ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 
ಇತರ ವಿಭಾಗಗಳು
 
ಚಿಲುಮೆ
'ರಿಸ್ಕ್ ರೇಟಿಂಗ್' ನ ಮೂಲವೆಲ್ಲಿ?
 
ರಾಜಕೀಯಕ್ಕೂ, ಬಂಡವಾಳ ಹೂಡಿಕೆಗೂ ಎತ್ತಣಿಂದೆತ್ತ ಸಂಬಂಧವಯ್ಯಾ!
Prasoon
ಪ್ರಸೂನ್ ಮಜುಂದಾರ್
ವಾಣಿಜ್ಯ ಸಂಪಾದಕ
ದ ಸಂಡೆ ಇಂಡಿಯನ್

ರಾಜಕೀಯ ಬಿಕ್ಕಟ್ಟು ಮತ್ತು ಅತ್ಯಲ್ಪ ಬಂಡವಾಳ ಹೂಡಿಕೆ ಪರಿಸ್ಥಿತಿಯ ನಡುವಿನ ಸಂಬಂಧವೇನು? ಬಹ್ರೇನ್‌ನ ಪ್ರಮುಖ ಬ್ಯಾಂಕ್ ಒಂದರ ಸಂಶೋಧನಾ ಮುಖ್ಯಸ್ಥರನ್ನು ಇತ್ತೀಚೆಗೆ ಭೇಟಿಯಾಗಿದ್ದಾಗ ಈ ವಿಚಿತ್ರ ಪ್ರಶ್ನೆಯನ್ನು ಎದುರಿಸಬೇಕಾಯಿತು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಹೊರಗೇ ನೆಲೆ ಕಂಡುಕೊಂಡಿರುವ ವಿಶ್ವಮಾನ್ಯ ' ರೇಟಿಂಗ್ ಏಜೆನ್ಸಿ' ಗಳು ಬಂಡವಾಳ ಹೂಡಿಕೆಗೆ ಸೂಡಾನ್ ತಕ್ಕ ದೇಶವಲ್ಲ ಎಂದು ಅದೇಕೆ ಹಿಂದೇಟು ಹಾಕುತ್ತಿವೆ ಎಂದು ಸೂಡಾನ್ ನಿವಾಸಿಯಾದ ಅವರು ಗೊಂದಲಕ್ಕೆ ಬಿದ್ದಿದ್ದರು. ರೇಟಿಂಗ್ ಏಜೆನ್ಸಿಗಳ ಸಿದ್ಧಾಂತವೆಂದರೆ ಯಾವುದೇ ಒಂದು ರಾಷ್ಟ್ರದಲ್ಲಿನ ಬಂಡವಾಳ ಹೂಡಿಕೆ ದರ ನಿರ್ಧರಿಸುವಲ್ಲಿ ರಾಜಕೀಯ ಬಿಕ್ಕಟ್ಟು ಪ್ರಮುಖ ಪಾತ್ರ ವಹಿಸುತ್ತದೆ! ಇದೇ ವಿಷಯದ ಬಗ್ಗೆ ಚರ್ಚಿಸುತ್ತಾ ಹೋದ ಅವರು, ರಾಜಕೀಯ ಬಿಕ್ಕಟ್ಟು ಹಾಗೂ ಬಂಡವಾಳ ಹೂಡಿಕೆ ನಡುವೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ಬಹಳ ಅನುಭವಾತ್ಮಕವಾಗಿ ಹೇಳಿದರು. ರಾಜಕೀಯ ಬಿಕ್ಕಟ್ಟು ಬಂಡವಾಳ ಹೂಡಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದಾದರೆ ಕಳೆದ ಐದಾರು ವರ್ಷಗಳಲ್ಲಿ ಭಾರತೀಯ ಆರ್ಥಿಕತೆ ಈ ಬಗೆಯ ವ್ಯಾಪಕ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಅವರ ವಾದ. ಮಾತುಕತೆ ಮುಗಿದು ಹಿಂತಿರುಗುತ್ತಿದ್ದಾಗ, ಅವರ ವಾದ ನಿಜಕ್ಕೂ ಉತ್ಕೃಷ್ಟವಾದುದು ಎಂದೆನಿಸಿತು. ಅಲ್ಲದೆ, ಒಂದು ನಿರ್ದಿಷ್ಟ ಅವಧಿಯ ಬಳಿಕ ರಾಜಕೀಯ ಬಿಕ್ಕಟ್ಟು ಬಂಡವಾಳ ಹೂಡಿಕೆಯ ಪರಿಸ್ಥಿತಿಯ ಮೇಲೆ ಯಾವುದೇ ಪರಿಣಾಮ ಬೀರಲಾರದು ಎಂಬ ಭಾವನೆ ಬಲವಾಗಿ ಬೆಳೆಯತೊಡಗಿತು!! ನಿಜ ಹೇಳಬೇಕೆಂದರೆ ಇದಕ್ಕೆ ಉತ್ತಮ ಉದಾಹರಣೆಯೂ ಸೂಡಾನ್ ರಾಷ್ಟ್ರವೇ. ಕಳೆದ ಐದು ವರ್ಷಗಳಿಂದ ಸೂಡಾನ್ ಜನಾಂಗೀಯ ಗಲಭೆಗಳಿಂದ ತತ್ತರಿಸಿ ಹೋಗಿದೆ. ಅದರಲ್ಲೂ ಡರ್ಫರ್‌ನ ಪಶ್ಚಿಮ ಭಾಗದ ಪರಿಸ್ಥಿತಿಯಂತೂ ಯಾತನಾದಾಯಕ. ಒಂದು ಅಂದಾಜಿನ ಪ್ರಕಾರ ಈ ಅವಧಿಯಲ್ಲಿ ಸೂಡಾನ್‌ನಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 25 ಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ. ಭವಿಷ್ಯದಲ್ಲಾದರೂ ಈ ಬಿಕ್ಕಟ್ಟು ಶಮನಗೊಳ್ಳಬಹುದು ಎಂಬ ಸೂಚನೆಗಳೂ ಇಲ್ಲ. ಇಂಥ ಮಾರಣ ಹೋಮಕ್ಕೆ, ಬಿಕ್ಕಟ್ಟಿಗೆ ಹಾಗೂ ಸೂಡಾನ್‌ನ ಪ್ರಸ್ತುತ ಪರಿಸ್ಥಿತಿಗೆ ಮೂಲ ಕಾರಣವೇನು ಎಂದು ಜಾಲಾಡುವ ಅವಶ್ಯಕತೆ ಇಲ್ಲಿಲ್ಲ. ಆದರೆ ಅಂಥ ಸಾರ್ವಕಾಲಿಕ ಬಿಕ್ಕಟ್ಟಿನ ನಡುವೆಯೂ ಸೂಡಾನ್ ಆರ್ಥಿಕತೆ ಗಣನೀಯ ಪ್ರಗತಿ ಸಾಧಿಸಿದೆ ಎಂಬುದು ಗಮನಾರ್ಹ! ಕಳೆದ ಎರಡು ವರ್ಷಗಳಲ್ಲಿ ಅಂದರೆ 2006 ಹಾಗೂ 2007ರಲ್ಲಿ ಸೂಡಾನ್ ಆರ್ಥಿಕತೆ ಕ್ರಮವಾಗಿ ಶೇ. 12 ಹಾಗೂ ಶೇ. 11ರಷ್ಟು ಬೆಳವಣಿಗೆ ಕಂಡಿದೆ. (ಇದಕ್ಕೂ ಮುನ್ನ 2005ರಲ್ಲಿ ಶೇ. 7ರಷ್ಟು ಪ್ರಗತಿ; 2003ರಲ್ಲಿ ಶೇ. 6.1ರಷ್ಟು ಪ್ರಗತಿ ಸಾಧಿಸಿತ್ತು. ಅಭಿವೃದ್ಧಿಯ ಹಂತ ಹಂತದ ಬೆಳವಣಿಗೆಯನ್ನು ಗಮನಿಸಿ). ವ್ಯಾಪಾರ ಹಾಗೂ ಬಂಡವಾಳ ಹೂಡಿಕೆ ಜಗತ್ತಿನಾದ್ಯಂತ ಬಿಕ್ಕಟ್ಟಿಗೆ ಕಾರಣವಾಗಿವೆ, ನಿಜ. ಆದರೆ ಅದೇ ವ್ಯಾಪಾರ ಹಾಗೂ ಬಂಡವಾಳ ಹೂಡಿಕೆಯೇ ಬಿಕ್ಕಟ್ಟಿಗೆ ರಾಮಬಾಣ ಎಂಬುದು ಐತಿಹಾಸಿಕ ಸತ್ಯ! ಇತ್ತ ಸೂಡಾನ್ ಬಿಕ್ಕಟ್ಟಿಗೆ ಪ್ರಮುಖ ಕಾರಣ ಬರ. ಸೂಡಾನ್‌ನ ಶೇ. 80ರಷ್ಟು ಮಂದಿಗೆ ಕೃಷಿಯೇ ಉದ್ಯೋಗ ಒದಗಿಸಿಕೊಟ್ಟಿದೆ. ಹೀಗಾಗಿ ಭೀಕರ ಬರದಿಂದಾಗಿ ಲಕ್ಷಾಂತರ ಜನರು ನಿರುದ್ಯೋಗಿಗಳಾಗಿ ಬಿಟ್ಟರು. ರಾಷ್ಟ್ರದ ಒಟ್ಟು ಆದಾಯಕ್ಕೆ ಕೃಷಿಯ ಕಾಣಿಕೆ ಶೇ. ೩೯ರಷ್ಟು. ಹೀಗಾಗಿ ಬರದಿಂದ ಸೂಡಾನ್ ಜಿಡಿಪಿಗೂ ಪೆಟ್ಟು ಬಿದ್ದಿತು. ಇದರ ಜೊತೆಗೆ ಜನಸಂಖ್ಯಾ ಸ್ಫೋಟದ ಸಮಸ್ಯೆ ಸೂಡಾನ್‌ನ್ನು ಬಾಣಲೆಯಿಂದ ಬೆಂಕಿಗೆ ತಳ್ಳಿದೆ. ತಮ್ಮದೇ ಆದ ಶಿಷ್ಟಾಚಾರಗಳು- ವಿಮರ್ಶೆಗಳಿರುವ ಬಹುಪಕ್ಷೀಯ ಹಸ್ತಕ್ಷೇಪಕ್ಕಿಂತ ಹೆಚ್ಚಾಗಿ ಈ ಪ್ರದೇಶ ಹಾಗೂ ಇಲ್ಲಿನ ಜನರನ್ನು ಸಾರ್ವಕಾಲಿಕ ಯಾತನೆಯಿಂದ ಬಿಡುಗಡೆಗೊಳಿಸಲು ಅಗತ್ಯವಾಗಿ ಬೇಕಿರುವುದು ಭಾರೀ ಬಂಡವಾಳ ಹೂಡಿಕೆ. ಈ ದುರದೃಷ್ಟದ ದೇಶದ ಆರ್ಥಿಕತೆ ಎರಡಂಕಿಯ ಪ್ರಗತಿ ಕಾಣುತ್ತಿರುವ ಹೊತ್ತಿನಲ್ಲಿ ಬಂಡವಾಳ ಹೂಡಿಕೆಗೆ ಯಾವುದೇ ಅಡೆತಡೆಗಳು ಎದುರಾಗಬಾರದು. ಆದರೆ, ವಿಪರ್ಯಾಸವೆಂದರೆ ಜಗತ್ತಿನಾದ್ಯಂತ ಬಂಡವಾಳ ಹೂಡಿಕೆದಾರರು ಸೂಡಾನ್ ಎಂದರೆ ಅದೇಕೋ ಮೂಗು ಮುರಿಯುತ್ತಾರೆ. ಕಾರಣ? ಅಂಥ ಭಯದ ಬೀಜವನ್ನು ಬಿತ್ತಿದ್ದು ಸೂಡಾನ್ ದೇಶವನ್ನು 'ರಿಸ್ಕ್ ರೇಟಿಂಗ್' ಪಟ್ಟಿಗೆ ತಳ್ಳಿದ 'ವಿಶ್ವಮಾನ್ಯ' ಸಂಸ್ಥೆಗಳು. ಬಂಡವಾಳ ಹೂಡಿಕೆ ಸಮುದಾಯದ ಆದೇಶವನ್ನು ಶಿರಸಾವಹಿಸಿ ಪಾಲಿಸುವಂತೆಯೇ ಈ ಸಂಸ್ಥೆಗಳು ನಡೆದುಕೊಂಡವು. ಹೀಗಾಗಿ ಆದ್ದರಿಂದ ಪ್ರಸಕ್ತ ಸನ್ನಿವೇಶದಲ್ಲಿ ಬಂಡವಾಳ ಹೂಡಲು ಯಾವುದಾದರೂ ಒಂದು ರಾಷ್ಟ್ರಕ್ಕೆ 'ರಿಸ್ಕ್' ಹಣೆಪಟ್ಟಿ ಇದ್ದರೆ ಅದು ಮಾಧ್ಯಮಗಳ ಸೃಷ್ಟಿಯೋ, ರ್‍ಯಾಂಕಿಂಗ್ ಪಟ್ಟಿ ತಯಾರಿಸುವ ವಿಧಾನವೋ, ರೇಟಿಂಗ್ ಸಂಸ್ಥೆಗಳ ಯೋಜಿತ ಅಪಪ್ರಚಾರವೋ ಆಗಿರುತ್ತದೆಯೇ ವಿನಾ ಮತ್ತೇನೂ ಅಲ್ಲ.

ಐಐಪಿಎಂ
'ಥಿಂಕ್ ಟ್ಯಾಂಕ್'

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .