|

ಹಣದುಬ್ಬರಕ್ಕೆ ಕಡಿವಾಣ ಅಗತ್ಯ
ಮುಂಬರುವ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಟಿಎಸ್‌ಐ ಹಾಗೂ ಐಸಿಎಂಆರ್-ಸಿ ನಡೆಸಿದ ಚುನಾವಣಾ ಪೂರ್ವ ಮತದಾರರ ಸಮೀಕ್ಷೆ ಅಪೂರ್ವ ಮಾಹಿತಿಗಳನ್ನೇ ನೀಡಿದೆ. ಆಯಾ ಮುಖ್ಯಮಂತ್ರಿಗಳ ಕಾರ್ಯ ನಿರ್ವಹಣೆ ಕುರಿತು ಮತದಾರರ ಅಭಿಪ್ರಾಯಗಳು ನಿಜಕ್ಕೂ ಆಶ್ಚರ್ಯ ಮೂಡಿಸಿದೆ. ನಿರೀಕ್ಷಿಸಿರದ ಫಲಿತಾಂಶವನ್ನು ಈ ಸಮೀಕ್ಷೆ ಹೊತ್ತು ತಂದಿದೆ. ನಂದಿಗ್ರಾಮ ದುರಂತದ ನಂತರವೂ ಅಲ್ಲಿನ ಶೇ. ೬೬ರಷ್ಟು ಮತದಾರರು ಬುದ್ಧದೇವ್ ಭಟ್ಟಾಚಾರ್ಯ ಅವರ ಕಾರ್ಯವೈಖರಿಯ ಬಗ್ಗೆ ತೃಪ್ತಿ ಹೊಂದಿದ್ದಾರೆ ಎಂಬುದು ರಾಜ್ಯದಲ್ಲಿ ಸಿಪಿಎಂ ಎಷ್ಟು ಪ್ರಭುತ್ವ ಸಾಧಿಸಿದೆ ಎಂಬುದನ್ನು ಸಂಪೂರ್ಣವಾಗಿ ವಿವರಿಸಿದೆ. ಇನ್ನು ಗುಜರಾತ್ ನಾಯಕ ನರೇಂದ್ರ ಮೋದಿ ಅವರ ಕುರಿತೂ ಆ ರಾಜ್ಯದ ಬಹುತೇಕ ಮಂದಿಗೆ
ಅಪಾರ ಗೌರವ ಹಾಗೂ ಅಭಿಮಾನವಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅದೇನೆ ಇರಲಿ, ಇವೆಲ್ಲದರ ನಡುವೆ ಯುಪಿಎ ಸರ್ಕಾರ ಹಣದುಬ್ಬರಕ್ಕೆ ಕಡಿವಾಣ ಹಾಕದೇ ಇದ್ದಲ್ಲಿ, ಕಾಂಗ್ರೆಸ್‌ಗೆ ಅದೇ ಬಿಸಿತುಪ್ಪವಾಗಿ ಪರಿಣಮಿಸುವುದು
ಖಚಿತ. ಈ ಅಂಶವನ್ನು ಕೆಲವು ಹಿರಿಯ ಕಾಂಗ್ರೆಸ್ ಮುಖಂಡರು ಒಪ್ಪ್ಪಿಕೊಂಡಿದ್ದಾರೆ ಕೂಡ. ಒಟ್ಟಾರೆ ಮಾಹಿತಿ ಯೋಗ್ಯ ಲೇಖನಗಳನ್ನು ನೀಡಿದ್ದಕ್ಕಾಗಿ ಟಿಎಸ್‌ಐ ತಂಡಕ್ಕೆ ಧನ್ಯವಾದಗಳು.
ಟಿ. ಬಸವರಾಜು
ಮೈಸೂರು
ತಾತ್ಕಾಲಿಕ ಜನಪ್ರಿಯತೆ!
ಮಾಯಾವತಿ ಮುಂಬರುವ ಚುನಾವಣೆಯಲ್ಲಿ ದೇಶದ ಚುಕ್ಕಾಣಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುವರೆಂಬ ಟಿಎಸ್‌ಐ ವಿಶ್ಲೇಷಣೆ ಸಂವೇದನಾಕಾರಿಯಾಗಿತ್ತು. ರಾಜಕೀಯದಲ್ಲಿ ನಾಳೆ ಏನಾಗುವುದೆಂದು ಊಹಿಸುವುದು ಅಸಾಧ್ಯ. ತಾತ್ಕಾಲಿಕವಾಗಿ ಜನಪ್ರಿಯ ರಾಜಕಾರಣಿ ಎಂದು ಅನಿಸಿದರೂ ಮಾಯಾವತಿ 'ಕಿಂಗ್ ಮೇಕರ್' ಆಗುವರೇ ಎಂಬ ಪ್ರಶ್ನೆಗೆ ಮುಂಬರುವ ಚುನಾವಣೆಯೇ ಉತ್ತರ ನೀಡಬೇಕು.
ಎಸ್.ಎಲ್.ವಿ. ಅನಿಲಕುಮಾರ
ಮುದಗಲ್
ಪಕ್ಷಗಳು ಮೌಲ್ಯ ಕಾಪಾಡಲಿ
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ತಮ್ಮ 'ಡಿಸ್ಕವರ್ ಇಂಡಿಯಾ' ಪ್ರವಾಸದ ಮೂಲಕ ಕರ್ನಾಟಕ ಸ್ಥಿತಿಗತಿಯನ್ನು ಮಾತ್ರವಲ್ಲ, ರಾಜ್ಯದಲ್ಲಿ ಮೂಲೆ ಸೇರಿರುವ ಕಾಂಗ್ರೆಸ್‌ನ ನೈಜ ಸ್ಥಿತಿಯನ್ನೂ ಅರಿತಂತಾಗಿದೆ. ಇದಲ್ಲದೆ ಮುಂಬರುವ ಚುನಾವಣೆಯಲ್ಲಿ ಅಪರಾಧ ಹಿನ್ನೆಲೆಯಿರುವ ವ್ಯಕ್ತಿಗಳಿಗೆ ಟಿಕೆಟ್ ನೀಡಬಾರದೆಂದು ತಾಕೀತು ಮಾಡಿದ್ದು ಒಳಿತೆಂದೆನಿಸುತ್ತದೆ. ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಪ್ರಾಮಾಣಿಕ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದರೆ ಒಳಿತಾಗಬಹುದು. ನಡೆ-ನುಡಿಗಳಲ್ಲಿ ಇತರ ನಾಯಕರಿಗಿಂತ ಭಿನ್ನವಾಗಿ ಕಾಣುವ ರಾಹುಲ್ ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಆಶ್ವಾಸನೆಗಳನ್ನು ಕಾರ್ಯಮುಖೇನ ನಡೆಸಿ ಕೊಟ್ಟರೆ ಚೇತೋಹಾರಿ ಯುವ ನಾಯಕರಾಗುವಲ್ಲಿ ಎಳ್ಳಷ್ಟು ಸಂಶಯವಿಲ್ಲ. 'ಭಾರತದ ಹುಡುಕಾಟದಲ್ಲಿ ಯುವರಾಜ' (ಶಶಿ ಸಂಪಳ್ಳಿ) ಸಕಾಲಿಕ ಲೇಖನ ನೀಡಿದ್ದಕ್ಕೆ ಟಿಎಸ್‌ಐಗೆ ವಂದನೆಗಳು.
ಶಂಶೀರ್ ಬುಡೋಳಿ
ಉಜಿರೆ
ಪ್ರತಿಭಾವಂತರಿಗೆ ಪ್ರೋತ್ಸಾಹಿಸಲಿ
'ರಾಷ್ಟ್ರೀಯ ಕ್ರೀಡೆಯ ಮಹಾ ದುರಂತ' (ಅಸ್ಲಂ ಶೇರ್ ಖಾನ್) ಅಂಕಣಕ್ಕೆ ಈ ಪ್ರತಿಕ್ರಿಯೆ. ಒಲಿಂಪಿಕ್ ಹಾಕಿ ಸೋಲು ಕ್ರೀಡಾ ಶವ ಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆ ಎನ್ನುವ ಮಾಜಿ ಹಾಕಿ ಆಟಗಾರ ಅಸ್ಲಂ ಶೇರ್ ಖಾನ್ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ಬಾರಿಯ ಬೀಜಿಂಗ್ ಒಲಿಂಪಿಕ್ ಅರ್ಹತಾ ಸುತ್ತಿನಲ್ಲಿ ಭಾರತದ ಹಾಕಿ ಸೋಲು ನಮ್ಮ ದೇಶದ ಕ್ರೀಡಾ ಮನೋಭಾವಕ್ಕೆ ಹಿಡಿದ ಕೈಗನ್ನಡಿ. ಸಾಕಷ್ಟು ಬಾರಿ ಸತತ ಪರಿಶ್ರಮದಿಂದ ಅದ್ವಿತೀಯ ಸಾಧನೆ ಮಾಡಿದ್ದರೂ, ಸರ್ಕಾರ ಹಾಕಿಯ ಬಗ್ಗೆ ಕಾಳಜಿ ವಹಿಸಿಲ್ಲ. ಅದರ ಒಂದು ಸ್ಯಾಂಪಲ್ ಈ ಬಾರಿಯ ಹಾಕಿ ಸೋಲು. ಹಣ ಮತ್ತು ಜನಪ್ರಿಯತೆ ತರಬಲ್ಲಂತಹ ಕ್ರೀಡೆಯೇ ನಿಜವಾದ ಕ್ರೀಡೆ ಎಂಬುದನ್ನು ಮರೆತು ಸರ್ಕಾರ, ಪ್ರತಿಭಾವಂತ ಆಟಗಾರರಿಗೆ, ದೇಶೀಯ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ.
ಎಸ್.ಜಿ. ಶ್ರೀನಿವಾಸ
ಬೆಂಗಳೂರು
ಅಮೆರಿಕ ಸಾವಿನ ವ್ಯಾಪಾರಿ
'ಅಮೆರಿಕದ ಆ 'ಕೌಬಾಯ್' ಬುಷ್ ನಿಜವಾಗಿಯೂ ಇರಾಕ್ ಯುದ್ಧ ಗೆದ್ದದ್ದು ಹೇಗೆ?' (ಅರಿಂದಮ್ ಚೌಧುರಿ) ಸಂಪಾದಕೀಯ ಸಮಕಾಲೀನ ಜಗತ್ತಿನ ಸತ್ಯದ ಪ್ರತಿರೂಪ. ಅಮೆರಿಕದ ಧೂರ್ತತನವನ್ನು ಚೆನ್ನಾಗಿ ಅನಾವರಣಗೊಳಿಸಿದ್ದೀರಿ. ಇಂದು, ಮುಂದೆ ಮತ್ತು ಎಂದೆಂದಿಗೂ ಜಗತ್ತಿನ ಅಧಿಪತಿ ತಾನೇ ಆಗಬೇಕು, ನಿರಂಕುಶ ಪ್ರಭುತ್ವ ಅಬಾಧಿತವಾಗಿ ಮುಂದುವರಿಯಬೇಕು ಎಂಬ ಉದ್ಧಟತನದ ಪರಮಾವಧಿಯಲ್ಲಿ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿ(ದಾಹಿ)ಯಂತೆ ವರ್ತಿಸುತ್ತಿರುವ ಅಮೆರಿಕದ ನಿಲುವು ಖಂಡನೀಯ. ವಿಶ್ವಸಂಸ್ಥೆಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನ ಬಾಕಿ ಉಳಿಸಿಕೊಂಡಿರುವ ಅಮೆರಿಕ ಜಗದೇಕ ವೀರನಾಗುವ ಹಪಹಪಿಕೆ ಯಿಂದ ತನ್ನಲ್ಲಿಲ್ಲದ ನೈಸರ್ಗಿಕ ಸಂಪತ್ತನ್ನು ಇತರೆ ಸಣ್ಣ-ಪುಟ್ಟ ದೇಶಗಳಿಂದ ಲೂಹೊಡೆಯಲು ಕುಟಿಲ ರಾಜಕಾರಣ ಮಾಡುತ್ತಿದೆ. ತಾಳಕ್ಕೆ ತಕ್ಕಂತೆ ಕುಣಿಯುವವರನ್ನು ಅಧಿಕಾರದಲ್ಲಿ ಕುಳ್ಳಿರಿಸುವ, ಸೊಪ್ಪು ಹಾಕದವರನ್ನು ಕೆಳಕ್ಕಿಳಿಸುವ ಮೂಲಕ ಇತರ ದೇಶಗಳಲ್ಲಿ ಅರಾಜಕತೆ ಸೃಷ್ಟಿಸಿ, ರಾಜಕೀಯ ಲಾಭ ಪಡೆದುಕೊಳ್ಳುತ್ತಿದೆ. ಹೀಗಾಗಿ ಯುದ್ಧ ಅಮೆರಿಕದ ಬೀಜಮಂತ್ರ. ಒಂದೆಂಡೆ ಶಾಂತಿ ಮಂತ್ರ ಜಪಿಸುತ್ತಾ ಮತ್ತೊಂದು ಕಡೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ಅಮೆರಿಕ ನಿಜವಾದ ಸಾವಿನ ವ್ಯಾಪಾರಿ ಅಲ್ಲವೆ? ಹೀಗಾಗಿ 'ನನ್ನದು ನನ್ನದೇ, ನಿನ್ನದೂ ನನ್ನದೇ' ಎನ್ನುವ ಹಠಮಾರಿ ಧೋರಣೆ ಹೊಂದಿರುವ ಅಮೆರಿಕದ ಕರಿನೆರಳು ಬೀಳುವ ಮುನ್ನ ಅಭಿವೃದ್ಧಿಶೀಲ ರಾಷ್ಟ್ರಗಳು ಎಚ್ಚೆತ್ತುಕೊಂಡು ಅದರ ಸ್ವೇಚ್ಛಾಚಾರ ಪ್ರವೃತ್ತಿಗೆ ಕಡಿವಾಣ ಹಾಕಬೇಕು.
ಜೆ. ಪುಟ್ಟರಾಜು
ಬೆಂಗಳೂರು
'ಪ್ರಶಸ್ತಿ ಪ್ರಿಯ'ರ ನಡುವೆ
ಅವಾರ್ಡು ಬೇಕೇ ಅವಾರ್ಡು' (ಬಾಲಕೃಷ್ಣ ಹೊಸಂಗಡಿ) ಲೇಖನ, ಪ್ರಶಸ್ತಿ ಪ್ರಿಯರ ಮನೋಸ್ಥಿತಿಯನ್ನು ಬಿಂಬಿಸಿದೆ. ತನ್ನ ಅಹಮಿಕೆಯನ್ನು ತಣಿಸಿಕೊಳ್ಳುವ ಭರದಲ್ಲಿ ನೈತಿಕತೆಯನ್ನು ಮರೆಯುತ್ತಿರುವ 'ಗಣ್ಯ'ರೇ ಎಲ್ಲೆಡೆ ತುಂಬಿದ್ದಾರೆ. ಇದರಿಂದಾಗಿ ಒಬ್ಬ ವ್ಯಕ್ತಿಯ ಯೋಗ್ಯತೆಯನ್ನು ನಿರ್ಧರಿಸುತ್ತಿದ್ದ ಪ್ರಶಸ್ತಿಗಳು ಅರ್ಥ ಕಳೆದುಕೊಳ್ಳುತ್ತಿವೆ. ರಾಜ್ಯ ಮಟ್ಟದ ಪ್ರಶಸ್ತಿಗಳೂ ಇಂತಹ ಲಾಬಿಗೆ ಬಲಿಯಾಗುತ್ತವೆ ಎಂಬುದಕ್ಕೆ 'ರಾಜ್ಯೋತ್ಸವ' ಪ್ರಶಸ್ತಿಯೇ ನಿದರ್ಶನ.
ಎಚ್. ಪ್ರಿಯಾಂಕ
ಇ-ಮೇಲ್ ಮೂಲಕ
ಮುಂದಡಿ ಇಡುವರೇ? 'ಚೀನಾದ ಸರ್ವಾಧಿಕಾರಿ ಧೋರಣೆಗೆ ತಕ್ಕ ಪಾಠ ಅಗತ್ಯ' (ಅರಿಂದಮ್ ಚೌಧುರಿ) ಸಂಪಾದಕೀಯ ಅರ್ಥಪೂರ್ಣವಾಗಿತ್ತು. ಅಮೆರಿಕ ಬಡರಾಷ್ಟ್ರಗಳನ್ನು ತನ್ನ ಸರ್ವಾಧಿಕಾರಿ ಧೋರಣೆಗೆ ಬಲಿ ಪಶುವನ್ನಾಗಿಸುತ್ತಿದೆ. ಎಡಪಕ್ಷಗಳ ಋಣದಲ್ಲಿರುವ ಯುಪಿಎ ಬಾಯಿ ತೆರೆಯಲೂ ಅಂಜುತ್ತಿದೆ. ಲಾಸಾದಲ್ಲಿ ಕನಿಷ್ಠ ೮೦ ಮಂದಿ ಟಿಬೆಟಿಯನ್ನರು ಪ್ರಾಣ ಕಳೆದುಕೊಂಡಾಗ ಭಾರತ ಖಂಡಿಸಬಹುದಿತ್ತು. ಆದರೆ ಭಾರತ ಅಂತಹ ದಿಟ್ಟತನ ತೋರಲೇ ಇಲ್ಲ. ಹಿಂದೊಮ್ಮೆ ಚೀನಾಗೆ ಉತ್ತರ ನೀಡುವ ಎದೆಗಾರಿಕೆ ತೋರಿ ಸೋಲು ಕಂಡ ಹಳೇ ನೆನಪು ಭಾರತವನ್ನು ಕಾಡುತ್ತಿದೆಯೆ? ಆಗಲೂ ಕಾಂಗ್ರೆಸ್ ಪಕ್ಷವೇ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಈಗ ಕೇಂದ್ರದಲ್ಲಿ ಅಧಿಕಾರರೂಢವಾಗಿರುವ ಭಾರತ ಟಿಬೆಟ್ ಪರ ದನಿಗೂಡಿಸುವುದು ಅತ್ತ ಇರಲಿ, ಆಶ್ರಿತರ ಸ್ವಾಗತಕ್ಕೂ ಸಿದ್ಧರಾಗುವಂತೆ ತೋರುತ್ತಿದೆ. ಚೀನಾಕ್ಕೆ ತಕ್ಕ ಪಾಠ ಕಲಿಸಲು ಇದು ಸಕಾಲ. ಆದರೆ ನಮ್ಮ ನಾಯಕರು ಸಿದ್ಧರಿದ್ದಾರೆಯೆ?
ಕೆ. ಸುಜಾತ,
ಬೆಳ್ಮಣ್ಣು
| ಬಹುಮಾನಿತ ಪತ್ರಗಳು |
ಜಟಿಲ ಪ್ರಶ್ನೆ
'ತೆಂಡೂಲ್ಕರ್‌ಗಿಂತ ದ್ರಾವಿಡ್ ಶ್ರೇಷ್ಠ ಬ್ಯಾಟ್ಸ್‌ಮನ್?' (ಬಹುತೇಕ ಭಾರತೀಯರು ನೀಡುವ ಉತ್ತರ ಮಾತ್ರ ಮಾಸ್ಟರ್‌ಬ್ಲಾಸ್ಟರ್ ಎಂಬುದೇ ಆಗಿರುತ್ತದೆ) ಈ ಪ್ರಶ್ನೆ ಅತ್ಯಂತ ಜಟಿಲವಾದುದು, ಹಾಗೆಂದು ಸಂಪೂರ್ಣ ನಿರ್ಲಕ್ಷಿಸುವುದೂ ಸಾಧ್ಯವಿಲ್ಲ. ಈ ಬಗ್ಗೆ ಅಂಕಿ-ಅಂಶಗಳನ್ನು (ಟಿಎಸ್‌ಐಗೆ ಒದಗಿಸಿದ ಅಂಕಿ-ಅಂಶಗಳೊಂದಿಗೆ) ಗಮನಿಸಿದರೆ ಈ ಎರಡೂ ಆಟಗಾರರು ವೈರುಧ್ಯವಾದ ಘಟ್ಟದಲ್ಲಿ ತಮ್ಮ ಕ್ರೀಡಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಯಾವುದೇ ಅನುಮಾನವಿಲ್ಲದೆ ಹೇಳಬಹುದು ಸಚಿನ್ ಓರ್ವ ಶ್ರೇಷ್ಠ ಆಟಗಾರನೆಂದು! (ಗೌತಮ್ ಭಿಮಾನಿ ಹೇಳಿದಂತೆ). ಆದರೆ ದ್ರಾವಿಡ್ ಸಚಿನ್‌ಗಿಂತ ಹೆಚ್ಚು ಏಕಾಗ್ರತೆಯಿಂದ ಸುದೀರ್ಘ ಆಟ ಆಡುತ್ತಾರೆ. ಸಚಿನ್ ದೊಡ್ಡ ಮೊತ್ತಗಳನ್ನು ಗಳಿಸಿರಬಹುದು, ಆದರೆ ಏಕಾಗ್ರತೆಯಿಂದ ಆಡಿ ಸ್ಕೋರ್ ಗಳಿಸುವ ತಾಳ್ಮೆ ಅವರಿಗಿಲ್ಲ. ಸಚಿನ್ ದುರ್ಬಲ ತಂಡದ ನೇತೃತ್ವ ವಹಿಸಿದ್ದರು ಮತ್ತು ದ್ರಾವಿಡ್ ಉತ್ತಮ ತಂಡದ ನೇತೃತ್ವ ವಹಿಸಿದ್ದರು ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಈ ಬ್ಯಾಟ್ಸ್‌ಮನ್‌ಗಳ ಗುಣಮಟ್ಟವನ್ನು ಅಳೆಯಲೂ ಸಾಧ್ಯವಿಲ್ಲ. ಇಂಥ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ಪಡೆದಿದ್ದು ನಮ್ಮ ದೇಶದ ಅದೃಷ್ಟ.
ತರುಣ್ ಲಲಿತ್
ತರುಣ್ ಲಲಿತ್
ಇ-ಮೇಲ್ ಮೂಲಕ
ಅಧ್ಯಕ್ಷೀಯ ಪದ್ಧತಿ ಅಗತ್ಯ
ಅಧ್ಯಕ್ಷೀಯ ಚುನಾವಣೆ ಕುರಿತಾದ 'ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ' ಮತ್ತು ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಟಿಎಸ್‌ಐ-ಐಸಿಎಂಆರ್ ಸಮೀಕ್ಷೆಯನ್ನೊಳಗೊಂಡ ಮುಖಪುಟ ಲೇಖನಕ್ಕೆ ಈ ಪ್ರತಿಕ್ರಿಯೆ. ಪ್ರಸ್ತುತ ಏಕಪಕ್ಷ ಆಡಳಿತ ಒಂದು ಕಟ್ಟುಕಥೆಯಾಗಿದೆ. ಸಮ್ಮಿಶ್ರ ಸರ್ಕಾರ ಈಗಿನ ವಾಸ್ತವ. ಹೌದು! ಬಹುಮತ ಪಡೆಯಬೇಕಾದರೆ ರಾಜಕೀಯ ಪಕ್ಷಗಳು ಪರಸ್ಪರ ದ್ವೇಷ ಮರೆತು ಸರ್ಕಾರ ರಚಿಸಲು ಮುಂದಾಗುತ್ತಾರೆ. ಆದರೆ ಇಂತಹ ದುರ್ಬಲ ಸಂಬಂಧ ಎಂದೂ ದೀರ್ಘಾಡಳಿತ ನೀಡದು. ಆಡಳಿತ ಚುಕ್ಕಾಣಿ ಹಿಡಿದವರು ಸಮರ್ಥ ನಾಯಕರಾಗಿರುವ ಅಗತ್ಯವೂ ಇದೆ. ೨೦೦೯ರ ಚುನಾವಣೆಯ ಬಳಿಕ ಯಾವ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂಬುದು ಆಯಾ ಪಕ್ಷಗಳ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ಅವಲಂಬಿಸಿರುತ್ತದೆ! ಅವರು ಅಭ್ಯರ್ಥಿಗಳ ವರ್ಚಸ್ಸನ್ನು ಎಷ್ಟು ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ ಎನ್ನುವುದನ್ನು ಅನ್ವಯಿಸಿದೆ. ಕಠಿಣ ಸ್ಫರ್ಧೆಯಂತೂ ಖಚಿತ. ಬಿಜೆಪಿ ಸಾರ್ವತ್ರಿಕ ಚುನಾವಣೆ ಎದುರಿಸಲು ಇನ್ನೂ ಸಿದ್ಧವಾಗಿಲ್ಲ. ಭಾರತಕ್ಕೆ ಅಧ್ಯಕ್ಷೀಯ ಚುನಾವಣೆಯೇ ಉತ್ತಮ, ಅಧ್ಯಕ್ಷೀಯ ಪದ್ಧತಿಯಲ್ಲಿ ಇತಿಮಿತಿಗಳಿರುತ್ತವೆ. ಜೊತೆಗೆ ಸಂಸತ್ತಿನಲ್ಲಾಗುವ ಭ್ರಷ್ಟಚಾರವನ್ನೂ ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು. ಆದರೆ ನಮ್ಮ ದೇಶದಲ್ಲಿ ಸಂಪುಟಕ್ಕೆ ಸಚಿವರನ್ನು ಆರಿಸುವಲ್ಲೂ ಪ್ರಧಾನಮಂತ್ರಿ ವಿಫಲವಾಗುತ್ತಿರುವುದು ವಿಷಾದನೀಯ.
ಯಧಿಷ್ಠಿರ ಶರ್ಮ
ಒರಿಸ್ಸಾ
ಬೆಲೆ ಏರಿಕೆ: ಕಡಿವಾಣ ಹೇಗೆ
'ಶ್ರೀಮಂತರಿಗೆ ಹೆಚ್ಚಿನ ಸಂಬಳದ ವರ, ಬಡವರಿಗೆ ಬೆಲೆ ಏರಿಕೆಯ ಶಾಪ! ಇದಕ್ಕಿಂತ ದೊಡ್ಡ ನಾಚಿಕೆಗೇಡು ಬೇರೇನಾದರೂ ಇದೆಯೇ?' (ಅರಿಂದಮ್ ಚೌಧುರಿ) ಸಂಪಾದಕೀಯ ಅರ್ಥಪೂರ್ಣವಾಗಿತ್ತು. ಬೆಲೆ ಏರಿಕೆಯ ಚರ್ಚೆ ಪ್ರಧಾನವಾಗುತ್ತಿರುವ ಕಾಲದಲ್ಲಿ ತಲಾ ಆದಾಯ ಭಿನ್ನತೆ ವಿಚಾರ ಪ್ರಾಮುಖ್ಯತೆ ಪಡೆದುಕೊಂಡಿದೆ. ಮುಖ್ಯವಾಗಿ ಗ್ರಾಮೀಣ ಮತ್ತು ನಗರ ಜೀವನದ ಬಡವರನ್ನು ಗಣನೆಗೆ ತೆಗೆದುಕೊಂಡಲ್ಲಿ ಈ ತಾರತಮ್ಯ ಸ್ಪಷ್ಟವಾಗಿದೆ. ಪ್ರಸ್ತುತ ಬೆಲೆ ಏರಿಕೆ ಅದೆಷ್ಟೋ ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿರುವ ಸನ್ನಿವೇಶದಲ್ಲಿ ಬೆಲೆ ಏರಿಕೆಗೆ ತಡೆ ಒಡ್ಡುವ ಪ್ರಯತ್ನದಲ್ಲಿರುವ ಸರ್ಕಾರದ ನಿದ್ದೆಗೆಡಿಸಿದೆ ಈ ಹಣದುಬ್ಬರ.
ಜೆ. ವಿಪಿನ್
ಬೆಂಗಳೂರು
|
ಚರ್ಚೆಗೆ ಪ್ರೇರಣೆ 'ಭಾರತದ ಹುಡುಕಾಟದಲ್ಲಿ ಯುವರಾಜ' (ಶಶಿ ಸಂಪಳ್ಳಿ) ಚಿಂತನಾರ್ಹ ಲೇಖನ. ಇದು ಅಧಿಕೃತ ಚುನಾವಣಾ ಪ್ರಚಾರ ಅಲ್ಲದೆ ಇದ್ದರೂ ಕರ್ನಾಟಕದ ಕಾಂಗ್ರೆಸ್ ಕಾರ್ಯಕರ್ತರು ಇದೇ ರೀತಿ ಬಳಸಿಕೊಂಡಿದ್ದಾರೆ. ರಾಜ್ಯದ ಕಾಂಗ್ರೆಸ್ ಪಡೆಯಲ್ಲಿ ಇದು ಸಕಾರಾತ್ಮಕ ಪರಿಣಾಮ ಬೀರಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅಲ್ಲದೆ ಪಕ್ಷದಲ್ಲಿ ಹೊಸ ಅಲೆ ಎಬ್ಬಿಸಿದೆ ಎಂದರೂ ತಪ್ಪಾಗಲಾರದು. ಹಾಗೆಯೇ ಕರ್ನಾಟಕದ ಜನಮನದಲ್ಲಿ ಕಾಂಗ್ರೆಸ್ ಕುರಿತು ಚರ್ಚೆ ನಡೆಯುವಂತಾಗಿದೆ. ಜೊತೆಗೆ ರಾಹುಲ್ ಅವರ ರಾಜ್ಯ ಪ್ರವಾಸದಿಂದಾಗಿ ಬೆರಳೆಣಿಕೆಯಷ್ಟು ಬಡವ- ಬಲ್ಲಿದರು ಅವರ ಅವರ ಮೊಗ ಕಂಡು ಪುನೀತರಾಗಿದ್ದಾರೆ ಎನ್ನಬಹುದು.
ಆರ್. ಪವಿತ್ರ,
ಮಂಗಳೂರು
ಸೂಕ್ಷ್ಮ ಒಳನೋಟ
ವಿಭಿನ್ನ ಶೈಲಿಯಲ್ಲಿದ್ದ ಶ್ರೀಧರ ಬಳಗಾರ ಅವರ 'ಮುಖ್ಯಪ್ರಾಣ' ಕಥೆ ಮೆಚ್ಚುಗೆಯಾಯಿತು. ಪ್ರತಿ ಮನುಷ್ಯನಲ್ಲಿರುವ ವ್ಯಾಕುಲತೆ, ಗೊಂದಲಗಳ ಒಳನೋಟ ಕಥೆಯಲ್ಲಿ ಮೂಡಿಬಂದ ಪರಿ ಅದ್ಭುತ. ಎಷ್ಟೇ ಕಷ್ಟ ಎದುರಾದರೂ ತಮ್ಮತನವನ್ನು ಬಿಟ್ಟುಕೊಡದೆ ಬದುಕುವ ಸ್ವಾಭಿಮಾನಿ ಜಗತ್ತನ್ನು ಬಳಗಾರ ಅವರು ಓದುಗನ ಮುಂದೆ ಸೂಕ್ಷ್ಮವಾಗಿ ಬಿಚ್ಚಿಟ್ಟಿದ್ದಾರೆ. ರಮಣಿ, ಅಕ್ಕೋರು, ಮಹಂತಯ್ಯ ಪಾತ್ರಗಳು ಮನುಷ್ಯನಲ್ಲಿ ಹುಟ್ಟುವ ಭಾವಗಳ ರೂಪಕವಾಗುತ್ತಾ ಹೋಗುತ್ತದೆ. ಕಥೆಯ ಈ ಗುಣವೇ ಅದನ್ನು ಓದಿಸಿಕೊಂಡು ಹೋಗುವಂತೆ ಮಾಡುತ್ತದೆ. ಉತ್ತಮ ಕಥೆ ನೀಡಿದ್ದಕ್ಕಾಗಿ ಧನ್ಯವಾದ.
ಎನ್. ಆಶಾ
ಹುಬ್ಬಳ್ಳಿ
ಸೂಕ್ತ ಯೋಜನೆ ಅಗತ್ಯ
ಜಗತ್ತಿನಲ್ಲೇ ಅತ್ಯಂತ ಅಧಿಕ ಕ್ಷಯ
ರೋಗಿಗಳನ್ನು ಹೊಂದಿರುವ ರಾಷ್ಟ್ರ ಎಂಬ ಕುಖ್ಯಾತಿಗೆ ಭಾರತ ಗುರಿಯಾಗಿದ್ದರೂ,
'ಡಾಟ್ಸ್'
ಕಾರ್ಯಕ್ರಮ ನಮ್ಮಲ್ಲಿ ಸಮರ್ಪಕವಾಗಿ ಜಾರಿಗೊಳ್ಳದಿರುವುದು ನಿಜಕ್ಕೂ ವಿಪರ್ಯಾಸ.
ಪೋಲಿಯೋ ಕಾರ್ಯಕ್ರಮದಂತೆ ಡಾಟ್ಸ್ ಕೂಡ ವೈಫಲ್ಯದ ಹಾದಿ
ಹಿಡಿದಿರುವುದರಿಂದ ಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.
ಈ ನಿಟ್ಟಿನಲ್ಲಿ ಟಿಎಸ್‌ಐನ ೪೨ನೇ ಸಂಚಿಕೆಯಲ್ಲಿ
ಪ್ರಕಟವಾದ 'ಡಾಟ್ಸ್
ಕಾರ್ಯಕ್ರಮದ ಭವಿಷ್ಯ'
(ವಿಕಾಸ್ ಕುಮಾರ್)
ಲೇಖನ ಸಕಾಲಿಕ.
ಆರ್.
ಚಂದನ್
ಇ-ಮೇಲ್
ಮೂಲಕ
ಮನಮಿಡಿದ ವರದಿ
'ತುತ್ತಿನ
ಚೀಲ ತುಂಬಲು ಕಾಡಿನ ಕಡೆಗೆ'
(ಅಜಿತ್ ಕುಮಾರ್)
ವಿಶೇಷ ವರದಿ ಮನಮಿಡಿಯಿತು.
ತುತ್ತು ಅನ್ನಕ್ಕಾಗಿ ಎರವಲು ಮೊರೆ ಹೋದ ಬಡಜನರ ಬದುಕು
ಪರಿಚಯದ ಜೊತೆಗೆ ಭ್ರಷ್ಟ ಅಧಿಕಾರಿಗಳ ಬಣ್ಣ ಬಯಲು ಮಾಡಿದೆ.
೯೮೮೦೪******
ವಾಸ್ತವದ ಚಿತ್ರಣ
'ಭಾರತದ
ಹುಡುಕಾಟದಲ್ಲಿ ಯುವರಾಜ'
(ಶಶಿ ಸಂಪಳ್ಳಿ)
ಲೇಖನ ಪ್ರಸ್ತುತ ರಾಜಕೀಯ ಸ್ಥಿತಿಯನ್ನು ಅನಾವರಣಗೊಳಿಸಿದೆ.
'ಯುವರಾಜನ'
ನ ರಾಜ್ಯ ಪ್ರವಾಸ,
ಕಾಂಗ್ರೆಸ್‌ನಲ್ಲಿ ಒಂದಷ್ಟು ಚೈತನ್ಯ ಮೂಡಿಸಿದೆ.
ಆದರೆ ಮುಂಬರುವ ಚುನಾವಣೆಯಲ್ಲಿ ಇದರ ಲಾಭದ ಬಗ್ಗೆ ಪಕ್ಕಾ
ಲೆಕ್ಕಾಚಾರ ಮಾಡಲಾಗದು.
೯೪೪೮೦****
ಮಾಯಾ ಪುರಾಣ
'ಮಹಾರಾಣಿ
ಮಾಯಾವತಿ ೨೦೦೯ರಲ್ಲಿ ಕಿಂಗ್ ಮೇಕರ್?'
(ಟಿಎಸ್‌ಐ-ಐಸಿಎಂಆರ್)
ಸಮೀಕ್ಷೆ ಓದಿದೆ.
ಬಿಎಸ್‌ಪಿ ಮಹಾರಾಣಿ ಮುಂಬರುವ ಚುನಾವಣೆಯಲ್ಲಿ ಗೆಲುವು
ಸಾಧಿಸುವ ಎಲ್ಲಾ ಸಾಧ್ಯತೆಗಳಿವೆ.
ಆದರೆ ಹಣದುಬ್ಬರ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ
ಚಳ್ಳೆ ಹಣ್ಣು ತಿನ್ನಿಸುವುದಂತೂ ಖಂಡಿತ.
೯೮೪೫೧******
ಆರ್ಥಿಕ ಕುಸಿತ
|
'ಚೀನಾದ ಸರ್ವಾಧಿಕಾರಿ ಧೋರಣೆಗೆ ತಕ್ಕ ಪಾಠ ಅಗತ್ಯ' (ಅರಿಂದಮ್ ಚೌಧುರಿ) ಸಂಪಾದಕೀಯ ದುರ್ಬಲ ಸರ್ಕಾರದ ಕಣ್ತೆರೆಸಿದೆ. ಇಂದು ನಾವು ಚೀನಾವನ್ನು ವಿವರಣೆ ಕೇಳಲು ಹಿಂಜರಿದರೆ, ಈ ಹಿಂದಿನಂತೆಯೇ ಸುಮ್ಮನೆ ಕೈಕಟ್ಟಿ ಕುಳಿತರೆ ಈಗಾಗಲೇ ಅರುಣಾಚಲ ಪ್ರದೇಶದ ಕುರಿತು ಕೊಂಕು ನುಡಿಯುತ್ತಿರುವ ಚೀನಾ ನಮ್ಮ ದೌರ್ಬಲ್ಯ ಅರಿತು ಮುಂದಿನ ದಿನಗಳಲ್ಲಿ ನಮ್ಮ ದೇಶದ ಮೇಲೆ ದಾಳಿ ನಡೆಸದು ಎನ್ನುವುದಕ್ಕೆ ಗ್ಯಾರಂಟಿ ಏನು? ಟಿಬೆಟ್ ಕೇವಲ ಚೀನಾಗೆ ಸಂಬಂಧಿಸಿದ ವಿಷಯವಲ್ಲ. ಭಾರತಕ್ಕೆ ಸಂಬಂಧ ಪಟ್ಟ ವಿಷಯವೂ ಹೌದು. ಬಹಳ ಕಾಲದಿಂದಲೂ ಟಿಬೆಟ್ ಸಾಂಸ್ಕೃತಿಕವಾಗಿ ಹಾಗೂ ಧಾರ್ಮಿಕವಾಗಿ ಭಾರತಕ್ಕೆ ಆಪ್ತವಾಗಿದೆ. ಈಗಾಗಲೇ ಲಕ್ಷಾಂತರ ಟಿಬೆಟಿಯನ್ನರಿಗೆ ಆಶ್ರಯ ನೀಡಿರುವ ಭಾರತ ಸರ್ಕಾರ ಮತ್ತೆ ಚೀನಾ ದಬ್ಬಾಳಿಕೆಯಿಂದಾಗಿ ವಲಸೆ ಬರುತ್ತಿರುವ ನಿರಾಶ್ರಿತ ಟಿಬೆಟಿಯನ್ನರಿಗೂ ಆಶ್ರಯ ನೀಡಬೇಕಾದ ಪ್ರಮೇಯ ಬಂದೊದಗಿದೆ. ಇದರಿಂದ ದೇಶದ ಆರ್ಥಿಕತೆಯ ಬುಡಕ್ಕೆ ಪೆಟ್ಟು ಬೀಳುವುದರಲ್ಲಿ ಎರಡು ಮಾತಿಲ್ಲ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಚೀನಾ ವಿರುದ್ಧ ದನಿ ಎತ್ತಬೇಕು.
ರೇ.ಚ. ರೇವಡಿಗಾರ
ಸಿಂದಗಿ
|
|