ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ವಿಶೇಷ ವರದಿ
ತಾರೆಗಳ ತೋಟದಲಿ ಕ್ರಿಕೆಟ್ ಮಾಯ
 

ಕೊನೆಗೂ ಬಹು ನಿರೀಕ್ಷಿತ ಐಪಿಎಲ್ ಕ್ರಿಕೆಟ್ ಟೂರ್ನಿ ಆರಂಭವಾಗಿದೆ. ಟೂರ್ನಿಯ ಪಂದ್ಯಗಳ ಸಂದರ್ಭದಲ್ಲಿ ಬಾಲಿವುಡ್ ವಿಜೃಂಭಣೆಯ ಮುಂದೆ ಕ್ರಿಕೆಟ್ ಮಸುಕಾಗಿ ಬಿಟ್ಟಿದೆ.

ಬೆಂಗಳೂರಿನಲ್ಲಿ ಪ್ರಖ್ಯಾತ ಐಪಿಎಲ್ ಹಬ್ಬದ ಉದ್ಘಾಟನೆಯಾದ ಸಂದರ್ಭ. ಸುಮಾರು ಆರು ಗಂಟೆಗಳ ಕಾಲ ನಡೆದ ಆ ಹಬ್ಬದ ಉದ್ಘಾಟನೆಯ ಕೊನೆಯಲ್ಲಿ ಗೆಲುವು ಸಾಧಿಸಿದ್ದು ಬಾಲಿವುಡ್ ಮತ್ತು ಅದ್ಭುತವಾಗಿದ್ದ ರಸಮಂಜರಿ ಕಾರ್ಯಕ್ರಮ. ಆ ನಡುವೆ ಎಲ್ಲೋ ಕ್ರಿಕೆಟ್ ಸೋತು ನಿಂತು ಬಿಟ್ಟಿತು. ಸಾವಿರಾರು ಕೋಟಿ ರೂಪಾಯಿಗಳಷ್ಟು ಬೆಲೆಯುಳ್ಳ, ಭಾರತದ ಪ್ರಪ್ರಥಮ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಆ ಉದ್ಘಾಟನಾ ಪಂದ್ಯದುದ್ದಕ್ಕೂ ಅಕ್ಷರಶಃ ಮೆರೆದದ್ದು ಬಾಲಿವುಡ್ ಮಾತ್ರ. ಬೆಂಗಳೂರಿನ ಸೆಕೆಗಾಲದ ಆ ಸಂಜೆ. ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ಮತ್ತು ಹೊರಗೆ... ಎರಡೂ ಕಡೆ ಬಿಸಿಯೇರಿದ ಕ್ಷಣ. ಆ ಬಿಸಿಯ ನಡುವೆ ಪ್ರವಾಸಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆತಿಥೇಯ ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ಧ 130 ರನ್‌ಗಳ ಭರ್ಜರಿ ಜಯ ಪಡೆಯಿತು. ಮೈದಾನದ ನಡುವೆ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ರಿಕಿ ಪಾಂಟಿಂಗ್, ಇಶಾಂತ್ ಶರ್ಮ, ಜಾಕ್ ಕಾಲಿಸ್ ಮತ್ತು ಜಹೀರ್ ಖಾನ್ ಅವರಂತಹ ಅಪ್ಪಟ ಕ್ರಿಕೆಟ್ ತಾರೆಗಳಿದ್ದರು.

ಆದರೆ, ಮೈದಾನದ ಅಂಚಿನಲ್ಲಿನ, ಮೊದಲನೇ ಮಹಡಿಯ ಸ್ಟ್ಯಾಂಡ್‌ನಲ್ಲಿ ತನ್ನ ದಂಡಿನೊಂದಿಗೆ ನಿಂತಿದ್ದ ಬಾಲಿವುಡ್‌ನ ಬಾದ್‌ಶಾ, ಕೋಲ್ಕತ್ತಾ ತಂಡದ ಒಡೆಯ, ಸೂಪರ್ ಸ್ಟಾರ್ ಶಾರುಖ್ ಖಾನ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಕಿಂಗ್ ಖಾನ್ ಮುಂದೆ ಕ್ರಿಕೆಟ್ ಮಸುಕಾಯಿತು. ಕಿಂಗ್ ಖಾನ್ ಮೊದಲನೇ ಮಹಡಿಯ ಮೇಲಿನ ಸ್ಟ್ಯಾಂಡ್‌ನಲ್ಲಿ ನಿಂತು ತನ್ನ ತಂಡದ ಆಟಗಾರರು ಮತ್ತು ಪ್ರೇಕ್ಷಕರತ್ತ ಸವಿ ಮುತ್ತುಗಳ ಸುರಿಮಳೆ ಸುರಿಸಿದರು. ಅವರ ತಂಡದ ಆಟಗಾರ ಸಿಕ್ಸರ್ ಎತ್ತಿದಾಗ, ಎದುರಾಳಿಗಳ ವಿಕೆಟ್ ಪತನವಾದಾಗ ಕುಣಿದು ಕುಪ್ಪಳಿಸಿದರು. ಒಂದು ಹಂತದಲ್ಲಂತೂ ತಮ್ಮ ಮಗನನ್ನು ಭುಜದ ಮೇಲೆ ಕೂರಿಸಿಕೊಂಡು ಖಾನ್ ಕುಣಿದಾಡಿದರೆ, ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಕೋಲ್ಕತ್ತಾ ನೈಟ್ ರೈಡರ್ಸ್ ಅಮೋಘ ಗೆಲುವು ಸಾಧಿಸಿದ ಮೇಲೆ ಕಿಂಗ್ ಖಾನ್ ಶಾಂಪೇನ್ ಬಾಟಲ್ ಮುಚ್ಚಳ ತೆಗೆದು ಕಾರಂಜಿಯ ಸೃಷ್ಟಿ ಮಾಡಿದ ಸಂದರ್ಭ. ಪುರುಷರು-ಮಹಿಳೆಯರು, ಮಕ್ಕಳು-ವಯೋವೃದ್ಧರು... ಕೈಯಲ್ಲಿದ್ದ ಸೆಲ್‌ಫೋನ್ ಮೂಲಕ ಅವರ ನೆಚ್ಚಿನ ತಾರೆಯ ಛಾಯಾಚಿತ್ರ ತೆಗೆದದ್ದೇ ತೆಗೆದದ್ದು. ಒಮ್ಮೆ ಆಟದಲ್ಲಿ ಸಂಪೂರ್ಣವಾಗಿ ಮಗ್ನನಾಗಿದ್ದ ಶಾರುಖ್ ಖಾನ್ ಸ್ಟ್ಯಾಂಡ್‌ನ ಅಂಚಿನಲ್ಲಿ ನಿಂತು ಕುಣಿಯಲಾರಂಭಿಸಿದಾಗ ಅವರ ಸ್ನೇಹಿತರು ಖಾನ್ ಸಾಹೇಬರನ್ನು ಹಿಂದಕ್ಕೆಳೆದುಕೊಂಡರು. ಒಬ್ಬ ಟೆಲಿವಿಷನ್ ವರದಿಗಾರ ಈ ಪಂದ್ಯದ ಅಸಲಿ ಹೀರೊ ಯಾರು? ಎಂದು ಪ್ರೇಕ್ಷಕರೊಬ್ಬರನ್ನು ಪ್ರಶ್ನಿಸಿದಾಗ ಕೇಳಿ ಬಂದ ಉತ್ತರ ಶಾರುಖ್ ಖಾನ್.

ಒಂದೆಡೆಯಲ್ಲಿ ಕಿಂಗ್ ಖಾನ್ ಪೂಜೆ ನಿರಂತರವಾಗಿ ನಡೆಯುತ್ತಿದ್ದಾಗಲೇ 26 ವರ್ಷ ವಯಸ್ಸಿನ, ನ್ಯೂಜಿಲೆಂಡ್ ಆಟಗಾರ ಬ್ರೆಂಡನ್ ಮೆಕಲಮ್ ಮೈದಾನದ ನಡುವೆ ಎದುರಾಳಿ ಬೌಲರ್‌ಗಳ ಮಾರಣ ಹೋಮ ಮಾಡಿಯೇಬಿಟ್ಟರು. ಕೋಲ್ಕತ್ತಾ ನೈಟ್ ರೈಡರ್ಸ್ ಪರ ಬ್ಯಾಟಿಂಗ್‌ಗೆ ಇಳಿದ ಮೆಕಲಮ್ ಒಟ್ಟು 222 ರನ್‌ಗಳ ಪೈಕಿ 158 ರನ್‌ಗಳನ್ನು ಬಾರಿಸುವ ಮೂಲಕ ಟೂರ್ನಿಗೆ ಭಾರಿ ಆರಂಭವೊದಗಿಸಿಕೊಟ್ಟರು. ಆ ಮೂಲಕ ಮದ್ಯದ ದೊರೆ ವಿಜಯ್ ಮಲ್ಯ ಅವರ ಆತಿಥೇಯ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಗೆಲುವಿನ ಆಸೆ ಆರಂಭದಲ್ಲಿಯೇ ಕಮರಿ ಹೋಯಿತು. ದುರಂತವೆಂದರೆ ಸ್ಟ್ಯಾಂಡ್‌ನಲ್ಲಿದ್ದ ಕೆಲವೇ ಕೆಲವರು ಮಾತ್ರ ಮೆಕಲಮ್ ಅಬ್ಬರದ ಬ್ಯಾಟಿಂಗ್ ಬಗ್ಗೆ ಚರ್ಚೆ ಮಾಡುತ್ತಿದ್ದರು.

ಪಂದ್ಯ ಆರಂಭವಾಗುವುದಕ್ಕಿಂತ ಮೊದಲು ನಡೆದ ಉದ್ಘಾಟನಾ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಯಾಲೋಕವೊಂದನ್ನೇ ಸೃಷ್ಟಿಸಿ ಬಿಟ್ಟಿತ್ತು. ಕ್ರೀಡಾಂಗಣದಲ್ಲಿ ನೆರೆದಿದ್ದ 55,000ದಷ್ಟು ಪ್ರೇಕ್ಷಕರನ್ನು ಮಂತ್ರಮುಗ್ಧವಾಗಿಸಿದ್ದು ಕ್ರಿಕೆಟ್ ಅಲ್ಲ, ಆ ಸಾಂಸ್ಕೃತಿಕ ಕಾರ್ಯಕ್ರಮಗಳು! ಅಮೆರಿಕಾದಿಂದ ಬಂದ ಮಾದಕ 'ಚಿಯರ್ ಲೀಡರ್ಸ್', ಹಾಲೆಂಡ್‌ನ 'ಸ್ಟಿಲ್ಟ್ ವಾಕರ್ಸ್', ಬಬಲ್ ಡ್ಯಾನ್ಸರ್‌ಗಳು ಹಾಗೂ ದೊಂಬರಾಟದ ಮಂದಿ ನೀಡಿದ ಪ್ರದರ್ಶನ ಅತ್ಯಾಕರ್ಷಕವಾಗಿದ್ದವು. ಹಿನ್ನೆಲೆಯಲ್ಲಿ ಲೇಸರ್ ಷೋ. 2,50,000 ವಾಟ್ಸ್ ಸಂಗೀತದ ಅಲೆ. ಗಗನದಲ್ಲಿ ಪಟಾಕಿಗಳು ಮೂಡಿಸಿದ ಬಣ್ಣ-ಬಣ್ಣದ ರಂಗೋಲಿ. ಇಂತಹ ವಾತಾವರಣದ ನಡುವೆ ಚಿಯರ್ ಲೀಡರ್ಸ್‌ಗಳ ಮಾದಕ ನೃತ್ಯ. ಬಲೂನಿನೊಳಗಿದ್ದ ಬಬಲ್ ಡ್ಯಾನ್ಸರ್‌ಗಳ ಪ್ರದರ್ಶನ, ಆಗಸದಿಂದ ಧರೆಗೆ ಧುಮುಕ್ಕಿದ ದೊಂಬರಾಟದ ಮಂದಿಯ ಶೌರ್ಯ ಪ್ರದರ್ಶನ. ಇನ್ನೇನು ಈ ರಸಮಂಜರಿ-ಮೋಜು ಮುಗಿಯಿತು, ಕ್ರಿಕೆಟ್ ಆರಂಭವಾಯಿತು ಎಂದುಕೊಂಡಾಗಲೇ ಕಿಂಗ್ ಖಾನ್ ರಂಗಪ್ರವೇಶವಾಯಿತು. ಬಾಲಿವುಡ್ ಅಬ್ಬರ ಶುರುವಾಗಿಯೇ ಹೋಯಿತು.

ಮೈದಾನದ ನಡುವೆ ಮೆಕಲಮ್ ಬೆಂಕಿಯುಗುಳುತ್ತಿದ್ದರು. ಅದು ಕಳೆದ ಬೇಸಿಗೆಯಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಆಸ್ಟ್ರೇಲಿಯದ ಆಡಮ್ ಗಿಲ್‌ಕ್ರಿಸ್ಟ್ ಅಬ್ಬರದ ಬ್ಯಾಟಿಂಗ್ ಮೂಲಕ ಶ್ರೀಲಂಕಾ ತಂಡವನ್ನು ನುಚ್ಚುನೂರು ಮಾಡಿದ್ದ ರೀತಿಯಲ್ಲಿಯೇ. ಅದೇ ರೀತಿ ಮೆಕಲಮ್ ಇಲ್ಲಿ ಆತಿಥೇಯ ತಂಡದ ಪಾಲಿಗೆ ನುಂಗಲಾರದ ತುತ್ತಾಗಿ ಹೋದರು. ಇನ್ನು ಮೈದಾನದ ಹೊರಗೆ ರೂ.5,500 ಮೊತ್ತದ ಕುರ್ಚಿಗಳಿದ್ದ ಸ್ಟ್ಯಾಂಡ್ ಮೇಲೆ ಕಿಂಗ್ ಖಾನ್ ದರ್ಬಾರು. ಕಿಂಗ್ ಖಾನ್ ದರ್ಶನ ಪಡೆಯಲು ಮೈದಾನದ ಪ್ರತಿಯೊಂದು ಸ್ಟ್ಯಾಂಡ್‌ನಲ್ಲಿದ್ದ ಪ್ರತಿಯೊಬ್ಬ ಪ್ರೇಕ್ಷಕನೂ ಮುಗಿ ಬಿದ್ದರು. ಸ್ವಲ್ಪವಾದರೂ ಖಾನ್ ದರ್ಶನವಾದರೆ ಸಾಕು ಎಂದು ಎಲ್ಲರೂ ಚಡಪಡಿಸಿದರು. ಮೆಕಲಮ್ ಬ್ಯಾಟಿಂದ ಚಿಮ್ಮಿದ ಚೆಂಡು ಬೌಂಡರಿ ಗೆರೆ ದಾಟಿ ಹಾರಿ ಹೋದ ಸಂದರ್ಭ. ಬಾಲಿವುಡ್ ಸಂಗೀತಕ್ಕೆ ಚಿಯರ್ ಲೀಡರ್ಸ್ ನೃತ್ಯ. ಜೊತೆಯಲ್ಲಿಯೇ ಅಲ್ಲಿದ್ದ ಒಬ್ಬ ಪ್ರೇಕ್ಷಕರು ಕೈಯಲ್ಲಿದ್ದ ಮೊಬೈಲ್ ಮೂಲಕ ಅವರ ತಾಯಿಗೆ ಅಮ್ಮ ನಾನು ಕಿಂಗ್ ಖಾನ್ ತಲೆಯ ಮೇಲೆ, ಇನ್ನೂ 50 ಅಡಿ ಎತ್ತರದಲ್ಲಿ ನಿಂತಿದ್ದೇನೆ ಎಂದು ಕೂಗಿ ಹೇಳುತ್ತಿದ್ದರು. ಇನ್ನೊಬ್ಬ ತಾಯಿ ಜೊತೆಯಲ್ಲಿದ್ದ ಅವರ ಮಗಳಿಗೆ, ಹೋಗು, ಹೋಗು... ಹೇಗಾದರೂ ಮಾಡಿ ಶಾರುಖ್ ಛಾಯಾಚಿತ್ರ ತೆಗೆ ಎಂದು ಹುರಿದುಂಬಿಸುತ್ತಿದ್ದರು.

ಈ ಪಂದ್ಯದುದ್ದಕ್ಕೂ ಕ್ರಿಕೆಟ್ ಎದುರು ಬಾಲಿವುಡ್ ವಿಜೃಂಭಿಸಿತು. ಪಂದ್ಯ ಆರಂಭವಾಗುವುದಕ್ಕಿಂತ 90 ನಿಮಿಷ ಮೊದಲು ಬಾಲಿವುಡ್‌ನ ಹೆಸರಾಂತ ತ್ರಿವಳಿ ಸಂಗೀತ ನಿರ್ದೇಶಕರಾದ ಶಂಕರ್-ಎಹ್ಸಾನ್-ಲಾಯ್ ಅವರ ರಸಮಂಜರಿ ಕಾರ್ಯಕ್ರಮ. ಅದಾದ ನಂತರ 8 ತಂಡಗಳ 8 ನಾಯಕರ ಪರಿಚಯ. ಕ್ರಿಕೆಟ್‌ಗೆ ಬದ್ಧರಾಗಿರುವುದಾಗಿ ಅವರು ಘೋಷಿಸಿ, ಮೈದಾನದ ನಡುವೆ ಇದ್ದ ದೊಡ್ಡದೊಂದು ಫಲಕದ ಮೇಲೆ ಹಸ್ತಾಕ್ಷರ ಮಾಡಿದರು. ಆಗ ಇನ್ನೇನು ಅಪ್ಪಟ ಕ್ರಿಕೆಟ್ ಆರಂಭ ಎಂಬ ಭಾವನೆ ಮೂಡಿತ್ತು.

ಇಲ್ಲ, ಅಲ್ಲಿ ಕ್ರಿಕೆಟ್ ಪ್ರಮುಖ ಸ್ಥಾನವನ್ನೇ ಗಳಿಸಿಕೊಳ್ಳಲಿಲ್ಲ. ಹೊನಲು-ಬೆಳಕಿನ ನಡುವೆ ಆಟಗಾರರು ಅಭ್ಯಾಸ ನಡೆಸಲು ಮೈದಾನಕ್ಕೆ ಇಳಿದಾಗ ಸಂಗೀತದ ಅಬ್ಬರ ಆವರಿಸಿಕೊಂಡಿತು. ಹೆಚ್ಚಿನ ಪಕ್ಷ ಕ್ರಿಕೆಟ್ ಇತಿಹಾಸದಲ್ಲಿಯೇ ಇಂತಹ ಅಬ್ಬರದ ನಡುವೆ ಆಟಗಾರರು ಪಂದ್ಯದ ಪೂರ್ವಾಭ್ಯಾಸ ನಡೆಸಿದ್ದು ಇದೇ ಮೊದಲ ಬಾರಿ ಇರಬೇಕು. ಈ ಮೈದಾನದಲ್ಲಿ ಬಾಲಿವುಡ್ ರಸಮಂಜರಿ ಕಾರ್ಯಕ್ರಮ ನಡೆಯುತ್ತಿದೆಯೇ? ಅಥವಾ ಕ್ರಿಕೆಟ್ ಪಂದ್ಯ ನಡೆಯುತ್ತಿದೆಯೇ? ಎಂಬ ಪ್ರಶ್ನೆ ಉದ್ಭವಿಸದೇ ಇರಲಿಲ್ಲ. ಕೋಲ್ಕತ್ತಾ ತಂಡವನ್ನು ಪ್ರತಿನಿಧಿಸಿದ ಹುಲಿಯ ಲಾಂಛನ ಹಾಗೂ ಆ ತಂಡದ ಸಮವಸ್ತ್ರ ಧರಿಸಿದ್ದ ಸ್ಟಿಲ್ಟ್ ವಾಕರ್ಸ್ ಮುಂದೆ ನಿಜವಾದ ಆಟಗಾರರು ಜೋಕರ್‌ಗಳಂತೆ ಕಂಡು ಬಂದರು.

ಈ ಪಂದ್ಯದ ನಂತರ ವಾರದ ಕೊನೆಯಲ್ಲಿ ಟೂರ್ನಿಯ ಮತ್ತೊಂದು ಪಂದ್ಯ ಕೋಲ್ಕತ್ತಾದಲ್ಲಿ ನಡೆಯಿತು. ಅಲ್ಲಿ ಕೂಡ ಇದೇ ವಾತಾವರಣದ ಪುನರಾವರ್ತನೆಯಾತು. ಬೆಂಗಳೂರಿನಂತೆಯೇ ಇಲ್ಲಿ ಕೂಡ ಪಂದ್ಯದ ವ್ಯವಸ್ಥಾಪಕರು ಹಳೆಯ ಕಾಲದ ಸ್ಕೋರ್ ಕಾರ್ಡ್‌ಗಳನ್ನು ಬದಿಗೆ ಸರಿಸಿದ್ದರು. ಮೈದಾನದ ಅಂಚಿನಲ್ಲಿದ್ದ ಪ್ರೇಕ್ಷಕರಿಗೆ ಸ್ಕೋರ್ ಕಾರ್ಡ್‌ಗಳ ಅಗತ್ಯವೂ ಇರಲಿಲ್ಲ ಎನ್ನಿ. ಶಾರುಖ್ ಖಾನ್ ಅವರನ್ನು ನೋಡುವ ತವಕದಲ್ಲಿ ಒಬ್ಬ ಅಭಿಮಾನಿ ಮೇಲಿನ ಸ್ಟ್ಯಾಂಡ್‌ನಿಂದ ಕೆಳಕ್ಕೆ ಹಾರಿ ಮೈಮೂಳೆಗಳನ್ನು ಮುರಿದುಕೊಂಡು ಆಸ್ಪತ್ರೆ ಸೇರಿದ. ಈಡನ್ ಗಾರ್ಡನ್‌ನಲ್ಲಿನ ಫ್ಲಡ್ ಲೈಟ್ ವ್ಯವಸ್ಥೆ ಸುಮಾರು ಅರ್ಧ ಗಂಟೆ ಕಾಲ ಕೈಕೊಟ್ಟಾಗ ಸ್ಟ್ಯಾಂಡ್‌ನಲ್ಲಿದ್ದ ಖಾನ್ ಅಂಡ್ ಕಂಪನಿ ಪ್ರೇಕ್ಷಕರಿಗೆ ಮನರಂಜನೆ ಒದಗಿಸಿತು. ಕಳೆದ ಒಂದೂವರೆ ದಶಕದಿಂದ ಕೋಲ್ಕತ್ತಾ ನಗರದ ಪಾಲಿಗೆ ಸೌರವ್ ಗಂಗೂಲಿ ಅವರೇ ಆರಾಧ್ಯ ದೈವವಾಗಿದ್ದರು. ಆದರೆ, ಈ ಬಾರಿ ನಗರದುದ್ದಕ್ಕೂ ರಾರಾಜಿಸಿದ್ದು ಶಾರುಖ್ ಖಾನ್ ಕಟೌಟ್‌ಗಳು.

8 ನಗರದ ತಂಡಗಳು, 117 ಆಟಗಾರರು. 59 ಪಂದ್ಯಗಳು. ಹೆಚ್ಚಿನ ಪಕ್ಷ ಇದಿನ್ನೂ ಆರಂಭವಾದ ಕಾರಣ ಕ್ರಿಕೆಟ್ ಬಿಸಿ ಏರದೇ ಇರಬಹುದು. ಆ ಕಾರಣದಿಂದಲೇ ಪ್ರೇಕ್ಷಕರ ಗಮನ ರಸಮಂಜರಿ ಹಾಗೂ ಬಾಲಿವುಡ್ ಕಡೆ ಹೆಚ್ಚು ಹರಿದಿರಬಹುದು. ಇಂತಹ ಕ್ಲಬ್ ಸಂಸ್ಕೃತಿಯಲ್ಲಿ ಪ್ರೇಕ್ಷಕ ಒಂದು ತಂಡದ ಅಥವಾ ಒಬ್ಬ ಆಟಗಾರನ ಅಭಿಮಾನಿಯಾಗಿ ರೂಪುಗೊಳ್ಳಲು ಅದರದ್ದೇ ಆದ ಸಮಯ ಬೇಕಾಗುತ್ತದೆ. ವಿಶ್ವದ ಮಹಾನ್ ಕ್ರಿಕೆಟ್ ತಾರೆಗಳನ್ನೇ ಇಲ್ಲಿ ಹರಾಜಿನ ಮೂಲಕ ಕೊಂಡುಕೊಂಡಿದ್ದರೂ, ಈ ಟೂರ್ನಿಗಾಗಿ ಕೋಟ್ಯಂತರ ರೂಪಾಯಿಗಳ ವ್ಯಾಪಾರ-ವಹಿವಾಟು ನಡೆಯುತ್ತಿದ್ದರೂ ಅಪ್ಪಟ ಕ್ರಿಕೆಟ್ ಜ್ವರ ಆರಂಭವಾಗಲು ಇನ್ನೂ ಕೆಲವು ಕಾಲ ಸಮಯ ಬೇಕಾಗಬಹುದು.

ನಾವು ಭಾರತವನ್ನು ಪ್ರೀತಿಸುತ್ತೇವೆ ಎಂದು ಬೆಂಗಳೂರಿನ ಮೈದಾನದಲ್ಲಿ ಕಂಡು ಬಂದ ಒಂದು ಭಿತ್ತಿಫಲಕ ಹೇಳುತ್ತಿತ್ತು. ಮೈದಾನದ ಹೊರಗೆ ಭಾರತ ತಂಡದ ಆಟಗಾರರು ಧರಿಸುವ ರೀತಿಯ ಟೋಪಿಗಳು ಹಾಗೂ ಟೀಷರ್ಟ್‌ಗಳನ್ನು ಮಾರಾಟ ಮಾಡುವವರ ದಂಡೇ ಸೇರಿತ್ತು. ಪ್ರೇಕ್ಷಕರ ಮೊಗದ ಮೇಲೆ ಭಾರತದ ಚಿತ್ರ ಮೂಡಿಸಲು ಪೈಂಟರ್‌ಗಳು ಕೈಯಲ್ಲಿ ಪೈಂಟ್ ಹಿಡಿದು ಓಡಾಡುತ್ತಿದ್ದರು. ಆದರೆ, ಕೋಲ್ಕತ್ತಾದಲ್ಲಿ ಒಬ್ಬ ಪ್ರೇಕ್ಷಕ, ಯಾವ ತಂಡ ಗೆದ್ದರೆ ನಮಗೇನು? ಅದರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ? ನಾವಿಲ್ಲಿ ಬಂದಿರುವುದು ಸಮಯ ಕಳೆಯಲು ಮತ್ತು ಮೋಜು ಮಾಡಲು ಎಂದು ಅಭಿಪ್ರಾಯ ಪಟ್ಟ. ಈಗಿನ ಸನ್ನಿವೇಶವನ್ನು ಗಮನಿಸಿದರೆ ಕ್ರಿಕೆಟ್ ಅಭಿಮಾನ ಮೂಡಲು ಇನ್ನೂ ಸ್ವಲ್ಪ ಸಮಯ ಬೇಕು ಎಂದೆನ್ನಿಸುತ್ತಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಅರ್ಥಾತ್ ಐಪಿಎಲ್ ಯಶಸ್ವಿಯಾಗುತ್ತದೆಯೇ? ಐಪಿಎಲ್ ಬಗ್ಗೆ ಅದರ ಕ್ರಿಕೆಟ್ ಅವತಾರದ ಕುರಿತು ಹಲವಾರು ಭಿನ್ನಾಭಿಪ್ರಾಯಗಳು ಇದ್ದರೂ, ಮೇಲ್ನೋಟಕ್ಕೆ ಅದು ಒಂದು ಯಶಸ್ವಿ ವ್ಯವಹಾರವಾಗಿ ಯಶಸ್ವಿಯಾಗುವ ಎಲ್ಲ ಸಾಧ್ಯತೆಗಳು ಈಗ ಕಂಡು ಬರುತ್ತಿವೆ. ಬೆಂಗಳೂರಿನ ಪ್ರೇಕ್ಷಕ ನೂರ್ ಅಹಮದ್, ಇದು ಮೂರು ಗಂಟೆಗಳ ಬಾಲಿವುಡ್ ಸಿನಿಮಾ ಇದ್ದಂತೆ. ವಾರದ ಕೊನೆಯ ಸಂಜೆಯ ಹೊತ್ತು ಜನ ಸಿನಿಮಾ ಮಂದಿರಗಳಿಗೆ ಹೋಗಿ ಮೋಜು ಮಾಡಿದಂತೆಯೇ ಈ ಟ್ವೆಂಟಿ-20 ಕ್ರಿಕೆಟ್ ಪಂದ್ಯಗಳು. ಸಂಗೀತ-ನೃತ್ಯ, ಮೋಜು-ಮಸ್ತಿ ಹಾಗೂ ಕೊನೆಗೆ ಕ್ರಿಕೆಟ್ ಎಂದು ಎಲ್ಲವನ್ನೂ ಸಮೀಕರಿಸಿದರು. ಖ್ಯಾತ ಇತಿಹಾಸ ತಜ್ಞ ರಾಮಚಂದ್ರ ಗುಹ ಪ್ರಕಾರ ಟ್ವೆಂಟಿ-20 ಕಳ್ಳಭಟ್ಟಿ ಇದ್ದಂತೆ. ಅದೇ ಟೆಸ್ಟ್ ಕ್ರಿಕೆಟ್ ಶಾಂಪೇನ್ ಇದ್ದಂತೆ. 'ದ ವಿಸ್ಡನ್ ಕ್ರಿಕೆಟರ್' ಮಾಸಪತ್ರಿಕೆ ಸಂಪಾದಕ ಜಾನ್ ಸ್ಟರ್ನ್, ಐಪಿಎಲ್ ಮತ್ತು ಟ್ವೆಂಟಿ-20 ಕ್ರಿಕೆಟ್‌ನ ರಾಕ್ ಅಂಡ್ ರೋಲ್. ಹೇಗೆ ಎಲ್ವಿಸ್ ಮತ್ತು ಮೊಜಾರ್ಟ್ ಇಬ್ಬರನ್ನೂ ನೀವು ಇಷ್ಟಪಡುತ್ತಿರೋ ಹಾಗೆ ಟ್ವೆಂಟಿ-20 ಮತ್ತು ಟೆಸ್ಟ್ ಕ್ರಿಕೆಟ್ ಎರಡನ್ನೂ ಪ್ರೇಕ್ಷಕರು ಇಷ್ಟ ಪಡುವ ದಿನಗಳು ಹತ್ತಿರವಾಗಿವೆ. ಈ ಎರಡೂ ರೂಪುಗಳು ಒಂದಕ್ಕೊಂದು ಹೊಂದಿಕೊಂಡು ಜೀವಂತವಾಗಿ ಉಳಿಯುತ್ತವೆ ಎನ್ನುತ್ತಾರೆ ಜಾನ್ ಸ್ಟರ್ನ್.

ಟಿಎಸ್‌ಐ

ಬಿಬಿಸಿ ಆನ್‌ಲೈನ್ ವರದಿಗಾರರು

ಕ್ರೀಡೆಯ ಕುರಿತು ಮತ್ತಷ್ಟು...

ತಾರೆಗಳ ತೋಟದಲಿ ಕ್ರಿಕೆಟ್ ಮಾಯ

ಭಾರತೀಯ ಹಾಕಿ: ಅಧೋಗತಿ

 

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .