ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ದಿಗ್ಗಜರ ಮುಖಾಮುಖಿ
 
ಎರಡು ವಿಭಿನ್ನ, ವೈರುಧ್ಯಮಯ ವ್ಯಕ್ತಿತ್ವ
 

ಬ್ಯಾಟಿಂಗ್ ಶೈಲಿ ಮತ್ತು ವ್ಯಕ್ತಿಗತವಾಗಿ ದ್ರಾವಿಡ್ ಹಾಗೂ ಸಚಿನ್ ಇಬ್ಬರೂ ಎರಡು ಧ್ರುವಗಳಿದ್ದಂತೆ

 
ಗೌತಮ್ ಭಿಮಾನಿ

ಖ್ಯಾತ ವೀಕ್ಷಕ ವಿವರಣೆಕಾರ

ಸಚಿನ್ ತೆಂಡೂಲ್ಕರ್ ಅವರಿಗಿಂತ ರಾಹುಲ್ ದ್ರಾವಿಡ್ ಅತ್ಯುತ್ತಮ ಬ್ಯಾಟ್ಸ್‌ಮನ್ ಎನ್ನಬಹುದೇ? ಈ ಪ್ರಶ್ನೆಗೆ ಉತ್ತರ ಹೇಳುವುದು ಅಷ್ಟು ಸುಲಭವಲ್ಲ. ಎರಡು ವಿಭಿನ್ನ ನೆಲೆಯಲ್ಲಿ ಮತ್ತು ವಿಚಿತ್ರ ಸನ್ನಿವೇಶಗಳಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಇವರಿಬ್ಬರನ್ನು ಪರಸ್ಪರ ಹೋಲಿಸಿ ನೋಡುವುದು ಎಷ್ಟು ಸಮಂಜಸ? ಎಂಬ ಪ್ರಶ್ನೆ ಹುಟ್ಟಿದರೂ, ಹಾಗೆ ಮಾಡಬಾರದೆಂದೇನೂ ಇಲ್ಲ. ಕ್ರಿಕೆಟ್ ಮೈದಾನದೊಳಗಿನ ಬ್ಯಾಟಿಂಗ್ ಶೈಲಿ ಮತ್ತು ಮೈದಾನದ ಹೊರಗಿನ ಜೀವನ ಶೈಲಿ ಎರಡರಲ್ಲಿಯೂ ತೆಂಡೂಲ್ಕರ್ ಮತ್ತು ದ್ರಾವಿಡ್ ಭಿನ್ನರಾಗಿದ್ದಾರೆ. ದ್ರಾವಿಡ್ ಎರಡೂ ಕಡೆ ಗಟ್ಟಿಗನಾಗಿ ಕಂಡು ಬಂದರೆ, ತೆಂಡೂಲ್ಕರ್ ಸೊಗಸುಗಾರನಾಗಿ ಕಂಡು ಬರುತ್ತಾರೆ. ಕ್ರಿಕೆಟ್‌ನ ಹೊಸ ಅವಿಷ್ಕಾರವಾದ ಟ್ವೆಂಟಿ-೨೦ ಕ್ರಿಕೆಟ್‌ನ ಫಲವಾಗಿ ಒಟ್ಟಾರೆ ಬ್ಯಾಟಿಂಗ್ ಶೈಲಿಯೇ ಈಗ ಬದಲಾಗಿದೆ. ಹಿಂದಾದರೆ ಕ್ರೀಸ್‌ಗೆ ಅಂಟಿಕೊಂಡು ನಿಂತು ಎದುರು ಪಡೆಯ ಬೌಲರ್‌ಗಳನ್ನು ಹಣ್ಣುಗಾಯಿ-ನೀರುಗಾಯಿ ಮಾಡುವುದು ಶ್ರೇಷ್ಠ ಬ್ಯಾಟಿಂಗ್‌ನ ಒಂದು ಭಾಗ ಎಂದು ಪರಿಗಣಿಸಲಾಗುತ್ತಿತ್ತು. ಈಗಲೂ ಆ ಕಲೆಯನ್ನು ಜೀವಂತವಾಗಿ ಇರಿಸಿಕೊಂಡ ಏಕೈಕ ಕ್ರಿಕೆಟ್ ಕಲಾವಿದ ದ್ರಾವಿಡ್ ಮಾತ್ರ. ಹೆಚ್ಚಿನ ಪಕ್ಷ ಹಾಲಿ ಕ್ರಿಕೆಟ್ ಲೋಕದಲ್ಲಿ ದ್ರಾವಿಡ್ ಅವರಷ್ಟು ಪರಿಣಾಮಕಾರಿಯಾಗಿ ಕ್ರೀಸ್‌ಗೆ ಅಂಟಿ ನಿಲ್ಲುವ, ಇನಿಂಗ್ಸ್‌ಗೆ ಲಂಗರಾಗುವ ಬೇರೊಬ್ಬ ಬ್ಯಾಟ್ಸ್‌ಮನ್ ಇಲ್ಲವೇ ಇಲ್ಲ ಎನ್ನಬಹುದು. ಆದರೆ, ತೆಂಡೂಲ್ಕರ್ ಬಿರುಸಿನ ಹೊಡೆತಕ್ಕೆ ಮುಂದಾಗಿ ವಿಕೆಟ್ ಚೆಲ್ಲುತ್ತಾರೆ ಎಂಬ ಆರೋಪಗಳಿವೆ. ಆ ಕಾರಣದಿಂದಾಗಿಯೇ ಏಕದಿನ ಪಂದ್ಯದಲ್ಲಿ ಮೊತ್ತ ಮೊದಲ ಶತಕಗಳಿಸಲು ತೆಂಡೂಲ್ಕರ್ ಬಹಳ ದಿನ ತೆಗೆದುಕೊಂಡಿದ್ದು. ಯಾವುದೇ ಕ್ರಿಕೆಟ್ ತಂಡ ತೆಗೆದುಕೊಳ್ಳಿ. ಅದರಲ್ಲಿರುವ ಪ್ರತಿಯೊಬ್ಬ ಆಟಗಾರನಿಗೂ ನಿರ್ದಿಷ್ಟ ಪಾತ್ರ ಇರುತ್ತದೆ. ದ್ರಾವಿಡ್ ಮೂಲತಃ ವಿಕೆಟ್‌ಗೆ ಕಚ್ಚಿಕೊಳ್ಳುವ ಲಂಗರಿನ ರೂಪದಲ್ಲಿ ಭಾರತ ತಂಡಕ್ಕೆ ಆಸರೆಯಾಗುವ ಮೂಲಕ ಹಲವಾರು ಟೆಸ್ಟ್‌ಗಳಲ್ಲಿ ಯಶಸ್ಸು ತಂದು ಕೊಟ್ಟಿದ್ದಾರೆ. ಇನ್ನು ಏಕದಿನ ಪಂದ್ಯಗಳಲ್ಲಿ ಒಬ್ಬ ವಿಕೆಟ್ ಕೀಪರ್ ಆಗಿ ಕೂಡ ಅವರು ತಂಡಕ್ಕೆ ಹೆಚ್ಚಿನ ಕಾಣಿಕೆ ನೀಡಿದ್ದಾರೆ. ತೆಂಡೂಲ್ಕರ್ ಬ್ಯಾಟಿಂಗ್ ಜೊತೆ ಒಬ್ಬ ಉಪಯುಕ್ತ ಬೌಲರ್ ಆಗಿ ಕೂಡ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ತೆಂಡೂಲ್ಕರ್ ಒಬ್ಬ ಸೂಪರ್‌ಸ್ಟಾರ್, ಜೀವಂತ ದಂತಕಥೆ. ಆದರೂ, ಅವರು ಆಗಸದಲ್ಲಿ ಹಾರುವ ವ್ಯಕ್ತಿಯಲ್ಲ. ನೀವು ಅವರ ಮನೆಗೆ ಹೋಗಿ ಅವರ ಜೊತೆ ಕೂತು ಆರಾಮವಾಗಿ ಮಾತನಾಡಬಹುದು. ಇದಕ್ಕೆ ತದ್ವಿರುದ್ಧವಾಗಿ ದ್ರಾವಿಡ್ ಮಿತಭಾಷಿ, ಸಂಕೋಚ ಸ್ವಭಾವದ ವ್ಯಕ್ತಿ, ಸದಾ ಗಂಭೀರವದನ ಹಾಗೂ ಅಂತರ್ಮುಖಿ. ಪುಸ್ತಕಗಳನ್ನು ಓದುವ ಗೀಳು ದ್ರಾವಿಡ್‌ಗೆ ಬಹಳಷ್ಟಿದೆ. ಆಳವಾಗಿ ಪುಸ್ತಕಗಳನ್ನು ಅಧ್ಯಯನ ಮಾಡಿದಂತೆಯೇ ದ್ರಾವಿಡ್, ಮೈದಾನದೊಳಗೆ ಕ್ರಿಕೆಟ್ ಆಟವನ್ನು ಕೂಡ ಅಭ್ಯಸಿಸುತ್ತಾರೆ. ದ್ರಾವಿಡ್ ಯಾವುದೇ ಕಾರ್ಯಕ್ಕೆ ಕೈಹಾಕಿದರೂ ಅದನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಸ್ವಭಾವತಃ ದ್ರಾವಿಡ್ ಸಜ್ಜನ ಹಾಗೂ ಅತ್ಯಂತ ಒಳ್ಳೆಯ ವ್ಯಕ್ತಿ. ಆದರೆ, ಅವರು ಇನ್ನಷ್ಟು ತೆರೆದುಕೊಳ್ಳಬೇಕು ಮತ್ತು ಜೊತೆಯಲ್ಲಿನ ಸಹ ಆಟಗಾರರೊಂದಿಗೆ ಇನ್ನಷ್ಟು ಹೆಚ್ಚಾಗಿ ಬೆರೆಯಬೇಕು. ಹೀಗೆ ಇಬ್ಬರಿಗೂ ತದ್ವಿರುದ್ಧ ವ್ಯಕ್ತಿತ್ವಗಳಿದ್ದರೂ, ಇವರ ಪೈಕಿ ಯಾರೊಬ್ಬರನ್ನೂ ಹೆಚ್ಚು ಅಥವಾ ಕಡಿಮೆ ಎಂದು ಹೇಳುವ ಹಾಗಿಲ್ಲ. ಆದರೂ ದ್ರಾವಿಡ್ ಅವರಿಗೆ ತೆಂಡೂಲ್ಕರ್‌ಗಿಲ್ಲದ ಒಂದು ಮಹಾನ್ ಶಕ್ತಿಯಿದೆ. ಅದೇನೆಂದರೆ ತೆಂಡೂಲ್ಕರ್ ಅವರಿಗಿಂತ ದ್ರಾವಿಡ್ ಹೆಚ್ಚಿನ ಕಾಲ ಏಕಾಗ್ರತೆಯಿಂದ ಇರುವ ಸಾಮರ್ಥ್ಯ ಹೊಂದಿದ್ದಾರೆ. ಏಕಾಗ್ರತೆ ಮತ್ತು ತಾಳ್ಮೆಯ ನೆರವಿನಿಂದ ದ್ರಾವಿಡ್ ಕೆಲವು ಇನಿಂಗ್ಸ್‌ಗಳಲ್ಲಿ ತೆಂಡೂಲ್ಕರ್‌ಗಿಂತ ಭಾರಿ ಮೊತ್ತದ ಸ್ಕೋರುಗಳನ್ನು ದಾಖಲಿಸಲು ಯಶಸ್ವಿಯಾಗಿದ್ದಾರೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಅಗತ್ಯವಾದ ಬದಲಾವಣೆಗೆ ಸ್ಪಂದಿಸುವ ಇವರಿಬ್ಬರೂ ತಂಡದ ನಿರೀಕ್ಷೆಗೆ ತಕ್ಕಂತೆ ಸ್ಪಂದಿಸುವ ಅಪೂರ್ವ ಸಾಮರ್ಥ್ಯ ಹೊಂದಿದ್ದಾರೆ. ಕೆಳಗಿನ ಕ್ರಮಾಂಕದವರ ಜೊತೆ ಆಡುವಾಗ ಕೂಡ ದ್ರಾವಿಡ್ ಎಂದೂ ಆಕ್ರಮಣಕಾರಿ ಆಟಕ್ಕೆ ಕೈ ಹಾಕುವುದಿಲ್ಲ. ನನ್ನ ಪ್ರಕಾರ ಇವರಿಬ್ಬರಿಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಆಡುವ ಎಲ್ಲ ಅರ್ಹತೆಗಳು ಇದ್ದವು. ಆದರೂ, ಇವರಿಬ್ಬರು ಕಿರಿಯರಿಗೆ ಹೆಚ್ಚಿನ ಅವಕಾಶ ಮಾಡಿಕೊಡುವ ಸಲುವಾಗಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡದಿರಲು ನಿರ್ಧರಿಸಿದರು. ಇನ್ನು ನಾಯಕತ್ವದ ಕುರಿತಾಗಿ ಹೇಳುವುದಾದರೆ, ಹಲವಾರು ವರ್ಷಗಳಿಂದ ದೇಶವನ್ನು ಪ್ರತಿನಿಧಿಸುತ್ತಿರುವ ಯಾರು ಬೇಕಾದರೂ ಭಾರತ ತಂಡದ ನಾಯಕರಾಗಬಹುದು. ವೈಯಕ್ತಿಕವಾಗಿ ಹೇಳುವುದಾದರೆ ತೆಂಡೂಲ್ಕರ್ ಮತ್ತು ದ್ರಾವಿಡ್ ಇಬ್ಬರೂ ಸ್ಫೂರ್ತಿದಾಯಕ ನಾಯಕರಾಗಿ ಇರಲಿಲ್ಲ. ತಂಡದ ಸಹ ಆಟಗಾರರಿಗೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಮತ್ತು ಮೈದಾನದಲ್ಲಿ ಸ್ಫೂರ್ತಿ ನೀಡಿ ಅದನ್ನೊಂದು ಶಕ್ತಿಯಾಗಿ ಮುನ್ನಡೆಸಿಕೊಂಡು ಹೋಗುವ ಶಕ್ತಿ ಇವರಿಬ್ಬರಿಗೂ ಇರಲಿಲ್ಲ. ಹಾಗೆ ನೋಡಿದಲ್ಲಿ ಅನಿಲ್ ಕುಂಬ್ಳೆ ಇವರಿಬ್ಬರಿಗಿಂತ ಉತ್ತಮ. ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಹೋಗುತ್ತಿರುವಾಗ ಯಾರು ಬೇಕಾದರೂ ಯಶಸ್ವಿ ನಾಯಕನಾಗಬಹುದು. ಶ್ರೀಶಾಂತ್ ಕೂಡ ಭಾರತ ತಂಡದ ನಾಯಕರಾಗಿ ಯಶಸ್ವಿಯಾಗಬಹುದು. ಒಮ್ಮೆ ಎಲ್ಲವೂ ಹದಗೆಡಲು ಆರಂಭವಾದ ಮೇಲೆ ನಾಯಕತ್ವದ ಭಾರ ಎಂತಹುದು ಎಂದು ಎಲ್ಲರಿಗೂ ಅರಿವಾಗುತ್ತದೆ. ತಂಡೂಲ್ಕರ್ ಮತ್ತು ದ್ರಾವಿಡ್ ಇಬ್ಬರೂ ನಾಯಕತ್ವದ ಭಾರಕ್ಕೆ ಉಡುಗಿ ಹೋಗಿ ಈ ಜವಾಬ್ದಾರಿ ಬೇಡ ಎಂದಿದ್ದರು. ಅದೇ ಮಹೇಂದ್ರ ಸಿಂಗ್ ಧೋನಿ ಅವರನ್ನು ನೋಡಿ. ನಾಯಕತ್ವದ ಜವಾಬ್ದಾರಿಯನ್ನು ಅವರು ಸಕಾರಾತ್ಮಕವಾಗಿ ಅನುಭವಿಸುತ್ತಿರುವಂತೆ ಕಾಣುತ್ತಿದೆ. ಈ ನಡುವೆ ನೆನಪಿಡಬೇಕಾದ ಒಂದು ಅಂಶವಿದೆ. ತೆಂಡೂಲ್ಕರ್ ಅಷ್ಟೇನೂ ಪ್ರಬಲವಲ್ಲದ ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ ದ್ರಾವಿಡ್ ಕೈಕೆಳಗೆ ಒಳ್ಳೆಯ ತಂಡವಿತ್ತು. ದ್ರಾವಿಡ್ ನಾಯಕರಾಗಿದ್ದಾಗ ಒದಗಿ ಬಂದ ಫಲಿತಾಂಶಗಳೇ ಇದಕ್ಕೆ ಸಾಕ್ಷಿಯಾಗಿವೆ.

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .