ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ವಿಶ್ಲೇಷಣಾ ವರದಿ
ಗೆಲುವಿಗೆ ಅಡ್ಡಿಯಾಗದ ದಿಗ್ಬಂಧನ
 

ಇರಾನ್ ಸಂಸತ್‌ಗೆ ನಡೆದ ಮೊದಲ ಸುತ್ತಿನ ಚುನಾವಣೆ ಬಳಿಕ ಅಧ್ಯಕ್ಷ ಅಹ್ಮದಿನೇಜಾದ್ ಆಪ್ತರಾದ ಕನ್ಸರ್ವೇಟಿವ್ ರಾಜಕಾರಣಿಗಳು ಅಧಿಕಾರದ ಮೇಲಿನ ತಮ್ಮ ಹಿಡಿತ ಬಿಗಿಗೊಳಿಸಿದ್ದಾರೆ. ಇರಾನ್‌ನಿಂದ ಟಿಎಸ್‌ಐನ ಸೌರಭ್ ಕುಮಾರ್ ಶಾಹಿ ವರದಿ

ಇರಾನ್‌ನಲ್ಲಿ ಇತ್ತೀಚೆಗೆ ಎಲ್ಲವೂ ಬೆಲೆ ಬಾಳುವಂತಹುದೇ! ಕ್ಯಾಸ್ಪಿಯನ್ ಸಮುದ್ರ ಮೀನಿನಿಂದ ಆರಂಭಿಸಿ ಮನೆ ಬಾಡಿಗೆವರೆಗೆ ಎಲ್ಲವೂ ತುಟ್ಟಿ. ಆದರೆ ಮಧ್ಯ ಟೆಹರಾನ್‌ನಲ್ಲಿ, ಸ್ಥಳೀಯವಾಗಿ 'ಲಾನ್- ಇ- ಜಸೂಸಿ' (ಗೂಢಚಾರಿ ಬಿಲ)ಎಂದೇ ಪ್ರಸಿದ್ಧವಾಗಿರುವ ಒಂದು ಕಾಲದ ಅಮೆರಿಕ ರಾಯಭಾರ ಕಟ್ಟಡದ ಮತಗಟ್ಟೆಯಲ್ಲಿ ಜನಸಾಮಾನ್ಯರು ಸಾಲುಗಟ್ಟಿದ್ದರು. ತನ್ನ ಛಲಬಿಡದ 'ನಾಗರಿಕ ಅಣು ಕಾರ್ಯಕ್ರಮ'ದಿಂದಾಗಿ ಈಗಾಗಲೇ ಇರಾನ್ ವಿಶ್ವಸಂಸ್ಥೆ ಮತ್ತು ಅಮೆರಿಕದಿಂದ ನಾಲ್ಕು ಬಾರಿ ದಿಗ್ಬಂಧನಕ್ಕೆ ಈಡಾಗಿದೆ. ಆದರೆ, ಈ ನಿಷೇಧಗಳು 56 ವರ್ಷದ ಶಿರಿನ್ ರಹಿಮಿಕಾ ಅವರ ಮೇಲೆ ಯಾವ ಪರಿಣಾಮವನ್ನೂ ಬೀರಿಲ್ಲ. ಅಧ್ಯಕ್ಷ ಮಹಮೂದ್ ಅಹ್ಮದಿನೇಜಾದ್ ಪರವಾಗಿ ಅವರು ಮತ ಹಾಕುವುದನ್ನು ಮಾತ್ರ ತಡೆಯಲು ಸಾಧ್ಯವಾಗಿಲ್ಲ.
ಯುದ್ಧದಲ್ಲಿ ತನ್ನ ಪತಿಯನ್ನು ಕಳೆದುಕೊಂಡ ವಿಧವೆ, ಮೂವರು ಮಕ್ಕಳ ತಾಯಿ ರಹಿಮಿಕಾ, ಅಹ್ಮದಿನೇಜಾದ್‌ಗೆ ಬೆಂಬಲ ನೀಡುತ್ತಿರುವವರಲ್ಲಿ ಏಕಾಂಗಿಯೇನಲ್ಲ. ಅಮೆರಿಕ ಮತ್ತು ಇತರ ಪಾಶ್ಚಾತ್ಯ ಶಕ್ತಿಗಳು ಬೆಚ್ಚಿ ಬೀಳುವಷ್ಟು, ಅಂದರೆ ಸುಮಾರು ಶೇ.೬೫ರಷ್ಟು ಇರಾನ್ ಜನತೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಹ್ಮದಿನೇಜಾದ್ ಪರ ಮತ ಹಾಕಿದ್ದಾರೆ. ಹೀಗಾಗಿ 290 ಸ್ಥಾನಗಳಿರುವ ಸಂಸತ್ತಿನಲ್ಲಿ ಕನ್ಸರ್ವೇಟಿವ್‌ಗಳು ಶೇ.70ರಷ್ಟು ಸ್ಥಾನ ಪಡೆದಿದ್ದಾರೆ. ಹಲವು ವಿರೋಧ ಪಕ್ಷಗಳ ಅಭ್ಯರ್ಥಿಗಳನ್ನು ಅನರ್ಹಗೊಳಿಸಿದ ಕಾರಣವೂ ಸೇರಿ, ಶೇ. 18ರಷ್ಟು ಹಣದುಬ್ಬರದ ತರುವಾಯವೂ ಪ್ರಚಂಡ ಬಹುಮತದ ಜನಾದೇಶ ಪಡೆಯುವ ಕುರಿತ ಕನ್ಸರ್ವೇಟಿವ್‌ಗಳ ಘೋಷಣೆ ನಿಜವಾಗಿದೆ. "ಕೆಲ ಅಭಿಪ್ರಾಯ ವಿರೋಧ ಮತ್ತು ಸಮಸ್ಯೆಗಳ ಹೊರತಾಗಿಯೂ ಅಹ್ಮದಿನೇಜಾದ್ ಅಂದರೆ ನನಗಿಷ್ಟ. ಬೆಲೆಗಳು ಏರಿವೆ. ಆದರೆ ನಾನು ಮತ್ತೆ ಅವರ ಪಕ್ಷಕ್ಕೇ ಮತ ನೀಡುವೆ. ಅವರು ಜನರ ಆಶೋತ್ತರಗಳನ್ನು ಅರಿತುಕೊಳ್ಳುತ್ತಾರೆ ಎನ್ನುವ ವಿಶ್ವಾಸ ನನ್ನದು" ಎಂದು ೮೦ರ ದಶಕದ ಇರಾನ್- ಇರಾಕ್ ಯುದ್ಧದಲ್ಲಿ ತಮ್ಮ ಪತಿ ಅಲಿಯನ್ನು ಕಳೆದುಕೊಂಡ ರಹಿಮಿಕಾ ಟಿಎಸ್‌ಐ ಬಳಿ ಅಭಿಮಾನದಿಂದ ಹೇಳಿಕೊಂಡರು. "ಯಹೂದಿ ಪ್ರಭುತ್ವ ಮತ್ತು ಅಮೆರಿಕ ಅವರ ವಿರುದ್ಧವಿದ್ದರೂ ಅವರು ನಮ್ಮಲ್ಲೊಬ್ಬರು" ಎನ್ನುತ್ತಾ ಟೆಹರಾನ್‌ನ ಉಪನಗರದ ಶೆಹೆರ್- ಇ- ರೇ ಮಸೀದಿಯೊಳಗಿನ ಮತಗಟ್ಟೆ ಕಡೆಗೆ ನಡೆದರು ರಹಿಮಿಕಾ. ನಗರದೆಲ್ಲೆಡೆ ಮತ್ತು ಗ್ರಾಮೀಣ ಪ್ರದೇಶಗಳಲ್ಲೂ ಬಹುತೇಕ ಮಂದಿ ರಹಿಮಿಕಾ ಅವರ ಅಭಿಪ್ರಾಯವನ್ನೇ ಬೆಂಬಲಿಸಿದ್ದಾರೆ.
ಇದು ಕನ್ಸರ್ವೇಟಿವ್ ಪಕ್ಷಕ್ಕೆ ಅಚ್ಚರಿಯ ವಿಜಯವೇನಲ್ಲ. "ನಾವೇಕೆ ಅಚ್ಚರಿ ಪಡಬೇಕು?" ಪ್ರಶ್ನಿಸುತ್ತಾರೆ ಸಂಸದೀಯ ಸಂಶೋಧನಾ ಕೇಂದ್ರದ ಪ್ರಭಾವೀ ಮುಖ್ಯಸ್ಥ ಮತ್ತು ಟೆಹರಾನ್‌ನ ಹೃದಯಭಾಗದ ಕ್ಷೇತ್ರದಲ್ಲಿ ಸ್ಪರ್ಧಿಸಿ ಪ್ರಚಂಡ ಜಯ ಗಳಿಸಿದ ಕನ್ಸರ್ವೇಟಿವ್ ಅಭ್ಯರ್ಥಿ ಅಹಮದ್ ತವಕೋಲಿ. "ಅಣು ಕಾರ್ಯಕ್ರಮ ಕುರಿತ ನಮ್ಮ ನೀತಿಯಿಂದಾಗಿ ನಾವು ಇಂಥ ಪ್ರಚಂಡ ಜಯ ಸಾಧಿಸಲು ಸಾಧ್ಯವಾಗಿದೆ. ಸುಧಾರಣಾ ಅವಧಿಯ ರಾಜಕೀಯ ಹೊಡೆದಾಟಗಳ ಕಹಿ ನೆನಪುಗಳು ಜನರ ಮನದಿಂದ ಇನ್ನೂ ಮಾಸಿಲ್ಲ. ಅಹ್ಮದಿನೇಜಾದ್‌ಗೆ ತಮ್ಮ ಆರ್ಥಿಕ ನೀತಿಗಳ ಅನುಷ್ಠಾನಕ್ಕೆ ಸಾಕಷ್ಟು ಸಮಯ ನೀಡಿಲ್ಲ ಎನ್ನುವ ನಂಬಿಕೆ ಜನರಲ್ಲಿ ಇಂದಿಗೂ ಇದೆ. ಇದೇ ಕಾರಣಕ್ಕೆ ಜನರು ನಮ್ಮನ್ನು ಬೆಂಬಲಿಸಿದ್ದಾರೆ" ಎನ್ನುತ್ತಾರೆ.
ಇರಾನಿ ಕನ್ಸರ್ವೇಟಿವ್ ಮೂರನೇ ಎರಡು ಭಾಗದಷ್ಟು ಸಂಸದೀಯ ಬಹುಮತ ಪಡೆದಿರುವುದೇನೋ ನಿಜ. ಆದರೆ ಈ ಚುನಾವಣೆಯಲ್ಲಿ 'ಹಸ್ತಕ್ಷೇಪ' ನಡೆದಿದೆ ಎನ್ನುವುದು ಅಮೆರಿಕ ಆರೋಪ. ಯುರೋಪಿಯನ್ ಒಕ್ಕೂಟ ಇದನ್ನು 'ಮುಕ್ತ-ಪಾರದರ್ಶಕ ಚುನಾವಣೆಯಲ್ಲ' ಎಂದು ಬಣ್ಣಿಸಿದೆ. ಈ ನಡುವೆ ಕನ್ಸರ್ವೇಟಿವ್‌ಗಳಲ್ಲೂ ಎರಡು ಬಣಗಳು ಹುಟ್ಟಿಕೊಂಡಿವೆ. ಒಂದು ಬಣ ಅಹ್ಮದಿನೇಜಾದ್ ಅವರನ್ನು ಬೆಂಬಲಿಸಿದರೆ, ಮತ್ತೊಂದು ಬಣವನ್ನು ರಾಜಕೀಯ ವಿಮರ್ಶಕರು 'ಪ್ರಾಗ್ಮಾಟಿಕ್ ಕನ್ಸರ್ವೇಟಿವ್ಸ್' ಎಂದು ಕರೆದಿದ್ದಾರೆ. 2009ರಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುವುದು ಖಚಿತವಾಗಿರುವುದರಿಂದ ಕನ್ಸರ್ವೇಟಿವ್‌ಗಳ ಈ ಆಂತರಿಕ ಸಮರ ತಾರಕಕ್ಕೇರಲು ವೇದಿಕೆ ಸಿದ್ಧವಾಗಿದೆ. ಬಹುತೇಕ ಇರಾನ್ ವೀಕ್ಷಕರ ಪ್ರಕಾರ, ಇರಾನ್‌ನ ಸಾಂಸ್ಕೃತಿಕ ಹೃದಯ ಭಾಗ ಕ್ಯೋಮ್‌ನಲ್ಲಿ ಅಹ್ಮದಿನೇಜಾದ್‌ನ ಅನುಯಾಯಿಗಳನ್ನು ವಿರೋಧಿಸಿದ್ದ ಮಾಜಿ ಪರಮಾಣು ಮಧ್ಯವರ್ತಿ ಮತ್ತು ಮೃದು ಧೋರಣೆಯ ಕನ್ಸರ್ವೇಟಿವ್‌ಗಳ ನೇತಾರ ಅಲಿ ಲಾರಿಜನಿ ಅವರು ಅಹ್ಮದಿನೇಜಾದ್ ವಿರುದ್ಧ ಸ್ಪರ್ಧಿಸುವ ಸಾಧ್ಯತೆ ಇದೆ.
ಚುನಾವಣಾ ಪೂರ್ವ ಅರ್ಹತೆ ಗಳಿಸುವಲ್ಲಿ ವಿಫಲವಾದ್ದರಿಂದ ಪ್ರಮುಖ ರಿಫಾರ್ಮಿಸ್ಟ್ ಮೈತ್ರಿ ಪಕ್ಷ ಟೆಹರಾನ್ ಹೊರಗಿನ 260 ಸ್ಥಾನಗಳಲ್ಲಿ 102 ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಲು ಸಾಧ್ಯವಾಗಿತ್ತು. ಹಾಗಿದ್ದಾಗ್ಯೂ 44 ಸ್ಥಾನಗಳಲ್ಲಿ ಜಯ ಗಳಿಸುವ ನಿರೀಕ್ಷೆಯಲ್ಲಿದ್ದೇವೆ ಎಂದು ಆ ಪಕ್ಷದ ವಕ್ತಾರ ಅಬ್ದುಲ್ಲಾ ನಸ್ಸೇರಿ ಟಿಎಸ್‌ಐಗೆ ತಿಳಿಸಿದರು. ಟಿಎಸ್‌ಐ ಜೊತೆ ಮಾತನಾಡಿದ ಎಕ್ಬಟಾನಾದ ಸಾಫ್ಟ್‌ವೇರ್ ಎಂಜಿನಿಯರ್ ಅಲಿ ರೇಝಾ ಅಮಾನಿ, "ನಾನು ಯಾವ ರಿಫಾರ್ಮಿಸ್ಟ್ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ಯೋಚಿಸಿದ್ದೆನೋ ಅವರನ್ನು ಗಾರ್ಡಿಯನ್ ಕೌನ್ಸಿಲ್ ಸ್ಪರ್ಧೆಯಿಂದ ಅನರ್ಹಗೊಳಿಸಿದೆ. ಇತರ ದೇಶಗಳು ನಮ್ಮನ್ನು ಭಯೋತ್ಪಾದಕರು ಅಥವಾ ಕ್ರಾಂತಿಕಾರಿಗಳೆಂದು ತಿಳಿಯುವುದು ನನಗೆ ಇಷ್ಟವಾಗುತ್ತಿಲ್ಲ. ಈಗಿನ ಅಹ್ಮದಿನೇಜಾದ್ ನೇತೃತ್ವದ ಸರ್ಕಾರದಿಂದ ನಾವು ಪಡೆದಿರುವ ವರ್ಚಸ್ಸು ಇದು. ಎಲ್ಲಕ್ಕಿಂತ ಮುಖ್ಯವಾಗಿ ಖಟಾಮಿ (ಮಾಜಿ ಅಧ್ಯಕ್ಷ) ಇರಾನ್ ಸ್ನೇಹಪರ ರಾಷ್ಟ್ರ ಎಂದು ಬಿಂಬಿಸಲು ನಡೆಸಿದ ಪ್ರಯತ್ನವೆಲ್ಲಾ ತಿರುವು ಮುರುವಾಗಿದೆ"
ಟೆಹರಾನ್ ಬಗ್ಗೆ ಹೇಳಬೇಕೆಂದರೆ, ಅಹ್ಮದಿನೇಜಾದ್ ಮೇಲೆ ಕೆಲ ಪ್ರಬಲ ದಾಳಿಗಳನ್ನು ನೋಡಿದ ಈ ನಗರದ ಒಟ್ಟು 30 ಸ್ಥಾನಗಳ ಆರಂಭಿಕ ಫಲಿತಾಂಶದಲ್ಲಿ ಪ್ರಮುಖ (1979ರ ಇಸ್ಲಾಮಿಕ್ ಕ್ರಾಂತಿ ಸಂದರ್ಭದ ತತ್ವನಿಷ್ಠೆಗಾಗಿ) 14 ಸ್ಥಾನಗಳಲ್ಲಿ ಕನ್ಸರ್ವೇಟಿವ್‌ಗಳು ವಿಜಯಿಗಳಾಗಿದ್ದಾರೆ ಮತ್ತು ಉಳಿದ ಸ್ಥಾನಗಳು ಮುಕ್ತ ಸ್ಪರ್ಧೆಗೆ ಒಡ್ಡಿಕೊಂಡಿವೆ.
ಈ ಚುನಾವಣೆಯಿಂದ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿರುವ ಮತ್ತೊಂದು ಲಾಬಿ ಎಂದರೆ ರಿಪಬ್ಲಿಕನ್ ಗಾರ್ಡ್ಸ್‌ನ ಮಾಜಿ ಸದಸ್ಯರು. ಕೆಲ ವಾಣಿಜ್ಯೋದ್ದೇಶಗಳನ್ನು ಗಮನದಲ್ಲಿರಿಸಿಕೊಂಡಿರುವ ಅವರು ಅಧ್ಯಕ್ಷ ಅಹ್ಮದಿನೇಜಾದ್‌ನ ಆಪ್ತ ವರ್ಗಕ್ಕೆ ಸೇರಿದ್ದಾರೆ. ಅವರು ಅಧಿಕಾರಕ್ಕೆ ಬಂದ ನಂತರ ಈ ಲಾಬಿ ನಿಧಾನವಾಗಿ ಅಧಿಕಾರ ಮತ್ತು ಪ್ರತಿಷ್ಠೆಯನ್ನು ಸಂಪಾದಿಸಿತ್ತು. ಮಾಜಿ ಗಾರ್ಡ್ಸ್ ಕಮಾಂಡರ್‌ಗಳು ಈಗ ಸರ್ಕಾರದಲ್ಲಿ ಪ್ರತಿಷ್ಠಿತ ಉದ್ಯೋಗಗಳನ್ನು ಪಡೆದಿದ್ದಾರೆ. ಇವರ ಗೆಲುವಿನಿಂದ ಈ ಮೊದಲು ರಾಜಕೀಯವಾಗಿ ಪ್ರಬಲರಾಗಿದ್ದ ಶಿಯಾ ಧರ್ಮದರ್ಶಿಗಳ ಹಿಡಿತ ಕೊಂಚ ಕುಸಿಯುವ ಸಾಧ್ಯತೆ ಇದೆ. "10- 15 ವರ್ಷಗಳ ಹಿಂದೆ ಜನರು 'ನನಗೆ ಇಂತಹ ಪ್ರಭಾವೀ ಧಾರ್ಮಿಕ ವ್ಯಕ್ತಿಗಳ ಪರಿಚಯವಿದೆ' ಎಂದು ಹೇಳುವುದು ಸಾಮಾನ್ಯವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈಗ, 'ನನಗೆ ಒಬ್ಬ ಪ್ರಭಾವಿ ರೆವೊಲ್ಯೂಷನರಿ ಅಧಿಕಾರಿಯ ಪರಿಚಯವಿದೆ ಎಂದು ಹೇಳಿಕೊಳ್ಳುವುದೇ ಅಭಿಮಾನ" ಎನ್ನುತ್ತಾರೆ ಟೆಹರಾನ್‌ನ ಮೈಡನ್- ಇ- ನಾರ್ಮಾಕ್ ಪ್ರಾಂತ್ಯದ ಮಸ್ಜಿದ್- ಇ- ಹಜರತಾನ್ ನಬಿಯ ಮತಗಟ್ಟೆಯಲ್ಲಿ ಮತ ಹಾಕಿದ ಮಾಜಿ ರೆವಲ್ಯೂಷನರಿ ಗಾರ್ಡ್ಸ್ ಅಧಿಕಾರಿ ಸಯೀದ್ ಲೆಯಾಜ್. ಖಂಡಿತಾ ಅಧ್ಯಕ್ಷ ಅಹ್ಮದಿನೇಜಾದ್ ಮತ್ತು ರಿಪಬ್ಲಿಕನ್ ಗಾರ್ಡ್ಸ್ ನಡುವೆ ಪರಿಪೂರ್ಣ ಸಾಂಕೇತಿಕ ಸಂಬಂಧವಿದೆ ಮತ್ತು ಅವರು ಪರಸ್ಪರನ್ನು ಬೆಂಬಲಿಸುತ್ತಾರೆ. ಈ ಕಾರಣದಿಂದ ರಿಪಬ್ಲಿಕನ್ ಗಾರ್ಡ್ಸ್ ಪ್ರಭಾವ ಅಧಿಕವಾದಂತೆ ಅಹ್ಮದಿನೇಜಾದ್ ಪಟ್ಟು ಇನ್ನೂ ಭದ್ರವಾಗುತ್ತದೆ.
ಸದ್ಯದ ಮಟ್ಟಿಗೆ ಇರಾನ್ ಜನತೆಗೆ ಆರ್ಥಿಕ ವ್ಯವಹಾರಗಳ ಕುರಿತಂತೆ ಅಹ್ಮದಿನೇಜಾದ್ ಮೇಲೆ ಅರೆ ವಿಶ್ವಾಸವಿದ್ದರೂ ಅವರನ್ನು ಬೆಂಬಲಿಸಿದ್ದಾರೆ ಎನ್ನುವುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ. "ಆರ್ಥಿಕ ಪರಿಸ್ಥಿತಿಗೆ ಅಹ್ಮದಿನೇಜಾದ್ ಅವರನ್ನು ದೂರುವುದು ಸರಿಯಲ್ಲ. ಅದೆಲ್ಲಾ ಪಾಶ್ಚಾತ್ಯರು ನಮ್ಮ ಮೇಲೆ ವಿಧಿಸಿದ ನಿಷೇಧಗಳ ಪರಿಣಾಮ. ನಾನು 2005ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಹ್ಮದಿನೇಜಾದ್ ಅವರಿಗೆ ಮತ ಹಾಕಿದ್ದೆ. ಅವರು ತಮ್ಮ ಆಶ್ವಾಸನೆಗಳನ್ನು ನೆರವೇರಿಸಿದ್ದಾರೆ ಎನ್ನುವ ವಿಶ್ವಾಸ ನನಗಿದೆ" ಎನ್ನುತ್ತಾರೆ ಖಯಾಬನ್- ಇ- ಶರಿಯತ್ ಪ್ರಾಂತ್ಯದ ಮಸ್ಜಿದ್- ಇ- ಇರ್ಶಾದ್ ಮತಗಟ್ಟೆಯಲ್ಲಿ ಟಿಎಸ್‌ಐ ಜೊತೆ ಮಾತನಾಡಿದ ಕ್ವಾಮ್ ನಿವಾಸಿ ಮತ್ತು ವೃತ್ತಿಪರ ಲೆಕ್ಕ ಪರಿಶೋಧಕರಾಗಿರುವ ವಾಲಿ ಮಹಮದೀನ್.
ಪ್ರಪ್ರಥಮ ಬಾರಿ ಮತ ಹಾಕುತ್ತಿರುವ ಯುವಕ- ಯುವತಿಯರಲ್ಲೂ ಇಂತಹುದೇ ಅತ್ಯುತ್ಸಾಹವನ್ನು ಕಾಣಬಹುದು. ಮಧ್ಯ ಟೆಹರಾನ್‌ನ ತಮ್ಮ ಮನೆ ಪಕ್ಕದ ಮತಗಟ್ಟೆಯಲ್ಲಿ ಪ್ರಪ್ರಥಮ ಮತ ಹಾಕಿದ್ದು 18 ವರ್ಷದ ಟೆಹರಾನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಫಾತಿಮಾ ಎಸ್ಫಹಾನಿ. ಆಧುನಿಕ ಉಡುಗೆ ತೊಟ್ಟಿದ್ದ ಫಾತಿಮಾ ಪ್ರಭಾವಿ ನಾಯಕ ಮತ್ತು ರೆಹ್ಬರ್ (ಧರ್ಮದರ್ಶಿ) ಅಯತೊಲ್ಲಾ ಖಮೇನಿ ಬಗೆಗಿನ ಅಪಾರ ಅಭಿಮಾನವನ್ನು ಪ್ರದರ್ಶಿಸಿದರು. "ಬೆಳಿಗ್ಗೆ ನಾನೇ ಮೊತ್ತ ಮೊದಲ ಮತ ಹಾಕಿದೆ. ಇದು ನನ್ನ ಕರ್ತವ್ಯ ಎಂದುಕೊಂಡಿದ್ದೇನೆ. ಜಗತ್ತೇ ನಮ್ಮ ಈ ಚುನಾವಣೆಯತ್ತ ಕಣ್ಣು ನೆಟ್ಟಿರುವುದನ್ನು ನಾನು ಬಲ್ಲೆ. ಹೆಚ್ಚು ಜನರು ಚುನಾವಣೆಯಲ್ಲಿ ಭಾಗಿಯಾದರೆ ಸಮಾಜವನ್ನು ಇನ್ನೂ ಸ್ಫುಟವಾಗಿ ಪ್ರತಿನಿಧಿಸಿದಂತಾಗುತ್ತದೆ. ರೆಹ್ಬರ್ ಕೂಡ ಇದನ್ನೇ ಬಯಸುತ್ತಾರೆ" ಎಂದರು ಫಾತಿಮಾ. 18 ವರ್ಷದ ಮಹಮ್ಮದ್ ರ್‍ಯಾಡ್ ಒಂದು ದಿನ ಕಾಲೇಜಿಗೆ ರಜಾ ಸಿಕ್ಕಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. "ಎಲ್ಲರೂ ಇದು ನಮ್ಮ ಕರ್ತವ್ಯ ಎಂದು ಹೇಳುತ್ತಿದ್ದಾರೆ. ಹೀಗಾಗಿ ನಾನು ನನ್ನ ಕರ್ತವ್ಯವನ್ನು ಪಾಲಿಸಲೇಬೇಕು. ನನಗೆ ಎಲ್ಲಾ ಅಭ್ಯರ್ಥಿಗಳ ವಿವರ ತಿಳಿದಿಲ್ಲ. ಹೀಗಾಗಿ ಬರೆಯಲು ತುಂಬಾ ಸರಳವಾಗಿರುವ ಪುಟ್ಟ ಹೆಸರು ಯಾರದಿರುತ್ತದೆ ಎಂದು ಗಮನಿಸಿ ಅವರಿಗೇ ಮತ ಹಾಕುವೆ" ಎಂದು ನಗು ಬೀರಿದರು ರ್ಯಾಡ್.
ಈ ನಡುವೆ ಅಯತುಲ್ಲಾ ಖಮೇನಿ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸಿದ್ದಕ್ಕಾಗಿ ಇರಾನ್ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. ಟಿಎಸ್‌ಐ ಸೇರಿದಂತೆ ಇರಾನ್‌ಗೆ ಬಂದಿದ್ದ ಆಯ್ದ ವಿದೇಶಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಖಮೇನಿ, "ಪಾಶ್ಚಾತ್ಯ ಸರ್ಕಾರಗಳ ಪ್ರಚಂಡ ಪ್ರತಿರೋಧ, ಅಪಪ್ರಚಾರದ ಅಭಿಯಾನದ ನಡುವೆಯೂ ಶ್ರೇಷ್ಠ ನಾಡು ಇರಾನ್ ಜನತೆ ಅತ್ಯಧಿಕ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿದ್ದಾರೆ. ಮತ್ತೊಮ್ಮೆ ಇಷ್ಟೊಂದು ಪ್ರಮಾಣದಲ್ಲಿ ಮತ ಹಾಕುವ ಮೂಲಕ ಶತ್ರು ರಾಷ್ಟ್ರಗಳ ಸಂಚನ್ನು ವಿಫಲಗೊಳಿಸಿದ್ದಾರೆ. ೮ನೇ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಕಡಿಮೆ ಮಾಡುವ ಕುರಿತ ಅವರ ಪ್ರಯತ್ನಗಳೆಲ್ಲ ನೀರ ಮೇಲೆ ಹೋಮ ಮಾಡಿದಂತಾಗಿದೆ" ಎಂದು ಹೇಳಿದ್ದಾರೆ.
ಭವಿಷ್ಯದ ಇರಾನ್‌ನಲ್ಲಿ ಏಕರೂಪವಾದ ಬಿಗಿ ನಿಲುವಿನ ಪ್ರಭುತ್ವವನ್ನು ನಿರೀಕ್ಷಿಸಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ರಿಫಾರ್ಮಿಸ್ಟ್‌ಗಳು ಟೆಹರಾನ್ ಮೇಲೆ ನಿಯಂತ್ರಣ ಸಾಧಿಸುವ ಕುರಿತ ಅಮೆರಿಕ ಮತ್ತು ಪಾಶ್ಚಾತ್ಯ ದೇಶಗಳ ನಿರೀಕ್ಷೆಗಳು ನಿಸ್ಸಂಶಯವಾಗಿ ಠುಸ್ಸಾಗಿವೆ ಎನ್ನುವುದು ವಿಮರ್ಶಕರ ಅಭಿಮತ. ಈ ಪ್ರಮುಖ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇರಾನ್ ಜೊತೆ ವ್ಯವಹಾರ ನಡೆಸುವ ಕುರಿತು ವಾಷಿಂಗ್ಟನ್, ಇಸ್ರೇಲ್ ಮತ್ತು ಇತರ ಪಾಶ್ಚಾತ್ಯ ಪ್ರಭುತ್ವಗಳು ಲೆಕ್ಕಚಾರ ಹಾಕಲು ಆರಂಭಿಸಿವೆ. ತಮ್ಮ ಕಠಿಣ ವಿದೇಶಿ ನಿಲುವಿನ ಆತ್ಮವಿಶ್ವಾಸಕ್ಕೆ ಚುನಾವಣಾ ಫಲಿತಾಂಶದ ಈ ಹೆಚ್ಚುವರಿ ಉತ್ತೇಜನವೂ ದೊರೆತ ಪರಿಣಾಮವಾಗಿ ಇರಾನ್‌ನ ನಾಗರಿಕ ಪರಮಾಣು ಕಾರ್ಯಕ್ರಮದಲ್ಲಿ ರಾಜಿಸಂಧಾನದ ಸಾಧ್ಯತೆ ಕಡಿಮೆಯಾಗಿದೆ ಮತ್ತು ಈಗಿರುವ ವಿದೇಶಿ ನೀತಿಗಿಂತಲೂ ಬಿಗು ನಿಲುವನ್ನು ನಿರೀಕ್ಷಿಸಬಹುದು.

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .