ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ವಿಶ್ಲೇಷಣಾ ವರದಿ
ಪ್ರಧಾನಿ ಆದೇಶಕ್ಕ್ಕೂ ಕಿಮ್ಮತ್ತಿಲ್ಲವೇ?
 

ಎರಡು 'ಅಧಿಕೃತ ಪ್ರಕರಣ'ಗಳಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಆದೇಶವನ್ನು ಅವರ ಸಂಪುಟ ಸದಸ್ಯ ಪಿ. ಚಿದಂಬರಂ ಅವರು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಈ ಕುರಿತು ಪ್ರಿಯಾಂಕ ರಾಯ್ ತನಿಖಾ ವರದಿ

ಕಳೆದ ವರ್ಷ ಲೋಕಸಭೆಯ ವಿರೋಧ ಪಕ್ಷದ ನಾಯಕ ಎಲ್.ಕೆ. ಆಡ್ವಾಣಿ ಅವರು ಮನಮೋಹನ್ ಸಿಂಗ್ ಅವರನ್ನು ಭಾರತದ 'ಅತೀ ದುರ್ಬಲ ಪ್ರಧಾನಿ' ಎಂದು ಘೋಷಿಸಿದ್ದರು. ಮನಮೋಹನ್ ಸಿಂಗ್ ಮತ್ತು ಭಾರತ- ಅಮೆರಿಕ ಪರಮಾಣು ಒಪ್ಪಂದದ ಕುರಿತು ಮಾತನಾಡುತ್ತಾ ಅವರು ಈ ಬಿರುದು ನೀಡಿದ್ದರು.
ಅಮೆರಿಕದ ಜೊತೆಗಿನ ಪರಮಾಣು ಒಪ್ಪಂದ ಕುರಿತಂತೆ ಇಕ್ಕಟ್ಟಿನಲ್ಲಿ ಸಿಕ್ಕಿ ಬಿದ್ದಿರುವ ಮನಮೋಹನ್ ಸಿಂಗ್ ಅವರ ದುರವಸ್ಥೆಯನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಆಘಾತಕಾರಿ ವಿಷಯವೆಂದರೆ, ಅಧಿಕಾರಶಾಹಿಗಳು ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳೂ ಪ್ರಧಾನ ಮಂತ್ರಿಯವರ ಅಭಿಪ್ರಾಯದ ಕಡೆಗೆ ಲಕ್ಷ್ಯವೇ ಕೊಡುತ್ತಿಲ್ಲ! ಅವರು ಪ್ರಧಾನಿ ಅವರ ಸಲಹೆಗಳು ಅಥವಾ ಆದೇಶಗಳನ್ನು ಪಾಲಿಸುತ್ತಿಲ್ಲ. ಕೇಂದ್ರ ಸರ್ಕಾರದ ಬಿ ಗ್ರೇಡ್ ನೌಕರರ ವೇತನ ಹೆಚ್ಚಳದಂತಹ ಅತೀ ಪುಟ್ಟ ವಿಷಯಗಳಲ್ಲಿ ಅಥವಾ ಆರೋಪ ಪಟ್ಟಿ ದಾಖಲಿಸಲಾಗಿರುವ ಅಧಿಕಾರಿಗಳ ವರ್ಗಾವಣೆ ಸಂಬಂಧಿಸಿ ವಿಚಾರಣೆ ವಿಷಯದಲ್ಲಿಯೂ ಇದೇ ಧೋರಣೆ ವ್ಯಕ್ತವಾಗಿರುವುದು ವಿಪರ್ಯಾಸ.
ಮೊದಲನೆಯದಾಗಿ ಕೇಂದ್ರ ಆಡಳಿತ ಸೇವೆ ಅಧಿಕಾರಿಗಳ ಪ್ರಕರಣವನ್ನು ಪರಿಶೀಲಿಸೋಣ. ಐದನೇ ವೇತನ ಆಯೋಗದಲ್ಲಿ ತಮಗೆ ಅನ್ಯಾಯವಾಗಿರುವ ಸಂಬಂಧ ಇವರು ಕಳೆದ 90 ತಿಂಗಳಿಂದ (ಅಕ್ಟೋಬರ್ 2000) ಚಳವಳಿ ನಿರತರಾಗಿದ್ದಾರೆ. ಆಡಳಿತ ಸೇವೆಯಲ್ಲಿರುವ ಉದ್ಯೋಗಿಗಳು ಕೇಂದ್ರ ಸರ್ಕಾರದ ಬೆನ್ನೆಲುಬು ಎಂದೇ ಪರಿಗಣಿಸಲಾಗಿದೆ. ಆದರೆ ಈಗ ಇವರೇ ಆಘಾತ, ಭ್ರಮ ನಿರಸನದಲ್ಲಿದ್ದಾರೆ ಮತ್ತು ಆರನೇ ವೇತನ ಆಯೋಗದಲ್ಲಿ ತಮ್ಮನ್ನು 'ನಿಕೃಷ್ಟ'ವಾಗಿ ನಡೆಸಿಕೊಂಡಿರುವುದರಿಂದ ಬೇಸತ್ತು ಚಳವಳಿ ಮುಂದುವರಿಸಿದ್ದಾರೆ. ಪ್ರಧಾನಿ ಕಚೇರಿ ಹಲವು ಬಾರಿ ವೇತನ ಹೆಚ್ಚಳಕ್ಕೆ ಖಚಿತ ಆದೇಶಗಳನ್ನು ಕಳುಹಿಸಿದ ನಂತರವೂ ಈ ದುರವಸ್ಥೆ ಮುಂದುವರಿದಿದೆ!
ವರುಷಗಳಿಂದ, ಕೇಂದ್ರ ಆಡಳಿತ ಸೇವೆ ಆಧಿಕಾರಿಗಳು ತಮ್ಮ ವೇತನ ಹೆಚ್ಚಳಕ್ಕಾಗಿ ಚಳವಳಿ ಹೂಡಿದ್ದಾರೆ ಎಂದು ಮನಮೋಹನ್ ಸಿಂಗ್ ಅವರು ಸಂಸತ್ ಸದಸ್ಯರಿಂದ ಶಿಫಾರಸು ಪತ್ರಗಳನ್ನು ಸ್ವೀಕರಿಸಿದ್ದರು. ಹೀಗಾಗಿ ಜೂನ್ 21, 2006ರಂದು ಪ್ರಧಾನಿ ಅವರು, ಕೇಂದ್ರ ಆಡಳಿತ ಸೇವೆಯಲ್ಲಿರುವ ಸಹಾಯಕ ಅಧಿಕಾರಿಗಳಿಗೆ ಮತ್ತು ಸಮಾನ ದರ್ಜೆಯ ಇತರ ಅಧಿಕಾರಿಗಳಿಗೆ ರೂ. 6500- 10,500ರಷ್ಟು ವೇತನ ನೀಡಿ ಈ ಬಿಕ್ಕಟ್ಟನ್ನು ಪರಿಹರಿಸುವಂತೆ ವಿತ್ತ ಸಚಿವರಿಗೆ ಸೂಚಿಸಿದ್ದರು. "ಕೇಂದ್ರ ಆಡಳಿತ ಸೇವೆಯಲ್ಲಿರುವ ಸಹಾಯಕ ಅಧಿಕಾರಿಗಳಿಗೆ ಮತ್ತು ಸಮಾನ ದರ್ಜೆಯ ಇತರ ಅಧಿಕಾರಿಗಳಿಗೆ ಹೆಚ್ಚುವರಿ ವೇತನವಾದ ರೂ. 6500- 10,500ರಷ್ಟು ನೀಡಿ ಸಮಸ್ಯೆಯನ್ನು ಬಗೆಹರಿಸಿ" ಎಂದು ವಿತ್ತ ಸಚಿವಾಲಯಕ್ಕೆ ಪ್ರಧಾನಿ ಪತ್ರ (ಪಿಎಂಒ ಐ.ಡಿ. ನಂ. 600/54/ಸಿ/1/06- ಇಎಸ್-11) ಬರೆದಿದ್ದರು. ಕೇಂದ್ರ ಅಬಕಾರಿ ಮತ್ತು ಸುಂಕ ಮಂಡಳಿ ಹಾಗೂ ಕೇಂದ್ರ ನೇರ ತೆರಿಗೆ ಮಂಡಳಿಗಳ ನಿರೀಕ್ಷಕರಿಗೆ ಸಮನಾದ ವೇತನವನ್ನು ಪಡೆಯುವ ಕೇಂದ್ರ ಆಡಳಿತ ಸೇವೆಯಲ್ಲಿದ್ದ ಸಹಾಯಕ ಅಧಿಕಾರಿಗಳ ಆಶಯ ಸಮಯೋಚಿತ ಎಂಬುದು ಸಿಂಗ್ ಅವರ ನಿಲುವಾಗಿತ್ತು.
2006ರ ಜುಲೈ 11ರಂದು ವಿತ್ತ ಸಚಿವ ಚಿದಂಬರಂ ಅವರ ಸಮ್ಮತಿ ಮೇರೆಗೆ ವಿತ್ತ ಸಚಿವಾಲಯ ಈ ಆದೇಶ ಜಾರಿಗೆ ತರಲು ನಿರಾಕರಿಸಿತು. "ಅಧಿಕಾರಿಗಳ ವೇತನ ಹೆಚ್ಚಳವನ್ನು ಆರನೇ ವೇತನ ಆಯೋಗ (ಕೇಂದ್ರ ವೇತನ ಆಯೋಗ) ಕೂಲಂಕಷವಾಗಿ ಪರಿಶೀಲಿಸಲಿದೆ. ಪ್ರತಿಯೊಂದು ವರ್ಗದ ಸಿಬ್ಬಂದಿಗಳ ಉದ್ಯೋಗದ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು, ನೇರ ಮತ್ತು ಸಮಾನ ವರ್ಗಗಳ ಅನುರೂಪತೆಯನ್ನು ಪರಿಗಣಿಸಿ ಸಮಗ್ರ ದೃಷ್ಟಿಕೋನದಲ್ಲಿ ವಿಮರ್ಶಿಸಿದ ಬಳಿಕ ವೇತನ ನಿಗದಿ ಮಾಡಲಾಗುವುದು" ಎಂದು ಪ್ರಧಾನಿ ಕಚೇರಿಗೆ ಬರೆದ ವ್ಯಾವಹಾರಿಕ ಪತ್ರದಲ್ಲಿ ವಿತ್ತ ಸಚಿವಾಲಯ ತನ್ನ ನಿರ್ಧಾರ ತಿಳಿಸಿತು.
ಅಂತಿಮವಾಗಿ, 2006ರ ಸೆಪ್ಟೆಂಬರ್ 11ರಂದು ಪ್ರಧಾನಿ ಅವರು ಈ ರಗಳೆಗಳಿಂದ ಬೇಸತ್ತು ಹೋಗಿ, ಅಂತರ್ ಕಚೇರಿ ವ್ಯಾವಹಾರಿಕ ಪತ್ರವೊಂದನ್ನು (ಪಿಎಂಒ ಯುಒ ನಂ. 600/54/ಸಿ/1/06- ಇಎಸ್-11) ಬರೆದರು. "ಕೇಂದ್ರ ಆಡಳಿತ ಸೇವೆಯಲ್ಲಿರುವ ಸಹಾಯಕ ಅಧಿಕಾರಿಗಳಿಗೆ 6500- 10,500 ರವರೆಗೆ ವೇತನ ಹೆಚ್ಚಳ ಮಾಡಲೇಬೇಕಾದ ಅಗತ್ಯವಿರುವ ಪ್ರಕರಣವೊಂದು ಬಂದಿದೆ. ಈ ವೇತನ ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ ಮತ್ತು ಈಗಾಗಲೇ ಈ ಸಂಬಂಧ ವಿತ್ತ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆ. ಈ ವೇತನ ಹೆಚ್ಚಳದಿಂದ ಇತರ ಕೆಲ ಸಮಸ್ಯೆಗಳು ಉದ್ಭವಿಸಬಹುದು. ಅವೆಲ್ಲವನ್ನೂ ವಿತ್ತ ಸಚಿವಾಲಯ ಆರನೇ ವೇತನ ಆಯೋಗದಲ್ಲಿ ಪರಿಗಣಿಸಬಹುದು."
ನಾಲ್ಕೇ ದಿನಗಳಲ್ಲಿ ವಿತ್ತ ಸಚಿವಾಲಯ ಪ್ರಧಾನಿ ಕಚೇರಿಯ ಈ ಹುಕುಂನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿತು. ಸಚಿವಾಲಯವು ಪ್ರಧಾನಿ ಕಚೇರಿಗೆ ಮತ್ತೊಂದು ಪತ್ರ ಬರೆದು, ಕೇಂದ್ರ ಆಡಳಿತ ಸೇವೆಯಲ್ಲಿರುವ ಸಹಾಯಕ ಅಧಿಕಾರಿಗಳ ವೇತನ ಹೆಚ್ಚಳಕ್ಕೆ ಮನ್ನಣೆ ನೀಡಿರುವುದಾಗಿ ತಿಳಿಸಿತು. ಆದರೆ ಜಾರಿಗೆ ತರಲೇ ಇಲ್ಲ. "ಈ ಎರಡು ನಿರ್ದಿಷ್ಟ ಹುದ್ದೆಗಳಿಗೆ ಮಾತ್ರ ಅನ್ವಯವಾಗುವಂತೆ ವೇತನ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿದೆ. ಆದಾಗ್ಯೂ ಈ ಸಂಪೂರ್ಣ ವಿಚಾರವನ್ನು 6ನೇ ಕೇಂದ್ರ ವೇತನ ಆಯೋಗಕ್ಕೆ ಶಿಫಾರಸು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲಿ ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಲಾಗುವುದು" ಎಂದು ಈ ಸಂಬಂಧ ಬರೆದ ಪತ್ರದಲ್ಲಿ ವಿವರಣೆ ನೀಡಿತು.
ಆರನೇ ವೇತನ ಆಯೋಗ ತನ್ನ ವರದಿ ಸಲ್ಲಿಸಿದಾಗ ಕೇಂದ್ರ ಆಡಳಿತ ಸೇವಾ ಅಧಿಕಾರಿಗಳಿಗೆ ಆಶ್ಚರ್ಯವೇ ಕಾದಿತ್ತು. ಅದರ ಶಿಫಾರಸುಗಳಿಗೆ ಅನುಗುಣವಾಗಿ ವಿತ್ತ ಸಚಿವಾಲಯ ಸಹಾಯಕ ಅಧಿಕಾರಿಗಳ ವೇತನವನ್ನು (ಗಜೆಟೆಡ್ ಅಲ್ಲದೆ ಇರುವ ಗ್ರೂಪ್ ಬಿ) ರೂ. 6500- 10,500 ಗಳಿಗೆ ಏರಿಸಿತ್ತು. ಆದರೆ ಈ ಹೊಸ ವೇತನದಲ್ಲಿ ಅವರ ದರ್ಜೆಯನ್ನು ವಿಭಾಗ ಅಧಿಕಾರಿ (ಗ್ರೂಪ್ ಬಿ ಗಜೆಟೆಡ್)ಗಳ ಸಮಕ್ಕೆ ತರಲಾಗಿತ್ತು. ಇದು ಸಹಾಯಕ ಅಧಿಕಾರಿಗಳು ಬಡ್ತಿ ಪಡೆದಾಗ ಪಡೆಯಬಹುದಾದ ವೇತನ! ಫೀಡರ್ ಹುದ್ದೆ (ಸಹಾಯಕ) ಮತ್ತು ಬಡ್ತಿ (ವಿಭಾಗ ಅಧಿಕಾರಿ)ಗಳಿಬ್ಬರಿಗೂ ಸಮಾನ ವೇತನ ನಿಗದಿ ಮಾಡಿ ಪರಸ್ಪರರಲ್ಲಿ ವೈಷಮ್ಯಕ್ಕೆ ನಾಂದಿ ಹಾಡಿತು. ಇದನ್ನೇ ವಿಭಿನ್ನ ಕೋನದಿಂದ ಪರಿಶೀಲಿಸಿದಲ್ಲಿ ಆರನೇ ವೇತನ ಆಯೋಗ ಆಡಳಿತ ಸೇವೆಯ ಗ್ರೂಪ್ ಬಿ ಅಧಿಕಾರಿಗಳ ವೇತನ ದರ್ಜೆಯನ್ನು ಇಳಿಸಿತ್ತು. ಸಮರ್ಥನೆ: ವೇತನ ಹೆಚ್ಚಳದ ಬೇಡಿಕೆಯನ್ವಯ ಅದು ಗ್ರೂಪ್ ಬಿ ಮತ್ತು ಗ್ರೂಪ್ ಸಿ ಅಧಿಕಾರಿಗಳ ವೇತನವನ್ನು ವಿಲೀನಗೊಳಿಸಿತ್ತು! ಹೀಗಾಗಿ ಈಗ ಗ್ರೂಪ್ ಸಿ ಸರ್ಕಾರಿ ಅಧಿಕಾರಿಗಳು ಗ್ರೂಪ್ ಬಿಯಲ್ಲಿರುವ ತಮ್ಮ ಹಿರಿಯ ಅಧಿಕಾರಿಗಳ ಸಮಕ್ಕೆ ಅಂದರೆ ರೂ. 6500- 10,500ರಷ್ಟು ವೇತನ ಪಡೆಯುತ್ತಾರೆ. "ನಿರಂತರವಾಗಿ ಕೇಂದ್ರ ಆಡಳಿತ ಸೇವೆಯನ್ನು ಗುರಿಯಾಗಿಸಿ ನಿರ್ಧಾರ ಕೈಗೊಳ್ಳಲಾಗುತ್ತಿದೆ. ನಮ್ಮನ್ನು ಅವಮಾನಿಸಲಾಗಿದೆ. ಪ್ರಧಾನಿಯವರ ನಿರ್ಧಾರ ಮತ್ತು ವೇತನ ಪುನರ್ವಿಮರ್ಶೆಯಲ್ಲಿ ಆಗಿದ್ದ ಅನುಕೂಲವನ್ನೆಲ್ಲಾ ಈ ಒಂದು ನಿರ್ಧಾರದಿಂದ ಶೂನ್ಯವಾಗಿಸಲಾಗಿದೆ" ಎನ್ನುತ್ತಾರೆ ಕೇಂದ್ರ ಆಡಳಿತ ಸೇವಾ ಸಿಬ್ಬಂದಿ ಒಕ್ಕೂಟದ ಸಂಚಾಲಕ ಡಿ.ಎನ್. ಸಾಹೂ.
ಇದೇ ರೀತಿ ಭಾರತೀಯ ವರಮಾನ ಇಲಾಖೆಯಲ್ಲೂ ಪ್ರಧಾನಿ ಕಚೇರಿ/ ಪ್ರಧಾನಿ ಅವರ ಆದೇಶ ಮತ್ತು ನಿರ್ದೇಶನಗಳನ್ನು ನಿರಾಕರಿಸಲಾಗಿದೆ. ಮೊದಲು ವಿತ್ತ ಸಚಿವಾಲಯದಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಮನೋಹರ ಜೋಶಿ (ಭಾರತೀಯ ವರಮಾನ ಇಲಾಖೆಯ 1982 ಬ್ಯಾಚ್ ಅಧಿಕಾರಿ) ಪ್ರಕರಣವಿದು. ನಂತರ ಅವರು ಐದನೇ ವೇತನ ಆಯೋಗದ ಅನುಷ್ಠಾನ ವಿಭಾಗ (ವಿತ್ತ ಸಚಿವಾಲಯದ ಆಯವ್ಯಯ ಇಲಾಖೆ ಅಡಿ)ದಲ್ಲಿ ಕಾರ್ಯ ನಿರ್ವಹಿಸಿದ್ದರು. ಸದ್ಯ ಕಳೆದ 13 ವರ್ಷಗಳಿಂದ ಕೇಂದ್ರದಲ್ಲಿ ಬದಲಿ (ಡೆಪ್ಯುಟೇಶನ್) ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ನಿಯಮಗಳ ಸಂಪೂರ್ಣ ಉಲ್ಲಂಘನೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಸುಳಿವೇ ನೀಡದೆ ಹಲವು ಬಾರಿ ಜೋಶಿ ಅವರ ಕಾರ್ಯಾವಧಿ ವಿಸ್ತರಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಜೋಶಿ ಅವರ ಮೇಲೆ ಪ್ರಕರಣ ದಾಖಲಾಗಿದ್ದರೂ ಸಹ ಈ ಅವಧಿ ವಿಸ್ತರಣೆ ನಡೆದಿದೆ.
2007ರ ಮೇ 31ರಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ವಿತ್ತ ಸಚಿವಾಲಯಕ್ಕೆ ಒಂದು ಪತ್ರ ಬರೆದಿತ್ತು. ಪ್ರಧಾನಮಂತ್ರಿಯ ಆದೇಶದ ಮೇರೆಗೆ ಈಗ 6ನೇ ವೇತನ ಆಯೋಗದಲ್ಲಿ ಬದಲಿ ಅಧಿಕಾರಿಯಾಗಿ ಕರಾರಿನನ್ವಯ ಕಾರ್ಯ ನಿರ್ವಹಿಸುತ್ತಿರುವ ಮನೋಹರ ಜೋಶಿ (ಐಆರ್‌ಎಸ್: 87) ಅವರ ಸೇವೆಯನ್ನು ಮಾತೃ ಇಲಾಖೆಗೆ ವರ್ಗಾಯಿಸಬೇಕು. ಕೇಂದ್ರ ನೇರ ತೆರಿಗೆ ಮಂಡಳಿ 2007ರ ಮೇ 31ರಂದು ತಕ್ಷಣವೇ ಜಾರಿಗೆ ಬರುವಂತೆ ಈ ಆದೇಶ ಪಾಲಿಸಬೇಕು. ಆದರೆ ಈ ಆದೇಶದ ಪಾಲನೆಯಾಗಲೇ ಇಲ್ಲ.
ಈಗ ನಾರ್ತ್ ಬ್ಲಾಕ್‌ನಲ್ಲಿ ಕೇಳಿಬರುತ್ತಿರುವ ಊಹಾಪೋಹಗಳನ್ನು ನಂಬಬಹುದಾದಲ್ಲಿ ಜೋಶಿ ಅವರನ್ನು ಮತ್ತೆ ಇಲಾಖೆಗೆ ವರ್ಗಾಯಿಸುವ ಸಾಧ್ಯತೆ ಇದೆ. ಆದರೆ ಆರೋಪ ಎದುರಿಸುತ್ತಿರುವ ಒಬ್ಬ ವ್ಯಕ್ತಿಗೆ ಸಿಗಬೇಕಾದ ಸಹಜ ನ್ಯಾಯ ಕುರಿತ ನಿಯಮಾವಳಿಗೆ ಇದು ವಿರುದ್ಧ. ತನ್ನ ಕೃತ್ಯಗಳಿಗೆ ತಾನೇ ನ್ಯಾಯ ಪಡಕೊಂಡಂತಾಗುತ್ತದೆ! ಪ್ರಧಾನಿ ಕಚೇರಿ ಮತ್ತು ಪ್ರಧಾನಿ ಏನು ಹೇಳುತ್ತಾರೆ ಎಂದು ಕಿವಿ ಕೊಡಲು ಯಾರಾದರೂ ಇದ್ದಾರೆಯೆ?

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .