ಚೀನಾದ ಸರ್ವಾಧಿಕಾರಿ ಧೋರಣೆಗೆ
ತಕ್ಕ ಪಾಠ ಕಲಿಸುವುದು ಅನಿವಾರ್ಯ
ಅರಿಂದಮ್ ಚೌಧುರಿ,
ಪ್ರಧಾನ ಸಂಪಾದಕರು, ದ ಸಂಡೆ ಇಂಡಿಯನ್
ಇನ್ನೇನು ಕೆಲವೇ ತಿಂಗಳಲ್ಲಿ ತನ್ನ ನೆಲದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಮೂಲಕ ಚೀನಾ 21 ಶತಮಾನದ ದೈತ್ಯ ರಾಷ್ಟ್ರವಾಗುವ ತನ್ನ ಸಾಮರ್ಥ್ಯವನ್ನು ಜಗಜ್ಜಾಹೀರು ಮಾಡಲಿದೆ. ಅದೇ ಹೊತ್ತಿಗೆ, ಐದು ಸಾವಿರ ವರ್ಷಗಳ ಪುರಾತನ ಸಂಸ್ಕೃತಿಯ ಹೆಗ್ಗಳಿಕೆಯ ಆ ರಾಷ್ಟ್ರದಲ್ಲಿನ ದಂಡನೆಯ ಪರಿ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳು ಇದೀಗ ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿವೆ. ಇತ್ತೀಚಿನ ವರದಿಗಳ ಪ್ರಕಾರ ಲಾಸಾದಲ್ಲಿ ಸತ್ತವರ ಸಂಖ್ಯೆ 80! ಆದರೆ, ಚೀನಾ ಮಾಧ್ಯಮಗಳು ಆ ಸಂಖ್ಯೆಯನ್ನು 13ಕ್ಕೆ ಮಾತ್ರ ಸೀಮಿತಗೊಳಿಸುತ್ತಿವೆ. ಅಗಾಧ ಆರ್ಥಿಕ ಬೆಳವಣಿಗೆ ಮತ್ತು ಉತ್ಪಾದನೆ ಕ್ಷೇತ್ರದಲ್ಲಿ ಮುಂದುವರಿದ ರಾಷ್ಟ್ರಗಳನ್ನೇ ಹಿಂದಿಕ್ಕಿದ ಆ ರಾಷ್ಟ್ರದ ಮಾಧ್ಯಮಗಳಿಗೂ ಮತ್ತು ಇತರ ಮಾಧ್ಯಮಗಳಿಗೂ ಸತ್ತವರ ಸಂಖ್ಯೆಯನ್ನು ಲೆಕ್ಕ ಹಾಕುವಲ್ಲಿ ಇರುವ ಅಜಗಜಾಂತರ ವ್ಯತ್ಯಾಸ ಮಾತ್ರ ಕುತೂಹಲಕಾರಿ. 'ತಿಯನನ್ಮೆನ್ ಚೌಕ'ದ ದಿನಗಳಿಂದ ಚೀನಾ ಬಹುದೂರ ಸಾಗಿ ಬಂದಿದೆ ಎಂದು ಹೊರ ಪ್ರಪಂಚ ಈವರೆಗೆ ಭಾವಿಸಿತ್ತು. ಹಾಗೇ ಆರ್ಥಿಕ ಪ್ರಬುದ್ಧತೆ ಮತ್ತು ಸಮೃದ್ಧಿ ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಚೀನಾ ಚಕ್ರಾಧಿಪತ್ಯವನ್ನು ಬದಲಿಸಿ, ಮೃದುಗೊಳಿಸಿರಬಹುದೆಂದು ಬಹುತೇಕರು ಭಾವಿಸಿದ್ದರು. ಆದರೆ, ಬಲಪ್ರಯೋಗ ಮತ್ತು ಅಮಾನವೀಯ ದೌರ್ಜನ್ಯಗಳನ್ನು ಎಸಗುತ್ತಿರುವ ಚೀನಾದ ಪರಿ ಕಂಡ ಯಾರಿಗಾದರೂ, ಆರ್ಥಿಕತೆ ಏನೇ ನಾಗಾಲೋಟದಲ್ಲಿದ್ದರೂ ಆ ದೇಶದ ಆಂತರ್ಯದಲ್ಲಿ ಅಂತಹದ್ದೇನೂ ಬದಲಾವಣೆ ಆಗಿಲ್ಲ ಎನಿಸದೇ ಇರದು.
ಟಿಬೆಟ್ ಸಮಸ್ಯೆ ಹೊಸದೇನೂ ಅಲ್ಲ, ದಶಕಗಳಿಂದಲೂ ಟಿಬೆಟ್ ವಾಸಿಗಳು ಮತ್ತು ದೇಶಭ್ರಷ್ಟರಾಗಿ ಭಾರತದಲ್ಲಿರುವ ಟಿಬೆಟಿಯನ್ನರು ಚೀನಾದ ಆಳ್ವಿಕೆಯನ್ನು ವಿರೋಧಿಸುತ್ತಲೇ ಇದ್ದಾರೆ. 50ರ ದಶಕದಲ್ಲಿ ಚೀನಾ ಸೇನೆಯ ಆಕ್ರಮಣದಿಂದಲೇ ಟಿಬೆಟ್‌ನಲ್ಲಿ ಹಾನ್ ಚೀನೀಯ ಕಾಲೊನಿಗಳಿಗೆ ಉತ್ತೇಜನ ಕೊಡುವ ಮೂಲಕ ಜನಾಂಗೀಯ ಪರಿವರ್ತನೆಯ ಪ್ರಯತ್ನಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಇಂತಹದ್ದನ್ನು ಭಾರತ ಎಂದೂ ಮಾಡಿಲ್ಲ. ಕಾಶ್ಮೀರದಲ್ಲಿ ಉಗ್ರಗಾಮಿಗಳ ಅಟ್ಟಹಾಸ ಮೇರೆ ಮೀರಿದ್ದ ಸಂದರ್ಭದಲ್ಲಿ ಕೂಡ ಭಾರತ ಅಲ್ಲಿನ ಕಣಿವೆಗಳಲ್ಲಿ ಜನಾಂಗೀಯ ಪರಿವರ್ತನೆಗೆ ಪ್ರಚೋದನೆ ಮಾಡುವ ಕುತಂತ್ರಗಳನ್ನು ಮಾಡಲಿಲ್ಲ. ತೀರಾ ದೀರ್ಘ ಕಾಲದ ಬಳಿಕವಾದರೂ ಅದು ಕಾಶ್ಮೀರದ ಜನತೆಯಲ್ಲಿ ವಿವಿಧ ಉಗ್ರಗಾಮಿ ಸಂಘಟನೆಗಳ ವಿರುದ್ಧ ಗಟ್ಟಿಯಾದ ಪ್ರತಿರೋಧ ಬೆಳೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಒಬ್ಬ ಸಾಮಾನ್ಯ ಟಿಬೆಟಿಯನ್ನನ ಬದುಕಿನಲ್ಲಿ ಅಂತಹದ್ದೇನೂ ಬದಲಾವಣೆ ಆಗಿಲ್ಲ, ಆತ ತನ್ನದೇ ನಾಡಿನಲ್ಲಿ ಪರಕೀಯನಂತೆ ಬದುಕು ಸಾಗಿಸಬೇಕಾಗಿದೆ ಎಂಬುದಕ್ಕೆ ಅಲ್ಲಿ ಇಂದು ಭುಗಿಲೆದ್ದಿರುವ ದಂಗೆಯೇ ನಿದರ್ಶನ. ಅದು ಚೀನಾ ಹೇಳುವ ಅಭಿವೃದ್ಧಿಯ ಸಮನ್ವಯದ ಮಾತುಗಳ ಸತ್ಯಾಸತ್ಯತೆಗೂ ಕನ್ನಡಿಯಾಗಿದೆ.
1139 ಕಿ.ಮೀ. ಉದ್ದದ ಕಿಂಘೈ ಲಾಸಾ ರೈಲು ಮಾರ್ಗ ಅಭಿವೃದ್ಧಿಯಾಗಿದ್ದರೂ ಅದು ಟಿಬೆಟ್‌ನೊಳಗಿನ ತನ್ನ ಕಬಂಧ ಬಾಹುಗಳನ್ನು ಇನ್ನಷ್ಡು ಬಿಗಿಗೊಳಿಸಿಕೊಳ್ಳುವ ಚೀನಾದ ಮತ್ತೊಂದು ತಂತ್ರವಾಗಿ ಕಾಣುತ್ತದೆಯೇ ವಿನಃ ತಮ್ಮ ಅನುಕೂಲಕ್ಕಾಗಿ ಮಾಡಿದ್ದು ಎಂದು ಟಿಬೆಟ್‌ನ ಜನಸಾಮಾನ್ಯರಿಗೆ ಅನ್ನಿಸಿಯೇ ಇಲ್ಲ. ಅದಕ್ಕಿಂತ ಮುಖ್ಯವಾದ ಸಂಗತಿಯೆಂದರೆ, ಟಿಬೆಟ್‌ನಲ್ಲಿ ಬೌದ್ಧಮತವನ್ನು ನಾಶ ಮಾಡಲು ಚೀನಾ ನಿರಂತರವಾಗಿ ನಡೆಸುತ್ತಿರುವ ಪ್ರಯತ್ನ. ಚೀನಾ ಇಂತಹ ಕೃತ್ಯಗಳಿಗೆ ಇಳಿಯದೇ ಇದ್ದಿದ್ದರೆ ಟಿಬೆಟ್‌ನಲ್ಲಿ ಪರಿಸ್ಥಿತಿ ಇಂದು ಇರುವುದಕ್ಕಿಂತ ತೀರಾ ಭಿನ್ನವಾಗಿರುತ್ತಿತ್ತು.
ಭಾರತದಲ್ಲೂ ಅಲ್ಲಲ್ಲಿ ಪ್ರತ್ಯೇಕತಾವಾದಿ ಹೋರಾಟಗಳು ನಡೆಯುತ್ತಿವೆ. ಆದರೆ, ಅವುಗಳ ವಿರುದ್ಧದ ಜಯಕ್ಕಾಗಿ ಭಾರತ ಎಂದೂ ಯಾವುದೇ ಸಮುದಾಯದ ಧಾರ್ಮಿಕ ನಂಬಿಕೆಯನ್ನು ನಾಶಮಾಡುವ ಕೃತ್ಯಕ್ಕೆ ಕೈ ಹಾಕಿಲ್ಲ. ಇಂತಹ ವಿಷಯದಲ್ಲಿ ಭಾರತ ಮತ್ತು ಅದರ ಬಹುಸಂಸ್ಕೃತಿಯ ಜೀವನ ದೃಷ್ಟಿ ಚೀನಾದ ಸರ್ವಾಧಿಕಾರಿ ಮಾರ್ಗಕ್ಕಿಂತ ಅತ್ಯುತ್ತಮವೆನಿಸುತ್ತದೆ. ಹಾಗೆ ನೋಡಿದರೆ, ಭಾರತದಲ್ಲಿ ನೋವುಂಟುಮಾಡುವ ಅಂತಹ ನಿದರ್ಶನಗಳೇನಾದರೂ ಇದ್ದರೆ ಅದು ಅದೇ ಸರ್ವಾಧಿಕಾರಿ ಧೋರಣೆಯ ಅನುಯಾಯಿಗಳಾದ ಸಿಪಿಐ ಅಧಿಕಾರದಲ್ಲಿರುವ ಪಶ್ಚಿಮ ಬಂಗಾಳದ ನಂದಿಗ್ರಾಮದಂತಹವೇ. ಅಲ್ಲಿ ಕೂಡ ಅಮಾಯಕರನ್ನು ರಾಜ್ಯ ಸರ್ಕಾರವೇ ಬಲಪ್ರಯೋಗದ ಮೂಲಕ ಬಾಯಿ ಮುಚ್ಚಿಸಿತು.
ಚೀನಾದ ಸರ್ವಾಧಿಕಾರದ ಹುಚ್ಚು ಟಿಬೆಟ್ ವಿಷಯಕ್ಕೆ ಮಾತ್ರ ಸೀಮಿತವಾಗಿಲ್ಲ. ತೈವಾನ್ ಜನತೆಯನ್ನು 'ಪಳಗಿಸುವ' ಅವರ ಧೋರಣೆ ಕೂಡ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ದಶಕಗಳಿಂದಲೂ ತೈವಾನ್ ಜನತೆ ಚೀನಾ ಸೇನೆಯ ಒಂದಲ್ಲಾ ಒಂದು ಬಗೆಯ ಆಕ್ರಮಣದ ಆತಂಕದಲ್ಲೇ ಬದುಕುತ್ತಿದ್ದಾರೆ. ಕಳೆದ ಹಲವು ದಶಕಗಳಲ್ಲಿ ಆರ್ಥಿಕ ಶಕ್ತಿಯಾಗಿ ಮತ್ತು ಅತ್ಯಂತ ಹೆಚ್ಚಿನ ತಲಾ ಆದಾಯ ಹೊಂದಿರುವ ರಾಷ್ಟ್ರವಾಗಿ ತೈವಾನ್ ಸಾಧನೆ ಚೀನಾದ ಯಾವ ಬಗೆಯ ನೆರವೂ ಇಲ್ಲದೇನೇ ಆಗಿರುವಂತಹದ್ದು. ಆದರೂ ಸಾಮಾನ್ಯ ತೈವಾನ್ ನಿವಾಸಿಯೊಬ್ಬ ಇಂದಿಗೂ ಟಿಬೆಟ್‌ನ ಜನತೆ ಎದುರಿಸಿದ ಭಯಂಕರ ಭವಿಷ್ಯದ ಭೀತಿಯಲ್ಲೇ ಕಾಲ ಕಳೆಯುತ್ತಿದ್ದಾರೆ.
ಯಾವುದೇ ವ್ಯಕ್ತಿಗೆ ಯಾವುದೇ ಬಗೆಯ ರಿಯಾಯ್ತಿಯನ್ನೂ ನೀಡದ ಚೀನಾದ ಸರ್ವಾಧಿಕಾರಿ ಧೋರಣೆ ಎಂಬುದು ಎಷ್ಟ್ರು ಸಾಧ್ಯವೋ ಅಷ್ಟು ಕ್ರೂರತೆಗೆ ತಲುಪಿಬಿಟ್ಟಿದೆ. ಹಾಗಾಗಿ ಚೀನಾದ ನೆಲದೊಳಗಿನ ಜನರ ಸ್ಥಿತಿ ಕೂಡ ಟಿಬೆಟಿಯನ್ನರಿಗಿಂತ ಭಿನ್ನವಾಗೇನೂ ಇಲ್ಲ. ಕಾರ್ಮಿಕರ ಶೋಷಣೆ ಎಂಬುದು ಈಗಲೂ ರಾಜಾರೋಷವಾಗಿ ನಡೆಯುತ್ತಲೇ ಇದೆ, ಎಲ್ಲವನ್ನೂ ಒತ್ತೆ ಇಟ್ಟು ವಿದೇಶಿ ವಿನಿಯಮ ಗಳಿಸುವುದಕ್ಕಾಗಿ ಎಸ್‌ಇಝಡ್‌ಗಳು ತಲೆ ಎತ್ತಿವೆ. ಆರ್ಥಿಕ ಪ್ರಾಬಲ್ಯ ಸಾಧಿಸುವ ಹುಚ್ಚು ಹಿಡಿಸಿಕೊಂಡಿರುವ ಆ ದೇಶ ತನ್ನ ಅಗತ್ಯಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಆಫ್ರಿಕಾದ ಕೆಲವು ಸರ್ವಾಧಿಕಾರಿ ತೈಲ ರಾಷ್ಟಗಳೊಂದಿಗೂ ಕೈಜೋಡಿಸಿದೆ. ಸೂಡಾನ್, ಚಾಡ್, ಸೊಮಾಲಿಯಾಗಳಿಗೆ ತೈಲ ಸರಬರಾಜಿಗೆ ಪ್ರತಿಯಾಗಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದೆ ಎಂಬುದು ಗುಟ್ಟಾಗೇನೂ ಉಳಿದಿಲ್ಲ. ಈಗಿನ ಪ್ರಶ್ನೆಯೆಂದರೆ ಇದೆಲ್ಲಾ ಯಾವ ಅತಿಗೆ ಹೋಗಲಿದೆ? ಇದರಿಂದೆಲ್ಲಾ ಚೀನಾವಾಗಲೀ, ಇಡೀ ಜಗತ್ತಾಗಲಿ ಏನನ್ನೂ ತಾನೆ ಸಾಧಿಸುವುದು ಸಾಧ್ಯ? ತಮ್ಮ ಅಭಿವೃದ್ಧಿಯೊಂದಿಗೆ ಮಾನವೀಯತೆಯನ್ನೂ ಜೊತೆಗೊಯ್ಯುವ ಪಾಠ ಕಲಿಯಲು ಚೀನಾಕ್ಕೆ ಇದು ಸಕಾಲ. ಆಗ ಮಾತ್ರ ಅವರ ಬೆಳವಣಿಗೆ, ಅಭಿವೃದ್ಧಿಗಳಿಗೆ ಅರ್ಥ ಬರುತ್ತದೆ ಎಂಬುದನ್ನೂ ಅವರು ಅರಿಯಬೇಕಾಗಿದೆ.
ಇದೆಲ್ಲದರ ನಡುವೆ ಇಹಾಸದಲ್ಲಿನ ಗೂಂಡಾಗಿರಿಯಷ್ಟೇ ಅಲ್ಲದೆ, ತನ್ನ ರಾಯಭಾರಿಗೆ ನಡುರಾತ್ರಿಯಲ್ಲಿ ನೋಟಿಸ್ ನೀಡಿದ ಚೀನಾದ ವಿರುದ್ಧ ದನಿ ಎತ್ತಬೇಕಾದ ಭಾರತ ಈಗಲೂ ನೀರಸ ಪ್ರತಿಕ್ರಿಯೆ ನೀಡುತ್ತಿರುವುದು ವಿಚಿತ್ರವಾಗಿದೆ. ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರ ಮತ್ತು ಪ್ರತಿಭಟನಾನಿರತ ಪ್ರಜೆಗಳನ್ನು ಇಲ್ಲಿ ಅಮಾನವೀಯವಾಗಿ ಹತ್ಯೆ ಮಾಡಲಾಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಚೀನಾ ಎಡವಿದೆ. ಆದರೆ, ಅಂತಹ ಚೀನಾದ ಉದ್ಧಟತನಕ್ಕೆ ತಕ್ಕ ಪ್ರತ್ಯುತ್ತರ ಕೊಡುವ ಛಾತಿ ತೋರದೇ ಇರುವ ಭಾರತದ ಧೋರಣೆ ಖಂಡಿತವಾಗಿಯೂ ಒಪ್ಪುವಂತಹದ್ದಲ್ಲ. ಕೆಲವು ಯುರೋಪಿಯನ್ ರಾಷ್ಟ್ರಗಳು ಟಿಬೆಟ್ ಹಿಂಸಾಚಾರವನ್ನು ಖಂಡಿಸಿ ಚೀನಾದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನ್ನು ಬಹಿಷ್ಕರಿಸುವುದಾಗಿ ಹೇಳಿವೆ. ೮೦ರ ದಶಕದಲ್ಲಿ ತಮ್ಮ- ತಮ್ಮ ಒಕ್ಕೂಟಗಳ ಆಧಾರದ ಮೇಲೆ ಕ್ರೀಡೆಯಲ್ಲಿ ಭಾಗವಹಿಸುವುದೇ ಬೇಡವೇ ಎಂದು ನಿರ್ಧರಿಸಿ ಅರ್ಧಕ್ಕರ್ಧ ದೇಶಗಳು ಕ್ರೀಡಾಕೂಟದಿಂದ ದೂರವೇ ಉಳಿಯುತ್ತಿದ್ದ ದಿನಗಳನ್ನು ಈ ಹೇಳಿಕೆಗಳು ನೆನಪಿಸುತ್ತವೆ. ಆದರೂ, ನಿಷ್ಕರುಣೆಯ, ಹೃದಯಹೀನ ಮತ್ತು ನಿರಂಕುಶ ಸರ್ವಾಧಿಕಾರಿ ಧೋರಣೆಯಿಂದ ಮೆರೆಯುತ್ತಿರುವ ಚೀನಾಕ್ಕೆ ಬುದ್ಧಿ ಕಲಿಸಲು ಅದಕ್ಕಿಂತ ಭೇರೆ ಉಪಾಯ ಸದ್ಯಕ್ಕೆ ಬೇರೆ ಇಲ್ಲ!