ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ವಿಶ್ಲೇಷಣಾ ವರದಿ
ನೂರಾನೆ ಬಲದ ಇರಾನ್‌ಗೆ ದಿಗ್ಬಂಧನದ ಭಯವಿಲ್ಲ!
 

ದಶಕಗಳಿಂದ ಹೇರಿರುವ ಆರ್ಥಿಕ ದಿಗ್ಬಂಧನದಿಂದ 2008ರ ಆಧುನಿಕ ಇರಾನ್ ಎಳ್ಳಷ್ಟೂ ಕಳೆಗುಂದಿಲ್ಲ. ಇರಾಕ್‌ಗಾದ ಹಣೆಬರಹ ತನ್ನ ರಾಷ್ಟ್ರಕ್ಕಾಗಬಾರದು ಎಂಬ ಖಚಿತ ನಿಲುವು ಅಲ್ಲಿನ ನಾಗರಿಕರ ಕಣ್ಣುಗಳಲ್ಲಿ ಪ್ರತಿಬಿಂಬಿಸುತ್ತಿರುತ್ತದೆ ಎನ್ನುತ್ತಾರೆ ಆ ನೆಲಕ್ಕೆ ಭೇಟಿಯಿತ್ತ ಸೌರಭ್ ಕುಮಾರ್ ಶಾಹಿ

ಇಮಾಮ್ ಖೊಮೇನಿ ವಿಮಾನ ನಿಲ್ದಾಣ ಸಮೀಪಿಸುತ್ತಿದ್ದಂತೆಯೇ ಟೆಹರಾನ್ ಹೊರವಲಯದಲ್ಲಿನ ಆ 'ಬಿಳಿ ಡಬ್ಬಿಗಳ ಸಾಲು' ಥಟಕ್ಕನೆ ಗೋಚರಿಸಿದವು. ಹಲವು ಸಾಲುಗಳಲ್ಲಿದ್ದ ಆ ಬಿಳಿ ಡಬ್ಬಿಗಳು ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಹರಡಿದ್ದವು. ವಿಮಾನ ನೆಲ ಸಮೀಪಿಸಿದಂತೆ ಆ ಡಬ್ಬಿಗಳ ಸ್ವರೂಪ ಇನ್ನಷ್ಟು ಸ್ಪಷ್ಟವಾಯಿತು. ಆ ಡಬ್ಬಿಗಳು 80ರ ದಶಕದಲ್ಲಿ ಹುತಾತ್ಮರಾದ ಇರಾನ್-ಇರಾಕ್ ಯುದ್ಧದ 1.6 ದಶಲಕ್ಷ ವೀರಯೋಧರ ಗೋರಿಗಳು!

ಬಿಳಿಯ ವಸ್ತ್ರ ಧರಿಸಿದ್ದ ಜಹಾನ್-ಆರಾ ಮತ್ತು ಆತನ ಮಿತ್ರರು ಟ್ಯುಲಿಪ್ ಮರದ ದೊಣ್ಣೆಗಳನ್ನು ಹಿಡಿದು ಶತ್ರು ರಾಷ್ಟ್ರಗಳ ವಿರುದ್ಧ ಹೋರಾಟ ನಡೆಸಿದ್ದೂ ಅದೇ ಜಾಗದಲ್ಲಿ. ಜಹಾನ್-ಆರಾ ಗೋರಿಯ ಬಳಿ ಆತನ ಭಾವಚಿತ್ರವನ್ನೂ ತೂಗುಹಾಕಲಾಗಿದೆ. ಸ್ವಚ್ಛವಾಗಿ ಟ್ರಿಮ್ ಮಾಡಿದ ಗಡ್ಡದ ನಡುವೆ ಆತ್ಮವಿಶ್ವಾಸದ ನಗೆ ಸೂಸುವಂತೆ ಕಾಣುವ ಜಹಾನ್ ಆಗ 30ರ ವಯಸ್ಸಿನವನಿರಬೇಕು. ಸದ್ದಾಂ ಹುಸೇನ್ ವಶಪಡಿಸಿಕೊಂಡಿದ್ದ ಖೊರ್ರಮ್‌ಶಹರ್ ಅನ್ನು ಮತ್ತೆ ಇರಾನ್ ತೆಕ್ಕೆಗೆ ತೆಗೆದುಕೊಳ್ಳಲು ಹೊರಡುವ ಮುನ್ನ ತೆಗೆದ ಚಿತ್ರ ಇದು. ಇದಕ್ಕೂ 10 ದಿನಗಳ ಮುನ್ನ ಇರಾಕಿ ಸೈನಿಕರು ದಾಳಿ ನಡೆಸಿದ್ದರು. ಕೆಲವೇ ನಾಗರಿಕರಷ್ಟೇ ದಾಳಿ ತಡೆಯುವ ವಿಫಲ ಯತ್ನಕ್ಕೆ ಮುಂದಾಗಿದ್ದು. ಈ ಬಿಳಿಯ ಡಬ್ಬಿಗಳ ಅಡಿ ಚಿರನಿದ್ರೆಯಲ್ಲಿರುವವರೆಲ್ಲಾ ಇದೇ ವೀರ ನಾಗರಿಕರು. ಅಂಥವರ ನಾಯಕತ್ವ ವಹಿಸಿದ್ದು ಅದೇ ಜಹಾನ್. ಇರಾಕಿ ಶೆಲ್ ಸ್ಫೋಟಕ್ಕೆ ಸಿಕ್ಕಿ ಚೂರುಚೂರಾಗುವ ಮುನ್ನ ಆತ ಇರಾಕಿ ಸೇನೆಯ ಅಭೇದ್ಯ ಸಾಲನ್ನು ದಾಟಿ ಮಧ್ಯಭಾಗಕ್ಕೆ ಮುನ್ನುಗ್ಗಿದ್ದ. ಈ ನಾಗರಿಕ ಸಾಹಸಕ್ಕೆ 'ಬೇತ್ ಉಲ್ ಮೊಕದ್ದಸ್' (ಆಪರೇಷನ್ ಜೆರುಸಲೇಮ್) ಎಂದೇ ಗುಪ್ತನಾಮವಿತ್ತು.

ಹಾಗೆಂದರೇನು? ಎಂದು ಆ ಗೋರಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದವರನ್ನು ಕೇಳಿದೆ. ಜೆರುಸಲೇಮ್ ಅನ್ನು ಮತ್ತೆ ವಶಪಡಿಸಿಕೊಳ್ಳಲು ಸಲಾದೀನ್ ಯಾತ್ರೆ ಕೈಗೊಂಡಿದ್ದು ಇಸ್ಲಾಂನ ರೋಮಾಂಚಕ ಅಧ್ಯಾಯ ಎಂಬುದು ನಿನಗೆ ಗೊತ್ತಿಲ್ಲವೇ ಎಂದು ಗುಡುಗಿನಂತಹ ದನಿಯಲ್ಲಿ ಒಬ್ಬ ಹೇಳಿದ. ಆತನ ಸುತ್ತ ನೆರೆದಿದ್ದ ಆರು ಮಂದಿಯೂ ನನ್ನನ್ನು ದುರುಗುಟ್ಟಿ ನೋಡುತ್ತಿದ್ದರು. ಅವರೆಲ್ಲಾ ಆ ಸ್ಮಶಾನ ಭೂಮಿಯಲ್ಲಿ ಹುತಾತ್ಮರ ವೀರಗಾಥೆ ಹಾಡುತ್ತಿದ್ದರು. ನನಗೆ ಜೆರುಸಲೇಂನ ಆ ಕಥೆಯೆಲ್ಲಾ ಗೊತ್ತಿರಲಿಲ್ಲ. ತಮ್ಮ ನಾಮ ಮಾತ್ರದಿಂದಲೇ ಮುಸ್ಲಿಂ ದೊರೆಗಳಲ್ಲಿ ಮೈಚಳಿ ಹುಟ್ಟಿಸುತ್ತಿದ್ದ ನೈಟ್ ಟೆಂಪ್ಲೆಟನ್ ಮತ್ತು ಫರಾನ್ಜಿಸ್ ಅವರನ್ನು ಆಗ ಜೆರುಸಲೇಮ್ ಗೋಡೆಯಾಚೆ ನೆಲಕಚ್ಚಿಸಲಾಗಿತ್ತು. ಹಾಗೆ ವಿಜೇತರಾಗುವ ಕಾಲ ಈಗ ಮರಳಿ ಬಂದಿದೆ ಎಂದು ಆ ವೀರಗಾಥೆ ಹಾಡುವವರಲ್ಲಿ ಒಬ್ಬನಾದ ಹೊಸೇನ್ ಅಮಾನಿ ಹೇಳಿದ. ರೆಹ್ಬರ್ (ಇರಾನ್‌ನ ಪರಮೋಚ್ಛ ನಾಯಕ ಅಯಾತುಲ್ಲಾ ಖೊಮೇನಿ ಅವರನ್ನು ಇಲ್ಲಿನವರು ಗೌರವದಿಂದ ಕರೆಯುವ ಪದ) ಅವರು ಒಂದು ಮಾತು ಹೇಳಿದರೆ ಸಾಕು ಹುತಾತ್ಮರಾಗಲು ಲಕ್ಷಾಂತರ ಮಂದಿ ತುದಿಗಾಲಲ್ಲಿ ನಿಂತಿದ್ದಾರೆ; ಲಕ್ಷಾಂತರ ಮಂದಿ! ಎಂದು ಆತ ಒತ್ತಿ ಹೇಳಿದ. ಹಾಗಂತ ಅವನು ನೀಡಿದ ಸಂಖ್ಯೆಯ ಬಗ್ಗೆ ನಾನೇನು ಸಂದೇಹ ವ್ಯಕ್ತಪಡಿಸಿರಲಿಲ್ಲ. ಅದೂ ಅಲ್ಲದೆ 'ಆತ್ಮಾರ್ಪಣೆ'ಯೇ ಇರಾನ್‌ನ ಅಧಿಕೃತ ಧರ್ಮ ಅಲ್ಲವೇ! ಅಲ್ಲಿನ ಬಹುಸಂಖ್ಯಾತ ಶಿಯಾ ಪಂಗಡದವರು ತಮ್ಮ ಪೂರ್ವಜ ಇಮಾಮ್ ಹುಸೇನ್‌ರಿಂದಲೇ ಅದನ್ನು ರಕ್ತಗತವಾಗಿ ಪಡೆದಿದ್ದಾರೆ.

ಈ ನೆಲದ ಮತ್ತೊಂದು ಗುಣ ಎಂದರೆ ರಾಷ್ಟ್ರೀಯತೆ: ಅಂದರೆ ವಿದೇಶಿ ಹಸ್ತಕ್ಷೇಪವನ್ನು ವಿರೋಧಿಸುವ ರಾಷ್ಟ್ರೀಯತೆ. ಈ ರಾಷ್ಟ್ರೀಯತೆಯ ಕಿಡಿ ಹೊತ್ತಿಸಲು ಎರಡು ಘಟನೆಗಳು ಪ್ರಮುಖವಾಗಿ ಕಾರಣವಾದವು. ಮೊದಲ ಘಟನೆ 1906ರಲ್ಲಿ ನಡೆದದ್ದು. ಆಗ ಉದಾರವಾದಿ ಇರಾನಿಯನ್ನರು ಪ್ರಜಾಪ್ರಭುತ್ವಪರ ಆಡಳಿತ ರಚಿಸಲು ನಡೆಸಿದ ಕ್ರಾಂತಿಯನ್ನು ರಷ್ಯಾದ ಸಾಮ್ರಾಜ್ಯಶಾಹಿ ಸೈನಿಕಪಡೆ ಅಡಗಿಸಿಬಿಟ್ಟಿತು. ಎರಡನೆಯ ಘಟನೆ 1953ರಲ್ಲಿ ನಡೆದ ದೌರ್ಜನ್ಯ. ಆಗ ಮೊಹಮ್ಮದ್ ಮೊಸಾಡೆಗ್ ನೇತೃತ್ವದ ಚುನಾಯಿತ ರಾಷ್ಟ್ರೀಯ ಸರ್ಕಾರವನ್ನು ಆಂಗ್ಲೋ-ಅಮೆರಿಕನ್ ಹಸ್ತಕ್ಷೇಪ ಒತ್ತಾಯವಾಗಿ ವಜಾ ಮಾಡಿ ಶಾ ಸರ್ವಾಧಿಕಾರಿಯಾಗಲು ನೆರವು ನೀಡಿತು. ರಾಷ್ಟ್ರದ ಸಂಪತ್ತು ವಿದೇಶಿ ನಿಯಂತ್ರಣಕ್ಕೊಳಗಾಗಲೂ ಇದೇ ಕಾರಣವಾಯಿತು. ಇರಾನಿಯನ್ನರು ವಿದೇಶಿ ಹಸ್ತಕ್ಷೇಪವನ್ನು ಬಲವಾಗಿ ವಿರೋಧಿಸಲು ಎರಡನೇ ಕಾರಣವೇ ಅತಿ ಮುಖ್ಯ. ಇದಷ್ಟೇ ಅಲ್ಲ. ಇರಾನಿಯನ್ನರ ಮೇಲೆ ಶಾ ಆಡಳಿತ ನಿರಂತರ ದೌರ್ಜನ್ಯ ಎಸಗುತ್ತಿದ್ದರೂ ಅಮೆರಿಕ ಜಾಣಕುರುಡು ಪ್ರದರ್ಶಿಸಿತು. ಇರಾಕಿನ ಹಿಂಸಾಚಾರಕ್ಕೂ ಅಮೆರಿಕ ಆರ್ಥಿಕ ಬೆಂಬಲ ನೀಡಿತು ಎಂದು ಕೋಪದಿಂದಲೇ ಹೊಸೇನ್ ಅಮಾನಿ ಹೇಳಿದ.

ಇರಾನ್‌ನಲ್ಲಿ ನಾನು ಭೇಟಿ ಮಾಡಿದ ಮಾಜಿ ಸೈನಿಕ ಪೆಸಾರ್ ಗೋಲ್ 60ರ ಹರೆಯದ ವೃದ್ಧ. ಇರಾಕ್‌ನಿಂದ ಮಜ್ನೂನ್ ದ್ವೀಪವನ್ನು ಮತ್ತೆ ವಶಪಡಿಸಿಕೊಳ್ಳುವ ಮಹಾಕಾರ್ಯಕ್ಕೆ ನಿಯೋಜನೆಗೊಂಡ ವಿಶೇಷ ಸೇನಾಪಡೆಯಲ್ಲಿದ್ದ ಆತ ಹಿಂದಿನ ಆ ದಿನಗಳನ್ನು ಕಣ್ಣೀರಿಡುತ್ತಲೇ ನೆನಪಿಸಿಕೊಳ್ಳುತ್ತಾನೆ. ಶತ್ರು ಪಾಳೆಯಕ್ಕೆ ನುಗ್ಗಲು ಆತನ ಸೇನಾಪಡೆ ಇಡೀ ದಿನ ಯತ್ನ ನಡೆಸಿತು. ಸ್ಫೋಟಕಗಳು ಸಿಡಿಯುತ್ತಿದ್ದರೂ ಯುವ ಸೈನಿಕರು ಧೈರ್ಯದಿಂದ ಮುನ್ನುಗ್ಗುತ್ತಿದ್ದರು. ಒಂದು ರೀತಿ ಆತ್ಮಹತ್ಯಾ ಪಡೆಯೇ ಆಗಿದ್ದ ಆ ದಳದಲ್ಲಿ ಯುವ ಸೈನಿಕರು ನಾಮುಂದು ತಾಮುಂದು ಎಂದು ಮುನ್ನುಗ್ಗುತ್ತಿದ್ದರು. ಆದರೆ ಮಧ್ಯಾಹ್ನದ ವೇಳೆಗೇ 'ಖಾಲಿ'ಯಾದ ಆ ಪಡೆಯ ಸ್ಥಾನವನ್ನು ಸ್ವಲ್ಪದರಲ್ಲೇ ಇನ್ನೊಂದು ಪಡೆ ತುಂಬಿತು. ಆ ಹೊಸಪಡೆಯಲ್ಲೇ ನನ್ನ ಬಾಲ್ಯಸ್ನೇಹಿತ ರೇಜಾನನ್ನು ನಾನು ಕಂಡಿದ್ದು ಎನ್ನುವಾಗ ಗೋಲ್ ಕಣ್ಣಾಲಿಗಳು ನೀರಾಗುತ್ತವೆ. ಸಂಜೆ ನಮ್ಮಿಬ್ಬರ ಜೀಪ್‌ಗಳು ಎದುರು-ಬದುರಾದಾಗ ನಾವಿಬ್ಬರೂ ವಿದಾಯವೆಂಬಂತೆ ಕೈಗಳನ್ನು ಮೇಲಕ್ಕೆತ್ತಿದೆವು. ನಾನು ಆತನನ್ನು ಕಂಡಿದ್ದು ಅದೇ ಕೊನೆಯಬಾರಿ. ಸದ್ದಾಂ ಪಡೆ ಸಿಡಿಸಿದ ರಾಸಾಯನಿಕ ಸ್ಫೋಟಕಕ್ಕೆ ನನ್ನ ಮಿತ್ರ ಬಲಿಯಾದ. ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದಾಗ ರಾಶಿ ಬಿದ್ದಿದ್ದ ಶವಗಳ ನಡುವೆ ರೇಜಾ ಶವವೂ ಇತ್ತು. ಆತನ ಕೈಗಳಲ್ಲಿ ಕುರಾನ್ ಗ್ರಂಥದ ಕಾಗದಗಳಿದ್ದವು ಎನ್ನುತ್ತಾ ಗೋಲ್ ಸುಮ್ಮನಾದ.

ಆಗ ಇರಾಕ್ ರಾಸಾಯನಿಕ ಶಸ್ತ್ರಾಸ್ತ್ರ ಬಳಸಿದ ಬಗ್ಗೆ ಅಮೆರಿಕ ಒಂದೇ ಒಂದು ಸೊಲ್ಲೆತ್ತಲಿಲ್ಲ. ಒಂದೇ ಒಂದು ಪತ್ರಿಕೆಯಲ್ಲಿ ಈ ಬಗ್ಗೆ ಸಣ್ಣ ಸುದ್ದಿ ಪ್ರಕಟವಾಯಿತು. ಮಾತನಾಡಲೇಬೇಕಾಗಿ ಬಂದಾಗ ಅಮೆರಿಕ ದಾಳಿ ನಡೆಸಿದ ದೇಶದ ಪರವೇ ಮಾತನಾಡಿತು. ಯುದ್ಧದ ಅಂತಿಮ ಹಂತದಲ್ಲಂತೂ ಇರಾನಿನ ನೌಕಾಪಡೆಯ ಅರ್ಧಭಾಗವನ್ನೇ ಅಮೆರಿಕ ನಾಶ ಮಾಡಿಬಿಟ್ಟಿತು; ಕಿಕ್ಕಿರಿದು ತುಂಬಿದ್ದ ನಾಗರಿಕ ವಿಮಾನವೊಂದನ್ನೂ ಉಡಾಯಿಸಿಬಿಟ್ಟಿತು. ಇದಾಗಿ 20 ವರ್ಷಗಳಾದ ಮೇಲೆ ಅಮೆರಿಕವು ಇರಾಕ್ ಮೇಲೆ ದಾಳಿ ನಡೆಸುವ ಯೋಜನೆ ಹಾಕಿಕೊಂಡಾಗ ಅದೇ 'ರಾಸಾಯನಿಕ ಶಸ್ತ್ರಾಸ್ತ್ರ' ಬಳಸಿದ ಘಟನೆಯ ಬಗ್ಗೆ ಅಮೆರಿಕದ ಎಲ್ಲಾ ಪತ್ರಿಕೆಗಳೂ ಪುಟಗಟ್ಟಲೆ ಬರೆದವು. ಸದ್ದಾಂ ಆಡಳಿತ ಕಿತ್ತೊಗೆಯಲು ಅದೊಂದೇ ಘಟನೆ ಸಾಕು ಎಂದು ಅಮೆರಿಕ ವಾದ ಮಾಡಿತು.

ಅಮೆರಿಕ ಇಷ್ಟಕ್ಕೇ ನಿಲ್ಲಲಿಲ್ಲ. ಇರಾನಿನ ಸಮಾಜ ವಿರೋಧಿ ಶಕ್ತಿಗಳು ಮತ್ತು ಉಗ್ರ ಪಡೆಗಳನ್ನೆಲ್ಲಾ ಪೋಷಿಸುತ್ತಾ ಬಂದಿತು. ಇರಾಕ್‌ನಲ್ಲಿರುವ ಇರಾನ್ ವಿರೋಧಿ ಗುಂಪೊಂದಕ್ಕೆ ರಕ್ಷಣೆ ನೀಡಿತು; ಇರಾನ್‌ನಲ್ಲಿ ಬೇಹುಗಾರಿಕೆಗಾಗಿ ಮುಜಾಹಿದೀನ್-ಇ-ಖಲ್ಕ್ ಸಂಘಟನೆಯ ಜೊತೆ ರಹಸ್ಯ ಒಪ್ಪಂದ ಮಾಡಿಕೊಂಡಿತು.

ಇದರ ಜೊತೆಗೆ ಬೇರೊಂದು ಬಗೆಯ ಕಿರಿಕಿರಿಯನ್ನೂ ಅಮೆರಿಕ ನೀಡಿತು. ಅದೆಂದರೆ ದಿಗ್ಬಂಧನ! ಯಾವುದೇ ದೇಶ ಆ ಪರಿ ಆರ್ಥಿಕ ದಿಗ್ಬಂಧನದಿಂದ ಮಂಡಿಯೂರಿ ಶರಣಾಗಬೇಕು. ಆದರೆ ಇರಾನ್ ಅಂತಹ ದೇಶವಲ್ಲ. ಮೂರು ದಶಕಗಳ ದಿಗ್ಬಂಧನದ ನಂತರವೂ ಯುರೋಪ್ ರಾಷ್ಟ್ರವೊಂದಕ್ಕೆ ಸಮನಾದ ಶ್ರೀಮಂತಿಕೆಯನ್ನು, ಮೂಲಸೌಕರ್ಯಗಳನ್ನು ಇರಾನ್ ಹೊಂದಿದೆ. ಇದು ಅಮೆರಿಕಕ್ಕೂ ನುಂಗಲಾರದ ತುತ್ತಾಗಿದೆ ಎಂದೇ ಇರಾನಿ ರಾಷ್ಟ್ರಾಭಿಮಾನಿಗಳು ಹೆಮ್ಮೆಯಿಂದ ಹೇಳುತ್ತಾರೆ.

ಪ್ರತಿ ವರ್ಷ ಕೂಡಾ ಹೊಸ ಹೊಸ ದಿಗ್ಬಂಧನಗಳು ಜಾರಿಯಾಗುತ್ತಲೇ ಇವೆ. ಮೊದಲು ದಿಗ್ಬಂಧನ ಹಾಕಿದ್ದೇ ಅತ್ಯಗತ್ಯವಾದ ಔಷಧಿಗಳ ಆಮದಿಗೆ. ಇದರಿಂದಾಗಿ ಇರಾನಿನ ಲಕ್ಷಾಂತರ ಮಂದಿ ಮರಣ ಹೊಂದಿದ್ದಾರೆ. ಆದರೂ ಇರಾನ್ ಆತ್ಮಾಭಿಮಾನ ಎಳ್ಳಷ್ಟೂ ಕುಗ್ಗಿಲ್ಲ. ಬುಷ್ ಇಲ್ಲಿಗೆ ದಾಳಿ ಮಾಡಲಿ, ನಾವು ಆತನ ಗೋರಿ ತೋಡುತ್ತೇವೆ ಎಂದು ಯುವಕ ಐದಾನಿ ಅವಡುಗಚ್ಚುತ್ತಾನೆ. ಐದಾನಿ ಮಾತ್ರವಲ್ಲ. ಅಂತರ್ ರಾಷ್ಟ್ರೀಯ ವಿಶ್ಲೇಷಕರೂ ಇರಾನ್ ಸ್ಥೈರ್ಯದ ಕುರಿತು ಮಾತನಾಡತೊಡಗಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ಮತ್ತು ಅಮೆರಿಕದ ಅಧಿಕಾರಿಗಳೇ ಆರ್ಥಿಕ ಒತ್ತಡ ನಿರುಪಯುಕ್ತ ವಾಗಿರುವ ಬಗ್ಗೆ ಮತ್ತು ಇರಾನ್ ಅಧ್ಯಕ್ಷ ಅಹಮದಿನೇಜಾದ್‌ರ ಕಾರ್ಯತಂತ್ರದ ಬಗ್ಗೆ ಜಾಗತಿಕ ವೇದಿಕೆಯಲ್ಲೇ ಮಾತನಾಡಿದ್ದಾರೆ.

ರಾಷ್ಟ್ರೀಯ ಸಾರ್ವ ಭೌಮತ್ವವನ್ನು ಮತ್ತಷ್ಟು ಸುಭದ್ರಗೊಳಿಸಲು ಇರಾನಿ ಆಡಳಿತಕ್ಕೆ ಈ ದಿಗ್ಬಂಧನವೇ ಒಂದು ಪ್ರಮುಖ ವಿಷಯವಾಗಿದೆ. ಚುನಾವಣಾ ವೇಳೆಯಲ್ಲ್ಲಿ ಲಿಬರಲ್, ರಿಫಾರ್ಮಿಸ್ಟ್ ಪಕ್ಷಗಳ ಸ್ಪರ್ಧಾಳುಗಳೂ ದೇಶದ ಸಾರ್ವಭೌಮತ್ವದ ವಿಚಾರದಲ್ಲಿ ಒಮ್ಮತದ ಅಭಿಪ್ರಾಯವನ್ನೇ ನೀಡುತ್ತಾರೆ.

ಅಮೆರಿಕದ ದಿಗ್ಬಂಧನ ತಂತ್ರಗಳು ಇನ್ನೂ ಬಹಳಷ್ಟಿವೆ. ಇರಾನ್ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧ ನಡೆಸದಂತೆ ಯುರೋಪ್ ಮತ್ತು ಏಷ್ಯಾದ ಹಲವಾರು ಸರ್ಕಾರಗಳು, ಬ್ಯಾಂಕ್‌ಗಳು ಮತ್ತು ತೈಲಕಂಪನಿಗಳ ಮೇಲೆ ಅಮೆರಿಕದ ಖಜಾನೆ ಇಲಾಖೆ ಒತ್ತಡ ಹೇರಿದೆ. ಇಷ್ಟಾದರೂ ಇರಾನ್ ತೈಲ ಸಚಿವಾಲಯ ಆಯೋಜಿಸಿದ್ದ ಸಮಾವೇಶದಲ್ಲಿ 50ಕ್ಕೂ ಹೆಚ್ಚು ಅಂತರ್‌ರಾಷ್ಟ್ರೀಯ ತೈಲ ಕಂಪನಿಗಳ 200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ. ವಿವಿಧ ವ್ಯಾವಹಾರಿಕ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಆಂಗ್ಲೋ-ಡಚ್‌ನ ವಿಖ್ಯಾತ ತೈಲ ಕಂಪನಿ ಶೆಲ್ ಕೂಡಾ ಅಮೆರಿಕದ ಒತ್ತಡಕ್ಕೂ ಮಣಿಯದೆ ಇರಾನ್ ಜೊತೆ ಬಹುಕೋಟಿ ಒಪ್ಪಂದ ಮಾಡಿಕೊಂಡಿದೆ. ಸಿಜರ್‌ಲೆಂಡ್, ಇಟಲಿ, ಕೆನಡಾ, ನೆದರ್‌ಲೆಂಡ್, ಬ್ರಿಟನ್, ನಾರ್ವೆ, ಸ್ವೀಡನ್, ದಕ್ಷಿಣ ಕೊರಿಯಾ ಮತ್ತು ಜಪಾನ್ ರಾಷ್ಟ್ರಗಳ ವಿವಿಧ ಕಂಪನಿಗಳೂ ಇಂಥದೇ ಒಪ್ಪಂದ ಮಾಡಿಕೊಂಡಿವೆ.

ಹೀಗಾಗಿ ಇರಾನ್ ಮೇಲೆ ದಾಳಿ ನಡೆಸಲು ಅಮೆರಿಕ ಸಜ್ಜಾಗಿರುವುದರಲ್ಲಿ ಅಚ್ಚರಿಯೇನಿಲ್ಲ. ಆದರೂ ಆ ದಾಳಿ 'ಸೂಕ್ತ ಕಾರಣ, ಅಗತ್ಯ ಪರಿಸ್ಥಿತಿ'ಯ ಮೇಲೆ ಅವಲಂಬಿತವಾಗಿರುವುದು ನಿಜ. ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದ ಅಮೆರಿಕದ ಸೇನಾಪಡೆ ಮುಖ್ಯಸ್ಥ ಅಡ್ಮಿರಲ್ ವಿಲಿಯಮ್ ಫಾಲೆನ್ ಅವರು ಇರಾನ್ ಮೇಲಿನ ಅಮೆರಿಕ ದಿಗ್ಬಂಧನ ಸಡಿಲಿಸುವ ಪ್ರಯತ್ನಕ್ಕೆ ಮುಂದಾಗಿದ್ದರೂ, ದಾಳಿ ಮಾಡುವ ಅಮೆರಿಕದ ಪ್ರಯತ್ನವನ್ನು ಅಲ್ಲಗಳೆಯಲಾಗುವುದಿಲ್ಲ. ಹೀಗಾಗಿಯೇ ಅಮೆರಿಕವು ದಾಳಿ ಆರಂಭಿಸಬಹುದಾದ ಇರಾನ್ ಗಡಿ ಪ್ರದೇಶದ ಮೆಹ್ರಾನ್ ನಗರಿಗೆ ಭೇಟಿ ನೀಡಲು ನಾವು ನಿರ್ಧರಿಸಿದೆವು.

ಇರಾಕ್ ಯುದ್ಧದ ಸಂದರ್ಭದಲ್ಲಂತೂ ಈ ಮೆಹ್ರಾನ್ ನಗರಿ ನೋಡದ ಹಿಂಸಾಕೃತ್ಯವೇ ಇಲ್ಲ. ಈಗಲೂ ಈ ನಗರದಿಂದ ಹಾದುಹೋಗುವ ಟೆಹ್ರಾನ್-ಬಾಗ್ದಾದ್ ಹೆದ್ದಾರಿಯ ಆಸುಪಾಸಿನಲ್ಲಿ ಯುದ್ಧದ ಟ್ಯಾಂಕರ್‌ಗಳು, ಆರ್ಟಿಲರಿಗಳ ಅವಶೇಷಗಳನ್ನು ಕಾಣಬಹುದು. ನನಗೆ ಅಂತಹ 30ಕ್ಕೂ ಹೆಚ್ಚು ಅವಶೇಷಗಳು ಕಂಡವು. ಇರಾಕ್ ಪಡೆಗಳ ದಾಳಿಯನ್ನು ಇಲ್ಲಿನ ನಾಗರಿಕರೂ ದಿಟ್ಟತನದಿಂದಲೇ ಎದುರಿಸಿದ್ದಾರೆ. ಇದೇ ನಗರಿಯ ಅಂಚಿನಲ್ಲೇ ಇರಾಕ್‌ಗೆ ಸೇರಿದ ಗಡಿಭಾಗದಲ್ಲಿ ಯುದ್ಧ ಸನ್ನದ್ಧ ಅಮೆರಿಕನ್ ಪಡೆ ಕ್ಯಾಂಪ್ ಹಾಕಿದೆ.

ಆದರೆ ಅಮೆರಿಕದ ಪಾಲಿಗೆ ಇರಾನ್ ಎಂದೂ ಇರಾಕ್‌ನಂತಾಗದು. ಮಧ್ಯಪ್ರಾಚ್ಯದ ದೇಶಗಳಲ್ಲೇ ಅತಿ ಹೆಚ್ಚು ಅಂದರೆ ೭0 ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈ ರಾಷ್ಟ್ರ ಬ್ರಿಟನ್‌ನ ಆರು ಪಟ್ಟು ಹೆಚ್ಚು ವಿಸ್ತೀರ್ಣವುಳ್ಳದ್ದು. ಭಯೋತ್ಪಾದನೆ ವಿರುದ್ಧದ ಕಳೆದ ಹಲವಾರು ವರ್ಷಗಳ ಸಮರದ ಬಗ್ಗೆಯೂ 'ಪ್ರಪಂಚದ ಅತ್ಯುತ್ತಮ ಭಯೋತ್ಪಾದನಾ ಜಾಲ ಹಿಜ್ಬುಲ್ಲಾ ನಿರ್ಲಿಪ್ತವಾಗಿದೆ' ಎಂಬುದನ್ನು ಅಮೆರಿಕದ ರಕ್ಷಣಾ ಸಲಹೆಗಾರರೂ ಕಂಡುಕೊಂಡಿದ್ದಾರೆ. ಇರಾನ್ ವಿರುದ್ಧ ಸಮರ ಸಾರಿದರೆ ಹಿಜ್ಬುಲ್ಲಾಗಳೂ ತಮ್ಮ ವಿರುದ್ಧ ಹೋರಾಡುತ್ತಾರೆ ಎಂದು ಅಮೆರಿಕಕ್ಕೆ ಗೊತ್ತಿದೆ.

5.2 ಲಕ್ಷ ಬಲಿಷ್ಠ ಸೈನಿಕರನ್ನು ಹೊಂದಿರುವ ಇರಾನ್ ಸೇನಾಪಡೆಗೆ ಪ್ರತಿವರ್ಷ ಸಾವಿರಾರು ಯುವಕರು ಸೇರ್ಪಡೆಯಾಗುತ್ತಲೇ ಇದ್ದಾರೆ. 'ಆತ್ಮಹತ್ಯಾ ಬಾಂಬರ್' ದಳ ಸೇರಲೂ ಅಲ್ಲಿ ಕೊರತೆ ಇಲ್ಲ. ಆ ಸೈನಿಕರ ರಾಷ್ಟ್ರಪ್ರೇಮ ಮತ್ತು ಅಮೆರಿಕ ದ್ವೇಷದ ಬಗ್ಗೆ ನಿಮಗೆ ಅರಿವಾಗಬೇಕಾದಲ್ಲಿ ಟೆಹ್ರಾನ್‌ನ ಜಾಮಾ ಮಸೀದಿಗೆ ಶುಕ್ರವಾರದಂದು ಭೇಟಿ ನೀಡಿ: 'ಅಮೆರಿಕ ಮತ್ತು ಇಸ್ರೇಲ್‌ಗೆ ಸಾವಿನ ದಾರಿ ತೋರಿ' ಎಂಬ ಅರ್ಥದ ಘೋಷಣೆಗಳು ಮುಗಿಲು ಮುಟ್ಟುತ್ತಿರುತ್ತವೆ.

ಹೀಗೆ ತಿರುಗಾಡುತ್ತಾ, ಅಮೆರಿಕದ ರಾಯಭಾರ ಕಚೇರಿ ಇದ್ದ ಜಾಗವನ್ನು ನೋಡುವ ಯೋಗವೂ ನನಗೆ ಒದಗಿ ಬಂತು. ಅದು ಈಗ 'ಲಾನ್-ಎ-ಜಸೂಸಿ' (ಬೇಹುಗಾರಿಕೆಯ ತಾಣ) ಎಂದೇ ಹೆಸರು ಪಡೆದಿದೆ. ಆ ಜಾಗಕ್ಕೆ ಹೊರಗಿನವರು ಭೇಟಿ ನೀಡುವುದಕ್ಕೆ ಅನುಮತಿ ಇಲ್ಲ. ಆದರೆ ಅದರ ಗೋಡೆಯ ಮೇಲೆ ಅಮೆರಿಕ ಮತ್ತು ಇಸ್ರೇಲ್ ಎಂಬ 'ದೊಡ್ಡ ಮತ್ತು ಚಿಕ್ಕ ಸೈತಾನರ' ವಿರುದ್ಧದ ಬರಹಗಳಂತೂ ನಿಮ್ಮ ಕಣ್ಣಿಂದ ತಪ್ಪಿಸಿಕೊಳ್ಳಲಾರವು.

ನಾನು ಆ ಘೋಷಣೆಗಳನ್ನು ಓದುತ್ತಿದ್ದ ಸಂದರ್ಭದಲ್ಲೇ ಟೆಹ್ರಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಆಲಿ ಎಂಬಾತನ ಭೇಟಿಯಾಯಿತು. ಇರಾನಿನ ಪರಮಾಣು ಕಾರ್ಯಕ್ರಮಗಳಿಗೆ ಅಮೆರಿಕ ವಿರೋಧಿಸುವುದು ಅತಾರ್ಕಿಕ ಎನ್ನುವುದು ಆತನ ಖಚಿತ ಅಭಿಪ್ರಾಯ. ಇಸ್ರೇಲ್, ಪಾಕಿಸ್ತಾನದಂತಹ ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರ ಹೊಂದಬಹುದು. ಅಮೆರಿಕದ ನೆರವನ್ನೂ ಪಡೆಯಬಹುದು. ಆದರೆ ಇರಾನ್ ಮಾತ್ರ ಶಾಂತಿಯುತ ಪರಮಾಣು ತಂತ್ರಜ್ಞಾನದ ಕಾರ್ಯಕ್ರಮಗಳನ್ನೂ ಕೈಗೊಳ್ಳಬಾರದು ಎಂಬುದು ಯಾವ ನ್ಯಾಯ ಎಂದು ಆತ ಪ್ರಶ್ನಿಸುತ್ತಾನೆ. ಇಂತಹ ತಾರತಮ್ಯ ಪಕ್ಷಾತೀತವಾಗಿ ದೇಶದ ಎಲ್ಲಾ ನಾಗರಿಕರನ್ನೂ ಕೆರಳಿಸಿದೆ. ಒಂದು ವೇಳೆ ಸರ್ಕಾರ ಬದಲಾಗಿ ಲಿಬರಲ್ ಪಕ್ಷ ಅಸ್ತಿತ್ವಕ್ಕೆ ಬಂದರೂ ಅದು ಅಮೆರಿಕವನ್ನು ಬೆಂಬಲಿಸುತ್ತದೆ ಎಂಬ ಗ್ಯಾರಂಟಿ ಇಲ್ಲ ಎನ್ನುತ್ತಾನೆ ಆತ.

ಮೆಟ್ರೋ ರೈಲಿನಲ್ಲಿ ಸಂಚರಿಸುವಾಗ ಜೆಹ್ರಾ ಎಂಬ ಯುವತಿಯನ್ನು ಭೇಟಿಯಾದೆ. (ಮಹಿಳೆಯರಿಗೇ ಪ್ರತ್ಯೇಕ ಬೋಗಿ ಇದ್ದರೂ ಆಕೆ ಸಾಮಾನ್ಯ ಬೋಗಿ ಹತ್ತಿದ್ದಳು). ಇರಾನ್‌ನ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕ ಅದೇಕೆ ಕೈ ಹಾಕಬೇಕು ಎಂದು ಆಕೆ ಪ್ರಶ್ನಿಸುತ್ತಾಳೆ. ಆದರೆ ಅಮೆರಿಕಕ್ಕಿಂತಲೂ ಮುಖ್ಯವಾಗಿ ಗಮನ ಹರಿಸಬೇಕಾದ ವಿಷಯ ಮತ್ತೊಂದಿದೆ ಎನ್ನುವ ಆಕೆ, ಕನ್ಸರ್ವೇಟಿವ್ ಆಡಳಿತ ಮಹಿಳೆಯ ಹಕ್ಕುಗಳನ್ನು ಮೊಟಕುಗೊಳಿಸಿರುವುದರ ವಿರುದ್ಧ ಕಿಡಿಕಾರುತ್ತಾಳೆ.

ಯುರೋಪಿಯನ್ ಮತ್ತು ಇರಾನಿಯನ್ ಫುಟ್‌ಬಾಲ್ ಪಂದ್ಯಾವಳಿಯ ಅಭಿಮಾನಿಯಾದ ಆಕೆ, ಇರಾನ್ ಆಡಳಿತ ಮಹಿಳೆ ಮೈದಾನ ಪ್ರವೇಶಿಸುವುದಕ್ಕೆ ನಿಷೇಧ ಹೇರಿರುವುದನ್ನು ಬಲವಾಗಿ ವಿರೋಧಿಸುತ್ತಾಳೆ. ಹಾಗೆಯೇ ನೈತಿಕ ಪೊಲೀಸರು ಮಹಿಳೆಯರ ಮೇಲೆ ಹಲವಾರು 'ದಿಗ್ಬಂಧನ' ವಿಧಿಸಿರುವುದರ ವಿರುದ್ಧವೂ ಆಕೆ ಕೆಂಡ ಕಾರುತ್ತಾಳೆ. ಇಷ್ಟಾದರೂ ದೇಶದ ಬಗ್ಗೆ ಪಾಶ್ಚಾತ್ಯ ಮಾಧ್ಯಮಗಳು ಅತಿರಂಜಿತ ವರದಿಗಳನ್ನು ಪ್ರಕಟಿಸುವುದನ್ನು ಆಕೆ ಒಪ್ಪುವುದಿಲ್ಲ. ಇರಾನ್ ದೇಶ ಸೌದಿ ಅರೇಬಿಯಾದ ಹಾಗಲ್ಲ. ಇಲ್ಲಿ ಮಹಿಳೆಯರು ಸ್ವತಂತ್ರವಾಗಿ ನೌಕರಿ ಮಾಡಲು ಅವಕಾಶವಿದೆ. ಇರಾನ್‌ನನ್ನು ಮಧ್ಯಪ್ರಾಚ್ಯದ ಇತರ ರಾಷ್ಟ್ರಗಳಿಂದ ಭಿನ್ನವಾಗಿ ನೋಡಬೇಕು ಎಂಬುದು ಆಕೆಯ ಕಳಕಳಿ.

ಗಮನ ಹರಿಸಬೇಕಾದ ಇತರ ವಿಷಯಗಳೂ ಇರಾನ್‌ನಲ್ಲಿ ಬಹಳಷ್ಟಿವೆ. ಅಲ್ಲಿನ ಮಾಧ್ಯಮಗಳೂ ಕೂಡಾ ಸ್ವತಂತ್ರವಾಗಿಲ್ಲ; ಏಷ್ಯಾದ ಇತರ ರಾಷ್ಟ್ರಗಳಲ್ಲಿನ ಹಾಗೆ ಉತ್ತಮವಾಗೂ ಇಲ್ಲ. ಒಮ್ಮೊಮ್ಮೆ ಇರಾನ್ ತುರ್ತು ಪರಿಸ್ಥಿತಿ ಹೇರಿದ ರಾಷ್ಟ್ರವಾಗಿ ಕಾಣುತ್ತದೆ. ಆದರೆ ಆ ರಾಷ್ಟ್ರದ ಆತ್ಮಸ್ಥೈರ್ಯದ ಬಗ್ಗೆಯಂತೂ ಎರಡು ಮಾತಿಲ್ಲ. ಶಹೀದ್ ಜಹಾನ್-ಆರಾ ಗೋರಿಯ ಮೇಲೆ ವೀರಗಾಥೆ ಹಾಡುವ ಅಲ್ಲಿನ ಜನರಿಗೆ ವಿದೇಶೀ ದಾಳಿಯ ಬಗ್ಗೆ ಆತಂಕವಿಲ್ಲ; ಆರ್ಥಿಕ ದಿಗ್ಬಂಧನದ ಬಿಸಿಯೂ ಅಷ್ಟೇನೂ ತಟ್ಟಿಲ್ಲ. ಆದರೆ ಜೆಹ್ರಾಳಂತಹ ಹಲವು ಯುವತಿಯರಿಗೆ ಫುಟ್‌ಬಾಲ್ ವೀಕ್ಷಿಸಲು, ಮೈದಾನಕ್ಕೆ ಪ್ರವೇಶಿಸಲು ಅವಕಾಶ ನೀಡಬೇಕೆಂಬ ಆಗ್ರಹವಂತೂ ಇದ್ದೇ ಇದೆ.

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .