸಂಕುಚಿತ ಮನೋಭಾವ, ಪ್ರಾಂತೀಯ ಭಾವದಿಂದ ಕೂಡಿದ ದೃಷ್ಟಿಕೋನ, ಮನುಷ್ಯನೇ ಸೃಷ್ಟಿಸಿರುವ ಅಭಿಪ್ರಾಯಭೇದ, ದುರಹಂಕಾರದಿಂದ ಕೂಡಿದ ಕುತಂತ್ರ ಬುದ್ಧಿ ಎಂದಿಗೂ ಕೊನೆಯಾಗದೇನೋ? ಇವುಗಳಿಗೆ ಪರಿಹಾರವನ್ನು ಸೂಚಿಸಿ ನಾನು ಸುಸ್ತಾಗಿದ್ದೇನೆ. ಕೇವಲ ತುಟಿಗಳಿಗೆ ವ್ಯಾಯಾಮವಾದದ್ದು ಬಿಟ್ಟರೆ ನಾನಾಡಿದ ಮಾತುಗಳೆಲ್ಲಾ ಅರ್ಥಹೀನವಾಗಿದೆ. ವ್ಯಕ್ತಿಯೊಬ್ಬನಿಗೆ ಪಾಪಪ್ರಜ್ಞೆ ತಾನಾಗೇ ಕಾಡದಿದ್ದಲ್ಲಿ ಏನು ಮಾಡಿದರೂ ವ್ಯರ್ಥವೇ ಸರಿ.

ದೂರಾಲೋಚನೆ ಮತ್ತು ಅದ್ಭುತ ಯೋಚನಾ ಸಾಮರ್ಥ್ಯ ಇರುವ ವ್ಯಕ್ತಿತ್ವವಿರಬೇಕು. ನನಗೆ ತಿಳಿದ ಮಟ್ಟಿಗೆ ಯಾವುದೇ ಭಾರತೀಯ ಮಹಿಳೆ ಅಥವಾ ಪುರುಷ ಇಂತಹ ಪರಿಪೂರ್ಣತೆ ಪಡೆದಿಲ್ಲ. ನಾನು ಮದ್ರಾಸ್‌ಗೆ ಸಮಾವೇಶವೊಂದಕ್ಕೆ ಹೋಗಬೇಕಾಗಿತ್ತು. ಅಲ್ಲಿ ಹೋಗಿದ್ದರೆ ಸಹಭಾವದ ಬಗ್ಗೆ ನಾನು ಪ್ರಾಮಾಣಿಕವಾಗಿ ಮತ್ತು ಅಷ್ಟೇ ವಿನಯದಿಂದ ಮಾತನಾಡಿರುತ್ತಿದ್ದೆ. ಆದರೆ ನನ್ನ ಆರೋಗ್ಯ ಕೈಕೊಟ್ಟಿತು. ಸಮಾವೇಶದಲ್ಲಿ ಪಾಲ್ಗೊಳ್ಳಲಾಗದ ನನ್ನ ಅಸಮರ್ಥತೆಯ ಬಗ್ಗೆ ನನಗೇನೂ ಪಶ್ಚಾತ್ತಾಪವಿಲ್ಲ. ಆದರೆ ನನ್ನ ಬರುವಿಕೆಯ ನಿರೀಕ್ಷೆಯಲ್ಲಿ ಸಮಾವೇಶ ಆಯೋಜಿಸಿದ್ದ ಆ ವಿದ್ಯಾರ್ಥಿಗಳ ನಮ್ರತೆಗೆ ನಾನು ಕೃತಜ್ಞಳಾಗಿದ್ದೇನೆ. ನಿಮ್ಮ ಮಗಳು ಹಾಗೂ ಸಹೋದರಿಯರನ್ನು ನಾನು ವಿಚಾರಿಸಿದೆ ಎಂದು ಹೇಳಿ. ದೈಹಿಕವಾಗಿ ಅಶಕ್ತಳಾಗಿರುವ ನನಗೆ ಸಮರ್ಥ ಬ್ರಾಹ್ಮಣ ಮಾಂತ್ರಿಕ ಶಕ್ತಿಯನ್ನು ಕಳುಹಿಸಿಕೊಡಿ... ಹೋರಾಟದ ನನ್ನ ಉತ್ಸಾಹಕ್ಕೂ ಅದರ ಅಗತ್ಯವಿದೆ!

ಸ್ನೇಹಪೂರ್ವಕವಾಗಿ,
ಸರೋಜಿನಿ ನಾಯ್ಡು

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .