ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಗುಣದೋಷ

ಮಹತ್ವದ ಕಾದಂಬರಿ

 
ಕನ್ನಡ ವಿಮರ್ಶಾ ಲೋಕ ಇಂತಹ ಮಹತ್ವದ ಕೃತಿಯೊಂದರ ಕುರಿತು ಚರ್ಚಿಸಿದ್ದು ವಿರಳ

ಇದು ವಿವೇಕ ಶಾನಭಾಗರ ಎರಡನೆಯ ಕಾದಂಬರಿ. ಮೊದಲನೆಯದು 'ಇನ್ನೂ ಒಂದು'. ಅದರಲ್ಲಿ ಕಾಣುವ ಮಾನವನ ಹಲವಾರು ಅವಿರತ ಅನ್ವೇಷಣೆಗಳ ಇನ್ನೊಂದು ಮುಖ ನಮ್ಮೆದುರಿಗಿರುವ ಎರಡನೆಯ ಕಾದಂಬರಿಯಲ್ಲಿದೆ. ಕಾದಂಬರಿಯ ಸಾಂಪ್ರದಾಯಿಕ ಪರಿಕಲ್ಪನೆಯಲ್ಲಿ ವಿಮರ್ಶೆಯ ನೆರವಿಗೆ ಒದಗಿಬರುವ ಸೂತ್ರಬದ್ಧ ಕಥೆಯಾಗಲೀ, ಕಪ್ಪು-ಬಿಳುಪು-ವರ್ಣರಂಜಿತ ಪಾತ್ರಗಳಾಗಲೀ, ಕಾರ್ಯ-ಕಾರಣ ಸಂಬಂಧಗಳಾಗಲೀ, ಗೊತ್ತು ಗುರಿಗಳಾಗಲೀ, ಇವು ಯಾವುದೂ ಇಲ್ಲಿ ಢಾಳವಾಗಿ ಗೋಚರಿಸುವುದಿಲ್ಲ. ಜನುಮದ ಜಾತ್ರೆಯಲ್ಲಿ ತುಂಬಿತುಳುಕುವ ನೂರೆಂಟು ಪಾತ್ರಗಳ ಬದುಕೇ ಇಲ್ಲಿ ಕಾದಂಬರಿ. ಈ ಪಾತ್ರಗಳು ಪ್ರಜ್ವಲವಾಗಿ ಜ್ವಲಿಸುವ ರೀತಿ ಇದರ ವಿಶಿಷ್ಟ ಪರಿ. ಇದರಿಂದಾಗಿಯೇ, ಸಾರ್ಥಕರೂಪಕನಾಮ ಹಾಗೂ ಅರ್ಥಪೂರ್ಣವಾದ ಮುಖ-ಮುಖವಾಡಗಳ ಮುಖಪುಟದಲ್ಲಿ ಎದ್ದು ಕಾಣುವ 'ಒಂದು ಬದಿ ಕಡಲು' ಕನ್ನಡದ ಈಚಿನ ವರ್ಷಗಳ ಕಾದಂಬರಿಗಳಲ್ಲಿ ಒಂದು ಮಹತ್ವದ ಕೃತಿಯಾಗಿ ನಿಲ್ಲುತ್ತದೆ.
ಕಾದಂಬರಿ ಶುರುವಾಗುವುದು ಇಳಿವಯಸ್ಸಿನ ಹಾಗೂ ತುಂಬು ಪ್ರಾಯದ ಇಬ್ಬರು ವಿಧವೆಯರ ಕಾಯುವಿಕೆಯೊಂದಿಗೆ. ಕಥೆಯ ಎಳೆ ಬೇಕೆ ಬೇಕೆಂದರೆ ಒಂದೇ ಮನೆತನದ ನಾಲ್ವರು ಅಕ್ಕತಂಗಿಯರ ಗೋಡೆ ಮೇಲಿನ ಫೋಟೋಗಳು ಶುರುವಿಗೇ ಕಾಣಸಿಗುತ್ತವೆ. ಈ ಅಕ್ಕತಂಗಿಯರ ಸಂಬಂಧಗಳ ಮುಖೇನ ಹುಟ್ಟಿಕೊಳ್ಳುವ ಪಾತ್ರಗಳಲ್ಲಿ ಬದುಕಿನ ಎಳೆಗಳು ಕೂಡಿಕೊಳ್ಳುತ್ತಾ ಹೋಗುತ್ತವೆ. ಹಾಗೆ ನೋಡ ಹೋದರೆ ಇಲ್ಲಿನ ಒಂದೊಂದು ಪಾತ್ರಕ್ಕೂ ಒಂದೊಂದು ಕಥೆಯಿದೆ. ಇಂಥ ಒಂದು ಪಾತ್ರ ಪುರಂದರ.
ಕಾದಂಬರಿಯ ಮೊದಲ ಭಾಗ ಪುರಂದರ ಕೇಂದ್ರಿತವಾಗಿ, ಪ್ರಾಸಂಗಿಕವಾಗಿ ನಾಲ್ವರು ಅಕ್ಕತಂಗಿಯರ ಜೀವನ, ಅವರ ನಡೆ-ನುಡಿ-ಸ್ವಭಾವ, ಆಸೆ-ಅಪೇಕ್ಷಗಳು ಮೊಗಪಡೆದುಕೊಳ್ಳುತ್ತವೆ. ನಾಲ್ವರು ಅಕ್ಕತಂಗಿಯರಲ್ಲಿ, ಮೂರನೆಯ ತಂಗಿ ಮತ್ತು ಅವಳ ಗಂಡ ಅನಂತ ಬದುಕಿಲ್ಲ. ಆದರೆ ಅವರ ಮಗಳು ಸುನಂದ, ಗೋದಾವರಿ ದೊಡ್ಡಮ್ಮನ ಸಾಕು ಮಗಳಾಗಿ ಬೆಳೆಯುತ್ತಿದ್ದಾಳೆ. ಪುರಂದರ, ನಾಲ್ವರು ಅಕ್ಕತಂಗಿಯರಲ್ಲಿ ಒಬ್ಬಳಾದ ಕಸ್ತೂರಿಯ ಗಂಡ ವಾಸುದೇವನ ತಂಗಿಯ ಮಗ. ಮೊದಲ ಭಾಗದಲ್ಲಿ ಇವರ ಪಡಿಪಾಟಲುಗಳೆಲ್ಲ ತೆರೆದುಕೊಳ್ಳುತ್ತಾ ಹೋಗುವುದು, ಮನಸ್ಸುಗಳು ಬರಿದಾಗುತ್ತಾ ಹೋಗುವುದು ಪುರಂದರನ ಮದುವೆಯ ಪ್ರಸ್ತಾವಗಳಲ್ಲಿ. ಪುರಂದರನನ್ನು ಓದಿಸಿ ಬೆಳೆಸಿ ಕೆಲಸಕ್ಕೆ ಹಚ್ಚಿದ ವಾಸುದೇವನ ಇದೆಲ್ಲದರ ಹಿಂದಿನ ಉದ್ದೇಶ ಅಳಿಯನನ್ನಾಗಿ ಮಾಡಿಸಿಕೊಳ್ಳುವುದೇ ಆಗಿದೆ. ಇದನ್ನು ಸಾಧಿಸಲು ದೇವರ ಮುಂದೆ ಪುರಂದರನಿಂದ ವಚನವನ್ನೂ ಪಡೆದುಕೊಳ್ಳುತ್ತಾನೆ. ತಾಯಿಯಿಲ್ಲದ ಸುನಂದೆಯನ್ನು ಪುರಂದರನಿಗೆ ಕೊಡಬೇಕೆಂದು ಗೋದಾವರಿಯ ಸಂಕಲ್ಪ. ಇದಲ್ಲದೆ ಓದುವಾಗ ಪುರಂದರ ಮನೆಯ ಹಿತ್ತಲಲ್ಲಿ ಮೋಹಿನಿ ಎಂಬುವಳ ಆಕರ್ಷಣೆಗೂ ಒಳಗಾದದ್ದಿದೆ. ಸೋದರಮಾವನ ಹಂಗಿನಿಂದ ಬಿಡಿಸಿಕೊಳ್ಳುವ ಪ್ರಬಲ ಮನೋಭಿಲಾಷೆಯಿಂದಾಗಿ ಪುರಂದರ ವಾಸುದೇವನ ಮಗಳನ್ನು ತಿರಸ್ಕರಿಸಿ ಸುನಂದೆಯನ್ನು ಮದುವೆಯಾಗುತ್ತಾನೆ. 'ಒಂದು ಬದಿಯ ಕಡಲು' ಉಬ್ಬರ ಏಳುವುದು ಪುರಂದರನ ಮದುವೆಯ ನಂತರ. ಅಂದರೆ ಕಾದಂಬರಿಯ ಎರಡನೆಯ ಭಾಗದಲ್ಲಿ.
ಇಲ್ಲಿಯವರೆಗೆ ನಿರಾಯಾಸವಾಗಿ ಓದಿಸಿಕೊಳ್ಳುವ ಕಾದಂಬರಿ ಎರಡನೇ ಭಾಗದಲ್ಲಿ ತುಂಬು ತೀವ್ರತೆಯನ್ನು ಪಡೆದುಕೊಂಡು ಓದುಗ ಸ್ಪಂದಿಸುವಂತಾಗುತ್ತದೆ. ಪುರಂದರನ ಮದುವೆಯ ಚಕ್ರಬಿಂದುವಿನಲ್ಲಿ ಸಿಕ್ಕಿಬಿದ್ದ ಕಾದಂಬರಿಯ ಒಳಸುಳಿ-ಸುಳಿವುಗಳು ಮೇಲ್ಮುಖವಾಗುವುದು ಯುವ ಮನಸ್ಸುಗಳ ಅನುಭವ ಮತ್ತು ಆಶಯಗಳ ಅಭಿವ್ಯಕ್ತಿಯ ಮೂಲಕ. ಈ ಅಭಿವ್ಯಕ್ತಿ ಹೊಸ ಸಂಚಲನೆಯನ್ನು ತಂದುಕೊಡುವುದಷ್ಟೇ ಅಲ್ಲದೆ ಕೃತಿಯ ಕರ್ಷಣ ಮತ್ತು ಸಂಘರ್ಷಣಾ ಕೇಂದ್ರಗಳ ಸ್ಪಷ್ಟ ಹೊಳಹನ್ನೂ ನೀಡುತ್ತದೆ. ಇದು ಮುಖ್ಯವಾಗಿ ಬದಲಾವಣೆ, ಸುಧಾರಣೆ ಮತ್ತು ಕ್ರಾಂತಿಯ ತುಡಿತ. ಬನಭಂಡಾರಿ, ಯಶವಂತ, ರಮಾಕಾಂತ ಈ ಕೇಂದ್ರಗಳ ಶಕ್ತಿ ಬಿಂದುಗಳು. ಬನಭಂಡಾರಿಯ ಸಿನಿಮಾ ಕನಸುಗಳು, ಮನೆಬಿಟ್ಟು ಓಡಿಹೋಗಿದ್ದ ಯಶವಂತನ ನಾಟಕದ ಅನುಭವಗಳು, ರಮಾಕಾಂತನ ಸಮಾಜ ಸುಧಾರಣೆಯ ಸುಪ್ತ ಆಸೆ ಇವೆಲ್ಲ ಒಂದು ವೇದಿಕೆಯಡಿ ಪರಸ್ಪರ ಪೂರಕವಾಗುವಂತೆ ಕಲೆಯುವುದರ ಮೂಲಕ ಹಳೆಯ ತಲೆಮಾರಿನ ವಿರೋಧಗಳ ಮಧ್ಯೆ ಬದಲಾವಣೆಯ ಹಾದಿ ಸ್ಪಷ್ಟವಾಗುತ್ತ ಹೋಗುತ್ತದೆ. ಸರ್ವೋತ್ತಮನ ವಂಶಾವಳಿ ದಾಖಲಿಸುವ 'ಹುಚ್ಚು', ಯುವಮನಸ್ಸುಗಳ (ಬನಭಂಡಾರಿ-ಯಶವಂತ-ಪುರಂದರ) ಚಡಪಡಿಕೆ, ಹಿರಿಯರ ಸಾವು, ಯಮುನೆಗೆ ಇದುವರೆಗೆ ಬೇಲಿಯಾಗಿದ್ದ ಫಂಡರಿಯ ತೀರ್ಥಯಾತ್ರೆ ನಿರ್ಧಾರಗಳಿಂದ ಬದಲಾವಣೆ ಸಹಜವಾಗಿ ಹೊರಹೊಮ್ಮುತ್ತದೆ. ಬದಲಾವಣೆಯ ಮೊದಲ ಕಿರಣಗಳ ಕನಸು ಕಂಡವಳಂತೆ ಫಂಡರಿ, ಕರಿಮಣಿಸರ-ಬಳೆ ಇತ್ಯಾದಿ ಮಂಗಳದ್ರವ್ಯಗಳನ್ನೊಳಗೊಂಡ ಪುಟ್ಟ ಗಂಟೊಂದನ್ನು 'ನಾನಿಲ್ಲದಿರುವಾಗ ನಿನಗೆ ಇದು ಬೇಕಾಗಬಹುದು' ಎಂದು ಯಮುನೆಯ ಕೈಯಲ್ಲಿರಿಸಿ ತೀರ್ಥಯಾತ್ರೆ ಹೋಗುತ್ತಾಳೆ. ರಮಾಕಾಂತನ ವಿಧವಾ ವಿವಾಹ ಸುಧಾರಣಾ ಕ್ರಾಂತಿ ಸದ್ದುಗದ್ದಲವಿಲ್ಲದೆ ನಡೆದು ಯಮುನೆಯ ಕಾಯುವಿಕೆಗೆ ಒಂದು ಅರ್ಥಪ್ರಾಪ್ತವಾಗುತ್ತದೆ. ಕಾದಂಬರಿಗೊಂದು ಪ್ರಕಟಿತ ಗೊತ್ತುಗುರಿ ಇಲ್ಲದಿದ್ದರೂ ಬದುಕಿಗೊಂದು ಗೊತ್ತುಗುರಿ ಉಂಟು ತಾನೇ? ಅವು ಈ ರೀತಿ ತಂತಾನೇ ಪ್ರಕಟಗೊಳ್ಳುತ್ತವೆ. ಸರ್ವೋತ್ತಮನ ಹುಡುಕಾಟಗಳಲ್ಲಿ ಹೊಸ ಮೌಲ್ಯಗಳ ಅನ್ವೇಷಣೆ ಪ್ರಕ್ರಿಯೆಯ ಆರಂಭ ಸ್ಪಷ್ಟವಾಗುತ್ತದೆ.
ಕರ್ಷಣ- ಘರ್ಷಣ ಶಕ್ತಿಗಳಿದ್ದರೂ ವಿವೇಕ ಶಾನಭಾಗರ ಭಾಷೆ ಸೊಕ್ಕಿ ಘೀಳಿಡುವುದಿಲ್ಲ. ನಿರೂಪಣೆಯಲ್ಲಿನ ಈ ಕಲಾಸಂಯಮ ವೈಚಾರಿಕತೆ ಮತ್ತು ಬರವಣಿಗೆಯ ಕೌಶಲ ಎರಡರಲ್ಲೂ ವಿವೇಕ ಶಾನಭಾಗರ ಪ್ರಬುದ್ಧ ಬೆಳವಣಿಗೆಯ ಸೂಚಿ. ಉತ್ತರ ಕನ್ನಡದ ನಿಸರ್ಗ ಪರಿಸರ ಮತ್ತು ಜನಜೀವನ ನಡಾವಳಿಗಳು ಕಾದಂಬರಿಯ ಮೂಲಧಾತು ಆಗಿದ್ದುಕೊಂಡೇ ಹೊಸದನ್ನು ಸೃಜಿಸುವ ಶಕ್ತಿಯೂ ಆಗಿವೆ.

ಟಿಎಸ್‌ಐ

ಜಿ.ಎನ್. ರಂಗನಾಥ ರಾವ್

ಕೃತಿಯ ಪುಟಗಳಿಂದ..

 
ಈ ಕ್ರಾಂತಿಕಾರಿ ಸಂಭಾಷಣೆಯಿಂದ ಮತ್ತು ತಿಳಿದ ಹೊಸ ವಿವರಗಳಿಂದ ಪುರಂದರನ ಮನಸ್ಸಿನಲ್ಲಿ ಕೋಲಾಹಲವೇ ಉಂಟಾಯಿತು. ರಮಾಕಾಂತ ತನ್ನಲ್ಲಿ ವಿಶ್ವಾಸ ಇಟ್ಟು ಹೇಳಿದ್ದಕ್ಕೆ ಕಾರಣವೇನಿರಬಹುದು ಎಂದು ಗೊತ್ತಾಗಲಿಲ್ಲ. ಬನಭಂಡಾರಿ ತನ್ನ ಬಗ್ಗೆ ಇಷ್ಟು ಪ್ರಭಾವಶಾಲಿಯಾದ ಕತೆ ಕಟ್ಟಿದನೆಂದು ಅವನಿಗೇ ಆಶ್ಚರ್ಯವಾಯಿತು.
'ಒಂದು ದಿವಸ ಎಲ್ಲರ ಎದೆ ಒಡೆಯುವ ಹಾಗೆ ನಾನು ಅವಳನ್ನು ಮದುವೆಯಾಗುತ್ತೇನೆ ನೋಡುತ್ತಿರು. ಅವಳ ಸುತ್ತ ಇಡೀ ವ್ಯವಸ್ಥೆ ಒಂದು ಕೋಟೆ ಕಟ್ಟಿದೆ. ಅವಳ ಅತ್ತೆಯೂ ಸೇರಿದಂತೆ ಎಲ್ಲರೂ ಕಾವಲು ಕೂತಿದ್ದಾರೆ. ಅವಳ ಜೀವನ ಒಳಗೇ ಕೊಳೆತು ಹೋಗಲಿ ಎಂದು ಇವರ ಬಯಕೆ. ನಾನು ಎಲ್ಲವನ್ನೂ ಕೆಡವಿ ಅವಳನ್ನು ಬಿಡಿಸುತ್ತೇನೆ... ಅಗತ್ಯ ಬಿದ್ದರೆ ನಿನ್ನ ಸಹಾಯ ಕೇಳಲು ಬರುತ್ತೇನೆ. ನಾಲ್ಕು ಜನರ ಮುಂದೆ ನಿಂತು ಇವರು ಮಾಡುತ್ತಿರುವುದು ತಪ್ಪಲ್ಲ ಎಂದು ಸಾರುವ ಧೈರ್ಯವೇ ನೀವೆಲ್ಲ ಮಾಡುವ ಬಹುದೊಡ್ಡ ಸಹಾಯ...' ಎಂದು ರಮಾಕಾಂತ ಹೇಳಿದ. ಏನೂ ತೋಚದೇ ಖಾಲಿಯಾದ ಚಹಾ ಕಪ್ಪನ್ನು ಮತ್ತೆ ತುಟಿಗೆ ಒಯ್ದು ಪುರಂದರ, ಉಳಿದ ಎರಡು ಹನಿಗಳನ್ನು ಗುಟುಕರಿಸಿದ.
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .