ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಬಿಚ್ಚು ಮಾತು
ಮೋಹಕ ಕಂಗಳ ಮಾದಕ ನಟಿ ಬಿಪಾಶಾ ಅಂತರಂಗ
 

'ಮಾರ್ಜಾಲ ನಡಿಗೆ'ಯಲ್ಲಿ ಸೈ ಎನಿಸಿಕೊಂಡ ಕೆಲವೇ ದಿನಗಳಲ್ಲಿ ಬಾಲಿವುಡ್ ಲೋಕಕ್ಕೂ ಕಿಚ್ಚು ಹೊತ್ತಿಸಿದ ಕೃಷ್ಣ ಸುಂದರಿಯ ಜೊತೆ ಪ್ರಸಿದ್ಧ ಮೆನನ್ ಮಾತುಕತೆ

ನಿಮ್ಮ ಮನೆಯಲ್ಲಿ ಹುಡುಗಿಯರದೇ ಸಾಮ್ರಾಜ್ಯ. ಆ ವಾತಾವರಣದಲ್ಲಿ ಬೆಳೆದ ಅನುಭವ?

ಅದ್ಭುತ! ಏನೋ ಕಳೆದುಕೊಂಡ ಭಾವ ನಮ್ಮನ್ನು ಎಂದೂ ಕಾಡಲಿಲ್ಲ. ಮನೆಯಲ್ಲೂ ನಮಗೆ ಯಾವುದೇ ಕಟ್ಟುಪಾಡುಗಳಿರಲಿಲ್ಲ, ಸಾಕಷ್ಟು ಸ್ವಾತಂತ್ರ್ಯವಿತ್ತು. ಹೆತ್ತವರಿಗೆ ಗಂಡು ಮಕ್ಕಳ ಕೊರಗು ಎಂದಿಗೂ ಬಾಧಿಸಲಿಲ್ಲ. ಇನ್ನು ನನ್ನ ಬಾಲ್ಯದ ಬಗ್ಗೆ ಬರೀ ಮಾತುಗಳಿಂದ ವಿವರಿಸಲಾಗದು. ಇಬ್ಬರು ಸಹೋದರಿಯರೊಂದಿಗೆ ಆನಂದದಿಂದ ಬೆಳೆದ ನನಗೆ ಸೋದರರಿಲ್ಲದ ನೋವು ಕಾಡಿಲ್ಲ. ಕಾಡುವುದೂ ಇಲ್ಲ.

ವೈದ್ಯಳಾಗುವ ಯೋಜನೆ ಹಾಕಿದ್ದಿರಿ. ನಂತರ ಚಾರ್ಟಡ್ ಅಕೌಂಟೆಂಟ್ ಮಾಡಬೇಕೆಂದಿದ್ದಿರಿ. ಹಾಗಿದ್ದರೂ ರೂಪದರ್ಶಿಯಾದದ್ದು ಹೇಗೆ?

ಜೀವನವೊಂದು ಹುಚ್ಚು ಹೊಳೆ. ವಿಧಿಬರಹ ಏನಿರುತ್ತದೆಯೋ... ಹೌದು, ನನಗೆ ವೈದ್ಯಳಾಗುವ ಕನಸಿತ್ತು. ಆದರೆ ರಜಾದಿನದಲ್ಲಿ ನಾನು 'ಫೋರ್ಡ್ ಸೂಪರ್ ಮಾಡೆಲ್' ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಅದರಲ್ಲಿ ಗೆದ್ದೆ. ಗೆಲ್ಲಲು ತಕ್ಕ ತಯಾರಿಯನ್ನೂ ನಾ ಮಾಡಿರಲಿಲ್ಲ! ನಂತರ ಅಂತರ್ ರಾಷ್ಟ್ರೀಯ ವೇದಿಕೆಯಲ್ಲಿ ಸ್ಪರ್ಧಿಸುವ ಅವಕಾಶ ಒದಗಿ ಬಂತು. ಅಲ್ಲಿ ತೃತೀಯ ಸ್ಥಾನ ಪಡೆದೆ. ಹೀಗಾಗಿ ಫೋರ್ಡ್ ಏಜೆನ್ಸಿಯ ರೂಪದರ್ಶಿಯಾದೆ. ಆದರೆ ಭಾರತಕ್ಕೆ ಹಿಂದಿರುಗಿ ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡ ನಂತರ ನಾನು ವೃತ್ತಿಯ ನಿಜ ಆನಂದ ಅನುಭವಿಸಿದ್ದು. ಆ ವೃತ್ತಿ ಬದುಕು, ಅದಕ್ಕಾಗಿ ಪ್ರಯಾಣ... ಹೀಗೆ ಚಿಕ್ಕ ವಯಸ್ಸಿನಲ್ಲೇ ಸ್ವಾವಲಂಬಿ ಜೀವನದ ನಿಜ ಅರ್ಥ ಕಂಡುಕೊಂಡೆ. ಅದೃಷ್ಟದಿಂದ ದೊರೆತ ಆ ಬದುಕು ನಿಜಕ್ಕೂ ನನ್ನ ಸರ್ವಸ್ವವೇ ಆಗಿತ್ತು. ವಿಜ್ಞಾನ ವಿದ್ಯಾರ್ಥಿಯಾಗಿದ್ದ ನನಗೆ ವಾಣಿಜ್ಯದಲ್ಲಿ ಆಸಕ್ತಿ ಇರಲಿಲ್ಲ. ಆದರೂ ಮುಕ್ತ ವಿಶ್ವವಿದ್ಯಾಲಯದಲ್ಲಿ 'ವಾಣಿಜ್ಯ ವಿಷಯ' ಕಲಿಯಬೇಕೆಂದಿದ್ದೆ. ಆದರೆ ಕೆಲಸಗಳ ನಡುವೆ ಪದವಿ ಮುಗಿಸಲಾಗಲೇ ಇಲ್ಲ.

ಮಾಡೆಲಿಂಗ್‌ನಲ್ಲಿ ಸಾಧನೆ ಮಾಡಿದ್ದರೂ ನಟನೆಯನ್ನೇ ನೆಚ್ಚಿಕೊಂಡದ್ದೇಕೆ?

ನಿಜ ಹೇಳಬೇಕೆಂದರೆ ನನ್ನ ಜೀವನದಲ್ಲಿ ಯಾವುದೂ ಪೂರ್ವ ಯೋಜಿತವಾಗಿ ನಡೆದಿಲ್ಲ. ನಿಧಾನವಾಗಿ ಮಾಡೆಲಿಂಗ್ ಕ್ಷೇತ್ರದ ಏಕತಾನತೆ ಸಾಕಾಗಿತ್ತು. ಅದೇ ರ್‍ಯಾಂಪ್‌ಗಳಲ್ಲಿ ಮತ್ತೆ ಮತ್ತೆ ಭಾಗವಹಿಸುತ್ತಾ ಕಾಲ ಕಳೆಯುವ ಆಸಕ್ತಿಯೂ ಇರಲಿಲ್ಲ. ಕಾಲೇಜಿಗೆ ಮರಳಬೇಕು ಎಂಬ ಬಯಕೆಯೂ ಇತ್ತು. ಹಾಗೇ ರೆಸ್ಟೊರೆಂಟ್ ಆರಂಭಿಸಲೂ ಯೋಚಿಸಿದ್ದೆ. ಆದರೆ ಆ ಸಂದರ್ಭದಲ್ಲಿ 'ಅಜ್‌ನಬೀ' ಚಿತ್ರ ನನಗೆ ಬ್ರೇಕ್ ನೀಡಿತೆಂದೇ ಹೇಳಬಹುದು. ಅದು ಒಂದು ವಿಭಿನ್ನ ಅವಕಾಶವಾಗಿತ್ತು. ಗಂಡುಬೀರಿ ಪಾತ್ರ. ಸಾಮಾನ್ಯ 'ನೆರೆಮನೆ ಹುಡುಗಿ' ವರ್ಚಸ್ಸಿನಿಂದ ಭಿನ್ನ. ಹಾಗಾಗಿ ಅದನ್ನು ಒಪ್ಪಿಕೊಂಡೆ. ಎರಡನೇ ಚಿತ್ರ ಒಪ್ಪಿಕೊಂಡ ಮೇಲೆ ನಟನಾ ಕ್ಷೇತ್ರದತ್ತ ಆಸಕ್ತಿ ಚಿಗುರೊಡೆಯಿತು. ಆ ಬಳಿಕ ನಟನೆಯೇ ಜೀವನ ಮಂತ್ರವಾಯಿತು.

ನಿಮ್ಮ ಮೊದಲ ಚಿತ್ರ ಅಬ್ಬಾಸ್ ಮುಸ್ತಾನ್ ಅವರ ಜೊತೆಗಿತ್ತು. ಈಗ 'ರೇಸ್' ಬಿಡುಗಡೆಯಾಗಿದೆ. ಆ ಚಿತ್ರದ ಕುರಿತು...

ರೇಸ್! ಅಬ್ಬಾಸ್ ಮುಸ್ತಾನ್ ಬಗ್ಗೆ ಹೇಳಬೇಕೆಂದರೆ ಅವರೊಬ್ಬ ವಿನಯಶೀಲ, ಒಣಜಂಭವಿಲ್ಲದ ಪ್ರಾಮಾಣಿಕ ವ್ಯಕ್ತಿ. ಅವರು ಕಥೆಯನ್ನು ತೆರೆಯ ಮೇಲೆ ಭಿನ್ನವಾಗಿ ನಿರೂಪಿಸುತ್ತಾರೆ. ಸನ್ನಿವೇಶಕ್ಕೆ ಪೂರಕವಾದ ಸಂವೇದನಾಶೀಲತೆ ಅವರಲ್ಲಿದೆ. ಪ್ರತಿ ದೃಶ್ಯವನ್ನೂ ಅತ್ಯದ್ಭುತ ಮಾದರಿಯಲ್ಲಿ ಚಿತ್ರೀಕರಿಸುವ ಅವರು, ಆಧುನಿಕ ಚಿತ್ರ ನಿರ್ಮಾಣ ತಂತ್ರಗಾರಿಕೆ ಅರಿತಿದ್ದಾರೆ. 'ರೇಸ್' ಚಿತ್ರದ ಸ್ಕ್ರೀನ್ ಪ್ಲೇ ಬಗ್ಗೆ ಎರಡು ಮಾತೇ ಇಲ್ಲ, ಅಷ್ಟೇ ಮನಸೆಳೆವ ಕಥೆಯೂ ಹೌದು. ಚಿತ್ರದ ಸಂಗೀತವೂ ಆಕರ್ಷಕವಾಗಿದ್ದು, ತಾರಾಗಣದ ಆಯ್ಕೆಯಲ್ಲೂ ತಾಜಾತನವಿದೆ. ಇನ್ನು ಮೂಲತಃ ಉತ್ತಮ ನಟರಾಗಿರುವ ಅವರೊಂದಿಗೆ ಕೆಲಸ ಮಾಡುವುದೇ ಒಂದು ಅದ್ಭುತ ಅನುಭವ.

ಸದ್ಯ ಬಾಲಿವುಡ್‌ನಲ್ಲಿ ಅತ್ಯುತ್ತಮ ತಾರಾಮೌಲ್ಯವಿರುವ ನಟಿ ನೀವು. ನೀವು ತಾರೆ ಎಂದು ಕರೆಸಿಕೊಳ್ಳಬಯಸುವಿರೋ ಅಥವಾ ನಟಿಯೋ? ಎಂಥ ಪಾತ್ರವನ್ನು ಹೆಚ್ಚು ಇಷ್ಟಪಡುವಿರಿ; ವಾಸ್ತವವನ್ನು ಬಿಂಬಿಸುವ 'ಕಾರ್ಪೊರೇಟ್' ಚಿತ್ರದ ಪಾತ್ರ ಅಥವಾ 'ನೋ ಎಂಟ್ರಿ'ಯ ಹಾಸ್ಯ ನಟನೆ?

ಎರಡರ ಮಿಶ್ರಣ ಇದ್ದರೆ ಚೆನ್ನ. ಬರೀ ವಾಸ್ತವಿಕ ಚಿತ್ರಗಳಲ್ಲಿ ನಟಿಸುತ್ತಾ ಕುಳಿತರೆ ಜನರಿಗೆ ಬೋರ್ ಹೊಡೆಸುವುದು ಗ್ಯಾರಂಟಿ. ಒಬ್ಬ ನಟಿ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿದಾಗಲೇ ಪರಿಪೂರ್ಣತೆ ಸಿಗುವುದು. ಅದೇ ನಮ್ಮ ವೃತ್ತಿ ಬದುಕಿನ ಮನಮೋಹಕ ಮಜಲು. ವಾಸ್ತವ ಬದುಕಿನಿಂದ ದೂರವಿರುವ ಕಲ್ಪಿತ ಭ್ರಮಾ ಚಿತ್ರಗಳೇ ಬಾಲಿವುಡ್‌ನಲ್ಲಿ ತುಂಬಿವೆ. ಅವು ನಿಜವಾಗಿಯೂ ವಾಸ್ತವಿಕ ಚಿತ್ರಗಳಿಗಿಂತ ಹೆಚ್ಚು ಸವಾಲು ಒಡ್ಡುವಂಥದ್ದು. ಆದ್ದರಿಂದ 'ನೋ ಎಂಟ್ರಿ' ಚಿತ್ರದ ಪಾತ್ರ ವಾಸ್ತವಿಕ ಪಾತ್ರಗಳಿಗಿಂತಲೂ ದೊಡ್ಡ ಸವಾಲಾಗಿತ್ತು. ಇದರ ಜೊತೆಗೆ ನಮ್ಮ ಪ್ರಯೋಗಗಳನ್ನೆಲ್ಲಾ ವೀಕ್ಷಿಸಲು ತುದಿಗಾಲಲ್ಲಿ ನಿಂತಿರುವ ಪ್ರೇಕ್ಷಕರು ಜೊತೆಗಿದ್ದಲ್ಲಿ ಮಾರುಕಟ್ಟೆ ಬೆಂಬಲವೂ ಇರುತ್ತದೆ. ಹಾಗಾಗಿ ಎರಡೂ ಅಂಶಗಳ ಮಿಶ್ರಣವಿದ್ದರೆ ಚೆನ್ನ ಎಂದು ನಾನು ಭಾವಿಸುತ್ತೇನೆ.

ಒಬ್ಬ ತಾರೆಯಾಗಿ ಬಾಲಿವುಡ್‌ಗೆ ಕಾಲಿಟ್ಟಿರಿ. ನಿಮ್ಮನ್ನು 'ಮಾದಕ ನಟಿ' ಎಂದು ಪರಿಗಣಿಸಿದ್ದಿದೆ. ಈಗ ನಿಮ್ಮನ್ನು ಮಾದಕತೆ ಮತ್ತು ತಾರಾ ವರ್ಚಸ್ಸಿನ ನಟಿ ಎರಡರ ಸಂಯೋಜನೆ ಎಂದು ಬಣ್ಣಿಸಲಾಗುತ್ತಿದೆ. ಪ್ರೇಕ್ಷಕರನ್ನು ಹುಚ್ಚೆಬ್ಬಿಸುವಂತಹ ಪಾತ್ರಗಳನ್ನು ನಿರ್ವಹಿಸಿ ಬಾಲಿವುಡ್‌ನಲ್ಲಿ ನಿಮ್ಮದೇ ಆದ ಛಾಪು ಮೂಡಿಸುವ ಉದ್ದೇಶವೆ?

'ಅಜ್‌ನಬೀ'ಯಲ್ಲಿ ನನ್ನದು ಅದೇ ರೀತಿಯ ಪಾತ್ರ. ಪ್ರೇಕ್ಷಕರಿಗೆ ಹೊಸತನ ನೀಡುವ ಉದ್ದೇಶದಿಂದ ನಾನು ಆ ಪಾತ್ರ ಮಾಡಿದ್ದೆ ಹಾಗೂ ಅದಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಒಬ್ಬ ನಟಿ ಆಗಬೇಕೆಂದೇ ನಾನು ಆ ಪ್ರಯತ್ನ ಮಾಡಿರಲಿಲ್ಲ. ಮಾಡೆಲಿಂಗ್ ಕ್ಷೇತ್ರ ನಿಜಕ್ಕೂ ಬೇಸರ ತಂದಿದ್ದರಿಂದ ಸಂತೃಪ್ತಿಗಾಗಿ ಆ ಪ್ರಯತ್ನ ಮಾಡಿದ್ದೆ. ಆ ಬಳಿಕ 'ಜಿಸ್ಮ್' ನಲ್ಲಿ ನಟಿಸಿದೆ. ಅತ್ಯುತ್ತಮ ಕಥಾ ನಿರೂಪಣೆ ಇದ್ದ ಆ ಚಿತ್ರದ ಮಾದಕ ಪಾತ್ರವನ್ನು ಆಗಿನ ಬಾಲಿವುಡ್ ತಾರೆಯರು ಒಪ್ಪಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಆದರೆ ಆ ಪಾತ್ರ ನಿರ್ವಹಣೆ ಮಾತ್ರ ಅತ್ಯಂತ ಕಷ್ಟವಾಗಿತ್ತು. ಅದಕ್ಕೇ ನಾನು ಅದನ್ನು ಒಪ್ಪಿದೆ.

ರೂಪದರ್ಶಿಗಳಿಗೆ ನಟನೆ ಬಾರದು ಎನ್ನುವುದಕ್ಕೆ ನೀವು ವ್ಯತಿರಿಕ್ತ...

ಇಂಥ ಅಭಿಪ್ರಾಯಗಳನ್ನು ನಾನು ಸಾಕಷ್ಟು ಬಾರಿ ಕೇಳಿದ್ದೇನೆ. ನಾನು ನಟನಾ ವೃತ್ತಿಗೆ ಕಾಲಿಟ್ಟ ಆರಂಭದ ದಿನಗಳಲ್ಲಿ ಮಾಡೆಲ್‌ಗಳ ನಟನೆಯಲ್ಲಿ ಭಾವಶೂನ್ಯತೆ ಎದ್ದು ಕಾಣುತ್ತದೆ ಎಂಬ ಆರೋಪವಿತ್ತು. ಆದರೆ ಪ್ರತಿ ವ್ಯಕ್ತಿಯಲ್ಲೂ ವಿಭಿನ್ನ ಪ್ರತಿಭೆ ಇದ್ದೇ ಇರುತ್ತದೆ ಎಂದು ನಂಬಿದವಳು ನಾನು. ಆ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಲ್ಲಿ ಖಂಡಿತಾ ನಟಿಯಾಗುವುದು ಅಸಾಧ್ಯವಲ್ಲ. ಎಲ್ಲಾ ಸಂದರ್ಭದಲ್ಲೂ ಚೆಂದವಾಗಿ ಕಾಣಲೇಬೇಕು ಎಂಬುದು ಸರಿಯಲ್ಲ. ಕೆಲ ಬಾರಿ ನೊಂದುಕೊಳ್ಳಬೇಕು, ಅಳಬೇಕು ಮತ್ತು ಕಿರುಚಬೇಕು. ಪ್ರತಿ ಬಾರಿಯೂ ಅಂದವಾಗಿ ಕಾಣುವುದು ಸಾಧ್ಯವೇ ಇಲ್ಲ. ನೀವೊಬ್ಬ ಸಾಧಾರಣ ರೂಪಿನವರಾಗಿದ್ದರೂ ಸಾಕು, ನಟಿಯಾಗಬಹುದು. ಆದರೆ ನನಗೆ ಬಾಲಿವುಡ್ ತಾರೆ ಅಥವಾ ನಟಿ ಎಂದು ಕರೆಸಿಕೊಳ್ಳುವ ಆ ಎಲ್ಲಾ ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವ ಆಶಯಗಳೇನೂ ಇರಲಿಲ್ಲ. ಹಾಗಾಗಿ ಹೇಗೆ ಕಾಣುತ್ತೇನೆ ಎನ್ನುವ ಚಿಂತೆ ನನ್ನನ್ನು ಕಾಡಲೇ ಇಲ್ಲ.

ರಿಯಲ್ ಬಿಪಾಶ ಕುರಿತು...

ನಾನು ಸಾಮಾನ್ಯಳೇ. ಹೆತ್ತವರು ನನಗೆ ಅಚ್ಚುಮೆಚ್ಚು. ನೀವು ಹೇಗೆ ನಿಮ್ಮ ಹೆತ್ತವರನ್ನು ಪ್ರೀತಿಸುತ್ತೀರೋ, ಅವರೊಂದಿಗೆ ಹೇಗೆ ಕಾಲ ಕಳೆಯುತ್ತೀರೋ, ನಾನೂ ಹಾಗೆಯೇ ಇರುವೆ. ನಿಮ್ಮಂತೆಯೇ ಆಪ್ತ ಸ್ನೇಹಿತರೊಂದಿಗೆ ಸಮಯ ಕಳೆಯ ಬಯಸುವೆ, ಸಂತೋಷದಿಂದಿರುವೆ. ಎಲ್ಲಾ ಸಾಮಾನ್ಯ ಯುವತಿಯ ರಂತೆಯೇ ನಾನೂ ಇದ್ದೇನೆ. ನಟಿಯಾದ ಮಾತ್ರಕ್ಕೆ ಜೀವನ ಬದಲಾಗದು. ಹೌದು, ಕುಟುಂಬದೊಡನೆ ಕಳೆಯಲು ಸಮಯವೇ ಉಳಿಯದು. ಆದರೆ ಸಾಧ್ಯವಾದಷ್ಟು ಅವರ ಜೊತೆಗಿರಲು ಪ್ರಯತ್ನಿಸುತ್ತೇನೆ.

ತೆರೆ ಮೇಲಿನ ವರ್ಚಸ್ಸಿನ ಬಗ್ಗೆ ಕುಟುಂಬದ ಪ್ರತಿಕ್ರಿಯೆ?

ನನ್ನ ಬಗ್ಗೆ ಹೆಮ್ಮೆ ಪಡುತ್ತಾರೆ. ನಾನು ಸ್ವಪ್ರಯತ್ನದಿಂದ ಚಿಕ್ಕ ವಯಸ್ಸಿನಲ್ಲಿ ವೃತ್ತಿ ಬದುಕಿಗೆ ಕಾಲಿಟ್ಟಿದ್ದೆನಾದರೂ ಹೊಣೆಯರಿತು ನಡೆಯುವ ಯುವತಿ ಎನ್ನುವುದನ್ನು ಅವರು ಬಲ್ಲರು. ಅಭಿಮಾನಿಗಳು, ಮಾಧ್ಯಮಗಳು ನನ್ನನ್ನು ಗೌರವಿಸುವಾಗ ಅವರಿಗೂ ಖುಷಿಯಾಗುತ್ತದೆ. ಯಾರ ಸಹಾಯವನ್ನೂ ಬಯಸದೆ ಅಥವಾ ಜೀವನದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೆ ನಾನು ಈ ಪ್ರಸಿದ್ಧಿ, ಸ್ಥಾನಮಾನ ಪಡೆದಿರುವೆ. ಇದಕ್ಕಾಗಿ ಅವರಿಗೆ ನನ್ನ ಬಗ್ಗೆ ಹೆಮ್ಮೆ ಇದೆ.

ಜಗತ್ತು ನಿಮ್ಮ ಕೆಲಸವನ್ನು ಹೇಗೆ ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಪ್ರತಿಕ್ರಿಯಿಸಬೇಕು?

ನೆನಪಿನಲ್ಲಿಟ್ಟುಕೊಂಡರೆ ಸಂತೋಷ. ಇಲ್ಲದಿದ್ದರೂ ಪರವಾಗಿಲ್ಲ. ಆದರ್ಶ ನಾರಿ ಎನಿಸಿಕೊಳ್ಳುವ ಹಂಬಲ ನನಗಿಲ್ಲ. ಆದರೆ ಒಬ್ಬ ವ್ಯಕ್ತಿಯ ಹೃದಯವನ್ನು ಕ್ಷಣ ಮಾತ್ರ ಸ್ಪರ್ಶಿಸಬಲ್ಲೆನೆಂದಾದರೆ ಅಷ್ಟು ಸಾಕೆನಗೆ.

ಖಾಸಗಿ ಬದುಕಿನ ಬಗ್ಗೆ 'ವಿವೇಚನೆಯುಳ್ಳ ಮೌನ' ಪಾಲಿಸದ ನೀವು ಅನಗತ್ಯ ವಿವಾದಗಳಿಂದ ತಪ್ಪಿಸಿಕೊಳ್ಳಬಲ್ಲಿರೇನು?

ನಿಜಕ್ಕೂ ನಾನೊಬ್ಬ ಮೂರ್ಖಳೇ ಸರಿ. ನಾನದನ್ನು ಒಪ್ಪಿಕೊಳ್ಳುವೆ. ನೀವು ಏನೇ ಮಾಡಿ, ಮಾಡದಿರಿ. ನಿಮ್ಮ ಖಾಸಗಿ ಬದುಕಿನ ಬಗ್ಗೆ ತನಿಖೆ ಮತ್ತು ಟೀಕೆಯನ್ನು ತಡೆಯುವುದು ಸಾಧ್ಯವೇ ಇಲ್ಲ. ಅದಕ್ಕೆ ನೀವು ತುಟಿಬಿಚ್ಚಲೇಬೇಕು ಎಂದೇನಿಲ್ಲ. ಈ ಕ್ಷೇತ್ರಕ್ಕೆ ಬಂದ ಮೇಲೆ ಇದೆಲ್ಲಾ ಸಹಜ ಅಷ್ಟೆ. ಹೀಗಾಗಿ ನಾನು ಯಾವುದರಿಂದಲೂ ತಪ್ಪಿಸಿಕೊಂಡಿಲ್ಲ. ನಾನು ಆ ಟೀಕಾಪ್ರಹಾರದ ಬೇಗೆಯಲ್ಲಿ ನಲುಗಿರುವೆ. ಇತರ ನಟಿಯರಿಗಿಂತ ಭಿನ್ನವಾಗಿ ನಡೆದುಕೊಂಡಿದ್ದರೂ ಏನೂ ಲಾಭವಾಗಿಲ್ಲ. ನನ್ನ ಬಗ್ಗೆ ಲೆಕ್ಕವಿಲ್ಲದಷ್ಟು ಬರಹಗಳು ಬಂದಿವೆ. ಈಗ ನಾನು ಅದಕ್ಕೆಲ್ಲಾ ಹೊಂದಿಕೊಂಡಿರುವೆ.

ಆದರೂ ನೀವು ನಿಮ್ಮ ಖಾಸಗಿ ಬದುಕನ್ನು ಪ್ರಚಾರದ ಅಲೆಯಲ್ಲಿ ಇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೀರಿ. ಇದು ಪ್ರಜ್ಞಾಪೂರ್ವಕ ತೆಗೆದುಕೊಂಡ ನಿರ್ಧಾರವೆ?

ಇಲ್ಲವೇ ಇಲ್ಲ. ಪ್ರಚಾರದಿಂದ ದೂರ ಸರಿದು ಕೊಳ್ಳಬೇಕೆಂದಾಗ ಮೌನ ವಹಿಸಿದ್ದಿದೆ. ನಾವೇನು ಮಾಡಿದ್ದೇವೆ ಎಂದು ಜನರಿಗೆ ವಿವರಿಸಿ ಹೇಳಲು ಅಭಿಯಾನಗಳಲ್ಲಿ ಭಾಗವಹಿಸಬೇಕು, ಮಾಧ್ಯಮಗಳಿಗೆ ಉತ್ತರಿಸಬೇಕು, ಸಂದರ್ಶನ ನೀಡಬೇಕು... ಆಗಲೇ ಮನದ ಮಾತನ್ನು ಬಿಚ್ಚಿಡಲು ಅವಕಾಶ ಸಿಗುವುದು. ಆದರೆ ಚಿತ್ರೀಕರಣ ಸಂದರ್ಭದಲ್ಲಿ ಪ್ರಯಾಣದಲ್ಲೇ ಕಾಲ ಕಳೆದು ಹೋಗುತ್ತದೆ. ಮಾತನಾಡಲು ಅವಕಾಶ ಸಿಗದು. ಕೆಲಸ ಒಪ್ಪಿಕೊಂಡ ಮೇಲೆ ಕೆಲಸದತ್ತಲೇ ಗಮನ ಹರಿಸಬೇಕು. ಅದೇ ನನ್ನ ಮಾತು-ಮೌನಗಳ ನಡುವಿನ ವ್ಯತ್ಯಾಸ.

ನಿಮಗಿಷ್ಟವಾದ ಚಿತ್ರ ಮತ್ತು ಪಾತ್ರ ಯಾವುದು? ಹಾಗೆಯೇ ಇಷ್ಟವಾಗದ ಪಾತ್ರ, ಅಂದರೆ ಒಪ್ಪಿಕೊಂಡದ್ದಕ್ಕೆ ಪಶ್ಚಾತ್ತಾಪ ಪಟ್ಟ ಚಿತ್ರ ಅಥವಾ ಪಾತ್ರ...

ನನಗೆ ನನ್ನೆಲ್ಲಾ ಚಿತ್ರಗಳೂ ಇಷ್ಟವೇ. ಇತರರಿಗೆ ಅದು ಕೆಟ್ಟ ಅಥವಾ ಒಳ್ಳೇ ಚಿತ್ರಗಳೇ ಆಗಿರಬಹುದು. ನಾನು ನನ್ನ ಎಲ್ಲಾ ಸಹನಟರ ಪರಿಶ್ರಮಕ್ಕೆ ಬೆಲೆ ಕೊಡುತ್ತೇನೆ. ಕ್ಯಾಮರಾ ತಂಡದವರಿಂದ ತೊಡಗಿ ನಿರ್ದೇಶಕರ ವಿಭಾಗ, ನೀರಿನಂತೆ ಹಣ ತೆತ್ತ ನಿರ್ಮಾಪಕರು... ಎಲ್ಲರ ಶ್ರಮವೂ ಇದೆ. ಇತರರಂತೆ ನಾನು ನನ್ನ ಚಿತ್ರವನ್ನು ಕೆಟ್ಟದಾಗಿ ವಿಮರ್ಶಿಸುವುದು ಸಾಧ್ಯವೇ ಇಲ್ಲ.

ಇತ್ತೀಚೆಗೆ ನೀವು ನೋಡಿದ ಅತ್ಯುತ್ತಮ ಚಿತ್ರ?

'ತಾರೇ ಜಮೀನ್ ಪರ್' ಮತ್ತು 'ಅಮೆರಿಕನ್ ಗ್ಯಾಂಗ್‌ಸ್ಟರ್' ಚಿತ್ರಗಳು ಖುಷಿ ನೀಡಿವೆ.

ಉದ್ಯಮದಲ್ಲಿ ಅಚ್ಚುಮೆಚ್ಚು?

ಇಲ್ಲಿ ಅಸಂಖ್ಯ ಪ್ರತಿಭಾನ್ವಿತರಿದ್ದಾರೆ. ನನಗೆ ಅಮಿತಾಬ್ ಬಚ್ಚನ್ ತುಂಬಾ ಇಷ್ಟ. ಈಗ ನಟಿಸುತ್ತಿರುವ ಚಿತ್ರಗಳ ಸಹನಟರ ಜೊತೆ ಕೆಲಸ ಮಾಡುವುದು ತೃಪ್ತಿ ನೀಡಿದೆ. ಸೈಫ್ ಅಲಿ ಖಾನ್, ಅಕ್ಷಯ್ ಖನ್ನಾ, ಸಂಜಯ್ ದತ್, ಅಜಯ್ ದೇವಗನ್ ಮತ್ತು ಅಕ್ಷಯ್ ಕುಮಾರ್... ನನ್ನೆಲ್ಲಾ ಸಹನಟರ ಜೊತೆ ಕೆಲಸ ಮಾಡುವಾಗ ಸಂತೋಷದಿಂದ ಸಮಯ ಕಳೆದಿದ್ದೇನೆ.

ನಿಮ್ಮ ಮದುವೆ ಬೇಗನೆ ನಡೆಯುವ ಸೂಚನೆ ಏನಾದರೂ...

ಇಂಥ ವಿಷಯದಲ್ಲೆಲ್ಲಾ ಯಾಕೆ ತಲೆ ಕೆಡಿಸಿಕೊಳ್ಳಬೇಕು? ವಿವಾಹಿತರಿಂದ ನಾನು ಸಲಹೆ ಪಡೆಯುತ್ತಲೇ ಇರುವೆ. ಅವರೆಲ್ಲಾ ನನಗೆ 'ಮದುವೆಯಾಗಬೇಡ' ಎಂದೇ ಹೇಳುತ್ತಾರೆ. ಹೀಗಾಗಿ ಸದ್ಯಕ್ಕೆ ಮದುವೆಯ ಚಿಂತೆ ಇಲ್ಲ.

ನಿಮ್ಮ ವೃತ್ತಿ ಜೀವನದ ಉಚ್ಛ್ರಾಯ ಸ್ಥಿತಿಯಲ್ಲಿ ಜಾನ್ ಅಬ್ರಾಹಾಂ ಜೊತೆ 'ಡೇಟಿಂಗ್' ಆರಂಭಿಸಿದ್ದಿರಿ. ಆದರೆ ಜಾನ್ ಆಗಷ್ಟೇ ವೃತ್ತಿ ಬದುಕಿಗೆ ಕಾಲಿಟ್ಟಿದ್ದರು. ನಮ್ಮ ಸಮಾಜದ ಸಂಕೀರ್ಣತೆಯಿಂದ ಸಮಸ್ಯೆಗಳು ಎದುರಾಗಿವೆಯೆ?

ಪ್ರತಿ ಸಂಬಂಧದಲ್ಲೂ ಏರಿಳಿತಗಳು ಇದ್ದೇ ಇವೆ. ನೀವು ಸಾಮಾನ್ಯ ವ್ಯಕ್ತಿಯಾಗಿದ್ದಲ್ಲಿ, ಸಾಮಾನ್ಯ ವ್ಯಕ್ತಿ ಎದುರಿಸುವ ಸಮಸ್ಯೆಗಳನ್ನು ಎದುರಿಸಬೇಕು. ಇದೂ ಹಾಗೆಯೇ. ಅದಕ್ಕಿಂತ ಹೆಚ್ಚಲ್ಲ. ನೀವು ಇದನ್ನೆಲ್ಲಾ ಹೇಗೆ ನಿಭಾಯಿಸುತ್ತೀರಿ, ಎಷ್ಟು ವರ್ಷಗಳವರೆಗೆ ನಿಭಾಯಿಸಬಲ್ಲಿರಿ ಎಂಬುದನ್ನು ಅನುಸರಿಸಿದೆ ಮತ್ತು ಅಂತಿಮವಾಗಿ ನಿಮ್ಮ ಗೆಳೆತನ ಇನ್ನೂ ಪಕ್ವವಾಗುತ್ತದೆ.

ಇತ್ತೀಚೆಗೆ ಇನ್ನೂ ಅದ್ಭುತವಾಗಿ ಕಾಣಿಸುತ್ತಿದ್ದೀರಿ. ಮೈಕಟ್ಟು ಕಾಪಾಡಿಕೊಳ್ಳಲು ಹೆಚ್ಚು ಪರಿಶ್ರಮ ಹಾಕುತ್ತಿದ್ದೀರಿ? ಇದಕ್ಕೆ ಜಾನ್ ಪ್ರೇರಣೆ ಇದೆಯೆ?

ಸಾಮಾನ್ಯ ವ್ಯಾಯಾಮವನ್ನೇ ಮಾಡುವೆ. ವಾರಕ್ಕೆ ಆರು ಬಾರಿ. ಒಂದು ಅಥವಾ ಅರ್ಧಗಂಟೆ ಕಾಲ. ನನಗೆ ಎಷ್ಟು ಸಮಯ ಸಿಗುತ್ತದೆ ಎನ್ನುವುದನ್ನು ಅನುಸರಿಸಿ.... ಎಲ್ಲಕ್ಕಿಂತ ಹೆಚ್ಚಾಗಿ ನನಗೆ ವ್ಯಾಯಾಮ ಮಾಡುವುದು ಬಹಳ ಇಷ್ಟ. ನನಗೆ ಶಿಸ್ತಿನ ಆಹಾರ ಅಭ್ಯಾಸವಿಲ್ಲ. ಹೀಗಾಗಿ ಕಸರತ್ತು ಮಾಡಲೇಬೇಕು. ಆದರೆ ಜಾನ್ ಪ್ರೇರಣೆ ಏನೂ ಇಲ್ಲ. ಅವನು ಎಲ್ಲಾ ಕ್ರೆಡಿಟ್ ತಗೋತಾನೆ. ನಿಜ ಹೇಳಬೇಕೆಂದರೆ ಆತ ನಾನು ದಪ್ಪಗಾಗುವುದನ್ನೇ ಬಯಸುತ್ತಾನೆ.

ಪ್ರಸಿದ್ಧಿಯಿಂದ ನಿಮಗೆ ಮೆಚ್ಚುಗೆಯಾದದ್ದು...

ನಮ್ಮ ಬಗ್ಗೆ ಎಳ್ಳಷ್ಟೂ ತಿಳಿದಿರದ ಅಪರಿಚಿತರು ನಮ್ಮನ್ನು ಅದೆಷ್ಟು ಪ್ರೀತಿಸುತ್ತಾರೆ. ಅಭಿಮಾನಿಗಳ ಅಪಾರ ಪ್ರೀತಿಗೆ ನಾವು ಅರ್ಹರೆ ಎನ್ನುವುದು ನನಗೆ ಗೊತ್ತಿಲ್ಲ.

ಈವರೆಗೆ ನಿಮ್ಮ ಅತ್ಯುತ್ತಮ ಸಾಧನೆ?

ಮುಂಬೈಯಲ್ಲಿ ಮೊದಲ ಮನೆ ಖರೀದಿಸಿದ್ದೇ ನನ್ನ ದೊಡ್ಡ ಸಾಧನೆ. ಮುಂಬೈಯಂತಹ ದುಬಾರಿ ನಗರಿಯಲ್ಲಿ ಸ್ವಂತ ಮನೆ ಖರೀದಿಸಿದೆ ಎನ್ನುವುದನ್ನು ಇಂದೂ ನಂಬಲಾಗುತ್ತಿಲ್ಲ.

ನಿಮಗೆ ಮೂರು ವರಗಳನ್ನು ದಯಪಾಲಿಸಿದಲ್ಲಿ ಏನು ಬೇಡಿಕೊಳ್ಳುವಿರಿ?

ಮೊದಲನೆಯದಾಗಿ ಜಗತ್ತಿನ ಒಳಿತಿಗಾಗಿ ಪ್ರಾರ್ಥಿಸುವೆ. ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯನ್ನು ತೊಲಗಿಸು ಎಂದು ಬೇಡುವೆ. ಎರಡನೆಯದಾಗಿ ನನಗೆ ನೂರಕ್ಕೆ ನೂರರಷ್ಟು ಅತ್ಯುತ್ತಮ ಮೈಕಟ್ಟು ಕೊಡು, ನಾನು ಮುದುಕಿಯಾಗುವವರೆಗೂ ಸಹ! ಮೂರನೆಯದಾಗಿ ನನ್ನ ಸುತ್ತ ಮುತ್ತ ಇರುವವರೆಲ್ಲಾ ಸದಾ ಸಂತೋಷವಾಗಿರಲಿ ಎಂದು ಬೇಡುವೆ.

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .