|
ಗೋವಾ ಮತ್ತು ಬ್ರಿಟಿಷ್ ಪ್ರವಾಸಿಗರ ನಡುವೆ ಅವಿನಾಭಾವ ಸಂಬಂಧ ವಿದೆ. ಅಲ್ಲಿನ 2400ಕ್ಕಿಂತಲೂ ಹೆಚ್ಚಿನ ಹೋಟೆಲ್, ಗೆಸ್ಟ್ ಹೌಸ್ ಅಥವಾ ಪೇಯಿಂಗ್ ಗೆಸ್ಟ್ ಹೋಮ್‌ಗಳ ಪೈಕಿ ಒಂದರಲ್ಲಿ ನೆಲೆಯೂರುವ ಈ ಪ್ರವಾಸಿಗರು ಕನಿಷ್ಠ ಒಂದು ವಾರದಷ್ಟು ಕಾಲ ಭಾರತದ ಪಶ್ಚಿಮ ಕರಾವಳಿಯ ದಡದಲ್ಲಿ ಮೋಜು ಮಾಡುತ್ತಾರೆ. ಗೋವಾ ಎಂದರೆ ವಿಶಾಲವಾದ ಕಡಲ ತಡಿಗಳು, ಪ್ರಖರವಾದ ಸೂರ್ಯನ ಬೆಳಕು. ಇಲ್ಲಿ ಈ ಎರಡಕ್ಕೂ ಕೊರತೆಯಿರುವುದಿಲ್ಲ. ಆ ಕಾರಣದಿಂದಲೇ 2003ರಲ್ಲಿ 3,14,357 ವಿದೇಶಿ ಪ್ರವಾಸಿಗರು ಈ ಕಡಲ ತೀರದ ಸ್ವರ್ಗಕ್ಕೆ ಲಗ್ಗೆಯಿಟ್ಟಿದ್ದರು. 2006ರಲ್ಲಿ ಆ ಸಂಖ್ಯೆ 3,80,414ಕ್ಕೆ ಏರಿತ್ತು. ಇದು ಸಂತೋಷದಾಯಕ ಸುದ್ದಿ.
ಇನ್ನು ದುಃಖಕರ ಸುದ್ದಿ ಎಂದರೆ ಈ ಕಡಲ ತಡಿಯಲ್ಲಿ ಸ್ಕಾರ್ಲೆಟ್ ಕೀಲಿಂಗ್ ಅವರಂತೆ ಹಲವಾರು ವಿದೇಶಿ ಪ್ರವಾಸಿಗರು ಅಸಹಜವಾಗಿ ತಮ್ಮ ಜೀವ ಕಳೆದುಕೊಂಡಿದ್ದಾರೆ. ಬ್ರಿಟಿಷ್ ಮೂಲದ 15 ವರ್ಷ ವಯಸ್ಸಿನ ಈ ಬಾಲಕಿಗೆ ಭಾರಿ ಪ್ರಮಾಣದಲ್ಲಿ ಮಾದಕ ವಸ್ತು ನೀಡಿ, ಆಕೆಯ ಮೇಲೆ ಅತ್ಯಾಚಾರ ಮಾಡಿ ನಂತರ ಆಕೆಯನ್ನು ಪ್ರ(ಕು)ಖ್ಯಾತ ಅಂಜುನಾ ತೀರದಲ್ಲಿ ಎಸೆದು ಹೋದ ಘಟನೆ ಕಳೆದ ತಿಂಗಳು ನಡೆದಿತ್ತು. ಆರಂಭದಲ್ಲಿ ಗೋವಾ ಪೊಲೀಸರು ಈ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಕೂಡ ಮಾಡಿದರು. ಕೊನೆಗೆ ಸ್ಕಾರ್ಲೆಟ್ ತಾಯಿ ಎಬ್ಬಿಸಿದ ವಿವಾದದ ಪರಿಣಾಮವಾಗಿ ಎರಡನೇ ಬಾರಿಗೆ ಶವಪರೀಕ್ಷೆಯಾಯಿತು. ಆನಂತರ ಇದನ್ನು ಒಂದು ಅಸಹಜ ಸಾವು ಎಂದು ಪರಿಗಣಿಸಿ, ಅದಕ್ಕೆ ಕಾರಣ ಎನ್ನಲಾದ ಇಬ್ಬರನ್ನು ಬಂಧಿಸಲಾಗಿದೆ.
ಅಧಿಕೃತವಾಗಿ ಹೇಳಬೇಕೆಂದರೆ ಕಳೆದ ವರ್ಷ ಗೋವಾ ಕಡಲ ತೀರದಲ್ಲಿ 61 ವಿದೇಶಿ ಪ್ರವಾಸಿಗರು ಅಸಹಜವಾಗಿ ಮೃತ ಪಟ್ಟಿದ್ದಾರೆ. ಈ ವರ್ಷ ಈಗಾಗಲೇ ಆ ಸಂಖ್ಯೆ 16ನ್ನು ದಾಟಿದೆ. ಹೀಗೆ ಅಸಹಜವಾಗಿ ಇಲ್ಲಿ ಜೀವ ತೆತ್ತಿರುವ ಪ್ರವಾಸಿಗರ ಪೈಕಿ ಮೂರನೇ ಒಂದರಷ್ಟು ಮಂದಿ ಬ್ರಿಟಿಷ್ ಪ್ರವಾಸಿಗರಾಗಿದ್ದಾರೆ. ಪೊಲೀಸರ ಪ್ರಕಾರ ಇಂತಹ ಅಸಹಜ ಸಾವಿಗೆ ಮಾದಕ ದ್ರವ್ಯ ಸೇವನೆಯೇ ಮುಖ್ಯ ಕಾರಣವಾಗಿರುತ್ತದೆ.
ಒಂದು ಕಾಲದಲ್ಲಿ ನಿಸರ್ಗ ಸೌಂದರ್ಯಕ್ಕೆ, ಮನೋಹರ ಕಡಲ ತಡಿಗಳಿಗೆ ಪ್ರಸಿದ್ಧಿಯಾಗಿದ್ದ ಗೋವಾ, ಈಗ ಅಂತರ್ ರಾಷ್ಟ್ರೀಯ ಮಟ್ಟದ ಅಕ್ರಮ ಮಾದಕ ವಸ್ತು ವ್ಯಾಪಾರಿ ಕೇಂದ್ರವಾಗಿ ಪರಿವರ್ತನೆಗೊಂಡಿರುವುದು ವಿಪರ್ಯಾಸ.
ಸ್ಕಾರ್ಲೆಟ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಇನ್‌ಸ್ಪೆಕ್ಟರ್ ಕಿಷನ್ ಕುಮಾರ್, "ಮಾದಕ ವಸ್ತು ವ್ಯಾಪಾರ ಗೋವಾದಲ್ಲಿನ ಬಹುದೊಡ್ಡ ಸಮಸ್ಯೆಯಾಗಿ ಬೆಳೆದು ನಿಂತಿದೆ" ಎಂದು ಹೇಳುತ್ತಾರೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಗೋವಾ ಪೊಲೀಸರು 50 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದು, 8 ಮಂದಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ಆ ಪೈಕಿ ಅರ್ಧದಷ್ಟು ಮಂದಿ ವಿದೇಶಿ ಪ್ರವಾಸಿಗರು ಎನ್ನುವುದು ಗಮನಾರ್ಹ. ಕಳೆದ ವರ್ಷ ಒಟ್ಟು 80 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡು, 30 ಮಂದಿಯನ್ನು ಬಂಧಿಸಲಾಗಿತ್ತು. ಹಷೀಶ್, ಕೊಕೇನ್, ಓಪಿಯಂ ಮತ್ತು ಎಕ್ಟಸಿಯಂತಹ ಮಾದಕ ವಸ್ತುಗಳು ಇಲ್ಲಿನ ಕುಖ್ಯಾತ ಬೀಚ್‌ಗಳಲ್ಲಿ ಅತ್ಯಂತ ಸುಲಭವಾಗಿ ಸಿಗುತ್ತವೆ.
ಮಾದಕ ವಸ್ತು ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂಥ ಮೊಕದ್ದಮೆಗಳನ್ನು ಕೈಗೆತ್ತಿಕೊಳ್ಳುವ ಹೆಸರಾಂತ ವಕೀಲ ಪೀಟರ್ ಡಿಸೋಜ, "ಯುರೋಪ್ ಹಾಗೂ ಜಗತ್ತಿನ ಇತರ ಭಾಗಗಳಿಂದ ಇಲ್ಲಿಗೆ ಮಾದಕ ವಸ್ತುಗಳು ಅಕ್ರಮವಾಗಿ ಹರಿದು ಬರುತ್ತವೆ. ಇದು ಯಾವ ಹಂತವನ್ನು ತಲುಪಿದೆ ಎಂದರೆ ಕೊಲಂಬಿಯಾದಿಂದ ಒಬ್ಬ ವ್ಯಕ್ತಿ ಪಾರ್ಸಲ್ ಮೂಲಕ ಅಂಜುನಾದ ನಿವಾಸಿಯೊಬ್ಬರಿಗೆ ನೇರವಾಗಿ ಮಾದಕ ವಸ್ತು ಕಳುಹಿಸಿದ್ದ. ಕೊನೆಗೆ ಸಂಶಯ ಬಂದು ಆ ಪಾರ್ಸಲ್ ಬಿಚ್ಚಿ ನೋಡಿದಾಗ ಅದರಲ್ಲಿ ಮಾದಕ ವಸ್ತುಗಳು ಇದ್ದದ್ದು ಗಮನಕ್ಕೆ ಬಂತು. ಇಲ್ಲಿನ ವ್ಯಕ್ತಿಯನ್ನು ಬಂಧಿಸಲಾಯಿತು" ಎನ್ನುತ್ತಾರೆ.
ಹತ್ಯೆಯಾಗುವ ಹಿಂದಿನ ರಾತ್ರಿ ಸ್ಕಾರ್ಲೆಟ್ ಕಳೆದ ಕಡಲ ತಡಿಯ 'ಬೀಚ್ ಶ್ಯಾಕ್' ಮಾದಕ ವಸ್ತು ವ್ಯಸನಿಗಳ ಅಚ್ಚು ಮೆಚ್ಚಿನ ತಾಣವಾಗಿತ್ತು ಎಂದು ಪೊಲೀಸರು ಗುಪ್ತವಾಗಿ ಹೇಳುತ್ತಾರೆ. ಹಾಗಿದ್ದರೂ ಅಂತಹ ಕುಖ್ಯಾತ 'ಬೀಚ್ ಶ್ಯಾಕ್' ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದೇಕೆ? ಎಂಬ ಪ್ರಶ್ನೆಗೆ ಗೋವಾ ಪೊಲೀಸರ ಬಳಿ ಉತ್ತರವಿಲ್ಲ. ಗೋವಾ ಕಡಲತಡಿಯಲ್ಲಿ 350ಕ್ಕಿಂತಲೂ ಹೆಚ್ಚು ಪರವಾನಗಿ ಪಡೆದ 'ಬೀಚ್ ಶ್ಯಾಕ್'ಗಳಿದ್ದು ಅವುಗಳಲ್ಲಿ ಆಹಾರ ಮತ್ತು ಮದ್ಯ ಮುಕ್ತವಾಗಿ ಹರಿಯುತ್ತಿರುತ್ತದೆ. ಗೋವಾದ ಕಡಲ ತಡಿಯಲ್ಲಿ ಸ್ಥಾಪನೆಗೊಂಡಿರುವ ಮಾದಕ ಸಾಮ್ರಾಜ್ಯದ ಹಿಂದೆ ಪ್ರಭಾವಿ ರಾಜಕಾರಣಿಗಳ ಕೈವಾಡ ಇದೆ ಎಂದು ಅವರು ಹೇಳುತ್ತಾರೆ. ಈ ಮಾದಕ ಸಾಮ್ರಾಜ್ಯವನ್ನು ಪೂರ್ಣವಾಗಿ ನಾಶ ಮಾಡಿದಲ್ಲಿ ಮಾತ್ರ ಗೋವಾ ಮರ್ಯಾದೆ ಉಳಿಸಬಹುದು.
ಟಿಎಸ್‌ಐ
ಸೌತಿಕ್ ಬಿಸ್ವಾಸ್,
ಬಿಬಿಸಿ ನ್ಯೂಸ್ ಆನ್‌ಲೈನ್ ಸಂಪಾದಕರು |